ಲೋಕಾರೂಢಿ
ಅರಿವಾಗಲಿ ಅಂಬೇಡ್ಕರ್..!
- ಡಾ.ಕೆ.ಎ.ಓಬಳೇಶ್
ವಿಶ್ವದಾಧ್ಯಂತ ಇಂದುಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಈ ನಡುವೆ ಭಾರತೀಯರು ಪ್ರತಿವರ್ಷ ವಿಜೃಂಭಣೆಯಿಂದ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ.
ಆದರೆ ಬಹುತೇಕ ಭಾರತೀಯರು ಅಂಬೇಡ್ಕರ್ ಅವರ ಜಯಂತಿಯನ್ನು ಆರಾಧನೆಯಾಗಿ ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿನ ಆಚರಣಾ ಪದ್ಧತಿಯ ಕ್ರಮದಲ್ಲಿನ ವೈಭವೀಕರಣದಿಂದಾಗಿ ಅವರ ಸೈದ್ಧಾಂತಿಕ ಅರಿವು ಮರೆಯಾಗುತ್ತಿವೆ. ನಾವು ಇಂದು ಬಾಬಾಸಾಹೇಬರನ್ನು ಅನುಸಂಧಾನ ಮಾಡಿಕೊಳ್ಳಬೇಕಾಗಿರುವುದು ಅವರ ತತ್ವ ಚಿಂತನೆಗಳ ಮೂಲಕ. ಅವರ ಜಯಂತಿಯೆಂಬ ಈ ದಿನವು ಅರಿವಿನ ಆಗರವಾಗಬೇಕಿತ್ತು. ಅವರ ಹೋರಾಟದ ಕ್ರಮವು ಭಾರತೀಯರ ಮನೆ ಮನಗಳನ್ನು ಪ್ರವೇಶಿಸಬೇಕಿತ್ತು. ಆದರೆ ಇಂದು ಅಂಬೇಡ್ಕರ್ ಜಯಂತಿ ಎಂಬುದು ಹಾರ, ತುರಾಯಿ, ಮೆರವಣಿಗೆ, ಉತ್ಸವವಾಗಿ ಕಾರ್ಯಪ್ರವೃತ್ತವಾಗಿದೆ. ಇಂತಹ ಆಚರಣೆಯಿಂದ ಬಾಬಾಸಾಹೇಬರಿಗೆ ಗೌರವ ಸಲ್ಲುತ್ತೆ ಎಂದು ಭಾವಿಸುವುದಾದರೆ ಅದು ಅಪ್ಪಟ ಸುಳ್ಳು. ಇದು ಅವರಿಗೆ ಮಾಡುವ ಅಪಮಾನವಲ್ಲದೇ ಮತ್ತೇನು ಅಲ್ಲ.
ಬಾಬಾಸಾಹೇಬರು ತಮ್ಮ ಜೀವಿತ ಅವಧಿಯಲ್ಲಿಯೇ ಹೆಳಿದ ಮಾತೊಂದನ್ನು ನಾವಿಂದು ಸ್ಮರಿಸಿಕೊಳ್ಳಬೇಕು. ‘ನಾನು ಯಾರ ಪರವಾಗಿ ಹೋರಾಟ ನಡೆಸಿಕೊಂಡು ಬಂದೆನೊ ಅವರಿಗೆ ನಾನು ಅರ್ಥವಾಗಲೇ ಇಲ್ಲ. ಆದ ಕಾರಣ ಅವರು ನನ್ನನ್ನು ಬೆಂಬಲಿಸಲಿಲ್ಲ. ಆದರೆ ನಾನು ಯಾರ ವಿರುದ್ಧವಾಗಿ ಹೋರಾಟ ಕೈಗೊಂಡೆನೊ ಅವರು ನನ್ನನ್ನು ಅರ್ಥ ಮಾಡಿಕೊಂಡು, ನನ್ನ ಹೋರಾಟವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರು’ ಎಂಬ ಮಾತಿನ ಆಂತರ್ಯದ ತುಡಿತವನ್ನು ಇಂದಾದರು ಅವರ ಜಯಂತಿಯ ನೆಪದ ಮೂಲಕ ಶೋಷಿತ ಸಮುದಾಯಗಳೆಲ್ಲ ಅರ್ಥ ಮಾಡಿಕೊಂಡಿದ್ದೆ ಆದರೆ ಬಾಬಾಸಾಹೇಬರಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಅವರು ರೂಪಿಸಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ ಮಾರ್ಗದಲ್ಲಿ ನಾವು ನಡೆಯುವ ದೃಢ ಸಂಕಲ್ಪದ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಜಯಂತಿಯ ರೂಪುರೇಷೆಗಳು ಸಿದ್ಧವಾಗಬೇಕಾಗಿದೆ. ಈ ಅರಿವಿನ ನೆಲೆಯಲ್ಲಿ ಬಾಬಾಸಾಹೇಬರ ಜಯಂತಿ ಸಾಗಿದಾಗ ಮಾತ್ರ ನಾವು ನಿಜವಾದ ಅಂಬೇಡ್ಕರ್ ಅನುಯಾಯಿಗಳಾಗುತ್ತೇವೆ. ನಮ್ಮ ನಮ್ಮ ವೈಯಕ್ತಿಕ ಕೀರ್ತಿಗಾಗಿಯೋ, ಪ್ರತಿಷ್ಠೆಗಾಗಿಯೋ, ಪ್ರಚಾರಕ್ಕಾಗಿಯೋ ಉತ್ಸವ ಮೆರವಣಿಗೆಗಳ ಮೂಲಚ ಆಚರಣೆ ಕೈಗೊಂಡರೆ ಅದು ಸಂವಿಧಾನಶಿಲ್ಪಿ, ಸಮಾನತೆಯ ಸೂರ್ಯನಿಗೆ ಬಗೆದ ದ್ರೋಹವಲ್ಲದೆ ಮತ್ತೇನೂ ಅಲ್ಲ.
ಅಂಬೇಡ್ಕರ್ ಎಂದರೆ ಕೇವಲ ಚರಿತ್ರೆಯಲ್ಲ. ಅವರು ಭೂತ, ವರ್ತಮಾನ ಮತ್ತು ಭವಿಷ್ಯದ ಕೊಂಡಿ. ಅವರು ಎಂದಿಗೂ ಸಲ್ಲುವ ವಿಶ್ವಮಾನವ. ಈ ಕಾರಣದಿಂದಾಗಿಯೇ ವಿಶ್ವಸಂಸ್ಥೆಯು ಅವರ ಜನ್ಮದಿನವನ್ನು ‘ವಿಶ್ವ ಜ್ಞಾನದಿನ’ ಎಂದು ಸಾರಿದೆ. ಅಂತಹ ವಿದ್ವತ್‍ಪ್ರಭೆ ಹುಟ್ಟಿದ ನಾಡಿನಲ್ಲಿ ಇಂದಿಗೂ ಜಾತಿಯತೆ, ಕೋಮುವಾದ, ಲಿಂಗಭೇದ ನೀತಿಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಇಂದು ವಿಶ್ವವೇ ಕೊರೋನದ ಹಾವಳಿಯಿಂದ ತತ್ತರಿಸಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳೆಲ್ಲ ಅಸಹಾಯಕತೆಯನ್ನು ತೋರ್ಪಡಿಸುತ್ತಿವೆ. ಈ ಮಾರಕ ರೋಗ ಭಾರತವನ್ನು ಬಿಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ನೆಲೆಯಲ್ಲಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಭಾರತದ ಸನಾತನವಾದಿಗಳು ಕೋಮು ಪ್ರಚೋದನೆಗೆ ಮುಂದಾಗಿದ್ದಾರೆ. ಈ ಮೂಲಕ ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರ ಮೂಲಕ ನಾವು ಸಂವಿಧಾನದ ಕಟು ವಿರೋಧಿಗಳು ಎಂಬುದನ್ನು ಮತ್ತೇ ಮತ್ತೇ ಸಾಬೀತುಪಡಿಸುತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಾವು ಬಾಬಾಸಾಹೇಬರ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಬೇಕಾಗಿದೆ. ಕಾನೂನಿನ ಮುಂದೆ ಸರ್ವರು ಸಮಾನರು ಎಂಬ ಸಂವಿಧಾನದ ಆಶಯಗಳ ಅಡಿಯಲ್ಲಿ ಸನಾತನವಾದಿಗಳಿಗೆ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆ ಅಂಬೇಡ್ಕರ್ ಅನುಯಾಯಿಗಳ ಮುಂದಿದೆ. ಇಂತಹ ಸಂದರ್ಭದಲ್ಲಿ ನಾವು ಆಚರಿಸುತ್ತಿರುವ ಬಾಬಾಸಾಹೇಬರ ಜಯಂತಿಯು ಉತ್ಸವವಾಗದೆ, ಸಮಾನತೆಯನ್ನು ಸಾಧಿಸುವ ಅರಿವಾಗಬೇಕಿದೆ.
ಇಂದು ಆಡಳಿತದಲ್ಲಿರುವ ಕೋಮುವಾದಿ ಬಿಜೆಪಿ ಸರ್ಕಾರವು ನಾವು ಅಂಬೇಡ್ಕರ್ ಪರವಾಗಿದ್ದೇವೆ ಎಂದು ಹೇಳುತ್ತಲೇ ಅಂಬೇಡ್ಕರರ ತತ್ವ ಚಿಂತನೆಗಳನ್ನು ವಿರೋಧಿಸುತ್ತಿದೆ. ಇದರ ಫಲಶೃತಿಯಾಗಿ ಸಂವಿಧಾನದ ಆಶಯಗಳಿಗೆ ತೀವ್ರತರವಾದ ಧಕ್ಕೆಯನ್ನು ತಂದೊಡ್ಡಿದೆ. ನಾವು ಸಂವಿಧಾನ ವಿರೋಧಿಗಳು ಎಂಬುದನ್ನು ಸಾರುವ ನಿಟ್ಟಿನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ. ಇವೆಲ್ಲದರ ನಡುವೇ ಅಂಬೇಡ್ಕರ್ ಅವರ ವಂಶದ ಕುಡಿ, ಪ್ರಗತಿಪರ ಚಿಂತಕ, ಮಾನವಹಕ್ಕುಗಳ ಹೋರಾಟಗಾರ ಹಾಗೂ ನೆಲಮೂಲದ ಚಿಂತಕ ಆನಂದ ತೇಲ್‍ತುಂಬ್ಡೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಮೂಲಕ ನಾವು ಅಂಬೇಡ್ಕರ್ ವಿರೋಧಿಗಳು ಎಂಬುದನ್ನು ಸಾಬೀತುಮಾಡಿದೆ. ಕೋಮುವಾದಿ ಪಕ್ಷವೊಂದರ ಇಂತಹ ಕುತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳದೆ ಹೋದರೆ ಅಂಬೇಡ್ಕರ್ ಜಯಂತಿ ಎಂಬುದು ಸಾರ್ಥಕವಾಗಲಾರದು.
ದೇಶದ ಜನತೆಯ ಬದುಕನ್ನು ಬಲಿ ತೆಗೆದುಕೊಂಡಿರುವ ಕೊರೋನಾವನ್ನು ಹಿಮ್ಮೆಟ್ಟಿಸಿ ಸಾಮಾನ್ಯ ಜನರ ಹಿತಕಾಯಬೇಕಾದ ಸರ್ಕಾರ ಕೋಮುವಾದಿಗಳಿಗೆ ಬೆಂಬಲವಾಗಿ ನಿಂತಿರುವುದು ದುರಂತಕರ. ಕೋಮುವಾದಿ ಮಾಧ್ಯಮಗಳು ಸೃಷ್ಟಿಸಿದ ಆತಂಕದಿಂದಾಗಿ ಇಂದು ಮುಸಲ್ಮಾರ ಬದುಕು ಅತ್ಯಂತ ಹೀನಾಯವಾಗಿದೆ. ವ್ಯಾಪಾರಿ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮುಸಲ್ಮಾರ ಬಳಿ ಇಂದು ಮುಸ್ಲಿಮೇತರರು ವ್ಯವಹಾರಗಳನ್ನು ನಡೆಸದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮುಸಲ್ಮಾನರು ಕೊರೋನಾವನ್ನು ಹರಡುತಿದ್ದಾರೆ ಎಂಬ ಮಾಧ್ಯಮಗಳ ಸುಳ್ಳು ಸೃಷ್ಟಿ. ಇಂತಹ ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಹಂತಕ್ಕೆ ತಲುಪಿವೆ. ಇದರಿಂದಾಗಿ ಕೋಮುವಾದ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಅಂಬೇಡ್ಕರ್ ಜಯಂತಿಯ ಈ ಸುಸಂದರ್ಭದಲ್ಲಾದರೂ ಸರ್ಕಾರಗಳು ಸಂವಿಧಾನದ ಆಶಯಗಳಿಗೆ ಋಣಿಯಾಗಿದ್ದು, ಸಮಾನತೆಯನ್ನು ಸಾರಬೇಕಾಗಿದೆ.
ಸರ್ಕಾರಗಳು ಈ ಕೆಲಸ ಮಾಡದೆ ಹೋದರೂ ಅಂಬೇಡ್ಕರ್ ಅನುಯಾಯಿಗಳಾದರು ಕೋಮುವಾದವನ್ನು ಮೆಟ್ಟಿನಿಲ್ಲುವ ನೆಲೆಯ ಅರಿವು ಗಳಿಸಿಕೊಂಡಾಗ ಮಾತ್ರ ಈ ಜಯಂತಿಗೆ ಸಾರ್ಥಕತೆ ಲಭಿಸುತ್ತದೆ. ಇದರಿಂದ ಮಾತ್ರ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರನಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಆದ್ದರಿಂದ ಅಂಬೇಡ್ಕರ್ ಅವರ ಅರಿವಿನ ಮೂಲಕ ನಾವೆಲ್ಲ ಸಮಸಮಾಜದತ್ತ ಹೆಜ್ಜೆಹಾಕೋಣ, ವಿಶ್ವಮಾನವನಿಗೆ ನಮಿಸೋಣ. ಜೈಭೀಮ್..
ಸುದ್ದಿದಿನ.ಕಾಂ|ವಾಟ್ಸಾಪ್|9980346243