ದಿನದ ಸುದ್ದಿ
ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ಭ್ರಷ್ಟಾಚಾರ: ಡಿ ಎಸ್ ಎಸ್ ನಿಂದ ತನಿಖೆಗೆ ಒತ್ತಾಯ
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನ ಅಮ್ಮನಗುಡ್ಡದ ದೇವಸ್ಥಾನದ ಪ್ರಮುಖ ಅರ್ಚಕರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ) ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತ ನಾಡಿದ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದ ಪ್ರಮುಖ ಅರ್ಚಕರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಅನೇಕ ದಾಖಲೆ, ವೀಡಿಯೋ ಇವೆ. ಈ ಬಗ್ಗೆ ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ದಾಖಲೆ ಸಮೇತ ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.ಅಮ್ಮನಗುಡ್ಡದ ಶ್ರೀ ಕುಕ್ಕವಾಡೇಶ್ವರಿ ದೇವಸ್ಥಾನ ಎ ಗ್ರೇಡ್ ಆಗಿರುವುದರಿಂದ ಆಯೋಗ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಅರ್ಚಕರಾಗಿರುವರು ಮೊದಲು ಗುತ್ತಿಗೆ ಆಧಾರದಲ್ಲಿ ಸೇರಿಕೊಂಡಿ ದ್ದರು. ಈಗ ಕೋಟ್ಯಾಧೀಶರಾಗಿದ್ದಾರೆ. ಅವರ ಕುಟುಂಬದವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ನಿಜವಾಗಿಯೂ ಸಂವಿಧಾನ ಕಾನೂನು ಬಗ್ಗೆ ಗೌರವ ಇದ್ದಲ್ಲಿ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನಕ್ಕೆ ಪ್ರತಿ ದಿನ ಬರುವಂತಹ ಸಹಸ್ರಾರು ಭಕ್ತಾದಿಗಳು ಚಿನ್ನ, ಬೆಳ್ಳಿ ಆಭರಣ, ಹಸು ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಬಹುತೇಕ ಕಾಣಿಕೆಗಳಿಗೆ ಪೂಜಾರಿಯವರು ರಸೀದಿಯೇ ನೀಡುವುದಿಲ್ಲ. ಒಂದಷ್ಟು ಕಾಣಿಕೆಗಳಿಗೆ ರಸೀದಿ ನೀಡಿ ಸರ್ಕಾರಕ್ಕೆ ಲೆಕ್ಕ ಕೊಡುತ್ತಾರೆ. ಇನ್ನುಳಿದವನ್ನು ತಮ್ಮ ಸ್ವಂತದ್ದು ಎಂಬುದಂತೆ ವೈಯಕ್ತಿಕಕ್ಕೆ ಬಳಕೆ ಮಾಡುತ್ತಿದ್ದಾರೆ. ದೇವಸ್ಥಾನದ ಅರ್ಚಕರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಅರ್ಚಕರು ನಡೆಸುವ ಭ್ರಷ್ಟಾಚಾರ ಬಯಲಿಗೆ ತಂದಿರುವ ಕಾರಣಕ್ಕಾಗಿ ಡಿ ದರ್ಜೆ ನೌಕರ ರಮೇಶ್ ಎಂಬುವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕೂಡಲೇ ಅವರನ್ನು ಕೆಲಸಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಮೇಶ್ ಮಾತನಾಡಿ, ಅರ್ಚಕರು ನಡೆಸುವ ಭ್ರಷ್ಟಾಚಾರದ ವೀಡಿಯೋ, ಆಡಿಯೋ ಮಾಡಲಾಗಿದೆ. ಆ ಕಾರಣದಿಂದ ನನ್ಮನ್ನು ಕೆಲಸದಿಂದ ತೆಗೆದು ಹಾಕಲಾಯಿತು.
ತಹಶೀಲ್ದಾರ್ ಅವರನ್ನು ಕೇಳಿದರೆ ಶಾಸಕರ ಕಾಲು ಹಿಡಿಯುವಂತೆ ಹೇಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ. ಏಳುಕೋಟಿ, ರಮೇಶ್ , ಪರಮೇಶ್, ಪ್ರದೀಪ್, ಬಿ. ಕೃಷ್ಣಪ್ಪ, ನಿಂಗರಾಜ್, ಎರೇಹಳ್ಳಿ ಉಮಾಪತಿ, ವಿಜಯಮ್ಮ, ಚಿತ್ರಲಿಂಗಪ್ಪ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243