ದಿನದ ಸುದ್ದಿ
ರಾಜ್ಯದಲ್ಲಿ ಮುಂದುವರಿದ ಅಕಾಲಿಕ ಮಳೆ, ಜನಜೀವನ ಅಸ್ತವ್ಯಸ್ತ : 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಸುದ್ದಿದಿನ ಡೆಸ್ಕ್ : ಬಂಗಾಳಕೊಲ್ಲಿಯಲ್ಲಿ ( bangla kolli ) ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮ್ಯಾನ್‌ಡೋಸ್ (mandous cyclone) ಚಂಡಮಾರುತದ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಬಿಟ್ಟು ಬಿಡದೇ ತುಂತುರು ಮಳೆಯಾಗುತ್ತಿದ್ದು, ಜನಜೀವನ ಬಾದಿತಗೊಂಡಿದೆ. ಸಾವಿರಾರು ಎಕೆರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
ರಾಜ್ಯದಲ್ಲಿ ಚಳಿಯ ಜೊತೆಗೆ ಮಳೆಯಾಗುತ್ತಿದ್ದು, ಇನ್ನು 2-3 ದಿನಗಳ ಕಾಲ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಇಲಾಖೆ ವರದಿ ಹೇಳಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.
ದಾವಣಗೆರೆ ಜಿಲ್ಲೆಯಾದ್ಯಂತ ತುಂತುರು ಮಳೆ ಶೀತಗಾಳಿಯಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಜಿಟಿಜಿಟಿ ಮಳೆಯಿಂದ ಅಡಿಕೆ, ಭತ್ತ, ಮೆಕ್ಕೆಜೋಳ ಬೆಳೆ ಕಟಾವಿಗೆ ಅಡಚಣೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗೆ ತೊಂದರೆಯಾಗಿದೆ.
ಜಿಲ್ಲೆಯ ಆಲದೂರು, ಮಲಂದೂರು, ಸಿರವಾಸೆ ಸೇರಿ ಚಿಕ್ಕಮಗಳೂರು ತಾಲೂಕಿನ ಹಲವೆಡೆ ಕಾಫಿ ಹಣ್ಣುಗಳು ಉದುರಿ ಕಾಫಿ ಬೆಳೆಗೆ ವ್ಯಾಪಕ ಹಾನಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಚಳಿಯ ಜೊತೆಗೆ ಮಳೆಯಾಗುತ್ತಿದ್ದು, ಜನಜೀವನ ಬಾದಿತಗೊಂಡಿದೆ. ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿದೆ ಎಂದು ವರದಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243