ದಿನದ ಸುದ್ದಿ
ಗಣಿತಜ್ಞ ಶ್ರೀನಿವಾಸ್ ರಾಮಾನುಜಾನ್ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ
ಸುದ್ದಿದಿನ,ಹರಪನಹಳ್ಳಿ : ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕುಂಚೂರಿನಲ್ಲಿ ನಮ್ಮ ದೇಶ ಕಂಡ ಶ್ರೇಷ್ಠ ಗಣಿತ ರತ್ನ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಯುವ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕುಂಚೂರಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂದಿಸಿದ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಪ್ರಬಂಧ, ರಂಗೋಲಿ,ರಸಪ್ರಶ್ನೆ, ಗಣಿತ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಗಣಿತ ಕಲಿಕೆ ಸರಳವಾಗಿಸಲು ಈ ಎಲ್ಲಾ ಚಟುವಟಿಕೆಗಳು ಪೂರಕವಾದವು. ಜೊತೆಗೆ ತಾಲೂಕಿನ ಗಣಿತ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಸಹ ಏರ್ಪಡಿಸಲಾಗಿತ್ತು.
ಗಣಿತ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಚೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಶ್ರೀಯುತ ಕುಬ್ಯಾನಾಯಕ್ ರವರು ಗಣಿತ ದಿನಾಚರಣೆಯ ಕಾರ್ಯಕ್ರಮವನ್ನು ಪ್ರಶಂಸಿದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ತಾಲೂಕಿನ ದೈಹಿಕ ಶಿಕ್ಷಣದ ಅಧಿಕಾರಿಗಳಾದ ಶ್ರೀಯುತ ಷಣ್ಮುಖಪ್ಪನವರು ಉದ್ಘಾಟಿಸಿದರು. ಗಣಿತ ಕಬ್ಬಿಣದ ಕಡಲೆಯಲ್ಲ, ಕಲಿತರೆ ಸುಲಿದ ಬಾಳೆ ಹಣ್ಣಿದ್ದಂತ ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ರಾಜ್ಯದಲ್ಲಿ ಮೊಟ್ಟ ಮೊದಲ ಗಣಿತ ಪ್ರಯೋಗಾಲಯದ ರೂವಾರಿಗಳು ಆದ ಶ್ರೀಯುತ ಯಾಕೂಬ್ ಕೊಯೂರ್ ರವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದರು. ಸ್ವಾಮಿ ವಿವೇಕಾನಂದರನ್ನು ಪಡೆದ ಈ ನಮ್ಮ ಭೂಮಿ ಪಾವನ ಎಂದು ತಿಳಿಸಿದರು. ಜೊತೆಗೆ ಶ್ರೀನಿವಾಸ್ ರಾಮಾನುಜನ್ ರವರ ಜೀವನ ಚರಿತ್ರೆಯನ್ನು ವಿವರಿಸಿದರು. ಶ್ರೀಯುತ ಯಾಕೂಬ್ ಕೊಯ್ಯೂರ್ ರವರು ಎಲ್ಲಾ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಸ್ಫೂರ್ತಿ ಮತ್ತು ನವಚೈತನ್ಯವನ್ನು ತುಂಬಿದರು.
ನಂತರ ನಮ್ಮ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದಂತಹ ಶ್ರೀಯುತ ಮನೋಹರ್ ರವರು ಮಾತನಾಡಿ ಕಾರ್ಯಕ್ರಮವೆಲ್ಲಾ ಗಣಿತಮಾಯವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಮೈದೂರು ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಹುಸೇನ್ ಪೀರ್ ರವರು ಮಾತನಾಡಿ ಇಂತಹ ಒಂದು ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಿದಂತಹ ಕುಂಚೂರಿನ ಸರ್ವ ಮುಖಂಡರಿಗೆ, ಕುಂಚೂರು ಸರ್ಕಾರಿ ಪ್ರೌಢ ಮುಖ್ಯಗುರುಗಳಾದ ಶ್ರೀಯುತ ಮಹೇಶ್ ಬಸರಿಕಟ್ಟಿ ಇವರಿಗೆ, ಗಣಿತ ಶಿಕ್ಷಕರಾದ ಶರ್ಮತ್ ಕಣದಮನಿ ಮತ್ತು ಸಾವಿತ್ರಿ. ಕೆ ಇವರಿಗೆ, ಕುಂಚೂರು ಪ್ರೌಢ ಶಾಲೆಯ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕುಂಚೂರು ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಯುತ ಮಹೇಶ್ ಬಸರಿಕಟ್ಟಿ ಇವರೂ ಸಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನೂತನ ತಾಲೂಕು ಗಣಿತ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಚನ್ನಬಸಪ್ಪ ಸರ್ ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಭಾಗ್ಯ ಸುಮಂಗಳ ಮತ್ತು ಹಿಂದಿ ಶಿಕ್ಷಕರಾದ ಶ್ರೀಯುತ ಡಾ. ತಳವಾರ ರಾಮಕೃಷ್ಣ ಇವರು ನಡೆಸಿದರು. ಗಣಿತ ಶಿಕ್ಷಕಿಯಾದ ಶ್ರೀಮತಿ ಸಾವಿತ್ರಿ. ಕೆ ಸ್ವಾಗತಿಸಿದರು, ಶರ್ಮತ್ ಕಣದಮನಿ, ಗಣಿತ ಶಿಕ್ಷಕರು ಪ್ರಸ್ತಾವಿಕ ನುಡಿಗಳನ್ನಾಡಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕರಾದ ಶ್ರೀಯುತ ಜಿ. ಅಬ್ದುಲ್ಲಾ ರವರು ವಂದನಾರ್ಪಣೆ ಮಾಡಿದರು.
ಕನ್ನಡ ಶಿಕ್ಷಕರಾದ ಶ್ರೀಯುತ ಲಚುಮಾನಾಯಕ್, ಶ್ರೀಮತಿ ಕವಿತಾ ಮತ್ತು ಶ್ರೀಮತಿ ಪಾರ್ವತಿ ಮೇಡಂ ರವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ಊರಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243