ದಿನದ ಸುದ್ದಿ
ರಾಜ್ಯದ ವಿವಿಧೆಡೆ ಅತಿವೃಷ್ಟಿ, ಮೂಲಸೌಕರ್ಯ ಕಲ್ಪಿಸಲು 500 ಕೋಟಿ ರೂಪಾಯಿ ಅನುದಾನ ಬಿಡುಗಡೆ : ಸಿಎಂ ಬೊಮ್ಮಾಯಿ
ಸುದ್ದಿದಿನ ಡೆಸ್ಕ್ : ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಮೂಲಸೌಕರ್ಯ ದುರಸ್ತಿಗಾಗಿ 500 ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ, ಮಳೆ ಹಾನಿ ಕುರಿತು ಎಲ್ಲಾ ಜಿಲ್ಲೆಗಳಿಂದ ವರದಿ ಬಂದಿರುವ ಹಿನ್ನೆಲೆಯಲ್ಲಿ ರಸ್ತೆಗಳು, ವಿದ್ಯುತ್ ಹಾಗೂ ಸೇತುವೆಗಳ ದುರಸ್ತಿಗೆ 500 ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.
ಈ ವರ್ಷ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 32 ಜನರು ಸಾವನ್ನಪ್ಪಿದ್ದು, ಐದು ಜನರು ನಾಪತ್ತೆಯಾಗಿದ್ದಾರೆ. ಎಂದು ಅವರು ತಿಳಿಸಿದರು. ಪ್ರವಾಹವನ್ನು ಸಮರೋಪಾದಿಯಲ್ಲಿ ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು, ಜನರ ಸಂಕಷ್ಟ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು, ಜಿಲ್ಲೆಗಳಿಂದ ವರದಿ ಹಾಗು ಅಂದಾಜು ಪಟ್ಟಿ ಬಂದ ನಂತರ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಮುಂದಿನ ವಾರ ಕಾರವಾರ, ಬೆಳಗಾವಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದು, ಅಲ್ಲಿಯೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243