ಬಹಿರಂಗ

” ಯಾವ ಘನಂದಾರಿ ಸಾಹಸಕ್ಕೆ…ವೈ- ಪ್ಲಸ್ ಸೆಕ್ಯುರಿಟಿ “..?

Published

on

  • ಹಿರಿಯೂರು ಪ್ರಕಾಶ್

ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು ಎಷ್ಟು ಪೆದ್ದುತನ, ಅಮಾಯಕತನ ಅಥವಾ ಉಡಾಫ಼ೆತನವೋ ಆ ರೀತಿ ಅಹಂ‌ನಿಂದ ಸ್ವಯಂ ಇರುವೆ ಬಿಟ್ಟುಕೊಂಡು ಫಜೀತಿ ಸೃಷ್ಟಿಸಿದವರ ನೆರವಿಗೆ ಆದ್ಯತೆ ಮೇರೆಗೆ ಸರ್ಕಾರವೇ ಧಾವಿಸುವುದು ಮತ್ತಷ್ಟು ಕಿರಿಕಿರಿಯಂತೆ ಗೋಚರಿಸುತ್ತದೆ.

ಅಲ್ಲದೇ ಮತ್ತೇನು ! ಬಾಲಿವುಡ್ ನಲ್ಲಿ ಅಭಿನಯಕ್ಕಿಂತ ತನ್ನ‌ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಕಂಗನಾ ರನೋತ್ ಎಂಬ ನಟೀ ಮಣಿ ಸುಮ್ಮನಿರಲಾರದೇ ತನ್ನ ಟ್ವೀಟ್ ಮೂಲಕ ಸೃಷ್ಟಿಸಿದ ಅನಗತ್ಯ ಅವಾಂತರ ಮತ್ತು ಅದಕ್ಕೆ ಕೇಂದ್ರ ಸರ್ಕಾರ ತಕ್ಷಣಕ್ಕೆ ಸ್ಪಂದಿಸಿದ ರೀತಿ‌- ನೀತಿ ನೋಡಿದಲ್ಲಿ ಮೇಲಿನಂತೆ ಅನಿಸುವುದು ಸಹಜ. ಕೆಲ ದಿನಗಳ ಹಿಂದೆ ಈಕೆ ಮುಂಬೈ ಯನ್ನು ಪಾಕಿಸ್ತಾನ ಆಕ್ರಮಿತ‌ ಕಾಶ್ಮೀರ (ಪಿ.ಓ.ಕೆ) ಕ್ಕೆ ಹೋಲಿಸಿ, ‘ ಸಿನಿಮಾ ಮಾಫ಼ಿಯಾಗಿಂತ ತಾನು ಮುಂಬೈ ಪೊಲೀಸ್ ಕಂಡರೆ ಹೆದರುತ್ತೇನೆ ” ಎಂದು ಹೇಳಿಕೆ ನೀಡಿ‌ ವಿವಾದ ಸೃಷ್ಟಿಸಿದ್ದಲ್ಲದೇ ಮುಂಬೈ‌ ಸುರಕ್ಷಿತವಲ್ಲ ಎಂದೂ ಟ್ವೀಟ್ ಮಾಡಿದ್ದರು.

ಮುಂಬೈನಲ್ಲೇ ಇದ್ದುಕೊಂಡು ಅಲ್ಲಿಯೇ ಹೆಸರು ಮಾಡಿ ಅಲ್ಲಿನ ಅನ್ನ ತಿನ್ನುತ್ತಾ ಈಗ ಅದನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ಈ ನಟಿಯ ಟ್ವೀಟ್ ಗೆ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಯಾರಿಗಾದರೂ ತಾನು ಮುಂಬೈಗೆ ಬರುವುದನ್ನು ಧೈರ್ಯವಿದ್ದರೆ ತಡೆಯಲಿ ಎಂಬ ಸವಾಲನ್ನೂ ಎಸೆದಿದ್ದಾರೆ.! ಕರ್ಮ ಕಾಂಡ .

ಆದರೆ ಇದ್ಯಾವುದೂ ನನಗೆ ವಿಶೇಷ ಅನ್ನಿಸೋಲ್ಲ. ಕಾರಣ – ಕೆಲವರು ಇರೋದೇ ಹಾಗೆ. ಮೂಲ ಕಸುಬು ಬಿಟ್ಟು ಸದಾ ವಿವಾದಾತ್ಮಕ ಕಾರ್ಯ ಮಾಡೋದೇ ಇಂತಹವರ ವರಸೆ. ಅದು ಅವರ ವೈಯುಕ್ತಿಕ ಸ್ವಾತಂತ್ರ್ಯ, ಹಕ್ಕು ! ಅಂಥವರು ಏನನ್ನಾದರೂ ಮಾಡಿಕೊಳ್ಳಲಿ.

ಆದರೆ ಸುಮ್ಮನಿರಲಾರದೇ ಏನನ್ನೋ ಕೆದಕಿ ಕೆಣಕಿ ವಿವಾದ ಸೃಷ್ಟಿಸಿದವರನ್ನು ಸರ್ಕಾರ ಗಂಭೀರವಾದ ಎಚ್ಚರಿಕೆ ಕೊಟ್ಟು ಸುಮ್ಮನಾಗಿಸುವುದನ್ನು‌ ಬಿಟ್ಟು ಅವರಿಗೆ ಮತ್ತಷ್ಟು ಬಿಲ್ಡಪ್ ಕೊಟ್ಟು ವೈ- ಪ್ಲಸ್ ಭದ್ರತೆ ನೀಡಿ ಅವರ ರಕ್ಷಣೆಗೆ ಹತ್ತು ಮಂದಿ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ನೇಮಿಸಿದ್ದನ್ನು ನೋಡಿದರೆ ನಗಬೇಕೋ ಅಳಬೇಕೋ, ಈ ದೇಶದ ತೆರಿಗೆದಾರನಾಗಿ ವ್ಯಥೆ ಪಡಬೇಕೋ ತಿಳಿಯುತ್ತಿಲ್ಲ.

ಈ ನಟಿ ದೇಶದ ಹಿತಕ್ಕಾಗಿ ಅಥವಾ ಜನಪರ‌ ಕಾಳಜಿಗಾಗಿ ಹೋರಾಟ ನೆಡೆಸಿದ್ದರ ಪ್ರಭಾವದಿಂದ ವಿರೋಧಿಗಳು ಹುಟ್ಟಿಕೊಂಡದ್ದಕ್ಕಾಗಿ ಅವರಿಗೆ ಸೆಕ್ಯುರಿಟಿ ಕೊಡಬೇಕೆಂದುಕೊಂಡರೆ ಅದು ತಪ್ಪಲ್ಲ. ಕೊಡಲಿ ! ಅಥವಾ ದೇಶದ ಮಾಜೀ ಪ್ರಧಾನಿಯೋ, ರಕ್ಷಣಾ ಮಂತ್ರಿಯೋ , ಅತ್ಯುನ್ನತ ವಿಜ್ಞಾನಿಯೋ ಇಲ್ಲವೇ ಅತೀ ಸೂಕ್ಷ್ಮ ಹುದ್ದೆಯಲ್ಲಿನ‌ ಗಣ್ಯರೋ ಇಂದೋ, ಹಿಂದೆಯೋ ಆಗಿದ್ದರೂ ಭದ್ರತೆ ಕೊಡಲಿ.

ಆದರೆ ಇದಾವುದೂ ಇಲ್ಲದೇ ಹೋದರೂ ಕೇವಲ ತನ್ನ ಖಯಾಲಿಗಾಗಿ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಾ ಬೇಕಾಗಿಯೇ ವಿರೋಧ ಸೃಷ್ಟಿಸಿಕೊಳ್ಳುತ್ತಾ ಬಂದಿರುವ ಈ ಬಾಲಿವುಡ್ ನಟಿಗೆ CRPF ಶಸ್ತ್ರ ಸಜ್ಜಿತ ಕಮಾಂಡೋಗಳ ರಕ್ಷಣೆ ನೀಡುವ ನಿರ್ಧಾರ ಆಕೆಗೆ ಇಂತಹಾ ಮತ್ತಷ್ಟು ತಪರಾಕಿಗಳನ್ನು ಯಾವುದೇ ಎಗ್ಗಿಲ್ಲದೇ ತಗಲಾಕಿಕೊಳ್ಳಲು ಉತ್ತೇಜಿಸಿದಂತಾಗಲಿಲ್ಲವೇ ?? ಆಕೆಗೆ‌ ಮುಂಬೈನಲ್ಲಿ ಇರುವುದು ಉಸಿರು ಕಟ್ಟಿಸಿದಂತಹ ಅನುಭವವಾಗಿದ್ದರೆ ಅದನ್ನು ಬಿಟ್ಟು ದೇಶದ ಇನ್ನಿತರೆ ಯಾವುದೇ ಭಾಗದಲ್ಲಿ ವಾಸಿಸಲು ಅವರು ಸ್ವತಂತ್ರರು.

ಮೇಲಾಗಿ ಕೇಂದ್ರ ಸರ್ಕಾರ ತಾನೇ ಈಕೆಯ ಟ್ವೀಟ್ ಸೃಷ್ಟಿಸಿದ ಆವಾಂತರದ ಮಹತ್ಕಾರಣಕ್ಕಾಗಿ ಸಿ.ಆರ್.ಪಿ.ಎಫ಼್ ಭದ್ರತೆ ಒದಗಿಸುವ ಬದಲು ಅವರೇ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಬಹುದಿತ್ತು ! ಇಲ್ಲವೇ ಸುಮ್ಮನಿದ್ದಿದ್ದರೆ ಆಕಾಶವೇನೂ ಕಳಚಿ‌ ಬೀಳುತ್ತಿರಲಿಲ್ಲ ! ತಮಾಷೆಯೆಂದರೆ ಇಡೀ ದೇಶದಲ್ಲಿ ಸಿ ಆರ್ ಪಿ ಎಫ಼್ ಭದ್ರತೆ ಪಡೆದ ಅರವತ್ತು ಮಂದಿ ಗಣ್ಯರಲ್ಲಿ ಈಗ ಕಂಗನಾ ಕೂಡಾ ಒಬ್ಬರು ! ಮತ್ತು ಈ ಸೌಲಭ್ಯ ಪಡೆದ ಮೊಟ್ಟ ಮೊದಲ ಬಾಲಿವುಡ್ ನಟಿಯೂ ಕೂಡ.

ನಮ್ಮಲ್ಲಿ ಒಂದು ರೋಗವಿದೆ. ಅದೆಂದರೆ ಯಾವುದೇ ವಿಷಯವನ್ನು ರಾಜಕೀಯ ಗೊಳಿಸುವುದು.! ಘಟನೆಯನ್ನು ವಸ್ತುನಿಷ್ಠ ಹಿನ್ನೆಲೆಯಲ್ಲಿ ನೋಡದೇ ಅದನ್ನು ರಾಜಕೀಯಕರಣಗೊಳಿಸಿ ನಿರ್ಧಾರ ತೆಗೆದುಕೊಳ್ಳುವುದರಿಂದ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಇಂತಹಾ ಅಸಹಜ ಬೆಳವಣಿಗೆಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ.

ಹೀಗಾಗಿ ಯಾರದೋ ಕ್ಷುಲ್ಲಕ ವಿಚಾರಗಳೂ ಸಹ ರಾಜಕೀಯ ಸ್ವರೂಪ ಪಡೆದು ಕೊನೆಗೆ ಅದರ ದುಷ್ಪರಿಣಾಮ ಬೀರುವುದು ಸಾರ್ವಜನಿಕರ ತೆರಿಗೆ ಹಣದ ಮೇಲೆಯೇ ! ಕಷ್ಟಪಟ್ಟು ಮೈಮುರಿದು ದುಡಿದು ಸರ್ಕಾರಕ್ಕೆ ತೆರಿಗೆ ಕಟ್ಟಿದ ಹಣ ಇಂತಹಾ ಕ್ಷುಲ್ಲಕ ಕಾರ್ಯಕ್ಕೆ ವಿನಿಯೋಗವಾಗುವುದು ನಮ್ಮಲ್ಲಿ ಮಾತ್ರ ! ಸರ್ಕಾರ ಇವರಿಗೆ ಭದ್ರತೆ ಕೊಟ್ಟಿದ್ದಕ್ಕೆ ನಿಜವಾಗಿಯೂ ಬೇಸರವಿಲ್ಲ. ಆದರೆ ಸುಮ್ಮನಿರದೇ ವಿನಾಕಾರಣ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಉಡಾಫ಼ೆಯವರಿಗೆ ಮಣೆ ಹಾಕಿ ಮೆರವಣಿಗೆ ಮಾಡುವ ಸರ್ಕಾರಗಳ ಧೋರಣೆಯಷ್ಟೇ ‌ಪ್ರಶ್ನಾರ್ಹ !

ಮರೆಯುವ ಮುನ್ನ

ಯಾವುದೇ ಜವಾಬ್ದಾರಿಯುತ ಆಡಳಿತ ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಅದರಿಂದ ಸಾರ್ವಜನಿಕರಿಗೆ ಉಪಯೋಗವಿದೆಯೇ ಅಥವಾ ಸಮಾಜಕ್ಕೆ ರಾಜ್ಯಕ್ಕೆ, ದೇಶಕ್ಕೆ ಅದರಿಂದ ಸೇವೆ ಸಲ್ಲಿಸಿದಂತಾಗುತ್ತದೆಯೇ ಎಂಬುದರ ಸೂಕ್ಷ್ಮವನ್ನು ಅರಿಯಬೇಕಾಗಿದೆ.

ಈ ಸೂಕ್ಷ್ಮತೆ ಆಳುವವರಿಗೆ ಇಲ್ಲವಾದಲ್ಲಿ ಅದು ಸಾರ್ವಜನಿಕರಿಗೆ ಮತ್ತು ತೆರಿಗೆದಾರರಿಗೆ ಮಾಡುವ ಅನ್ಯಾಯದಂತೆಯೇ ಗೋಚರಿಸುತ್ತದೆ. ರಾಜಕೀಯವನ್ನು ಬದಿಗಿಟ್ಟು ನೋಡುವುದಾದಲ್ಲಿ ಕಂಗನಾ ರಣಾವತ್ ಮಾಡಿಕೊಂಡ ಸ್ವಯಂ ಕಿರಿಕ್ ಗಳಿಗೆ ಸಿ ಆರ್ ಪಿ ಎಫ಼್ ರಕ್ಷಣೆ ನೀಡುವ ವಿಚಾರದಲ್ಲಿನ ಕೇಂದ್ರದ ‌ನಿರ್ಧಾರ ಸಮಂಜಸವಲ್ಲವೆಂದೇ ಹೇಳಬೇಕಾಗುತ್ತದೆ. ವೈಯುಕ್ತಿಕ ಪ್ರತಿಷ್ಠೆಯ ಟ್ವೀಟ್ ಗೆ ಇಷ್ಟೆಲ್ಲಾ ದುಬಾರಿ ಸ್ಕೋಪ್ ಸಿಗೋದು ನಮ್ಮಂತಹಾ ” ಬಡಾ” ದೇಶದಲ್ಲಿ ಮಾತ್ರವೇ ಅನ್ಸುತ್ತೆ.

ಇಂತಹಾ ಘಟನೆಗಳನ್ನೆಲ್ಲಾ ನೋಡಿದಾಗ…… ಇಂದು ಬರೀ ಖತರ್ ನಾಕ್ ಕುಖ್ಯಾತರಿಗೆ , ಪೊಳ್ಳು ಪ್ರಚಾರ ಗಿಟ್ಟಿಸುವವರಿಗೆ, ಗಿಮಿಕ್ ಗಳ ಗ್ಲಾಮರ್ ಗಳಿಗೆ, ಪ್ರಯೋಜನಕ್ಕೆ ಬಾರದ ಮಾತುಗಳ ಮಲ್ಲರಿಗಷ್ಟೇ ಕಾಲವೆನಿಸುತ್ತದೆ…!
So sad….!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version