ದಿನದ ಸುದ್ದಿ

ಇಂದು ಅಂತಾರಾಷ್ಟ್ರೀಯ ಯೋಗ ದಿನ; ಭಾರತ ಸೇರಿ ವಿಶ್ವಾದ್ಯಂತ ಆಚರಣೆ

Published

on

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದಾಲ್ ಸರೋವರದ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಜದ ಎಲ್ಲ ವರ್ಗಗಳ ಸುಮಾರು 7 ಸಾವಿರ ಜನರು ಈ ಯೋಗೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬಳಿಕ, ಯೋಗ ದಿನದ ಅಂಗವಾಗಿ ವಿಶ್ವದ ಎಲ್ಲಾ ಭಾಗಗಳಲ್ಲೂ ಯೋಗಾಸನ ಮಾಡುತ್ತಿರುವ ಜನರಿಗೆ ಮತ್ತು ದೇಶವಾಸಿಗಳಿಗೆ ಶುಭಾಷಯಗಳನ್ನು ತಿಳಿಸಿದ ಪ್ರಧಾನಿ ಅವರು, ಅಂತಾರಾಷ್ಟ್ರೀಯ ಯೋಗ ದಿನ 10 ವರ್ಷಗಳ ಐತಿಹಾಸಿಕ ಪಯಣವನ್ನು ಪೂರ್ಣಗೊಳಿಸಿದೆ. ತಾವು 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದ್ದು, ಭಾರತದ ಈ ಪ್ರಸ್ತಾವನೆಗೆ 177 ರಾಷ್ಟ್ರಗಳು ಬೆಂಬಲಿಸಿ, ಯೋಗ ದಿನವನ್ನು ಅಂಗೀಕರಿಸಿದೆ. ಅಂದಿನಿಂದಲೂ ಯೋಗ ದಿನ ಹೊಸ ದಾಖಲೆಗಳನ್ನು ಮಾಡುತ್ತಾ ಬಂದಿದೆ ಎಂದರು.

ಯೋಗಾಸನದ ಪ್ರಯೋಜನಗಳ ಬಗ್ಗೆ ಪ್ರತಿಪಾದಿಸಿದ ಪ್ರಧಾನಿ ಅವರು, ವಿಶ್ವಾದ್ಯಂತ ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಯೋಗವು ಸಕಾರಾತ್ಮಕ ಶಕ್ತಿಯನ್ನು ನೀಡುವುದರಿಂದ ಜನರು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಲಿದೆ. ಸಮಾಜದಲ್ಲಿ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ ಎಂದು ಹೇಳಿದರು.

ಈ ವರ್ಷ 101 ವರ್ಷದ ಫ್ರಾನ್ಸ್ನ ಮಹಿಳಾ ಯೋಗ ಶಿಕ್ಷಕಿಗೆ ಪದ್ಮಶ್ರೀ ಪ್ರಶಸಿ ಪ್ರಧಾನ ಮಾಡಲಾಯಿತು. ಅವರು, ಭಾರತಕ್ಕೆ ಭೇಟಿ ನೀಡದಿದ್ದರೂ ತಮ್ಮ ಇಡೀ ಜೀವನವನ್ನು ಯೋಗದ ಬಗ್ಗೆ ಜಾಗೃತಿ ಮೂಡಿಸಲು ಮುಡುಪಾಗಿಟ್ಟಿದ್ದಾರೆ. ಇಂದು ವಿಶ್ವಾದ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಯೋಗವನ್ನು ಅಳವಡಿಸಿಕೊಳ್ಳಲಾಗಿದೆ. ಯೋಗ ಕುರಿತ ಸಂಶೋಧನಾ ಪತ್ರಗಳನ್ನು ಪ್ರಕಟಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶ್ವಾದ್ಯಾಂತ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಯೋಗ ದಿನವನ್ನು ಆಯೋಜಿಸಲಾಗಿದೆ. ಸಮಾಜಕ್ಕೆ ಮತ್ತು ಸ್ವಯಂಗಾಗಿ ಯೋಗ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಸಾಮಾಜಿಕ ಸಾಮರಸ್ಯ ಮತ್ತು ವೈಯಕ್ತಿಕ ಕ್ಷೇಮದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗಾಭ್ಯಾಸದ ಮೂಲಕ ಜಾಗತಿಕ ಆರೋಗ್ಯ ಮತ್ತು ಕ್ಷೇಮ ಉತ್ತೇಜಿಸುವ ಸಂದೇಶದೊಂದಿಗೆ ಲಕ್ಷಾಂತರ ಜನರನ್ನು ಒಟ್ಟಿಗೆ ಸೇರಿಸುವ ಉದ್ದೇಶವನ್ನು ಈ ಆಚರಣೆ ಹೊಂದಿದೆ.

ಯೋಗದ ಪ್ರಯೋಜನಗಳ ಬಗ್ಗೆ ಪ್ರಧಾನಿ ಅವರು, ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದು, ಗ್ರಾಮೀಣ ಭಾಗದಲ್ಲಿ ಯೋಗವನ್ನು ವ್ಯಾಪಕಗೊಳಿಸಿ, ಬೇರು ಮಟ್ಟದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಂತೆ ಕರೆ ನೀಡಿದ್ದಾರೆ.

2015ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆರಂಭವಾದಗಿನಿಂದಲೂ ಪ್ರಧಾನಿ ಅವರು ಯೋಗವನ್ನು ಉತ್ತೇಜಿಸುತ್ತ ವಿಶ್ವಾದ್ಯಾಂತ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ದೆಹಲಿಯ ಕರ್ತವ್ಯ ಪಥ, ಚಂಡಿಗಢ, ಡೆಹರಾಡೂನ್, ರಾಂಚಿ, ಲಖನೌ, ಮೈಸೂರು ಮತ್ತು ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇದರಲ್ಲಿ ಸೇರಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version