ಭಾವ ಭೈರಾಗಿ

ಕಾಳಾರಾಮ ದೇವಾಲಯ ಪ್ರವೇಶ ಮತ್ತು ಕುವೆಂಪು ‘ಜಲಗಾರ’ ನಾಟಕ : 90 ವರ್ಷಾಚರಣೆಯ ಹೊತ್ತಿನಲ್ಲಿ

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ ಚಳವಳಿಗೆ ಮಾರ್ಚ್ 2020 ಕ್ಕೆ ಬರೋಬ್ಬರಿ 90 ವರ್ಷಗಳಾಗುತ್ತವೆ.

ಇದೇ 1930 ರ ಸಮಯದಲ್ಲಿ ಕಾಕತಾಳೀಯ ಎಂಬಂತೆ ಕರ್ನಾಟಕದಲ್ಲಿ ವಿಶ್ವಮಾನವ ಕವಿ ಕುವೆಂಪು ಅವರು ತನ್ನ 24 ನೇ ವಯಸ್ಸಿನಲ್ಲಿ ರಚಿಸಿರುವ “ಜಲಗಾರ” ನಾಟಕದ ಪ್ರಕಟಣೆಗೂ 90 ವರ್ಷಗಳಾಗುತ್ತಿವೆ. ಕುವೆಂಪು ಅವರು ‘ಜಲಗಾರ’ ನಾಟಕದಲ್ಲಿ ಶಿವನನ್ನು ‘ಜಗದ ಜಲಗಾರ’ ಮಾಡುವುದರ ಮೂಲಕ ನಮಗೆ ‘ಅಸ್ಪೃಶ್ಯ ಶಿವ’ನ ದರ್ಶನ ಮಾಡಿಸಿದ್ದಾರೆ.

ಪುರೋಹಿತಶಾಹಿಯು ಅಸ್ಪೃಶ್ಯತೆ ಆಚರಣೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ಹಕ್ಕು ನಿಷೇಧಗಳಿಂದ ಊರ್ಜಿತದಲ್ಲಿಟ್ಟಿರುತ್ತದೆ. ಇಂತಹ ಜಾತಿ ಅಹಂಕಾರವನ್ನು ಭಂಜಿಸುವ ಕೆಲಸವನ್ನು ಸಾಮಾಜಿಕ ಚಳವಳಿಗಾರನಾಗಿ ಚಳವಳಿಯ ಮೂಲಕ ಬಾಬಾ ಸಾಹೇಬರೂ ಮತ್ತು ಒಬ್ಬ ಯುವ ಬಂಡುಕೋರ ಕವಿಯಾಗಿ ‘ಜಲಗಾರ’ ನಾಟಕದ ಮೂಲಕ ಕುವೆಂಪು ಅವರೂ ಮಾಡಿ ತೋರಿಸಿದ್ದಾರೆ.

ಆ ಕಾಲಕ್ಕೆ ಗೊಡ್ಡು ಆಚರಣೆಗಳ ಪಾಲಕರಾಗಿದ್ದ ಪುರೋಹಿತಶಾಹಿಗಳಿಗೆ ಈ ಎರಡೂ ಘಟನೆಗಳು ಯಾವ ಪರಿ ತಾಕಿರಬಹುದೆಂದು ನಾನೀಗ ಕಲ್ಪಿಸಿಕೊಳ್ಳುತ್ತಿದ್ದೇನೆ. ವಿಶಾಲ ಭಾರತ ರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್ ರವರ ಸಾಮಾಜಿಕ ಚಳವಳಿಯ ದಂಗೆ ಹಾಗೂ ವಿಶಾಲ ಮೈಸೂರು ರಾಜ್ಯ ಮಟ್ಟದಲ್ಲಿ ಕುವೆಂಪು ಅವರ ಕ್ರಾಂತಿಕಾರಿ ಸಾಹಿತ್ಯ ದಂಗೆ ಏಕಕಾಲದಲ್ಲಿ ನಡೆದಿರುವುದು ಕಾಕತಾಳೀಯವೂ ವಿಸ್ಮಯಕಾರಕ ಸಂಗತಿಯೂ ಆಗಿದೆ.

“ಕಸ ಗುಡಿಸುವ ಜಲಗಾರನಿಗೆ ‘ಪೊರಕೆ ಆರತಿ’, ಗುಡಿಸುವುದು ದೇವರ ಪೂಜೆ, ‘ನನ್ನ ಶಿವ ಕೊಳೆತ ಕಸದೊಳಿಹನು, ಕಪ್ಪುರದೊಳಗಿಲ್ಲ’ ಎಂಬುದು, ಜಲಗಾರನು ತಾನು ಕಂಡುಕೊಂಡ ಶಿವದರ್ಶನ. ಶಿವನು ಜಗದ ಜಲಗಾರನಾಗಿ ಬಂದು ”ಬೀದಿಗುಡಿಸುವ ಬಡವನೆದೆಯಲ್ಲಿ ನಾನಿರುವೆ ಉಳುತಿರುವ ಒಕ್ಕಲಿಗನೆದೆಯಲ್ಲಿ ನಾನಿರುವೆ ಎಲ್ಲಿ ಹೊಲೆಯನು ತನ್ನ ಕಾರ್ಯದಲ್ಲಿ ತೊಡಗಿಹನೋ ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು ಕುರುಡರನು ದೀನರನು ಅನಾಥರನು ಕೈ ಹಿಡಿದು ಪೊರೆಯುತಿಹನೆಡೆಯಿರುವೆ,” ಎಂದು ಹೇಳುವಾಗ ಕುವೆಂಪು ಅವರು, ಶರಣ ಮಾದಾರ ಧೂಳಯ್ಯನು ಅಟ್ಟೆಯ ಚುಚ್ಚುವ ಉಳಿಮೊನೆಯಲ್ಲಿ ಶಿವದರ್ಶನವನ್ನು ಕಂಡು ಕಾಯಕದ ನಡುವೆ ಸುಳಿದು ಅಡ್ಡಿಪಡಿಸಬೇಡವೆಂದು ಜಬರಿಸಿದ ಕಾಯಕಜೀವಿಯ ‘ಸಾಮಾಜಿಕ ಅಧ್ಯಾತ್ಮ’ದ ದರ್ಶನಾತ್ಮಕತೆಯನ್ನೇ ಜಲಗಾರನಲ್ಲಿ ತೋರಿಸಿಕೊಟ್ಟಿದ್ದಾರೆ.

ಅಂಬೇಡ್ಕರ್ ಮತ್ತು ಕುವೆಂಪು ಈ ಇಬ್ಬರನ್ನೂ ಹಿಂದೂಧರ್ಮ ವಿರೋಧಿಗಳು ಅರ್ಥಾತ್ ಬ್ರಾಹ್ಮಣಧರ್ಮ ವಿರೋಧಿಗಳು ಎಂದು ಕರೆದು ಹಣೆಪಟ್ಟಿ ಅಂಟಿಸುವ ಕೆಲಸವೂ ಕೆಲವು ಮನುವಾದಿ ಮನಸ್ಸುಗಳಿಂದ ನಡೆದದ್ದುಂಟು. ಅಂಬೇಡ್ಕರ್ ಅವರು ಇಂತಹ ಸಾಮಾಜಿಕ ಭೇದನ್ಯಾಯ ಸೃಷ್ಟಿಯ ರಚನೆಗಳಾದ ಗುಡಿಗೋಪುರ ಮಂದಿರ ಮಸೀದಿಗಳಿಗೆ ಅಸ್ಪೃಶ್ಯರು ಹೋಗಬಾರದೆಂದು, ಬದಲಾಗಿ ಅವರು ದೇಶವನ್ನು ಆಳುವ ರಾಜಕೀಯ ಚುಕ್ಕಾಣಿ ಹಿಡಿಯಬೇಕೆಂದು ಮುಂದಿನ ದಿನಗಳಲ್ಲಿ ಕರೆ ನೀಡುತ್ತಾರೆ. ಕುವೆಂಪು ಅವರೂ ಸಹ ‘ನೂರಾರು ದೇವತೆಗಳನ್ನು ನೂಕಾಚೆ ದೂರ’ ‘ಗುಡಿ ಚರ್ಚು ಮಂದಿರ ಮಸೀದಿ ಬಿಟ್ಟು ಹೊರಬನ್ನಿ’ ಎಂದು ಕರೆ ನೀಡುತ್ತಾರೆ.

ಕುವೆಂಪು ಅವರ “ಜಲಗಾರ” ನಾಟಕ ಪ್ರಕಟಣೆಗೆ ಮತ್ತು ಅಂಬೇಡ್ಕರ್ ರೂಪಿಸಿದ ಕಾಳಾರಾಮ ದೇವಾಲಯ ಪ್ರವೇಶ ಚಳವಳಿಗೆ 90 ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ಮೊನ್ನೆ 02-12-2019 ರ ಸೋಮವಾರದಂದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲ್ಲೂಕಿನ ಕಡಂದಲೆ ಗ್ರಾಮದ ಸುಬ್ರಹ್ಮಣ್ಯ ದೇವಾಲಯದಲ್ಲಿ, ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಬ್ರಾಹ್ಮಣ ಅರ್ಚಕರು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ನಡೆದಿದೆ.

ಇದನ್ನು ಟೀಕಿಸಿದವರು ಕುವೆಂಪು ಮತ್ತು ಅಂಬೇಡ್ಕರ್ ಅವರಂತೆ ಹಿಂದೂಧರ್ಮದ ವಿರೋಧಿಗಳೆಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version