ದಿನದ ಸುದ್ದಿ
ಆಕಾಶವಾಣಿ, ಎಫ್‌ಎಂ, ದೂರದರ್ಶನ ಚಾನಲ್‌ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್
ಸುದ್ದಿದಿನ ಡೆಸ್ಕ್ : ಆಕಾಶವಾಣಿ (AIR) ಮತ್ತು ಆಕಾಶವಾಣಿಯ ಎಫ್‌ಎಂ ಚಾನಲ್‌ಗಳನ್ನು ( FM Channel) ಅತಿ ಹೆಚ್ಚು ಶ್ರೋತೃಗಳು ಆಲಿಸುತ್ತಿದ್ದಾರೆ.
ಖಾಸಗಿ ಎಫ್‌ಎಂ ಚಾನಲ್‌ಗಳಿಗೆ ಹೋಲಿಸಿದರೆ ಆಕಾಶವಾಣಿಯ ಎಫ್‌ಎಂ ಚಾನಲ್ ಅತಿ ಹೆಚ್ಚು ಜನಪ್ರಿಯವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ( Anurag Singh thakur ) ತಿಳಿಸಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರ ಮೂಲಕ ಮಾಹಿತಿ ನೀಡಿದ ಸಚಿವರು, ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ, ಸ್ಥಳೀಯ ಮಾಹಿತಿ, ಸಂಪ್ರದಾಯಗಳಿಗೆ ಒತ್ತು ನೀಡುವ ಮೂಲಕ ಆಕಾಶವಾಣಿ ಜನರ ಮನದಲ್ಲಿ ಸ್ಥಾನ ಪಡೆದಿದೆ. ನಿರಂತರವಾಗಿ ಉತ್ತರ ಮಾಹಿತಿಯನ್ನು ನೀಡುವ ಮೂಲಕ ಶ್ರೋತೃಗಳಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.
ಇದಲ್ಲದೇ ದೂರದರ್ಶನದ ಚಾನಲ್‌ಗಳು ಕೂಡ ಕಳೆದ ಕೆಲವು ವರ್ಷಗಳಿಂದ ಬಾರ್ಕ್ ರೇಟಿಂಗ್ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ದೂರದರ್ಶನ ಎಂದಿಗೂ ಗುಣಮಟ್ಟದ ಹಾಗೂ ಖಚಿತ ಮಾಹಿತಿ ನೀಡುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ಜಾಲ ಕೂಡ ಇಡೀ ದೇಶಾದ್ಯಂತ ಹರಡಿದೆ. ಅತ್ಯಾಧುನಿಕ ಗುಣಮಟ್ಟ ನೀಡಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್‌ಗಳ ಕುರಿತ ಜಾಹಿರಾತುಗಳನ್ನು ಪ್ರಸಾರ ಮಾಡಬಾರದೆಂದು ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ನೀಡಿದೆ.
2019ರ ಗ್ರಾಹಕ ಸುರಕ್ಷಾ ಕಾಯ್ದೆ, 1995ರ ಕೇಬಲ್ ಮತ್ತು ಟೆಲಿವಿಷನ್ ಜಾಲ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರಂ ಕುರಿತ ಜಾಹಿರಾತುಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಜನರಿಗೆ ತಪ್ಪು ಮಾಹಿತಿ ನೀಡುವ ಅಥವಾ ದಿಕ್ಕು ತಪ್ಪಿಸುವ ಆನ್‌ಲೈನ್ ಬೆಟ್ಟಿಂಗ್ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಎಂದು ಅವರು ಮೇಲ್ಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243