ಬಹಿರಂಗ
21ನೇ ಶತಮಾನಕ್ಕೆ 21 ಪಾಠಗಳು – ‘ಯುವಾಲ್ ನೋವ ಹರಾರಿ’..!
ಸೆಪ್ಟೆಂಬರ್ 4, 2018 ರಂದು ‘ The New York Times ‘ ಪತ್ರಿಕೆಯಲ್ಲಿ ಬಿಲ್ ಗೇಟ್ಸ್ ಒಂದು ಲೇಖನ ಬರೆದಿದ್ದರು. ಆ ಲೇಖನ ಯುವ ಇತಿಹಾಸಕಾರ ಯುವಾಲ್ ನೋವ ಹರಾರಿ ಅವರ ಇತ್ತೀಚಿನ ಪುಸ್ತಕ ,” 21 Lessons for the 21st Century” ಕೃತಿಯ ವಿಮರ್ಶೆಯಾಗಿತ್ತು.
ಇಂದು ಫೆಬ್ರುವರಿ 24, ಈ ದಿನ ನಮ್ಮ ಕಾಲದ ಹಾಗೂ ಸಮಕಾಲೀನ ಪ್ರಪಂಚದ ಪ್ರಸಿದ್ಧ ಯುವ ಇತಿಹಾಸಕಾರ ಯುವಾಲ್ ನೋವ ಹರಾರಿ ಅವರ ಜನ್ಮದಿನ. ಜೆರೋಸಲೆಮ್ ನಲ್ಲಿರುವ ಹಿಬ್ರೂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಹರಾರಿ, ಇಸ್ರೇಲಿ ಇತಿಹಾಸಕಾರ.
ಇತಿಹಾಸ ಕುರಿತ ತಮ್ಮ ಹೊಸ ಒಳನೋಟಗಳಿಂದ ಹಾಗೂ ತಮ್ಮ ಮೂರು ಪುಸ್ತಕಗಳಿಂದ ತುಂಬಾ ಚರ್ಚೆಗೆ, ಸಂವಾದಕ್ಕೆ ಕಾರಣವಾಗಿರುವ ಇತಿಹಾಸಕಾರ.
ಹರಾರಿ ಜೊತೆಗಿನ ಸಂವಾದ
ಹರಾರಿ ಜೀವನ
ಫೆಬ್ರುವರಿ 24, 1976 ರಲ್ಲಿ ಇಸ್ರೇಲ್ ನ ಕಿರ್ಯಟ್ ಅಟ ಎಂಬಲ್ಲಿ ಜನಿಸಿದ ಹರಾರಿ. ಮುಂದೆ ಹಿಬ್ರೂ ವಿಶ್ವವಿದ್ಯಾಲಯದಲ್ಲಿ ಮಧ್ಯಕಾಲೀನ ಇತಿಹಾಸ ಮತ್ತು ಮಿಲಿಟರಿ ಇತಿಹಾಸದಲ್ಲಿ ವಿಶೇಷ ಅಧ್ಯಯನ ಮಾಡಿದರು. ಉನ್ನತ ವಿಧ್ಯಾಭ್ಯಾಸವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು.
ಕ್ರಿ.ಶ.2000 ಇಸವಿಯಿಂದ ಪ್ರಾರಂಭಿಸಿದ ‘ ವಿಪಸ್ಯನ’ ಧ್ಯಾನವೇ ತನ್ನ ಜೀವನದಲ್ಲಾದ ಮಹತ್ತರ ಬದಲಾವಣೆಗೆ ಕಾರಣವೆಂದು ಹರಾರಿ ಹೇಳುತ್ತಾರೆ. ದಿನ ನಿತ್ಯ 2 ಗಂಟೆ ವಿಪಸ್ಯನ ಧ್ಯಾನ ಮಾಡುವ ಅವರು, 2019 ರ ಜನವರಿಯಿಂದ ಮೊಬೈಲ್ ಬಳಕೆಯನ್ನು ನಿಲ್ಲಿಸಿದ್ದಾರಂತೆ.
ಹರಾರಿ ಕೃತಿಗಳು
ಅವರ ಮೊದಲ ಕೃತಿ, ‘ ಸೇಪಿಯನ್ಸ್’- ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್ ಕೈಂಡ್ ( ಮಾನವ ಕುಲದ ಸಂಕ್ಷಿಪ್ತ ಇತಿಹಾಸ ). ಇದರಲ್ಲಿ ಕೇವಲ ಸಾಮಾನ್ಯ ‘ Ape ‘ ಸಂತತಿಯಾಗಿದ್ದ ಮಾನವ ಬೆಳೆದು ಈಗ ಜಗತ್ತನ್ನೆ ಆಳುತ್ತಿರುವ , ಮಾನವ ಕುಲದ ಚರಿತ್ರೆ ಕುರಿತು ಹೇಳಿದ್ದಾರೆ.
ಎರಡನೇ ಪುಸ್ತಕ ‘ ಹೋಮೋ ಡ್ಯುಯಸ್’, ಎ ಬ್ರೀಫ್ ಹಿಸ್ಟರಿ ಆಫ್ ಟುಮಾರೊ ( ನಾಳಿನ ಸಂಕ್ಷಿಪ್ತ ಇತಿಹಾಸ). ಈ ಕೃತಿಯಲ್ಲಿ ಮನುಷ್ಯನ ಮುಂದಿನ ಭವಿಷ್ಯ ಹೇಗಿರಬಹುದು, ಕಾಲಾಂತರದಲ್ಲಿ ಅವನು ಹೇಗೆ ದೇವರ ಸ್ವರೂಪ ಪಡೆಯಬಲ್ಲ, ಅವನ ಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದ, ಅವನ ಭವಿಷ್ಯದ ಸ್ವರೂಪ ಹೇಗಿರಬಲ್ಲದು ಎಂಬುದನ್ನು ಚರ್ಚಿಸುತ್ತಾರೆ.
ಮೂರನೆಯ ಕೃತಿ ‘ 21 ಲೇಸನ್ಸ್ ಫಾರ್ 21 ಸೆಂಚುರಿ’. ಇದು 2018 ರಲ್ಲಿ ಪ್ರಕಟವಾಗಿದೆ. ‘ ಸೇಪಿಯನ್ಸ್’ ಕೃತಿಯಲ್ಲಿ ಮಾನವನ ಇತಿಹಾಸ ಕುರಿತು ಹೇಳಿದರೆ, ‘ ಹೋಮೋ ಡ್ಯುಯಸ್’ ಕೃತಿಯಲ್ಲಿ ಮಾನವನ ಭವಿಷ್ಯದ ಕುರಿತು ಹೇಳುತ್ತಾರೆ. ಆದರೆ ಈ ಹೊಸ ಕೃತಿ ‘ 21ಲೇಸನ್ಸ ಫಾರ್ 21 ಸೆಂಚುರಿ’ ಯಲ್ಲಿ ಸದ್ಯದ ಪ್ರಪಂಚದ ಪ್ರಚಲಿತ ಘಟನೆಗಳನ್ನು, ಆಗು ಹೋಗುಗಳನ್ನು ಹಾಗೂ ಮುಖ್ಯ ಸವಾಲುಗಳನ್ನು ಕುರಿತು ಚರ್ಚಿಸುತ್ತಾರೆ.
ಈ ಕೃತಿಯಲ್ಲಿ ಒಟ್ಟು 5 ಮುಖ್ಯ ಅಧ್ಯಾಯಗಳಿವೆ.ಅವುಗಳು ತಾಂತ್ರಿಕ ಸವಾಲುಗಳು, ರಾಜಕೀಯ ಸವಾಲುಗಳು, ಹತಾಶೆ ಮತ್ತು ಭರವಸೆ, ಸತ್ಯ, ಸ್ಥಿತಿಸ್ಥಾಪಕತ್ವ ಎಂಬವು.
ಇವುಗಳ ಒಳಗೆ ಉಪ ಅಧ್ಯಾಯಗಳಿದ್ದು, ಅದರಲ್ಲಿ ಮುಖ್ಯವಾದವುಗಳೆಂದರೆ ಸ್ವಾತಂತ್ರ್ಯ, ರಾಷ್ಟ್ರೀಯತೆ, ಧರ್ಮ, ಭಯೋತ್ಪಾದನೆ, ಯುದ್ಧ, ದೇವರು, ಜಾತ್ಯಾತೀತತೆ, ಶಿಕ್ಷಣ , ಕೊನೆಯ ಅಧ್ಯಾಯ ಧ್ಯಾನ. ಒಟ್ಟು 21 ಶೀರ್ಷಿಕೆಗಳಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚೆಗೆ ಎತ್ತಿಕೊಳ್ಳುತ್ತಾರೆ.
ಆಟೋಮೇಶನ್ ಮತ್ತು ಕೃತಕ ಬುದ್ಧಿಮತ್ತೆ ( AI ) ಯಿಂದಾಗಿ ಹೆಚ್ಚಾಗಬಹುದಾದ ನಿರುದ್ಯೋಗ ಕುರಿತು ಚರ್ಚಿಸುತ್ತಾ UBI ( Universal Basic Income) ಕುರಿತು ಪ್ರಸ್ತಾಪಿಸುತ್ತಾರೆ.
ಈ ಕೃತಿಯ ಪೀಠಿಕೆಯ ಮೊದಲ ಸಾಲಿನಲ್ಲೇ ಅವರು ” In a world deluged by irrelevant information, clarity is power “, ಎಂದು ಹೇಳುತ್ತಾರೆ. ಚರ್ಚೆಗೆ ಬೇಕಾದ ಸ್ಪಷ್ಟ ದೃಷ್ಟಿ ಹಾಗೂ ಕೇಳಬೇಕಾದ ಮುಖ್ಯ ಪ್ರಶ್ನೆಗಳ ಕುರಿತು ಕಾಳಜಿವಹಿಸುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಹರಾರಿ ಅವರ ಕೃತಿಗಳನ್ನು ತುರ್ತಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಇಂತಹ ಚರ್ಚೆಗಳನ್ನು ಕನ್ನಡದ ಬೌದ್ಧಿಕ ವಲಯದಲ್ಲಿ ಹಾಗೂ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳ ಮಧ್ಯೆ ಹುಟ್ಟುಹಾಕಬೇಕಿದೆ.
–ಸಂತೋಷ್ ಉಂಡಾಡಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401