ದಿನದ ಸುದ್ದಿ

ರೈತರಿಗೆ ಸಹಾಯಧನ : ಅರ್ಜಿ ಆಹ್ವಾನ

Published

on

ಸುದ್ದಿದಿನ,ಬಳ್ಳಾರಿ : ತೋಟಗಾರಿ ಇಲಾಖೆ ವತಿಯಿಂದ 2019-20ನೇ ಸಾಲಿನ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಗರಿಷ್ಠ 5 ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ್, ಜೇನು ಕೃಷಿ ಸಂರಕ್ಷಿತ ಬೇಸಾಯ ಹಾಗೂ ಇತರೆ ಘಟಕಗಳಿಗೆ ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳ ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ ಹೌಸ್ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ ಗುಚ್ಚ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆ, ನೀರು ಸಂಗ್ರಹಣ ಘಟಕ ಪ್ಯಾಕ್ ಹೌಸ್ ನಿರ್ಮಾಣ, ಪ್ಲಾಸ್ಟಿಕ್ ಕ್ರೇಟ್ಸ್ ಕೊಳ್ಳಲು ಪ್ರೋತ್ಸಾಹಧನ ನೀಡುವುದು.

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಸಂರಕ್ಷಿತ ಬೇಸಾಯದಡಿ ನೆರಳು ಪರದೆ ಹಾಗೂ ಕೃಷಿ ಹೊಂಡ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುವುದು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತೆಂಗು, ಮಾವು, ಸಪೋಟ, ಬಾಳೆ, ಅಂಜೂರ, ನುಗ್ಗೆ, ಪಪ್ಪಾಯ, ಪೇರಲ(ಸೀಬೆ) ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ಮತ್ತು ಕೊಳವೆ ಬಾವಿ ಮರು ಪೂರಣ ಹಾಗೂ ನೀರು ಸಂರಕ್ಷಣೆ ಕಾಮಗಾರಿಗಳನ್ನು ರೈತರು ಜಮೀನಿನಲ್ಲಿ ಅನುಷ್ಠಾನಗೊಳಿಸಲಾಗುವುದು. ಗೇರು ಅಭಿವೃದ್ದಿ ಯೋಜನೆಯಡಿ ಗೇರು ಬೆಳೆಯ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ನೀರಿನ ಟ್ಯಾಂಕರ್ ಖರೀದಿಗೆ ಸಹಾಯಧನ, ಮಧುವನ ಮತ್ತು ಜೇನು ಸಾಕಾಣಿಕೆಗೆ ಸಹಾಯಧನ ನೀಡಲಾಗುತ್ತದೆ.

ಈ ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ರೈತರು ಮೇ 30ರೊಳಗಾಗಿ ಅರ್ಜಿ ಸಮೇತ ಅಗತ್ಯವಾದ ದಾಖಲಾತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version