ಅಂತರಂಗ

ಮರೆಯಲಾಗದ ನಗುಮೊಗದ ಮೃದುಮಾತು

Published

on

ಸವಿ ನೆನಪಿಲ್ಲ. ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಮತ್ತು ಎಐಎಸ್ಎಫ್ ಜಂಟಿಯಾಗಿ ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಹಮ್ಮಿಕೊಂಡಿದ್ದವು.‌ ನಾನಾಗ ಎಐವೈಎಫ್ ನಲ್ಲಿದ್ದೆ. ಯಡಿಯೂರಪ್ಪ ಮತ್ತು ರೆಡ್ಡಿಗಳು ಬಳ್ಳಾರಿಯಲ್ಲಿ ಗಣಿ ಲೂಟಿ ಮಾಡಿದ್ದು, ಅದನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ಲೂಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ಜಾಥಾ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಗಿರೀಶ್ ಕಾರ್ನಾಡರನ್ನು ಆಹ್ವಾನಿಸಲು ನಾನು ಮತ್ತು ಸಂಗಾತಿ ಸಾಥಿ ಸುಂದರೇಶ್ ಅವರ ಮನೆಗೆ ಹೋಗಿದ್ದೆವು. ಅವರ ಬಗ್ಗೆ ನಮಗೆ ಮಾಹಿತಿಯಿತ್ತೇ ಹೊರತು ನಾವೇನೂ ಅವರಿಗೆ ಚಿರಪರಿಚಿತರೇ ಆಗಿರಲಿಲ್ಲ.

ಹೀಗಿದ್ದರೂ ಅವರು ನಾವು ಮೊದಲೇ ಕರೆ ಮಾಡಿ ಹೋಗಿದ್ದರಿಂದ ನಮಗಾಗಿ ತಮ್ಮ ಮನೆಯ ಪಡಸಾಲೆಯಲ್ಲೇ ಕಾಯುತ್ತಿದ್ದರು. ಅದೆಷ್ಟು ಆತ್ಮೀಯವಾಗಿ ನಮ್ಮನ್ನು ಮಾತನಾಡಿಸಿದರೆಂದರೆ ನಾವು ಬಹಳಾ ವರ್ಷಗಳ ಸಂಬಂಧಿಕರೋ ಏನೋ ಎನ್ನುವಂತಿತ್ತು. ನಿಜ, ಚಳವಳಿಯಲ್ಲಿ ನಿರತರಾಗಿರುವರೆಲ್ಲರೂ, ಜನಪರವಾಗಿ, ದೇಶದ ಪರವಾಗಿ, ನ್ಯಾಯದ ಪರವಾಗಿ, ಸಮಾನತೆಗಾಗಿ, ಶೋಷಿತ ಜನರ ಪರವಾಗಿ ಚಿಂತಿಸುವವರು, ಕೆಲಸ ಮಾಡುವವರು, ನ್ಯಾಯಕ್ಕಾಗಿ ಬೀದಿಗೆ ಇಳಿಯುವವರು ಎಲ್ಲರೂ ಒಂದಲ್ಲಾ ಒಂದು ತರ ಸಂಬಂಧಿಕರೇ…. ಅವರ ಮುಗುಳುನಗೆ ಭರಿತ ಆತ್ಮೀಯ ಮಾತುಗಳು ಇವತ್ತು ಮತ್ತೆ ನನಗೆ ನೆನಪಾಗುತ್ತಿವೆ.

ಇತ್ತೀಚೆಗೆ ಈ ನೆಲದ ಸೌಹಾರ್ದ ಸಂಸ್ಕೃತಿ, ನಮ್ಮ ದೇಶದ ಪ್ರಜಾಪ್ರಭುತ್ವ, ಇಲ್ಲಿನ ಜನರ ಸ್ವತಂತ್ರ ಬದುಕು, ಎಲ್ಲವೂ ತೀವ್ರ ಅಪಾಯದಲ್ಲಿರುವಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಯಾವುದೇ ಸಮಾನಮನಸ್ಕರ ಪ್ರತಿಭಟನೆ, ಹೋರಾಟ, ಸಭೆಗಳಲ್ಲೂ ಅವರ ಉಪಸ್ಥಿತಿಯನ್ನು ನಾವು ಕಾಣುತ್ತಿದ್ದೆವು. ವಯಸ್ಸಾಗುತ್ತ ಅವರ ಆರೋಗ್ಯ ಹದಗಟ್ಟು ಮೂಗಿಗೆ ಪೈಪುಗಳನ್ನು ಹಾಕಿಕೊಂಡಿದ್ದರೂ ಸಹ, ಅವರು ಹಾಗೆ ಬಂದು ಹೇಳಬೇಕಾದ್ದನ್ನು ಹೇಳಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಮಾಜದ ಏಳ್ಗೆಯ ಕುರಿತು, ಅವರಿಗಿದ್ದ ಬದ್ಧತೆಯ ಪ್ರತೀಕವಿದು ಎಂದರೆ ತಪ್ಪಲ್ಲ. ಇಂತಹ ಸಾಹಿತಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದು ಅಚ್ಚರಿಯೇನಲ್ಲ. ಇಂದಿಗೂ ಸಂಘ ಪರಿವಾರದ ಕ್ರಿಮಿಗಳ ವಿಕೃತ ಮಾತುಗಳು ಮುಂದುವರಿದಿವೆ, ಅದು ಅವುಗಳು ಬೆಳೆದಿರುವ ಪರಿಸರದ‌ ‘ಸಂಸ್ಕಾರ’ ತೋರಿಸುತ್ತದೆ.

ಅದೇನೇ ಇರಲಿ, ಮೇರು ವ್ಯಕ್ತಿತ್ವದ ಗಿರೀಶ್ ಕಾರ್ನಾಡ್ ಅವರ ಕೃತಿಗಳಿಂದಲೂ, ಅವರು ಹಲವು ಸಂದರ್ಭಗಳಲ್ಲಿ ಬೀದಿಗೆ ಇಳಿದು ಹೋರಾಟಗಾರರ ಜೊತೆ ಧ್ವನಿಗೂಡಿಸಿದ್ದರಿಂದಲೂ ಇನ್ನೂ ನೂರ್ಕಾಲ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿರುತ್ತಾರೆ. ಯಾರೆಷ್ಟೇ ಅವರ ವಿಷಯದಲ್ಲಿ ವಿಕೃತಿ ಮೆರೆದರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರು ಸಾಹಿತ್ಯಲೋಕದಲ್ಲಿ, ಪ್ರಜ್ಞಾವಂತರ ಹೃದಯಗಳಲ್ಲಿ ವಿಜೃಂಭಿಸುತ್ತಲೇ ಇರುತ್ತಾರೆ, ಅವರ ಕೃತಿಗಳ ಮೂಲಕ.

ಗಿರೀಶ್ ಕಾರ್ನಾಡರಿಗೆ ಗೌರವಪೂರ್ಣ ನಮನಗಳು

ಜ್ಯೋತಿ ಎ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version