ಬಹಿರಂಗ

ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಂಬೇಡ್ಕರರು ಹೇಳಿದ್ದ ಒಂದು ಕಥೆ..! : ಮಿಸ್ ಮಾಡ್ದೆ ಓದಿ

Published

on

  • ರಘೋತ್ತಮ ಹೊ.ಬ

1947 ರ ಏಪ್ರಿಲ್ 14 ಅಂಬೇಡ್ಕರರ 55ನೇ ಹುಟ್ಟುಹಬ್ಬದ ಸಂದರ್ಭವದು. ಆ ಸಂದರ್ಭದಲ್ಲಿ ಮದ್ರಾಸಿನ ‘ಜೈಭೀಮ್’ ಮಾಸಿಕಕ್ಕೆ ತಮ್ಮ ಜನ್ಮದಿನಾಚರಣೆಯ ಪ್ರಯುಕ್ತ ನೀಡಿದ ಸಂದೇಶದಲ್ಲಿ ಗ್ರೀಕ್ ನ ಹೋಮರನ ಕಾವ್ಯದಲ್ಲಿ ಕಂಡುಬರುವ ಗ್ರೀಕ್ ದೇವತೆ ಡಿಮಿಟ್ರಿಯನ್ನು ಉದ್ದೇಶಿಸಿ ಬರೆದಿರುವ ಒಂದು ಕಥೆಯನ್ನು ಅಂಬೇಡ್ಕರರು ಹೇಳುತ್ತಾರೆ.

ಅಂಬೇಡ್ಕರರು ಹೇಳಿದ ಆ ಕಥೆ ಹೀಗಿದೆ:-
“ಒಮ್ಮೆ ಗ್ರೀಕ್ ದೇವತೆ ಡಿಮಿಟ್ರಿ ತನ್ನ ಮಗಳಿಗಾಗಿ ಹುಡುಕುತ್ತಾ ರಾಜ ಕೇಲಿಯೋಸನ ಆಸ್ಥಾನಕ್ಕೆ ಬರುತ್ತಾಳೆ. ಕರುಣಾಭರಿತ ಓರ್ವ ದಾದಿಯ ರೂಪದಲ್ಲಿ ಆಕೆ ಬಂದಿದ್ದರಿಂದ ಯಾರಿಗೂ ಕೂಡ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ರಾಣಿ ಮೆಟೊನೀರಾ ಆಗ ತಾನೆ ಹುಟ್ಟಿದ ತನ್ನ ಅಸುಕಂದ ಡೆಮೋಫೋನ್‌ನನ್ನು (ನಂತರ ಆತ ಟ್ರಿಪ್ಟೊಲೊಮೊಸ್ ಎಂದು ಕರೆಯಲ್ಪಡುತ್ತಾನೆ) ದಾದಿಯ ರೂಪದಲ್ಲಿದ್ದ ದೇವತೆ ಡಿಮಿಟ್ರಿಗೆ (ಆರೈಕೆಮಾಡಲು) ಒಪ್ಪಿಸುತ್ತಾಳೆ.

ಆಶ್ಚರ್ಯಕರವೆಂದರೆ ಪ್ರತಿಸಂಜೆ ಮುಚ್ಚಿದ ಬಾಗಿಲುಗಳ ಹಿಂದೆ ಮನೆಯವರೆಲ್ಲ ಮಲಗಿದ ನಂತರ ದೇವತೆ ಡಿಮಿಟ್ರಿ ಪುಟ್ಟ ಆ ಡೆಮೋಫೋನ್‌ನನ್ನು ತೊಟ್ಟಿಲಿನಿಂದ ಕ್ರೂರವಾಗಿ, ಹಾಗೆ ಅಷ್ಟೇ ಪ್ರೀತಿಯಿಂದ ತೆಗೆದುಕೊಂಡು ಹೋಗುತ್ತಾ ಆತನಲ್ಲಿ ದೈವತ್ವವನ್ನು ತರುವ ಆಸೆ ಹೊತ್ತು ಆ ಮಗುವನ್ನು ನಗ್ನವಾಗಿ ನಿಗಿನಿಗಿ ಕೆಂಡದ ಮೇಲೆ ಮಲಗಿಸುತ್ತಿರುತ್ತಾಳೆ. ಆ ಮಗು ಡೆಮೋಫೋನ್ ಕೂಡ ಅಷ್ಟೆ ಉರಿಯುತ್ತಿರುವ ಆ ಇದ್ದಿಲಿನ ಅಗಾಧವಾದ ಶಾಖವನ್ನು ಸಹಿಸಿಕೊಳ್ಳುತ್ತಿರುತ್ತದೆ, ಕಷ್ಟವನ್ನು ಸಹಿಸಿಕೊಳ್ಳುತ್ತಾ ಅಗಾಧವಾದ ಶಕ್ತಿಯನ್ನು ಅದು ಪಡೆದುಕೊಳ್ಳುತ್ತಿರುತ್ತದೆ. ಒಟ್ಟಾರೆ ಎಲ್ಲವನ್ನು ಮೀರಿದ ಅದ್ಭುತ ಚೈತನ್ಯವನ್ನು, ಅತ್ಯುತ್ತಮ ಆರೋಗ್ಯವನ್ನು, ಅತಿಮಾನುಷ ಶಕ್ತಿಯನ್ನು ಆ ಮಗುವಿಗೆ ಹೀಗೆ ದೇವತೆ ಡಿಮಿಟ್ರಿ ಪ್ರತಿದಿನ ತುಂಬುತ್ತಿರುತ್ತಾಳೆ”.

“ಆದರೆ ರಾಣಿ ಮೆಟೋನಿರಾ ಒಮ್ಮೆ ಕುತುಹಲಗೊಂಡು ಇದ್ದಕ್ಕಿದ್ದಂತೆ ಅಂತಹ ಪ್ರಯೋಗ ನಡೆಯುತ್ತಿದ್ದ ಆ ಕೊಠಡಿಗೆ ನುಗ್ಗುತ್ತಾಳೆ. ತನ್ನ ಮಗುವಿನ ಮೇಲೆ ಇಂತಹ ಪ್ರಯೋಗವಾಗುತ್ತಿರುವುದನ್ನು ನೋಡಿ ಭಯಗೊಂಡ ಆಕೆ ತನ್ನ ಮಗನ ಮೇಲೆ ಅತಿಮಾನುಷ ಶಕ್ತಿ ತುಂಬುವ ಕ್ರಿಯೆ ನಡೆಸುತ್ತಿದ್ದ ಆ ದೇವತೆಯನ್ನು ಪಕ್ಕಕ್ಕೆ ನೂಕಿ, ನಿಗಿನಿಗಿ ಕೆಂಡವನ್ನು ದೂರ ತಳ್ಳಿ ಮಗುವನ್ನು ತೆಗೆದುಕೊಂಡು ಹೋಗುತ್ತಾಳೆ. ಪರಿಣಾಮ? ಆಕೆ (ರಾಣಿ ಮೆಟೋನೀರಾ) ತನ್ನ ಮಗುವನ್ನು ರಕ್ಷಿಸಿಕೊಳ್ಳುತ್ತಾಳೆ. ಆದರೆ ಅದನ್ನು ದೈವತ್ವದ ಮಟ್ಟಕ್ಕೆ ಏರಿಸುವ, ಅತಿಮಾನುಷ ಶಕ್ತಿಯನ್ನು ಅದರಲ್ಲಿ ತುಂಬುವ ಅವಕಾಶದಿಂದ ಅದನ್ನು ಆಕೆ ವಂಚಿಸುತ್ತಾಳೆ”!
ಅಂಬೇಡ್ಕರರು ಕಥೆಯನ್ನು ನಿಲ್ಲಿಸುತ್ತಾರೆ.

ಹಾಗೆಯೇ ಅದರ ನೀತಿಯನ್ನು ಹೀಗೆ ವಿವರಿಸುತ್ತಾರೆ. “ಶೋಷಿತ ಸಮುದಾಯದ ಯಾರೇ ಆಗಲೀ ಹೋರಾಟ ಮಾಡದೆ, ಕಷ್ಟವನ್ನು ಅನುಭವಿಸದೆ ಉನ್ನತವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಬೆಂಕಿಯ ಪರೀಕ್ಷೆಯನ್ನು ಎದುರಿಸದೆ ಮನುಷ್ಯತ್ವವನ್ನಾಗಲೀ, ದೈವತ್ವವನ್ನಾಗಲೀ ಪಡೆಯುವುದು ಖಂಡಿತ ಸಾಧ್ಯವಿಲ್ಲ. ಉತ್ಕೃಷ್ಟವಾದುದ್ದನ್ನು ಹೋರಾಟ ಮತ್ತು ತ್ಯಾಗದಿಂದ ಮಾತ್ರ ಸಾಧಿಸಬಹುದು. ಹೋರಾಟ ಮತ್ತು ನೋವನ್ನು ಅನುಭವಿಸುವುದೆಂದರೆ ಹೀಗೆಯೇ. ಬೈಬಲ್‌ನ ಭಾಷೆಯನ್ನೇ ಬಳಸುವುದಾದರೆ ‘ಎಲ್ಲ ವರ್ಗಗಳ ಜನರನ್ನು ಕರೆಯಲಾಗುತ್ತದೆ. ಆದರೆ ಅವರಲ್ಲಿ ಕೆಲವರನ್ನು ಮಾತ್ರ ಆರಿಸಲಾಗುತ್ತದೆ’. ಯಾಕೆ? ಕಾರಣ ಸ್ಪಷ್ಟ. ಅದೆಂದರೆ ಆರಿಸಲಾದ ಆತ (ಶೋಷಿತ ಸಮುದಾಯದ ವ್ಯಕ್ತಿ) ತನ್ನ ಜನರ ಭವಿಷ್ಯವನ್ನು ಭವ್ಯವಾಗಿ ಕಟ್ಟಲು, ತನ್ನ ವೈಭೋಗಗಳನ್ನು ಪ್ರಸ್ತುತದ ಅಗತ್ಯತೆಗಳನ್ನು ತ್ಯಾಗಮಾಡಲು ಸಿದ್ಧನಿರಬೇಕು. ಈ ದಿಸೆಯಲ್ಲಿ ಭವಿಷ್ಯದ ಅವಶ್ಯಕತೆಗಳಿಗಾಗಿ ಪ್ರಸ್ತುತದ ಆಸೆಗಳನ್ನು ತ್ಯಾಗಮಾಡುವ ಧೈರ್ಯವಿಲ್ಲದ್ದರಿಂದಾಗಿ, ದೃಢ ನಿರ್ಧಾರವಿಲ್ಲದ್ದರಿಂದಾಗಿ, ಶೋಷಿತ ಸಮುದಾಯದ ಬಹುತೇಕ ಮಂದಿ ಉನ್ನತವಾದದ್ದನ್ನು ಸಾಧಿಸಲು ವಿಫಲರಾಗುತ್ತಿದ್ದಾರೆ”.
ಅಂಬೇಡ್ಕರ್ ಹೇಳುತ್ತಾ ಹೋಗುತ್ತಾರೆ…

ಅವರ ಪ್ರಕಾರ ಆ ಕಥೆಯಲ್ಲಿ ಮಗು ಡೆಮೊಫೋನ್ ಇನ್ನಷ್ಟು ಕಾಲ ಆ ನಿಗಿನಿಗಿ ಕೆಂಡದ ಕಷ್ಟ ಸಹಿಸಿಕೊಂಡಿದ್ದರೆ ಆತ ದೈವತ್ವ ಪಡೆಯುತ್ತಿದ್ದ, ಅತಿಮಾನುಷ ಶಕ್ತಿ ಪಡೆಯುತ್ತಿದ್ದ. ಆದರೆ ಆತನ ತಾಯಿ ಅದನ್ನು ಅರಿಯದೇ ಹೋದದ್ದರಿಂದ ಆತ ಅಂತಹ ಅವಕಾಶ ಕಳೆದುಕೊಂಡ. ಮುಂದುವರಿದು ಅಂಬೇಡ್ಕರರು ಹೇಳುವುದು “ಶೋಷಿತ ಸಮುದಾಯದ ಜನರು ಆ ಮಗುವಿನ ಹಾಗೆ ಬೆಂಕಿಯಂತಹ ಹೋರಾಟ ಮಾಡದೆ, ನಿಗಿನಿಗಿ ಕೆಂಡದ ಕಷ್ಟ ಅನುಭವಿಸದೆ ದೈವತ್ವದ ರೀತಿ ಉನ್ನತವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಇವರಿಗೆ ಈ ದಂತಕಥೆಗಿಂತ ಉತ್ತಮವಾದ, ಶ್ರೇಷ್ಠವಾದ ಸಂದೇಶ ಬೇಕೆ? ಖಂಡಿತ, ನನಗೆ ಬೇರಾವುದು ಹೊಳೆಯುತ್ತಿಲ್ಲ. ಯಾಕೆಂದರೆ ಅಸ್ಪೃಶ್ಯರಿಗೆ (ಈ ಕಥೆಯೇ) ಶ್ರೇಷ್ಠ ಮತ್ತು ಅತಿ ಸೂಕ್ತವಾದ ಸಂದೇಶ. ಅವರ ಹೋರಾಟ ಮತ್ತು ಕಷ್ಟ ನನಗೆ ತಿಳಿದಿದೆ.

ಅಲ್ಲದೆ (ಹಿಂದೂಗಳಿಂದ) ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅವರು ನನಗಿಂತ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ. ಅದೂ ಸಹ ನನಗೆ ತಿಳಿದಿದೆ. ಹೀಗಿದ್ದರೂ ಇದೆಲ್ಲಕ್ಕೂ ಮೀರಿ ನಾನು ಅವರಿಗೆ ಮತ್ಯಾವ ಸಂದೇಶವನ್ನು ನೀಡಲಾರೆ. ಈ ದಿಸೆಯಲ್ಲೇ ನನ್ನ ಸಂದೇಶವೆಂದರೆ ಹೋರಾಡಿ, ಮತ್ತೂ ಹೋರಾಡಿ. ತ್ಯಾಗ ಮಾಡಿ, ಇನ್ನೂ ಹೆಚ್ಚಿನ ತ್ಯಾಗ ಮಾಡಿ. ಯಾಕೆಂದರೆ ತ್ಯಾಗ ಮತ್ತು ಸಂಕಷ್ಟವನ್ನು ಲೆಕ್ಕಕ್ಕಿಡದ ಅಂತಹ ಹೋರಾಟ, ಹಾಗೆಯೇ ಅಂತಹ ಹೋರಾಟ ಮಾತ್ರ ನಿಮಗೆ ವಿಮೋಚನೆ ತರಬಲ್ಲದು. ಅದು ಬಿಟ್ಟು ಬೇರಾವುದರಿಂದಲೂ (ವಿಮೋಚನೆ) ಸಾಧ್ಯವಿಲ್ಲ” ಅಂಬೇಡ್ಕರರು ಹೇಳುತ್ತಾ ಹೋಗುತ್ತಾರೆ.

ಈ ಸಂದರ್ಭದಲ್ಲಿ ಅವರು ಶೋಷಿತರಿಗೆ ಒಂದು ಪ್ರಾರ್ಥನೆಯನ್ನು ಬೋಧಿಸುತ್ತಾರೆ. ಅದೆಂದರೆ “ತನಗೆ ಜನುಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯಶೀಲರೇ ಧನ್ಯರು. ಗುಲಾಮಗಿರಿಯ ವಿರುದ್ಧ ಹೋರಾಟವನ್ನು ಮುಂದುವರೆಸಲು ತಮ್ಮ ದೈಹಿಕ ಶಕ್ತಿ, ಆಧ್ಯಾತ್ಮಿಕ ಶಕ್ತಿ, ತಮ್ಮ ಭವಿಷ್ಯ, ತಮ್ಮ ಬದುಕಿನ ಸುಂದರ ಘಳಿಗೆಗಳನ್ನು ನೀಡಲು ಬದ್ಧರಾದವರೇ ಧನ್ಯರು. ಅಸ್ಪೃಶ್ಯರು ತಮ್ಮ ಮಾನವ ಗೌರವವನ್ನು ಸಂಪೂರ್ಣ ಪಡೆಯುವ ತನಕ ಬಿಸಿಲೇ ಇರಲಿ, ಬಿರುಗಾಳಿಯೇ ಬರಲಿ, ಒಳ್ಳೆಯದೇ ಆಗಲಿ, ಕೆಟ್ಟದ್ದೇ ಆಗಲಿ, ಗೌರವವೇ ಬರಲಿ ಅಥವಾ ಅಗೌರವವೇ ಬರಲಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಈ ಹೋರಾಟವನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳುವವರೇ ಧನ್ಯರು”.

ಹೀಗೆ ಪ್ರಾರ್ಥನೆ ಬೋಧಿಸಿ ಅಂಬೇಡ್ಕರರು ಸಂತಸ ಸಂಭ್ರಮದ ನಡುವೆ ತಮ್ಮ 55ನೇ ಹುಟ್ಟುಹಬ್ಬವನ್ನು ದೆಹಲಿಯಲ್ಲಿ ಅಂದು ಆಚರಿಸಿಕೊಳ್ಳುತ್ತಾರೆ.1947 ಏಪ್ರಿಲ್ 14ರ ಆ ದಿನ ಬ್ರಿಟಿಷ್ ಆಳ್ವಿಕೆಯ ಆ ಕಾಲದಲ್ಲಿ ದೆಹಲಿಯಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧವಿರುತ್ತದೆ. ಆ ಕಾರಣಕ್ಕಾಗಿ ಅಂಬೇಡ್ಕರರ ಅದ್ದೂರಿ ಹುಟ್ಟುಹಬ್ಬ ಆಚರಣೆಯನ್ನು ಆ ವರ್ಷ ಕೈಬಿಡಲಾಗಿರುತ್ತದೆ. ಹಾಗಿದ್ದರೂ “ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ(ಎಐಎಸ್‌ಎಫ್)”(ಅಂಬೇಡ್ಕರರು ಸ್ಥಾಪಿಸಿದ್ದ ರಾಜಕೀಯ ಪಕ್ಷ)ದ ಪ್ರಧಾನ ಕಾರ್ಯದರ್ಶಿಗಳ ಆದೇಶದ ಮೇರೆಗೆ ದೆಹಲಿಯ ಮೂಲೆ ಮೂಲೆಯಲ್ಲೂ ಅಂದು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ನೀಲಿ ಬಾವುಟವನ್ನು ಹಾರಿಸಲಾಗುತ್ತದೆ. ಅಂಬೇಡ್ಕರರಿಗೆ ದೀರ್ಘಾಯುಷ್ಯ ದೊರಕಲಿ ಎಂದು ದೇಶದ ಉದ್ದಗಲಕ್ಕೂ ಅಂದು ಪ್ರಾರ್ಥಿಸಲಾಗುತ್ತದೆ. ಪರಿಶಿಷ್ಟರ ಮನೆಗಳು ಅಂದು ರಾತ್ರಿ ಪೂರಾ (ಏಪ್ರಿಲ್ 13) ವಿದ್ಯುದ್ದೀಪಗಳಿಂದ ಬೆಳಗುತ್ತವೆ. ಒಟ್ಟಾರೆ ಇಡೀ ದೇಶ ಅಂದು ಅಂಬೇಡ್ಕರರ 55ನೇ ಜನ್ಮದಿನದ ಸಂದರ್ಭವನ್ನು ಸಂತಸ ಸಂಭ್ರಮದಿಂದ ಆಚರಿಸುತ್ತದೆ.

ಅಂಬೇಡ್ಕರರು ಬದುಕಿದ್ದಾಗಲೇ ಆರಂಭಗೊಂಡ ಅವರ ಜನ್ಮದಿನದ ಅಂತಹ ಸಂತಸ, ಸಂಭ್ರಮ ಇನ್ನೂ ನಿಂತಿಲ್ಲ. ಅದು ನಿಲ್ಲುವುದೂ ಇಲ್ಲ. ಆದರೆ ಮರೆಯಬಾದ್ದೆಂದರೆ ಶೋಷಿತರಿಗೆ ಅವರು ನೀಡಿರುವ ‘ತ್ಯಾಗದ ಕಥೆ’ಯ ಆ ಅಮರ ಸಂದೇಶ. ಹಾಗೆಯೇ ಶೋಷಿತರಲ್ಲಿ ಹೋರಾಟದ ಕೆಚ್ಚನ್ನು ತುಂಬುವ ಅವರ ಆ ಧನ್ಯತೆಯ ಪ್ರಾರ್ಥನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version