ಅಂತರಂಗ
ಅಂಥವರಿಗೆ ಆತನ ಮಾತನೊಮ್ಮೆ ಕೇಳಿಸಬೇಕೇನಿಸುತ್ತದೆ …!
ಆಗೊಮ್ಮೆ ಈಗೊಮ್ಮೆ ನಾನು ಏನಾದ್ರೂ ಬರೆಯಬೇಕು ಅಂತಾ ಕೂತಾಗ್ಲೇ ಆಟಕ್ಕೋ, ಚಾನಲ್ ಗೆ ಈಜಾಡಲು ಹೋಗ್ಲಿಕ್ಕೋ ಅಥವಾ ಊರು ಸುತ್ತಲಿಕ್ಕೋ ಅಂತಾ ಕರೆಯಲು ಬರುತ್ತಿದ್ದ ನನ್ನ ಅನಕ್ಷರಸ್ಥ ಗೆಳೆಯನೊಬ್ಬ ಆಗಾಗ್ಗೆ ಹೇಳುತ್ತಿದ್ದ ಮಾತು ಪದೇ ಪದೇ ನೆನಪಾಗುತ್ತಲೇ ಇರುತ್ತದೆ.
“ಹಾಡಾಗಲಿ – ಅಕ್ಷರವಾಗಲಿ ಎದೆಯಿಂದ ಬರಬೇಕಲೇ,, ವಾಸ್ತವ ಬದುಕಿನ ಬಗ್ಗೆ ಅರಿವೇನೇ ಇಲ್ದೆ ಪುಸ್ತಕದ ಹುಳುದ್ ತರಾ ಬರೀ ನಾಕ್ ಗೋಡೆ ಮಧ್ಯೆ ಓದಿ – ಬರೆದ್ರೆ ಅದಕ್ಕೆ ಸತ್ವ ಇರ್ತತೇನ್ಲೇ,, ಜನ ಸಂಪರ್ಕನೇ ಇಲ್ದೆ, ಜೀವನಾನುಭವನೂ ಇಲ್ದೆ ನೀನ್ ಎಷ್ಟು ಬರೆದ್ರೂ ಅದು ಸತ್ ಶವಕ್ಕೆ ಸಮ,,, ಬರೀ ಕಲ್ಪನೆಯೊಳಗೆ ಕರಗಿ , ಭಾವನೆಯೊಳಗೆ ಮುಳುಗಿ ಪ್ರಪಂಚಾನೇ ಮರೆತು ಬಿಟ್ಟು ಭಾರೀ ದೊಡ್ಡ ಬುಕ್ ಬರೆದ್ ಬಿಟ್ರೆ ನೀನು ದೊಡ್ ಸಾಹಿತಿ ಆಗೋಕೆ ಸಾಧ್ಯಾನಾ ? ಅದು ಜನರ ಮನಸ್ಸಿಗಾದ್ರೂ ಮುಟ್ಟೋಕೆ ಸಾಧ್ಯನಾ ? ಮೊದ್ಲು ಪ್ರಪಂಚ ಓದು, ಜೀವನಾನ ಓದು,, ಮನುಷ್ಯತ್ವ ಕಲಿತು ಕೋ, ಪ್ರೇಮ – ಪ್ರೀತಿ, ಸಾಮರಸ್ಯ, ಹೊಂದಾಣಿಕೆ ಅಂತ ಬರೀ ಕತೆ ಕವನ ಬರಿಯೋ ಬದ್ಲು ಹಂಗ್ ನಡ್ಕಾ,, ಬೇರೆಯವರಿಗೆ ಬುದ್ದಿ ಹೇಳೋಕ್ ಹೋಗ್ಬೇಡ, ನೀನ್ ಬುದ್ಧಿ ಕಲ್ತಕೋ,,, ನೀನೇನು ಅಂತ ಪ್ರಪಂಚಕ್ಕೆ ತೋರ್ಸೋಕ್ ಹೋಗ್ಬೇಡ,, ಪ್ರಪಂಚೇನು ಅಂತ ಮೊದ್ಲು ನೀನ್ ಅರಿತ್ಕ,, ನಿನ್ ತಲೆಯಾಗ ಕಸ ತುಂಬಿಕೊಂಡು ಅದನ್ನೇ ನೀನ್ ಬರೆಯಾಕ್ ಹೋದ್ರೆ ಸಮಾಜಕ್ಕೆ ನೀನ್ ಏನ್ ಒಳ್ಳೇದ್ ಕೊಡೋಕ್ ಸಾಧ್ಯ ? ಫರ್ಸ್ಟು ನೀನ್ ಒಳ್ಳೆನಾಗಿ ಬದ್ಕೋದ್ ಕಲಿ, ಆಮೇಲೆ ಬರೀ ಅದು ಇನ್ನೊಬ್ರಿಗೆ ನಾಟ್ತತಿ.”
ನಿಜ, ಕೆಲವರು ದೊಡ್ ದೊಡ್ ಪುಸ್ತಕ – ಗ್ರಂಥಗಳನ್ನೇ ಬರೆದಿರ್ತಾರೆ. ಆದರೆ ಬೆಪ್ ತಕ್ಕಡಿಗಳ ತರಹ ವರ್ತಿಸ್ತಾ ಇರ್ತಾರೆ, ಪಾಸಿಟಿವ್ ಚಿಂತನೆಗಳ ಬಗ್ಗೆ ಬಲು ಪಸಂದ್ ಹೇಳ್ತಾರೆ – ಭಾಷಣ ಮಾಡ್ತಾರೆ. ಆದ್ರೆ ನೆಗೆಟಿವ್ ಶೇಡ್ ಜೀವನ ಅಳವಡಿಸಿ ಕೊಂಡಿರ್ತಾರೆ. ಮಾನವೀಯ ಸಂಬಂಧ, ಮೌಲ್ಯ, ಲೌಕಿಕ – ಅಲೌಕಿಕ ಜ್ಞಾನಾದರ್ಶಗಳ ಕುರಿತು ಫುಂಖಾನುಪುಂಖ ಶಂಖ ಊದುತ್ತಾರೆ. ನಿಜ ಜೀವನದಲ್ಲಿ ಅವೆಲ್ಲವನ್ನೂ ಗಾಳಿಗೆ ತೂರಿ ಬಿಟ್ಟಿರುತ್ತಾರೆ. ಮನುಷ್ಯರನ್ನೂ, ವಾಸ್ತವತೆಯನ್ನೂ ಬರೀ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ. ಭಾರೀ ದೊಡ್ಡ ಸಾಹಿತಿ – ಸಂಶೋಧಕರು ಅದು ಇದೆಂಬ ಪಟ್ಟ ಧರಿಸಿ ಕಿರೀಟ ಹೊತ್ತಿರುತ್ತಾರೆ,, ವಾಸ್ತವದಲ್ಲಿ ಅನಕ್ಷರಸ್ಥರಿಗೆ ತಿಳಿದಿರುವಷ್ಟೂ ಸಾಮಾನ್ಯ ಜ್ಞಾನ ಅವರಿಗಿಲ್ಲ ವೆಂಬುದನ್ನು ಮಾತು ಕೃತಿಯಲ್ಲಿ ಬಹಿರಂಗ ಪಡಿಸಿಕೊಳ್ಳುತ್ತಾರೆ. ಆದರೂ ಅಂಥವರಿಗೇ ಬಕೆಟ್ ಹಿಡಿವ ಮಂದಿಯಿಂದಾಗಿ ಮುಂಚೂಣಿಗೆ ಬರುತ್ತಲೇ ಇರುತ್ತಾರೆ.
ಇದೊಂದು ಮೊನ್ನೆ ತಾನೇ ನಡೆದ ನೈಜ ಪ್ರಸಂಗ…. ಯಾವುದೋ ವಿಷಯ ಕುರಿತು ಉಪನ್ಯಾಸ ನೀಡಲು ಅತಿಥಿಯೊಬ್ಬರನ್ನು ಕರೆಸುವ ಸಮಿತಿಯ ಚರ್ಚೆಯಲ್ಲಿ ನಾನೂ ಪಾಲ್ಗೊಂಡಿದ್ದೆ, ಯಾರು ಸೂಕ್ತ ಎಂಬ ವಿಚಾರದಲ್ಲಿ ಹಲವು ದೊಡ್ಡ ದೊಡ್ಡ ಪಟ್ಟಧಾರಿಗಳ ಹೆಸರುಗಳು ಕೇಳಿ ಬಂದವು. ಆಗ ನಾನು ಆ ವಿಷಯದ ಕುರಿತು ಅಪಾರ ಜ್ಞಾನಾನುಭವ, ನಿಖರ ಮತ್ತು ಸ್ಪಷ್ಟ ಮಾಹಿತಿ ಹೊಂದಿರುವ ವ್ಯಕ್ತಿಯೊಬ್ಬರ ಹೆಸರು ಹೇಳಿದೆ. ಆದರೆ ಅದಕ್ಕೆ ಅವರಿಂದ ಬಂದ ಪ್ರತ್ಯುತ್ತರ – ” ಇಲ್ಲ ಗಂಗಣ್ಣ, ಇಂತಹ ದೊಡ್ಡ ವಿಷಯಕ್ಕೆ ದೊಡ್ಡ ದೊಡ್ಡ ಲೆಕ್ಚರರ್ ಅಥವಾ ಯುನಿವರ್ಸಿಟಿ ಲೆವೆಲ್ ಪ್ರೊಫೆಸರ್ರೇ ಆಗಬೇಕು, ಇಲ್ಲ ಅಂದ್ರೆ ಜನರ ಮುಂದೆ ನಗೆ ಪಾಟೀಲಿಗೆ ಗುರಿಯಾಗಬೇಕಾಗುತ್ತದೆ.” ನಾನು ನಕ್ಕು ಸುಮ್ಮನಾದೆ.
ಕಾರ್ಯಕ್ರಮ ನಡೆದ ದಿನ ನಿಜಕ್ಕೂ ಅವರು ಕರೆಸಿದ ಪ್ರೊಫೆಸರ್ ರವರ ಮಾತು ಕೇಳಿ ಕೆಲವರು ಒಳಗೊಳಗೇ ಮುಸು ಮುಸು ನಕ್ಕರು.. ಇವನನ್ನ ಕರೆಸುವ ಬದಲು ಒಬ್ಬ ಕುರಿಗಾಹಿಯನ್ನೋ, ಹಸು ಮೇಯಿಸುವವನನ್ನೋ ಅಥವಾ ಅಲೆಮಾರಿಯನ್ನೋ ಕರೆಸಿದ್ದರೂ ಸಾಕಿತ್ತು. ಅವರಿಂದ ಅದ್ಭುತ ಮತ್ತು ನಿಖರವಾದ ಮಾಹಿತಿ ಸಿಕ್ಕು ಬಿಡುತಿತ್ತು. ಸುಮ್ನೇ ಕಾಲಹರಣ ಮತ್ತು ಸಂಭಾವನೆ ದುಡ್ಡು ಕೂಡ ವೇಸ್ಟು ಎಂದು ಕೆಲವರು ಬಾಯಿಬಿಟ್ಟೇ ಹೇಳಿದರು. ಆದರೆ ದುಡ್ಡು, ಜಾತಿ, ಅವಕಾಶವಾದಿತನದ ಮದ ಅಡರಿದವರ ಕಿವಿಗದು ನಾಟಲೇ ಇಲ್ಲ. ಮುಂದೆಯೂ ನಾಟುವುದಿಲ್ಲ.
ಈ ಎಲ್ಲದರ ನಡುವೆ, ಅಂಥವರ ಕಂಡಾಗ ಆ ಗೆಳೆಯನ ಮಾತೊಮ್ಮೆ ನೆನಪಿಗೆ ಬಂದು ಮುಖದಲ್ಲಿ ಕಿರುನಗೆ ಹೊಮ್ಮಿ ಮುಂದೆ ಸಾಗುತ್ತಲೇ ಇರುತ್ತೇನೆ.
– ಗಂಗಾಧರ ಬಿ ಎಲ್ ನಿಟ್ಟೂರ್
ದಾವಣಗೆರೆ