ದಿನದ ಸುದ್ದಿ
ಮಧ್ಯ ಕರ್ನಾಟಕದ ಯಕ್ಷಗಾನ ಯುವಪ್ರತಿಭೆ ‘ಅಮೂಲ್ಯ ಸಿ.’
- ಡಾ.ಕೆ.ಎ.ಓಬಳೇಶ್
ಕರ್ನಾಟಕದ ಬಹುತ್ವವೆಲ್ಲ ಸಮನ್ವಯತೆಯನ್ನು ಕಂಡುಕೊಂಡಿರುವುದು ಮಧ್ಯ ಕರ್ನಾಟಕದಲ್ಲಿ. ಈ ಭಾಗವು ಯಾವುದೇ ಅನ್ಯ ಗಡಿಪ್ರಾಂತ್ಯ, ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿರುವುದು ಕಂಡುಬರುವುದಿಲ್ಲ. ಆದರೆ ಇವೆಲ್ಲವುಗಳನ್ನು ಸಮನ್ವಯದ ನೆಲೆಯಲ್ಲಿ ಕಾಪಾಡಿಕೊಂಡು ಬಂದ ವಿಶೇಷತೆ ಇದಕ್ಕಿದೆ. ಹಾಗೆಯೇ ಇದು ಸಾಂಸ್ಕೃತಿಕ ಸಮನ್ವಯತೆಗೂ ವಿಶೇಷತೆ ಮನ್ನಣೆಯನ್ನು ಕಲ್ಪಿಸಿಕೊಂಡು ಬಂದಿದೆ.
ಇಲ್ಲಿ ಹಲವಾರು ಸಾಂಸ್ಕೃತಿಕ ವೈಶಿಷ್ಟ್ಯತೆಗಳು ತನ್ನ ಅನನ್ಯತೆಯನ್ನು ಕಾಯ್ದುಕೊಂಡಿವೆ. ಉತ್ತರ ಕರ್ನಾಟಕಕ್ಕೆ ಹೋದರೆ ಬಯಲಾಟ, ದಕ್ಷಿಣ ಕರ್ನಾಟಕದಲ್ಲಿ ಕಂಸಾಳೆ, ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಕಲೆಗಳು ವಿಶಿಷ್ಟವಾಗಿ ಗುರುತಿಸಿಕೊಂಡಿವೆ. ಆದರೆ ಮಧ್ಯ ಕರ್ನಾಟಕ ಮಾತ್ರ ಇವೆಲ್ಲವುಗಳನ್ನು ತನ್ನ ಆಂತರ್ಯದಲ್ಲಿ ಪ್ರಾಂತ್ಯಬೇಧ ಮರೆತು ಹುದುಗಿಸಿಕೊಂಡಿದೆ. ಹೀಗಾಗಿ ಮಧ್ಯ ಕರ್ನಾಟಕದಲ್ಲಿ ವಿವಿಧ ಸಾಂಸ್ಕೃತಿಕ ವಲಯದಲ್ಲಿ ಸಾಧನೆಗೈದ ವಿಭಿನ್ನ ಕಲಾ ಪ್ರತಿಭೆಗಳು ಕಂಡುಬರುತ್ತವೆ.
ಇಂತಹ ಕಲಾ ಪ್ರತಿಭೆಗಳಲ್ಲಿ ಅಮೂಲ್ಯ ಸಿ, ಅವರು ಒಬ್ಬರಾಗಿದ್ದಾರೆ. ಮಧ್ಯ ಕರ್ನಾಟಕದ ದಾವಣಗೆರೆ ಭಾಗದಲ್ಲಿ ಯಕ್ಷಗಾನದ ಮೂಲಕ ತನ್ನ ವಿಶಿಷ್ಟ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಅಮೂಲ್ಯ ಅವರ ಕಲಾ ಬದುಕನ್ನು ಅನಾವರಣಗೊಳಿಸುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಕುಮಾರಿ ಅಮೂಲ್ಯ ಅವರು ಚಂದ್ರಶೇಖರ್ ಹಾಗೂ ಸವಿತಾ ದಂಪತಿಗಳ ಪುತ್ರಿಯಾಗಿ ದಿನಾಂಕ 4 ಜನವರಿ 2001 ರಂದು ದಾವಣಗೆರೆಯಲ್ಲಿ ಜನಿಸಿದರು. ಇವರ ತಂದೆ ಹೊಸದುರ್ಗ ಮೂಲದವರಾಗಿದ್ದು, ಇವರ ತಾಯಿಯು ಕರಾವಳಿ ಮೂಲದವರಾಗಿದ್ದಾರೆ. ಇವರ ತಾಯಿಯ ತಂದೆ ಉಡುಪಿ ಜಿಲ್ಲೆ ಮುನಿಯಾಲ ಸಮೀಪದ ಕಾಡೊಳೆಯವರು.
ಇವರು ಬಾಲ್ಯದಲ್ಲಿಯೇ ಜೀವನ ನಿರ್ವಹಣೆಗಾಗಿ ದಾವಣಗೆರೆಯಲ್ಲಿ ನೆಲೆಯನ್ನು ಕಂಡುಕೊಂಡರು. ಹಾಗೆಯೇ ಈ ಭಾಗದಲ್ಲಿಯೇ ವಿವಾಹವಾಗಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಕುಮಾರಿ ಅಮೂಲ್ಯ ಅವರ ತಾಯಿಯ ಮೂಲವು ಕರಾವಳಿ ಮೂಲವಾಗಿದ್ದರು ಯಕ್ಷಗಾನ ಕಲೆಯ ಯಾವುದೇ ನೇರ ಪ್ರಭಾವಗಳಾಗಿರುವುದಿಲ್ಲ. ಆದರೆ ಇವರು ಸೆಂಟ್ ಪಾಲ್ಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿರುವಾಗ ಯಕ್ಷಗಾನ ಕಲೆಯನ್ನು ಕಂಡು ಆಕರ್ಷಿತರಾಗಿದ್ದರು.
ಈ ಶಾಲಾ ಅವಧಿಯಲ್ಲಿನ ಯಕ್ಷಗಾನ ಪ್ರದರ್ಶನ ಕಲೆಯನ್ನು ನೋಡಿ ಪ್ರಭಾವಿತರಾದ ಅಮೂಲ್ಯ ಅವರು ನಾನು ಒಂದಲ್ಲ ಒಂದು ದಿನ ಈ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ಹಂಬಲವನ್ನು ಮೈಗೂಡಿಸಿಕೊಂಡಿದ್ದರು. ಆದರೆ ಮಧ್ಯ ಕರ್ನಾಟಕದಲ್ಲಿ ಯಕ್ಷಗಾನವು ಅಷ್ಟೊಂದು ಪ್ರಸಿದ್ಧಿಯಾಗಿರದ ಕಾರಣ ಇವರ ಆಸೆಯು ಬಹುದಿನಗಳ ಕಾಲ ಮರೀಚಿಕೆಯಾಗಿಯೇ ಉಳಿದಿತ್ತು. ಇವರಲ್ಲಿ ಬಹುದಿನಗಳಿಂದಲೂ ಚಿಗುರಿದ ಕನಸನ್ನು ಸಾಕಾರಗೊಳಿಸಿದ್ದು ರಾಘವೇಂದ್ರ ಮಠ.
ರಾಘವೇಂದ್ರ ಗುರುಗಳಲ್ಲಿ ಅತಿಯಾದ ನಂಬಿಕೆಯನ್ನು ಹೊಂದಿದ್ದ ಅಮೂಲ್ಯ ಅವರು ಪ್ರತಿವಾರ ರಾಘವೇಂದ್ರ ಮಠಕ್ಕೆ ಹೋಗಿ ದರ್ಶನ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ರಾಯರ ಮಠದಲ್ಲಿ ಯಕ್ಷಗಾನ ತರಬೇತಿಯ ಬಗ್ಗೆ ಪ್ರದರ್ಶಿಸಿದ ಜಾಹಿರಾತು ಇವರ ಮನದ ಮೂಸೆಯಲ್ಲಿನ ಆಸೆಗೆ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿತ್ತು. ಆಗ ಈ ಜಾಹಿರಾತು ನೀಡಿದ ಸೀತಾರಾಮ ಆಚಾರ್ಯ ಅವರನ್ನು ಸಂಪರ್ಕಿಸಿದಾಗ ಅಮೂಲ್ಯ ಅವರಿಗಿದ್ದ ಯಕ್ಷಗಾನ ತುಡಿತವನ್ನು ಅರಿತು ತನ್ನ ಶಿಷ್ಯೆಯಾಗಿ ಸ್ವೀಕರಿಸಿ, ‘ಯಕ್ಷ ಸೌರಭ’ ಕಲಾ ತಂಡದಿAದ ಯಕ್ಷಗಾನ ತರಬೇತಿಯನ್ನು ನೀಡುತ್ತ ಬಂದರು.
ಹೀಗೆ ಯಕ್ಷಗಾನ ಕಲಿಕೆಗೆ ಸೀತಾರಾಮ ಆಚಾರ್ಯರಿಂದ ದೀಕ್ಷೆಯನ್ನು ಪಡೆದ ಅಮೂಲ್ಯ ಅವರು ಈ ಕಲೆಯನ್ನು ತನ್ನ ಬದುಕಿನ ಒಂದು ಭಾಗವಾಗಿ ಮುಂದುವರೆಸಿಕೊAಡು ಬಂದಿದ್ದಾರೆ. ಹಾಗೆಯೇ ಈ ಯಕ್ಷಗಾನ ಕಲೆಯ ಮೇಲೆ ವಿಶಿಷ್ಟವಾದ ಕಾಳಜಿ ಮತ್ತು ಆಸ್ಥೆಯನ್ನು ಹೊಂದಿದ್ದು ಮಧ್ಯ ಕರ್ನಾಟಕದಲ್ಲಿ ಕರಾವಳಿಯ ವಿಶಿಷ್ಟ ಕಲೆಯನ್ನು ಅರಳಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.
ಅಮೂಲ್ಯ ಅವರ ತಂದೆ ಚಂದ್ರಶೇಖರ್ ಅವರು ಅನಾರೋಗ್ಯದಿಂದ ಮರಣ ಹೊಂದಿದ ತರುವಾಯದಲ್ಲಿ ಇವರಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಸೀತಾರಾಮ ಆಚಾರ್ಯರು ತಮ್ಮ ಔದಾರ್ಯತೆಯನ್ನು ಮರೆಯುತ್ತ ಬಂದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಮೂಲ್ಯ ಅವರಿಗಿರುವ ಕಲಾಸಕ್ತಿ ಮತ್ತು ಬದ್ಧತೆಯಾಗಿದೆ. ಹೀಗಾಗಿ ಸೀತಾರಾಮ ಆಚಾರ್ಯರು ತಮ್ಮ ಪ್ರೀತಿಯ ಮಗಳಂತೆ ಅಮೂಲ್ಯ ಅವರನ್ನು ಮುನ್ನಡೆಸುತ್ತ ಬಂದಿದ್ದಾರೆ.
ಇದರೊಂದಿಗೆ ತನ್ನೆಲ್ಲ ಕಲೆಯನ್ನು ಸೀತರಾಮ ಆಚಾರ್ಯರು ತನ್ನ ಶಿಷ್ಯೆಗೆ ಧಾರೆಯೆರೆಯುವ ಮೂಲಕ ಮಧ್ಯ ಕರ್ನಾಟಕದಲ್ಲೊಂದು ಅಮೋಘವಾದ ಯಕ್ಷಗಾನ ಪ್ರತಿಭೆಯೊಂದನ್ನು ರೂಪಿಸಿದ್ದಾರೆ. ಇದರ ಫಲವಾಗಿ ಅಮೂಲ್ಯ ಅವರು ಜಿಲ್ಲಾಡಳಿತ, ಕಾಲೇಜು, ವಿವಿಧ ಸಂಘ ಸಂಸ್ಥೆಗಳು ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ಯಕ್ಷಗಾನ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಬಂದಿದ್ದಾರೆ. ಇತ್ತೀಚೆಗೆ ‘ಮಲಬರ್ ಗೋಲ್ಡ್ ಅಂಡ್ ಡೈಮಂಡ್ಸ್’ ಕಂಪನಿಯವರು ಆಯೋಜಿಸಿದ್ದ ಟಾಲೆಂಟ್ ಶೋನಲ್ಲಿ ‘ಗೋಲ್ಡನ್ ಗರ್ಲ್’ ಅವಾರ್ಡ್ ಪಡೆದುಕೊಂಡಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಅಮೂಲ್ಯ ಅವರು ದಾವಣಗೆರೆಯ ಎ.ವಿ.ಕಮಲಮ್ಮ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಪದವಿಯನ್ನು ಅಧ್ಯಯನ ಮಾಡುತ್ತಿದ್ದು, ಬ್ಯಾಂಕ್ ಉದ್ಯೋಗಿಯಾಗಬೇಕೆಂಬ ಹಂಬಲವನ್ನು ಮೈಗೂಡಿಸಿಕೊಂಡಿದ್ದಾರೆ. ಯಕ್ಷಗಾನ ಮತ್ತು ಶಿಕ್ಷಣವನ್ನು ತನ್ನೆರಡು ಕಣ್ಣುಗಳೆಂದು ನಂಬಿರುವ ಅಮೂಲ್ಯ ಅವರು ಕಲೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ತರವಾದ ಸಾಧನೆಗೈಯುವ ಹಂಬಲವೊತ್ತಿದ್ದಾರೆ.
ಪ್ರೀತಿಯ ತಂದೆಯ ಅಗಲಿಗೆಯಿಂದ ನೊಂದಿರುವ ಅಮೂಲ್ಯ ಅವರು ತನ್ನ ತಾಯಿಯ ಪ್ರೀತಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಅಮೂಲ್ಯ ಅವರು ಯಕ್ಷಸೌರಭ ತಂಡದಿಂದ ಯಕ್ಷಗಾನ ತರಬೇತಿಯನ್ನು ಪಡೆಯುತ್ತಲೇ ಕಿರಿಯ ವಿದ್ಯಾರ್ಥಿಗಳಿಗೆ ಗುರುಗಳೊಂದಿಗೆ ತರಬೇತಿಯನ್ನು ನೀಡುವ ಮೂಲಕ ಕಲಾ ಸೇವೆಯನ್ನು ಆರಂಭಿಸಿದ್ದಾರೆ. ಅಮೂಲ್ಯಳ ಉಜ್ವಲ ಭವಿಷ್ಯಕ್ಕಾಗಿ ಮಾವ ಮತ್ತು ಸಹೋದರ ಆಸರೆಯಾಗಿ ನಿಂತಿದ್ದಾರೆ. ಇವರೆಲ್ಲರ ಆಸರೆಯಲ್ಲಿ ಶಿಕ್ಷಣದೊಂದಿಗೆ ಮಧ್ಯ ಕರ್ನಾಟಕದಲ್ಲಿ ಯಕ್ಷಗಾನ ಕಲೆಯನ್ನು ಅರಳಿಸುತ್ತಿರುವ ಅಮೂಲ್ಯ ಅವರ ಮುಂದಿನ ಬದುಕಿನಲ್ಲಿ ಯಶಸ್ಸು ಕಾಣಲೆಂಬುದು ನಮ್ಮ ಹಾರೈಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243