ಅಂತರಂಗ

ಸ್ಫೂರ್ತಿ ಚೇತನ ; ಈ ಗುರುಚೇತನ ಡಾ. ಜಿ ಎಂ ಗಣೇಶ್

Published

on

ದಾವಣಗೆರೆಯಲ್ಲಿಂದು `ಗುರುಚೇತನ’ ಮತ್ತು `ಗುರುಶ್ರೆಷ್ಠ’ ಪ್ರಶಸ್ತಿ ಪ್ರದಾನ; ವಾಗ್ಮಿ ಹಿರೇಮಗಳೂರು ಕಣ್ಣನ್ ಭಾಗಿ

  • ನಾಗರಾಜ ಸಿರಿಗೆರೆ,ಕನ್ನಡ ಅಧ್ಯಾಪಕರು, ದಾವಣಗೆರೆ

`ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ, ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕ ಪ್ರಾತ್ಯೇಕ್ಷಿಸುತ್ತಾನೆ, ಅತ್ಯುತ್ತಮ ಶಿಕ್ಷಕ ಸ್ಫೂರ್ತಿ ನೀಡುತ್ತಾನೆ’ ಎಂಬುದು ಶಿಕ್ಷಕರ ವಿವಿಧ ಗುಣಮಟ್ಟವನ್ನು ತಿಳಿಸುವ ಮಾತು. ಮೊದಲ ಎರಡು ವರ್ಗದ ಶಿಕ್ಷಕರು ನಮಗೆ ಎಲ್ಲಕಡೆ ಕಂಡುಬರುತ್ತಾರೆ. ಮೂರನೆಯ ವರ್ಗದವರು ಬೆರಳೆಣಿಕೆಯಷ್ಟು. ಆದರೆ ನಾಲ್ಕನೆಯ ವರ್ಗದ ಶಿಕ್ಷಕರ ಸಂಖ್ಯೆ ಮಾತ್ರ ಇನ್ನೂ ಅಪರೂಪದಲ್ಲಿ ಅಪರೂಪ.

ಈ ನಾಲ್ಕನೆಯ ವರ್ಗದ ಶಿಕ್ಷಕರ ಗುಂಪಿಗೆ ಸೇರುವ ನಮ್ಮ ನಡುವಿನ ಪ್ರತಿಭೆ ಎಂದರೆ ಡಾ. ಜಿ ಎಂ ಗಣೇಶ್. ಚಿಕ್ಕಮಗಳೂರಿನ ಎಂ ಎಲ್ ಎಂ ಎನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಗಣೇಶ್ ಮೂಲತಃ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯವರು. ಶಿಕ್ಷಣ ಕಾಲೇಜು ಎಂದರೆ ಭಾವಿ ಶಿಕ್ಷಕರನ್ನು ರೂಪಿಸುವ ಮಹತ್ವದ ಸಂಸ್ಥೆ. ಅಂತಹ ಸಂಸ್ಥೆಯಲ್ಲಿ ಶ್ರದ್ಧೆ, ಪರಿಶ್ರಮ, ಪ್ರತಿಭೆ, ಕೌಶಲ್ಯ, ಪ್ರಾಮಾಣಿಕ ಸೇವೆಯ ಮೂಲಕ ಪ್ರಶಿಕ್ಷಕರ ಅಚ್ಚಮೆಚ್ಚಿನ ಪ್ರಾಧ್ಯಾಪಕರೆನಿಸಿರುವ ಗಣೇಶ್ ಯುವಕರನ್ನು ನಾಚಿಸುವಂತಹ ಉತ್ಸಾಹಿ. ಸದಾ ಹೊಸತನಕ್ಕೆ ತುಡಿಯುತ್ತಿರುವ ಮನಸ್ಸಿನವರು.

ಕ್ರಿಯಾಶೀಲತೆಗೆ ಮತ್ತೊಂದು ಹೆಸರಾಗಿರುವ ಇವರು ನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.
ವೃತ್ತಿ ಮತ್ತು ಪ್ರವೃತ್ತಿಗಳು ಒಂದೇ ಆದರೆ `ಕಬ್ಬಿನ ಮೇಲೆ ಜೇನು ಗೂಡು ಕಟ್ಟಿದಂತೆ’ ಎಂಬ ಮಾತೊಂದಿದೆ. ಹಾಗೆಯೇ `ಅಧ್ಯಾಪಕ ಎಂದರೆ ಸದಾ ಅಧ್ಯಾಯನಶೀಲ’. ಅದರಂತೆ ಡಾ. ಗಣೇಶ್ ಅಧ್ಯಯನ ಅಧ್ಯಾಪನಗಳ ಜೊತೆಗೆ ವೃತ್ತಿಗೆ ಪೂರಕವಾದ ಹಲವು ಹವ್ಯಾಸಗಳನ್ನು, ಪ್ರವೃತ್ತಿಗಳನ್ನು ರೂಢಿಸಿಕೊಂಡು ನಿಜಾರ್ಥದಲ್ಲಿ ಶಿಕ್ಷಕರ ಶಿಕ್ಷಕರಾಗಿದ್ದಾರೆ.

ಕಂಪ್ಯೂಟರ್ ಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆದ ಗಣೇಶ್ ಆ ತಂತ್ರಜ್ಞಾನವನ್ನು ತನ್ನ ವೃತ್ತಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡವರು. ಕಂಪ್ಯೂಟರ್ ತಂತ್ರಜ್ಞಾನದ ಜೊತೆಗೆ ಇಂಗ್ಲಿಷ್ ಭಾಷಾ ಪ್ರೌಢಿಮೆ ಇದ್ದರೆ ಹೇಗೆ ಯಶಸ್ವಿ ಶಿಕ್ಷಕನಾಗಬಹುದು ಎಂಬುದಕ್ಕೆ ಡಾ. ಗಣೇಶ್ ಸಾಕ್ಷಿಯಾಗಿದ್ದಾರೆ. ಕಂಪ್ಯೂಟರ್ ಬಳಕೆಯನ್ನು ಸೃಜನಾತ್ಮಕವಾಗಿ, ಅತ್ಯಂತ ಸಮರ್ಥವಾಗಿ ಬಳಸಿಕೊಂಡು ರಾಜ್ಯದಲ್ಲಿಯೇ ಶ್ರೇಷ್ಠ ಸಂಪನ್ಮೂಲವ್ಯಕ್ತಿ ಎನಿಸಿಕೊಂಡಿದ್ದಾರೆ.

ಯುಜಿಸಿಯ FIP ಯೋಜನೆ ಅಡಿಯಲ್ಲಿ ಶಿಷ್ಯವೇತನ ಪಡೆದು `’ಪ್ರೌಢಶಾಲಾ ವಿದ್ಯಾರ್ಥಿಗಳ ಆಲಿಸುವಿಕೆ ಮತ್ತು ಓದುವಿಕೆಯ ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಚಟುವಟಿಕೆಗಳ ಸಾಫಲ್ಯ – ಒಂದು ಪ್ರಾಯೋಗಿಕ ಅಧ್ಯಯನ’’ ಎಂಬ ವಿಷಯದ ಮೇಲೆ ಕುವೆಂಪು ವಿವಿಯಿಂದ ಪಿಎಚ್ ಡಿ ಪದವಿ ಪಡೆದಿರುತ್ತಾರೆ. ಅಲ್ಲದೆ ಮೂರು ಸಂಶೋಧನಾರ್ಥಿಗಳಿಗೆ ಎಂ ಫಿಲ್ ಪದವಿಗೂ ಮಾರ್ಗದರ್ಶಕರಾಗಿರುತ್ತಾರೆ.

ಸಂಘಟನಾ ಚತುರರು, ವಾಗ್ಮಿಗಳು ಮತ್ತು ಸಾಹಿತ್ಯದ ಅಭಿರುಚಿಯುಳ್ಳವರು ಆದ ಗಣೇಶ್ ಮೂಲತಃ ಕನ್ನಡ ಭಾಷಾ ಬೋಧನಾ ಪದ್ಧತಿಯ ಬೋಧಕರು. ಆದರೆ ಇವರ ಹವ್ಯಾಸಗಳ ಹರವು ಬಹಳ ವಿಸ್ತಾರವಾದುದು. ಭಾಷೆ, ಸಾಹಿತ್ಯದ ಬೋಧಕರಾದ ಇವರಿಗೆ ವಿಜ್ಞಾನದಲ್ಲೂ ಅಪಾರ ಆಸಕ್ತಿ. ಹಾಗಾಗಿ ಭಾರತ ಜ್ಞಾನವಿಜ್ಞಾನ ಜಾಥಾ, ಬೀದಿನಾಟಕ, ವಿಜ್ಞಾನ ಬಾಲೋತ್ಸವದಂತಹ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. `ಪವಾಡ ರಹಸ್ಯ ಬಯಲು ಮಾಡುವುದರಲ್ಲೂ ಸಿದ್ಧಹಸ್ತ’ರಾದ ಇವರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಭಾವನೆಗಳನ್ನು ಮೂಡಿಸುವುದರಲ್ಲೂ ಮುಂದು.

ರಾಜ್ಯ, ರಾಷ್ಟ್ರ ಮಟ್ಟದ ಅನೇಕ ವಿಚಾರ ಸಂಕಿರಣಗಳು, ಶಿಕ್ಷಕರ ತರಬೇತಿ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಪಠ್ಯಕ್ರಮ,ಪಠ್ಯವಸ್ತು, ಪಠ್ಯಪುಸ್ತಕ ರಚನೆ, ಪಠ್ಯಪುಸ್ತಕ ಆಯ್ಕೆ ಮುಂತಾದ ಶೈಕ್ಷಣಿಕ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ಗಣೇಶ್ ಅವರದು ಬಹುಮುಖ ವ್ಯಕ್ತಿತ್ವ. ಚಿಕ್ಕಮಗಳೂರು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪ ಆಯುಕ್ತರಾಗಿ ಸಲ್ಲಿಸಿರುವ ಸೇವೆ ಅನನ್ಯ.

ಇವರ ಲೇಖನಿಯಿಂದ ಶಿರೋನ್ನತ ಪ್ರಕ್ಷೇಪಣೆ-ಶಿಕ್ಷಕರಿಗೊಂದು ಕೈಪಿಡಿ, ಭಾಷಾ ಕೌಶಲ್ಯ ಸಾಫಲ್ಯ, ಪರೀಕ್ಷೆಯ ಆತಂಕ ಬೇಡ, ಮಹಾಬೆಳಕು, ಸವೆದ ಜೀವ-ಸವಿದ ಬದುಕು ಮುಂತಾದ ಕೃತಿಗಳು ಹೊರಬಂದಿವೆ. ಗಿರಿಸೌರಭ, ಮನೋಜ್ಞ ಮತ್ತು ಮುನ್ನೇಸರ ಎಂಬ ಮಹತ್ವದ ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಗೊ ರು ಚ ನೇತೃತ್ವದ `ಜಾನಪದ ನಿಘಂಟು’ ರಚನೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಸಂಘಟನಕಾರರಾದ ಗಣೇಶ್ ತಮ್ಮ ಹುಟ್ಟಿದ ಊರು ಕತ್ತಲಗೆರೆಯಲ್ಲಿ 1994ರಲ್ಲಿ ಜರುಗಿದ ಚನ್ನಗಿರಿ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಡಾ. ಜಿ ಎಸ್ ಶಿವರುದ್ರಪ್ಪ, ಡಾ. ಸುಮತೀಂದ್ರ ನಾಡಿಗ, ಡಾ. ಶ್ರೀಕಂಠ ಕೂಡಿಗೆ ಮುಂತಾದ ಸಾಹಿತ್ಯ ದಿಗ್ಗಜರನ್ನು ತಮ್ಮ ಪುಟ್ಟಹಳ್ಳಿಗೆ ಕರೆಸಿದ್ದ ನೆನಪು ಇಂದಿಗೂ ಆ ಊರಿನ ಜನತೆಯಲ್ಲಿ ಹಚ್ಚಹಸಿರಾಗಿದೆ.

ಸಾಂಸ್ಕೃತಿಕ ಮತ್ತು ಸೃಜನಶೀಲ ವ್ಯಕ್ತಿತ್ವ ರೂಢಿಸಿಕೊಳ್ಳಲು ಪ್ರೌಢಶಾಲಾ ಶಿಕ್ಷಣ ಪಡೆದ ದಾವಣಗೆರೆಯ ಅನುಭವ ಮಂಟಪ ಶಾಲೆ ಹಾಗೂ ಪದವಿ ಶಿಕ್ಷಣ ಪಡೆದ ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಮಹಾವಿದ್ಯಾಲದ ವಾತಾವರಣ ಕಾರಣವಾಗಿದೆ ಎಂದು ಗಣೇಶ್ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.ಮಾಡುವ ಕೆಲಸದಲ್ಲಿ ಶ್ರದ್ದೆ, ಆತ್ಮತೃಪ್ತಿ, ಧನಾತ್ಮಕ ಚಿಂತನೆಯ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾಗಿರುವ ಡಾ. ಗಣೇಶ್ ಅವರಿಗೆ ಈ ಸಲದ `ಗುರುಚೇತನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. .

ದಾವಣಗೆರೆಯ ಶಿಕ್ಷಣತಜ್ಞ ಡಾ. ಎಚ್ ವಿ ವಾಮದೇವಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಶ್ರೇಷ್ಠ ಶಿಕ್ಷಕರಿಗೆ ಗುರುಚೇತನ’ ಮತ್ತು `ಗುರುಶ್ರೇಷ್ಠ’ ಪ್ರಶಸ್ತಿಯನ್ನು ಪ್ರದಾನ ನೀಡಲಾಗುತ್ತದೆ. ಇಂದು ನಗರದ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಮಧ್ಯಾಹ್ನ 3-30ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ಗಣೇಶ್ ಅವರಿಗೆ `ಗುರುಚೇತನ’ ಮತ್ತು ತಾವರಕೆರೆ ಸರಕಾರಿ ಪ್ರಾಢಶಾಲಾ ಮುಖ್ಯೋಪಾಧ್ಯಾಯ ಜಿ ಪಿ ಲಿಂಗೇಶ್ ಮೂರ್ತಿಯವರಿಗೆ `ಗುರುಶ್ರೇಷ್ಠ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್, ಕುಲಪತಿ ಶರಣಪ್ಪ ಹಲಸೆ, ಮಾಗನೂರು ಸಂಗಮೇಶಗೌಡ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version