ನೆಲದನಿ
ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು
- ಸುರೇಶ ಎನ್ ಶಿಕಾರಿಪುರ
ನನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ.
ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,
“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.
ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.
ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ.
ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು.
ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.
ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.
ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.
ಸುದ್ದಿದಿನ.ಕಾಂ|ವಾಟ್ಸಾಪ್|9980346243