Connect with us

ಅಂತರಂಗ

ಮೆಚ್ಚುಗೆ ಪಡೆದ ಕತೆ | ಸತ್ಯದರ್ಶನ

Published

on

~ಸುಜಾತ ಎಸ್.ಎನ್ ರೆಡ್ಡಿ, ಬೆಂಗಳೂರು

ಅತ್ತೇ , ಇವತ್ತು ಜಯಂತ್ ಮಾವ ಜೈಲಿನಿಂದ ಬಿಡುಗಡೆಯಾಗಿ ಇಲ್ಲಿಗೇ ಬರ್ತಿದ್ದಾರಂತೆ..! ಅಮ್ಮ ತುಂಬಾ ದಿನಗಳ ನಂತರ ಖುಷಿಯಾಗಿ ಕಾಣ್ತಾ ಇದ್ದಾರೆ. ಅವರನ್ನ ಹಿಡಿಯಕ್ಕೇ ಆಗ್ತಿಲ್ಲಾ ಅನ್ನಿ..!” ಕಾಲಿಗೆ ತೊಡರುತ್ತಿದ್ದ ರೇಷ್ಮೆಲಂಗವನ್ನು ಹಿಡಿದು ಮಹಡಿ ಮೆಟ್ಟಿಲೇರಿ ಖುಷಿಯಿಂದ ಓಡುತ್ತಾ ಬಂದವಳು, ನನ್ನ ನಿರ್ಲಿಪ್ತ ಮುಖಭಾವವನ್ನು ಗಮನಿಸಿ,”ಅತ್ತೇ,ನಿಮಗೆ ಖುಷಿ ಇಲ್ವಾ..!? ಮಾವ ಹತ್ತುವರ್ಷಗಳ ನಂತರ ಜೈಲಿನಿಂದ ಮತ್ತೆ ಮನೆಗೆ ಬರ್ತಿರೋದು..!?” ಏದುಸಿರು ಬಿಡುತ್ತಾ ಕಂಗಳನ್ನು ಕಿರಿದಾಗಿಸಿಕೊಂಡು ಮುಗ್ಧವಾಗಿ ಕೇಳಿದಳು ನಮ್ಮನೆಯ ಚೈತನ್ಯ ಚಿಲುಮೆ ಮೌನಿಕ.

”ನಾವೆಲ್ಲ ಖುಷಿಪಡುವ ಸಾಧನೆಯ ಕೆಲಸವೇನೂ  ಮಾಡಿಲ್ಲ ನಿಮ್ಮ ಮಾವ ಮೌನಿ. ನನ್ನಣ್ಣ ಅಂದ್ರೆ ನಿಮ್ಮಪ್ಪನನ್ನ ಕೊಂದು ಜೈಲಿಗೆ ಹೋಗಿರೋದು! ಅಂಥವನ ಮುಖ ನೋಡಕ್ಕೂ ನನಗಿಷ್ಟವಿಲ್ಲ!”  ನನ್ನೊಳಗಿನ ಅಸಹನೆ, ಕೋಪ, ನಿರಾಸೆ ಎಲ್ಲವೂ ನಾನಾಡುವ ಪ್ರತಿಪದದಲ್ಲಿಯೂ ತುಂಬಿ ತುಳುಕುತ್ತಿದ್ದರೆ, ನಾ ಮಡಚಿಡುತ್ತಿದ್ದ ಕಂಬಳಿಯನ್ನು ನನ್ನ ಕೈಯಿಂದ ಕಿತ್ತೆಸೆದು ಕೊರಳಿಗೆ

ನೇತುಬೀಳುತ್ತಾ,”ಕಣ್ಣಿಂದ ನೋಡಿದ್ದೆಲ್ಲವೂ ಸತ್ಯವಲ್ಲ. ಪೂರ್ತಿ ವಿಚಾರ ತಿಳಿಯದೆ ಯಾರನ್ನೂ ದೂಷಿಸಬಾರದು, ದ್ವೇಷಿಸಬಾರದು ಅಂತ ಅಮ್ಮ ಹೇಳಿದ್ದಾರೆ. ಹಾಗೇ, ಉದ್ದೇಶಗಳು ಒಳ್ಳೆಯದಿದ್ರೆ ಕೆಲವೊಂದು ಕೆಲಸಗಳಿಗೆ ರಕ್ತದಕಲೆ ಅಂಟಲ್ವಂತೆ! ಮಾವ ಒಳ್ಳೆಯವರು. ಅವರು ಉದ್ದೇಶಪೂರ್ವಕವಾಗಿ ಅಪ್ಪನನ್ನ ಕೊಂದಿಲ್ಲ. ಇದನ್ನ ಅಮ್ಮನೊಡನೆ ನಾನೂ ನಂಬ್ತೀನಿ ಅತ್ತೆ…!”

”ನಿಮಗೆಲ್ಲರಿಗೂ ಅವ ಒಳ್ಳೆಯವನು ಅನ್ನೋ ಭ್ರಾಂತು ಹಿಡಿದಿದೆ! ತಾನೊಬ್ಬ ಸತ್ಯಸಂಧ ಅಂತ ನಿಮ್ಮೆಲ್ಲರನ್ನು ನಂಬಿಸಿ ಮಂಕುಬೂದಿ ಎರಚಿದ್ದಾನೆ ಆ ನಿನ್ನ ಮಾವ ಜಯಂತ್! ಅದಕ್ಕೇ ನೀವೆಲ್ಲಾ ಹೀಗಾಡ್ತಿರೋದು!” ಅಂತರಾಳದಲ್ಲಿ ನೋವಿನಸೆಲೆ ಉಕ್ಕುತ್ತಿದ್ದರೆ ಕಂಬನಿಯನ್ನು ಕಾಣದಂತೆ ತಡೆದು ತುಸು ಬಿರುಸಾಗಿಯೇ ಅವಳಿಗೆ ಉತ್ತರಿಸಿದೆ. ಕೋಪದಲ್ಲಿರುವಂತೆ ಕಂಡ ನನ್ನೊಡನೆ ಮತ್ತೇನು ಮಾತನಾಡಬೇಕೆಂದು ತಿಳಿಯದೆ ಒಂದುಕ್ಷಣ ದಿಟ್ಟಿಸಿ ನೋಡಿ ಮೌನವಾಗಿಯೇ ಕೆಳಗಿಳಿದು ಹೋದಳು ಮೌನಿಕ.

ಯಾಕೋ ಮನಸ್ಸೆಲ್ಲಾ ಕದಡಿದಂತಾಗಿತ್ತು..! ಹೃದಯವೂ ನೆನಪುಗಳಿಂದ ಭಾರವಾಗಿತ್ತು. ಬದುಕಿನ ನೀಲನಕ್ಷೆಯಲ್ಲಿ ಅನಿರೀಕ್ಷಿತ ತಿರುವುಗಳು ನೆಮ್ಮದಿಯ ಜೀವನಪಥವನ್ನು ಹೇಗೆ ಮಗ್ಗಲಾಗಿಸಿಬಿಡುತ್ತವೆಂದು ಚಿಂತಿಸುತ್ತಾ ಮನಸ್ಸು ಹಗುರಾಗಲೆಂದು ಮಹಡಿಯ ಕಿಟಕಿಯನ್ನು ವಿಶಾಲವಾಗಿ ತೆರೆದು, ಹೊರಗಡೆ ಇಣುಕಿ ನೋಡಿದ್ದೆ. ಸುತ್ತಲೂ ಹಸಿರು ಹೊದ್ದ ಘಟ್ಟಪ್ರದೇಶ. ನೇಸರನ ಜಾಡಿಲ್ಲದೆ ಕವಿದಿದ್ದ ಹಿಮವಿನ್ನೂ ಕರಗಿರಲಿಲ್ಲ. ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಗೂಡಿನಂತಹಾ ಮನೆಗಳಿಂದ ಮುಂಜಾನೆಯ ಮಂಜನು ಸೀಳುತ್ತಾ ಹೊರಟ ಸುರುಳಿಯಾಕಾರದ ಹೊಗೆ ಅಲ್ಲೊಂದು ಜೀವಚೈತನ್ಯವನ್ನು, ಬದುಕಿನೆಡೆಗಿನ ಅಪರಿಮಿತ ಒಲವನ್ನು ತಿಳಿಸುತ್ತಿದ್ದರೆ ಮುದುಡಿದ್ದ ನನ್ನ ಮನಕ್ಕೆ, ಬದುಕಿಗೆ ಮಾತ್ರ ಆ ಚಿತ್ರಣ ಯಾವ ಹುರುಪನ್ನೂ ತುಂಬಲಾರದೆ ಸೋತಿತ್ತು. ಮಾಗಿಯ ಚಳಿಗೆ ಕಂಪಿಸುತ್ತಿದ್ದ ಒಡಲನ್ನು ಶಾಲಿನಿಂದ ಬೆಚ್ಚಗಾಗಿಸಿ ನಾನು ಮಾತ್ರ ನೆನಪುಗಳ ಸಂತೆಯಲ್ಲಿ ಕಳೆದುಹೋಗಿದ್ದೆ.

****

ಹೆಚ್ಚೂ ಕಮ್ಮಿ ಇದೇ ಮಾಘಮಾಸದ  ದಿನಗಳಲ್ಲಿಯೇ ಅಣ್ಣ ಅಶ್ವಿನ್ ಗೆ ಚಂದ್ರಚಕೋರಿಯಂತಹ ಪ್ರವಸ್ಥಿಯೊಡನೆ  ಮದುವೆಯಾಗಿತ್ತು. ಅವರದ್ದು ಪ್ರೇಮವಿವಾಹ. ಅತ್ತಿಗೆಯಂತೂ ಗುಣದಲ್ಲಿ ಅಪರಂಜಿ! ಚಿಕ್ಕಂದಿನಿಂದಲೂ ಅಣ್ಣನೊಡನೆ ನನ್ನ ಬಾಂಧವ್ಯ ಅಷ್ಟಕ್ಕಷ್ಟೇ! ಅವನೆಂದರೆ ಒಂದು ವಿಧವಾದ ಅಸ್ಪಷ್ಟ ಭಯ! ಅವನ ಒರಟು ಸ್ವಭಾವ, ಗಡಸುಮಾತು ಅವನಿಂದ ದೂರವಿಟ್ಟಿತ್ತಾ ಅನ್ನೋದು ನೆನಪಿಲ್ಲ. ಆದರೆ ಅತ್ತಿಗೆ ಮಾತ್ರ ತನ್ನ ಕಲ್ಮಶವಿಲ್ಲದ ನಡೆನುಡಿಯಿಂದ ಬಂದ ಹೊಸದರಲ್ಲಿಯೇ ಮನೆಯ ಎಲ್ಲರ ಮನಸ್ಸುಗಳನ್ನೂ ಗೆದ್ದುಬಿಟ್ಟಿದ್ದಳು. ಒಂದೆರಡು ವರ್ಷ ಚಿಕ್ಕವಳಾದ ನನ್ನೊಡನೆ ಆತ್ಮೀಯ ಗೆಳತಿಯಂತೆ ಬೆರೆತು ಹೋಗಿದ್ದಳು. ಚಿನ್ನಾರಿ ಮೌನಿಕಳ ಆಗಮನವಾದ ನಂತರವಂತೂ ನಮ್ಮ ಮನೆ ನಂದಗೋಕುಲವಾಗಿತ್ತು.

ಆ ದಿನಗಳಲ್ಲಿಯೇ ನನ್ನ ಜೀವನದಲ್ಲಿಯೂ ಮಾಧುರ್ಯದ ಪ್ರೇಮಪಲ್ಲವಿಸಿ ಹರೆಯಕ್ಕೆ ರಂಗುರಂಗಿನ ಕನಸು ತುಂಬಿತ್ತು. ಆ ಸವಿಭಾವದ ಒಲವ ಲಹರಿಗೆ ಕಾರಣನಾದವನು ಅತ್ತಿಗೆಯ ಅಣ್ಣ ಜಯಂತ್. ನೋಡಲೆಷ್ಟು ಸ್ಫುರದ್ರೂಪಿಯೋ ಅಷ್ಟೇ ಹೊನ್ನಿನ ಗುಣವುಳ್ಳವನು! ಅಣ್ಣನ ಮದುವೆಯ ಸಮಯದಲ್ಲಿಯೇ ಮನಸ್ಸನ್ನು ಕದ್ದ ಚೆಲುವ ಚೆನ್ನಿಗರಾಯ ನಂತರದಲ್ಲಿ ತಂಗಿಯನ್ನು ನೋಡುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಲೇ ಹಸನಾದ ಮನಸ್ಸಿನಲ್ಲಿ ಪ್ರೀತಿಯೆಂಬ ಬೀಜ ಬಿತ್ತನೆ ಮಾಡಿದ್ದ. ಅದು ಮೊಳಕೆಯೊಡೆದು, ಚಿಗುರುತುಂಬಿ ಹೆಮ್ಮರವಾಗಲು ಐದಾರು ವರ್ಷಗಳೇ ಹಿಡಿದಿದ್ದವು.

ಆ ಸಮಯದಲ್ಲಿ ನನ್ನ ಬದುಕನ್ನು ಅವನೆಷ್ಟು ಆವರಿಸಿಕೊಂಡಿದ್ದನೆಂದರೆ ಅವನಿಲ್ಲದೆ ಕಳೆವ ಒಂದೊಂದು ಕ್ಷಣಗಳು ಕೂಡ ಯುಗಗಳಂತೆ ಭಾಸವಾಗುತ್ತಿತ್ತು. ಗಾಢ ಪ್ರೀತಿಯಲ್ಲಿ ಬೆಸೆದಿದ್ದ ನಾವು ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದರಿವಾದಾಗ  ತಡಮಾಡದೆ ತನ್ನ ಹೆತ್ತವರೊಡನೆ ಮನೆಗೆ ಬಂದು ಧೈರ್ಯವಾಗಿ ಹೆಣ್ಣು ಕೇಳಿದ್ದ. ಅಷ್ಟರಲ್ಲಿ ನನ್ನ ಸ್ನಾತಕೋತ್ತರ ಪದವಿಯೂ ಪೂರ್ಣಗೊಂಡಿತ್ತು. ಜಯಂತ್ ಕೂಡ ತಂಗಿಯ ಮದುವೆಗಾಗಿ ಮಾಡಿದ್ದ ಸಾಲದ ಹೊರೆಯನ್ನು ಇಳಿಸಿಕೊಂಡು ಸುಭದ್ರವಾದ ಮತ್ತೊಂದು ಉದ್ಯೋಗವನ್ನರಸಿಕೊಂಡಿದ್ದ. ಈಗ ಬೇಡವೆನ್ನಲು ಮನೆಯಲ್ಲಿ ಕಾರಣಗಳೇ ಇಲ್ಲದ್ದರಿಂದ ಅಮ್ಮ, ಅಣ್ಣ ಖುಷಿಯಿಂದಲೇ ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಅಸ್ತು ಎಂದಿದ್ದರು. ಅತ್ತಿಗೆಯ ಸಂತೋಷಕ್ಕಂತೂ ಪಾರವೇ ಇರಲಿಲ್ಲ! “ಈ ಮನೆಯ ಪುಟ್ಗೌರಿ ನನ್ನ ತವರನ್ನು ಬೆಳಗಲು ಹೋಗ್ತಿದ್ದಾಳೆ..!” ಎಂದು ಎಲ್ಲರಿಗೂ ಹೇಳಿಕೊಂಡು ಸಂತೋಷಪಟ್ಟಿದ್ದಳು.

ಆದರೆ ಕ್ರೂರವಿಧಿಗೆ ನಮ್ಮ ಈ ಸಂತೋಷ  ಕಣ್ಣುಕುಕ್ಕಿತ್ತೇನೋ..! ಮನೆಯಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗಲೇ ಬರಸಿಡಿಲಿನಂತೆ ಅಣ್ಣನ ಹತ್ಯೆಯ ಸುದ್ದಿ ಬಂದು ಅಪ್ಪಳಿಸಿತ್ತು! ಅದಕ್ಕಿಂತಲೂ ಘೋರ ದುರಂತವೆಂದರೆ ಆ ಕೊಲೆಯನ್ನು ಜಯಂತ್ ಮಾಡಿದ್ದ ಎನ್ನುವುದು..!  ಸುದ್ದಿ ಕೇಳಿ ಕಾಲ ಕೆಳಗಿನ ಭೂಮಿ ಒಮ್ಮೆಲೇ ಕುಸಿದ ಅನುಭವವಾಗಿತ್ತು! ನಾನಂತೂ ದಿಗ್ಭ್ರಾಂತಿಗೆ ಗುರಿಯಾಗಿ ಥರಥರನೆ ನಡುಗಿ ಹೋಗಿದ್ದೆ! ತೋಟದ ಮನೆಯಲ್ಲಿ ರಕ್ತದ ಮಡುವಿನ ನಡುವಲ್ಲಿ ಬಿದ್ದಿದ್ದ ಅಣ್ಣನನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಏನಾಯ್ತು,!? ಯಾಕಾಯ್ತು..!? ಎಂಬುದೇ ಅರ್ಥವಾಗಿರಲಿಲ್ಲ. ಅತ್ತಿಗೆಯಂತೂ ಆಘಾತಕ್ಕೆ ಒಳಗಾದಂತೆ ಶೂನ್ಯವನ್ನು ದಿಟ್ಟಿಸುತ್ತಾ ಮೌನದ ಮೊರೆ ಹೊಕ್ಕಿಬಿಟ್ಟಿದ್ದಳು. ಊಹಿಸಿಕೊಳ್ಳಲು ಕೂಡ ಸಾಧ್ಯವಾಗದ ಈ ಘಟನೆ ನಮ್ಮೆಲ್ಲರ ಬಾಳಲ್ಲಿ ಕತ್ತಲೆ ತುಂಬಿ ಸಂತೋಷಗಳನ್ನು ಆವಿಯಾಗಿಸಿತ್ತು.

ಮೊದಲಿಗೆ ಜಯಂತ್ ಕೊಲೆಗಾರನೆಂದರೆ ನನ್ನ ಮನಸ್ಸು ಕೂಡ ಒಪ್ಪಿಕೊಂಡಿರಲೇ ಇಲ್ಲ. ಅದನ್ನೇ ಜೈಲಿನ ಕಂಬಿಗಳ ಹಿಂದೆ ನಿಂತಿದ್ದ ಅವನಲ್ಲಿ ಪ್ರಶ್ನಿಸಿದ್ದೆ. ಆದರೆ ನನ್ನೆಲ್ಲಾ ಕೇಳುಗಳಿಗೂ ಅವನದ್ದು ಮೌನವೇ ಉತ್ತರವೆಂದಾದಾಗ ನನ್ನ ಸಹನೆಯ ಕಟ್ಟೆಯೊಡೆದಿತ್ತು.

“ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೊಲ್ಲುವುದು ಅಷ್ಟು ಸುಲಭವೇ..!? ಆ ಸಮಯದಲ್ಲಿ ನಿನ್ನನ್ನೇ ನಂಬಿರುವ ನಾನು, ಪ್ರವಸ್ಥಿ, ಅಪ್ಪನಿಲ್ಲದೆ ಬದುಕಬೇಕಾದ ನಮ್ಮ ಮೌನಿ.. ಇವರ್ಯಾರೂ ನೆನಪಾಗಲಿಲ್ಲವೇ..!? ಎಲ್ಲರ ನಾಳೆಗಳನ್ನೂ ಪ್ರಶ್ನಾರ್ಥಕವಾಗಿಸಿದೆಯಲ್ಲಾ ನಿನ್ನದೆಂಥ ಕ್ರೂರ ಮನಸ್ಥಿತಿ..!?” ಎಂದು ಕೋಪಾವೇಷದಲ್ಲಿ ತೀವ್ರ ವೇದನೆಯನ್ನನುಭವಿಸುತ್ತಾ ನೇರಾನೇರ ಪ್ರಶ್ನಿಸಿ ಬಂದಿದ್ದೆ! ಅವನೇ ಕೊಲೆಗಾರನೆಂದು ಸಾಕ್ಷಿಗಳೆಲ್ಲವೂ ದೃಢೀಕರಿಸಿದ ನಂತರದಲ್ಲಿ ಇಷ್ಟು ಜನರ ಜೀವನವನ್ನು ಅಂಧಕಾರಕ್ಕೆ ದೂಡಿದ ಅವನನ್ನು ನೋಡಬೇಕೆಂದು ಮತ್ತೆ ನನಗನ್ನಿಸಲೇ ಇಲ್ಲ.

ಆದರೆ ಬದುಕಿನ ಪುಟಗಳು ತಿರುವಿಕೊಂಡಂತೆಲ್ಲಾ  ಸಾಗುತ್ತಿದ್ದ ಜೀವನ ‘ಪಡಸಾಲೆಯ ಕರಿಕಂಬದಂತೆ’ ನಿರಾಳವಾಗಿ ಕಂಡರೂ ಅಂತರ್ಗತವಾಗಿ ಏಕಾಂಗಿಭಾವದ ಛಾಯೆ ಮಾಸಿರಲಿಲ್ಲ. ಅದಕ್ಕೆ ಕಾರಣನಾದವನನ್ನು ಆಗಾಗ ಶಪಿಸಿಕೊಳ್ಳುತ್ತಲೇ ಇದ್ದೆ. ಆದರೆ ಅತ್ತಿಗೆ ಮಾತ್ರ ಅವಳಣ್ಣನ ಬಗ್ಗೆ ಯಾವ ನಕಾರಾತ್ಮಕ ನಿಲುವನ್ನೂ ತಾಳಿರಲಿಲ್ಲ! ತಾನು ಪ್ರೀತಿಸಿ ಮದುವೆಯಾದ ಗಂಡನನ್ನು ಬಲಿತೆಗೆದುಕೊಂಡು ತನ್ನ ಜೀವನವನ್ನು ಅಸ್ತವ್ಯಸ್ತಗೊಳಿಸಿದನೆಂಬ ಕೋಪ ಅವಳಲ್ಲಿರಲೇ ಇಲ್ಲ! ತನ್ನಣ್ಣ ಎಂಬ ಅತಿಯಾದ ವಾತ್ಸಲ್ಯವೇನೋ ಗೊತ್ತಿಲ್ಲ ನನಗದು! ಅದನ್ನೇ ಒಂದುದಿನ ಸಹಿಸಲಾರದೆ ಅವಳಲ್ಲಿ ಕೇಳಿದ್ದಕ್ಕೆ…

”ಜಯಂತ್ ಅಣ್ಣ ಹೇಗೆ ಅನ್ನೋದು ನಿನಗೂ ಗೊತ್ತಿದೆ ಮೃದುಲ. ಇಷ್ಟು ವರ್ಷದ ಒಡನಾಟದಲ್ಲಿ ಅವನೇನೆಂಬುದನ್ನು ನೀನು ಸರಿಯಾಗಿ ಅರಿತುಕೊಂಡಿದ್ದರೆ ಇಂದು ಈ ಪ್ರಶ್ನೆಯನ್ನು ನನ್ನೆದುರಲ್ಲಿ ಕೇಳ್ತಿರಲಿಲ್ಲ..” ಎಂದಷ್ಟೇ  ಮಾರ್ಮಿಕವಾಗಿ ಉತ್ತರಿಸಿದ ಪ್ರವಸ್ಥಿ ಅವನ ಒಳಿತಿಗಾಗಿ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಇದು ನನಗೆ ಉಗುಳಲಾರದ ಬಿಸಿತುಪ್ಪವಾಗಿದ್ದರೂ ಅವಳನ್ನು ಮಾತ್ರ ದ್ವೇಷಿಸಿ ದೂರವಿಡಲು ನನ್ನಿಂದ ಸಾಧ್ಯವಾಗಿರಲಿಲ್ಲ. ಗಂಡನ ಸಾವಿನ ದುಃಖವನ್ನು ನುಂಗಿಕೊಂಡು ಅವಳು ಕುಟುಂಬಕ್ಕಾಗಿ ನಿಂತ ಪರಿ ಎಂತಹವರನ್ನೂ ನಿಬ್ಬೆರಗಾಗಿಸುವಂತಿತ್ತು..! ಈ ಹತ್ತುವರ್ಷಗಳಲ್ಲಿ ಗಂಡುದಿಕ್ಕಿಲ್ಲದ ಮನೆಯನ್ನು, ತೋಟವನ್ನು ಅವನಿಗಿಂತ ಉತ್ತಮ ರೀತಿಯಲ್ಲಿ ಸಂಭಾಳಿಸಿಕೊಂಡು ಹೋಗುತ್ತಿದ್ದ ಸೊಸೆಯ ಬಗ್ಗೆ ಅಮ್ಮನಲ್ಲಿಯೂ ಯಾವುದೇ ದೂರುಗಳಿರಲಿಲ್ಲ.

ಕಾಲೇಜಿನ ಉಪನ್ಯಾಸಕಿಯಾಗಿ ಬೆಳಗನ್ನು ವಿದ್ಯಾರ್ಥಿಗಳೊಡನೆ ಹೇಗೋ ಕಳೆದುಬಿಟ್ಟರೂ ಕತ್ತಲೆಯ ಸುಧೀರ್ಘ ರಾತ್ರಿಗಳು ಮೈಲಿಗೆಯ ಘಮವನ್ನು ಅಂಟಿಸುತ್ತಾ ಬದುಕನ್ನು ಕಟ್ಟಿಹಾಕಿ ನನ್ನನ್ನು ಅಣಕಿಸುತ್ತಿದ್ದವು. ಅಂತರಂಗದಲ್ಲಿ ಅವನ ಸ್ಥಾನವನ್ನು ತೆರವುಗೊಳಿಸಿದ್ದರೂ ಕಾಡುವ ನೆನಪುಗಳಿಂದ ಮಾತ್ರ ವಂಚಿತಳಾಗಲು ಸಾಧ್ಯವಾಗಿರಲಿಲ್ಲ! ಅಮ್ಮ ಮದುವೆಯಾಗೆಂದು ಬಲವಂತಪಡಿಸಿದಾಗಲೆಲ್ಲಾ ನನ್ನದೆನ್ನುವ ಭಾವಗಳೆಲ್ಲವನ್ನೂ ಅವನಿಗೆ ವರ್ಗಾಯಿಸಿ ಖಾಲಿಯಾದ ಹೃದಯಕ್ಕೆ ಬೀಗ ಜಡಿದಿದ್ದೇನೆಯೇ ಎಂದೆನಿಸುತ್ತಿತ್ತು. ಅವನ ಬಗ್ಗೆ ಕಠಿಣ ನಿಲುವುಗಳಿದ್ದರೂ ಭಾವವಿಲ್ಲದ ಮನಸ್ಸಿನಲ್ಲಿ ಮತ್ತೊಬ್ಬರನ್ನು ಕೂರಿಸುವ ಸಾಹಸಕ್ಕಂತೂ ಅಪ್ಪಿತಪ್ಪಿಯೂ ಇಳಿದಿರಲಿಲ್ಲ.

****

ಹೀಗೆ ನೆನಪುಗಳ ಸುಳಿಯಲ್ಲಿ ಸಿಲುಕಿರುವಾಗಲೇ ಕೆಳಗಡೆ ಅವ ಬಂದ ಸದ್ದಾಗಿತ್ತು! ಇಲ್ಲಿ ಹೃದಯವೊಮ್ಮೆ ಜೋರಾಗಿ ಬಡಿದುಕೊಂಡಿತ್ತು! ಅತ್ತಿಗೆಯ ಅಂತಃಕರಣದಲ್ಲಿ, ಮೌನಿಯ ಮುಗ್ಧನಗುವಿನಲ್ಲಿ ಪ್ರತಿದಿನ ಸಿಹಿಕಹಿ ನೆನಪಾಗಿ ಕಾಡುವವ ಹತ್ತುವರ್ಷದ ಕಠಿಣಸಜೆಯನ್ನು ಪೂರ್ಣಗೊಳಿಸಿಕೊಂಡು ಇಂದು ತನ್ನವರನ್ನು ನೋಡುವ ಸಲುವಾಗಿ ಮನೆಗೆ ಬಂದಿದ್ದ.(!?) ಅತ್ತಿಗೆಯ ಸಡಗರವನ್ನಂತೂ ಹೇಳತೀರದು. ಅವನಿಗಿಷ್ಟವಾದ ಖಾದ್ಯಗಳ ಪರಿಮಳ ಮನೆಯ ತುಂಬೆಲ್ಲಾ ಹರಡಿ ನನ್ನನ್ನು ಮತ್ತಷ್ಟು ಕ್ಷೋಭೆಗೆ ದೂಡುತ್ತಿದ್ದರೆ ಕೆಳಗೆ ಅಡುಗೆಮನೆಯಲ್ಲಿ ಹಬ್ಬದೌತಣ ತಯಾರಾಗುತ್ತಿತ್ತು.

ಹೂವಿನ ಮಕರಂದದಂತೆ ಮಧುರವಾಗಿದ್ದ ನಮ್ಮಿಬ್ಬರ ನಡುವಿನ ಬಂಧ ಬೇವಿನ ಕಹಿಯಂತೆ ಬದಲಾಗಿದ್ದರ ಬಗ್ಗೆ ಯಾವಾಗಲೂ ನನ್ನ ಆಕ್ಷೇಪವಿದ್ದೇ ಇದೆ. ಆದರೆ ಹಿಂದಿನ ಅದೇ ಪ್ರೀತಿ ತೋರುವ ಅತ್ತಿಗೆ ಮಾತ್ರ ನನಗೆ ವಿಚಿತ್ರವೆನ್ನಿಸಿಬಿಟ್ಟಿದ್ಲು! ಅಣ್ಣನ ಸಾವು ನನ್ನನ್ನೇ ಇಷ್ಟರ ಮಟ್ಟಿಗೆ ಕಾಡ್ತಿದ್ರೆ ಪ್ರೀತಿಸಿ ಮದುವೆಯಾದ ಅವಳನ್ನ ಇನ್ನೆಷ್ಟು ಕಾಡ್ಬೇಕು!? ಆದ್ರೆ ಏನೂ ನಡೆದೇ ಇಲ್ಲವೆನ್ನುವಂತೆ ಮನೆಗೆ ಬಂದ ಜಯಂತ್ ಗೆ ಕೆಳಮನೆಯಲ್ಲಿ ಉಪಚರಿಸುತ್ತಿರುವ ಸದ್ದು ನನ್ನೆದೆಯಲ್ಲಿ ಅಸಹನೆಯ ಹೊಗೆಯಾಡುವಂತೆ ಮಾಡಿತ್ತು.

ಆಗಲೇ ನನ್ನನ್ನರಸಿ ಮೆಟ್ಟಿಲೇರಿ ಬಂದ ಅತ್ತಿಗೆ, “ಅವನ ಕಣ್ಣುಗಳೆಲ್ಲವೂ ನಿನಗಾಗಿಯೇ ಹುಡುಕುತ್ತಿವೆ. ತುಂಬಾ ಬಳಲಿದ್ದಾನೆ! ನೋಯಿಸಬೇಡ. ಎಲ್ಲವನ್ನು ಮರೆತು ಅವನಿಗೊಮ್ಮೆ ಕಾಣಿಸು..” ನನ್ನೆದೆಯ ಬಿರುಕನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು ನನ್ನೆದುರು ನಿಂತು ಅವಳಾಡಿದ ನುಡಿಗಳು. ಸರ್ರನೆ ತಲೆಯೆತ್ತಿ ನೋಡಿದ್ದೆ. ಒಳಗೆ ಲಾವಾರಸ ಕುದಿಯುತ್ತಿತ್ತು.

“ಸತ್ತಿದ್ದು ನನ್ನಣ್ಣ ಅಲ್ವಾ…ನಿನ್ನಣ್ಣ ಆಗಿದ್ರೆ ನನ್ನೆದೆಯ ನೋವು ನಿನಗೂ ಅರ್ಥವಾಗ್ತಿತ್ತು..!” ಸಿಟ್ಟಿನ ಭರದಲ್ಲಿ ಮಾತು ಜಾರಿತ್ತು.
ಅಷ್ಟೇ, ಯಾವ ಆವೇಶದಲ್ಲಿದ್ದಳೋ ಕೆನ್ನೆಗೊಂದು ಬಿಗಿದುಬಿಟ್ಟಿದ್ದಳು! ”ನೀನು ಪ್ರೀತಿಸಿ ಮದುವೆಯಾದವನೇ ನಿನ್ನ
ಕರುಳಕುಡಿಯ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ್ರೆ ಆಗ ಗೊತ್ತಾಗಿರೋದು ನಿನಗೂ ಈ ತಾಯಿಯೊಡಲ ದಳ್ಳುರಿ! ಆ ಕ್ರೌರ್ಯವನ್ನ ಕಣ್ಣಾರೆ ಕಂಡು ಸಹಿಸಲಾರದ ಆವೇಶದಲ್ಲಿ ಆ ಕಾಮಪಿಶಾಚಿಯನ್ನ ಕೊಂದರೆ, ತಂಗಿಯನ್ನ ರಕ್ಷಿಸುವ ಸಲುವಾಗಿ ಯಾವ ತಪ್ಪೂ ಮಾಡದ ಒಡಹುಟ್ಟಿದವನು ಹರಕೆಯ ಕುರಿಯಂತೆ ಬಲಿಯಾಗಿ ವರ್ಷಗಳ ಕಾಲ ಕಠಿಣಶಿಕ್ಷೆ ಅನುಭವಿಸಿದ್ದರೆ ಆಗ ಅರ್ಥವಾಗಿರೋದು ನಿನಗೂ ನಮ್ಮ ಮನಸ್ಸಿಗಾದ ಆಘಾತ, ಸಂಕಟ ಎಂತಹದೆಂದು…””ಪುಟ್ಟಾ.!” ಆಗಲೇ ಮೆಟ್ಟಿಲೇರಿ ಬಂದ ಜಯಂತ್ ಆತಂಕದಿಂದ ಅವಳ ಮಾತನ್ನು ತಡೆಯಲು ಪ್ರಯತ್ನಿಸಿದ್ದ.”ಇನ್ನು ನನ್ನಿಂದ ಆಗ್ಲಿಲ್ಲಣ್ಣಾ..!” ಕಂಬನಿಗೆರೆಯುತ್ತಾ  ಜಯಂತನನ್ನು ಅಪ್ಪಿಬಿಟ್ಟಳು.

ಅಷ್ಟೇ… ಭೂಕಂಪವಾದಂತೆ ತಲ್ಲಣಗೊಂಡಿತ್ತು ನನ್ನೆದೆ! ಕುಸಿದು ಕುಳಿತುಬಿಟ್ಟೆ. ಅವರು ನನಗೆ ಮತ್ತೇನೂ ಹೇಳುವ ಅವಶ್ಯಕತೆಯೇ ಅಲ್ಲಿ ಉಳಿದಿರಲಿಲ್ಲ. ಅದಾಗಲೇ ನನ್ನ ಮನಸ್ಸು ಎಲ್ಲವನ್ನೂ ಗ್ರಹಿಸಿಬಿಟ್ಟಿತ್ತು! ಅಮ್ಮ ಯಾಕೆ ಚಿಕ್ಕಂದಿನಿಂದಲೂ ನನ್ನನ್ನು ಅಣ್ಣನ ಬಳಿಗೆ ಹೆಚ್ಚು ಹೋಗಲು ಬಿಡುತ್ತಿರಲಿಲ್ಲ, ನಾನ್ಯಾಕೆ ಅವನಿಂದ ದೂರವೇ ಉಳಿದುಬಿಟ್ಟೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿತ್ತು. ಕಣ್ಣಾರೆ ಕಂಡದ್ದನ್ನು ಪರಾಮರ್ಶಿಸದೆ ಅದೇ ಸತ್ಯವೆಂದು ನಂಬಿದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಉನ್ನತ ಹೃದಯಿಗಳಿಗೆ ಅರಿಯದೆ ನೋವು ಕೊಟ್ಟ ಪಾಪಕ್ಕೆ ಕೈಮುಗಿದು ಕಂಬನಿ ಮಿಡಿಯುತ್ತಾ ಕ್ಷಮಾಪಣೆ ಕೇಳಿದೆ. ನಮಗದರ ಅವಶ್ಯಕತೆಯಿಲ್ಲಾ ಎಂಬಂತೆ

ಅವರ ತೋಳತೆಕ್ಕೆಯಲ್ಲಿ ನನ್ನನ್ನೂ ಬಂಧಿಸಿಕೊಂಡು ಸಂತೈಸಿದ್ದರು. ಆ ಅಪ್ಪುಗೆಯಲ್ಲಿ ಭರವಸೆಯ ಹಿತವಿತ್ತು. ಪ್ರೀತಿಗೆದ್ದ ಸಂತಸವಿತ್ತು. ಪ್ರಖರವಾಗಿ ಬೆಳಗುವ ಸೂರ್ಯನಿಂದ ಮುಂಜಾನೆಯ ಇಬ್ಬನಿ ಹೇಗೆ ಕರಗಿ ಪ್ರಕೃತಿಗೆ ಜೀವಚೈತನ್ಯ ತುಂಬುವುದೋ ಹಾಗೆಯೇ ಸತ್ಯದರ್ಶನದಿಂದ ನನ್ನನ್ನಾವರಿಸಿದ್ದ ದ್ವೇಷವೆಂಬ ಮಾಯರೆಡ್ಡಿ , ಮನವು ತಿಳಿಯಾಗಿ ಬದುಕು ಹಸನಾಗಿತ್ತು.
*****

ಕತೆಗಾರ್ತಿ ಪರಿಚಯ

ಸುಜಾತ ಎಸ್.ಎನ್ ರೆಡ್ಡಿ, ಬೆಂಗಳೂರು

ಸುಜಾತ ಎಸ್.ಎನ್ ರೆಡ್ಡಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮನೋವಿಜ್ಞಾನದ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ವಿದ್ಯಾ ಫ್ಯಾಶನ್ ಅಕಾಡೆಮಿಯಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಆಗಿ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಎ. ನಾಗ ಸುಬ್ಬಾರೆಡ್ಡಿ ಅವರ ಧರ್ಮಪತ್ನಿಯಾಗಿರುವ ಇವರು, ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ತಮ್ಮದೇ ಆದ ಆಸಕ್ತಿಯ ಹೆಜ್ಜೆಗುರುತು ಮೂಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಬೃಹತ್ ಸಾಹಿತ್ಯ ವೇದಿಕೆಯಾದ ‘ಕಥಾಗುಚ್ಚ’ದಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ವಾಹಕಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಮೇಲಿನ ಒಲವಿನ ಫಲವಾಗಿ ‘ಪ್ರೇಮ ಕಾವ್ಯ’ ಹಾಗೂ ‘ಅನುರಾಗದ ಈ ಬಂಧನ’ ಎಂಬ ಎರಡು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಬಿ ಟ್ರೆಂಡ್ಸ್’ ಪತ್ರಿಕೆಯ ‘ಸುವಿಚಾರ’ ಅಂಕಣದಲ್ಲಿ ಬರೆಯುವುದರ ಜೊತೆಗೆ ಕಥೆ, ಕವನ ಹಾಗೂ ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಲೋಕದಲ್ಲಿಯೂ ತಮ್ಮ ಅಭಿವ್ಯಕ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸೃಜನಶೀಲತೆ, ಅಧ್ಯಯನಶೀಲತೆ ಮತ್ತು ಸಾಹಿತ್ಯಾಸಕ್ತಿಯನ್ನು ಬದುಕಿನ ಭಾಗವಾಗಿಸಿಕೊಂಡಿರುವ ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.

ಅಂತರಂಗ

ಮೆಚ್ಚುಗೆ ಪಡೆದ ಕವಿತೆ | ಬಂದಿದ್ದಾರೆ; ಆದರೆ ಸಿಕ್ಕಿಲ್ಲ

Published

on

~ಕವಿತ ಎ. ವಿ. ಶ್ಯಾಗಲೆ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ

ಈಗೀಗ
ಮೆದುಳು – ಕಿಡ್ನಿಗಳ
ಜಾಗ ಬದಲಾಗಿರಬೇಕು.
ಸರ್ಜರಿಗೆಂದು ಕೆಲವರನ್ನು
ವೈದ್ಯರ ಬಳಿ
ಕೂರಿಸಿದೆ…
ಔಷಧಿಯೂ ಸಿಗಲಿಲ್ಲ
ಶಸ್ತ್ರ ಚಿಕಿತ್ಸೆಯೂ ನಡೆಯಲಿಲ್ಲ.
ಹಳೆ ಗುಜುರಿ ಸಾಮಾನುಗಳ
ರಿಪೇರಿ ಮಾಡುವವರು
ಬಂದಿದ್ದಾರೆ.

ಮುರಿದ ಮನಸ್ಸುಗಳ ತಂದಿಟ್ಟೆ
ಯಾಕೋ ಅಂಗಡಿಯಣ್ಣ ಆಗಲ್ಲವೆಂದ.
ಸೋಪು ಮಾರುವವರು
ಬೀಡುಬಿಟ್ಟಿದ್ದಾರೆ ಇಲ್ಲಿಯೇ!
ಅವರಂಗಡಿಯಲ್ಲೂ ಕೇಳಿದೆ.
ಮನಸ್ಸು-ಮೆದುಳು
ತೊಳೆಯುವ ನೊರೆಯೂ
ಸಿಗಲಿಲ್ಲ.
ಹಾವು ಹಿಡಿಯುವವರು
ಬೆಕ್ಕು ಹಿಡಿಯುವವರು
ಬಲೆ ಹಿಡಿದು ಬಂದಿದ್ದಾರೆ.
ಒAದು ತಲೆಯ,
ಎರಡು ಕಾಲಿನ
ಪ್ರಾಣಿ ಸಿಕ್ಕಿರಬಹುದೇ?
ಇಣುಕಿ ನೋಡಿದೆ.
ಅನಿಸಿದ್ದು:
ಕಬ್ಬಿಣದ ಬೆಸುಗೆ ಹಾಕುವ
ಕಮ್ಮಾರ ಸಾಗಿ ಹೋಗುತ್ತಿದ್ದಾನೆ ಕೇಳಿನೋಡೋಣವೆ?
ಒಡೆದ ಮನಸುಗಳ ಬೆಸುಗೆಗೆ ಹಣವೆಷ್ಟು ತಗಲುವುದೆಂದು?
ಬೀಗ ಹಾಕುವವರೂ
ಬಂದಿದ್ದಾರೆ.

ಮನೆಗೆ ಹಾಕುವ ಬದಲು
ಮಂದಿಗೆ ಹಾಕಿದ್ದರೆ
ಮನಗಳಾದರೂ ಉಳಿಯುತ್ತಿತ್ತೇನೋ!
ಜಿಪ್ಪು ಹಾಕುವವರು ಬಂದಿದ್ದಾರೆ.
ಬ್ಯಾಗಿಗೆ ಹಾಕುವ ಬದಲು
ಬಾಯಿಗೆ ಹಾಕಿದ್ದರೇ
ಒಲ್ಲದ ಮಾತುಗಳನ್ನಾದರೂ
ಅಲ್ಲೇ ಮುಗಿಸಬಹುದಿತ್ತು!
ಈಗೀಗಂತೂ
ಕೊಳೆತ ಮನಸ್ಸುಗಳು ನಾರುತಿಹುದು ಜಗದ ತುಂಬಾ!
ಸುಗAಧ ದ್ರವ್ಯವನ್ನಾದರೂ ಸಿಂಪಡಿಸಬೇಕು.
ಅವರ ದಾರಿಯನ್ನೇ ಕಾಯುತ್ತಿದ್ದೇನೆ.
ಯಾಕೋ ಇನ್ನೂ ಬಂದಿಲ್ಲ!

ಕವಯಿತ್ರಿ ಕವಿತ ಎ. ವಿ. ಶ್ಯಾಗಲೆ

ಕುಮಾರಿ. ಕವಿತ ಎ. ವಿ. ಅವರು ಶ್ರೀ ವಿರೂಪಾಕ್ಷಪ್ಪ ಮತ್ತು ಶ್ರೀಮತಿ ಮಹಾದೇವಮ್ಮ ದಂಪತಿಗಳ ಮಗಳಾಗಿ ದಿನಾಂಕ: 26.05.2001ರಲ್ಲಿ ದಾವಣಗೆರೆ(ತಾ/ಜಿ)ಯ ಶ್ಯಾಗಲೆ ಎಂಬ ಗ್ರಾಮದಲ್ಲಿ ಜನಿಸಿರುತ್ತಾರೆ. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅವರ ಹುಟ್ಟೂರಿನಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಎಂಬ ಗ್ರಾಮದಲ್ಲಿ ಪೂರ್ಣಗೊಳಿಸಿ, ಪದವಿ ಹಾಗೂ ಬಿ.ಇಡಿ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚನ ಮಾಡಿದ್ದಾರೆ. ಅಲ್ಲದೆ ಕ್ರೆಸ್ಟ್ ವಿಶ್ವವಿದ್ಯಾನಿಲಯದ ದ.ರಾ. ಬೇಂದ್ರೆ ಸ್ಮೃತಿ ಕಾವ್ಯ ಬಹುಮಾನ (2025) ಮತ್ತು ರಾಷ್ಟç ಮಟ್ಟದ ಕ್ಲಾರೆಟ್ ಕಾವ್ಯ ಪ್ರಶಸ್ತಿ (2025)ಗಳು ಇವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ದೊರೆತಿವೆ.

Continue Reading

ಅಂತರಂಗ

ಮೆಚ್ಚುಗೆ ಪಡೆದ ಕತೆ | ವೆಂಕಟನ ಸ್ವೆಟರ್

Published

on

ಚಂದ್ರಿಕಾ ನಾಗರಾಜ್ ಹಿರಿಯಡಕ

~ ಚಂದ್ರಿಕಾ ನಾಗರಾಜ್ ಹಿರಿಯಡಕ

ತಟ್ಟೆಗೆ ಹಾಕಿದ್ದ 4 ಇಡ್ಲಿಯಲ್ಲಿ ಎರಡನ್ನು ಪೇಪರ್ ನಲ್ಲಿ ಕಟ್ಟಿಟ್ಟು, ಉಳಿದೆರಡು ಇಡ್ಲಿಯನ್ನು ಹಿಚಿಕಿ ಸಾಂಬಾರಿಗಾಗಿ ಕಾದು ಕುಳಿತ್ತಿದ್ದ ವೆಂಕಟ. ಅನ್ನಪೂರ್ಣಮ್ಮ ಸಾಂಬಾರು ಬಡಿಸಿ ಒಳಗೆ ಹೋಗುತ್ತಿದ್ದಂತೆ ಸಾಂಬಾರಿನೊಂದಿಗೆ ಇಡ್ಲಿಯನ್ನು ಹಿಚಿಕಿ ಮೆಲ್ಲಲಾರಂಭಿಸಿದ್ದ. ಅವನು ಇಡ್ಲಿ ಹಿಚುಕುವಾಗ ಕೈ ಬೆರಳ ಸಂದಿಯಿಂದ ಇಡ್ಲಿಯ ಚೂರುಗಳು ಪಚಕ್ಕನೆ ಇಣುಕುವುದು ನೋಡುವವರಿಗೆ ವಾಕರಿಕೆ ತರಿಸುತ್ತಿತ್ತು. ಹೀಗಾಗಿ ಆತನೊಂದಿಗೆ ಇತರರು ತಿಂಡಿಗಾಗಲಿ, ಊಟಕ್ಕಾಗಲಿ ಜೊತೆಯಾಗುತ್ತಿರಲಿಲ್ಲ. ಗಬಗಬನೆ ತಿಂದು ಮುಗಿಸುವ ವೆಂಕಟ ಹೊಟ್ಟೆಗಾಗಿ ತಿನ್ನುವವನಂತೆ ಕಾಣುವುದಿಲ್ಲ.

‘ಇನ್ನೊಂದು ಇಡ್ಲಿ ತರ್ಲೇನೋ ವೆಂಕಟು’ ಅನ್ನಪೂರ್ಣಮ್ಮ ಕೇಳಿದಾಗ ಬೇಡ ಎಂಬಂತೆ ತಲೆ ಆಡಿಸಿದ. ತಣ್ಣಗಾಗಿದ್ದ ಚಹಾವನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದ್ದ.

ಕಟ್ಟಿಟ್ಟಿದ್ದ ಇಡ್ಲಿಯ ಪೊಟ್ಟಣವನ್ನು ತನ್ನ ಸ್ವೆಟ್ಟರಿನ ಜೇಬಿಗಿಳಿಸಿ, ಕೈ ತೊಳೆದ. ತಟ್ಟೆ, ಲೋಟವನ್ನು  ತನಗೆ ತಿಳಿದಷ್ಟು ನೀಟಾಗಿ ತೊಳೆದು ಅನ್ನಪೂರ್ಣಮ್ಮನ ಕೈಗಿಟ್ಟವನೆ ಕೆಲಸಕ್ಕೆ ಕೈ ಹಚ್ಚಿದ.

ವೆಂಕಟ ಹಾಗೆನೇ ಮಾತು ಕಮ್ಮಿ ಅನ್ನುವುದಕ್ಕಿಂತ ಮಾತೇ ಆಡಲ್ಲ ಅನ್ನೋದು ಹೆಚ್ಚು ಸೂಕ್ತ. ಹು, ಹಾ ಅಷ್ಟೆ. ಅಷ್ಟಕ್ಕೂ ಅವನೊಂದಿಗೆ ಮಾತನಾಡಲು ಯಾರೂ ಬಯಸುತ್ತಿರಲಿಲ್ಲ ಅನ್ನೋದು ಬಹು ಮುಖ್ಯ ಅಂಶ.

ತೆಂಗಿನ ಸಿಪ್ಪೆಯಂತಾಗಿರುವ ಬಿಳಿ ಮಿಶ್ರಿತ ಕಂದು ತಲೆಗೂದಲು, ಅಷ್ಟೇ ಒರಟುತನದ ಮೀಸೆ, ಬಿಳಿ ಗಡ್ಡ, ಕಳಾಹೀನ ಕೆಂಬಣ್ಣದ ಕಣ್ಣುಗಳು, ಉದ್ದ ಮೂಗು, ಬಣ್ಣ ಮಾಸಿದ ಶರ್ಟ್, ಪಂಚೆ…ಶರ್ಟ್ ಮೇಲೆ ನಿತ್ಯ ಧರಿಸುವ ಸ್ವೆಟ್ಟರ್.

ಆ ಸ್ವೆಟ್ಟರ್ ನಿಂದಾಗಿಯೇ ವೆಂಕಟ ಹೆಸರುವಾಸಿಯಾಗಿದ್ದ. ‘ವೆಂಕಟ ಇದ್ದಾನಲಾ’ ಎಂದು ಯಾರಾದರೂ ಅವನ ವಿಚಾರ ಎತ್ತಿದರೆ, ‘ಯಾರು ಸ್ವೆಟ್ಟರ್ ವೆಂಕಟನೇ…?’ ಎನ್ನುವುದಿದೆ. ದಿನ ಅದೊಂದೇ ಸ್ವೆಟ್ಟರ್ ಧರಿಸುವ ವೆಂಕಟ, ಯಾರು ಏನೇ ಕೊಟ್ಟರು ಕಾಗದದಲ್ಲಿ ಕಟ್ಟಿ ಅದರೊಳಗೆ ಇಡುವ ಕೆಲಸ ಮಾಡುತ್ತಿದ್ದ. ಇದನ್ನೇ ಲೇವಡಿಯಾಗಿ ‘ಸ್ವೆಟ್ಟರ್ ವೆಂಕಟ’ ಎಂದು ಬಹಳಷ್ಟು ಮಂದಿ ಕರೆಯುತ್ತಿದ್ದರು.

ವೆಂಕಟನಿಗೆ ಸುಬ್ಬಣ್ಣ ಗೌಡ್ರು ಒಂದು ಮನೆ ಕೊಟ್ಟಿದ್ದರು. ಗಾರೆ ಕಾಣದ ಹಂಚಿನ ಮನೆ ಅದು. ಅಡುಗೆ ಕೋಣೆ, ಬಚ್ಚಲು ಕೋಣೆ, ಚಾವಡಿ ಇಷ್ಟೆ…ಚಿಕ್ಕ ಟಾಯ್ಲೆಟ್ ಹೊರಗೆ ಕಟ್ಟಿಸಿಕೊಟ್ಟಿದ್ದರು. ವೆಂಕಟ 7 ಗಂಟೆಗೆ ಮನೆಯೊಳಗೆ ಹೊಕ್ಕರೆ ಬೆಳಿಗ್ಗೆ 5 ಗಂಟೆಗೆ ಹೊರಗೆ ಕಾಣಿಸಿಕೊಳ್ಳುತ್ತಿದ್ದ. ಹಾಗಂತ ಅವನು ಕುಡಿದು ಮಲಗುತ್ತಿದ್ದ ಎಂದು ಅನ್ನಿಸುವುದಿಲ್ಲ. ಯಾಕಂದ್ರೆ, ಅವರು ಬಾರಿನ ಬಳಿ ಯಾರಿಗೂ ಇದುವರೆಗೂ ಕಾಣ ಸಿಕ್ಕಿಲ್ಲ.

‘ವೆಂಕಟ, ಇನ್ನು ಆಗಿಲ್ವೇನೋ…ಮಳೆ ಶುರು ಆಗೋ ಮುಂಚೆ ಸೌದೆ ಕೊಟ್ಟಿಗೆ ಸೇರಿರ್ಬೇಕು ನೋಡು’ ಎಂದು ಸುಬ್ಬಣ್ಣ ಗೌಡ್ರು  ವೀಳ್ಯದೆಲೆ ತಿಂದು ಕೆಂಪಾಗಿಸಿಕೊಂಡಿದ್ದ ಬಾಯನ್ನು  ಆಕಳಿಸುತ್ತಾ ಹೇಳಿದರು. ವೆಂಕಟ ಅವರತ್ತ ನೋಡದೆ, ಗೋಣೂ ಅಲ್ಲಾಡಿಸದೆ ಸೌದೆ ಒಡೆಯುತ್ತಿದ್ದ.

‘ಯಾಕಿಷ್ಟು ಬಾಯಾಕಳಿಸ್ತಿದ್ಯೋ ಮಾರಾಯಾ’ ಎಂದು ಗೌಡ್ರು ಹೇಳುತ್ತಿದ್ದಂತೆ ಪಕ್ಕದಲ್ಲಿದ್ದ ಆಳು ಶಂಕರ ಕಿಸಕ್ಕನೆ ನಕ್ಕು…’ಆಕಿ ನಿಮ್ನೆ ನೆನಪ್ ಮಾಡ್ಕೋತ್ತಿರ್ಬೋದ್’ ಎಂದು ಮೆತ್ತಗೆ. ‘ಏಯ್ …ತೆಗ್ದು ನಾಲ್ಕು ಬಿಟ್ಟಾ ಅಂದ್ರೆ ಮೂತಿ ಊದ್ಕೊಂಡ್ ಬಿಡ್ಬೇಕ್…’ಎಂದು ಸುತ್ತಲೊಮ್ಮೆ ನೋಡಿದ ಗೌಡ್ರು, ‘ಗೌಡ್ತಿ ಕೇಳಿಸ್ಕೊಂಡ್ರೆ …’ ಎಂದು ಮೆಲ್ಲನುಸಿರಿದರು. ‘ಅವ್ರಿಗೇನ್ ಈ ವಿಚಾರ ಗೊತ್ತಿಲ್ವಾ ಗೌಡ್ರೆ’ ಎಂದ ಶಂಕರ. ಅಷ್ಟು ಹೊತ್ತು ಏನೂ ಅರಿಯದಂತೆ ಸೌದೆ ಒಡೆಯುತ್ತಿದ್ದ ವೆಂಕಟ ಕೊಡಲಿ ಕೆಳಗಿಟ್ಟ. ‘ಇವನಿಗೆ ಕೇಳಿಸ್ತೆ’ ಎಂದು ಇಬ್ಬರು ಮುಖ ಮುಖ ನೋಡಿಕೊಂಡರು. ವೆಂಕಟ ಅವರಿಬ್ಬರತ್ತ ನೋಡಿ‌ ಮತ್ತೆ ಕೆಲಸ ಶುರು ಮಾಡಿದ. ಅವನ ಒಂದು ಸಣ್ಣ ನೋಟ ಗೌಡರ ಎದೆಗಿರಿದಂತಾಗಿತ್ತು. ‘ಇವ ಏನ್  ಹೆದರಿಸೋದ್…ಹೆಂಡ್ತಿಯನ್ನ ಕೊಂದವ’ ಎಂದು ಕೆಂಗಣ್ಣು ಬೀರಿ ಅಲ್ಲಿಂದ ನಡೆದರು. ವೆಂಕಟ ಮರದ ದಿಮ್ಮಿಗೆ ಎರಡೇಟು ಜೋರಾಗಿ ಬಡಿದ.

*

ವೆಂಕಟನಿಗೆ ಬೆಳಿಗ್ಗೆ ಚಾ ತಿಂಡಿ, ಮಧ್ಯಾಹ್ನ ಊಟ, ಸಂಜೆಯ ಚಾ ಗೌಡರ ಮನೆಯಲ್ಲೆ.‌ ಸಂಜೆ ಮನೆಗೆ ಹೋದವ ಅಡುಗೆ ಮಾಡುತ್ತಿರಲಿಲ್ಲ. ಅಡುಗೆ ಕೋಣೆ ನಾಮಕವಸ್ಥೆ ಅಷ್ಟೆ. ಸ್ಟೆಟರ್ ನಲ್ಲಿ ಕಟ್ಟಿ ತಂದ ತಿಂಡಿಯೇ ರಾತ್ರಿಯ ಮೃಷ್ಟಾನ್ನ ಭೋಜನ ಅವನಿಗೆ.

ಈ ವಿಚಾರ ಗೊತ್ತಿದ್ದ ಅನ್ನಪೂರ್ಣಮ್ಮ ಸಂಜೆ ಆತನಿಗೆ ಚಹಾನೊಂದಿಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ಅದನ್ನು ಆತ ಚೂರು ತಿಂದು ಉಳಿದುದನ್ನು ಸ್ವೆಟ್ಟರ್ ನೊಳಗೆ ತುರುಕುತ್ತಿದ್ದ.

‘ವೆಂಕಟ, ಗೌಡ್ರು ಹೇಳಿದ್ದಕ್ಕೆ ಬೇಜಾರ್ ಮಾಡ್ಬೇಡ್ವೋ…’ ಅನ್ನಪೂರ್ಣಮ್ಮ ಹೇಳಿದಾಗ, ವೆಂಕಟ ಪ್ರಶ್ನಾರ್ಥಕವಾಗಿ ನೋಡಿದ.

‘ಮಕ್ಕಳಿಲ್ಲದ ಸಂಕಟ ಅವರಿಗಿದೆ ವೆಂಕಟ. ಈ ಆಸ್ತಿಗೆಲ್ಲ ವಾರಸ್ದಾರ ಇಲ್ಲ ನೋಡು…ಅದ್ಕೆ ಹಾಗಾಡ್ತಾರೆ, ಅವ್ರ ಹಾಗೂ ಸೇವಂತಿ ವಿಷ್ಯ ಹೊಸದಲ್ಲ ನಂಗೆ. ಆ ವಿಚಾರ ಊರೆಲ್ಲ ವಾಸನೆ ಹೊಡಿವಾಗ ನನ್ನ ಮೂಗಿಗೆ ಬಡ್ದಿಲ್ವಾ ಹೇಳು? ಆದ್ರೆ, ಈ ವಿಚಾರದಲ್ಲಿ ನೀ ಹೆಂಡ್ತಿನಾ ಸಾಯ್ಸಿದ್ದೀಯಾ ಅಂದಿದ್ದು ನಂಗೆ ನೋವಾಯ್ತ್ ವೆಂಕಟ…ನಿಂಗು ನೋವಾಗಿರುತ್ತೆಂತ ಗೊತ್ತು…ಕ್ಷಮಿಸಪ್ಪ…’ ಎಂದ ಅನ್ನಪೂರ್ಣಮ್ಮರ ಕಂಡು ವೆಂಕಟ ಕೈ ಮುಗಿದು ಬಿಟ್ಟ. ‘ಅವ್ವ’ ಎಂದವನ ಕಣ್ತುಂಬಿ ಬಂದವು. ಅಷ್ಟೆ ವೆಂಕಟ ಹೆಚ್ಚು ಮಾತಾಡಲಿಲ್ಲ…ಅಥವಾ ಅವನಿಗೆ ಮಾತಾಡಲು ಬರಲ್ಲವೋ ಗೊತ್ತಿಲ್ಲ. ಅಲ್ಲಿಗೆ ಆ ಭಾರವಾದ ಎರಡು ಹೃದಯಗಳ ಮಾತು ಮುಕ್ತಾಯಗೊಂಡಿತು.

ವೆಂಕಟ ನಿಜವಾಗ್ಲೂ ಪತ್ನಿಯನ್ನು ಸಾಯಿಸಿದ್ನಾ?  ಹೀಗೆ ಪ್ರಶ್ನೆ ಮಾಡುವವರಿಲ್ಲ ಆ ಊರಲ್ಲಿ. ಪ್ರಪಂಚನೇ ಹಾಗೆ, ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಸಿಕ್ಕಿಸಿ ಹಾರಿಸಿ ಬಿಡುತ್ತದೆ. ಹಿಡಿದು ಬಚ್ಚಿಟ್ಟೋ ಅಥವಾ ಅದಕ್ಕೆ ಸತ್ಯದ ಲೇಪ ಹಾಕಿ ಹಾರಿಸಲ್ಲ.

ಆದರೆ, ವೆಂಕಟನ ಪತ್ನಿಯನ್ನು ಆ ಊರಲ್ಲಿ ಯಾರೂ ನೋಡಿಲ್ಲ. ಅದು ಪಕ್ಕದೂರಿನ ಗಾಳಿಯಲ್ಲಿ ಬಂದ ಸುದ್ದಿ. ವೆಂಕಟ ಇದ್ದಿದ್ದು ಪಕ್ಕದೂರಿನ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲಿ ಹೆಂಡತಿಯೊಂದಿಗೆ  ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ. ಆಗ ವೆಂಕಟನಿಗೆ ಕುಡಿಯುವ ಅಭ್ಯಾಸವಿತ್ತು, ಚಟವಿರಲಿಲ್ಲ. ಯಾರಾದರೂ ಸಿಕ್ಕರೆ ಬಾಯ್ತುಂಬಾ ಮಾತಾಡುತ್ತಿದ್ದ. ಪರಿಚಯಸ್ಥರೇ ಆಗಬೇಕಾಗಿಲ್ಲ.  ಅವನ ಹೆಂಡತಿ ಹೊರಗೆ ಕಾಣಿಸಿಕೊಳ್ಳುತ್ತಿದ್ದುದು ಬಹಳ ಕಮ್ಮಿ. ಅಪರೂಪವೆಂಬಂತೆ ಇಬ್ಬರೂ ಸಂತೆಯಲ್ಲಿ ದರ್ಶನ ಕೊಡುತ್ತಿದ್ದರಷ್ಟೆ. ವೆಂಕಟನ ಹೆಂಡತಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮಾತು ಕಮ್ಮಿ. ಎದುರು ಸಿಕ್ಕವರು ಮುಗುಳ್ನಕ್ಕರೆ ತಣ್ಣಗೊಂದು ನಸು ನಗೆ ಬೀರುತ್ತಿದ್ದಳು.

ವೆಂಕಟ ಹೆಂಡತಿಯೊಂದಿಗೆ ಜಗಳವಾಡುವುದನ್ನು ಯಾರೂ ನೋಡಿರಲಿಲ್ಲ. 5 ವರ್ಷದ ಮದುವೆಯ ಬಾಂಧವ್ಯ ಅದು. ಮಕ್ಕಳಿಲ್ಲದ ಕೊರಗು ಅವರಿಗಿತ್ತೋ ಗೊತ್ತಿಲ್ಲ. ಆದರೆ, ಊರಿನವರಿಗೆ ಆ ಚಿಂತೆ ಇತ್ತು. ಸಿಕ್ಕಾಗೆಲ್ಲ, ಏನ್ ಮಾರಾಯ, ಹೆಂಡ್ತಿ ಬಸುರಿ ಆಗಿಲ್ವೆ…ಟೆಸ್ಟ್ ಮಾಡಿಸ್ಬಾರ್ದೆ? ಏನಮ್ಮ ಏನಾರ ವಿಶೇಷ ಇತ್ತೆ? ಎಂದು ಕೇಳಿ ಕೊರತೆಯನ್ನು ಕೆದಕುತ್ತಿದ್ದರು. ವೆಂಕಟ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ…ಆ ಹೆಣ್ಣು ಜೀವಕ್ಕೆ ಎಷ್ಟು ನೋವಾಗುತ್ತಿತ್ತೋ ದೇವರೇ ಬಲ್ಲ.

ಅಂದು  ಇದ್ದಕ್ಕಿದ್ದಂತೆ ವೆಂಕಟನ ಹೆಂಡತಿ ಮೃತಪಟ್ಟಳೆಂಬ ಸುದ್ದಿ ಹರಡಿತು. ಅವಳ ಶವದ ಬಳಿ ವಿಷದ ಬಾಟಲಿ ಬಿದ್ದಿತ್ತು. ವೆಂಕಟನೇ ವಿಷ ಕುಡಿಸಿದ ಎಂದರು ಜನ. ಮೌನಿಯಾಗಿ ಹೋದ ವೆಂಕಟ…ಮಕ್ಕಳಿಲ್ಲ ಎಂದು ಮಾತಿನಲ್ಲೇ ಚುಚ್ಚಿ‌ ಕೊಂದವರು ಜನರಲ್ಲವೇ…!?

ಆಮೇಲೆ ವೆಂಕಟ ಆ ಊರಿಗೆ ವಿದಾಯ ಹೇಳಿದ್ದ. ಆ ಒಂದು ಸ್ಟೆಟ್ಟರ್ …ಕಬ್ಬಿಣದ ಪೆಟ್ಟಿಗೆಯೊಂದಿಗೆ. ಈ ಊರಿಗೆ ಬಂದವ ನಿತ್ಯ ಆ ಸ್ಟೆಟ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ. ವೆಂಕಟ ‘ಸ್ವೆಟ್ಟರ್ ಒಗಿಯಲ್ವೇ’ ಎಂದು ಜನ ಆಡಿಕೊಂಡರೂ ಅವನು ಕಿವಿಗೆ ಹಾಕಿಕೊಳ್ಳದವನಂತಿರುತ್ತಿದ್ದ. ಕುಡಿಯುವ ಹವ್ಯಾಸ ಬಿಟ್ಟಿದ್ದ.

*

ಅಂದು ವೆಂಕಟ ಅನ್ನಪೂರ್ಣಮ್ಮ ಕೊಟ್ಟ ಇಡ್ಲಿಗಳಲ್ಲಿ ಎರಡನ್ನು  ಸ್ವೆಟ್ಟರ್ ನ ಜೇಬಿಗಿಳಿಸಿದ. ಉಳಿದವನ್ನು ಎಂದಿನಂತೆ ಹಿಚುಕಿ ತಿಂದು ಮುಗಿಸಿದ್ದ. ಚಹಾವನ್ನು ಕುಡಿದು. ತಟ್ಟೆ ತೊಳೆದಿಟ್ಟ. ಸೌದೆ ಒಡೆಯುವ ಕೆಲಸ ಅಂದಿಗೆ ಪೂರ್ಣಗೊಂಡಿತ್ತು. ಗೌಡರ ಆಜ್ಞೆಯಂತೆ ಮಳೆಗಾಲ ಶುರು ಆಗುವ ಮುನ್ನ ವೆಂಕಟ ಕೆಲಸ ಮುಗಿಸಿದ್ದ. ಸಂಜೆ ಮನೆ ಹೋಕ್ಕಿದ್ದ.

**

‘ಸ್ಟೆಟ್ಟರ್ ವೆಂಕಟ ಕೆಲಸಕ್ಕೆ ಬಂದಿಲ್ಲ’, ‘ಊರು ಬಿಟ್ನಾ ಏನ್ ಕಥೆ’ ಆಳಿನವರ ಮಾತುಗಳು ಕಿವಿಗೆ ಬಿದ್ದು ಅನ್ನಪೂರ್ಣಮ್ಮ ಗಾಬರಿಗೆ ಬಿದ್ದರು. ‘ನಡಿ, ಅವ್ನ ಮನೆ ಕಡೆ’ ಗೌಡ್ರು ಒಬ್ಬ ಆಳಿನ ಜತೆ ಹೊರಡುತ್ತಿದ್ದಂತೆ, ಅನ್ನಪೂರ್ಣಮ್ಮ ಹೊರಗೋಡಿ ಬಂದು ಚಪ್ಪಲಿ ಹಾಕಿಕೊಂಡರು. ತಿರುಗಿ ನೋಡಿದ ಗೌಡ್ರು, ಬೇಡ ಎನ್ನಲಿಲ್ಲ.

ಬಣ್ಣ ಮಾಸಿದ ಆ ಸಿಮೆಂಟ್ ಶೀಟಿನ ಮನೆಯ ಬಾಗಿಲು ಸ್ವಲ್ಪ ತೆರೆದಿತ್ತು. ಗೌಡರು ಬಾಯ್ದೆರೆಯುವ ಮುಂಚೆಯೇ ಅನ್ನಪೂರ್ಣಮ್ಮ, ‘ವೆಂಕಟು…ವೆಂಕಟು…’ ಎಂದು ಕರೆದರು. ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ. ಚಾಪೆಯ ಮೇಲೆ ವೆಂಕಟ ಮಲಗಿದ್ದ. ಗೌಡ್ರು ಆಳಿಗೆ ಸಂಜ್ಞೆ ಮಾಡಿದರು.

‘ವೆಂಕಟ’ ಎಂದು ಆತ ಎಬ್ಬಿಸಿದ. ಆತ ಹೋ ಎಂದು ಉದ್ಗರಿಸಿ…’ಹೋಗ್ಬಿಟ್ಟವ್ನೆ’ ಎಂದ. ಅನ್ನಪೂರ್ಣಮ್ಮ ಗೋಡೆಗೊರಗಿ ಬಿಕ್ಕಳಿಸಿದರು. ಗೌಡ್ರು ಹೊರನಡೆದರು.

ಪಕ್ಕದಲ್ಲಿ ತೆರೆದಿಟ್ಟಿದ್ದ ಪೆಟ್ಟಿಗೆ…ಅದರೊಳಗಿದ್ದ ಹಸಿರು ಬಳೆ…ಮೂಗುತಿ…ತಾಳಿ ಸರ…ಉಣ್ಣೆಯ ದಾರ, ಹೆಣಿಗೆ ದಾರಗಳು…ಅರ್ಧ ಹೊಲಿದಿದ್ದ ಪುಟ್ಟ ಸ್ವೆಟ್ಟರ್…ಕಣ್ಣೀರು ತುಂಬಿದ್ದ ಅನ್ನಪೂರ್ಣಮ್ಮನ ಕಣ್ಣಿಗೆ ಅನುರಾಗದ ಸೊಗಡಾಗಿ ಕಂಡವು. ತಣ್ಣಗೆ ಮಲಗಿದ್ದ ವೆಂಕಟನತ್ತ ಕಣ್ಣು ಹೊರಳಿಸಿದರು. ವೆಂಕಟ ಅದೇ ಹಳೇ ಪಂಚೆ, ಶರ್ಟ್ ತೊಟ್ಟಿದ್ದ….ಅವನ ಸ್ವೆಟ್ಟರ್ ಎಲ್ಲಿ? ಅವರ ಕಣ್ಣು ಹೊರನಡೆದವು. ತಂತಿ ಮೇಲೆ ಅರ್ಧ ಒಣಗಿತ್ತು…ವೆಂಕಟ  ಅಂದು ಸ್ಟೆಟ್ಟರ್ ಒಗೆದಿದ್ದ.

Continue Reading

ಅಂತರಂಗ

ಮಣ್ಣಿನ ಬದುಕಿನಿಂದ ಸಾಹಿತ್ಯದ ದಡದವರೆಗೆ: ಅಮರೇಶ ನುಗಡೋಣಿಯವರ ಬದುಕು–ಬರಹ

Published

on

~ಡಾ. ಗುರುಸಿದ್ಧಯ್ಯಾ ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಿ. ಬಿ. ಖೇಡಗಿ ಮಹಾವಿದ್ಯಾಲಯ, ಅಕ್ಕಲಕೋಟ ಮಹಾರಾಷ್ಟ್ರ.

 

ಬದುಕಿನ ಅನುಭವಗಳನ್ನು ಸಾಹಿತ್ಯದ ಸೃಜನಶೀಲ ಶಕ್ತಿಯನ್ನಾಗಿ ರೂಪಿಸಿಕೊಂಡ ಕಥೆಗಾರ, ಸಂಶೋಧಕ ಮತ್ತು ವಿದ್ವಾಂಸ

ಪ್ರಸ್ತಾವನೆ

ಸಾಹಿತ್ಯವೆಂಬುದು ಬದುಕಿನ ಪ್ರತಿಬಿಂಬ ಮಾತ್ರವಲ್ಲ; ಅದು ಬದುಕಿನ ಒಳಸುಳಿಗಳನ್ನು ಅರಿತು, ಅನುಭವಗಳ ಆಳವನ್ನು ಶೋಧಿಸಿ, ಸಮಾಜದ ಅಂತರಂಗವನ್ನು ಅನಾವರಣಗೊಳಿಸುವ ಸೃಜನಶೀಲ ಅಭಿವ್ಯಕ್ತಿ. ಒಬ್ಬ ಲೇಖಕ ತನ್ನ ಸುತ್ತಲಿನ ಸಮಾಜವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾನೆ, ಅಲ್ಲಿನ ಜನರ ನೋವು, ಸಂಕಟ, ಸಂಘರ್ಷ ಮತ್ತು ಸಂತೋಷಗಳನ್ನು ಎಷ್ಟು ಆಳವಾಗಿ ಅನುಭವಿಸುತ್ತಾನೆ ಎಂಬುದರ ಮೇಲೆ ಆತನ ಸಾಹಿತ್ಯದ ಸ್ವರೂಪ ನಿರ್ಧಾರವಾಗುತ್ತದೆ. ಈ ದೃಷ್ಟಿಯಿಂದ ಸಮಕಾಲೀನ ಕನ್ನಡ ಕಥಾಸಾಹಿತ್ಯದಲ್ಲಿ ಅಮರೇಶ ನುಗಡೋಣಿಯವರು ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾರೆ. ತಮ್ಮ ಬದುಕಿನ ಅನುಭವಗಳನ್ನು ಸಾಹಿತ್ಯದ ವಸ್ತುವನ್ನಾಗಿಸಿಕೊಂಡು, ಗ್ರಾಮೀಣ ಸಮಾಜದ ಸಂಕೀರ್ಣ ವಾಸ್ತವಗಳನ್ನು ಕಥನದ ಮೂಲಕ ಕಟ್ಟಿಕೊಟ್ಟಿರುವ ಅವರು ಕಥೆಗಾರ, ಕಾದಂಬರಿಕಾರ, ಸಂಶೋಧಕ, ವಿಮರ್ಶಕ, ಅಧ್ಯಾಪಕ ಮತ್ತು ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಅಮರೇಶ ನುಗಡೋಣಿಯವರ ಸಾಹಿತ್ಯವನ್ನು ಓದುವುದು ಎಂದರೆ ಕಲ್ಯಾಣ ಕರ್ನಾಟಕದ ಗ್ರಾಮೀಣ ಬದುಕಿನ ಒಳಜಗತ್ತನ್ನು ಪ್ರವೇಶಿಸಿದಂತೆ. ಅಲ್ಲಿನ ಮಣ್ಣಿನ ವಾಸನೆ, ಜನರ ಮಾತಿನ ಲಯ, ಸಂಬಂಧಗಳ ಸಂಕೀರ್ಣತೆ, ಜಾತಿ ವ್ಯವಸ್ಥೆಯ ಒತ್ತಡ, ಬಡತನದ ಸಂಕಟ, ಸಾಮಾಜಿಕ ಅಸಮಾನತೆ ಮತ್ತು ಬದಲಾಗುತ್ತಿರುವ ಕಾಲದ ತಲ್ಲಣಗಳು ಅವರ ಕಥೆಗಳಲ್ಲಿ ಜೀವಂತವಾಗಿ ಕಾಣಿಸಿಕೊಳ್ಳುತ್ತವೆ. ಅವರ ಕಥನದಲ್ಲಿ ಗ್ರಾಮೀಣ ಬದುಕು ಕೇವಲ ಸುಂದರವಾದ ಹಿನ್ನೆಲೆಯಲ್ಲ; ಅದು ಅನೇಕ ಸಂಘರ್ಷಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಜೀವಂತ ಸಾಮಾಜಿಕ ಜಗತ್ತು. ಆ ಜಗತ್ತಿನ ಅನುಭವಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿರುವುದೇ ನುಗಡೋಣಿಯವರ ಬರವಣಿಗೆಯ ವಿಶಿಷ್ಟತೆ.

ಜನ್ಮಭೂಮಿ ಮತ್ತು ಬದುಕಿನ ರೂಪುಗೊಳ್ಳುವಿಕೆ

1960ರ ಜೂನ್ 2ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನುಗಡೋಣಿ ಗ್ರಾಮದಲ್ಲಿ ಅಮರೇಶ ನುಗಡೋಣಿಯವರು ಜನಿಸಿದರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಅವರ ಬಾಲ್ಯವು ಸಹಜವಾಗಿಯೇ ಕೃಷಿ, ರೈತಾಪಿ ಬದುಕು, ಕುಟುಂಬ ಸಂಬಂಧಗಳು ಮತ್ತು ಗ್ರಾಮೀಣ ಸಾಮಾಜಿಕ ವ್ಯವಸ್ಥೆಯೊಂದಿಗೆ ಬೆಸೆದುಕೊಂಡಿತ್ತು. ಅವರ ಬದುಕಿನ ಆರಂಭಿಕ ಅನುಭವಗಳೇ ಮುಂದೆ ಸಾಹಿತ್ಯದ ವಿಶಾಲ ಅನುಭವಲೋಕವಾಗಿ ವಿಸ್ತರಿಸಿದವು.

ಹಳ್ಳಿ ಎನ್ನುವುದು ಕೇವಲ ಭೌಗೋಳಿಕ ನೆಲೆಯಲ್ಲ. ಅದು ಮನುಷ್ಯನ ಬದುಕಿನ ಮೊದಲ ಪಾಠಶಾಲೆ. ಅಲ್ಲಿನ ಜನರ ನಡೆನುಡಿ, ಭಾಷೆ, ಸಂಪ್ರದಾಯ, ಆಚರಣೆ, ನಂಬಿಕೆ, ವೃತ್ತಿ ಮತ್ತು ಪರಸ್ಪರ ಸಂಬಂಧಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ನುಗಡೋಣಿಯವರ ಬದುಕಿನಲ್ಲಿಯೂ ಈ ಗ್ರಾಮೀಣ ಪರಿಸರ ಮಹತ್ವದ ಪಾತ್ರ ವಹಿಸಿದೆ. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಅನುಭವ, ಹೊಲಗದ್ದೆಗಳ ಒಡನಾಟ, ಶ್ರಮಜೀವಿಗಳ ಬದುಕಿನ ಪರಿಚಯ ಮತ್ತು ಹಳ್ಳಿಯ ಜನರೊಂದಿಗೆ ಬೆಳೆದ ಆತ್ಮೀಯ ಸಂಬಂಧಗಳು ಅವರ ಸಾಹಿತ್ಯಿಕ ಸಂವೇದನೆಯನ್ನು ರೂಪಿಸಿದವು.

ಬಾಲ್ಯ ಮತ್ತು ಯೌವನದ ದಿನಗಳಲ್ಲಿ ಕಂಡ ಗ್ರಾಮೀಣ ಬದುಕಿನ ವೈವಿಧ್ಯಮಯ ಮುಖಗಳು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು. ಸಾಮಾನ್ಯವಾಗಿ ಇತರರು ಗಮನಿಸದೆ ಹಾದುಹೋಗುವ ಘಟನೆಗಳಲ್ಲಿಯೂ ಕಥೆಯ ವಸ್ತುವನ್ನು ಗುರುತಿಸುವ ಸೂಕ್ಷ್ಮ ದೃಷ್ಟಿ ಅವರಲ್ಲಿ ಬೆಳೆಯಿತು. ಮನುಷ್ಯನ ಬದುಕಿನಲ್ಲಿ ನಡೆಯುವ ಸಣ್ಣ ಘಟನೆಗಳ ಹಿಂದಿರುವ ದೊಡ್ಡ ಸಾಮಾಜಿಕ ಸತ್ಯಗಳನ್ನು ಅರಿಯುವ ಸಾಮರ್ಥ್ಯ ಅವರ ಕಥನದ ಪ್ರಮುಖ ಶಕ್ತಿಯಾಗಿದೆ.

ಕುವೆಂಪು ಅವರ ಕಾದಂಬರಿಗಳನ್ನು ಓದಿದ ಅನುಭವವು ಅವರ ಸಾಹಿತ್ಯಿಕ ಆಸಕ್ತಿಗೆ ಪ್ರೇರಣೆ ನೀಡಿದ ಅಂಶಗಳಲ್ಲಿ ಒಂದಾಗಿದೆ. ಮನುಷ್ಯನ ಬದುಕು, ಸಮಾಜ ಮತ್ತು ಪ್ರಕೃತಿಯನ್ನು ಸಾಹಿತ್ಯದ ಮೂಲಕ ಹೇಗೆ ವಿಶಾಲವಾಗಿ ಅಭಿವ್ಯಕ್ತಿಸಬಹುದು ಎಂಬ ಅರಿವು ಅವರಿಗೆ ಓದಿನ ಮೂಲಕ ದೊರೆಯಿತು. ಓದು, ಅನುಭವ ಮತ್ತು ಸುತ್ತಲಿನ ಬದುಕಿನ ನಿರಂತರ ಅವಲೋಕನ ಅವರ ಸೃಜನಶೀಲ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದವು.

ಸಾಹಿತ್ಯದತ್ತ ಒಲವು ಮತ್ತು ಸೃಜನಶೀಲತೆಯ ಆರಂಭ

ಒಬ್ಬ ಲೇಖಕನ ಸೃಜನಶೀಲತೆಯ ಹಿಂದೆ ಅನೇಕ ಅನುಭವಗಳು, ಓದು, ಸಾಮಾಜಿಕ ಪರಿಸರ ಮತ್ತು ವೈಚಾರಿಕ ಪ್ರೇರಣೆಗಳು ಕೆಲಸ ಮಾಡುತ್ತವೆ. ಅಮರೇಶ ನುಗಡೋಣಿಯವರ ಸಾಹಿತ್ಯಿಕ ವ್ಯಕ್ತಿತ್ವವೂ ಇಂತಹ ಬಹುಮುಖ ಪ್ರೇರಣೆಗಳಿಂದ ರೂಪುಗೊಂಡಿದೆ. ತಮ್ಮ ಸುತ್ತಲಿನ ಜನರ ಬದುಕು, ಅವರ ಸಂಕಟಗಳು, ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮಾನತೆಗಳು ಮತ್ತು ಮಾನವ ಸಂಬಂಧಗಳ ಒಳಸುಳಿಗಳನ್ನು ಗಮನಿಸುತ್ತಾ ಅವರು ಕಥೆ ಬರೆಯಲು ಆರಂಭಿಸಿದರು.

ಅವರ ಸಾಹಿತ್ಯಿಕ ಪ್ರವೇಶವು ಕನ್ನಡದಲ್ಲಿ ನವ್ಯ ಸಾಹಿತ್ಯದ ನಂತರದ ಸಾಮಾಜಿಕ ಮತ್ತು ವೈಚಾರಿಕ ಚಳವಳಿಗಳು ಪ್ರಭಾವಶಾಲಿಯಾಗಿದ್ದ ಕಾಲಘಟ್ಟದಲ್ಲಿ ನಡೆಯಿತು. ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ಮತ್ತು ಪ್ರಗತಿಪರ ಸಾಹಿತ್ಯಿಕ ಚಿಂತನೆಗಳು ಕನ್ನಡದ ಅಭಿವ್ಯಕ್ತಿ ಕ್ಷೇತ್ರವನ್ನು ವಿಸ್ತರಿಸುತ್ತಿದ್ದವು. ಸಮಾಜದ ಅಂಚಿನಲ್ಲಿರುವ ಜನರ ಅನುಭವಗಳು ಸಾಹಿತ್ಯದ ಕೇಂದ್ರಕ್ಕೆ ಬರುತ್ತಿದ್ದವು. ಈ ಬದಲಾವಣೆಗಳ ನಡುವೆ ನುಗಡೋಣಿಯವರು ತಮ್ಮ ಪ್ರಾದೇಶಿಕ ಅನುಭವಗಳ ಆಧಾರದಲ್ಲಿ ವಿಶಿಷ್ಟವಾದ ಕಥನ ಪ್ರಪಂಚವನ್ನು ಕಟ್ಟಿಕೊಂಡರು.

1991ರಲ್ಲಿ ಪ್ರಕಟವಾದ ಅವರ ಮೊದಲ ಕಥಾಸಂಕಲನ ‘ಮಣ್ಣು ಸೇರಿತು ಬೀಜ’ ಕನ್ನಡ ಕಥಾಸಾಹಿತ್ಯದಲ್ಲಿ ಅವರ ಪ್ರವೇಶವನ್ನು ಗುರುತಿಸಿತು. ಈ ಸಂಕಲನವು ಅವರ ಸೃಜನಶೀಲ ವ್ಯಕ್ತಿತ್ವದ ಆರಂಭಿಕ ಹೆಜ್ಜೆಯಷ್ಟೇ ಅಲ್ಲದೆ ಮುಂದಿನ ಸಾಹಿತ್ಯಿಕ ಬೆಳವಣಿಗೆಗೆ ಭದ್ರವಾದ ಅಡಿಪಾಯವಾಯಿತು. ಈ ಕೃತಿಗೆ ದೊರೆತ ಸಾಹಿತ್ಯಿಕ ಮನ್ನಣೆ ಅವರ ಕಥನ ಪ್ರತಿಭೆಯನ್ನು ಗುರುತಿಸುವಂತಾಯಿತು.

ಮಣ್ಣಿನ ಸಂಬಂಧ ಮತ್ತು ಕಥನದ ಜೀವಂತಿಕೆ

ನುಗಡೋಣಿಯವರ ಕಥಾಸಾಹಿತ್ಯದಲ್ಲಿ ಮಣ್ಣು ಒಂದು ಮಹತ್ವದ ಸಾಂಸ್ಕೃತಿಕ ಮತ್ತು ಅನುಭವಾತ್ಮಕ ಸಂಕೇತವಾಗಿ ಕಾಣಿಸುತ್ತದೆ. ಮಣ್ಣು ಎಂದರೆ ಕೇವಲ ಭೂಮಿ ಅಲ್ಲ; ಅದು ಮನುಷ್ಯನ ಬದುಕಿನ ಆಧಾರ, ಶ್ರಮದ ನೆಲೆ, ನೆನಪುಗಳ ಜಗತ್ತು ಮತ್ತು ಅಸ್ತಿತ್ವದ ಗುರುತು. ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಕೃಷಿ ಸಂಸ್ಕೃತಿ, ದುಡಿಮೆ, ಹಸಿವು, ಆಸೆ, ನಿರೀಕ್ಷೆ ಮತ್ತು ಬದುಕಿನ ಹೋರಾಟಗಳು ಅವರ ಕಥನದಲ್ಲಿ ವಿವಿಧ ರೂಪಗಳಲ್ಲಿ ಅಭಿವ್ಯಕ್ತವಾಗುತ್ತವೆ.

‘ಮಣ್ಣು ಸೇರಿತು ಬೀಜ’ ಎಂಬ ಶೀರ್ಷಿಕೆಯಲ್ಲಿಯೇ ಒಂದು ಸೃಜನಶೀಲ ಆಶಯ ಅಡಕವಾಗಿದೆ. ಬೀಜ ಮಣ್ಣಿನಲ್ಲಿ ಸೇರಿದಾಗ ಹೊಸ ಜೀವದ ಸಾಧ್ಯತೆ ಹುಟ್ಟುತ್ತದೆ. ಹಾಗೆಯೇ ಬದುಕಿನ ಅನುಭವಗಳು ಲೇಖಕನ ಮನಸ್ಸಿನಲ್ಲಿ ಬಿತ್ತಲ್ಪಟ್ಟಾಗ ಅವು ಕಥೆಗಳಾಗಿ ಮೊಳೆಯುತ್ತವೆ. ಈ ಅರ್ಥದಲ್ಲಿ ನುಗಡೋಣಿಯವರ ಸಾಹಿತ್ಯವು ಮಣ್ಣಿನ ಬದುಕಿನಿಂದ ಮೊಳಕೆಯೊಡೆದ ಸೃಜನಶೀಲ ಅಭಿವ್ಯಕ್ತಿಯಾಗಿದೆ.

ಅವರ ಕಥೆಗಳಲ್ಲಿ ರೈತ, ಕೃಷಿ ಕಾರ್ಮಿಕ, ಗ್ರಾಮೀಣ ಮಹಿಳೆ, ದಲಿತ ಸಮುದಾಯ, ಸಾಮಾನ್ಯ ಜನರು ಮತ್ತು ಸಾಮಾಜಿಕವಾಗಿ ದುರ್ಬಲ ಸ್ಥಿತಿಯಲ್ಲಿರುವ ವ್ಯಕ್ತಿಗಳು ತಮ್ಮದೇ ಆದ ಅಸ್ತಿತ್ವದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರು ಕೇವಲ ಕಥೆಯ ಪಾತ್ರಗಳಲ್ಲ; ಒಂದು ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯ ಅನುಭವಗಳನ್ನು ಹೊತ್ತು ನಿಲ್ಲುವ ಜೀವಂತ ಪ್ರತಿನಿಧಿಗಳು.

ತಮಂಧದ ಕೇಡು: ಸಾಮಾಜಿಕ ಸಂಬಂಧಗಳ ಅಂತರಂಗ

ಅಮರೇಶ ನುಗಡೋಣಿಯವರ ಕಥನ ಪ್ರತಿಭೆಯನ್ನು ಗುರುತಿಸುವಲ್ಲಿ **’ತಮಂಧದ ಕೇಡು’** ಕಥಾಸಂಕಲನಕ್ಕೆ ವಿಶೇಷ ಮಹತ್ವವಿದೆ. ಈ ಕೃತಿಯ ಶೀರ್ಷಿಕೆಯ ಕಥೆಯು ಗ್ರಾಮೀಣ ಸಮಾಜದಲ್ಲಿನ ಜಾತಿ ಸಂಬಂಧಗಳು, ಜೀತದಾಳು ಪದ್ಧತಿ, ಅಧಿಕಾರ ಮತ್ತು ಮಾನವೀಯ ಸಂಬಂಧಗಳ ನಡುವಿನ ಸಂಘರ್ಷವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತದೆ.

ದುರುಗ ಮತ್ತು ಶಾಂತಗೌಡರ ನಡುವಿನ ಸಂಬಂಧ ಈ ಕಥೆಯ ಪ್ರಮುಖ ಕೇಂದ್ರವಾಗಿದೆ. ದುರುಗನು ಶಾಂತಗೌಡರ ಮನೆಯ ಜೀತದಾಳು. ಯಜಮಾನನ ಮನೆಯೊಂದಿಗೆ ಅವನ ಬದುಕು ಬಹುಕಾಲದಿಂದ ಬೆಸೆದುಕೊಂಡಿದೆ. ಈ ಸಂಬಂಧದಲ್ಲಿ ಆತ್ಮೀಯತೆ, ಅವಲಂಬನೆ ಮತ್ತು ಅಧೀನತೆ ಒಟ್ಟಿಗೆ ಇವೆ. ಆದರೆ ದುರುಗನ ಮಗ ಚೆನ್ನ ಮತ್ತು ಗೌಡರ ಮಗಳು ಅಕ್ಕಮ್ಮನ ನಡುವಿನ ವಿವಾಹದ ಪ್ರಶ್ನೆ ಎದುರಾದಾಗ ಸಾಮಾಜಿಕ ವ್ಯವಸ್ಥೆಯ ನಿಜಸ್ವರೂಪ ಅನಾವರಣಗೊಳ್ಳುತ್ತದೆ.

ವೈಯಕ್ತಿಕ ಬದುಕಿನಲ್ಲಿ ಕಾಣಿಸುವ ಆತ್ಮೀಯತೆ ಮತ್ತು ಸಾಮಾಜಿಕ ಬದುಕಿನಲ್ಲಿ ಅಸ್ತಿತ್ವದಲ್ಲಿರುವ ಜಾತಿಯ ಅಂತರ ಒಂದೇ ಅಲ್ಲ ಎಂಬ ಕಠೋರ ಸತ್ಯವನ್ನು ಲೇಖಕರು ಇಲ್ಲಿ ತೆರೆದಿಡುತ್ತಾರೆ. ಒಬ್ಬ ವ್ಯಕ್ತಿಯೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರೂ ಆತನನ್ನು ಸಮಾನ ಮನುಷ್ಯನೆಂದು ಒಪ್ಪಿಕೊಳ್ಳಲು ಸಮಾಜದ ಜಾತಿ ಮನೋಭಾವ ಅಡ್ಡಿಯಾಗುತ್ತದೆ.

ಕಥೆಯಲ್ಲಿನ ತುಂಗಭದ್ರಾ ನದಿಯ ಪ್ರಸಂಗವೂ ವಿಶೇಷ ಅರ್ಥವನ್ನು ಪಡೆದುಕೊಳ್ಳುತ್ತದೆ. ಹಿಂದೆ ದುರುಗ ಶಾಂತಗೌಡರನ್ನು ತನ್ನ ಹೆಗಲ ಮೇಲೆ ಹೊತ್ತು ನದಿಯನ್ನು ದಾಟಿಸುತ್ತಿದ್ದ. ಆದರೆ ಕಾಲಕ್ರಮೇಣ ಅವರ ನಡುವಿನ ಸಂಬಂಧದಲ್ಲಿ ಉಂಟಾಗುವ ಬದಲಾವಣೆ ಸಾಮಾಜಿಕ ಅಂತರದ ರೂಪಕವಾಗಿ ಕಾಣಿಸುತ್ತದೆ. ನದಿಯು ಕೇವಲ ಭೌಗೋಳಿಕ ಗಡಿಯಲ್ಲ; ಅದು ಜಾತಿ, ಅಧಿಕಾರ ಮತ್ತು ಮಾನವ ಸಂಬಂಧಗಳ ನಡುವೆ ನಿರ್ಮಾಣವಾಗಿರುವ ಅಂತರದ ಸಂಕೇತವೂ ಆಗಿದೆ.

ಈ ಕಥೆಯ ಮೂಲಕ ನುಗಡೋಣಿಯವರು ಗ್ರಾಮೀಣ ಸಮಾಜದ ಒಳಗಿರುವ ವೈರುಧ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಮನುಷ್ಯನ ನಡುವಿನ ಸಂಬಂಧಗಳಿಗೆ ಜಾತಿ ವ್ಯವಸ್ಥೆ ಹೇಗೆ ಗಡಿಗಳನ್ನು ನಿರ್ಮಿಸುತ್ತದೆ ಎಂಬುದನ್ನು ಓದುಗರ ಚಿಂತನೆಗೆ ಒಡ್ಡಿದ್ದಾರೆ.

ಸವಾರಿ: ಕಥೆಯಿಂದ ಚಲನಚಿತ್ರದವರೆಗೆ

‘ಸವಾರಿ’ ಅಮರೇಶ ನುಗಡೋಣಿಯವರ ಸಾಹಿತ್ಯಿಕ ಬದುಕಿನ ಗಮನಾರ್ಹ ಕಥಾಸಂಕಲನವಾಗಿದೆ. ಈ ಸಂಕಲನದ ಶೀರ್ಷಿಕೆಯ ಕಥೆಯು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಗಮನ ಸೆಳೆದಿದ್ದು, ಅದರ ಆಧಾರದಲ್ಲಿ ‘ಕನಸೆಂಬೊ ಕುದುರೆ’ ಚಲನಚಿತ್ರ ರೂಪುಗೊಂಡಿದೆ.

ಒಂದು ಸಾಹಿತ್ಯ ಕೃತಿ ಚಲನಚಿತ್ರವಾಗಿ ರೂಪುಗೊಳ್ಳುವುದು ಅದರಲ್ಲಿರುವ ಕಥನದ ದೃಶ್ಯಾತ್ಮಕತೆ ಮತ್ತು ಕಲಾತ್ಮಕ ಸಾಧ್ಯತೆಗಳನ್ನು ಸೂಚಿಸುತ್ತದೆ. ಸಾಹಿತ್ಯದಲ್ಲಿ ಲೇಖಕ ಪದಗಳ ಮೂಲಕ ಸನ್ನಿವೇಶಗಳನ್ನು ಕಟ್ಟುತ್ತಾನೆ. ಚಲನಚಿತ್ರದಲ್ಲಿ ನಿರ್ದೇಶಕ ದೃಶ್ಯ, ಧ್ವನಿ, ಬೆಳಕು, ಚಲನೆ ಮತ್ತು ಅಭಿನಯದ ಮೂಲಕ ಹೊಸ ಕಲಾತ್ಮಕ ಅನುಭವವನ್ನು ನಿರ್ಮಿಸುತ್ತಾನೆ.

ಈ ರೂಪಾಂತರವು ನುಗಡೋಣಿಯವರ ಕಥೆಗಳಲ್ಲಿರುವ ದೃಶ್ಯಾತ್ಮಕ ಶಕ್ತಿಯನ್ನು ಗುರುತಿಸುವಂತಿದೆ. ಸಾಹಿತ್ಯ ಮತ್ತು ಚಲನಚಿತ್ರಗಳ ನಡುವಿನ ಸೃಜನಶೀಲ ಸಂಬಂಧಕ್ಕೆ ಅವರ ಕಥೆ ಒಂದು ಉತ್ತಮ ಉದಾಹರಣೆಯಾಗಿದೆ.

ದಡ ಸೇರಿಸು ತಂದೆ: ರಾಷ್ಟ್ರೀಯ ಮನ್ನಣೆ ಪಡೆದ ಕಥನ ಪ್ರತಿಭೆ

ಅಮರೇಶ ನುಗಡೋಣಿಯವರ ಸಾಹಿತ್ಯಿಕ ಬದುಕಿನಲ್ಲಿ **’ದಡ ಸೇರಿಸು ತಂದೆ’ ಕಥಾಸಂಕಲನವು ಮಹತ್ವದ ಮೈಲಿಗಲ್ಲಾಗಿದೆ. ಈ ಕೃತಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಅವರ ದೀರ್ಘಕಾಲದ ಸಾಹಿತ್ಯಿಕ ಪರಿಶ್ರಮಕ್ಕೆ ದೊರೆತ ರಾಷ್ಟ್ರೀಯ ಗೌರವವಾಗಿದೆ.

ಈ ಸಂಕಲನದಲ್ಲಿ ಎಂಟು ಕಥೆಗಳಿದ್ದು, ಸಮಕಾಲೀನ ಗ್ರಾಮೀಣ ಸಮಾಜದ ವಿವಿಧ ಸಮಸ್ಯೆಗಳನ್ನು ಲೇಖಕರು ಕಥನದ ಮೂಲಕ ಅಭಿವ್ಯಕ್ತಿಸಿದ್ದಾರೆ. ಮರ್ಯಾದಾ ಹತ್ಯೆ, ಗುಂಪು ಹಿಂಸಾಚಾರ, ಸಾಮಾಜಿಕ ಅಸಮಾನತೆ, ಮಾನವ ಸಂಬಂಧಗಳ ಸಂಕೀರ್ಣತೆ ಮತ್ತು ಮೌಲ್ಯಗಳ ಕುಸಿತದಂತಹ ಸಂಗತಿಗಳು ಈ ಕೃತಿಯ ಅಧ್ಯಯನದಲ್ಲಿ ಪ್ರಮುಖವಾಗುತ್ತವೆ.

‘ದಡ ಸೇರಿಸು ತಂದೆ’ ಎಂಬ ಶೀರ್ಷಿಕೆಯೇ ಒಂದು ಭಾವನಾತ್ಮಕ ಮತ್ತು ರೂಪಕಾತ್ಮಕ ಅರ್ಥವನ್ನು ಒಳಗೊಂಡಿದೆ. ಬದುಕಿನ ಸಂಕಷ್ಟಗಳ ನಡುವೆ ದಡವನ್ನು ತಲುಪಬೇಕೆಂಬ ಹಂಬಲ, ಅಸುರಕ್ಷಿತ ಪರಿಸ್ಥಿತಿಯಲ್ಲಿ ಆಶ್ರಯವನ್ನು ಹುಡುಕುವ ಮನಸ್ಸು ಮತ್ತು ಮಾನವೀಯ ಸಂಬಂಧಗಳ ಮೂಲಕ ಬದುಕನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಈ ಶೀರ್ಷಿಕೆಯ ನೆಲೆಯಲ್ಲಿ ಗ್ರಹಿಸಬಹುದು.

ಈ ಸಂಕಲನದಲ್ಲಿ ಲೇಖಕರು ಸಮಾಜದ ಅಂಚಿನಲ್ಲಿರುವ ಮನುಷ್ಯರ ಬದುಕಿನ ತಲ್ಲಣಗಳನ್ನು ಗಮನಿಸುತ್ತಾರೆ. ಸಾಮಾಜಿಕ ವ್ಯವಸ್ಥೆಯ ಒತ್ತಡಗಳ ನಡುವೆ ವ್ಯಕ್ತಿಯ ಸ್ವಾತಂತ್ರ್ಯ, ಘನತೆ ಮತ್ತು ಅಸ್ತಿತ್ವ ಹೇಗೆ ಸಂಕಷ್ಟಕ್ಕೆ ಸಿಲುಕುತ್ತವೆ ಎಂಬುದನ್ನು ಕಥನದ ಮೂಲಕ ಪ್ರಶ್ನಿಸುತ್ತಾರೆ.

ಈ ಕೃತಿಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಅಮರೇಶ ನುಗಡೋಣಿಯವರ ವೈಯಕ್ತಿಕ ಸಾಧನೆಯ ಗೌರವ ಮಾತ್ರವಲ್ಲ; ಕಲ್ಯಾಣ ಕರ್ನಾಟಕದ ಗ್ರಾಮೀಣ ಅನುಭವಗಳು ಮತ್ತು ಕನ್ನಡದ ಸಮಕಾಲೀನ ಕಥಾಸಾಹಿತ್ಯಕ್ಕೆ ದೊರೆತ ರಾಷ್ಟ್ರೀಯ ಮನ್ನಣೆಯೂ ಆಗಿದೆ.

ಕಾದಂಬರಿ ಸಾಹಿತ್ಯದಲ್ಲಿ ನುಗಡೋಣಿಯವರು

ಕಥೆಗಾರರಾಗಿ ವಿಶಿಷ್ಟ ಗುರುತನ್ನು ಪಡೆದ ಅಮರೇಶ ನುಗಡೋಣಿಯವರು ಕಾದಂಬರಿ ಪ್ರಕಾರದಲ್ಲಿಯೂ ತಮ್ಮ ಸೃಜನಶೀಲತೆಯನ್ನು ಪ್ರಕಟಿಸಿದ್ದಾರೆ. **’ದಂದುಗ’** ಮತ್ತು ‘ಗೌರಿಯರು’ ಅವರ ಪ್ರಮುಖ ಕಾದಂಬರಿಗಳಾಗಿವೆ.

ಕಾದಂಬರಿ ಎಂಬುದು ವಿಶಾಲವಾದ ಬದುಕಿನ ಅನುಭವಗಳನ್ನು, ಅನೇಕ ಪಾತ್ರಗಳನ್ನು, ಸಾಮಾಜಿಕ ಸಂಬಂಧಗಳನ್ನು ಮತ್ತು ಕಾಲದ ಚಲನೆಗಳನ್ನು ಅಭಿವ್ಯಕ್ತಿಸುವ ಪ್ರಕಾರ. ಕಥೆಯಲ್ಲಿ ಸಾಂದ್ರವಾಗಿ ಅಭಿವ್ಯಕ್ತಿಸುವ ಅನುಭವಗಳನ್ನು ಕಾದಂಬರಿಯಲ್ಲಿ ವಿಶಾಲವಾದ ನೆಲೆಯಲ್ಲಿ ವಿಸ್ತರಿಸುವ ಅವಕಾಶವಿರುತ್ತದೆ.

ನುಗಡೋಣಿಯವರು ತಮ್ಮ ಕಥನಾನುಭವವನ್ನು ಕಾದಂಬರಿ ಪ್ರಕಾರಕ್ಕೂ ವಿಸ್ತರಿಸಿರುವುದು ಅವರ ಸೃಜನಶೀಲ ಸಾಮರ್ಥ್ಯವನ್ನು ಸೂಚಿಸುತ್ತದೆ. ಅವರ ಬರವಣಿಗೆಯಲ್ಲಿ ಕಥೆಯ ಸಾಂದ್ರತೆ ಮತ್ತು ಕಾದಂಬರಿಯ ವ್ಯಾಪಕತೆಯ ನಡುವಿನ ಸಂಬಂಧವನ್ನು ಗುರುತಿಸಬಹುದು.

ಕವನ ಸಾಹಿತ್ಯದ ಅಭಿವ್ಯಕ್ತಿ

ಕಥೆಗಾರರಾಗಿ ಪ್ರಸಿದ್ಧರಾಗಿರುವ ನುಗಡೋಣಿಯವರು ಕವನ ರಚನೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ. **’ನೀನು, ಅವನು, ಪರಿಸರ’** ಎಂಬ ಕವನ ಸಂಕಲನವು ಅವರ ಕಾವ್ಯಪ್ರಯತ್ನವನ್ನು ಪರಿಚಯಿಸುತ್ತದೆ.

ಕಾವ್ಯವು ವ್ಯಕ್ತಿಯ ಅಂತರಂಗದ ಭಾವನೆಗಳನ್ನು, ಸಾಮಾಜಿಕ ಅನುಭವಗಳನ್ನು ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿದೆ. ಈ ಕೃತಿಯ ಶೀರ್ಷಿಕೆಯಲ್ಲಿರುವ ವ್ಯಕ್ತಿ, ಇತರರು ಮತ್ತು ಪರಿಸರ ಎಂಬ ಪರಿಕಲ್ಪನೆಗಳು ಮಾನವ ಬದುಕಿನ ಪರಸ್ಪರ ಸಂಬಂಧಗಳನ್ನು ನೆನಪಿಸುತ್ತವೆ.

ಇದರಿಂದ ನುಗಡೋಣಿಯವರ ಸೃಜನಶೀಲತೆ ಕಥೆ ಮತ್ತು ಕಾದಂಬರಿಗಳಿಗೆ ಮಾತ್ರ ಸೀಮಿತವಾಗಿರದೆ ಕಾವ್ಯದ ಕ್ಷೇತ್ರದಲ್ಲಿಯೂ ವಿಸ್ತರಿಸಿರುವುದು ತಿಳಿಯುತ್ತದೆ.

ಸಂಶೋಧಕ ಮತ್ತು ವಿಮರ್ಶಕರಾಗಿ ಅಮರೇಶ ನುಗಡೋಣಿ

ಅಮರೇಶ ನುಗಡೋಣಿಯವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಆಯಾಮವೆಂದರೆ ಅವರ ಸಂಶೋಧನಾ ಮತ್ತು ವಿಮರ್ಶಾ ಕಾರ್ಯ. ಅವರು ಕೇವಲ ಸೃಜನಶೀಲ ಲೇಖಕರಲ್ಲ; ಕನ್ನಡ ಸಾಹಿತ್ಯದ ಪರಂಪರೆ, ಮಧ್ಯಕಾಲೀನ ಸಾಹಿತ್ಯ, ವಚನ ಸಾಹಿತ್ಯ, ತತ್ವಪದ ಸಾಹಿತ್ಯ ಮತ್ತು ಪ್ರಾದೇಶಿಕ ಸಾಂಸ್ಕೃತಿಕ ಇತಿಹಾಸದ ಅಧ್ಯಯನದಲ್ಲಿಯೂ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಶ್ರೀಕೃಷ್ಣ ಆಲನಹಳ್ಳಿಯವರ ಬದುಕು ಮತ್ತು ಬರಹದ ಕುರಿತ ಅಧ್ಯಯನ, ‘ನುಡಿವ ಪಾಡು’, ‘ನುಡಿವ ಬೆಡಗು’, ತತ್ವಪದ ಸಾಹಿತ್ಯ ಅಧ್ಯಯನ, ವಚನಗಳ ಅನುಸಂಧಾನ, ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ ಮುಂತಾದ ಕೃತಿಗಳು ಅವರ ವಿದ್ವತ್ ವ್ಯಕ್ತಿತ್ವವನ್ನು ಪರಿಚಯಿಸುತ್ತವೆ.

ಕನ್ನಡ ಸಾಹಿತ್ಯದ ಪರಂಪರೆಯನ್ನು ಕೇವಲ ಐತಿಹಾಸಿಕ ನೆಲೆಯಲ್ಲಿ ನೋಡುವುದಕ್ಕಿಂತ ಅದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅವರ ಅಧ್ಯಯನದ ಪ್ರಮುಖ ಲಕ್ಷಣವಾಗಿದೆ.

ವಚನ ಸಾಹಿತ್ಯವು ಕನ್ನಡದ ವೈಚಾರಿಕ ಪರಂಪರೆಯ ಅಮೂಲ್ಯ ಸಂಪತ್ತು. ಬಸವಣ್ಣ, ಅಲ್ಲಮಪ್ರಭು ಮತ್ತು ಇತರ ಶರಣರ ವಚನಗಳಲ್ಲಿ ವ್ಯಕ್ತವಾಗಿರುವ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಇಂತಹ ಸಾಹಿತ್ಯದ ಅನುಸಂಧಾನವು ನುಗಡೋಣಿಯವರ ವೈಚಾರಿಕ ಅಧ್ಯಯನದ ವ್ಯಾಪ್ತಿಯನ್ನು ತೋರಿಸುತ್ತದೆ.

ತತ್ವಪದ ಸಾಹಿತ್ಯದ ಅಧ್ಯಯನದ ಮೂಲಕ ಜನಪದ ಮತ್ತು ತಾತ್ವಿಕ ಚಿಂತನೆಗಳ ನಡುವಿನ ಸಂಬಂಧವನ್ನು ಅರಿಯುವ ಪ್ರಯತ್ನವೂ ಅವರ ಸಂಶೋಧನಾ ಆಸಕ್ತಿಯ ಭಾಗವಾಗಿದೆ.

ಕಲ್ಯಾಣ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಅಧ್ಯಯನ

ಅಮರೇಶ ನುಗಡೋಣಿಯವರ ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಬದುಕಿಗೆ ವಿಶೇಷ ಸ್ಥಾನವಿದೆ. ಹೈದ್ರಾಬಾದು ಕರ್ನಾಟಕದ ಇತಿಹಾಸ, ವಿಮೋಚನಾ ಚಳವಳಿ, ಜನಪದ ಹಾಡುಪಾಡು ಮತ್ತು ಸಾಮಾಜಿಕ ಬದಲಾವಣೆಗಳ ಅಧ್ಯಯನದಲ್ಲಿ ಅವರು ಆಸಕ್ತಿ ವಹಿಸಿದ್ದಾರೆ.

ರಾಯಚೂರು ಜಿಲ್ಲೆಯ ಹೈದ್ರಾಬಾದು ಕರ್ನಾಟಕ ವಿಮೋಚನಾ ಚಳವಳಿ ಮತ್ತು ಪ್ರಾದೇಶಿಕ ಹಾಡುಪಾಡುಗಳ ಕುರಿತ ಅವರ ಅಧ್ಯಯನಗಳು ಈ ಪ್ರದೇಶದ ಇತಿಹಾಸ ಮತ್ತು ಸಾಂಸ್ಕೃತಿಕ ಸ್ಮೃತಿಗಳನ್ನು ದಾಖಲಿಸುವ ದೃಷ್ಟಿಯಿಂದ ಮಹತ್ವದ್ದಾಗಿವೆ.

ಒಂದು ಪ್ರದೇಶದ ಇತಿಹಾಸವು ಕೇವಲ ರಾಜರು, ಆಡಳಿತಗಾರರು ಮತ್ತು ಯುದ್ಧಗಳ ಚರಿತ್ರೆಯಲ್ಲ. ಸಾಮಾನ್ಯ ಜನರ ಬದುಕು, ಅವರ ಹೋರಾಟ, ಹಾಡುಗಳು, ಆಚರಣೆಗಳು ಮತ್ತು ಸಾಮೂಹಿಕ ನೆನಪುಗಳೂ ಅದರ ಭಾಗವಾಗಿವೆ. ಈ ವಿಶಾಲ ದೃಷ್ಟಿಕೋನವು ನುಗಡೋಣಿಯವರ ಸಂಶೋಧನಾ ವ್ಯಕ್ತಿತ್ವದಲ್ಲಿ ಕಾಣಿಸುತ್ತದೆ.

ಅವರ ಕಥೆಗಳಲ್ಲಿ ಕಾಣುವ ಗ್ರಾಮೀಣ ಅನುಭವ ಮತ್ತು ಸಂಶೋಧನಾ ಬರಹಗಳಲ್ಲಿ ಕಾಣುವ ಪ್ರಾದೇಶಿಕ ಸಾಂಸ್ಕೃತಿಕ ಅಧ್ಯಯನ ಪರಸ್ಪರ ಪೂರಕವಾಗಿವೆ. ಈ ಕಾರಣದಿಂದ ಅವರ ಸಾಹಿತ್ಯವನ್ನು ಕಲ್ಯಾಣ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಒಂದು ಪ್ರಮುಖ ಅಭಿವ್ಯಕ್ತಿಯಾಗಿ ಪರಿಗಣಿಸಬಹುದು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಸೇವೆ

ಸೃಜನಶೀಲ ಲೇಖಕನಾಗಿ ಮತ್ತು ಸಂಶೋಧಕನಾಗಿ ಗುರುತಿಸಿಕೊಂಡ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವು ಅವರ ಅಧ್ಯಯನ, ಸಂಶೋಧನೆ ಮತ್ತು ಸಾಹಿತ್ಯಿಕ ಚಿಂತನೆಗೆ ಹೊಸ ಆಯಾಮಗಳನ್ನು ಒದಗಿಸಿತು.

ಸುಮಾರು ಮೂರು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪದವಿಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಅವರ ಶೈಕ್ಷಣಿಕ ಸೇವೆಯ ವ್ಯಾಪ್ತಿಯನ್ನು ಸೂಚಿಸುತ್ತದೆ.

ಒಬ್ಬ ಉತ್ತಮ ಅಧ್ಯಾಪಕನು ಕೇವಲ ಪಠ್ಯವನ್ನು ಬೋಧಿಸುವುದಿಲ್ಲ; ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಅಧ್ಯಯನದ ಆಸಕ್ತಿ ಮತ್ತು ಸ್ವತಂತ್ರ ಚಿಂತನೆಯ ಸಾಮರ್ಥ್ಯವನ್ನು ಬೆಳೆಸುತ್ತಾನೆ. ನುಗಡೋಣಿಯವರ ಶೈಕ್ಷಣಿಕ ಬದುಕಿನ ಮಹತ್ವವನ್ನು ಈ ದೃಷ್ಟಿಯಿಂದಲೂ ಗುರುತಿಸಬಹುದು.

ಸಂಶೋಧನೆ ಎಂದರೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಲ್ಲ; ಅದು ಹೊಸ ಜ್ಞಾನವನ್ನು ನಿರ್ಮಿಸುವ ಜವಾಬ್ದಾರಿಯುತ ಕಾರ್ಯ. ವಿಷಯದ ಬಗ್ಗೆ ಆಸಕ್ತಿ, ಆಳವಾದ ಅಧ್ಯಯನ, ಸೂಕ್ತ ಆಕರಗಳ ಬಳಕೆ ಮತ್ತು ವೈಚಾರಿಕ ಪ್ರಾಮಾಣಿಕತೆ ಸಂಶೋಧನೆಯ ಮೂಲಭೂತ ಗುಣಗಳೆಂಬ ನಿಲುವು ಅವರ ಶೈಕ್ಷಣಿಕ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತದೆ.

ಭಾಷೆ, ಶೈಲಿ ಮತ್ತು ಕಥನದ ವೈಶಿಷ್ಟ್ಯ

ಅಮರೇಶ ನುಗಡೋಣಿಯವರ ಕಥೆಗಳ ಪ್ರಮುಖ ಆಕರ್ಷಣೆ ಅವರ ಭಾಷೆ. ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಷಾ ಪರಿಸರದ ಸಹಜತೆ, ಸ್ಥಳೀಯ ಪದಪ್ರಯೋಗ, ನುಡಿಗಟ್ಟುಗಳು ಮತ್ತು ಸಂಭಾಷಣೆಯ ಲಯಗಳು ಅವರ ಕಥೆಗಳಿಗೆ ವಿಶಿಷ್ಟ ಜೀವಂತಿಕೆಯನ್ನು ನೀಡುತ್ತವೆ.

ಅವರ ಕಥೆಗಳ ಪಾತ್ರಗಳು ತಮ್ಮದೇ ಆದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಮಾತನಾಡುತ್ತವೆ. ಭಾಷೆಯ ಮೂಲಕವೇ ಅವರ ಬದುಕಿನ ಅನುಭವ, ಮನಸ್ಥಿತಿ ಮತ್ತು ಸಾಮಾಜಿಕ ಸ್ಥಾನಮಾನ ವ್ಯಕ್ತವಾಗುತ್ತದೆ.

ಆರಂಭಿಕ ಕಥೆಗಳಲ್ಲಿ ನೈಜ ಘಟನೆಗಳು ಮತ್ತು ಸ್ಥಳೀಯ ಅನುಭವಗಳಿಗೆ ಹೆಚ್ಚಿನ ಪ್ರಾಧಾನ್ಯವಿದ್ದರೆ, ನಂತರದ ಬರವಣಿಗೆಯಲ್ಲಿ ವಾಸ್ತವ ಮತ್ತು ಕಲ್ಪನೆಯ ಸಮನ್ವಯ ಹೆಚ್ಚು ಪರಿಣಾಮಕಾರಿಯಾಗಿ ರೂಪುಗೊಂಡಿದೆ. ಇದು ಅವರ ಕಥನ ತಂತ್ರದ ಬೆಳವಣಿಗೆಯನ್ನು ಸೂಚಿಸುತ್ತದೆ.

ಅವರ ಕಥೆಗಳಲ್ಲಿ ಘಟನೆಗಳ ನಿರೂಪಣೆಯ ಜೊತೆಗೆ ಅವುಗಳ ಹಿಂದಿರುವ ಸಾಮಾಜಿಕ ಅರ್ಥಗಳನ್ನು ಓದುಗರಿಗೆ ಮನದಟ್ಟು ಮಾಡುವ ಸಾಮರ್ಥ್ಯವಿದೆ. ಸರಳವಾದ ಸನ್ನಿವೇಶದ ಮೂಲಕ ಗಂಭೀರವಾದ ಸಾಮಾಜಿಕ ಪ್ರಶ್ನೆಯನ್ನು ಮುಂದಿಡುವುದು ಅವರ ಕಥನದ ಗಮನಾರ್ಹ ಗುಣವಾಗಿದೆ.

ಮಾನವೀಯ ಮೌಲ್ಯಗಳ ಪ್ರತಿಪಾದನೆ

ಅಮರೇಶ ನುಗಡೋಣಿಯವರ ಸಾಹಿತ್ಯದ ಅಂತಃಸತ್ವ ಮಾನವೀಯತೆಯಾಗಿದೆ. ಜಾತಿ, ವರ್ಗ, ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯನ್ನು ಅವರ ಕಥೆಗಳು ಪ್ರಶ್ನಿಸುತ್ತವೆ.

ಒಬ್ಬ ವ್ಯಕ್ತಿಯ ಗೌರವ, ಬದುಕಿನ ಸ್ವಾತಂತ್ರ್ಯ ಮತ್ತು ಮಾನವೀಯ ಅಸ್ತಿತ್ವಕ್ಕೆ ಸಮಾಜದಲ್ಲಿ ಸಮಾನ ಅವಕಾಶ ದೊರೆಯಬೇಕು ಎಂಬ ಆಶಯ ಅವರ ಸಾಹಿತ್ಯದ ಸಾಮಾಜಿಕ ನೆಲೆಯಲ್ಲಿ ಅಡಕವಾಗಿದೆ.

ಅವರ ಕಥೆಗಳಲ್ಲಿ ಶೋಷಿತ ಮತ್ತು ದುರ್ಬಲ ಜನರ ಬದುಕಿಗೆ ಪ್ರಾಧಾನ್ಯ ದೊರೆಯುವುದು ಕೇವಲ ಸಹಾನುಭೂತಿಯ ಅಭಿವ್ಯಕ್ತಿಯಲ್ಲ. ಅದು ಸಮಾಜದ ಅಸಮಾನ ವ್ಯವಸ್ಥೆಯ ಬಗ್ಗೆ ಲೇಖಕ ಹೊಂದಿರುವ ವಿಮರ್ಶಾತ್ಮಕ ಪ್ರಜ್ಞೆಯ ಸೂಚನೆಯಾಗಿದೆ.

ಸಾಹಿತ್ಯವು ಓದುಗರಿಗೆ ಮನರಂಜನೆ ನೀಡುವುದರ ಜೊತೆಗೆ ಅವರನ್ನು ಚಿಂತನೆಗೆ ಒಳಪಡಿಸಬೇಕು. ತಮ್ಮ ಕಥೆಗಳ ಮೂಲಕ ನುಗಡೋಣಿಯವರು ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಅವರ ಸ್ಥಾನ

ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಅಮರೇಶ ನುಗಡೋಣಿಯವರ ಸ್ಥಾನವನ್ನು ನಿರ್ಣಯಿಸುವಾಗ ಅವರ ಪ್ರಾದೇಶಿಕ ಅನುಭವ, ಕಥನದ ಸಾಮಾಜಿಕ ಬದ್ಧತೆ ಮತ್ತು ಸಂಶೋಧನಾ ಹಿನ್ನೆಲೆಯನ್ನು ಗಮನಿಸಬೇಕು.

ಅವರು ಕಲ್ಯಾಣ ಕರ್ನಾಟಕದ ಬದುಕನ್ನು ಕನ್ನಡ ಸಾಹಿತ್ಯದ ವಿಶಾಲ ವಲಯಕ್ಕೆ ಪರಿಚಯಿಸಿದ್ದಾರೆ. ಗ್ರಾಮೀಣ ಸಮಾಜದೊಳಗಿನ ಸಂಘರ್ಷಗಳು, ಜಾತಿ ಸಂಬಂಧಗಳು, ಶ್ರಮಜೀವಿಗಳ ಬದುಕು ಮತ್ತು ಬದಲಾಗುತ್ತಿರುವ ಮಾನವೀಯ ಸಂಬಂಧಗಳನ್ನು ಕಥೆಗಳ ಮೂಲಕ ದಾಖಲಿಸಿದ್ದಾರೆ.

ಅವರ ಸಾಹಿತ್ಯವು ಪ್ರಾದೇಶಿಕತೆಯ ಮಿತಿಯನ್ನು ಮೀರಿ ಸಾರ್ವತ್ರಿಕ ಮಾನವೀಯ ಪ್ರಶ್ನೆಗಳನ್ನು ಎತ್ತುತ್ತದೆ. ಒಂದು ನಿರ್ದಿಷ್ಟ ಹಳ್ಳಿಯ ಘಟನೆ ಕೂಡ ಮಾನವ ಸಮಾಜದ ವಿಶಾಲವಾದ ಸಮಸ್ಯೆಯನ್ನು ಪ್ರತಿನಿಧಿಸಬಹುದು ಎಂಬುದಕ್ಕೆ ಅವರ ಕಥನಗಳು ಸಾಕ್ಷಿಯಾಗಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಅವರ ಸಾಹಿತ್ಯಿಕ ಸಾಧನೆಗೆ ದೊರೆತ ಮಹತ್ವದ ರಾಷ್ಟ್ರೀಯ ಮನ್ನಣೆಯಾಗಿದೆ. ಈ ಗೌರವವು ಅವರ ಸೃಜನಶೀಲ ಬರವಣಿಗೆಯ ಜೊತೆಗೆ ಕನ್ನಡದ ಪ್ರಾದೇಶಿಕ ಕಥನ ಪರಂಪರೆಯ ಮಹತ್ವವನ್ನೂ ಗುರುತಿಸಿದೆ.

ಉಪಸಂಹಾರ: ಬದುಕನ್ನು ಬರಹವಾಗಿಸಿದ ಸೃಜನಶೀಲ ವ್ಯಕ್ತಿತ್ವ

ಅಮರೇಶ ನುಗಡೋಣಿಯವರ ಬದುಕು ಮತ್ತು ಬರಹಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಅವರ ವ್ಯಕ್ತಿತ್ವವು ಅನುಭವ, ಅಧ್ಯಯನ, ಸಂಶೋಧನೆ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಗಳ ಸಮನ್ವಯದಿಂದ ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ.

ನುಗಡೋಣಿ ಎಂಬ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಸುತ್ತಲಿನ ಬದುಕನ್ನೇ ಸಾಹಿತ್ಯದ ಮಹತ್ವದ ವಸ್ತುವನ್ನಾಗಿ ಮಾಡಿಕೊಂಡರು. ಮಣ್ಣಿನೊಂದಿಗೆ ಬೆಸೆದುಕೊಂಡ ಜನರ ಅನುಭವಗಳು ಅವರ ಕಥೆಗಳಲ್ಲಿ ಜೀವಂತವಾಗಿವೆ. ಗ್ರಾಮೀಣ ಸಮಾಜದ ಆಂತರಿಕ ಸಂಘರ್ಷಗಳು, ಜಾತಿ ವ್ಯವಸ್ಥೆಯ ಒತ್ತಡಗಳು, ಶ್ರಮಜೀವಿಗಳ ಬದುಕು ಮತ್ತು ಮಾನವೀಯ ಸಂಬಂಧಗಳ ಸಂಕೀರ್ಣತೆಗಳು ಅವರ ಸಾಹಿತ್ಯದ ಜೀವಾಳವಾಗಿವೆ.

‘ಮಣ್ಣು ಸೇರಿತು ಬೀಜ’ದಿಂದ ಆರಂಭವಾದ ಅವರ ಸಾಹಿತ್ಯ ಪಯಣ ‘ತಮಂಧದ ಕೇಡು’, ‘ಸವಾರಿ’ ಮತ್ತು ‘ದಡ ಸೇರಿಸು ತಂದೆ’ ಮುಂತಾದ ಕೃತಿಗಳ ಮೂಲಕ ವಿಶಾಲವಾದ ಸೃಜನಶೀಲ ನೆಲೆಯನ್ನು ಪಡೆದುಕೊಂಡಿದೆ. ಕಾದಂಬರಿ, ಕವನ, ಸಂಶೋಧನೆ ಮತ್ತು ವಿಮರ್ಶೆಗಳ ಮೂಲಕವೂ ಅವರು ತಮ್ಮ ವಿದ್ವತ್ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಮತ್ತು ಸಂಶೋಧಕರಿಗೆ ನೀಡಿದ ಮಾರ್ಗದರ್ಶನ ಅವರ ಶೈಕ್ಷಣಿಕ ಬದುಕಿನ ಮಹತ್ವವನ್ನು ಸಾರುತ್ತದೆ. ಕಲ್ಯಾಣ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಧ್ಯಯನವು ಅವರ ಸಾಹಿತ್ಯಿಕ ವ್ಯಕ್ತಿತ್ವಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ.

ಅವರ ಸಾಹಿತ್ಯದ ಬಹುದೊಡ್ಡ ಸಾಧನೆಯೆಂದರೆ ಸಾಮಾನ್ಯ ಮನುಷ್ಯನ ಬದುಕಿಗೆ ಸಾಹಿತ್ಯದಲ್ಲಿ ಗೌರವಯುತ ಸ್ಥಾನ ಕಲ್ಪಿಸಿರುವುದು. ಸಮಾಜದ ಅಂಚಿನಲ್ಲಿರುವ ಜನರ ನೋವು, ಅವಮಾನ, ಅಸಮಾನತೆ ಮತ್ತು ಬದುಕಿನ ಹೋರಾಟಗಳಿಗೆ ಅವರು ಕಥನದ ಮೂಲಕ ಧ್ವನಿಯಾಗಿದ್ದಾರೆ.

ಒಬ್ಬ ಲೇಖಕನ ಸಾಧನೆ ಎಂದರೆ ಕೇವಲ ಎಷ್ಟು ಪುಸ್ತಕಗಳನ್ನು ಬರೆದಿದ್ದಾನೆ ಎಂಬುದಲ್ಲ; ಆತ ತನ್ನ ಕಾಲದ ಬದುಕನ್ನು ಎಷ್ಟು ಪ್ರಾಮಾಣಿಕವಾಗಿ ದಾಖಲಿಸಿದ್ದಾನೆ, ಸಮಾಜದ ಮನಸ್ಸಿನಲ್ಲಿ ಎಷ್ಟು ಪ್ರಶ್ನೆಗಳನ್ನು ಹುಟ್ಟಿಸಿದ್ದಾನೆ ಮತ್ತು ಮುಂದಿನ ತಲೆಮಾರಿಗೆ ಎಂತಹ ಚಿಂತನೆಯ ಪರಂಪರೆಯನ್ನು ಬಿಟ್ಟುಹೋಗಿದ್ದಾನೆ ಎಂಬುದಾಗಿದೆ. ಈ ಮಾನದಂಡದಲ್ಲಿ ಅಮರೇಶ ನುಗಡೋಣಿಯವರ ಸಾಹಿತ್ಯಿಕ ಸಾಧನೆ ಮಹತ್ವದ್ದಾಗಿದೆ.

ಮಣ್ಣಿನ ಬದುಕಿನಿಂದ ಸಾಹಿತ್ಯದ ವಿಶಾಲ ದಡದವರೆಗೆ ಸಾಗಿದ ಅವರ ಸೃಜನಶೀಲ ಪಯಣ ಕನ್ನಡ ಸಾಹಿತ್ಯದ ಸ್ಮರಣೀಯ ಅಧ್ಯಾಯವಾಗಿದೆ. ಬದುಕನ್ನು ಓದಿ, ಬದುಕನ್ನೇ ಬರಹವನ್ನಾಗಿ ಪರಿವರ್ತಿಸಿ, ಸಾಹಿತ್ಯವನ್ನು ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯನ್ನಾಗಿ ರೂಪಿಸಿಕೊಂಡಿರುವ ಅಮರೇಶ ನುಗಡೋಣಿಯವರ ಸಾಹಿತ್ಯ ಸೇವೆ ಅಭಿನಂದನಾರ್ಹವೂ ಅನುಸರಣೀಯವೂ ಆಗಿದೆ.

ಅವರ ಸಾಹಿತ್ಯದ ಬೀಜಗಳು ಮುಂದಿನ ತಲೆಮಾರುಗಳ ಓದುಗರ ಮನಸ್ಸಿನಲ್ಲಿ ಹೊಸ ಚಿಂತನೆಗಳಾಗಿ ಮೊಳೆಯಲಿ; ಅವರ ಬರಹದ ಪಯಣ ಕನ್ನಡ ಸಾಹಿತ್ಯದ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡಲಿ ಎಂಬ ಆಶಯದೊಂದಿಗೆ ಈ ಹಿರಿಯ ಸೃಜನಶೀಲ ಸಾಹಿತಿಗೆ ಹೃತ್ಪೂರ್ವಕ ಅಭಿನಂದನೆಗಳು.

—

ಪ್ರಮುಖ ಕೃತಿಗಳು: ಮಣ್ಣು ಸೇರಿತು ಬೀಜ, ತಮಂಧದ ಕೇಡು, ಒಡಲ ಹಂಗು, ಮುಸ್ಸಂಜೆಯ ಕಥಾನಕಗಳು, ಸವಾರಿ, ಚುಕ್ಕಿ ಮದುವೆ ಪ್ರಸಂಗ, ದಡ ಸೇರಿಸು ತಂದೆ, ದಂದುಗ, ಗೌರಿಯರು, ನೀನು–ಅವನು–ಪರಿಸರ.

ಪ್ರಮುಖ ಗೌರವ: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ‘ದಡ ಸೇರಿಸು ತಂದೆ’ ಕಥಾಸಂಕಲನ.

ಡಾ. ಗುರುಸಿದ್ಧಯ್ಯಾ ಸ್ವಾಮಿ
ಎಂ.ಎ., ಎಂ.ಫಿಲ್., ಪಿಹೆಚ್.ಡಿ., ನೆಟ್,
ಸಹಾಯಕ ಪ್ರಾಧ್ಯಾಪಕರು,
ಕನ್ನಡ ವಿಭಾಗ,
ಸಿ. ಬಿ. ಖೇಡಗಿ ಮಹಾವಿದ್ಯಾಲಯ,
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259
E mail- gurusiddayyaswami123@gmail.com

Continue Reading

Trending