ಬಹಿರಂಗ

ಕೋವಿದನ ನಡುವೆ – ಸುಳ್ಳು ಸುದ್ದಿಯ ವ್ಯಸನವೂ ಮಾಧ್ಯಮವೆಂಬೋ ವ್ಯಾಧಿಯೂ

Published

on

  • ನಾ ದಿವಾಕರ

ಸುದ್ದಿ ಎನ್ನುವುದೇ ಸತ್ಯ-ಮಿಥ್ಯೆಯ ಸಂಗಮ. ಏಕೆಂದರೆ ಅದು ಮನುಷ್ಯನನ್ನು ತಲುಪುವುದು ಬೇರೊಂದು ಮೂಲದಿಂದ. ಎಲ್ಲೋ ನಡೆದ ಒಂದು ವಿದ್ಯಮಾನ ಯಾವುದೋ ಒಂದು ಮೂಲದಿಂದ ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನು ಸುದ್ದಿ, ವಾರ್ತೆ, ಸಮಾಚಾರ ಮುಂತಾದ ಹೆಸರುಗಳಿಂದ ಗುರುತಿಸುತ್ತೇವೆ. ಸುದ್ದಿಯ ಮೂಲ ಯಾವುದೆಂದು ತಿಳಿಯುವ ಗೋಜಿಗೆ ನಾವು ಹೋಗುವುದಿಲ್ಲ. ನಮಗೆ ತಲುಪಿದ ವಿಷಯ ಸತ್ಯವೋ ಮಿಥ್ಯೆಯೋ ಎಂದು ತಿಳಿಯಲೂ ಆಸಕ್ತಿ ತೋರುವುದಿಲ್ಲ. ನಮ್ಮ ಮನಸ್ಥಿತಿಗೆ ತಕ್ಕಂತೆ, ನಮ್ಮ ಆಲೋಚನೆಗೆ ಪೂರಕವಾಗಿ ನಮ್ಮ ಕಿವಿಗೆ ಬಿದ್ದ ಸಮಾಚಾರವನ್ನು ನಂಬುವುದು ಬಿಡುವುದು ಮಾಡುತ್ತೇವೆ.

ಸಂಪರ್ಕ ಮಾಧ್ಯಮಗಳೇ ಇಲ್ಲದ ಕಾಲದಲ್ಲಿ ಮಾನವ ಸಮಾಜ ಹೇಗೆ ನಿರ್ವಹಿಸಿರಬಹುದು ಎಂದು ಒಮ್ಮೆ ಯೋಚಿಸೋಣ. ಆಗ ಸುದ್ದಿ ಸಮಾಚಾರ ವಾರ್ತೆ ಇದಾವುದೂ ಇರಲಿಕ್ಕಿಲ್ಲ ಅಲ್ಲವೇ. ತಾವು ಕಣ್ಣಾರೆ ನೋಡಿದ್ದನ್ನು ಜನರು ತಮ್ಮನ್ನು ನೇರವಾಗಿ ಸಂಪರ್ಕಿಸುವವರೊಡನೆ ಹಂಚಿಕೊಳ್ಳುತ್ತಿದ್ದರು. ಅಲ್ಲಿ ವಿಷಯದ ವಿನಿಮಯ ಮಾತ್ರವೇ ಇತ್ತು, ವಿತರಣೆ, ಪ್ರಸರಣ ಇರುತ್ತಿರಲಿಲ್ಲ. ಮಾನವ ಸಮಾಜ ಹೆಚ್ಚು ವಿಸ್ತರಣೆಯಾಗದಿದ್ದ ಕಾಲದಲ್ಲಿ ಈ ವಿನಿಮಯವೂ ಸಹ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಇರುತ್ತಿತ್ತು. ಇದನ್ನು ಸಂದೇಶ ಎನ್ನಲಾಗುತ್ತಿತ್ತು ಸುದ್ದಿ ಎನ್ನುತ್ತಿರಲಿಲ್ಲ. ಏಕೆಂದರೆ ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವೇ ವಿಷಯ ಹರಿದಾಡುತ್ತಿತ್ತು. ಈ ಸಂದೇಶಕ್ಕೆ ಒಂದು ವ್ಯಾಪ್ತಿ ದೊರೆತಿದ್ದು ಅಕ್ಷರ ಮತ್ತು ಬರಹ ಒಂದಾದ ಸಂದರ್ಭದಲ್ಲಿ.

ಪಾರಿವಾಳಗಳ ಮೂಲಕ ತಮ್ಮ ಸಂದೇಶವನ್ನು ದೂರದಲ್ಲಿರುವ ತಮ್ಮ ನಿಕಟವರ್ತಿಗಳಿಗೆ ರವಾನಿಸುವ ಪರಂಪರೆಯ ಸಂದರ್ಭದಲ್ಲೂ ವಿನಿಮಯವಾಗುತ್ತಿದ್ದುದು ಪರಸ್ಪರ ಸಂಬಂಧಿತ ವಿಚಾರಗಳು ಮಾತ್ರ. ಇದನ್ನೂ ಸುದ್ದಿ ಎನ್ನಲಾಗುವುದಿಲ್ಲ. ಈ ಸುದ್ದಿ ಅಥವಾ ಸಮಾಚಾರ ಎಂಬ ವಿದ್ಯಮಾನಕ್ಕೆ ಪುಷ್ಟಿ ದೊರೆತದ್ದು ಬಹುಶಃ ರಾಜಪರಂಪರೆಯಲ್ಲಿ ಇದ್ದಿರಬಹುದು. ಅನ್ಯ ರಾಜ್ಯಗಳಲ್ಲಿ ಅಥವಾ ತಮ್ಮದೇ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಸಾಮ್ರಾಟರು ತಮ್ಮ ಬೇಹುಗಾರರನ್ನು ವಿವಿಧ ಪ್ರಾಂತ್ಯಗಳಿಗೆ ಕಳುಹಿಸುವ ಪರಂಪರೆ ಸುದ್ದಿ-ಸಮಾಚಾರದ ಉಗಮಕ್ಕೆ ಕಾರಣವಾಯಿತೇನೋ ! ಇಲ್ಲಿ ಸುದ್ದಿಯ ಸತ್ಯಾಸತ್ಯತೆಯ ನಿಷ್ಕರ್ಷೆಗೆ ಸುದ್ದಿ ತರುವ ಬೇಹುಗಾರನ ನಿಷ್ಠೆ ಮತ್ತು ಬದ್ಧತೆಯೇ ಮೂಲ. ಅವನ ಪ್ರಾಮಾಣಿಕತೆಯೇ ಆಧಾರ.

ತನ್ನ ದೊರೆಗೆ ನಿಷ್ಠಾವಂತನಾದ ಬೇಹುಗಾರರಲ್ಲಿ ಎರಡು ವಿಧ. ಮೊದಲನೆಯದು ತನ್ನ ರಾಜನಿಷ್ಠೆಯನ್ನು ಪ್ರದರ್ಶಿಸಲು, ರಾಜನಿಗೆ ಇಷ್ಟವಾಗುವಂತೆ ಸುದ್ದಿಯನ್ನು ಅರುಹುವುದು. ತನ್ನ ದೊರೆಗೆ ಇಷ್ಟವಾಗದ ವಿಚಾರಗಳನ್ನು ಮರೆಮಾಚುವುದು, ಪ್ರಿಯವಾದುದನ್ನು ರಂಜನೀಯವಾಗಿ ಅರುಹುವುದು, ದೊರೆಯ ಆಕ್ರೋಶಕ್ಕೆ ಕಾರಣವಾಗುವ ವಿಚಾರವನ್ನು ಜಾಣ್ಮೆಯಿಂದ ಹೇಳುವುದು, ಇಲ್ಲವೇ ಹೇಳದೆಯೇ ಇರುವುದು, ಹೀಗೆ. ಈ ರೀತಿಯ ಸುದ್ದಿ ತರುವವರು ಸಾಮಾನ್ಯವಾಗಿ ರಾಜನಿಗೆ ಶತ್ರುಗಳನ್ನು ಸೃಷ್ಟಿಸುತ್ತಿದ್ದುದೇ ಹೆಚ್ಚು. ವ್ಯಕ್ತಿಗತವಾಗಿ ತಮಗೆ ಇಷ್ಟವಾಗದವರ ವಿರುದ್ಧ ರಾಜನ ಬಳಿ ಇಲ್ಲದ ವಿಷಯಗಳನ್ನು ಹೇಳುವ ಮೂಲಕ ಆಗಾಗ್ಗೆ ಸಣ್ಣಪುಟ್ಟ ಶತ್ರುಪಾಳಯಗಳನ್ನು ಸೃಷ್ಟಿಸುವ ಪರಂಪರೆಗೆ ದೀರ್ಘ ಇತಿಹಾಸವೇ ಇದೆ ಅಲ್ಲವೇ ?
ಎರಡನೆಯ ವಿಧ ಎಂದರೆ ತಮ್ಮ ಅಸ್ತಿತ್ವ, ಸ್ಥಾನಮಾನ ಉಳಿಸಿಕೊಳ್ಳಲು, ತಮ್ಮ ಸ್ವಂತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸುದ್ದಿಯನ್ನು ತಿರುಚಿ ಹೇಳುವುದು ಇಲ್ಲವೇ ಇಲ್ಲದ ಸುದ್ದಿಯನ್ನು ಸೃಷ್ಟಿಸಿ ಹೇಳುವುದು.

ಇಂಥವರಿಗೆ ರಾಜನಿಷ್ಠೆ ಇರುತ್ತಿತ್ತು ಆದರೆ ರಾಜನಿಗೆ ಇವರ ಮೇಲಿರುತ್ತಿದ್ದ ವಿಶ್ವಾಸವೇ ಇವರ ಬಂಡವಾಳವಾಗುತ್ತಿತ್ತು. ದೊರೆ ತಾನು ಹೇಳಿದ್ದನ್ನು ನಂಬುತ್ತಾನೆ ಎನ್ನುವ ವಿಶ್ವಾಸವೇ ಇವರ ಸುದ್ದಿಮನೆಯ ಕುಲುಮೆಗೆ ಶಾಖ ನೀಡುತ್ತಿತ್ತು. ಇವರ ಭಟ್ಟಂಗಿತನ, ವಂದಿಮಾಗಧ ನಡೆ ರಾಜನ ದೃಷ್ಟಿಯಲ್ಲಿ ಪ್ರಾಮಾಣಿಕತೆ ಎನಿಸಿದರೂ, ಅದು ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಆದರೆ ಇವರು ಮುಟ್ಟಿಸುತ್ತಿದ್ದ ಸುದ್ದಿ ರಾಜನನ್ನೂ ಸಂಪ್ರೀತಗೊಳಿಸುತ್ತಿತ್ತು. ಹಾಗಾಗಿ ಇವರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿರಲಿಲ್ಲ.
ದೊರೆಗೆ ಈ ಎರಡೂ ರೀತಿಯ ಸುದ್ದಿ ವಾಹಕರು ಪ್ರಿಯವಾಗಿಯೇ ಕಾಣುತ್ತಿದ್ದರು. ಏಕೆಂದರೆ ತನ್ನ ಸಾಮ್ರಾಜ್ಯದ ರಕ್ಷಣೆಗೆ ಇದು ಅತ್ಯವಶ್ಯವಾಗುತ್ತಿತ್ತು.

ರಾಜಪ್ರಭುತ್ವದ ಕಾಲದಲ್ಲೇ ಬಹುಶಃ ಸುಳ್ಳುಸುದ್ದಿಯ ವ್ಯಸನ ಉಗಮಿಸಿರಬೇಕು. ಹೊರ ರಾಜ್ಯದಿಂದ ಅಥವಾ ಶತ್ರು ಪಾಳಯದಿಂದ ಸತ್ಯವೋ ಸುಳ್ಳೋ ಯಾವುದೋ ಒಂದು ಸುದ್ದಿ ತರದಿದ್ದರೆ ಸುದ್ದಿವಾಹಕರು ದೊರೆಯ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಬಹುಶಃ ಈ ಕಾಲಘಟ್ಟದಿಂದಲೇ ಸುದ್ದಿಮನೆಯ ಒಂದು ನಿರ್ದಿಷ್ಟ ಪರಿಕಲ್ಪನೆ ಮೂಡಿರಬೇಕು. ಈ ಪರಿಕಲ್ಪನೆಯ ಚೌಕಟ್ಟಿನಲ್ಲೇ ಸುಳ್ಳು ಸುದ್ದಿಯ ವ್ಯಸನವೂ ನೆಲೆ ಕಂಡಿರಬೇಕು.

ದೊರೆಗೆ ಏನಾದರೂ ಸುದ್ದಿ ಮುಟ್ಟಿಸಬೇಕು ಎನ್ನುವುದೇ ಸುದ್ದಿವಾಹಕರ ಆದ್ಯತೆಯಾಗಿರಲಿಕ್ಕೂ ಸಾಕು.
(ಇವಿಷ್ಟೂ ಇತಿಹಾಸದ ಆಕರಗಳನ್ನು ಆಧರಿಸಿ ಮಂಡಿಸಿದ ವಿಚಾರ ಅಲ್ಲ. ಹೀಗಿದ್ದಿರಬಹುದು ಎನ್ನುವ ಕಲ್ಪನೆ. ಇರಲೂಬಹುದಲ್ಲವೇ, ಇತಿಹಾಸದ ಅಧ್ಯಯನದಲ್ಲಿ ಗಮನಿಸಿರುವುದೇ ಆಗಿದೆ)
ಈಗ 21ನೆಯ ಶತಮಾನದ 3ನೆಯ ದಶಮಾನಕ್ಕೆ ಬರೋಣ. ಇಂದು ನಮಗೆ ಸುದ್ದಿ ಎನ್ನುವುದು ಮನೆಯ ಮಾತಿನಂತಾಗಿಬಿಟ್ಟಿದೆ. ಯಾವುದು ಸುದ್ದಿ, ಯಾವುದು ಸಂದೇಶ ಎಂಬ ವ್ಯತ್ಯಾಸವನ್ನೇ ಗ್ರಹಿಸಲಾರದಷ್ಟು ಮಟ್ಟಿಗೆ ಸಂಪರ್ಕ ಮತ್ತು ಸಂವಹನ ಮಾರ್ಗಗಳು ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ. “ಆಕಾಶವಾಣಿ ವಾರ್ತೆಗಳು ಓದುತ್ತಿರುವವರು ಕೆ.ಎಸ್. ಪುರುಷೋತ್ತಮ್” ಅಥವಾ “ ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್ ” ಈ ದನಿಗಳನ್ನೊಮ್ಮೆ ನೆನಪಿಸಿಕೊಳ್ಳೋಣ. ಸುದ್ದಿ ಮತ್ತು ಸಂದೇಶದ ನಡುವಿನ ವ್ಯತ್ಯಾಸವನ್ನು ಅವರ ದನಿಗಳಲ್ಲಿ ಕಾಣಬಹುದಿತ್ತು. ಇಂದು ನಾವು ಆಕಾಶದಲ್ಲೇ ವಿಹರಿಸುತ್ತಿದ್ದೇವೆ ಆದರೆ ವಾಣಿ ಕಡಲ ಪಾಲಾಗಿದೆ.

ಹಾಗಾಗಿ ಸುದ್ದಿಮನೆಗಳೇ ಅನಿವಾರ್ಯ ಎನಿಸಿಬಿಟ್ಟಿದೆ. ಸುದ್ದಿಯ ವ್ಯಾಪ್ತಿ ಹೆಚ್ಚಾಗಿದೆ. ಆದರೆ ಮೂಲ ಸ್ವರೂಪ ಬದಲಾಗಿಲ್ಲ. ಆದರೆ ಸುದ್ದಿ ಮತ್ತು ಸಮಾಚಾರದ ಬಗ್ಗೆ ನಮ್ಮ ಗ್ರಹಿಕೆ ಕೊಂಚ ಬದಲಾದಂತಿದೆ. ನಾಲ್ಕೈದು ದಶಕಗಳ ಹಿಂದೆ ಪರಿಚಯಸ್ಥರು ಎದುರಾಗಿ ಏನ್ಸಮಾಚಾರ ಅಂದ್ರೆ ಏನಿಲ್ಲ ಎನ್ನುತ್ತಿದ್ದೆವು ಇಲ್ಲವಾದರೆ ನಮ್ಮನ್ನೇ ಕುರಿತು ಒಂದೆರಡು ಮಾತುಗಳನ್ನಾಡಿ ನಡೆಯುತ್ತಿದ್ದೆವು. ಈಗ ಏನ್ಸಮಾಚಾರ ಅಂದ್ರೆ ಸಾಕು ನೆಹರೂ ಅವರಿಂದ ಮೋದಿಯವರೆಗೆ, ಮೊಘಲರಿಂದ ಒಡೆಯರ್ ವರೆಗೆ ಮಾತಿನ ಲಹರಿ ಬೆಳೆಯುತ್ತದೆ. ಇತಿಹಾಸ, ವಿಜ್ಞಾನ, ಸುಜ್ಞಾನ, ಅಜ್ಞಾನ ಎಲ್ಲವನ್ನೂ ಮಾತನಾಡಿ ಕೊನೆಗೆ ಕೈ ಕುಲುಕಲೂ ಆಗದಷ್ಟು ಮನಸು ಭಾರ ಮಾಡಿಕೊಂಡು ಎರಡು ಧೃವಗಳತ್ತ ಮುಖ ಮಾಡಿ ಹೊರಟುಬಿಡುತ್ತೇವೆ. ಇದು ಸಾರ್ವತ್ರಿಕ ಸತ್ಯ ಅಲ್ಲ, ಆದರೆ ನಿರಾಕರಿಸುವ ವಿದ್ಯಮಾನವೂ ಅಲ್ಲ.

ಏಕೆ ಹೀಗೆ ? ಏಕೆಂದರೆ ಇಂದು ನಮಗೆ ಸುದ್ದಿ ಎಂದರೆ ನಮಗೆ ನೀಡಲಾಗುವ ಅಥವಾ ಒದಗಿಸಲಾಗುವ ಮಾಹಿತಿಯೇ ಹೊರತು, ನಾವು ಪ್ರತ್ಯಕ್ಷವಾಗಿ ನೋಡಿ ಪ್ರಮಾಣಿಸಿದ ಮಾಹಿತಿ ಅಲ್ಲ. ಹಾಗೊಮ್ಮೆ ನಾವು ನೋಡಿದ್ದುದೇ ಆದರೂ, ನಮ್ಮ ಕಣ್ಣೋಟವೇ ಸರಿಯಿಲ್ಲವೇನೋ ಎನ್ನುವ ಮಟ್ಟಿಗೆ ಸುದ್ದಿಮನೆಗಳು ಒಂದು ಘಟನೆಯನ್ನು ರುಬ್ಬಿ ರುಬ್ಬಿ ಚಟ್ನಿ ಮಸಾಲೆ ಮಾಡಿಬಿಟ್ಟಿರುತ್ತವೆ. ಸುದ್ದಿ ಮತ್ತು ಸಮಾಚಾರಗಳನ್ನು ಜನತೆಗೆ ತಲುಪಿಸುವ ಮುದ್ರಣ ಮಾಧ್ಯಮ ಯುಗದ ಕನಿಷ್ಟ ಪ್ರಜ್ಞಾವಂತಿಕೆಯನ್ನೂ ವಿದ್ಯುನ್ಮಾನ ಮಾಧ್ಯಮದ ಯುಗದಲ್ಲಿ ಕಾಣಲಾಗುತ್ತಿಲ್ಲ. ಏಕೆಂದರೆ ಬೆರಳ ತುದಿಯಲ್ಲಿ ಲಭಿಸುವ ಸುದ್ದಿಯನ್ನು ಕ್ಷಣಮಾತ್ರದಲ್ಲಿ ತಮ್ಮ ಪರದೆಯ ಮೇಲೆ ಬಿಂಬಿಸದೆ ಹೋದರೆ ಸುದ್ದಿಮನೆಯ ಅಸ್ತಿತ್ವಕ್ಕೆ ಕುಂದುಬರುತ್ತದೆ. ಮಾರುಕಟ್ಟೆಯಲ್ಲಿ ಮೌಲ್ಯ ಕುಸಿಯುತ್ತದೆ.

ಮತ್ತೊಮ್ಮೆ ಆಕಾಶವಾಣಿಯತ್ತ ನೋಡೋಣ. ಆಗಿನ ವಾರ್ತೆಗಳನ್ನು ಓದುತ್ತಿರುವವರ ಧ್ವನಿಯನ್ನು ಕೇಳಿಯೇ ದೇಶದಲ್ಲಿ ಏನೋ ಆಘಾತಕಾರಿ ಘಟನೆ ಸಂಭವಿಸಿದೆ, ಯಾರೋ ಮಹನೀಯರು ಮೃತಪಟ್ಟಿದ್ದಾರೆ ಎಂದು ಹೇಳಬಹುದಿತ್ತು. ಏಕೆಂದರೆ ಇಂತಹ ವಿಷಾದದ ಸುದ್ದಿಯನ್ನು ಓದುವಾಗ ಅವರ ಮೆಲುದನಿಯಲ್ಲಿ ವಿಷಾದದ ಎಳೆ ಕಂಡುಬರುತ್ತಿತ್ತು. ಇದನ್ನು ಈಗಿನ ಸುದ್ದಿಮನೆಗಳಲ್ಲಿ ಊಹಿಸಲು ಸಾಧ್ಯವೇ ? “ ಕೋರೋನಾದಿಂದ ಸತ್ತವರ ಸಂಖ್ಯೆ ಒಂದು ಲಕ್ಷ ದಾಟಿದೆ ” ಎಂದು ಏರುದನಿಯಲ್ಲಿ ಹೇಳುವ ನಿರೂಪಕಿಯ ಮುಖಭಾವವನ್ನು ನೋಡಿದರೆ, ಏನೋ ಸಂಭ್ರಮ ಮನೆಮಾಡಿದಂತೆ ಕಾಣುತ್ತದೆ.

ಇಲ್ಲಿ ಸಂಯಮ ಮತ್ತು ಸಂವೇದನೆಯ ಕೊರತೆ ಎದ್ದು ಕಾಣುತ್ತದೆ. ಇದರ ನೇರ ಪರಿಣಾಮವೇ ಈ ಸುದ್ದಿಮನೆಗಳನ್ನು ಆವರಿಸಿರುವ ಸುಳ್ಳು ಸುದ್ದಿಯ ವ್ಯಸನ. ಇಲ್ಲಿ ಪುನಃ ರಾಜಪ್ರಭುತ್ವಕ್ಕೆ ಮರಳೋಣ. ಇಂದಿನ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೂ, ಅಂದಿನ ರಾಜಪ್ರಭುತ್ವಕ್ಕೂ ವ್ಯತ್ಯಾಸವೇನಾದರೂ ಇದ್ದರೆ ಅದು ಆಯ್ಕೆ ಪ್ರಕ್ರಿಯೆಯಲ್ಲಿ ಮಾತ್ರ ಎನ್ನುವುದನ್ನು ತಾತ್ವಿಕವಾಗಿಯಾದರೂ ಒಪ್ಪಲೇಬೇಕು. ಏಕೆಂದರೆ ಎಷ್ಟೇ ಪ್ರಜಾಸತ್ತಾತ್ಮಕ ಧೋರಣೆಯನ್ನು ಅನುಸರಿಸಿದರೂ ಆಡಳಿತಾರೂಢ ಸರ್ಕಾರಗಳು ಗತಕಾಲದ ಸಾಮ್ರಾಟರನ್ನೇ ಹೋಲುವಂತೆ ವರ್ತಿಸುತ್ತಿರುವುದನ್ನು ಭಾರತದಲ್ಲಂತೂ ಕಾಣುತ್ತಲೇ ಬಂದಿದ್ದೇವೆ. ದೊರೆ ಬದಲಾಗುತ್ತಾನೆ, ರಾಜಗೃಹದ ಲಕ್ಷಣಗಳು ಬದಲಾಗುವುದಿಲ್ಲ. ಪ್ರಭುತ್ವದ ಲಕ್ಷಣಗಳೂ ಬದಲಾಗುವುದಿಲ್ಲ.

ಇಲ್ಲಿ ರಾಜಪ್ರಭುತ್ವ ಕಾಲದ ಸುದ್ದಿವಾಹಕರತ್ತ ನೋಡೋಣ. ಎರಡೂ ವಿಧದ ಸುದ್ದಿವಾಹಕರು ಇಂದಿಗೂ ಇದ್ದಾರೆ ಅಲ್ಲವೇ ? ಆಗ ದೊರೆಗೆ ಸುದ್ದಿ ತಲುಪಿಸುತ್ತಿದ್ದರು. ಈಗ ದೊರೆಗೆ ಬೇಕಾದಂತೆ ಜನತೆಗೆ ಸುದ್ದಿ ತಲುಪಿಸುತ್ತಾರೆ. ದೊರೆಯ ಸಂತೃಪ್ತಿಯೇ ತಮ್ಮ ಆತ್ಮತೃಪ್ತಿ ಎಂದು ಭಾವಿಸುವ ಒಂದು ಪಡೆ, ತಮ್ಮ ಅಸ್ತಿತ್ವ ರಕ್ಷಣೆಗಾಗಿ ದೊರೆಯನ್ನು ಹೇಗಾದರೂ ತೃಪ್ತಿಪಡಿಸುವ ಮತ್ತೊಂದು ಪಡೆ ಎರಡೂ ಆಯಾಮಗಳಲ್ಲಿ ನಾವಿಂದು ಅತ್ಯಾಧುನಿಕ ಸುದ್ದಿಮನೆಗಳನ್ನು ನೋಡುತ್ತಿದ್ದೇವೆ. ಇದರಿಂದ ಹೊರತಾದ ಮತ್ತೊಂದು ಆಯಾಮವೂ ಇದ್ದರೂ, ಅದು ಆಡಳಿತಾರೂಢ ಪಕ್ಷವನ್ನು ಅವಲಂಬಿಸುತ್ತದೆ. ಅಂದರೆ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ ಮಾತನಾಡುವ ಸುದ್ದಿಮನೆ ಇರುವುದು ಊಹಿಸಲಸಾಧ್ಯ .

ರಾಜಪ್ರಭುತ್ವದ ಲಕ್ಷಣಗಳನ್ನು ರಾಜಭವನಗಳಲ್ಲಿ ಕಾಣಲಾಗದಿದ್ದರೂ ಈ ಸುದ್ದಿಮನೆಗಳ ಮೂಲಕ ಕಾಣಬಹುದು.
ಇಂದಿನ ವಿದ್ಯುನ್ಮಾನ ಮಾಧ್ಯಮ ಮತ್ತು ಕೊಂಚಮಟ್ಟಿಗೆ ಮುದ್ರಣ ಮಾಧ್ಯಮಗಳ ಸುಳ್ಳುಸುದ್ದಿಯ ವ್ಯಸನಕ್ಕೆ ಇದೇ ಮೂಲ ಕಾರಣ. ಸುದ್ದಿಮನೆಗಳು ಸುದ್ದಿ ಸಮಾಚಾರವನ್ನು ಸತ್ಯಸಂಧರಂತೆ ಜನತೆಗೆ ಮುಟ್ಟಿಸಲು ಸ್ಥಾಪನೆಯಾಗುತ್ತಿಲ್ಲ. ಆಳುವ ವರ್ಗಗಳಿಗೆ ಅಥವಾ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗುವಂತೆ ಸುದ್ದಿಯನ್ನು ಜನರ ಬಳಿ ಕೊಂಡೊಯ್ಯಲು ಸ್ಥಾಪನೆಯಾಗುತ್ತಿವೆ. ಹಾಗಾಗಿ ಜನರಿಗೆ ಏನು ಬೇಕು ಎನ್ನುವುದು ಇಲ್ಲಿ ಪ್ರಸ್ತುತ ಎನಿಸುವುದೇ ಇಲ್ಲ. ನಾವು ಕೊಟ್ಟಿದ್ದನ್ನು ಜನರು ಸ್ವೀಕರಿಸುತ್ತಾರೆ ಎನ್ನುವ ಊಳಿಗಮಾನ್ಯ ಧೋರಣೆಯೇ ಪ್ರಧಾನವಾಗುತ್ತದೆ. ಇದು ಸಮಾಚಾರಗಳಿಂದ ಧಾರಾವಾಹಿಯವರೆಗೂ ಸತ್ಯ. ನಿಮ್ಮ ಮೆಚ್ಚಿನ ಚಿತ್ರಗೀತೆ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಕೇಳುತ್ತಿದ್ದೆವು, ಇದು ಇಲ್ಲಿ ಸಾಧ್ಯವೇ ? ಇಲ್ಲ ಅಲ್ವಾ.

ರಾಜಪ್ರಭುತ್ವದ ಕಾಲದಲ್ಲಿ ಸುದ್ದಿವಾಹಕನ ಸುದ್ದಿ ಕೇಳಿ ರಾಜ ಸಂಪ್ರೀತನಾದರೆ ಮಡಿಲಿಗೆ ವರಹಗಳನ್ನು ಸುರಿಯತ್ತಿದ್ದ. ಈಗ ಜಾಹೀರಾತು ಅಥವಾ ಇನ್ನಿತರ ಮಾರುಕಟ್ಟೆ ರೂಪದ ವರಹಗಳನ್ನು ಸುರಿಯಲಾಗುತ್ತದೆ. ಈ ದಕ್ಷಿಣೆಗೆ ಪ್ರತಿಯಾಗಿ ಸುದ್ದಿಮನೆಗಳು ಏನು ಮಾಡಬೇಕು. ಸುಳ್ಳನ್ನೂ ಸತ್ಯ ಎಂದು ಜನರು ನಂಬುವ ಹಾಗೆ ಸುದ್ದಿಯನ್ನು ಸಿದ್ಧಪಡಿಸಬೇಕು. ಅದಕ್ಕಾಗಿಯೇ ಆ ಏರುದನಿಯ ನಿರೂಪಕರನ್ನೂ ತಯಾರಿಸಲಾಗುತ್ತದೆ. ಸತ್ಯವನ್ನು ಸುಳ್ಳು ಎಂದು ಬಿಂಬಿಸುವುದು, ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೇ ಸಾಗಲು ಆಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ನೆರವಾಗುತ್ತವೆ. ಬೆರಳತುದಿಯಲ್ಲಿರುವ ಸುದ್ದಿಯನ್ನು ಕೂಡಲೇ ಬಿತ್ತರಿಸಿ, ನಾವೇ ಮೊದಲು ಎಂದು ಘೋಷಿಸಿದ ಕೂಡಲೇ ನೋಡುಗರಲ್ಲಿ ವಿಶ್ವಾಸ ಮೂಡುವುದು ಸಹಜ.

ಈ ಸುದ್ದಿಮನೆಗಳನ್ನು ನೋಡಿ ಸುದ್ದಿಯನ್ನು ನಂಬುವ ಜನರ ಮುಂದೆ ಬೇರೆ ಆಯ್ಕೆ ಇದೆಯೇ ? ಖಂಡಿತವಾಗಿಯೂ ಇದೆ. ಮುದ್ರಣ ಮಾಧ್ಯಮಗಳು ಸ್ವಲ್ಪಮಟ್ಟಿಗೆ ವಾಸಿ. ದೂರದರ್ಶನ ವಾರ್ತೆಗಳೂ ಇವೆ. ಆದರೆ ಆಧುನಿಕ ಸಮಾಜ, ವಿಶೇಷವಾಗಿ ಮಧ್ಯಮ ವರ್ಗಗಳು ಮತ್ತು ಶ್ರೀಮಂತ ವರ್ಗಗಳಿಗೆ ಭೋಗದ ವ್ಯಸನ ಹೆಚ್ಚಾಗಿದೆ. ಹಿಂಬದಿಯ ಪರದೆ, ಒಂದು ಮೇಜು, ತಾಲ್ಲೂಕು ಕಚೇರಿಯಲ್ಲಿರುವಂತಹ ವಾತಾವರಣದಲ್ಲಿ ಸುದ್ದಿವಾಹಕರು ಕುಳಿತು ಸುದ್ದಿ ಓದಿದರೆ ಈ ವರ್ಗಗಳಿಗೆ ರುಚಿಸುವುದಿಲ್ಲ. ರಂಜನೀಯವಾಗಿರಬೇಕು, ಪ್ರತಿ ವಾಕ್ಯದ ಹಿನ್ನೆಲೆಯಲ್ಲಿ ವಾದ್ಯಗಳ ಅಬ್ಬರ ಬೇಕು, ಗ್ರಾಫಿಕ್ಸ್ ಇರಬೇಕು, ಒಂದೇ ಪರದೆಯಲ್ಲಿ ಹತ್ತಾರು ಸುದ್ದಿಗಳು ಚಿಂದಿ ಚಿಂದಿಯಾಗಿ ಕಾಣಬೇಕು. ಹೀಗೆ ಸಮಾಜದ ಈ ಅವಲಕ್ಷಣಗಳಿಗೆ ಸುದ್ದಿಮನೆಗಳು ಸ್ಪಂದಿಸಲು ಸದಾ ಸಿದ್ಧವಾಗಿರುತ್ತವೆ.

ಈ ಬೌದ್ಧಿಕ ದಾರಿದ್ರ್ಯದ ನೆಲೆಯಲ್ಲೇ ಭಾರತದ ಸುದ್ದಿಮನೆಗಳನ್ನು ಸುಳ್ಳುಸುದ್ದಿಯ ವ್ಯಸನ ಕಾಡುತ್ತಿದೆ. ಸಮಾಜಮುಖಿ ಪ್ರಾಮಾಣಿಕ ವರದಿಗಾರರಿಗೆ ಜಾಗವೇ ಇಲ್ಲದಂತಹ ವಾತಾವರಣ ಮುದ್ರಣ ಮಾಧ್ಯಮಗಳಲ್ಲೂ ಸೃಷ್ಟಿಯಾಗುತ್ತಿದೆ. ಇಲ್ಲಿ ಪ್ರಗತಿಪರತೆ, ಪ್ರತಿಗಾಮಿತನ ಎನ್ನುವುದಕ್ಕಿಂತಲೂ ಮಾಧ್ಯಮಗಳ ಸಮಾಜೋ ರಾಜಕೀಯ ಹೊಣೆಗಾರಿಕೆ ಮುಖ್ಯವಾಗುತ್ತದೆ. ಪಕ್ಷ ರಾಜಕಾರಣವನ್ನು ಹೊರಗಿಟ್ಟು ನೋಡಿದಾಗ ಇದು ಅರ್ಥವಾಗುತ್ತದೆ. ಮಾಧ್ಯಮಗಳು ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಮತಧಾರ್ಮಿಕ ತತ್ವಗಳಿಗೆ ಬದ್ಧವಾಗಿರಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನಿಸಿಕೊಂಡಿರುವ ಈ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು. ತುರ್ತುಪರಿಸ್ಥಿತಿಯ ಸಂದರ್ಭವನ್ನು ಒಮ್ಮೆ ತಿರುಗಿ ನೋಡಿದರೂ ಸಾಕು.

ಆದರೆ ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪ್ರಪಂಚದ ಯಾವುದೇ ವಿದ್ಯಮಾನವೂ ಈ ವ್ಯೂಹದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಾಧ್ಯಮ ಕ್ಷೇತ್ರವೇ ಮಾರುಕಟ್ಟೆಗೆ ಶರಣಾಗಿಬಿಟ್ಟಿದೆ. ಆಡಳಿತ ಯಂತ್ರವನ್ನು ನಿಯಂತ್ರಿಸುವ ಕಾರ್ಪೋರೇಟ್ ಕೈಗಳೇ ಮಾಧ್ಯಮಗಳನ್ನೂ ನಿಯಂತ್ರಿಸುತ್ತವೆ. ಒಂದು ಸುದ್ದಿ ಪತ್ರಿಕೆ ಇಂದು ಬದುಕುಳಿಯಬೇಕಾದರೆ, ಆಳುವ ವರ್ಗಗಳ ಕೃಪಾಕಟಾಕ್ಷಕ್ಕಾಗಿ ಕೈಚಾಚಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಧ್ಯಮ ಲೋಕದ ಸ್ವಾಯತ್ತತೆ ಮತ್ತು ಸ್ವಂತಿಕೆಯ ಬಗ್ಗೆ ಚರ್ಚೆ ನಡೆಸುವ ಕಲ್ಪನೆ ಈಗಾಗಲೇ ಇತಿಹಾಸದ ಕಸದಬುಟ್ಟಿ ಸೇರಿದೆ. ದುರಂತ ಎಂದರೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಮಾನ ಹರಾಜು ಹಾಕಿಕೊಳ್ಳಲು ಕೊರೋನಾ ಸಂದರ್ಭವನ್ನು ಬಳಸಿಕೊಂಡಿವೆ.

ಕೊರೋನಾ-ಕೋವಿದ್ 19 ಸುದ್ದಿಮನೆಗಳ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಬೇಕಿತ್ತು. ಇಡೀ ದೇಶವೇ ಆತಂಕಕ್ಕೊಳಗಾಗಿರುವ ಸಂದರ್ಭದಲ್ಲಿ ಸುದ್ದಿಮನೆಗಳಲ್ಲಿ ತಯಾರಾಗುವ ಪ್ರತಿಯೊಂದು ಸುದ್ದಿಯೂ ಜನಮಾನಸದಲ್ಲಿನ ಆತಂಕಗಳನ್ನು ದೂರ ಮಾಡಿ, ಸಮಾಜದಲ್ಲಿನ ಅಂತರಗಳನ್ನು ಕಡಿಮೆ ಮಾಡಿ, ಸಮಸ್ತ ಭಾರತೀಯ ಪ್ರಜೆಗಳ ಐಕಮತ್ಯ ಸಾಧಿಸುವಂತಿರಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದುದನ್ನು ನಾವಿಂದು ಕಾಣುತ್ತಿದ್ದೇವೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿರುವ ಜನರ ನಡುವೆ ಸಾಮುದಾಯಿಕ ಅಂತರವನ್ನು ಹೆಚ್ಚಿಸಿರುವುದು ಮಾಧ್ಯಮಗಳ ಹೆಗ್ಗಳಿಕೆ.

ಈ ಕ್ಷಣದ ಮಾರುಕಟ್ಟೆ ಮೌಲ್ಯ ವೃದ್ಧಿಗೆ ಸುಳ್ಳು ಸುದ್ದಿಗಳು ನೆರವಾಗುತ್ತಿವೆ. ಇತ್ತ ದೊರೆಗಳೂ ಸಂಪ್ರೀತರಾಗುತ್ತಾರೆ. ಸೂಕ್ತ ದಕ್ಷಿಣೆಯೂ ದೊರೆಯುತ್ತದೆ. ನಾಳೆ ಕ್ಷಮೆ ಕೋರಿದರೂ, ಬಾಚಿಕೊಂಡ ಲಾಭ ಭಂಡಾರ ಸೇರಿರುತ್ತದೆ. ಅರ್ನಾಬ್ ಗೋಸ್ವಾಮಿ ಮತ್ತು ಇವರ ಶಿಷ್ಯ ವೃಂದಕ್ಕೆ ಈ ತಂತ್ರ ಚೆನ್ನಾಗಿಯೇ ತಿಳಿದಿದೆ.
ಕೋವಿದ್ 19 ಭಾರತವನ್ನು ಎಲ್ಲ ರೀತಿಯಲ್ಲೂ ಬೆತ್ತಲೆ ಮಾಡಿದೆ. ಮಾಧ್ಯಮ ಮತ್ತು ಸುದ್ದಿಮನೆಗಳು ಅಪವಾದವಾಗಬೇಕಿಲ್ಲ. ಸುದ್ದಿಮನೆಗಳ ಸುಳ್ಳು ಸುದ್ದಿಯ ವ್ಯಸನ ಸಮಾಜದಲ್ಲಿ ಸೃಷ್ಟಿಯಾಗಿದ್ದ, ಸೃಷ್ಟಿಯಾಗಬಹುದಿದ್ದ ಸೌಹಾರ್ದತೆಯನ್ನೂ ಹಾಳುಗೆಡಹಿವೆ. ಭೋ ಪರಾಕ್ ಹೇಳುವ ವಂದಿಮಾಗಧ ಸಂಸ್ಕøತಿಯಿಂದ ಭಾರತ ಬಹುದೂರ ಸಾಗಿ ಬಂದಿದೆ.

ಆದರೆ ಸುದ್ದಿಮನೆಗಳಲ್ಲಿ ಈ ಸಂಸ್ಕೃತಿ ನಿರಂತರವಾಗಿ ನಡೆದುಬಂದಿದೆ. ಏಕೆಂದರೆ ರಾಜಪ್ರಭುತ್ವದ ಪಳೆಯುಳಿಕೆಗಳನ್ನು ನಾಶಪಡಿಸಲು ನಮ್ಮಿಂದ ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಆದರೆ ಸಾಧ್ಯವಿದೆ ಎನ್ನುವ ಭರವಸೆಯನ್ನು ಕೊರೋನಾ ಮೂಡಿಸಿದೆ.
ಪ್ರಭುತ್ವ ಮತ್ತು ಪ್ರಭುತ್ವವನ್ನು ಪೋಷಿಸುವ ಎಲ್ಲ ಸಾಂಸ್ಥಿಕ ನೆಲೆಗಳೂ ಬೆತ್ತಲಾಗುತ್ತಿರುವ ಈ ಸಂದರ್ಭದಲ್ಲಿ ಸುಳ್ಳುಸುದ್ದಿಯ ವ್ಯಸನಕ್ಕೆ ಒಳಗಾದ ಮಾಧ್ಯಮಗಳು ಸರ್ವವ್ಯಾಪಿ ಕೊರೋನಾಗಿಂತಲೂ ಭೀಕರ ವ್ಯಾಧಿಯಂತೆ ಕಂಡುಬಂದರೆ ಅಚ್ಚರಿಯೇನಿಲ್ಲ.

ಈ ವ್ಯಾಧಿಯನ್ನು ಹೋಗಲಾಡಿಸಲು ಬೇಕಿರುವುದು ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕ ಸಂವೇದನೆ. ನಮ್ಮ ಸಮಾಜದಲ್ಲಿ ಇದು ಇನ್ನೂ ಉಳಿದಿದೆ ಎನ್ನುವುದೊಂದೇ ಆಶಾದಾಯಕ ಸಂಗತಿ. ಈ ಸಂವೇದನೆಯ ಕೊಂಡಿಗಳನ್ನು ಬೆಸೆಯುವ ಮೂಲಕ ನಾವು ಮತ್ತೊಂದು ಹೊಸ ಲೋಕವನ್ನು ಸೃಷ್ಟಿಸಬಹುದಲ್ಲವೇ ? ಸುಳ್ಳು ಸುದ್ದಿಯ ವ್ಯಸನಕ್ಕೆ ಮದ್ದು ಇದೆಯೇ ? ಕೊರೋನಾ ನೆರವಾಗುವುದಿಲ್ಲ. ಕೊರೋನಾ ನಂತರದ ದಿನಗಳಲ್ಲಿ ಇದು ಸಾಧ್ಯ. ನಮ್ಮ ನಡುವಿನ ಮಾಧ್ಯಮ ಎನ್ನುವ ವ್ಯಾಧಿಯನ್ನು ಕೊನೆಗೊಳಿಸಲು ಕೊರೋನಾ ಇರಲಿ ಎಂದು ಬಯಸುವುದು ಬೇಡ. ಕೊರೋನಾ ಹೋಗಲಿ, ನಾವು ಇರುತ್ತೇವೆ ಅಲ್ಲವೇ ?

(ವಿಸೂ : ಇಲ್ಲಿ ಮಾಧ್ಯಮ ಎಂದರೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತ್ರ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version