ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು
ದಾವಣಗೆರೆ, ಸುದ್ದಿದಿನ; ದಾವಣಗೆರೆ ಜಿಲ್ಲಾ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಕಾಮಗಾರಿ ಮತ್ತು ಖರೀದಿಯಲ್ಲಿನ ಅವ್ಯವಹಾರವನ್ನು ಸೂಕ್ತ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಎಂ.ಆರ್ ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜಿ ಶಿವಕುಮಾರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಇಲ್ಲಿಗೆ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮಗಳು ನಡೆದಿರುವ ಅಧಿಕೃತ ಮಾಹಿತಿಯ ಮೇರೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯ, ಕೊರಟಿಕೆರೆ ಚನ್ನಗಿರಿ ತಾಲ್ಲೂಕು ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಲಾಗಿದ್ದು, ಅರ್ಜಿದಾರರು ಹಣ ಪಾವತಿಸಿದರೂ ನಿಗಧಿತ ಕಾಲಾವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದ ಕಾರಣ ಇ-ಗ್ರಾಮ ಸ್ವರಾಜ್ ಮೂಲಕ ಮಾಹಿತಿ ಪಡೆದು ದಿನಾಂಕ: 03-10-2026 ರಂದು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಗಿರಿ ಇವರಿಗೆ ದೂರು ನೀಡಿ ಇಲಾಖಾ ತನಿಖೆಗೆ ಒಳಪಡಿಸುವಂತೆ ಕೋರಲಾಗಿತ್ತು. ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ತನಿಖೆ ನಡೆಸದ ಕಾರಣ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಂತರಂಗ
ಕವಿತೆ | ಒಂಟಿಯಾನದ ಸರಕು
~ಹೊನ್ನಪ್ಪ. ನೀ. ಕರೆಕನ್ನಮ್ಮನವರ
ಗೌಜು ಗದ್ದಲವ ಸೀಳಿದ
ನಿಶ್ಯಬ್ದ ‘ಮೌನ’
ಹಾದಿಯಾಗಿ ಮಲಗಿದೆ
ತನ್ನೆದೆಗೆ ತಾ ಸಾಕ್ಷಿಯಾಗಿ
ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು
ಕಣ್ಣಿಗಂಟಿದ ಬೆಳಕಷ್ಟೇ
ಗುರಿ ತೋರುವ ಕಂದೀಲು
ಕಾಣದೂರಿನ ಹಂಬಲಕೆ
ಸಂಪ್ರದಾಯದ ಚಾಳಿಸು
ಹಾಕಿಕೊಂಡೇ ಹೆಣ್ಣೆದೆಗೆ
ಇಣುಕುವ ಮೀಸೆಯಂಚಿನ
ತುಟಿಯ ಕುಹಕಗಳು
ದೂರಿ ದೂರಿ ದೂರವೇ ನಿಲ್ಲುತ್ತವೆ
ರಸ್ತೆಯ ಇಕ್ಕೆಲಗಳ ಮರದಂತೆ..
ನಗ್ನ ಸತ್ಯ ಅರಿಯದ ಪ್ರತಿಮೆಗಳಾಗಿ..!
ವಕಾಲತ್ತು ಹೂಡುವವರಾರಿಲ್ಲಿ..?
ಕಟಕಟೆಯಿಂದ ಜಾರಿ ಬಿದ್ದ
ಕೂಡಲೇ ತೀರ್ಪು ಆಡಿಕೊಳ್ಳುವವರ
ಬಾಯಲ್ಲಿ ಆಹುತಿಯಾಗುವುದಂತೆ..!
ಒಂದು ಪ್ರಶ್ನೆಯ ಉತ್ತರಕಿಲ್ಲಿ
ಸಾವಿರ ಪ್ರಶ್ನೆಗಳೇ ಹುಟ್ಟುತ್ತವೆ
ಕಿವುಡರಾಗಿಯೇ ನಡೆಯಬೇಕು
ಅಸಂಬದ್ಧತೆಯನ್ನು ಮೀರದ
ಈ ಲೋಕದೊಳಗೆ,
ಅದೆಷ್ಟು ಅಳೆದಳೆದು
ತೂಗಿದರೇನು
ಕೊನೆ ಇರದ ಈ ಏಕಾಂತ..?
ಆದರೂ ಒಂಟಿಯೇನಲ್ಲ ಬಿಡಿ
ನನ್ನೊಳಗೆ ನಾನಿರುವಾಗ..!
ಅಷ್ಟೇ ಏಕೆ..?
ಅಲ್ಲಿ ಯಾರದೋ ಕಾಲಿಗೆ ಸಿಕ್ಕು
ನಲುಗಿದ ಗುಲಾಬಿ ಎಸಳು
ನಡುರಸ್ತೆಯಲಿ ತಾಳಿ
ಕಿತ್ತುಕೊಂಡವನಿಂದ
ಕೈಜಾರಿ ಬಿದ್ದ ಕರಿಮಣಿ
ತೆವಲು ತೀರಿದ ಬಳಿಕ
ಇರಿದ ರಕ್ತದ ಕಲೆ
ದಾರಿಯುದ್ಧಕ್ಕೂ
ನನಗೆ ಜಾಹೀರಾತಾಗಿರುವಾಗ
ಕಾಲಿನಿಂದ ನಡೆದವರಿಗಿಂತ
ತಲೆಯಿಂದ ನಡೆದವರೇ
ಹೆಚ್ಚು ಆಪ್ತ ಮೈಲುಗಲ್ಲುಗಳಾಗುತ್ತಾರೆ
ಈ ಸುಡುವ ದಾರಿಯಲ್ಲಿ ನನಗೀಗ..!
~ಹೊನ್ನಪ್ಪ. ನೀ. ಕರೆಕನ್ನಮ್ಮನವರ, ಶಿಕ್ಷಕರು,9986334154

ಅಂತರಂಗ
ಮೆಚ್ಚುಗೆ ಪಡೆದ ಕತೆ | ಸತ್ಯದರ್ಶನ
~ಸುಜಾತ ಎಸ್.ಎನ್ ರೆಡ್ಡಿ, ಬೆಂಗಳೂರು
ಅತ್ತೇ , ಇವತ್ತು ಜಯಂತ್ ಮಾವ ಜೈಲಿನಿಂದ ಬಿಡುಗಡೆಯಾಗಿ ಇಲ್ಲಿಗೇ ಬರ್ತಿದ್ದಾರಂತೆ..! ಅಮ್ಮ ತುಂಬಾ ದಿನಗಳ ನಂತರ ಖುಷಿಯಾಗಿ ಕಾಣ್ತಾ ಇದ್ದಾರೆ. ಅವರನ್ನ ಹಿಡಿಯಕ್ಕೇ ಆಗ್ತಿಲ್ಲಾ ಅನ್ನಿ..!” ಕಾಲಿಗೆ ತೊಡರುತ್ತಿದ್ದ ರೇಷ್ಮೆಲಂಗವನ್ನು ಹಿಡಿದು ಮಹಡಿ ಮೆಟ್ಟಿಲೇರಿ ಖುಷಿಯಿಂದ ಓಡುತ್ತಾ ಬಂದವಳು, ನನ್ನ ನಿರ್ಲಿಪ್ತ ಮುಖಭಾವವನ್ನು ಗಮನಿಸಿ,”ಅತ್ತೇ,ನಿಮಗೆ ಖುಷಿ ಇಲ್ವಾ..!? ಮಾವ ಹತ್ತುವರ್ಷಗಳ ನಂತರ ಜೈಲಿನಿಂದ ಮತ್ತೆ ಮನೆಗೆ ಬರ್ತಿರೋದು..!?” ಏದುಸಿರು ಬಿಡುತ್ತಾ ಕಂಗಳನ್ನು ಕಿರಿದಾಗಿಸಿಕೊಂಡು ಮುಗ್ಧವಾಗಿ ಕೇಳಿದಳು ನಮ್ಮನೆಯ ಚೈತನ್ಯ ಚಿಲುಮೆ ಮೌನಿಕ.
”ನಾವೆಲ್ಲ ಖುಷಿಪಡುವ ಸಾಧನೆಯ ಕೆಲಸವೇನೂ ಮಾಡಿಲ್ಲ ನಿಮ್ಮ ಮಾವ ಮೌನಿ. ನನ್ನಣ್ಣ ಅಂದ್ರೆ ನಿಮ್ಮಪ್ಪನನ್ನ ಕೊಂದು ಜೈಲಿಗೆ ಹೋಗಿರೋದು! ಅಂಥವನ ಮುಖ ನೋಡಕ್ಕೂ ನನಗಿಷ್ಟವಿಲ್ಲ!” ನನ್ನೊಳಗಿನ ಅಸಹನೆ, ಕೋಪ, ನಿರಾಸೆ ಎಲ್ಲವೂ ನಾನಾಡುವ ಪ್ರತಿಪದದಲ್ಲಿಯೂ ತುಂಬಿ ತುಳುಕುತ್ತಿದ್ದರೆ, ನಾ ಮಡಚಿಡುತ್ತಿದ್ದ ಕಂಬಳಿಯನ್ನು ನನ್ನ ಕೈಯಿಂದ ಕಿತ್ತೆಸೆದು ಕೊರಳಿಗೆ
ನೇತುಬೀಳುತ್ತಾ,”ಕಣ್ಣಿಂದ ನೋಡಿದ್ದೆಲ್ಲವೂ ಸತ್ಯವಲ್ಲ. ಪೂರ್ತಿ ವಿಚಾರ ತಿಳಿಯದೆ ಯಾರನ್ನೂ ದೂಷಿಸಬಾರದು, ದ್ವೇಷಿಸಬಾರದು ಅಂತ ಅಮ್ಮ ಹೇಳಿದ್ದಾರೆ. ಹಾಗೇ, ಉದ್ದೇಶಗಳು ಒಳ್ಳೆಯದಿದ್ರೆ ಕೆಲವೊಂದು ಕೆಲಸಗಳಿಗೆ ರಕ್ತದಕಲೆ ಅಂಟಲ್ವಂತೆ! ಮಾವ ಒಳ್ಳೆಯವರು. ಅವರು ಉದ್ದೇಶಪೂರ್ವಕವಾಗಿ ಅಪ್ಪನನ್ನ ಕೊಂದಿಲ್ಲ. ಇದನ್ನ ಅಮ್ಮನೊಡನೆ ನಾನೂ ನಂಬ್ತೀನಿ ಅತ್ತೆ…!”
”ನಿಮಗೆಲ್ಲರಿಗೂ ಅವ ಒಳ್ಳೆಯವನು ಅನ್ನೋ ಭ್ರಾಂತು ಹಿಡಿದಿದೆ! ತಾನೊಬ್ಬ ಸತ್ಯಸಂಧ ಅಂತ ನಿಮ್ಮೆಲ್ಲರನ್ನು ನಂಬಿಸಿ ಮಂಕುಬೂದಿ ಎರಚಿದ್ದಾನೆ ಆ ನಿನ್ನ ಮಾವ ಜಯಂತ್! ಅದಕ್ಕೇ ನೀವೆಲ್ಲಾ ಹೀಗಾಡ್ತಿರೋದು!” ಅಂತರಾಳದಲ್ಲಿ ನೋವಿನಸೆಲೆ ಉಕ್ಕುತ್ತಿದ್ದರೆ ಕಂಬನಿಯನ್ನು ಕಾಣದಂತೆ ತಡೆದು ತುಸು ಬಿರುಸಾಗಿಯೇ ಅವಳಿಗೆ ಉತ್ತರಿಸಿದೆ. ಕೋಪದಲ್ಲಿರುವಂತೆ ಕಂಡ ನನ್ನೊಡನೆ ಮತ್ತೇನು ಮಾತನಾಡಬೇಕೆಂದು ತಿಳಿಯದೆ ಒಂದುಕ್ಷಣ ದಿಟ್ಟಿಸಿ ನೋಡಿ ಮೌನವಾಗಿಯೇ ಕೆಳಗಿಳಿದು ಹೋದಳು ಮೌನಿಕ.
ಯಾಕೋ ಮನಸ್ಸೆಲ್ಲಾ ಕದಡಿದಂತಾಗಿತ್ತು..! ಹೃದಯವೂ ನೆನಪುಗಳಿಂದ ಭಾರವಾಗಿತ್ತು. ಬದುಕಿನ ನೀಲನಕ್ಷೆಯಲ್ಲಿ ಅನಿರೀಕ್ಷಿತ ತಿರುವುಗಳು ನೆಮ್ಮದಿಯ ಜೀವನಪಥವನ್ನು ಹೇಗೆ ಮಗ್ಗಲಾಗಿಸಿಬಿಡುತ್ತವೆಂದು ಚಿಂತಿಸುತ್ತಾ ಮನಸ್ಸು ಹಗುರಾಗಲೆಂದು ಮಹಡಿಯ ಕಿಟಕಿಯನ್ನು ವಿಶಾಲವಾಗಿ ತೆರೆದು, ಹೊರಗಡೆ ಇಣುಕಿ ನೋಡಿದ್ದೆ. ಸುತ್ತಲೂ ಹಸಿರು ಹೊದ್ದ ಘಟ್ಟಪ್ರದೇಶ. ನೇಸರನ ಜಾಡಿಲ್ಲದೆ ಕವಿದಿದ್ದ ಹಿಮವಿನ್ನೂ ಕರಗಿರಲಿಲ್ಲ. ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಗೂಡಿನಂತಹಾ ಮನೆಗಳಿಂದ ಮುಂಜಾನೆಯ ಮಂಜನು ಸೀಳುತ್ತಾ ಹೊರಟ ಸುರುಳಿಯಾಕಾರದ ಹೊಗೆ ಅಲ್ಲೊಂದು ಜೀವಚೈತನ್ಯವನ್ನು, ಬದುಕಿನೆಡೆಗಿನ ಅಪರಿಮಿತ ಒಲವನ್ನು ತಿಳಿಸುತ್ತಿದ್ದರೆ ಮುದುಡಿದ್ದ ನನ್ನ ಮನಕ್ಕೆ, ಬದುಕಿಗೆ ಮಾತ್ರ ಆ ಚಿತ್ರಣ ಯಾವ ಹುರುಪನ್ನೂ ತುಂಬಲಾರದೆ ಸೋತಿತ್ತು. ಮಾಗಿಯ ಚಳಿಗೆ ಕಂಪಿಸುತ್ತಿದ್ದ ಒಡಲನ್ನು ಶಾಲಿನಿಂದ ಬೆಚ್ಚಗಾಗಿಸಿ ನಾನು ಮಾತ್ರ ನೆನಪುಗಳ ಸಂತೆಯಲ್ಲಿ ಕಳೆದುಹೋಗಿದ್ದೆ.
****
ಹೆಚ್ಚೂ ಕಮ್ಮಿ ಇದೇ ಮಾಘಮಾಸದ ದಿನಗಳಲ್ಲಿಯೇ ಅಣ್ಣ ಅಶ್ವಿನ್ ಗೆ ಚಂದ್ರಚಕೋರಿಯಂತಹ ಪ್ರವಸ್ಥಿಯೊಡನೆ ಮದುವೆಯಾಗಿತ್ತು. ಅವರದ್ದು ಪ್ರೇಮವಿವಾಹ. ಅತ್ತಿಗೆಯಂತೂ ಗುಣದಲ್ಲಿ ಅಪರಂಜಿ! ಚಿಕ್ಕಂದಿನಿಂದಲೂ ಅಣ್ಣನೊಡನೆ ನನ್ನ ಬಾಂಧವ್ಯ ಅಷ್ಟಕ್ಕಷ್ಟೇ! ಅವನೆಂದರೆ ಒಂದು ವಿಧವಾದ ಅಸ್ಪಷ್ಟ ಭಯ! ಅವನ ಒರಟು ಸ್ವಭಾವ, ಗಡಸುಮಾತು ಅವನಿಂದ ದೂರವಿಟ್ಟಿತ್ತಾ ಅನ್ನೋದು ನೆನಪಿಲ್ಲ. ಆದರೆ ಅತ್ತಿಗೆ ಮಾತ್ರ ತನ್ನ ಕಲ್ಮಶವಿಲ್ಲದ ನಡೆನುಡಿಯಿಂದ ಬಂದ ಹೊಸದರಲ್ಲಿಯೇ ಮನೆಯ ಎಲ್ಲರ ಮನಸ್ಸುಗಳನ್ನೂ ಗೆದ್ದುಬಿಟ್ಟಿದ್ದಳು. ಒಂದೆರಡು ವರ್ಷ ಚಿಕ್ಕವಳಾದ ನನ್ನೊಡನೆ ಆತ್ಮೀಯ ಗೆಳತಿಯಂತೆ ಬೆರೆತು ಹೋಗಿದ್ದಳು. ಚಿನ್ನಾರಿ ಮೌನಿಕಳ ಆಗಮನವಾದ ನಂತರವಂತೂ ನಮ್ಮ ಮನೆ ನಂದಗೋಕುಲವಾಗಿತ್ತು.
ಆ ದಿನಗಳಲ್ಲಿಯೇ ನನ್ನ ಜೀವನದಲ್ಲಿಯೂ ಮಾಧುರ್ಯದ ಪ್ರೇಮಪಲ್ಲವಿಸಿ ಹರೆಯಕ್ಕೆ ರಂಗುರಂಗಿನ ಕನಸು ತುಂಬಿತ್ತು. ಆ ಸವಿಭಾವದ ಒಲವ ಲಹರಿಗೆ ಕಾರಣನಾದವನು ಅತ್ತಿಗೆಯ ಅಣ್ಣ ಜಯಂತ್. ನೋಡಲೆಷ್ಟು ಸ್ಫುರದ್ರೂಪಿಯೋ ಅಷ್ಟೇ ಹೊನ್ನಿನ ಗುಣವುಳ್ಳವನು! ಅಣ್ಣನ ಮದುವೆಯ ಸಮಯದಲ್ಲಿಯೇ ಮನಸ್ಸನ್ನು ಕದ್ದ ಚೆಲುವ ಚೆನ್ನಿಗರಾಯ ನಂತರದಲ್ಲಿ ತಂಗಿಯನ್ನು ನೋಡುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಲೇ ಹಸನಾದ ಮನಸ್ಸಿನಲ್ಲಿ ಪ್ರೀತಿಯೆಂಬ ಬೀಜ ಬಿತ್ತನೆ ಮಾಡಿದ್ದ. ಅದು ಮೊಳಕೆಯೊಡೆದು, ಚಿಗುರುತುಂಬಿ ಹೆಮ್ಮರವಾಗಲು ಐದಾರು ವರ್ಷಗಳೇ ಹಿಡಿದಿದ್ದವು.
ಆ ಸಮಯದಲ್ಲಿ ನನ್ನ ಬದುಕನ್ನು ಅವನೆಷ್ಟು ಆವರಿಸಿಕೊಂಡಿದ್ದನೆಂದರೆ ಅವನಿಲ್ಲದೆ ಕಳೆವ ಒಂದೊಂದು ಕ್ಷಣಗಳು ಕೂಡ ಯುಗಗಳಂತೆ ಭಾಸವಾಗುತ್ತಿತ್ತು. ಗಾಢ ಪ್ರೀತಿಯಲ್ಲಿ ಬೆಸೆದಿದ್ದ ನಾವು ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದರಿವಾದಾಗ ತಡಮಾಡದೆ ತನ್ನ ಹೆತ್ತವರೊಡನೆ ಮನೆಗೆ ಬಂದು ಧೈರ್ಯವಾಗಿ ಹೆಣ್ಣು ಕೇಳಿದ್ದ. ಅಷ್ಟರಲ್ಲಿ ನನ್ನ ಸ್ನಾತಕೋತ್ತರ ಪದವಿಯೂ ಪೂರ್ಣಗೊಂಡಿತ್ತು. ಜಯಂತ್ ಕೂಡ ತಂಗಿಯ ಮದುವೆಗಾಗಿ ಮಾಡಿದ್ದ ಸಾಲದ ಹೊರೆಯನ್ನು ಇಳಿಸಿಕೊಂಡು ಸುಭದ್ರವಾದ ಮತ್ತೊಂದು ಉದ್ಯೋಗವನ್ನರಸಿಕೊಂಡಿದ್ದ. ಈಗ ಬೇಡವೆನ್ನಲು ಮನೆಯಲ್ಲಿ ಕಾರಣಗಳೇ ಇಲ್ಲದ್ದರಿಂದ ಅಮ್ಮ, ಅಣ್ಣ ಖುಷಿಯಿಂದಲೇ ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಅಸ್ತು ಎಂದಿದ್ದರು. ಅತ್ತಿಗೆಯ ಸಂತೋಷಕ್ಕಂತೂ ಪಾರವೇ ಇರಲಿಲ್ಲ! “ಈ ಮನೆಯ ಪುಟ್ಗೌರಿ ನನ್ನ ತವರನ್ನು ಬೆಳಗಲು ಹೋಗ್ತಿದ್ದಾಳೆ..!” ಎಂದು ಎಲ್ಲರಿಗೂ ಹೇಳಿಕೊಂಡು ಸಂತೋಷಪಟ್ಟಿದ್ದಳು.
ಆದರೆ ಕ್ರೂರವಿಧಿಗೆ ನಮ್ಮ ಈ ಸಂತೋಷ ಕಣ್ಣುಕುಕ್ಕಿತ್ತೇನೋ..! ಮನೆಯಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗಲೇ ಬರಸಿಡಿಲಿನಂತೆ ಅಣ್ಣನ ಹತ್ಯೆಯ ಸುದ್ದಿ ಬಂದು ಅಪ್ಪಳಿಸಿತ್ತು! ಅದಕ್ಕಿಂತಲೂ ಘೋರ ದುರಂತವೆಂದರೆ ಆ ಕೊಲೆಯನ್ನು ಜಯಂತ್ ಮಾಡಿದ್ದ ಎನ್ನುವುದು..! ಸುದ್ದಿ ಕೇಳಿ ಕಾಲ ಕೆಳಗಿನ ಭೂಮಿ ಒಮ್ಮೆಲೇ ಕುಸಿದ ಅನುಭವವಾಗಿತ್ತು! ನಾನಂತೂ ದಿಗ್ಭ್ರಾಂತಿಗೆ ಗುರಿಯಾಗಿ ಥರಥರನೆ ನಡುಗಿ ಹೋಗಿದ್ದೆ! ತೋಟದ ಮನೆಯಲ್ಲಿ ರಕ್ತದ ಮಡುವಿನ ನಡುವಲ್ಲಿ ಬಿದ್ದಿದ್ದ ಅಣ್ಣನನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಏನಾಯ್ತು,!? ಯಾಕಾಯ್ತು..!? ಎಂಬುದೇ ಅರ್ಥವಾಗಿರಲಿಲ್ಲ. ಅತ್ತಿಗೆಯಂತೂ ಆಘಾತಕ್ಕೆ ಒಳಗಾದಂತೆ ಶೂನ್ಯವನ್ನು ದಿಟ್ಟಿಸುತ್ತಾ ಮೌನದ ಮೊರೆ ಹೊಕ್ಕಿಬಿಟ್ಟಿದ್ದಳು. ಊಹಿಸಿಕೊಳ್ಳಲು ಕೂಡ ಸಾಧ್ಯವಾಗದ ಈ ಘಟನೆ ನಮ್ಮೆಲ್ಲರ ಬಾಳಲ್ಲಿ ಕತ್ತಲೆ ತುಂಬಿ ಸಂತೋಷಗಳನ್ನು ಆವಿಯಾಗಿಸಿತ್ತು.
ಮೊದಲಿಗೆ ಜಯಂತ್ ಕೊಲೆಗಾರನೆಂದರೆ ನನ್ನ ಮನಸ್ಸು ಕೂಡ ಒಪ್ಪಿಕೊಂಡಿರಲೇ ಇಲ್ಲ. ಅದನ್ನೇ ಜೈಲಿನ ಕಂಬಿಗಳ ಹಿಂದೆ ನಿಂತಿದ್ದ ಅವನಲ್ಲಿ ಪ್ರಶ್ನಿಸಿದ್ದೆ. ಆದರೆ ನನ್ನೆಲ್ಲಾ ಕೇಳುಗಳಿಗೂ ಅವನದ್ದು ಮೌನವೇ ಉತ್ತರವೆಂದಾದಾಗ ನನ್ನ ಸಹನೆಯ ಕಟ್ಟೆಯೊಡೆದಿತ್ತು.
“ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೊಲ್ಲುವುದು ಅಷ್ಟು ಸುಲಭವೇ..!? ಆ ಸಮಯದಲ್ಲಿ ನಿನ್ನನ್ನೇ ನಂಬಿರುವ ನಾನು, ಪ್ರವಸ್ಥಿ, ಅಪ್ಪನಿಲ್ಲದೆ ಬದುಕಬೇಕಾದ ನಮ್ಮ ಮೌನಿ.. ಇವರ್ಯಾರೂ ನೆನಪಾಗಲಿಲ್ಲವೇ..!? ಎಲ್ಲರ ನಾಳೆಗಳನ್ನೂ ಪ್ರಶ್ನಾರ್ಥಕವಾಗಿಸಿದೆಯಲ್ಲಾ ನಿನ್ನದೆಂಥ ಕ್ರೂರ ಮನಸ್ಥಿತಿ..!?” ಎಂದು ಕೋಪಾವೇಷದಲ್ಲಿ ತೀವ್ರ ವೇದನೆಯನ್ನನುಭವಿಸುತ್ತಾ ನೇರಾನೇರ ಪ್ರಶ್ನಿಸಿ ಬಂದಿದ್ದೆ! ಅವನೇ ಕೊಲೆಗಾರನೆಂದು ಸಾಕ್ಷಿಗಳೆಲ್ಲವೂ ದೃಢೀಕರಿಸಿದ ನಂತರದಲ್ಲಿ ಇಷ್ಟು ಜನರ ಜೀವನವನ್ನು ಅಂಧಕಾರಕ್ಕೆ ದೂಡಿದ ಅವನನ್ನು ನೋಡಬೇಕೆಂದು ಮತ್ತೆ ನನಗನ್ನಿಸಲೇ ಇಲ್ಲ.
ಆದರೆ ಬದುಕಿನ ಪುಟಗಳು ತಿರುವಿಕೊಂಡಂತೆಲ್ಲಾ ಸಾಗುತ್ತಿದ್ದ ಜೀವನ ‘ಪಡಸಾಲೆಯ ಕರಿಕಂಬದಂತೆ’ ನಿರಾಳವಾಗಿ ಕಂಡರೂ ಅಂತರ್ಗತವಾಗಿ ಏಕಾಂಗಿಭಾವದ ಛಾಯೆ ಮಾಸಿರಲಿಲ್ಲ. ಅದಕ್ಕೆ ಕಾರಣನಾದವನನ್ನು ಆಗಾಗ ಶಪಿಸಿಕೊಳ್ಳುತ್ತಲೇ ಇದ್ದೆ. ಆದರೆ ಅತ್ತಿಗೆ ಮಾತ್ರ ಅವಳಣ್ಣನ ಬಗ್ಗೆ ಯಾವ ನಕಾರಾತ್ಮಕ ನಿಲುವನ್ನೂ ತಾಳಿರಲಿಲ್ಲ! ತಾನು ಪ್ರೀತಿಸಿ ಮದುವೆಯಾದ ಗಂಡನನ್ನು ಬಲಿತೆಗೆದುಕೊಂಡು ತನ್ನ ಜೀವನವನ್ನು ಅಸ್ತವ್ಯಸ್ತಗೊಳಿಸಿದನೆಂಬ ಕೋಪ ಅವಳಲ್ಲಿರಲೇ ಇಲ್ಲ! ತನ್ನಣ್ಣ ಎಂಬ ಅತಿಯಾದ ವಾತ್ಸಲ್ಯವೇನೋ ಗೊತ್ತಿಲ್ಲ ನನಗದು! ಅದನ್ನೇ ಒಂದುದಿನ ಸಹಿಸಲಾರದೆ ಅವಳಲ್ಲಿ ಕೇಳಿದ್ದಕ್ಕೆ…
”ಜಯಂತ್ ಅಣ್ಣ ಹೇಗೆ ಅನ್ನೋದು ನಿನಗೂ ಗೊತ್ತಿದೆ ಮೃದುಲ. ಇಷ್ಟು ವರ್ಷದ ಒಡನಾಟದಲ್ಲಿ ಅವನೇನೆಂಬುದನ್ನು ನೀನು ಸರಿಯಾಗಿ ಅರಿತುಕೊಂಡಿದ್ದರೆ ಇಂದು ಈ ಪ್ರಶ್ನೆಯನ್ನು ನನ್ನೆದುರಲ್ಲಿ ಕೇಳ್ತಿರಲಿಲ್ಲ..” ಎಂದಷ್ಟೇ ಮಾರ್ಮಿಕವಾಗಿ ಉತ್ತರಿಸಿದ ಪ್ರವಸ್ಥಿ ಅವನ ಒಳಿತಿಗಾಗಿ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಇದು ನನಗೆ ಉಗುಳಲಾರದ ಬಿಸಿತುಪ್ಪವಾಗಿದ್ದರೂ ಅವಳನ್ನು ಮಾತ್ರ ದ್ವೇಷಿಸಿ ದೂರವಿಡಲು ನನ್ನಿಂದ ಸಾಧ್ಯವಾಗಿರಲಿಲ್ಲ. ಗಂಡನ ಸಾವಿನ ದುಃಖವನ್ನು ನುಂಗಿಕೊಂಡು ಅವಳು ಕುಟುಂಬಕ್ಕಾಗಿ ನಿಂತ ಪರಿ ಎಂತಹವರನ್ನೂ ನಿಬ್ಬೆರಗಾಗಿಸುವಂತಿತ್ತು..! ಈ ಹತ್ತುವರ್ಷಗಳಲ್ಲಿ ಗಂಡುದಿಕ್ಕಿಲ್ಲದ ಮನೆಯನ್ನು, ತೋಟವನ್ನು ಅವನಿಗಿಂತ ಉತ್ತಮ ರೀತಿಯಲ್ಲಿ ಸಂಭಾಳಿಸಿಕೊಂಡು ಹೋಗುತ್ತಿದ್ದ ಸೊಸೆಯ ಬಗ್ಗೆ ಅಮ್ಮನಲ್ಲಿಯೂ ಯಾವುದೇ ದೂರುಗಳಿರಲಿಲ್ಲ.
ಕಾಲೇಜಿನ ಉಪನ್ಯಾಸಕಿಯಾಗಿ ಬೆಳಗನ್ನು ವಿದ್ಯಾರ್ಥಿಗಳೊಡನೆ ಹೇಗೋ ಕಳೆದುಬಿಟ್ಟರೂ ಕತ್ತಲೆಯ ಸುಧೀರ್ಘ ರಾತ್ರಿಗಳು ಮೈಲಿಗೆಯ ಘಮವನ್ನು ಅಂಟಿಸುತ್ತಾ ಬದುಕನ್ನು ಕಟ್ಟಿಹಾಕಿ ನನ್ನನ್ನು ಅಣಕಿಸುತ್ತಿದ್ದವು. ಅಂತರಂಗದಲ್ಲಿ ಅವನ ಸ್ಥಾನವನ್ನು ತೆರವುಗೊಳಿಸಿದ್ದರೂ ಕಾಡುವ ನೆನಪುಗಳಿಂದ ಮಾತ್ರ ವಂಚಿತಳಾಗಲು ಸಾಧ್ಯವಾಗಿರಲಿಲ್ಲ! ಅಮ್ಮ ಮದುವೆಯಾಗೆಂದು ಬಲವಂತಪಡಿಸಿದಾಗಲೆಲ್ಲಾ ನನ್ನದೆನ್ನುವ ಭಾವಗಳೆಲ್ಲವನ್ನೂ ಅವನಿಗೆ ವರ್ಗಾಯಿಸಿ ಖಾಲಿಯಾದ ಹೃದಯಕ್ಕೆ ಬೀಗ ಜಡಿದಿದ್ದೇನೆಯೇ ಎಂದೆನಿಸುತ್ತಿತ್ತು. ಅವನ ಬಗ್ಗೆ ಕಠಿಣ ನಿಲುವುಗಳಿದ್ದರೂ ಭಾವವಿಲ್ಲದ ಮನಸ್ಸಿನಲ್ಲಿ ಮತ್ತೊಬ್ಬರನ್ನು ಕೂರಿಸುವ ಸಾಹಸಕ್ಕಂತೂ ಅಪ್ಪಿತಪ್ಪಿಯೂ ಇಳಿದಿರಲಿಲ್ಲ.
****
ಹೀಗೆ ನೆನಪುಗಳ ಸುಳಿಯಲ್ಲಿ ಸಿಲುಕಿರುವಾಗಲೇ ಕೆಳಗಡೆ ಅವ ಬಂದ ಸದ್ದಾಗಿತ್ತು! ಇಲ್ಲಿ ಹೃದಯವೊಮ್ಮೆ ಜೋರಾಗಿ ಬಡಿದುಕೊಂಡಿತ್ತು! ಅತ್ತಿಗೆಯ ಅಂತಃಕರಣದಲ್ಲಿ, ಮೌನಿಯ ಮುಗ್ಧನಗುವಿನಲ್ಲಿ ಪ್ರತಿದಿನ ಸಿಹಿಕಹಿ ನೆನಪಾಗಿ ಕಾಡುವವ ಹತ್ತುವರ್ಷದ ಕಠಿಣಸಜೆಯನ್ನು ಪೂರ್ಣಗೊಳಿಸಿಕೊಂಡು ಇಂದು ತನ್ನವರನ್ನು ನೋಡುವ ಸಲುವಾಗಿ ಮನೆಗೆ ಬಂದಿದ್ದ.(!?) ಅತ್ತಿಗೆಯ ಸಡಗರವನ್ನಂತೂ ಹೇಳತೀರದು. ಅವನಿಗಿಷ್ಟವಾದ ಖಾದ್ಯಗಳ ಪರಿಮಳ ಮನೆಯ ತುಂಬೆಲ್ಲಾ ಹರಡಿ ನನ್ನನ್ನು ಮತ್ತಷ್ಟು ಕ್ಷೋಭೆಗೆ ದೂಡುತ್ತಿದ್ದರೆ ಕೆಳಗೆ ಅಡುಗೆಮನೆಯಲ್ಲಿ ಹಬ್ಬದೌತಣ ತಯಾರಾಗುತ್ತಿತ್ತು.
ಹೂವಿನ ಮಕರಂದದಂತೆ ಮಧುರವಾಗಿದ್ದ ನಮ್ಮಿಬ್ಬರ ನಡುವಿನ ಬಂಧ ಬೇವಿನ ಕಹಿಯಂತೆ ಬದಲಾಗಿದ್ದರ ಬಗ್ಗೆ ಯಾವಾಗಲೂ ನನ್ನ ಆಕ್ಷೇಪವಿದ್ದೇ ಇದೆ. ಆದರೆ ಹಿಂದಿನ ಅದೇ ಪ್ರೀತಿ ತೋರುವ ಅತ್ತಿಗೆ ಮಾತ್ರ ನನಗೆ ವಿಚಿತ್ರವೆನ್ನಿಸಿಬಿಟ್ಟಿದ್ಲು! ಅಣ್ಣನ ಸಾವು ನನ್ನನ್ನೇ ಇಷ್ಟರ ಮಟ್ಟಿಗೆ ಕಾಡ್ತಿದ್ರೆ ಪ್ರೀತಿಸಿ ಮದುವೆಯಾದ ಅವಳನ್ನ ಇನ್ನೆಷ್ಟು ಕಾಡ್ಬೇಕು!? ಆದ್ರೆ ಏನೂ ನಡೆದೇ ಇಲ್ಲವೆನ್ನುವಂತೆ ಮನೆಗೆ ಬಂದ ಜಯಂತ್ ಗೆ ಕೆಳಮನೆಯಲ್ಲಿ ಉಪಚರಿಸುತ್ತಿರುವ ಸದ್ದು ನನ್ನೆದೆಯಲ್ಲಿ ಅಸಹನೆಯ ಹೊಗೆಯಾಡುವಂತೆ ಮಾಡಿತ್ತು.
ಆಗಲೇ ನನ್ನನ್ನರಸಿ ಮೆಟ್ಟಿಲೇರಿ ಬಂದ ಅತ್ತಿಗೆ, “ಅವನ ಕಣ್ಣುಗಳೆಲ್ಲವೂ ನಿನಗಾಗಿಯೇ ಹುಡುಕುತ್ತಿವೆ. ತುಂಬಾ ಬಳಲಿದ್ದಾನೆ! ನೋಯಿಸಬೇಡ. ಎಲ್ಲವನ್ನು ಮರೆತು ಅವನಿಗೊಮ್ಮೆ ಕಾಣಿಸು..” ನನ್ನೆದೆಯ ಬಿರುಕನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು ನನ್ನೆದುರು ನಿಂತು ಅವಳಾಡಿದ ನುಡಿಗಳು. ಸರ್ರನೆ ತಲೆಯೆತ್ತಿ ನೋಡಿದ್ದೆ. ಒಳಗೆ ಲಾವಾರಸ ಕುದಿಯುತ್ತಿತ್ತು.
“ಸತ್ತಿದ್ದು ನನ್ನಣ್ಣ ಅಲ್ವಾ…ನಿನ್ನಣ್ಣ ಆಗಿದ್ರೆ ನನ್ನೆದೆಯ ನೋವು ನಿನಗೂ ಅರ್ಥವಾಗ್ತಿತ್ತು..!” ಸಿಟ್ಟಿನ ಭರದಲ್ಲಿ ಮಾತು ಜಾರಿತ್ತು.
ಅಷ್ಟೇ, ಯಾವ ಆವೇಶದಲ್ಲಿದ್ದಳೋ ಕೆನ್ನೆಗೊಂದು ಬಿಗಿದುಬಿಟ್ಟಿದ್ದಳು! ”ನೀನು ಪ್ರೀತಿಸಿ ಮದುವೆಯಾದವನೇ ನಿನ್ನ
ಕರುಳಕುಡಿಯ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ್ರೆ ಆಗ ಗೊತ್ತಾಗಿರೋದು ನಿನಗೂ ಈ ತಾಯಿಯೊಡಲ ದಳ್ಳುರಿ! ಆ ಕ್ರೌರ್ಯವನ್ನ ಕಣ್ಣಾರೆ ಕಂಡು ಸಹಿಸಲಾರದ ಆವೇಶದಲ್ಲಿ ಆ ಕಾಮಪಿಶಾಚಿಯನ್ನ ಕೊಂದರೆ, ತಂಗಿಯನ್ನ ರಕ್ಷಿಸುವ ಸಲುವಾಗಿ ಯಾವ ತಪ್ಪೂ ಮಾಡದ ಒಡಹುಟ್ಟಿದವನು ಹರಕೆಯ ಕುರಿಯಂತೆ ಬಲಿಯಾಗಿ ವರ್ಷಗಳ ಕಾಲ ಕಠಿಣಶಿಕ್ಷೆ ಅನುಭವಿಸಿದ್ದರೆ ಆಗ ಅರ್ಥವಾಗಿರೋದು ನಿನಗೂ ನಮ್ಮ ಮನಸ್ಸಿಗಾದ ಆಘಾತ, ಸಂಕಟ ಎಂತಹದೆಂದು…””ಪುಟ್ಟಾ.!” ಆಗಲೇ ಮೆಟ್ಟಿಲೇರಿ ಬಂದ ಜಯಂತ್ ಆತಂಕದಿಂದ ಅವಳ ಮಾತನ್ನು ತಡೆಯಲು ಪ್ರಯತ್ನಿಸಿದ್ದ.”ಇನ್ನು ನನ್ನಿಂದ ಆಗ್ಲಿಲ್ಲಣ್ಣಾ..!” ಕಂಬನಿಗೆರೆಯುತ್ತಾ ಜಯಂತನನ್ನು ಅಪ್ಪಿಬಿಟ್ಟಳು.
ಅಷ್ಟೇ… ಭೂಕಂಪವಾದಂತೆ ತಲ್ಲಣಗೊಂಡಿತ್ತು ನನ್ನೆದೆ! ಕುಸಿದು ಕುಳಿತುಬಿಟ್ಟೆ. ಅವರು ನನಗೆ ಮತ್ತೇನೂ ಹೇಳುವ ಅವಶ್ಯಕತೆಯೇ ಅಲ್ಲಿ ಉಳಿದಿರಲಿಲ್ಲ. ಅದಾಗಲೇ ನನ್ನ ಮನಸ್ಸು ಎಲ್ಲವನ್ನೂ ಗ್ರಹಿಸಿಬಿಟ್ಟಿತ್ತು! ಅಮ್ಮ ಯಾಕೆ ಚಿಕ್ಕಂದಿನಿಂದಲೂ ನನ್ನನ್ನು ಅಣ್ಣನ ಬಳಿಗೆ ಹೆಚ್ಚು ಹೋಗಲು ಬಿಡುತ್ತಿರಲಿಲ್ಲ, ನಾನ್ಯಾಕೆ ಅವನಿಂದ ದೂರವೇ ಉಳಿದುಬಿಟ್ಟೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿತ್ತು. ಕಣ್ಣಾರೆ ಕಂಡದ್ದನ್ನು ಪರಾಮರ್ಶಿಸದೆ ಅದೇ ಸತ್ಯವೆಂದು ನಂಬಿದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಉನ್ನತ ಹೃದಯಿಗಳಿಗೆ ಅರಿಯದೆ ನೋವು ಕೊಟ್ಟ ಪಾಪಕ್ಕೆ ಕೈಮುಗಿದು ಕಂಬನಿ ಮಿಡಿಯುತ್ತಾ ಕ್ಷಮಾಪಣೆ ಕೇಳಿದೆ. ನಮಗದರ ಅವಶ್ಯಕತೆಯಿಲ್ಲಾ ಎಂಬಂತೆ
ಅವರ ತೋಳತೆಕ್ಕೆಯಲ್ಲಿ ನನ್ನನ್ನೂ ಬಂಧಿಸಿಕೊಂಡು ಸಂತೈಸಿದ್ದರು. ಆ ಅಪ್ಪುಗೆಯಲ್ಲಿ ಭರವಸೆಯ ಹಿತವಿತ್ತು. ಪ್ರೀತಿಗೆದ್ದ ಸಂತಸವಿತ್ತು. ಪ್ರಖರವಾಗಿ ಬೆಳಗುವ ಸೂರ್ಯನಿಂದ ಮುಂಜಾನೆಯ ಇಬ್ಬನಿ ಹೇಗೆ ಕರಗಿ ಪ್ರಕೃತಿಗೆ ಜೀವಚೈತನ್ಯ ತುಂಬುವುದೋ ಹಾಗೆಯೇ ಸತ್ಯದರ್ಶನದಿಂದ ನನ್ನನ್ನಾವರಿಸಿದ್ದ ದ್ವೇಷವೆಂಬ ಮಾಯರೆಡ್ಡಿ , ಮನವು ತಿಳಿಯಾಗಿ ಬದುಕು ಹಸನಾಗಿತ್ತು.
*****
ಕತೆಗಾರ್ತಿ ಪರಿಚಯ
ಸುಜಾತ ಎಸ್.ಎನ್ ರೆಡ್ಡಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮನೋವಿಜ್ಞಾನದ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ವಿದ್ಯಾ ಫ್ಯಾಶನ್ ಅಕಾಡೆಮಿಯಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಆಗಿ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಎ. ನಾಗ ಸುಬ್ಬಾರೆಡ್ಡಿ ಅವರ ಧರ್ಮಪತ್ನಿಯಾಗಿರುವ ಇವರು, ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ತಮ್ಮದೇ ಆದ ಆಸಕ್ತಿಯ ಹೆಜ್ಜೆಗುರುತು ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಬೃಹತ್ ಸಾಹಿತ್ಯ ವೇದಿಕೆಯಾದ ‘ಕಥಾಗುಚ್ಚ’ದಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ವಾಹಕಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಮೇಲಿನ ಒಲವಿನ ಫಲವಾಗಿ ‘ಪ್ರೇಮ ಕಾವ್ಯ’ ಹಾಗೂ ‘ಅನುರಾಗದ ಈ ಬಂಧನ’ ಎಂಬ ಎರಡು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಬಿ ಟ್ರೆಂಡ್ಸ್’ ಪತ್ರಿಕೆಯ ‘ಸುವಿಚಾರ’ ಅಂಕಣದಲ್ಲಿ ಬರೆಯುವುದರ ಜೊತೆಗೆ ಕಥೆ, ಕವನ ಹಾಗೂ ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಲೋಕದಲ್ಲಿಯೂ ತಮ್ಮ ಅಭಿವ್ಯಕ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸೃಜನಶೀಲತೆ, ಅಧ್ಯಯನಶೀಲತೆ ಮತ್ತು ಸಾಹಿತ್ಯಾಸಕ್ತಿಯನ್ನು ಬದುಕಿನ ಭಾಗವಾಗಿಸಿಕೊಂಡಿರುವ ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.

-
ದಿನದ ಸುದ್ದಿ7 days agoದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
-
ದಿನದ ಸುದ್ದಿ3 days agoಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
-
ಅಂತರಂಗ6 days agoಕವಿತೆ | ಒಂಟಿಯಾನದ ಸರಕು
-
ದಿನದ ಸುದ್ದಿ3 days agoಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ6 days agoಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು
-
ದಿನದ ಸುದ್ದಿ1 day agoಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು


