ದಿನದ ಸುದ್ದಿ
2019 ರ ಚುನಾವಣಾ ತೀರ್ಪು : ಬಲಪಂಥೀಯ ದಾಳಿಯ ಕ್ರೋಡೀಕರಣದ ಸೂಚನೆ
- ಮೋದಿಯವರನ್ನು ಒಬ್ಬ ಬಲಿಷ್ಠ ನಾಯಕನನ್ನಾಗಿ ಬಿಂಬಿಸಿ ಬಿಜೆಪಿ ಪ್ರಚಾರ ನಡೆಸಿದ್ದು ಮತ್ತು ಪುಲ್ವಾಮಾ ನಂತರದ ಪರಿಸ್ಥಿತಿ ಹಾಗೂ ಬಾಲಾಕೋಟ್ ದಾಳಿಯನ್ನು ಬಳಸಿಕೊಂಡು ಕೋಮುವಾದಿ ಛಾಯೆಯ ರಾಷ್ಟ್ರವಾದವನ್ನು ಬಡಿದೆಬ್ಬಿಸಿದ್ದು ಮೋದಿ ಸರಕಾರದ ಅಡಿಯಲ್ಲಿ ಜನರು ಎದುರಿಸಿದ ನೈಜ ಸಮಸ್ಯೆಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹದಗೆಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರ ಮೇಲಿನ ನಿರಂತರ ದಾಳಿಗಳು ಇವುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ಸನ್ನು ತಂದುಕೊಟ್ಟಿತೆಂದು ಕಾಣಿಸುತ್ತದೆ. 2014ರ ನಂತರ ಬಲಪಂಥೀಯ ದಾಳಿ ಇನ್ನಷ್ಟು ಕ್ರೋಡೀಕರಣಗೊಂಡಿರುವುದನ್ನು ಈ ಫಲಿತಾಂಶ ಸೂಚಿಸುತ್ತದೆ.
17ನೇ ಲೋಕಸಭೆ ಚುನಾವಣೆಯ ಫಲಿತಾಂಶವಾಗಿ ಬಿಜೆಪಿ ಮತ್ತು ಎನ್ಡಿಎ ನಿರ್ಣಾಯಕ ಬಹುಮತವನ್ನು ಪಡೆದು ಮೋದಿ ಸರಕಾರ ಅಧಿಕಾರಕ್ಕೆ ಮರಳಿದೆ. ಬಿಜೆಪಿಯ ಬಹುಮತ ಏರಿಕೆಯಾಗಿದೆ ಹಾಗೂ ಎನ್ಡಿಎಯ ಒಟ್ಟಾರೆ ಸಂಖ್ಯೆಯೂ ಏರಿದೆ.
ಮೋದಿಯವರನ್ನು ಒಬ್ಬ ಬಲಿಷ್ಠ ನಾಯಕನನ್ನಾಗಿ ಬಿಂಬಿಸಿ ಬಿಜೆಪಿ ಪ್ರಚಾರ ನಡೆಸಿದ್ದು ಹಾಗೂ ಪುಲ್ವಾಮಾ ನಂತರದ ಪರಿಸ್ಥಿತಿ ಹಾಗೂ ಬಾಲಾಕೋಟ್ ದಾಳಿಯನ್ನು ಬಳಸಿಕೊಂಡು ಕೋಮುವಾದಿ ಛಾಯೆಯ ರಾಷ್ಟ್ರವಾದವನ್ನು ಬಡಿದೆಬ್ಬಿಸಿದ್ದು ಮೋದಿ ಸರಕಾರದ ಅಡಿಯಲ್ಲಿ ಜನರು ಎದುರಿಸಿದ ನೈಜ ಸಮಸ್ಯೆಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹದಗೆಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರ ಮೇಲಿನ ನಿರಂತರ ದಾಳಿಗಳು ಇವುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ಸನ್ನು ತಂದುಕೊಟ್ಟಿತೆಂದು ಕಾಣಿಸುತ್ತದೆ.
ಮೋದಿ ಯುದ್ಧಕೋರ ರಾಷ್ಟ್ರವಾದ ಮತ್ತು ಅದರ ಜತೆಗೆ ರಾಷ್ಟ್ರವಾದದ ಮುಸುಕಿನಲ್ಲಿ ಬಹುಸಂಖ್ಯಾತತ್ವದ ಭಾವನೆಗಳನ್ನು ಬಡಿದೆಬ್ಬಿಸುವ ಉದ್ದೇಶವನ್ನೇ ಹೊಂದಿದ ಕೋಮುವಾದಿ ಅಜೆಂಡಾವನ್ನು ಬೆರೆಸಿದ ಪ್ರಚಾರದ ನೇತೃತ್ವವನ್ನು ವಹಿಸಿದ್ದರು. ಚುನಾವಣೆ ಪ್ರಚಾರದ ಎಲ್ಲಾ ರಂಗಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಹಣಬಲದ ಬಳಕೆಯಾಯಿತು. ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಬಿಜೆಪಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿತು. ಮೋದಿ ಒಬ್ಬ ನಿರ್ಣಾಯಕ ನಾಯಕ ಎಂಬ ಸಂದೇಶ ಹಾಗೂ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಂದು ಗೌರವಯುತ ದೇಶವನ್ನಾಗಿ ಅವರು ಮಾಡಿದರು ಮತ್ತು ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದನೆಯನ್ನು ಎದುರಿಸಿದರು ಎಂದು ವಾಟ್ಸ್ಆಪ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಬಿಂಬಿಸಲಾಯಿತು.
2014ರ ಚುನಾವಣೆ ನಂತರ ಹರಿಬಿಡಲಾದ ಬಲಪಂಥೀಯ ದಾಳಿ ಇನ್ನಷ್ಟು ಕ್ರೋಡೀಕರಣಗೊಂಡಿರುವುದನ್ನು ಈ ಚುನಾವಣೆ ಫಲಿತಾಂಶ ಸೂಚಿಸುತ್ತದೆ. ಬಿಜೆಪಿ-ಆರ್ಎಸ್ಎಸ್ ಕೂಟ ಸ್ಥಾಪಿಸಿರುವ ರಾಜಕೀಯ ಮತ್ತು ಸೈದ್ಧಾಂತಿಕ ಪ್ರಾಬಲ್ಯದ ವಿರುದ್ಧ ಪರಿಣಾಮಕಾರಿ ಸವಾಲನ್ನು ಎಸೆಯಲು ಎಡ ಪಕ್ಷಗಳೂ ಸೇರಿದಂತೆ ಜಾತ್ಯತೀತ ಪ್ರತಿಪಕ್ಷಗಳಿಗೆ ಸಾಧ್ಯವಾಗಲಿಲ್ಲ ಎನ್ನುವುದು ವಾಸ್ತವ ಸಂಗತಿ.
ಚುನಾವಣೆ ಆಯೋಗ ತಾನು ಮಾಡಬೇಕಾದ್ದನ್ನು ಮಾಡದೆ, ಮಾಡಬಾರದ್ದನ್ನು ಮಾಡುವ ಮೂಲಕ ಬಿಜೆಪಿಗೆ ನೆರವು ನೀಡುತ್ತ ವಹಿಸಿದ ಪಾತ್ರವೂ ಈ ಚುನಾವಣೆಯ ಒಂದು ಕಳವಳಕಾರಿ ಸಂಗತಿಯಾಗಿದೆ. ಪ್ರತಿಪಕ್ಷಗಳಿಗೆ ಸಮಾನ ನೆಲೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಖಾತ್ರಿಗೊಳಿಸುವಲ್ಲಿ ಚುನಾವಣೆ ಆಯೋಗ ವಿಫಲವಾಗಿದ್ದು ಮಾತ್ರವೇ ಅಲ್ಲದೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಕೋಮುವಾದಿ ಹಾಗು ಜಗಳಗಂಟಿ ಭಾಷಣಗಳನ್ನು ನ್ಯಾಯಸಮ್ಮತಗೊಳಿಸಿತು ಕೂಡ.
ಸಿಪಿಐ (ಎಂ) ಮತ್ತು ಎಡ ಪಕ್ಷಗಳು ತೀವ್ರ ಸೋಲನ್ನು ಅನುಭವಿಸಿವೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಸಿಪಿಐ (ಎಂ) ಭಾರೀ ಅಡ್ಡಿ ಆತಂಕಗಳಲ್ಲದೆ ಭಯೋತ್ಪಾದನೆ, ಹಿಂಸೆ ಮತ್ತು ದಾಳಿಗಳ ನಡುವೆ ಈ ಚುನಾವಣೆಗಳನ್ನು ಎದುರಿಸಿತು. ಸರ್ವ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಯಶಸ್ಸನ್ನು ಸಾಧಿಸಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಕೇರಳದಲ್ಲಿ ಎಲ್ಡಿಎಫ್ ಭಾರೀ ಸೋಲನ್ನು ಅನುಭವಿಸಿದ್ದು ನಿರಾಶಾದಾಯಕ ಹಾಗೂ ದೊಡ್ಡ ಹಿನ್ನಡೆಯಾಗಿದೆ. ತಮಿಳುನಾಡಿನಲ್ಲಿ ಮಾತ್ರ ಪಕ್ಷ ಉತ್ತಮ ಫಲಿತಾಂಧ ಪಡೆದಿದೆ. ಅಲ್ಲಿ ಡಿಎಂಕೆ ನೇತೃತ್ವದ ಮೈತ್ರಿಯ ಭಾಗವಾಗಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸಿಪಿಐ (ಎಂ) ಜಯ ಸಾಧಿಸಿದೆ.
ಈ ಗಂಭೀರ ಚುನಾವಣಾ ಹಿನ್ನಡೆಯ ಬಗ್ಗೆ ಪಕ್ಷವು ಸ್ವಯಂಟೀಕಾತ್ಮಕ ಪರೀಕ್ಷಣೆಯನ್ನು ನಡೆಸಲಿದೆ. ಆ ಮೂಲಕ ಸರಿಯಾದ ಪಾಠವನ್ನು ಕಲಿತು ಪಕ್ಷದ ರಾಜಕೀಯ, ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ಕಾರ್ಯವನ್ನು ನವೀಕರಿಸಲು ಮತ್ತು ಬಲಪಡಿಸಲು ಒಂದು ಸಮಗ್ರ ಕಾರ್ಯತಂತ್ರವನ್ನು ಅಂಗೀಕರಿಸಲಾಗುವುದು.
–ಪ್ರಕಾಶ್ ಕಾರಟ್
ಲೇಖನ ಕೃಪೆ : ಜನಶಕ್ತಿ ಮೀಡಿಯಾ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


