ಬಹಿರಂಗ
‘ಚುನಾವಣಾ ಬಾಂಡು’ ಎಂಬ ಕುಟಿಲ ಯೋಜನೆಯನ್ನು ರದ್ದು ಮಾಡಬೇಕು, ಈಗಲೇ..!
- ನಿಧಿ ನೀಡಿಕೆ ಕಾನೂನುಬದ್ಧವಾಗಿರುವ ವರೆಗೆ ರಾಜಕೀಯ ಪಕ್ಷಗಳಿಗೆ ಯಾರು ನಿಧಿ ನೀಡುತ್ತಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂಬ ಒಂದು ದಂಗುಬಡಿಸುವ ಹೇಳಿಕೆಯನ್ನು ಸರಕಾರದ ಪರವಾಗಿ ಅಟಾರ್ನಿ ಜನರಲ್ ನೀಡಿದ್ದಾರೆ. ತದ್ವಿರುದ್ಧವಾಗಿ, ಸುಪ್ರಿಂ ಕೋರ್ಟ್ ಜನತೆಗೆ ತಿಳಿಯುವ ಹಕ್ಕು ಇದೆ ಎಂಬ ನಿಲುವನ್ನು ಘೋಷಿಸಿದೆ. ಹೀಗಿರುವಾಗ, ಅದು ಒಂದು ಅಂತಿಮ ತೀರ್ಪು ಕೊಡುವ ವರೆಗೆ ಈ ಯೋಜನೆಗೆ ತಡೆಯಾಜ್ಞೆಯನ್ನಾದರೂ ಕೊಡಬಹುದಿತ್ತು.
ಮಾರ್ಚ್ 2018 ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡುಗಳ ಯೋಜನೆ ಕಾರ್ಪೊರೇಟ್ ನಿಧಿಗಳನ್ನು, ಕಮಿಶನ್ ಲಂಚಗಳನ್ನು ಮತ್ತು ಕಪ್ಪು ಹಣವನ್ನು ಆಳುವ ಪಕ್ಷದ ಖಜಾನೆಗೆ ಎಳೆದುಕೊಳ್ಳುವ ಒಂದು ಭಂಡ ಮತ್ತು ಅಪಾರದರ್ಶಕ ವಿಧಾನ.
ಆದ್ದರಿಂದಲೇ, ಸಿಪಿಐ(ಎಂ), ಈ ಯೋಜನೆಯನ್ನು ಮತ್ತು ಅದಕ್ಕಾಗಿ ಮಾಡಿದ ತಿದ್ದುಪಡಿಗಳನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್-ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ) ಕೂಡ ಈ ಯೋಜನೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದೆ. ಚುನಾವಣಾ ಬಾಂಡುಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವ ಏಕೈಕ ಪಕ್ಷ ಸಿಪಿಐ(ಎಂ).
ಈ ಯೋಜನೆಯಲ್ಲಿ ಅನಾಮಧೇಯ ದಾನಿಗಳು ಒಂದು ರಾಜಕೀಯ ಪಕ್ಷಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಇದಕ್ಕಾಗಿ ನಿಯೋಜಿತವಾದ ಖಾತೆಗಳ ಮೂಲಕ ಎಷ್ಟು ಬೇಕಾದರೂ ಹಣವನ್ನು ಕೊಡಬಹುದು. ಇದಕ್ಕಾಗಿ, ಜನತಾ ಪ್ರಾತಿನಿಧ್ಯ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಕಂಪನಿಗಳ ಕಾಯ್ದೆ ಮತ್ತು ಆರ್‌ಬಿಐ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಕಂಪನಿಗಳು ಮೂರು ವರ್ಷಗಳ ನಿವ್ವಳ ಲಾಭದ 7.5% ದ ವರೆಗಿನ ಮೊತ್ತವನ್ನು ಮಾತ್ರ ದೇಣಿಗೆಯಾಗಿ ಕೊಡಬಹುದು ಎಂದಿದ್ದ ಮಿತಿಯನ್ನು ತೆಗೆಯಲಾಯಿತು. ಇನ್ನೂ ಅಪಾಯಕಾರಿ ಸಂಗತಿಯೆಂದರೆ, ಭಾರತದಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅನುವಾಗುವಂತೆಯೂ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು.
ಅರುಣ್ ಜೇಟ್ಲಿ ತರ್ಕಗಳು
ದಾನಿ ಯಾರೆಂಬುದು ಎಸ್‌ಬಿಐಗೆ ಗೊತ್ತಿರುತ್ತದೆ. ಇದು ಸರಕಾರೀ ಒಡೆತನ್ ಬ್ಯಾಂಕ್ ಆಗಿರುವುದರಿಂದಾಗಿ, ಅದರ ಮೂಲಕ ಸರಕಾರಕ್ಕೂ ಗೊತ್ತಾಗುತ್ತದೆ. ಆದ್ದರಿಂದ ಕಾರ್ಪೊರೇಟ್‌ಗಳು ಮತ್ತು ದೊಡ್ಡ ದೇಣಿಗೆದಾರರು ಪ್ರತಿಪಕ್ಷಕ್ಕಿಂತ ಆಳುವ ಪಕ್ಷಕ್ಕೇ ದೇಣಿಗೆ ಕೊಡಲು ಮುಂದೆ ಬರುತ್ತಾರೆ. ದಾನಿಗಳ ಹೆಸರನ್ನು ಸಾರ್ವಜನಿಕಗೊಳಿಸುವುದಿಲ್ಲವಾದ್ದರಿಂದ, ಅವರು ಈಗ ಯಾವುಧೇ ಭಯವಿಲ್ಲದೆ ಯಾರಿಗಾದರೂ ದೇಣಿಗೆ ಕೊಡಬಹುದು ಎಂಬ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ತರ್ಕಕ್ಕೆ ತದ್ವಿರುದ್ಧವಾಗಿ, ಸರಕಾರಕ್ಕೆ ದಾನಿಯ ಹೆಸರು ಗೊತ್ತಾಗುವುದರಿಂದಾಗಿ, ಈ ಬಾಂಡ್‌ಗಳು ಮುಖ್ಯವಾಗಿ ಆಳುವ ಪಕ್ಷಕ್ಕೇ ಬರುವುದನ್ನು ಖಾತ್ರಿ ಮಾಡಿಕೊಂಡಂತಾಗಿದೆ.
ಇದರ ಫಲಿತಾಂಶ ನಿರೀಕ್ಷಿಸಿದಂತೆಯೇ ಇದೆ. ನವಂಬರ್ 2018ರ ವರೆಗೆ ಎಸ್‌ಬಿಐ ಕೊಟ್ಟಿರುವ ಬಾಂಡುಗಳಲ್ಲಿ 95%ವನ್ನು ಬಿಜೆಪಿ ಪಡೆದಿದೆ. ಚುನಾವಣೆಗಳ ಪ್ರಕಟಣೆಯ ನಂತರ ನೀಡಲಾರಂಭಿಸಿರುವ ಚುನಾವಣಾ ಬಾಂಡುಗಳಲ್ಲೂ ಇದು ಮುಂದುವರೆಯಲಿದೆ.
ಅರುಣ್ ಜೇಟ್ಲಿಯವರ ಇನ್ನೊಂದು ತರ್ಕ, ಇದರಿಂದಾಗಿ ರಾಜಕೀಯ ನಿಧಿ ನೀಡಿಕೆ ಕಾನೂನುಬದ್ಧ ರೀತಿಗಳಲ್ಲಿ ಬರುವಂತಾಗುತ್ತದೆ ಎಂಬುದು ಕೂಡ ಸರಿಯಲ್ಲ ಎಂಬುದು ಸಾಬೀತಾಗಿದೆ. ಏಕೆಂದರೆ ಈ ಚುನಾವಣೆಗಳಲ್ಲಿ ಅಪಾರ ಮೊತ್ತಗಳನ್ನು ನಗದಿನ ಮೂಲಕವೇ ನಿಯೋಜಿಸಲಾಗುತ್ತಿದೆ. ಎಪ್ರಿಲ್ 1 ರ ವರೆಗೆ ಚುನಾವಣಾ ಆಯೋಗದ ಅಧಿಕಾರಿಗಳು 1,400 ಕೋಟಿ ರೂ.ಗಳಷ್ಟು ನಗದನ್ನು ವಶಪಡಿಸಿಕೊಂಡಿದ್ದಾರೆ. ಇದು ಚುನಾವಣೆಗಳಲ್ಲಿ ಹರಿದಾಡುತ್ತಿರುವ ಕಪ್ಪು ಹಣದ ಒಂದು ಸಣ್ಣ ಭಾಗವಷ್ಟೇ.
ಸುಪ್ರಿಂ ಕೋರ್ಟ್, ಅರ್ಜಿಗಳನ್ನು ಹಾಕಿದ ಸುಮಾರು ಒಂದು ವರ್ಷದ ನಂತರ, ಒಂದು ಮಧ್ಯಂತರ ಆದೇಶ ನೀಡಿ, ರಾಜಕೀಯ ಪಕ್ಷಗಳು ತಾವು ಪಡೆದಿರುವ ಚುನಾವಣಾ ಬಾಂಡುಗಳು, ಮತ್ತು ಅವನ್ನು ಯಾರಿಂದ ಪಡೆಯಲಾಯಿತು ಎಂಬುದರ ವಿವರಗಳನ್ನು ಸೀಲಾದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಹೇಳಿದೆ. ನ್ಯಾಯಾಲಯ ಈ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸುವ ತಡೆಯಾಜ್ಞೆಯನ್ನು ಕೊಟ್ಟಿಲ್ಲ. ಪಕ್ಷಗಳು ನೀಡುವ ವಿವರಗಳನ್ನು ಚುನಾವಣಾ ಆಯೋಗ ತಿಳಿಸಬೇಕು ಎಂದು ಕೂಡ ಹೇಳಿಲ್ಲ. ಬಾಂಡುಗಳನ್ನು ನೀಡುವ ಅವಧಿಯನ್ನು ಮೇ ತಿಂಗಳಲ್ಲಿ 10 ದಿನಗಳಿಂದ ೫ ದಿನಗಳಿಗೆ ಇಳಿಸಿದೆಯಷ್ಟೇ. ನ್ಯಾಯಾಲಯ, ಮೇ ೩೦ರಂದು, ಚುನಾವಣೆಗಳು ಮುಗಿದು ಹೋದ ನಂತರ ಈ ಕೇಸಿನ ಮುಂದಿನ ವಿಚಾರಣೆಯನ್ನು ಮಾಡುತ್ತದೆ.
ಅರೆಮನಸ್ಸಿನ ಮತ್ತು ನಿರಾಶಾದಾಯಕ ಆದೇಶ
ಇದೊಂದು ಅರೆಮನಸ್ಸಿನ ಮತ್ತು ನಿರಾಶಾದಾಯಕ ಆದೇಶ. ಏಕೆಂದರೆ, ಅದು ಮೂರು ದಿನಗಳ ಕಾಲ ಎಲ್ಲ ಕಡೆಗಳಿಂದ ತರ್ಕಗಳನ್ನು ಆಲಿಸಿತು. ಚುನಾವಣಾ ಆಯೋಗ ನ್ಯಾಯಲಯದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾಯ್ದೆಗಳಲ್ಲಿನ ಬದಲಾವಣೆಗಳು ರಾಜಕೀಯ ಪಕ್ಷಗಳ ರಾಜಕೀಯ ಹಣಕಾಸು/ನಿಧಿ ನೀಡಿಕೆಯ ಪಾರದರ್ಶಕತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂದು ಹೇಳಿದೆ. ಬಾಂಡುಗಳ ಮೂಲವನ್ನು ವರದಿ ಮಾಡದಿರುವುದು, ಎಂದರೆ, ರಾಜಕೀಯ ಪಕ್ಷ ಸರಕಾರೀ ಕಂಪನಿಗಳಿಂದ ಮತ್ತು ವಿದೇಶಿ ಮೂಲಗಳಿಂದ ದೇಣಿಗೆಗಳನ್ನು ತಗೊಂಡಿದೆಯೋ ಎಂಬುದನ್ನು ದೃಢಪಡಿಸಲಾಗುವುದಿಲ್ಲ ಎಂದಾಗುತ್ತದೆ ಎಂದೂ ಆಯೋಗ ಹೇಳಿದೆ.
ಅಟಾರ್ನಿ ಜನರಲ್ ಅವರು ನಿಧಿ ನೀಡಿಕೆ ಕಾನೂನುಬದ್ಧವಾಗಿರುವ ವರೆಗೆ ರಾಜಕೀಯ ಪಕ್ಷಗಳಿಗೆ ಯಾರು ನಿಧಿ ನೀಡುತ್ತಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂಬ ಒಂದು ದಂಗುಬಡಿಸುವ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಜನತೆಗೆ ತಿಳಿಯುವ ಹಕ್ಕು ಇದೆ ಎಂಬ ನಿಲುವನ್ನು ನ್ಯಾಯಾಲಯ ಘೋಷಿಸಿರುವಾಗ, ಅದು ಒಂದು ಅಂತಿಮ ತೀರ್ಪು ಕೊಡುವ ವರೆಗೆ ಈ ಯೋಜನೆಗೆ ತಡೆಯಾಜ್ಞೆಯನ್ನಾದರೂ ಕೊಡಬಹುದಿತ್ತು.
ಈ ನಡುವೆ ಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಬಾಂಡುಗಳ ಮೂಲಕ ನಿಧಿ ನೀಡಿಕೆಯಲ್ಲಿ ಭಾರೀ ಹೆಚ್ಚಳ ಕಾಣಬಂದಿದೆ. ಒಂದು ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಗೆ ಎಸ್‌ಬಿಐ ನೀಡಿರುವ ಉತ್ತರದ ಪ್ರಕಾರ, ಇಡೀ 2018ಕ್ಕೆ ಹೋಲಿಸಿದರೆ, 2019ರ ಮೊದಲ ಮೂರು ತಿಂಗಳಲ್ಲೇ ಚುನಾವಣಾ ಬಾಂಡ್‌ಗಳಿಗೆ 62% ಹೆಚ್ಚು ಹಣ ಬಂದಿದೆ. 2018ರಲ್ಲಿ ಒಟ್ಟು 1,056.73 ಕೋಟಿ ರೂ.ಗಳ ಮೊತ್ತದ ಚುನಾವಣಾ ಬಾಂಡುಗಳನ್ನು ಕೊಡಲಾಗಿದ್ದರೆ, ಈ ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲೇ ನೀಡಿರುವ ಬಾಂಡುಗಳ ಮೊತ್ತ 1,716 ಕೋಟಿ ರೂ.ಗಳು. ನಿಜವಾದ ಚುನಾವಣಾ ತಿಂಗಳುಗಳಾದ ಎಪ್ರಿಲ್ ಮತ್ತು ಮೇ ನಲ್ಲಿ ಇದು ಇನ್ನೂ ಹೆಚ್ಚುತ್ತದೆ ಎಂದು ನಿರೀಕ್ಷಿಸಬಹುದು. ಸುಪ್ರಿಂ ಕೋರ್ಟ್ ಈ ಯೋಜನೆಗೆ ತಡೆಯಾಜ್ಞೆ ನೀಡುವ ಮೂಲಕ ಈ ಹರಿವನ್ನಾದರೂ ನಿಲ್ಲಿಸಬಹುದಾಗಿತ್ತು.
ಆಳುವ ಪಕ್ಷಕ್ಕೆ ದೊಡ್ಡ ಕಾರ್ಪೊರೇಟ್‌ಗಳ ಮತ್ತು ಕಾನೂನುಬಾಹಿರವಾದ ಹಣ ನೀಡಿಕೆಯನ್ನು ಕಾನೂನುಬದ್ದಗೊಳಿಸುವ ಈ ಕುಟಿಲ ಯೋಜನೆಯನ್ನು ಸುಪ್ರಿಂ ಕೊರ್ಟ್ ಕೊನೆಗೊಳಿಸುತ್ತದೆ ಎಂದು ಆಶಿಸಬೇಕಾಗಿದೆ.
(ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
–ಪ್ರಕಾಶ ಕಾರಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243