ದಿನದ ಸುದ್ದಿ

ಯಾದಗಿರಿ | ಸಕಾಲ ಅರ್ಜಿಗಳ ವಿಲೆವಾರಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ : ಜಿಲ್ಲಾಧಿಕಾರಿಗೆ ಪ್ರಶಂಸಾ ಪತ್ರ

Published

on

ಸುದ್ದಿದಿನ,ಯಾದಗಿರಿ: ಸಕಾಲ ಅರ್ಜಿಗಳ ವಿಲೆವಾರಿಯಲ್ಲಿ ನವೆಂಬರ್- 2019ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕಾಲ ತಂಡದ ನಾಯಕರೂ ಆಗಿರುವ ಎಂ.ಕೂರ್ಮಾ ರಾವ್ ಅವರಿಗೆ ಕರ್ನಾಟಕ ಸರ್ಕಾರದಿಂದ ಪ್ರಶಂಸಾ ಪತ್ರವನ್ನು ನೀಡಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್.ಸುರೇಶ್‌ಕುಮಾರ್ ಅವರು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರಿಗೆ ಬೆಂಗಳೂರಿನಲ್ಲಿ ಪ್ರಶಂಸಾ ಪತ್ರವನ್ನು ಪ್ರದಾನ ಮಾಡಿ, ಅಭಿನಂದಿಸಿದರು.

ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಕಾಲ ಮಿಷನ್ ನಿರ್ದೇಶಕರಾದ ರಾಜೀವ್ ಚಾವ್ಲಾ, ಸಕಾಲ ಮಿಷನ್ ಅಪರ ನಿರ್ದೇಶಕರುಗಳಾದ ಸುನೀಲ್ ಪನ್ವಾರ್, ವರಪ್ರಸಾದ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಾದಗಿರಿ ಜಿಲ್ಲೆಯು ಸಕಾಲ ಅರ್ಜಿಗಳ ವಿಲೆಯಲ್ಲಿ 5ನೇ ಸ್ಥಾನ, ಅರ್ಜಿಗಳ ಸ್ವೀಕೃತಿಯಲ್ಲಿ 4ನೇ ಸ್ಥಾನ ಹೊಂದಿದ್ದು, ಒಟ್ಟಾರೆ ರಾಜ್ಯಮಟ್ಟದಲ್ಲಿ ಒಂದನೇ ಸ್ಥಾನದಲ್ಲಿರುತ್ತದೆ. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ- 2011 ತಿದ್ದುಪಡಿ ಅಧಿನಿಯಮ-2014ರಡಿಯಲ್ಲಿ ರಾಜ್ಯ ಸರಕಾರದ ವಿವಿಧ 91 ಇಲಾಖೆ, ಸಂಸ್ಥೆಗಳ ಒಟ್ಟು 1.033ಸೇವೆಗಳ ಸಕಾಲ ಅಧಿನಿಯಮಕ್ಕೆ ಒಳಪಟ್ಟಿರುತ್ತವೆ.

ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಕಂದಾಯ ಇಲಾಖೆ, ಗೃಹ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ, ಪಶುಸಂಗೋಪನೆ ಇಲಾಖೆಗಳನ್ನು ಒಳಗೊಂಡು ಒಟ್ಟು 58,981ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳಲ್ಲಿ 57,164ಅರ್ಜಿಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೆಗೊಳಿಸಲಾಗಿರುತ್ತದೆ.

ಜಿಲ್ಲೆಯ ನಾಗರಿಕರು ಸಕಾಲ ಅಧಿನಿಯಮದಡಿ ಒಳಪಡುವ ವಿವಿಧ ಇಲಾಖೆಗಳ ಸೇವೆಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಉಪಯೋಗ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version