ಬಹಿರಂಗ
ಡಾ.ಬಿ.ಆರ್.ಅಂಬೇಡ್ಕರ್ – ಜಗತ್ತು ಕಂಡ ಒಬ್ಬ ಶ್ರೇಷ್ಠ ಸ್ತ್ರೀ ಸ್ವಾತಂತ್ರವಾದಿ
- ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಬೆಂಗಳೂರು
ಮಹಿಳೆಯರಿಗೆ ಶಿಕ್ಷಣದ ಅವಕಾಶ ಕೊಡದೆ, ಮನೆ ಕೆಲಸಕ್ಕೆ ಸೀಮಿತಗೊಳಿಸಿ, ಬರೀ ಭೋಗದ ವಸ್ತುವಾಗಿ ನೋಡುವುದಲ್ಲದೇ, ತುಂಬಾ ಕೀಳು ಮಟ್ಟದಲ್ಲಿ ಕಂಡಿರುವ ಇತಿಹಾಸ ನಮ್ಮ ಸಮಾಜಕ್ಕೆ ಇದೆ. ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ, ಮಹಿಳೆಯರ ಬಗ್ಗೆ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದ ಸಮಾಜದಲ್ಲಿ ನಾವು ಇದ್ದೀವಿ ಎಂಬುದು ನನ್ನ ಅಭಿಪ್ರಾಯ. ಒಂದು ಧರ್ಮ ಮತ್ತೊಂದು ಧರ್ಮವನ್ನ ಕಂಡರೆ ಆಗದ ಪರಿಸ್ಥಿತಿಯಲ್ಲೂ, ಮಹಿಳೆಯರನ್ನು ಶೋಷಣೆ ಮಾಡುವ ವಿಷಯದಲ್ಲಿ, ಎಲ್ಲ ಧರ್ಮಗಳೂ ಒಂದಾಗುವ ಸ್ಥಿತಿಯನ್ನೂ ನೋಡಿದ್ದೇವೆ. ಈ ವಿಷಯದಲ್ಲಿ ನಾನು ಎಲ್ಲ ಧರ್ಮಗಳ ವೈರಿ.
ಇಂತಹ ಕೆಟ್ಟ ಮಹಿಳಾ ವಿರೋಧಿ ಇತಿಹಾಸವಿರುವ ನಮ್ಮ ಸಮಾಜದಲ್ಲಿ, 1947 ರಲ್ಲಿ ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಸ್ವಾತಂತ್ರ ಹಾಗು ಸಮಾನತೆಯ ಹಕ್ಕನ್ನು ಕಾನೂನಿನ ಮೂಲಕ ದೊರಕಿಸಲು ಹೋಗಿ, ಅದು ಸಾಧ್ಯವಾಗದಿದ್ದಾಗ ಮನನೊಂದು, ತನ್ನ ಕೇಂದ್ರ ಕಾನೂನು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆಯನ್ನ ನೀಡಿದ ಡಾ ಬಿ ಆರ್ ಅಂಬೇಡ್ಕರ್ ಅವರು ನನಗೆ ಮಹಾನ್ ವ್ಯಕ್ತಿಗಳಾಗಿ ಕಾಣುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಮಹಿಳೆಯರಿಗೆ ಸಮಾನತೆಯನ್ನು ಕೊಡಿಸಲಾಗದೆ ಇದ್ದುದ್ದಕ್ಕೆ ಜವಾಬ್ಧಾರಿ ಹೊತ್ತು, ಉತ್ತಮ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ನಮ್ಮ ದೇಶದಲ್ಲಿ ಅಂಬೇಡ್ಕರ್ ಒಬ್ಬರೇ ಎನಿಸುತ್ತದೆ.
ಅಂಬೇಡ್ಕರ್ ಅವರ ಹುಟ್ಟು, ಸಾವು ಹಾಗು ಅವರು ದೊರಕಿಸಿಕೊಟ್ಟ ಮೀಸಲಾತಿಯ ಬಗ್ಗೆ ಕಂಠಪಾಠ ಮಾಡಿ, ಮುಗ್ಧ ಜನರಿಗೆ ಒಪ್ಪಿಸಿ ವೋಟು ಗಳಿಸಿಕೊಳ್ಳುವ ರಾಜಕಾರಣಿಗಳು, ಮೀಸಲಾತಿಯ ಬಿಕ್ಷೆಯ ಮೂಲಕ ಸರ್ಕಾರದ ಮಟ್ಟದಲ್ಲಿ ಅಧಿಕಾರ ಪಡೆದು ಯಥೇಚ್ಛ ಭ್ರಷ್ಟಾಚಾರದಲ್ಲಿ ತೊಡಗುವ ಸರ್ಕಾರಿ ಅಧಿಕಾರಿಗಳು, ಅಂಬೇಡ್ಕರ್ ಹೆಸರಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ದುಡ್ಡು ಮಾಡಲು ನಿಂತಿರುವ ಡೋಂಗಿ ಸಮಾಜ ಸೇವಕರು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ, ಈ ಎಲ್ಲ ಪಿಡುಗುಗಳಿಗೆ ಔಷದಿ ಎಂಬಂತೆ ಡಾ ಬಿ ಆರ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನು, ಅವರ ಸಿದ್ದಾಂತವನ್ನು ಹಾಗು ಅವರ ಕಾಳಜಿಗಳನ್ನು ಪದೇ ಪದೇ ನೆನೆಸಿಕೊಳ್ಳುವುದು ಹಾಗು ಅವನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ.
ಕೆಟ್ಟ ಆಲೋಚನೆಗಳನ್ನೇ ಧ್ಯೇಯವನ್ನಾಗಿ ಮಾಡಿಕೊಂಡಿರುವ ಈ ಸಮಾಜದಲ್ಲಿ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ಚಿಂತನೆಗಳು ಹಾಗು ಕಾಳಜಿಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಮತ್ತು ಯಾರು ಎಂಬ ಪ್ರಶ್ನೆಯನ್ನು ಆರೋಗ್ಯವಂತ ಸಮಾಜಕ್ಕೆ ಹಂಬಲಿಸುವ ಎಲ್ಲ ಮನಸ್ಸುಗಳೂ ಕೇಳಿಕೊಳ್ಳಬೇಕು.
ಇಂದಿನ ಪರಿಸ್ಥಿತಿಯಲ್ಲಿ, ಕೇರಳದ ಕೊಲ್ಲಮ್ ಎಂಬ ಸ್ಥಳದಲ್ಲಿ ತಂದೆ ತೀರಿಕೊಂಡ ಬಳಿಕ, ತನ್ನ ತಾಯಿ ಜೀವನ ನೋವಲ್ಲೇ ಕೊನೆಯಾಗಬಾರದೆಂದು, ತಾಯಿಯ ಮರುಮದುವೆಯನ್ನ ಮುಂದೆ ನಿಂತು ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಮ್ಮೆಯಿಂದ ಹಂಚಿಕೊಂಡ ವಿದ್ಯಾರ್ಥಿ ಗೋಕುಲ್ ಶ್ರೀಧರನಲ್ಲಿ ನನಗೆ ಅಂಬೇಡ್ಕರ್ ಕಾಣುತ್ತಾರೆ.
ದಲಿತ ಸಮುದಾಯಕ್ಕೆ ಸೇರಿದ ಸಹೋದರಿ ಸುರೇಖಾ ಅವರನ್ನು ಪ್ರೀತಿಸಿ ಮದುವೆಯಾದದಷ್ಟೇ ಅಲ್ಲದೆ, ಇದು ಬರೀ ಪ್ರೇಮ ವಿವಾಹವಲ್ಲದೇ ಮಿಗಿಲಾಗಿ ಅಂತರ್ಜಾತಿ ವಿವಾಹ ಎಂಬುದನ್ನು ಎಲ್ಲರಿಗೂ ಸಾರಿ ಇಂದಿಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಜೀವನ ನೆಡೆಸುತ್ತಿರುವ ಹಿರಿಯ ಗೆಳೆಯ ಕೊಳ್ಳೇಗಾಲದ ಯುವರಾಜ್ ಅವರಲ್ಲಿ ನಾನು ಅಂಬೇಡ್ಕರ್ ಅವರನ್ನು ಕಾಣುತ್ತೇನೆ.ಹಾಗೆಯೇ ಶ್ರೇಷ್ಠ ಸಮಾಜಮುಖಿ ಸಾಹಿತಿ ಹಾಗು ನನ್ನ ನೆಚ್ಚಿನ ದೇವನೂರು ಮಹಾದೇವ ಅವರಲ್ಲಿ ನಾನು ಅಂಬೇಡ್ಕರ್ ಅವರನ್ನು ಕಾಣುತ್ತೇನೆ.
ಅಂಬೇಡ್ಕರ್ ಅವರು ಹೇಳಿರುವ “I measure the progress of a community by the degree of progress which women have achieved” ಎಂಬ ಮನಮುಟ್ಟುವ ಪದಗಳನ್ನು ಎಲ್ಲರೂ ರೂಡಿಸಿಕೊಂಡು ಮಹಿಳೆಯರಿಗೆ ಶಿಕ್ಷಣ, ಸಮಾನತೆ ಹಾಗು ಸಮಾನ ಹಕ್ಕನ್ನು ಕೊಡಿಸಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಸ್ವಾತಂತ್ರ ಎಂಬ ಪದವನ್ನು ಅಪಹಾಸ್ಯ ಮಾಡಿದಂತಾಗುತ್ತದೆ.
ನನ್ನ ಪ್ರಕಾರ ಮಹಿಳಾ ಸಮಾನತೆಯನ್ನು ಕಾರ್ಯರೂಪಕ್ಕೆ ತರಲು ಬರೀ ಮಾನವೀಯ ಮನಸ್ಸು ಒಂದೇ ಸಾಲದು. ಜೊತೆಗೆ ಸ್ತ್ರೀವಾದದ ಅರ್ಥವ್ಯವಸ್ಥೆಯ ಶಿಕ್ಷಣ ಹಾಗು ವೈಜ್ಞಾನಿಕ ಚಿಂತನೆ ಮುಖ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243