ಲೋಕಾರೂಢಿ
ಪ್ರಜಾಪ್ರಭುತ್ವವಾದೀ ಹೋರಾಟದ ಮುಂಚೂಣಿಯಲ್ಲಿ ವಿದ್ಯಾರ್ಥಿಗಳು
- ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಏರ್ಪಟ್ಟಿರುವ ಮೈತ್ರಿ ಕೂಟವು ಬಿಜೆಪಿ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು. ಇಂತಹ ಒಂದು ಸರ್ಕಾರವನ್ನು ವರ್ಗ ಹೋರಾಟದ ಮೂಲಕ ಪ್ರತಿರೋಧಿಸುವ ಕಾರ್ಯಭಾರವು ಕಾರ್ಮಿಕರು, ರೈತರು, ಸಣ್ಣ ಉತ್ಪಾದಕರು, ಕೃಷಿ ಕಾರ್ಮಿಕರ ಹೆಗಲ ಮೇಲಿದ್ದರೂ ಸಹ, ವೈಚಾರಿಕ ಸಮುದಾಯವೂ ಒಟ್ಟಾಗಿ ನಿಂತು ಈ ಅವೈಚಾರಿಕತೆಯನ್ನು ಎದುರಿಸಬೇಕಿದೆ. ಯೌವನದ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ಅತಿ ಹೆಚ್ಚು ಹುರುಪುಳ್ಳವರೂ, ಉತ್ಸಾಹಿಗಳೂ ಮತ್ತು ಶಕ್ತಿಯುತ ಕ್ರಿಯಾಶೀಲರೂ ಆಗಿರುವುದರಿಂದ, ಹಿಂದುತ್ವದ ಅವೈಚಾರಿಕತೆಯ ವಿರುದ್ಧ ಶಕ್ತಿಶಾಲಿಯಾಗಿ ಹೋರಾಡಬಲ್ಲರು. ಇಂತಹ ಶಕ್ತಿಶಾಲಿ ಎದುರಾಳಿಯನ್ನು ನಿರಾಯಧರನ್ನಾಗಿಸುವುದೇ ಭಾಜಪದ ಗುರಿ. ಅದರ ಪಾಶವೀ ಹಲ್ಲೆಗೂ ಅಂಜದೆ,ಅಳುಕದೆ ವಿದ್ಯಾರ್ಥಿಗಳು, ಹೋರಾಡುತ್ತಿರುವುದು ಮನಸ್ಸನ್ನು ಉಲ್ಲಸಿತಗೊಳಿಸಿರುವ ಸಂಗತಿ.
–ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ವಿದ್ಯಾರ್ಥಿಗಳ ಉದ್ದೇಶ-ಕರ್ತವ್ಯ-ಪಾತ್ರಗಳ ಕುರಿತಂತೆ ಒಬ್ಬ ವಿದ್ಯಾರ್ಥಿಯ ಪರಿಕಲ್ಪನೆ, ಮತ್ತು, ಅದೇ ರೀತಿಯಲ್ಲಿ, ವಿಶ್ವವಿದ್ಯಾಲಯಗಳ ಉದ್ದೇಶ-ಕರ್ತವ್ಯ-ಪಾತ್ರಗಳ ಕುರಿತಂತೆ ಒಂದು ವಿಶ್ವವಿದ್ಯಾಲಯದ ಪರಿಕಲ್ಪನೆ, ಈ ಪರಿಕಲ್ಪನೆಗಳ ಬಗ್ಗೆ ದೇಶದ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಈಗ ಒಂದು ವೈಚಾರಿಕ ಸಂಘರ್ಷ ನಡೆಯುತ್ತಿದೆ. ಭಾಜಪ ಸರ್ಕಾರವು, ವಿದ್ಯಾರ್ಥಿಗಳು ಶಿಕ್ಷಣವನ್ನು ಕೊಳ್ಳುವವರಾಗಿ, ಸದಾ ಸ್ವಹಿತದಲ್ಲೇ ಮುಳುಗಿ ಸ್ವಾರ್ಥಿಗಳಾಗಿಯೇ ಉಳಿದು, ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಶ್ರಮಶಕ್ತಿಯನ್ನು ಮಾರುವವರಾಗಿ ಇರಬೇಕೆಂದು ಬಯಸುತ್ತದೆ.
ಭಾಜಪದ ಈ ಪರಿಕಲ್ಪನೆಗೆ ಪರ್ಯಾಯವಾಗಿ ಇನ್ನೊಂದು ಪರಿಕಲ್ಪನೆಯೂ ಇದೆ. ಈ ಪರಿಕಲ್ಪನೆಯು, ವಿದ್ಯಾರ್ಥಿಯು ಒಬ್ಬ ಸಾಮಾಜಿಕ ಸಂವೇದನೆಯುಳ್ಳ ವ್ಯಕ್ತಿಯಾಗಿ ಮತ್ತು ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಮತ್ತು ಮನುಷ್ಯ ಮನುಷ್ಯರ ನಡುವೆ ಸಮಾನತೆಯ ಮೌಲ್ಯಗಳ ಭಾರತವನ್ನು ಕಟ್ಟುವ ಕೈಂಕರ್ಯಕ್ಕಾಗಿ ಶಿಕ್ಷಣವನ್ನು ಬಳಸಿಕೊಳ್ಳುವ ವ್ಯಕ್ತಿಯಾಗಿ; ಮತ್ತು ಅದರ ಜೊತೆಯಲ್ಲಿ ಸರ್ಕಾರದ ನೀತಿಗಳೂ ಸೇರಿದಂತೆ ಎಲ್ಲ ಸಾಮಾಜಿಕ ವಿಷಯಗಳನ್ನೂ ವಿಮರ್ಶಾತ್ಮಕವಾಗಿ ಪರಿಶೀಲನೆಗೊಳಪಡಿಸುವ ವ್ಯಕ್ತಿಯಾಗಿ ಹೊರ ಹೊಮ್ಮಬೇಕು, ಎಂದು ಬಯಸುತ್ತದೆ.
ಅದೇ ರೀತಿಯಲ್ಲಿ, ವಿಶ್ವವಿದ್ಯಾಲಯದ ಬಗ್ಗೆಯೂ ಬೇರೆ ಬೇರೆ ಪರಿಕಲ್ಪನೆಗಳಿವೆ: ವಿಶ್ವವಿದ್ಯಾಲಯವು ಕೌಶಲ್ಯಗಳನ್ನು (ಶಿಕ್ಷಣ ಮತ್ತು ಕೌಶಲ್ಯಗಳು ಒಂದೇ ಅಲ್ಲ, ಶಿಕ್ಷಣವೇ ಬೇರೆ; ಕೌಶಲ್ಯವೇ ಬೇರೆ) ಮಾರುವ ಒಂದು ತಾಣವಾಗಿ ನೋಡುವ; ಅಥವಾ, ಪರ್ಯಾಯವಾಗಿ, ವಿಶ್ವವಿದ್ಯಾಲಯವು, ಕಲಿಕೆಯ ಜೊತೆಗೆ ನಮ್ಮ ಕಾಲದ ಜ್ವಲಂತ ಸಮಸ್ಯೆಗಳೊಂದಿಗೆ ವಿಮರ್ಶಾತ್ಮಕವಾಗಿ ಸಂವಾದಗಳಲ್ಲಿ ತೊಡಗುವ ತಾಣವಾಗಿ ನೋಡುವ ಪರಿಕಲ್ಪನೆಯೂ ಇದೆ. ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ, ನಮ್ಮ ದೇಶದ ಅಗ್ರ ಮಾನ್ಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಎರಡನೆಯ ಪರಿಕಲ್ಪನೆಗೆ ಸೇರುತ್ತಾರೆ – ನಮ್ಮ ಕಾಲದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರು ತಮ್ಮ ಸಂವೇದನೆಯನ್ನು ವ್ಯಕ್ತಪಡಿಸಿದ್ದಾರೆ.
ಪೌರತ್ವ ಕಾಯ್ದೆಯ ತಿದ್ದುಪಡಿಯ ಬಗ್ಗೆ ಇತ್ತೀಚೆಗೆ ಭುಗಿಲೆದ್ದಿರುವ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಬಲು ದೊಡ್ಡ ಪಾತ್ರ ವಹಿಸಿದ್ದಾರೆ. ಅದಕ್ಕೂ ಹಿಂದೆ, ಕಳೆದ ಕೆಲವು ವರ್ಷಗಳಲ್ಲಿ, ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ವೈಚಾರಿಕ ಸಂಘರ್ಷ ವ್ಯಕ್ತಗೊಂಡಿದೆ: ಜೆಎನ್‌ಯು, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಪುಣೆಯ ಫಿಲಂ & ಟಿ ವಿ ಟೆಕ್ನಾಲಜಿ ಇನ್‌ಸ್ಟಿಟೂಟ್; ಬರೋಡಾದ ಸಯ್ಯಾಜಿ ರಾವ್ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗ; ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಆಳುವವರು ಪುರಸ್ಕರಿಸದ ಮತ್ತು ತಮ್ಮ ಹಕ್ಕುಗಳಿಗೆ ಚ್ಯುತಿಯಾದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ತೊಡಗಿದ್ದರು. ಅದರಲ್ಲಿ ಆಶ್ಚರ್ಯವೇನಿಲ್ಲ.
ಆದರೆ, ವಿದ್ಯಾರ್ಥಿಗಳನ್ನು ಕೇವಲ ಕೌಶಲ್ಯಗಳನ್ನು ಕೊಳ್ಳುವ ಒಂದು ನಿಷ್ಕ್ರಿಯ ಸಮೂಹವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ, ಭಾಜಪ ಸರ್ಕಾರವು ಯಾವ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಾಮಾಜಿಕವಾಗಿ ಸಂವೇದನಾಶೀಲತೆಗೆ ಹೆಸರಾಗಿದ್ದರೋ ಅಂತಹ ಈ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮೇಲೆ ನಿಖರ ಗುರಿ ಇಟ್ಟು ದಾಳಿ ಮಾಡಿತು. ನಿಜವಾಗಿಯೂ, ಈ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಾಮಾಜಿಕ ಸಂವೇದನಾಶೀಲತೆಯ ಕೊಡುಗೆಯಿಂದಲೇ ಈ ವಿಶ್ವವಿದ್ಯಾಲಯಗಳು ಶ್ರೇಷ್ಠ ವಿದ್ಯಾ ಸಂಸ್ಥೆಗಳ ಎತ್ತರಕ್ಕೆ ಬೆಳೆದವು.
ಕ್ಯಾಂಪಸ್‌ಗಳು ರಾಜಕೀಯದಿಂದ ದೂರವಿರಬೇಕೆ?
ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ರಾಜಕೀಯದಿಂದ ದೂರ ಇರುವಂತೆ ಮಾಡುವ ಸಲುವಾಗಿ ಸರ್ಕಾರವು ಅನೇಕ ವಿಧಾನಗಳನ್ನು ಅನುಸರಿಸಿದೆ. ಅವುಗಳಲ್ಲಿ ಬಹಳ ಮುಖ್ಯವಾದ ವಿಧಾನವೆಂದರೆ: ಶ್ರೀಮಂತ ಮತ್ತು ವೃತ್ತಿ-ಅಭಿಮುಖ ವಿದ್ಯಾರ್ಥಿಗಳು ಮಾತ್ರ ವಿಶ್ವವಿದ್ಯಾಲಯ ಪ್ರವೇಶಿಸಬೇಕು ಎಂಬ ಉದ್ದೇಶದಿಂದ ಶುಲ್ಕ ಹೆಚ್ಚಳ (ಜೆಎನ್‌ಯುನಲ್ಲಿ ಮಾಡಿದಂತೆ) ಮಾಡುವ ಮೂಲಕ ವಿದ್ಯಾರ್ಥಿಗಳ ಸಾಮಾಜಿಕ ಸಂಯೋಜನೆಯಲ್ಲಿ(ಅಂದರೆ, ಬೇರೆ ಬೇರೆಯ ಧರ್ಮ, ಜಾತಿ, ಲಿಂಗ, ಬಡ, ಪ್ರದೇಶ ಮುಂತಾದ ಹಿನ್ನೆಲೆಯಿಂದ ಬಂದವರು) ಬದಲಾವಣೆ, ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳು, ಸಮಾಜ ವಿಜ್ಞಾನ ಮತ್ತು ಮೂಲ ವಿಜ್ಞಾನಗಳು ಮುಂತಾದ ವಿಮರ್ಶಾತ್ಮಕ ಶಿಸ್ತುಗಳ ಮಹತ್ವವನ್ನು ಕುಗ್ಗಿಸುವ, ಹೊಸ ಶಾಖೆಗಳನ್ನು ಆರಂಭಿಸುವುದು; ಸಾಮಾಜಿಕವಾಗಿ ವಂಚಿತ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಿತ್ತುಹಾಕಿ ಕ್ಯಾಂಪಸ್‌ಗಳ ಒಳಗೊಳ್ಳುವಿಕೆಯ ಸ್ವರೂಪವನ್ನು ಹಾಳುಗೆಡವಿರುವುದು.
ಇನ್ನೊಂದು ವಿಧಾನವೆಂದರೆ, ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ತಡೆಯುವುದು, ಮತ್ತು ಸಂಘ ಪರಿವಾರಕ್ಕೆ ಒಪ್ಪಿಗೆಯಾಗದ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸದಂತೆ ವಿದ್ಯಾರ್ಥಿಗಳನ್ನು ತಡೆಯುವುದು. ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತಿರುವ ಮತ್ತೊಂದು ವಿಧಾನವೆಂದರೆ, ಪೋಲೀಸರನ್ನು ಕ್ಯಾಂಪಸ್‌ಗೆ ನುಗ್ಗಿಸಿ ವಿದ್ಯಾರ್ಥಿಗಳನ್ನು ಹಿಗ್ಗಾ ಮುಗ್ಗಾ ಥಳಿಸುವುದು ಮತ್ತು ಸರ್ಕಾರ ಅಥವಾ ಕುಲಪತಿಯನ್ನು ಫಜೀತಿಗೊಳಪಡಿಸುವ ಛಾತಿ ಇರುವ ವಿದ್ಯಾರ್ಥಿ ನಾಯಕರನ್ನು ಒಂದಲ್ಲಾ ಒಂದು ಉಗ್ರ ಕಾನೂನಿನಡಿಯಲ್ಲಿ ರಾಷ್ಟ್ರ-ವಿರೋಧಿ ಅಥವಾ ರಾಜದ್ರೋಹ ಅಥವಾ ಯಾವುದಾದರೂ ಸರಿಯೇ ಒಂದು ಕ್ರಿಮಿನಲ್ ಆಪಾದನೆಯ ಮೇಲೆ ಬಂಧಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು.
ಈ ಎಲ್ಲ ವಿಧಾನಗಳನ್ನೂ ಸಂಘ ಪರಿವಾರ- ನಿಷ್ಠ ವ್ಯಕ್ತಿಗಳನ್ನು ಈ ಸಂಸ್ಥೆಗಳ ಮುಖ್ಯಸ್ತರಾಗಿ ನೇಮಿಸುವ ಮೂಲಕ ಜಾರಿ ಮಾಡಲಾಗುತ್ತಿದೆ. ಈ ವ್ಯಕ್ತಿಗಳಿಗೆ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲ, ತಾವು ಮುಖ್ಯಸ್ಥರಾಗಿರುವ ಸಂಸ್ಥೆಗಳ ಬಗ್ಗೆಯೇ ಗೌರವ, ಪ್ರೀತಿ, ಅಭಿಮಾನ, ಹೆಮ್ಮೆ, ಯಾವುದೂ ಇಲ್ಲ. ಅಷ್ಟೇ ಅಲ್ಲ, ಅವರು, ವಿಶ್ವವಿದ್ಯಾಲಯದ ಇಡೀ ಸಮುದಾಯದ ಯಾರೊಬ್ಬರಿಗೂ ಸಂಪರ್ಕಿಸಲು ಉದ್ದೇಶಪೂರ್ವಕವಾಗಿ ಒದಗದವರು.
ಉದಾಹರಣೆಗೆ ಹೇಳುವುದಾದರೆ, ಜೆಎನ್‌ಯುನ ವಿದ್ಯಾರ್ಥಿ ಸಂಘಕ್ಕೆ ಮನ್ನಣೆ ನೀಡಬೇಕು ಮತ್ತು ಅದರ ನಾಯಕರೊಂದಿಗೆ ಮಾತುಕತೆ ನಡೆಸಬೇಕು ಎಂಬುದಾಗಿ ಸರ್ಕಾರವೇ ನೇಮಕ ಮಾಡಿದ ತಜ್ಞರ ಸಮಿತಿಯ ಶಿಫಾರಸನ್ನು ಜೆಎನ್‌ಯು ಕುಲಪತಿ ಕಡೆಗಣಿಸಿದ್ದಾರೆ. ವಿದ್ಯಾರ್ಥಿ ಸಮುದಾಯದ ಕಣ್ಣೋಟವನ್ನು ಅಭಿವ್ಯಕ್ತಿಸುವ ವೇದಿಕೆಯಾದ ವಿದ್ಯಾರ್ಥಿ ಸಂಘವನ್ನು ಮನ್ನಣೆ ಮಾಡುವುದು ಬಿಜೆಪಿಗೆ ಹಿಡಿಸದ ಅಂಶ. ಅದು, ವಿದ್ಯಾರ್ಥಿ ಎಂದರೆ ಹೀಗೆಯೇ ಇರಬೇಕು ಎಂದು ಆದೇಶಿಸುವ ಭಾಜಪದ ಪರಿಕಲ್ಪನೆಗೆ ಹೊಂದುವುದಿಲ್ಲ.
ಒಂದು ಪ್ರಶ್ನೆ ಏಳುತ್ತದೆ: ನಮ್ಮ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯದಿಂದ ದೂರ ಇರುವಂತೆ ಮತ್ತು ಹೇಳಿದಂತೆ ಕೇಳುವ ವಿದ್ಯಾರ್ಥಿಗಳಿಂದಲೇ ತುಂಬಿರುವಂತೆ ಮಾಡಲು ಸರ್ಕಾರವು ಅದೇಕೆ ಅಷ್ಟೊಂದು ಉತ್ಸುಕವಾಗಿದೆ? ಉತ್ತರ: ಏಕೆಂದರೆ, ಒಂದು ದಬ್ಬಾಳಿಕೆಯ ಸರ್ಕಾರಕ್ಕೆ ವಿಧೇಯತೆ ಇರಬೇಕೆಂದು ಬಯಸುವ ಸಮಾಜ ಮತ್ತು ರಾಜ್ಯಾಡಳಿತಗಳಿಗೆ ಅಂತಹ ವಿದ್ಯಾರ್ಥಿಗಳೇ ಅಗತ್ಯವಾಗಿ ಬೇಕಾಗುತ್ತಾರೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಜಾರಿಯಾಗುತ್ತಿರುವ ಬದಲಾವಣೆಗಳ ಉದ್ದೇಶವೇ ಇಂತಹ ಸರ್ವಾಧಿಕಾರಶಾಹಿ ಆಳ್ವಿಕೆಗೆ ಬದಲಾವಣೆ ಹೊಂದಲು ಸಹಾಯಕವಾಗುವುದು.
ಅವೈಚಾರಿಕತೆಗೆ ಸವಾಲು
ಪ್ರಸ್ತುತದಲ್ಲಂತೂ ಅವೈಚಾರಿಕತೆ ಕುಣಿದು ಕುಪ್ಪಳಿಸುತ್ತಿದೆ. ಭಾಜಪ ಸರ್ಕಾರವು ಎರಡು ಅಪರೂಪದ ಶಕ್ತಿಗಳ ಸಂಗಮವನ್ನು ಪ್ರತಿನಿಧಿಸುತ್ತದೆ – ಒಂದು ಕಡೆಯಲ್ಲಿ ಕಾರ್ಪೊರೇಟ್-ಹಣಕಾಸು ಕುಳಗಳು ಮತ್ತು ಇನ್ನೊಂದೆಡೆಯಲ್ಲಿ ನಮ್ಮ ಪ್ರಜಾಪ್ರಭುತ್ವವಾದೀ ಮತ್ತು ಧರ್ಮನಿರಪೇಕ್ಷ ಸಂವಿಧಾನವನ್ನು ಕಿತ್ತೆಸೆಯುವ ಮೂಲಕ ದೇಶವನ್ನು ಒಂದು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿ ಹೊಂದಿದ ಹಿಂದುತ್ವ ಶಕ್ತಿಗಳು-ಇವೆರಡರ ಸಂಗಮ.
ಹಿಂದೂರಾಷ್ಟ್ರದ ಸಮರ್ಥನೆಯಾಗಿ ಹಿಂದುತ್ವ ಶಕ್ತಿಗಳು ಬಳಸುತ್ತಿರುವ ಇಡೀ ಕಥನವು ಅವೈಚಾರಿಕತೆಯ ಮೇಲೆ ನಿಂತಿದೆ. ಯಾವ ಅರ್ಥದಲ್ಲಿ ಅದು ಅವೈಚಾರಿಕವಾಗಿದೆ ಎಂದರೆ, ಹಿಂದುತ್ವವು ತನ್ನ ಯಥಾರ್ಥತೆ/ಸತ್ಯತೆ-ಮೌಲ್ಯವನ್ನು ಅಂಗೀಕೃತ ವಾಗುವಂತೆ ಮಾಡುವಲ್ಲಿ ಪುರಾವೆಯ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಈ ರೀತಿಯಲ್ಲಿ, ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಒಂದು ಮೈತ್ರಿ ಕೂಟ ಏರ್ಪಟ್ಟಿರುವುದನ್ನು ಮತ್ತು ಈ ಮೈತ್ರಿ ಕೂಟವು ಭಾಜಪ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು.
ಇಂತಹ ಒಂದು ಸರ್ಕಾರವನ್ನು ವರ್ಗ ಹೋರಾಟದ ಮೂಲಕ ಪ್ರತಿರೋಧಿಸುವ ಕಾರ್ಯಭಾರವು ಕಾರ್ಮಿಕರು, ರೈತರು, ಸಣ್ಣ ಉತ್ಪಾದಕರು, ಕೃಷಿ ಕಾರ್ಮಿಕರ ಹೆಗಲ ಮೇಲಿದ್ದರೂ ಸಹ, ವೈಚಾರಿಕ ಸಮುದಾಯವೂ ಒಟ್ಟಾಗಿ ನಿಂತು ಈ ಅವೈಚಾರಿಕತೆಯನ್ನು ಎದುರಿಸಬೇಕಿದೆ. ಚಾಲ್ತಿಯಲ್ಲಿರುವ ಈ ಅವೈಚಾರಿಕತೆಯು, ಚರಿತ್ರೆಯನ್ನು ಪುರಾಣದ ಮೂಲಕ ವ್ಯಾಖ್ಯಾನಿಸುತ್ತದೆ, ವಾಸ್ತವಾಂಶಗಳಿಗೆ ಬದಲಾಗಿ ನಂಬಿಕೆಗಳಿಗೆ ಜೋತುಬೀಳುತ್ತದೆ, ವೈಜ್ಞಾನಿಕ ಮನೋಭಾವದ ಬದಲಾಗಿ ಮೂಢ ನಂಬಿಕೆಗಳನ್ನು ಹರಡುತ್ತದೆ. ಈ ರೀತಿಯಲ್ಲಿ ವೈಚಾರಿಕತೆಯನ್ನು ನಾಶಪಡಿಸುವ ಭೂಮಿಕೆಯನ್ನು ಅದು ನಿರ್ಮಿಸುತ್ತಿದೆ. ಏಕೆಂದರೆ, ಕೋಮುವಾದಿ-ಸರ್ವಾಧಿಕಾರಶಾಹೀ ಯೋಜನೆಗೆ ಈ ಭೂಮಿಕೆಯೇ ಬೆನ್ನೆಲುಬು.
ಯೌವನದ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ಅತಿ ಹೆಚ್ಚು ಹುರುಪುಳ್ಳವರೂ, ಉತ್ಸಾಹಿಗಳೂ ಮತ್ತು ಶಕ್ತಿಯುತ ಕ್ರಿಯಾಶೀಲರೂ ಆಗಿರುವುದರಿಂದ, ಅವರು ಬುದ್ಧಿಜೀವಿ ವರ್ಗದ ಮೂಲಾಂಶಗಳೂ ಆಗಿರುತ್ತಾರೆ. ಆದ್ದರಿಂದ, ಅವರು ಹಿಂದುತ್ವದ ಅವೈಚಾರಿಕತೆಯ ವಿರುದ್ಧ ಶಕ್ತಿಶಾಲಿಯಾಗಿ ಹೋರಾಡಬಲ್ಲರು. ಇಂತಹ ಶಕ್ತಿಶಾಲಿ ಎದುರಾಳಿಯನ್ನು ನಿರಾಯಧರನ್ನಾಗಿಸುವುದೇ ಭಾಜಪದ ಗುರಿ. ವೃತ್ತಿ-ಭವಿಷ್ಯದ ಬೆನ್ನತ್ತಿ ಹೋಗುವ ವಿದ್ಯಾರ್ಥಿಗಳಿಂದ ಹಿಂದುತ್ವ ಯೋಜನೆಗೆ ಅಪಾಯವಿಲ್ಲ. ಅಪಾಯ ಒಡ್ಡುವವರು ಯಾರು ಎಂದರೆ, ಸಾಮಾಜಿಕ ಸಂವೇದನೆ ವ್ಯಕ್ತಪಡಿಸುವ ವಿದ್ಯಾರ್ಥಿಗಳು ಮತ್ತು ಧರ್ಮನಿರಪೇಕ್ಷತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿರುವ ವಿದ್ಯಾರ್ಥಿಗಳು. ಏಕೆಂದರೆ, ಯೌವನದ ಹುರುಪು, ಉತ್ಸಾಹ ಮತ್ತು ಛಲಗಳ ಜೊತೆಗೆ ಶಿಕ್ಷಣದ ಮೂಲಕ ಜ್ಞಾನ ಸಂಪನ್ನರೂ ಆಗಿರುವ ಅವರು ಹಿಂದುತ್ವದ ವಿರುದ್ಧ ಒಂದು ಬಲವಾದ ತಡೆಯಂತೆ ನಿಲ್ಲುತ್ತಾರೆ.
ಖಾಸಗೀಕರಣ-ವ್ಯಾಪಾರೀಕರಣದ ಆಯುಧ
ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಮತ್ತು ವ್ಯಾಪಾರೀಕರಣಗೊಳಿಸುವ ಬಯಕೆಯು, ವಿದ್ಯಾರ್ಥಿಗಳನ್ನು ನಿರಾಯುಧರನ್ನಾಗಿ ಮಾಡುವ ಯೋಜನೆಯ ಭಾಗವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ದುಬಾರಿ ಶುಲ್ಕದಿಂದಾಗಿ ದುಡ್ಡಿಲ್ಲದವರು ಶಿಕ್ಷಣದಿಂದ ಹೊರಗುಳಿಯುತ್ತಾರೆ ಮತ್ತು ಅಲ್ಲಿ ಸೇರಿಕೊಳ್ಳುವ ಶ್ರೀಮಂತರ ಮಕ್ಕಳಿಗೆ ಬಡವರ ಹೊಟ್ಟೆ ಬಟ್ಟೆಯ ಕಷ್ಟಗಳ ಬಗ್ಗೆ ಅರಿವಿಲ್ಲದಿರುವುದರಿಂದ ಅವರು ಸಾಮಾಜಿಕವಾಗಿ ಸಂವೇದನೆ ಇಲ್ಲದವರಾಗುತ್ತಾರೆ. ಹೊಟ್ಟೆ ಬಟ್ಟೆಯ ಕಷ್ಟಗಳನ್ನು ಅನುಭವಿಸಿದ ಮಕ್ಕಳಿಗೆ ಸಾಮಾಜಿಕ ಸಂವೇದನೆ ಮೂಡುವುದು ಸ್ವಾಭಾವಿಕ.
ಒಂದು ವೇಳೆ, ಜೆಎನ್‌ಯು ರೀತಿಯಲ್ಲಿ, ಸಾರ್ವಜನಿಕ ಶಿಕ್ಷಣಗಳಲ್ಲೂ ಶುಲ್ಕ ಹೆಚ್ಚಳ ಮಾಡಿದರೆ, ಈ ಸಂಸ್ಥೆಗಳ ಪಾಡೂ ಅದೇ ಆಗುತ್ತದೆ. ಬೇರೆಯವರಿಗಿಂತ ಕಡಿಮೆ ಸೌಕರ್ಯ, ಪ್ರಯೋಜನ, ರಕ್ಷಣೆ ಮುಂತಾದವುಗಳನ್ನು ಹೊಂದಿದ ಕುಟುಂಬ ಹಿನ್ನೆಲೆಯಿಂದಾಗಿ ಸಾಲ ಮಾಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾಲದ ಹೊರೆಯ ಹಿಂಸೆ ಆವರಿಸಿರುವುದರಿಂದ, ಅವರಿಗೆ ಸಾಮಾಜಿಕವಾಗಿ ಅಥವಾ ರಾಜಕೀಯವಾಗಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ಸಾಲಗಳು ರಾಜಕೀಯ ಕ್ರಿಯಾಶೀಲತೆಯ ಮೇಲೆ ಉಂಟುಮಾಡುವ ಪರಿಣಾಮಗಳ ಉತ್ತಮ ಚಿತ್ರಣ ಅಮೇರಿಕಾದಲ್ಲಿ ಸಿಗುತ್ತದೆ.
ಅಮೇರಿಕಾದಲ್ಲಿ, ವಿದ್ಯಾರ್ಥಿಗಳು ವಿಯಟ್ನಾಂ ಯುದ್ಧ-ವಿರೋಧ ಪ್ರತಿಭಟನೆ ನಡೆಸಿದ ಸಮಯದ ನಂತರದ ಅವಧಿಯಲ್ಲಿ, ಅಲ್ಲಿನ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳು ಹೋಲಿಕೆಯಲ್ಲಿ ಶಾಂತವಾಗಿ ಕಾಣುತ್ತವೆ. ಕ್ಯಾಂಪಸ್‌ಗಳು ಶಾಂತವಾಗಿ ಉಳಿದಿರುವುದಕ್ಕೆ, ಖಂಡಿತವಾಗಿಯೂ, ವಿದ್ಯಾರ್ಥಿಗಳ ಮೇಲಿರುವ ಸಾಲದ ಹೊರೆಯೇ ಕಾರಣ.
ಭಾರತದಲ್ಲಿ, ಅದೃಷ್ಟವಷಾತ್, ಸಂಘ ಪರಿವಾರದ ಶಿಸ್ತು ಹೇರುವ ವ್ಯಕ್ತಿಗಳ ಹರ ಸಾಹಸದ ಬಳಿಕವೂ, ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಸಂವೇದನೆಯನ್ನು ಕಳೆದುಕೊಂಡಿಲ್ಲ. ಆಗಿರುವುದು ಏನೆಂದರೆ, ಕ್ಯಾಂಪಸ್ ಡೆಮಾಕ್ರಸಿಯಿಂದ ಹಿಡಿದು, ಇಡೀ ಜನತೆಯನ್ನು ತಟ್ಟುವ ಸಮಸ್ಯೆಗಳಾದ ಸಿಎಎ ಮತ್ತು ಎನ್‌ಆರ್‌ಸಿಯವರೆಗೆ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಚಟುವಟಿಕೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ತಮ್ಮ ತಮ್ಮ ನಡುವೆ ಬೆಸಗೊಳ್ಳುವಿಕೆಯು (ಒಳಗೊಳ್ಳುವಿಕೆಯ ಸ್ಪಂದನೆ), ಸಮಾಜವು ಯಾವ ರೀತಿಯ ಒಳಗೊಳ್ಳುವಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂಬುದರ ದಿಕ್ಸೂಚಿಯಂತಿದೆ.
ಬೇರೊಂದು ಧಾರ್ಮಿಕ ಹಿನ್ನೆಲೆಯ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ಸಿಎಎ ಮತ್ತು ಎನ್‌ಆರ್‌ಸಿಯ ವಿರುದ್ಧವಾಗಿ ಹೋರಾಡುತ್ತಿರುವುದು, ಶ್ರೀಮಂತ ಹಿನ್ನೆಲೆಯ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದ ವಿರುದ್ಧವಾಗಿ ತಮ್ಮ ಬಡ ಸಹಪಾಠಿಗಳೊಂದಿಗೆ ಹೋರಾಡುತ್ತಿರುವ ಅಂಶಗಳು, ಆಪ್ತಗೆಳೆತನ ಮತ್ತು ಸೌಹಾರ್ಧತೆಯ ಅತ್ಯುತ್ತಮ ಉದಾಹರಣೆಗಳಾಗಿವೆ.
ವಿದ್ಯಾರ್ಥಿಗಳು ಶರಣಾಗಲು ನಿರಾಕರಿಸುತ್ತಿರುವುದರಿಂದ ಅವರನ್ನು ಪಳಗಿಸಲು ಪೋಲೀಸರು ಪಾಶವೀ ಹಲ್ಲೆ ನಡೆಸುತ್ತಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಕೇಂದ್ರ ಗೃಹ ಸಚಿವರ ನೇರ ಹಿಡಿತದಲ್ಲಿರುವ ದಿಲ್ಲಿ ಪೋಲಿಸರು ಪಾಶವೀ ಹಲ್ಲೆ ನಡೆಸಿದ್ದಾರೆ. ಅಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಉತ್ತರ ಪ್ರದೇಶದ ಭಾಜಪದ ಯೋಗಿ ಆದಿತ್ಯನಾಥರ ಸರ್ಕಾರದ ಪೋಲಿಸರು ಪಾಶವೀ ಹಲ್ಲೆ ನಡೆಸಿದ್ದಾರೆ.
ಜೆಎನ್‌ಯುನಲ್ಲಿ, ಘಟನಾ ಸ್ಥಳದಲ್ಲಿ ವಿಶ್ವವಿದ್ಯಾಲಯದ ಸ್ವಂತ ರಕ್ಷಣಾ ಸಿಬ್ಬಂದಿಯ ನಿಗೂಢ ಅನುಪಸ್ಥಿತಿಯಲ್ಲಿ ಮತ್ತು ಆಂತರಿಕ ಮಾಹಿತಿ ಒದಗಿಸುವವರು ಬೆಟ್ಟು ಮಾಡಿ ತೋರಿಸಿದವರನ್ನು ಕ್ಯಾಂಪಸ್ ಹೊರಗಿನಿಂದ ಬಂದ ಮುಖ ಮುಸುಕು ಹೊದ್ದ ಪುಂಡರು ದಿಲ್ಲಿ ಪೋಲೀಸರ ಕಣ್ಣೆದುರಿನಲ್ಲೇ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಇಂತಹ ಪಾಶವೀ ಹಲ್ಲೆಗೂ ಅಳುಕದ ವಿದ್ಯಾರ್ಥಿಗಳು, ಆಧುನಿಕ ಭಾರತದ ಬುನಾದಿ ಹಾಕಿದ ಮೌಲ್ಯಗಳನ್ನು ಹಿಂದುತ್ವವು ಗುಪ್ತವಾಗಿ ಹಾಳುಗೆಡವಲು ಪ್ರಯತ್ನ ಮಾಡುತ್ತಿರುವ ಸನ್ನಿವೇಶದಲ್ಲಿ, ಭಾರತ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ವಿದ್ಯಾರ್ಥಿಗಳು ಹೋರಾಡುತ್ತಿರುವುದು ಮನಸ್ಸನ್ನು ಉಲ್ಲಸಿತಗೊಳಿಸಿರುವ ಸಂಗತಿ. ಇದು, ಪ್ರಸ್ತುತದಲ್ಲಿ ಎಷ್ಟೇ ಕಷ್ಟ ನಷ್ಟಗಳು ಎದುರಾದರೂ, ದೇಶದ ಭವಿಷ್ಯ ಸುರಕ್ಷಿತವಾಗಿರಬಲ್ಲದು ಎಂಬ ಭರವಸೆ ಹುಟ್ಟಿಸುತ್ತದೆ.
(‘ಜನಶಕ್ತಿ’ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243