ಬಹಿರಂಗ

ಸ್ವಾಭಿಮಾನ v/s ಜೀತಗಾರಿಕೆ

Published

on

ಸ್ವಾಭಿಮಾನ ಅಥವಾ ಆತ್ಮಗೌರವ ಅಥವಾ ಸ್ವಂತಿಕೆ… ಹೀಗೆ ಹೇಗೆ ಬೇಕಾದರೂ ಕರೆಯಿರಿ ಅದು ಮಾನವ ಜೀವನದ ಬಹುದೊಡ್ಡ ಅಂಗ ಅಥವಾ ಅಂಶ. ಅದು ಹೇಗಿರುತ್ತದೆ? ಯಾವ ರೂಪದಲ್ಲಿ ಇರುತ್ತದೆ? ಬಹುಶಃ ಅದನ್ನು ಪದಗಳಲ್ಲಿ ಹೇಳುವುದು, ವರ್ಣಿಸುವುದು ಅಸಾಧ್ಯ. ಬದಲಿಗೆ ಬದುಕಿ ತೋರಬೇಕಷ್ಟೆ. ಬದುಕು ಎಂದಾಕ್ಷಣ ಸ್ವಾಭಿಮಾನ ಎಂಬ ಆ ಅಂಶ ಸಂದರ್ಭದ ರೂಪದಲ್ಲಿ ಎದುರಾಗುತ್ತದೆ, ಕಾಲದ ನಿರಂತರ ಪರೀಕ್ಷೆಯಲ್ಲಿ ಅದು ಮತ್ತೆ ಮತ್ತೆ ಎದುರು ಬರುತ್ತದೆ.

ಉದಾಹರಣೆಗೆ ಒಬ್ಬ ಮಹಿಳೆಗೆ ಒಬ್ಬ ಪುರುಷನ ಎದುರು ಸ್ವಾಭಿಮಾನ ಮತ್ತು ಸ್ವಾವಲಂಬನೆ ಸರಿದೂಗಿಸಕೊಳ್ಳುವುದು ಅಥವಾ ಕಾಪಾಡಿಕೊಳ್ಳುವುದು ಕಷ್ಟವಾದರೆ, ಒಬ್ಬ ಬಡವನಿಗೆ ಸಿರಿವಂತನ ಎದುರು ಅದೇ ಸ್ವಾಭಿಮಾನ ಸರಿದೂಗಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ಕಷ್ಟ. ಅಂದಹಾಗೆ ಸ್ವಾಭಾವಿಕವಾಗಿ ಅಲ್ಲಿ ಸಂಘರ್ಷದ ವಾತಾವರಣ ಏರ್ಪಡುತ್ತದೆ ಮತ್ತು ಅಂತಹ ಸಂಘರ್ಷದ ವಾತಾವರಣವನ್ನು ಪರಸ್ಪರರು ನಿಭಾಯಿಸುವುದರ ಮೂಲಕ ಪರಸ್ಪರರ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬಹುದು. ವಾಸ್ತವವೆಂದರೆ ಹೀಗೆಯೇ ಶೋಷಿತ ಸಮುದಾಯಗಳು ಮತ್ತು ಮೇಲ್ವರ್ಗಗಳ ನಡುವೆ ಕೂಡ ಇಂತಹ ಸ್ವಾಭಿಮಾನದ ಪ್ರಶ್ನೆ ಬರುತ್ತದೆ ಎಂಬುದು.

ನಿಜ, ಸ್ವಾಭಿಮಾನದ ಪ್ರಶ್ನೆ ಎದುರಾದಾಗ ಅಲ್ಲಿ ಮತ್ತದೆ ಸಂಘರ್ಷದ ಪ್ರಶ್ನೆ ಕೂಡ ಎದುರಾಗುತ್ತದೆ. “ನಿನ್ನನ್ನು ಮುಟ್ಟಿಸಿಕೊಳ್ಳುವುದಿಲ್ಲ, ನೀನು ಆಚೆ ನಿಲ್ಲು, ನೀನು ದೇವಸ್ಥಾನ ಪ್ರವೇಶಿಸಬೇಡ, ನೀನು ನಮ್ಮ ಬೀದಿ ಪ್ರವೇಶಿಸಬೇಡ, ನೀನು ನಮ್ಮ ಬೀದಿಯ ಕೀಳು ಕೆಲಸಗಳನ್ನು ಮಾಡಲೆಂದೇ ಇರುವುದು, ನೀನು ನಮ್ಮ ಜಮೀನಿನಲ್ಲಿ ಜೀತಮಾಡಲೆಂದೇ ಇರುವುದು…” ಇತ್ಯಾದಿ ಸಂದರ್ಭಗಳು ಶೋಷಿತ ಸಮುದಾಯಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲವು ಸಂದರ್ಭಗಳು. ಹಾಗಂತ ಇಲ್ಲಿ ಸ್ವಾಭಿಮಾನ ಅಡ ಇಡಬೇಕೆ? ಖಂಡಿತ ಸಲ್ಲದು. ಇದನ್ನೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಹೇಳಿದ್ದು “ಸ್ವಾಭಿಮಾನ ಇಲ್ಲದ ಮನುಷ್ಯನ ಬಾಳು ಜೀವಂತ ಶವದಂತೆ” ಎಂದು. ಅರ್ಥಾತ್ ಸ್ವಾಭಿಮಾನ ಗಳಿಸಿಕೊಳ್ಳಲು ಶೋಷಿತ ಸಮುದಾಯಗಳು ನಿರಂತರ ಯತ್ನಿಸಬೇಕು ಎಂಬುದು ಅಂಬೇಡ್ಕರರ ಆಶಯ.

ಈ ಸಂದರ್ಭದಲ್ಲಿ ಇಲ್ಲಿ ಮತ್ತದೇ ಅಂದರೆ ಸಂಘರ್ಷದ ಪ್ರಶ್ನೆ ಬರುತ್ತದೆ. ಏಕೆಂದರೆ ಶೋಷಿತ ಸಮುದಾಯಗಳಿಗೆ ಬಡತನ ಇರುತ್ತದೆ, ಸ್ವಾವಲಂಬನೆಗಾಗಿ ಉದ್ಯೊÃಗ ಇರುವುದಿಲ್ಲ, ಜಮೀನು ಇರುವುದಿಲ್ಲ. ಹಾಗೆಯೇ ಆತನಿಗೆ ಆತನ ಮಾನ-ಪ್ರಾಣದ ಪ್ರಶ್ನೆ ಎದುರಾಗುತ್ತದೆ. ತನ್ನ ಮನೆಯ ಹೆಣ್ಣು ಮಕ್ಕಳ ಮಾನದ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ತನ್ನ ಬಡತನದ ಕಾರಣಕ್ಕಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು, ಉದ್ಯೊÃಗ ಇಲ್ಲದ ಕಾರಣಕ್ಕಾಗಿ ಅವರ ಮುಂದೆ ಕೈಚಾಚಬೇಕಾಗಬಹುದು. ಹಾಗೆಯೇ ತನ್ನ ಮನೆಯ ಹೆಣ್ಣು ಮಕ್ಕಳ ರಕ್ಷಣೆಗಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು.

ಖಂಡಿತ, ಇಂತಹ ಕೈಚಾಚುವಿಕೆಯ ಸಂದರ್ಭ ಬರುತ್ತದೆ ಎಂಬ ಕಾರಣಕ್ಕಾಗಿಯೇ ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಿಸಿದ್ದು. ಬಜೆಟ್‌ನಲ್ಲಿ ಸರ್ಕಾರ ಇವರಿಗೋಸ್ಕರ ಸಾಕಷ್ಟು ಅನುದಾನ ಮೀಸಲಿಡುವ ಪದ್ಧತಿ ಜಾರಿಗೆ ತಂದದ್ದು. ಹಾಗೆಯೇ ಇವರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ, ಸಂಘರ್ಷದ ವಾತಾವರಣ ಮೂಡುತ್ತದೆ, ರಕ್ಷಣೆ ಸಿಗಲಿ ಎಂಬ ಕಾರಣಕ್ಕಾಗಿಯೇ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ರೂಪಿಸುವಿಕೆಗೆ ಸಂವಿಧಾನದಲ್ಲಿ ಅವಕಾಶ ನೀಡಿದ್ದು.

ಅಂದಹಾಗೆ ಇಂತಹ ಸಾರ್ವಜನಿಕ ಅವಕಾಶಗಳನ್ನು ನೀಡಿಸುವುದರಷ್ಟರಲ್ಲಿಯೇ ಅಂಬೇಡ್ಕರ್‌ರವರು ತೃಪ್ತಿ ಹೊಂದಿದರೇ? ಊಹ್ಞೂಂ, ಸ್ವತಃ ಅವರೇ ಸ್ವಾಭಿಮಾನದ ಸಂಕೇತವಾಗಿ ಬದುಕಿದರು. ಉದಾಹರಣೆಗೆ ಯಾವ ಸಮಾಜ ಕನಿಷ್ಠ ಶಿಕ್ಷಣ ಪಡೆಯಲು ಪರದಾಡುತ್ತಿತ್ತೋ ಅಂತಹ ಸಮಾಜದ ಮುಂದೆ ಅಂಬೇಡ್ಕರ್‌ರವರು ಸ್ವತಃ ಸಾಲು ಸಾಲು ಪದವಿಗಳನ್ನು ಪಡೆದರು, ಮಾದರಿಯಾದರು. ಹಾಗೆಯೇ ಯಾವ ಸಮಾಜ ಬರೀ ಹರಿದ, ಚಿಂದಿಯಾದ ಕೊಳಕು ಬಟ್ಟೆಗಳನ್ನು ಧರಿಸಿ ಸಮಾಜದ ಮುಂದೆ ತನ್ನನ್ನು ತಾನಿರುವುದೇ ಹೀಗೆ ಎಂದು ಬಿಂಬಿಸಿಕೊಂಡಿತ್ತೊ ಅಥವಾ ಸಮಾಜ ಹಾಗೆ ಬಿಂಬಿಸಿತ್ತೊ ಅದಕ್ಕೆ ವಿರುದ್ಧವಾಗಿ ಅಂಬೇಡ್ಕರ್‌ರವರು ಸದಾ ಗರಿ ಗರಿ ಕೋಟು ಧರಿಸಿದರು. ಮಾದರಿಯಾದರು. ಹಾಗೆಯೇ ಯಾವ ಸಮಾಜ ತನ್ನ ನಡುವಿನ ಮೇಲ್ವರ್ಗದವರನ್ನು ಸದಾ “ಬುದ್ಧಿ, ಸ್ವಾಮಿ” ಎಂದು ಉಚ್ಛಾರಣೆಯಲ್ಲಿಯೂ ಜೀತಗಾರಿಕೆ ತೋರುತ್ತಿತ್ತೊ, ಸ್ವಾಭಿಮಾನ ಮರೆಯುತ್ತಿತ್ತೊ ಅಂತಹ ಉಚ್ಛಾರಣೆಯ ಜೀತಗಾರಿಕೆಯ ನಡುವೆ ಅಂಬೇಡ್ಕರ್‌ರವರು “ಮಿಸ್ಟರ್, ಸರ್” ಎಂಬ ಪದ ಬಳಸಿದರು. ಉದಾಹರಣೆಗೆ 1932ರಲ್ಲಿ ಅಂದರೆ ಸುಮಾರು 90 ವರ್ಷಗಳ ಹಿಂದೆಯೇ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್‌ರವರು ಸ್ವತಃ ಮಹಾತ್ಮ ಗಾಂಧಿಯವರನ್ನು “ಮಿಸ್ಟರ್ ಗಾಂಧಿ” ಎಂದು ಉಚ್ಛರಿಸಿರುವುದನ್ನು ಅವರ ಬರಹಗಳು ಮತ್ತು ಭಾಷಣಗಳಲ್ಲಿ ನಾವು ಈಗಲೂ ಕಾಣಬಹುದು. ಈ ನಿಟ್ಟಿನಲ್ಲಿ ಹೇಳುವುದಾದರೆ ಅದು ಉಚ್ಛಾರಣೆಯಲ್ಲಿಯೂ ಸ್ವಾಭಿಮಾನದ ಸಂಕೇತಿಸುವಿಕೆಗೆ ಶೋಷಿತ ಸಮುದಾಯಗಳಿಗೆ ಅಕ್ಷರಶಃ ಮಾದರಿಯಾಗುತ್ತದೆ.

ಹಾಗಿದ್ದರೆ ಅಂಬೇಡ್ಕರ್‌ರವರು ಹೀಗೆಲ್ಲ ಕಾನೂನಾತ್ಮಕ ಮತ್ತು ವಯಕ್ತಿಕ ಬದುಕಿನ ಮೂಲಕ ನಮಗೆ ಸ್ವಾಭಿಮಾನದ ದಾರಿ ತೋರಿಸಿದರು ಎಂದಾಕ್ಷಣ ಸ್ವಾಭಿಮಾನ ಸಿಕ್ಕಿಯೇ ಬಿಟ್ಟಿತು ಎಂದರ್ಥವೇ? ಖಂಡಿತ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಂಬೇಡ್ಕರ್‌ರವರು ಹಿಂದೂ ಧರ್ಮದಲ್ಲಿಯೇ ಶೋಷಿತ ಸಮುದಾಯದ ವ್ಯಕ್ತಿಯೋರ್ವ ಉಳಿದರೆ ಆತನ ಮುಂದೆ ಮತ್ತದೇ ಸ್ವಾಭಿಮಾನದ ಸಂಘರ್ಷದ ಸಂದರ್ಭ ಎದುರಾಗುತ್ತದೆ ಎಂದು ಮತಾಂತರದ ಮತ್ತೊಂದು ಹಾದಿ ತೋರಿದರು.

ಮತಾಂತರ, ಅದೊಂದು ಈಗಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದ ಬದಲಾವಣೆಯಷ್ಟೆ ಹೊರತು ಇನ್ನೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಿಯೆಯಲ್ಲ. ಈ ನಿಟ್ಟಿನಲ್ಲಿ ಸ್ವತಃ ಅಂಬೇಡ್ಕರ್‌ರವರು ಬೌದ್ಧ ಧರ್ಮಕ್ಕೆ ತಮ್ಮ 10 ಲಕ್ಷ ಅನುಯಾಯಿಗಳೊಡನೆ ಅ ಕಾಲದಲ್ಲೆ ಮತಾಂತರ ಹೊಂದಿದರು. ಎಲ್ಲಿ ಸ್ವಾಭಿಮಾನವಿಲ್ಲವೋ ಅಲ್ಲಿ ನನ್ನ ಚಪ್ಪಲಿಯನ್ನೂ ಸಹ ಬಿಡುವುದಿಲ್ಲ ಎಂದು ವ್ಯವಸ್ಥೆಗೆ ಸಾರಿ ಹೇಳಿದರು ಮತ್ತು ಹಾಗೆ ಬದುಕಿ ತೋರಿಸಿದರೂ ಕೂಡ. ಅಕ್ಷರಶಃ ಅಂಬೇಡ್ಕರ್‌ರವರು ಅನುಸರಿಸಿದ ಈ ಬೌದ್ಧ ಧರ್ಮದೆಡೆಗಿನ ಮತಾಂತರದ ಹಾದಿ ಕೂಡ ಪ್ರಸ್ತುತದ ಶೋಷಿತ ಸಮುದಾಯಗಳ ಸ್ವಾಭಿಮಾನದ ತಾಕಲಾಟಕ್ಕೆ ಖಂಡಿತ ಉತ್ತರವಾಗುತ್ತದೆ.

ಈ ನಡುವೆ ಬಾಬಾಸಾಹೇಬ್ ಅಂಬೇಡ್ಕರ್‌ರವರ ಬದುಕು ಎಂದಾಕ್ಷಣ ಅಲ್ಲಿ ರಾಜಕೀಯ ಬದುಕಿನ ಪ್ರಶ್ನೆಯೂ ಬರುತ್ತದೆ. ಅಲ್ಲಿಯೂ ಅಷ್ಟೆ ಅಂಬೇಡ್ಕರ್‌ರವರು ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡಿ ಬದುಕಿದರೇ ವಿನಹ ಆಗ ಅಸ್ತಿತ್ವದಲ್ಲಿದ್ದ ಇತರೆ ರಾಜಕೀಯ ಪಕ್ಷಗಳನ್ನು ಅವರು ಸೇರಲಿಲ್ಲ. ಮತ್ತೆ ಹೇಳುವುದಾದರೆ ಇಲ್ಲಿಯೂ ಅವರಿಗೆ ಎದುರಾದದ್ದು ಮತ್ತದೇ ಸ್ವಾಭಿಮಾನದ ಪ್ರಶ್ನೆ.

ಹೀಗಿರುವಾಗ, ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗೆ ಒದಗಿಸಿಕೊಟ್ಟ ಹಕ್ಕುಗಳು ಮತ್ತು ಅವರು ಬದುಕಿದ ರೀತಿ ಹೀಗಿರುವಾಗ ಅಂದರೆ ಸ್ವಾಭಿಮಾನದ ದಿಟ್ಟ ಮಾರ್ಗವಾಗಿರುವಾಗ ಶೋಷಿತ ಸಮುದಾಯಗಳು ಪ್ರಸ್ತುತ ಹೇಗೆ ಬದುಕಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸ್ವಾಭಿಮಾನದ ನಡೆಗಳಿಗೆ ವಿರುದ್ಧವಾಗಿ ರಾಜಿಯಾಗಬೇಕೆ? ಆತ್ಮಗೌರವ ಮಾರಿಕೊಳ್ಳಬೇಕೆ? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಅಕ್ಷರಶಃ ಹೇಳುವುದಾದರೆ ಶೋಷಿತ ಸಮುದಾಯಗಳು ಸ್ವಾಭಿಮಾನಕ್ಕೆ, ಸ್ವಾಭಿಮಾನ ಉಳಿಸಿಕೊಳ್ಳುವ ದಿಕ್ಕಿನಲ್ಲಿ ಎಂದಿಗೂ ರಾಜಿಯಾಗಬಾರದು ಎಂಬುದು.

ಹಾಗಿದ್ದರೆ ಸಂಘರ್ಷ? ಉತ್ತರ: ಸಂಘರ್ಷದ ವಾತಾವರಣದಿಂದ ದೂರ ಸರಿಯಬೇಕಷ್ಟೆ. ಉದಾಹರಣೆಗೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗಾಗಿ ಪ್ರತ್ಯೇಕ ಹಳ್ಳಿಗಳ ವ್ಯವಸ್ಥೆ ಮಾಡಬೇಕು ಎಂದಿದ್ದರು. ಇದರರ್ಥ ಹಿಂದೂಗಳೊಡಗಿನ ಸಂಘರ್ಷದಿಂದ ಮುಕ್ತರಾಗುವುದೇ ಆಗಿತ್ತು. ಹಾಗೆಯೇ ಅಸಮಾನ ಸಾಮಾಜಿಕ ವಾತಾವರಣದಿಂದ ಹೊರಬರಲು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿ ತಮ್ಮಿಷ್ಟ ಬಂದ ಉದ್ಯೋಗ ಅನುಸರಿಸುವುದು… ಇದೂ ಕೂಡ ಸ್ವಾಭಿಮಾನದ ಮಾರ್ಗವಾಗಿದೆ. ಹಾಗೆಯೇ ಧಾರ್ಮಿಕ ಸ್ವಾಭಿಮಾನಕ್ಕೆ ಧಕ್ಕೆ. ಮೊದಲೇ ಹೇಳಿದ ಹಾಗೆ ಇದಕ್ಕೂ ಕೂಡ ಅಂಬೇಡ್ಕರರು ತೋರಿದ ಬೌದ್ಧ ಧರ್ಮದ ಪರಿಹಾರವಿದೆ. ಇನ್ನು ರಾಜಕಾರಣ, ಅಲ್ಲಿಯೂ ಕೂಡ ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡುವ ಪರಿಹಾರವಿದೆ. ಇನ್ನು ಶಿಕ್ಷಣ, ಉದ್ಯೋಗ, ಉತ್ತಮ ಬದುಕು, ಉತ್ತಮ ಮಾತುಕತೆಯ(ಮೇಲ್ವರ್ಗದವರೊಡನೆ) ಶೈಲಿ, ಉತ್ತಮ ಆರೋಗ್ಯ… ಇವೆಲ್ಲವೂ ಕೂಡ ಸ್ವಾಭಿಮಾನದ ಬದುಕಿನ ವಿವಿಧ ಮಾದರಿಗಳಾಗಿವೆ. ಅಂಬೇಡ್ಕರರು ಬದುಕಿದ ರೀತಿಗಳಾಗಿವೆ.

ಹಾಗಿದ್ದರೆ ಇಂತಹ ಸ್ವಾಭಿಮಾನ ಮತ್ತು ಅದಕ್ಕೆ ವಿರುದ್ಧವಾದ ಪರಿಕಲ್ಪನೆಯಾದ ಜೀತಗಾರಿಕೆ ಅರ್ಥಾತ್ ಗುಲಾಮಗಿರಿಯ ಬದುಕು ಇವುಗಳ ನಡುವೆ ಅಂತಹ ವ್ಯತ್ಯಾಸವೇನಿದೆ ಎಂಬ ಪ್ರಶ್ನೆ ಬರುತ್ತದೆ. ಉತ್ತರವೇನೆಂದರೆ ಅವೆರಡರ ಅಂದರೆ ಸ್ವಾಭಿಮಾನ ಮತ್ತು ಜೀತಗಾರಿಕೆಯ ನಡುವಿನ ಅಂತರ ತುಂಬಾ ತೆಳುವಾದದ್ದು ಎಂಬುದು. ಹಾಗಿದ್ದರೆ ಅದರ ವ್ಯಾಖ್ಯಾನ? ಖಂಡಿತ, ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಬದುಕುವ ರೀತಿಯ ಮೇಲೆ ಅದು ನಿರ್ಧರಿತವಾಗುತ್ತದೆ. ಅಂದರೆ ಹೆಜ್ಜೆ ಹೆಜ್ಜೆಗೂ ಶೋಷಿತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ತಾನು ಜೀತಗಾರಿಕೆಗೆ ಬೀಳುವುದಿಲ್ಲ ಅಥವಾ ತನ್ನ ಸಮುದಾಯವನ್ನು ಬೀಳಿಸುವುದಿಲ್ಲ, ಬದಲಿಗೆ ಸ್ವಾಭಿಮಾನದಿಂದ ಬದುಕುತ್ತೇನೆ, ಆ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂಬ ಪ್ರಜ್ಞೆ ಇರಬೇಕು. ನಿಜ ಇದು ಕಷ್ಟದ ಹಾದಿ. ಆದರೆ ಅನಿವಾರ್ಯದ ಹಾದಿ ಕೂಡ ಇದಾಗಿದೆ. ಹಾಗೆಯೇ ಇದು ಬರೀ ಸಿದ್ಧಾಂತವಲ್ಲ. ಬದಲಿಗೆ ನಿರಂತರ ಪ್ರಾಯೋಗಿಕವಾದುದು. ಹಾಗೆ ಇದು ಯಾರೋ ಒಬ್ಬರಿಗೆ ಅಥವಾ ಶೋಷಿತ ಸಮುದಾಯಗಳೊಳಗೆ ಬರುವ ಯಾವುದೋ ಒಂದು ಉಪಜಾತಿಗೆ ಅನ್ವಯವಾಗುತ್ತದೆಯೆಂಬಂತೆಯಲ್ಲ. ಬದಲಿಗೆ ಎಲ್ಲಾ ಉಪಜಾತಿಗಳಿಗೆ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಇದು ಅನ್ವಯವಾಗುತ್ತದೆ.ಉದಾಹರಣೆಗೆ ಮಲ ಹೊರುವ, ಶೌಚಾಲಯ ಶುಚಿಗೊಳಿಸುವ ವೃತ್ತಿಯಲ್ಲಿ ಅಂತಹ ಸ್ವಾಭಿಮಾನದ ಅಂಶವೇನಿದೆ? ಖಂಡಿತ ಇಲ್ಲ. ಪರಿಹಾರ ಅಂತಹ ವೃತ್ತಿಗಳನ್ನು ಮಾಡುವುದನ್ನು ಕೈಬಿಡುವುದೇ ಆಗಿದೆ.

ಆದ್ದರಿಂದ ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಇಂತಹ ಪಾಠ ಕಲಿಯಬೇಕಿದೆ. ಆ ಮೂಲಕ ಸಮಾನತೆಯ ಬದುಕಿನೆಡೆಗೆ ದಿಟ್ಟ ಹೆಜ್ಜೆ ಇಡಬೇಕಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version