ದಿನದ ಸುದ್ದಿ
ಸಿಎಂ ಸ್ಥಾನಕ್ಕೆ ಹಣ ಕೇಳಿದ್ದು ಯಾರು ಎಂದು ಯತ್ನಾಳ್ ಸ್ಪಷ್ಟಪಡಿಸಬೇಕು : ಬಿ ಕೆ ಹರಿಪ್ರಸಾದ್
ಸುದ್ದಿದಿನ,ಬೆಂಗಳೂರು : ಸಿಎಂ ಸ್ಥಾನಕ್ಕಾಗಿ ಎರಡುವರೆ ಸಾವಿರ ಕೋಟಿ ಕೇಳಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಬಿಕೆ ಹರಿಪ್ರಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಯತ್ನಾಳ್ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು, ಸಿಎಂ ಮಾಡಲು ಕೇಂದ್ರದ ನಾಯಕರು 2500 ಕೋಟಿ ಕೊಡಿ ಎಂದು ಕೇಳಿರುವ ಹಿನ್ನಲೆ ಏನೆಂದರೆ ಈ ಹಿಂದೆ ಅಮಿತ್ ಶಾ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವಾಗಿ ಯತ್ನಾಳ್ ಅವರಿಗೆ ಎರಡುವರೆ ಸಾವಿರ ಕೋಟಿ ಹಣ ಕೇಂದ್ರದ ನಾಯಕರು ಕೇಳಿರಬೇಕು ಈ ವಿಷಯದಲ್ಲಿ ಯತ್ನಾಳ್ ಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಧರ್ಮದ ಮೇಲೆ, ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣ ಕಾರ್ಯತಂತ್ರವಾಗಿದ್ದು, ಹಣ ಕೇಳಿದ್ದು ಯಾರು ಎಂದು ಕೂಡಲೇ ಯತ್ನಾಳ್ ಸ್ಪಷ್ಟಪಡಿಸಬೇಕು. ಅಮಿತ್ ಶಾ ಕೇಳಿದ್ದಾ? ಮೋಹನ್ ಭಾಗವತ್ ಕೇಳಿದ್ದಾ? ನಡ್ಡಾ ಕೇಳಿದ್ದಾ? ಇಲ್ಲ ಮೋದಿ ಅವ್ರು ಕೇಳಿದ್ದಾ? ಎಂದು ಬಿಜೆಪಿ ಕೇಂದ್ರದ ನಾಯಕರ ಮೇಲೆ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಕೂಡಲೇ ರಾಜ್ಯಪಾಲರು ಯತ್ನಾಳ್ ಹೇಳಿಕೆ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243