ಅಂತರಂಗ

ನನ್ನ ಹಡೆದವ್ವ ಸೂಳೆ ಸಂಕೆವ್ವ

Published

on

ಜಗತ್ತಿನ ಅತ್ಯಂತ ವೈಚಾರಿಕತೆಯ ನೆಲೆಯಲ್ಲಿ ಸುಂದರ ಕಲ್ಯಾಣ ಸಮಾಜವನ್ನು ಕಟ್ಟಿದವರು ಅಪ್ಪ ಬಸವರಾಜರು. ಹೌದು, ಹಲವು ಜಿಡ್ಡುಗಟ್ಟಿದ ಆಚರಣೆಗಳ ಕಂಡು ಮನ ನೊಂದ ಬಸವರಸರು, ಹಿಡಿಯ ಸಮಾಜವನ್ನು ಒಮ್ಮತದಿಂದ ಕಂಡು ಹಿಡಿದಪ್ಪಿದ ಮಹಾ ಪ್ರವಾದಿಯಾಗಿದ್ದರು. ಜಾತೀಯತೆ, ಮೌಢ್ಯಕಂದಾಚಾರಗಳು, ಮೇಲು ಕೀಳೆಂಬ ಹೊಲಸು ಮನಸುಗಳ ಸುಟ್ಟು, ಸಮಾನತೆಯ ಸಮಾಜದ ಕನಸ ಕಂಡು ಸುಂದರವಾದ ಕಲ್ಯಾಣ ರಾಜ್ಯವ ನಿರ್ಮಾತರು ಅಪ್ಪ ಬಸವರಾಜರು.

ಒಮ್ಮೆ ಕಲ್ಯಾಣಪಟ್ಟಣದಲ್ಲಿ ಬಸವರಾಜರು ತಮ್ಮ ಕಾಯಕದಿಂದ ಮಹಾಮನೆಗೆ ತೆರಳುವಾಗ ಸುಂದರ ದೇಹದ ಸೂಳೆಯೊಬ್ಬಳು ಓಡೋಡಿ ಬಂದು ಬಸವಪ್ಪನ ಎದರು ನಿಂತು ಅಪ್ಪನ ಮುಖವ ನೋಡದೆ ಕಾಲ ಮುಟ್ಟದೇ ಆ ಪಾದಗಳನ್ನೇ ದಿಟ್ಟಿಸುತ್ತ ಬಿಕ್ಕಿ ಬಿಕ್ಕಿ ಅಳುತ್ತಾ ಹೀಗೆ ಹೇಳುತ್ತಾಳೆ.

ಹೇ ನನ್ನೊಡೆಯ ಬಸವರಾಜಾ, ಬಸವಪ್ಪ, ಬಸವಣ್ಣ, ಬಸವೇಶ, ಬಸವರಸ, ಬಸವ ದೊರೆ, ಬಸವ ವಸುದೀಶ, ಬಸವ ಕೃಪಾನಿಧಿ, ಬಸವ ಪರುಷನಿಧಿ, ಬಸವಯ್ಯ ಬಸವಯ್ಯ ಬಸವಯ್ಯಾ ಎನ್ನೊಡೆಯ ಸಂಗನ ಬಸವಣ್ಣನೇ ನಿಮ್ಮ ದಿಬ್ಯಾ ಪಾದಗಳಲ್ಲಿ ನನ್ನ ಶರಣು ಶರಣಯ್ಯಾ ಎಂದು ಅಳುತ್ತಲೇ ನಿಂತಾಗ ಅಪ್ಪನ ಮನ ಕರಗಿ, ನನ್ನವ್ವ ಯಾರವ್ವಾ ನೀನು ಏನಾಯಿತು ತಾಯಿ ಎಂದು ಕೇಳಲು, ಸಂಕೆವ್ವನ ಬಿಗಿದ ಗಂಟಲು ನೀರಾಗಿ ಜೋರಾಗಿ ಅಳುತ್ತಲೇ…..

ಹೇ ಬಸವರಾಜಾ..ನಾನೊಬ್ಬ ಸೂಳೆ ಅಪ್ಪಾ, ಸಂಕೆವ್ವ ಎಂದು ನನ್ನ ಹೆಸರು. ದಯಮಾಡಿ ಇನ್ನೆಂದು ಅವ್ವಾ ಎನ್ನದಿರು ಎಂದಾಗ ಅಪ್ಪ ಬಸವರಾಜರ ಮನ ತುಂಬಿ ಬಂದು ನನ್ನವ್ವಾ ಹಾಗೆನ್ನದಿರಿ ತಾಯಿ ಎನ್ನುತ್ತ ಸಂಕೆವ್ವಳ ಕೈಗಳ ಹಿಡಿದು ತಮ್ಮ ಹಣೆಯನಿಟ್ಟು, ನಾ ನಿಮ್ಮ ಮಗನೆಂದೇ ಭಾವಿಸು ತಾಯಿ ಎನ್ನುವಾಗ ಸಂಕೆವ್ವಳ ಎದೆ ಬಡಿತ ಜೋರಾಗಿ, ಬಸವ ಬಸವಾ ಎನ್ನಲು, ಆಗ ಬಸವಣ್ಣನವರು ಹೇಳುತ್ತಾರೆ, ನೋಡು ತಾಯಿ ನಾವೆಲ್ಲರೂ ನಿಜದೇವನ ಅಂಶಗಳೊಳಗೊಂಡ ಸಮಾನ ಜೀವಿಗಳು, ನಮ್ಮಲ್ಲಿ ಬೇಧವಿಲ್ಲ ತಾಯಿ, ನಾನು ನಿಮ್ಮ ಮಗನೆಂದು ಭಾವಿಸವ್ವಾ ಎನ್ನಲು ಸೂಳೆಯಾದ ಸಂಕೆವ್ವಳು ಒಡನೇ ಶರಣೆಯಾಗಿ ಬದಲಾಗುತ್ತಾಳೆ.

ನಂತರ ಅಪ್ಪ ಬಸವರಾಜರು ಹೇಳಿದಂತೆ ಅನುಭವ ಮಂಟಪಕ್ಕೆ ಬಂದು ಅಲ್ಲಿ ನೆರೆದಿದ್ದ ಸಕಲ ಶರಣ ಗಣಂಗಳ ಮುಂದೆ ತಲೆ ಬಾಗಿ ಶರಣೆಂದು ನಿಲ್ಲಲು ಅಲ್ಲಿನ ಶರಣರೆಲ್ಲರೂ ಅವಳನ್ನು ಶರಣು ಬಾ ತಾಯಿ ಎನ್ನುತ್ತ ಬರಮಾಡಿಕೊಂಡು ಅನುಭವ ಮಂಟಪದ ಸದಸ್ಯೆಯಾಗಿಸುತ್ತಾರೆ. ಅಲ್ಲಿ ಸೂಳೆ ಸಂಕೆವ್ವಳು ತನ್ನೊಳಗಿರುವ ಹಲವು ಸಂದೇಹಗಳನ್ನು ಶರಣರ ಮುಂದಿಟ್ಟ ಬಗೆಯಂತೂ ಬಲು ಅಪರೂಪ ಮತ್ತು ಜ್ಞಾನ ಪೂರಿತವಾಗಿತ್ತು. ಪಾಪ ಪುಣ್ಯಗಳು ಎಂದರೇನು, ಹಿಂದಣ ಜನ್ಮ ಎಂದರೇನು ಅವುಗಳ ನಿಲುವುಗಳೇನು ಎಂಬ ಅನೇಕಾನೇಕ ವಿಚಾರಗಳ ವಿಚಾರಿಸಿ ಅಂದಿನ ಅನುಭವವ ಅಲ್ಲಮರು ಹಲವು ಬೆಡಗಿನ ವಚನಗಳ ಮೂಲಕ ತಿಳಿಸುತ್ತಾರೆ.

ನಂತರದ ದಿನಗಳಲ್ಲಿ ಸೂಳೆ ಸಂಕೆವ್ವ ತಾಯಿಯು ತನ್ನೂರಿನ ಸುತ್ತಲೂ ಶರಣ ತತ್ವ ಪ್ರಚಾರಿಸುತ್ತಾ ವಚನಗಳ ಹಾಡುತ್ತಾ ಗುರು ಲಿಂಗ ಜಂಗಮ ದಾಸೋಹ ಕಾಯಕ ಗಳಲ್ಲಿ ತಲ್ಲೀನಳಾಗಿ ಜೀವಿಸುತ್ತಿರುವಾಗ ಒಮ್ಮೆ ಬ್ರಹ್ಮಣನೊಬ್ಬ ಇವಳಿಗೆ ಮನ ನೊಹಿಸಲೆಂದೇ ಗೇಲಿ ಮಾಡುತ್ತಾ… ದಾಸೆ ಸೂಳೆಯರೆಲ್ಲ ದಾಸೋಹ ಮಾಡುತ್ತಾ ದೇಹದಾ ದಾಹವ ತಣಿಸಲು ಬರುವಳೋ ಎಂದಾಗ ಅವ್ವ ಸಿಟ್ಟಿನಿಂದ ಒಂದು ವಚನ ಹೇಳುತ್ತಾಳೆ.

ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ
ಹಿಡಿದೆಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ
ವ್ರತಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈಕಿವಿ ಮೂಗ
ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೇಶ್ವರಾ!!

ಎಂದು ಹೇಳಲು ಆ ವ್ಯಕ್ತಿಯು ಹೆದರಿ ಹೋಗುತ್ತಾನೆ.

ಹೀಗೆ ಅವ್ವ ಸಂಕೆವ್ವಳ ವಚನಗಳಲ್ಲಿ ಆತ್ಮವಿಶ್ವಾಸ, ದಿಟ್ಟ ನಿಲುವು, ಅಚಲ ಎದೆಗಾರಿಕೆ, ಕಾಯಕ ನಿಷ್ಠೆಯಿಂದ ಕೂಡಿದ್ದಾಗಿದ್ದು. ವಚನಗಳ ಅಂಕಿತವನ್ನು “ನಿರ್ಲಜ್ಜೇಶ್ವರಾ“.

ಸಮಾಜದ ಬಹಿಷ್ಕೃತ ಸಮೂಹದಲ್ಲಿದ್ದು ಸೂಳೆಯಾಗಿದ್ದರೂ ಅಪ್ಪ ಬಸವರಾಜರ ವಿಶಾಲ ತಾಯಿ ಹೃದಯದ ಪರಿಣಾಮ ಅತಿ ಶ್ರೇಷ್ಠ ಶರಣೆಯಾಗಿ ಹೊರಹೊಮ್ಮುತ್ತಾಳೆ “ನನ್ನ ಹಡೆದವ್ವ ಸೂಳೆ ಸಂಕೆವ್ವ”.

ಹೆಣ್ಣನ್ನು ವಸ್ತುವಿನಂತೆ ಮತ್ತು ತನ್ನ ಬಯಕೆಗಳ ತೀರಿಸಲೋಸುಗವಾಗಿ ಹುಟ್ಟಿರುವ ಜೀವಿಯಂತೆ ಉಪಯೋಗಿಸುತ್ತಿದ್ದ/ತ್ತಿರುವ ವಿಷಮ ಸಮಾಜವನ್ನು ತೊಡೆದು ಹಾಕಿದವರು ಬಸವಾದಿ ಶರಣರು.

ಸಾವಿರಾರು ದಶಕಗಳಿಂದಲೂ ಹೆಣ್ಣನ್ನು ಕೀಳಾಗಿ ಕಾಣುವ ಹಲವು ಧರ್ಮಗಳ ಒಮ್ಮೆಲೇ ಧಿಕ್ಕರಿಸಿ ಕ್ರಾಂತಿಕಾರಿ ಚಳುವಳಿಗೆ ನಿಂತವರು ನಮ್ಮ ಬಸವಾದಿ ಶರಣರು.

ಒಮ್ಮೆ ರಸೂಲ್ ಮುಹಮ್ಮುದ್(ಸ ಅ) ರಂತಹ ಮಹಾ ಪ್ರವಾದಿಗಳೂ ಸಹ ಒತ್ತಾಯದ ಮೇರೆಗೆ ಮುಟ್ಹಾ(ಮಟ್ಹ) ಎಂಬ ನೀತಿಯ ಜಾರಿಗೆ ತರಲು ಸಮ್ಮತಿ ನೀಡುತ್ತಾರೆ. ಜೀಸಸ್ ಎಂಬ ದೈತ್ಯಾಕಾರದ ಸಂತರೂ ಸಹ ಹೆಣ್ಣನ್ನು ಹಾಗೆ ಜೀವಿಸಲು ಅನುಮತಿಸುತ್ತಾನೆ. ಹಿಂದೂ ಧರ್ಮದಲ್ಲಿ ಇಂದಿಗೂ ಹೆಣ್ಣಿನ ಶೋಷಣೆ ನಿಂತಿಲ್ಲ. ಜಿನ ಧರ್ಮದವರಂತೂ ಹೆಣ್ಣು ಹಂದಿಯ ಜನ್ಮಾಂತರಿ ಅವಳಿಗೆ ಮುಕ್ತಿ ಇಲ್ಲ ಎಂದು ಖಡಾ ಖಂಡಿತವಾಗಿ ನುಡಿದರೆ ಬುದ್ದನ ಧಮ್ಮವೂ ಹೆಣ್ಣಿನಿಂದ ದೂರ ಉಳಿಯುವುದೇ ಸನ್ಯಾಸತ್ವದ ಮೊದಲ ಮೆಟ್ಟಿಲು ಎಂದು ಭೋದಿಸುತ್ತದೆ. ಸಿಖ್ ಧರ್ಮ ಸಹ ಹಿಂದೂ ಧರ್ಮದಂತೆ ನಡೆದುಕೊಳ್ಳುತ್ತದೆ.

ಎಲ್ಲಿ ನೋಡಿದರೂ ಹೆಣ್ಣು ಶೂದ್ರಾಳಾಗಿ ಪುರುಷ ಪ್ರಧಾನ ಸಮಾಜದಲ್ಲಿ ಶೋಷಿತಳಾಗಿ ಉಳಿದರೆ. ಶರಣರ ದೃಷ್ಟಿಯಲ್ಲಿ ಅವಳಲ್ಲಿನ ಮೀರಿದ ಘನವ ಹೀಗೆ ಕಾಣುತ್ತಾರೆ.

ಮೊಲೆ ಮೂಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ!!

ಎನ್ನುತ್ತಾ ಎಲ್ಲ ಅಸಮಾನತೆಗಳ ಮೀರಿ ನಿಂದ ಮಹಾ ಜ್ಞಾನವನ್ನು ಸಮಾಜಕ್ಕೆ ಸಾರುತ್ತಾರೆ.
ಮುಂದೆ ಶರಣನಾದವನ ಛಲವು ಹೇಗಿರಬೇಕೆಂದು ಹೀಗೆ ಹೇಳುತ್ತಾರೆ.

ಕೆಳಗಿನ ವಚನವನ್ನು ಗಟ್ಟಿ ದ್ವನಿಯಲ್ಲಿ ಓದುವುದುತ್ತಮವು 

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಭೇಕು ಶರಣಂಗೆ ಪರಸತಿಯನೊಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲೆನೆಂಬ
ಛಲಬೇಕು ಶರಣಂಗೆ ಲಿಂಗ ಜಂಗಮೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮ ದೇವಾ!!

ಹೀಗೆ ನುಡಿನಡೆಯಲ್ಲೂ ಒಂದಾದ ಶರಣರ ನೆನೆದು, ಸಕಲ ಜೀವಾತ್ಮರಿಗೂ ಲೇಸ ಬಯಸಿ, ಸಕಲರಿಗೂ ಸಮ ಬಾಳು, ಸಕಲರಿಗೂ ಸಮಾನತೆಯ ನೀಡಿ ಮಹಾನಮಾನವೀಯತೆಯ ಮೆರೆದ ಅಪ್ಪ ಬಸವರಾಜರಿಗೂ,ಅಪ್ಪ ಭೀಮರಾಯ ಅಂಬೇಡ್ಕರ್ ರಿಗೂ ಮತ್ತು ನಿಮ್ಮಗಳ ಮನದ ಮಹಾ ಮಾನವೀಯತೆಯ ಬೆಳಗಿಗೆ ನನ್ನ ಶರಣು ಶರಣಾರ್ಥಿಗಳು.

ದೀಪ್ತಿ ಎಸ್ ಪಾಟೀಲ್
ವಿದ್ಯಾರ್ಥಿನಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version