ದಿನದ ಸುದ್ದಿ

2019 ರ ಚುನಾವಣಾ ತೀರ್ಪು : ಬಲಪಂಥೀಯ ದಾಳಿಯ ಕ್ರೋಡೀಕರಣದ ಸೂಚನೆ

Published

on

  • ಮೋದಿಯವರನ್ನು ಒಬ್ಬ ಬಲಿಷ್ಠ ನಾಯಕನನ್ನಾಗಿ ಬಿಂಬಿಸಿ ಬಿಜೆಪಿ ಪ್ರಚಾರ ನಡೆಸಿದ್ದು ಮತ್ತು ಪುಲ್ವಾಮಾ ನಂತರದ ಪರಿಸ್ಥಿತಿ ಹಾಗೂ ಬಾಲಾಕೋಟ್ ದಾಳಿಯನ್ನು ಬಳಸಿಕೊಂಡು ಕೋಮುವಾದಿ ಛಾಯೆಯ ರಾಷ್ಟ್ರವಾದವನ್ನು ಬಡಿದೆಬ್ಬಿಸಿದ್ದು ಮೋದಿ ಸರಕಾರದ ಅಡಿಯಲ್ಲಿ ಜನರು ಎದುರಿಸಿದ ನೈಜ ಸಮಸ್ಯೆಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹದಗೆಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರ ಮೇಲಿನ ನಿರಂತರ ದಾಳಿಗಳು ಇವುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ಸನ್ನು ತಂದುಕೊಟ್ಟಿತೆಂದು ಕಾಣಿಸುತ್ತದೆ. 2014ರ ನಂತರ ಬಲಪಂಥೀಯ ದಾಳಿ ಇನ್ನಷ್ಟು ಕ್ರೋಡೀಕರಣಗೊಂಡಿರುವುದನ್ನು ಈ ಫಲಿತಾಂಶ ಸೂಚಿಸುತ್ತದೆ.

17ನೇ ಲೋಕಸಭೆ ಚುನಾವಣೆಯ ಫಲಿತಾಂಶವಾಗಿ ಬಿಜೆಪಿ ಮತ್ತು ಎನ್‌ಡಿಎ ನಿರ್ಣಾಯಕ ಬಹುಮತವನ್ನು ಪಡೆದು ಮೋದಿ ಸರಕಾರ ಅಧಿಕಾರಕ್ಕೆ ಮರಳಿದೆ. ಬಿಜೆಪಿಯ ಬಹುಮತ ಏರಿಕೆಯಾಗಿದೆ ಹಾಗೂ ಎನ್‌ಡಿಎಯ ಒಟ್ಟಾರೆ ಸಂಖ್ಯೆಯೂ ಏರಿದೆ.

ಮೋದಿಯವರನ್ನು ಒಬ್ಬ ಬಲಿಷ್ಠ ನಾಯಕನನ್ನಾಗಿ ಬಿಂಬಿಸಿ ಬಿಜೆಪಿ ಪ್ರಚಾರ ನಡೆಸಿದ್ದು ಹಾಗೂ ಪುಲ್ವಾಮಾ ನಂತರದ ಪರಿಸ್ಥಿತಿ ಹಾಗೂ ಬಾಲಾಕೋಟ್ ದಾಳಿಯನ್ನು ಬಳಸಿಕೊಂಡು ಕೋಮುವಾದಿ ಛಾಯೆಯ ರಾಷ್ಟ್ರವಾದವನ್ನು ಬಡಿದೆಬ್ಬಿಸಿದ್ದು ಮೋದಿ ಸರಕಾರದ ಅಡಿಯಲ್ಲಿ ಜನರು ಎದುರಿಸಿದ ನೈಜ ಸಮಸ್ಯೆಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹದಗೆಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರ ಮೇಲಿನ ನಿರಂತರ ದಾಳಿಗಳು ಇವುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ಸನ್ನು ತಂದುಕೊಟ್ಟಿತೆಂದು ಕಾಣಿಸುತ್ತದೆ.

ಮೋದಿ ಯುದ್ಧಕೋರ ರಾಷ್ಟ್ರವಾದ ಮತ್ತು ಅದರ ಜತೆಗೆ ರಾಷ್ಟ್ರವಾದದ ಮುಸುಕಿನಲ್ಲಿ ಬಹುಸಂಖ್ಯಾತತ್ವದ ಭಾವನೆಗಳನ್ನು ಬಡಿದೆಬ್ಬಿಸುವ ಉದ್ದೇಶವನ್ನೇ ಹೊಂದಿದ ಕೋಮುವಾದಿ ಅಜೆಂಡಾವನ್ನು ಬೆರೆಸಿದ ಪ್ರಚಾರದ ನೇತೃತ್ವವನ್ನು ವಹಿಸಿದ್ದರು. ಚುನಾವಣೆ ಪ್ರಚಾರದ ಎಲ್ಲಾ ರಂಗಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಹಣಬಲದ ಬಳಕೆಯಾಯಿತು. ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಬಿಜೆಪಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿತು. ಮೋದಿ ಒಬ್ಬ ನಿರ್ಣಾಯಕ ನಾಯಕ ಎಂಬ ಸಂದೇಶ ಹಾಗೂ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಂದು ಗೌರವಯುತ ದೇಶವನ್ನಾಗಿ ಅವರು ಮಾಡಿದರು ಮತ್ತು ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದನೆಯನ್ನು ಎದುರಿಸಿದರು ಎಂದು ವಾಟ್ಸ್‌ಆಪ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಬಿಂಬಿಸಲಾಯಿತು.

2014ರ ಚುನಾವಣೆ ನಂತರ ಹರಿಬಿಡಲಾದ ಬಲಪಂಥೀಯ ದಾಳಿ ಇನ್ನಷ್ಟು ಕ್ರೋಡೀಕರಣಗೊಂಡಿರುವುದನ್ನು ಈ ಚುನಾವಣೆ ಫಲಿತಾಂಶ ಸೂಚಿಸುತ್ತದೆ. ಬಿಜೆಪಿ-ಆರ್‌ಎಸ್‌ಎಸ್ ಕೂಟ ಸ್ಥಾಪಿಸಿರುವ ರಾಜಕೀಯ ಮತ್ತು ಸೈದ್ಧಾಂತಿಕ ಪ್ರಾಬಲ್ಯದ ವಿರುದ್ಧ ಪರಿಣಾಮಕಾರಿ ಸವಾಲನ್ನು ಎಸೆಯಲು ಎಡ ಪಕ್ಷಗಳೂ ಸೇರಿದಂತೆ ಜಾತ್ಯತೀತ ಪ್ರತಿಪಕ್ಷಗಳಿಗೆ ಸಾಧ್ಯವಾಗಲಿಲ್ಲ ಎನ್ನುವುದು ವಾಸ್ತವ ಸಂಗತಿ.

ಚುನಾವಣೆ ಆಯೋಗ ತಾನು ಮಾಡಬೇಕಾದ್ದನ್ನು ಮಾಡದೆ, ಮಾಡಬಾರದ್ದನ್ನು ಮಾಡುವ ಮೂಲಕ ಬಿಜೆಪಿಗೆ ನೆರವು ನೀಡುತ್ತ ವಹಿಸಿದ ಪಾತ್ರವೂ ಈ ಚುನಾವಣೆಯ ಒಂದು ಕಳವಳಕಾರಿ ಸಂಗತಿಯಾಗಿದೆ. ಪ್ರತಿಪಕ್ಷಗಳಿಗೆ ಸಮಾನ ನೆಲೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಖಾತ್ರಿಗೊಳಿಸುವಲ್ಲಿ ಚುನಾವಣೆ ಆಯೋಗ ವಿಫಲವಾಗಿದ್ದು ಮಾತ್ರವೇ ಅಲ್ಲದೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಕೋಮುವಾದಿ ಹಾಗು ಜಗಳಗಂಟಿ ಭಾಷಣಗಳನ್ನು ನ್ಯಾಯಸಮ್ಮತಗೊಳಿಸಿತು ಕೂಡ.

ಸಿಪಿಐ (ಎಂ) ಮತ್ತು ಎಡ ಪಕ್ಷಗಳು ತೀವ್ರ ಸೋಲನ್ನು ಅನುಭವಿಸಿವೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಸಿಪಿಐ (ಎಂ) ಭಾರೀ ಅಡ್ಡಿ ಆತಂಕಗಳಲ್ಲದೆ ಭಯೋತ್ಪಾದನೆ, ಹಿಂಸೆ ಮತ್ತು ದಾಳಿಗಳ ನಡುವೆ ಈ ಚುನಾವಣೆಗಳನ್ನು ಎದುರಿಸಿತು. ಸರ್ವ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಯಶಸ್ಸನ್ನು ಸಾಧಿಸಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಕೇರಳದಲ್ಲಿ ಎಲ್‌ಡಿಎಫ್ ಭಾರೀ ಸೋಲನ್ನು ಅನುಭವಿಸಿದ್ದು ನಿರಾಶಾದಾಯಕ ಹಾಗೂ ದೊಡ್ಡ ಹಿನ್ನಡೆಯಾಗಿದೆ. ತಮಿಳುನಾಡಿನಲ್ಲಿ ಮಾತ್ರ ಪಕ್ಷ ಉತ್ತಮ ಫಲಿತಾಂಧ ಪಡೆದಿದೆ. ಅಲ್ಲಿ ಡಿಎಂಕೆ ನೇತೃತ್ವದ ಮೈತ್ರಿಯ ಭಾಗವಾಗಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸಿಪಿಐ (ಎಂ) ಜಯ ಸಾಧಿಸಿದೆ.

ಈ ಗಂಭೀರ ಚುನಾವಣಾ ಹಿನ್ನಡೆಯ ಬಗ್ಗೆ ಪಕ್ಷವು ಸ್ವಯಂಟೀಕಾತ್ಮಕ ಪರೀಕ್ಷಣೆಯನ್ನು ನಡೆಸಲಿದೆ. ಆ ಮೂಲಕ ಸರಿಯಾದ ಪಾಠವನ್ನು ಕಲಿತು ಪಕ್ಷದ ರಾಜಕೀಯ, ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ಕಾರ್ಯವನ್ನು ನವೀಕರಿಸಲು ಮತ್ತು ಬಲಪಡಿಸಲು ಒಂದು ಸಮಗ್ರ ಕಾರ್ಯತಂತ್ರವನ್ನು ಅಂಗೀಕರಿಸಲಾಗುವುದು.

ಪ್ರಕಾಶ್ ಕಾರಟ್

ಲೇಖನ ಕೃಪೆ : ಜನಶಕ್ತಿ ಮೀಡಿಯಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version