ದಿನದ ಸುದ್ದಿ
ಆರ್ಟಿಪಿಎಸ್ ನಲ್ಲಿ ಕಲ್ಲಿದಲು ಸಂಗ್ರಹಣೆ ಶೂನ್ಯ; ಕಾಡಲಿದೆಯಾ ವಿದ್ಯುತ್ ಸಮಸ್ಯೆ
ಸುದ್ದಿದಿನ ರಾಯಚೂರು: 1720MW ಸಾಮರ್ಥ್ಯದ ರಾಯಚೂರಿನ ಉಷ್ಣ ಸ್ಥಾವರದಲ್ಲಿ ಕಲ್ಲಿದ್ದಲು ಸಂಗ್ರಹಣೆ ಶೂನ್ಯವಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ವೆಸ್ಟರ್ನ್ ಕೋಲ್ ಪೀಲ್ಡ್ಸ್ (WLC) ಒಪ್ಪಂದದ ಪ್ರಕಾರ ಕಲ್ಲಿದ್ದಲು ಪೂರೈಸದೇ ಇರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಉಂಟಾಗಲಿದೆ.
ಉಷ್ಣ ಸ್ಥಾವರಕ್ಕೆ ಒಪ್ಪಂದದಂತೆ ನೀಡಬೇಕಾಗಿದ್ದ ಕಲ್ಲಿದ್ದಲಿನ ಒಟ್ಟು ಪ್ರಮಾಣದಲ್ಲಿ ಸುಮಾರು 6ಲಕ್ಷ ಟನ್ ಗಳಷ್ಟು ಈವರೆಗೆ ಪೂರೈಕೆ ಮಾಡದಿರುವುದು ಕಲ್ಲಿದ್ದಲು ಶೂನ್ಯ ಸಂಗ್ರಹಣೆಗೆ ಕಾರಣವಾಗಿದೆ. ಈ ಪ್ರಮಾಣದ ಕೊರತೆಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಂ.ಸಿ.ಎಲ್ ಮುಖಾಂತರ ಪೂರೈಕೆ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ WCL ನಿಂದ ಒಪ್ಪಂದದ ಪ್ರಕಾರ ಪೂರ್ಣ ಪ್ರಮಾಣದ ಕಲ್ಲಿದ್ದಲು ಪೂರೈಕೆ ಮಾಡದ ಪರಿಣಾಮ ರಾಜ್ಯದಲ್ಲಿ ನಿರಂತರವಾಗಿ ನಿಗದಿತ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡಲಿದೆ.