ಲೈಫ್ ಸ್ಟೈಲ್

ಸಾಂಕ್ರಾಮಿಕ ‌ರೋಗವಾಗುತ್ತಿದೆ ಹೃದಯಾಘಾತ..!

Published

on

ಭಾರತ ದೇಶದಲ್ಲಿ ಹೃದಯಾಘಾತಗಳು ಕೆಲವು ವರ್ಷಗಳಿಂದೀಚೆಗೆ ಒಂದು ಸಾಂಕ್ರಾಮಿಕ ರೋಗದಂತೆ ಕಂಡುಬರುತ್ತಿದೆ. ಭಾರತದೇಶದವರಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಹೃದಯಘಾತಗಳಿಗೆ (ಕರೋನರಿ ರಕ್ತನಾಳದ ರೋಗಕ್ಕೆ) (coronary artery disease) ಅನೇಕ ಕಾರಣಗಳನ್ನು ಮುಂದಿಡಲಾಗಿದೆ.

ಸುಧಾರಿಸುತ್ತಿರುವ ಜನರ ಆರ್ಥಿಕ ಮಟ್ಟ ಮತ್ತು ಸೌಕರ್ಯಗಳು, ಜನರ ಜೀವನಶೈಲಿಯಲ್ಲಿ ತೀವ್ರ ಬದಲಾವಣೆಗಳು, ದೈಹಿಕ ವ್ಯಾಯಾಮದ ಕೊರತೆ, ಧೂಮಪಾನ, ಹಳ್ಳಿಯಿಂದ ನಗರಗಳಗೆ ಜನರ ವಲಸೆ, ನಗರವಾಸಿಗಳ ಸಂಖ್ಯೆಯು ಹೆಚ್ಚುತ್ತಿರುವುದು, ಸಾಂಕ್ರಾಮಿಕ ರೋಗಗಳು ಹಿಮ್ಮೆಟ್ಟುತ್ತಿರುವುದು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳು ನಾಗಲೋಟದಲ್ಲಿ ಮೇಲಕ್ಕೇರುತ್ತಿರುವುದು ಮತ್ತು ಜನರ ಸರಾಸರಿ ಆಯಸ್ಸು ಹೆಚ್ಚುತ್ತಿರುವುದು ಗುರುತಿಸಿರುವ ಕಾರಣಗಳು. ಭಾರತ ದೇಶದವರ ಸರಾಸರಿ ಆಯಸ್ಸು ಕ್ರಿ.ಶ.1951 ರಿಂದ ಕ್ರಿ.ಶ. 1991 ರ ಅವಧಿಯಲ್ಲಿ 41 ರಿಂದ 61 ವರ್ಷಕ್ಕೊ, ಕ್ರಿ.ಶ 2003 ರ ಸಾಲಿನಲ್ಲಿ 71 ವರ್ಷಗಳಿಗೂ ಮೇಲೇರಿರುವುದು.

ವಿದೇಶದಲ್ಲಿ ನೆಲೆಸಿರುವ ಭಾರತೀಯರಲ್ಲಿ ಹೃದಯಾಘಾತ ಆ ದೇಶದ ಪ್ರಜೆಗಳಿಗಿಂತ ನಾಲ್ಕು ಜಾಸ್ತಿಯಾಗಿರುವುದೆಂದು ಕಂಡುಬಂದಿದೆ. ಸಿಂಗಪುರ, ಕೆನಡ,ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಹೃದಯಾಘಾತಗಳು ಆಯಾ ದೇಶದ ಪ್ರಜೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವವು. ಇದು ಭಾರತೀಯ ಬುಡಕಟ್ಟಿನ ಪುರುಷರಿಗೂ , ಸ್ತ್ರೀಯರಿಗೂ ಮತ್ತು ಅಲ್ಲಯೇ ನೆಲೆನಿರುವ ಅವರ ಪೀಳಿಗೆಯವರಿಗೂ ಅನ್ವಯಿಸುವುದು.
ಕ್ರಿ.ಶ. 1996ರಲ್ಲಿ ನಡೆಸಿದ ಅಧ್ಯಯನದಲ್ಲಿ ಭಾರತದಿಂದ ವಲಸೆ ಹೋಗಿ ಅಮೆರಿಕೆಯಲ್ಲಿ ನೆಲೆಸಿರುವ 1688 ಮಂದಿ (ಸರಾಸರಿ 46.4 ವರ್ಷ ವಯಸ್ಸಿನ 1131 ಗಂಡಸರು ಮತ್ತು 557 ಹೆಂಗಸರು) ಮೊದಲನೇ ಪೀಳಿಗೆಯ ವೈದೈರು ಮತ್ತು ಅವರ ನಿಕಟ ಸಂಬಂಧಿಗಳಲ್ಲಿ ಹೃದಯಬೇನೆ ಮತ್ತು ಹೃದಯಾಘಾತಗಳು ಅಮೆರಿಕೆಯಲ್ಲಿರುವ ಇತರೆ ಪ್ರಜೆಗಳಿಗಿಂತ ಮೂರು ಪಾಲು ಹೆಚ್ಚಾಗಿರುವುದಾಗಿ ಕಂಡುಬಂದಿತು. ಭಾರತ ದೇಶದ ಜನರ ದೇಹದಲ್ಲಿ ಇನ್ಸುಲಿನ್ ಕ್ರಿಯೆಗೆ ಪ್ರತಿಬಂಧಕವು (insulin resistance) ಇದಕ್ಕೆ ಮುಖ್ಯವಾದ ಕಾರಣವೆಂದು ಹೇಳಲಾಗಿದೆ. ಕ್ರಿ.ಶ. 2000ರಲ್ಲಿ ಲಾನ್ಸಟ್ (Lancet) ವೈದ್ಯಕೀಯ ಪತ್ರಿಕೆಯು “ಅಮೆರಿಕೆಯಲ್ಲಿ ಕರೋನರಿ ರಕ್ತನಾಳಗಳ ರೋಗಕ್ಕೆ ಒಳಗಾದವರಲ್ಲಿ ಶೇಕಡ 10.7ರಷ್ಟು ಜನರು ದಕ್ಷಿಣ ಏಷ್ಯಾ ಖಂಡದ ಬುಡಕಟ್ಟಿನವರು, ಶೇಕಡ 4.6ರಷ್ಟು ಮಂದಿ ಯೂರೋಪ್ ಬುಡಕಟ್ಟಿನವರು ಮತ್ತು ಶೇಕಡ 1.7 ಅಮೆರಿಕದಲ್ಲಿ ನೆಲೆಸಿರುವ ಚೀನೀಯರು. ಹೃದಯಾಘಾತದಿಂದ ಗುಣ ಹೊಂದಿದ ಕುರುಹು ಶೇಕಡ 5.2 ರಷ್ಟು ದಕ್ಷಿಣ ಏಷ್ಯಾ ಬುಡಕಟ್ಟಿನವರಲ್ಲಿಯೂ ಕಂಡುಬಂದಿತು.

ಒಟ್ಟಿನಲ್ಲಿ ಕರೋನರಿ ರಕ್ತನಾಳಗಳ ಗಡಸಾಗುವಿಕೆಯು ಅಮೆರಿಕಾ ದೇಶಕ್ಕೆ ವಲಸೆ ಹೋಗಿರುವ ಭಾರತೀಯರಲ್ಲಿ ಆ ದೇಶದ ಪ್ರಜೆಗಳಿಗಿಂತ ಮೂರು ಪಾಲು ಹೆಚ್ಚಾಗಿ ಕಂಡುಬರುವುದು, ಅಮೆರಿಕದ ಜನರಿಗಿಂತ ಭಾರತೀಯರು ಕಡಿಮೆ ವರ್ಷ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವರು. ಹೃದಯಾಘಾತದಿಂದ ಸಾವಿಗೀಡಾಗುವವರ ಸಂಖ್ಯೆಯೂ ಎಲ್ಲಾ ವಯೋಮಾನದ ಭಾರತೀಯರಲ್ಲಿ ಬಹಳಷ್ಟು ಹೆಚ್ಚಾಗಿರುವುದು ” ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಗಮನಾರ್ಹ ಸಂಗತಿಯೆಂದರೆ ಭಾರತ ದೇಶದಲ್ಲಿಯೇ ನೆಲೆಸಿರುವವರಿಗಿಂತ ಬೇರೆ ದೇಶಗಳಿಗೆ ವಲಸೆ ಹೋಗಿರುವ ಭಾರತೀಯರಲ್ಲಿ ಹೃದಯಾಘಾತಗಳು ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತಿರುವುದು. “ಲಂಡನ್ ನಗರದಲ್ಲಿ ವಾಸಿಸುವ ಪಂಜಾಬಿಗಳಲ್ಲಿ ಅವರ ಹಳ್ಳಿಗಳಲ್ಲಿ (ಪಂಜಾಬಿನ) ವಾಸವಾಗಿರುವ ಮಂದಿಗಿಂತ ಎಲ್ಲಾ ಬಗೆಯ ಅಪಾಯಕಾರಿ ಕಾರಣಗಳೂ (ರಿಸ್ಕ್ ಫ್ಯಾಕ್ಟರ್ ಗಳೂ) ಅಧಿಕವಾಗಿರುವುದು. ಆದರೆ ಪಂಜಾಬಿನ ಹಳ್ಳಿಗಳಲ್ಲಿ ವಾಸಿಸುವವರಲ್ಲಿ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್) ಮಟ್ಟವು ಹೆಚ್ಚಿನ ಮಟ್ಟದಲ್ಲಿರುವುದು” ಎಂದು ಒಂದು ಅಧ್ಯಯನವು ತಿಳಿಸಿದೆ.

ಹೃದಯಾಘಾತಗಳು ಅಮೆರಿಕಾ ದೇಶದ ಮಹಿಳೆಯರಿಗಿಂತ ಭಾರತೀಯ ಮಹಿಳೆಯರಲ್ಲಿ ಚಿಕ್ಕ ವಯಸ್ಸಿನಲ್ಲೇ ಕಂಡುಬರುವುದು. ಅಮೆರಿಕಾ ದೇಶದಲ್ಲಿ ನೆಲೆಸಿರುವ 50 ವರ್ಷಗಳಿಗೂ ಕಡಿಮೆ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಹೃದಯಾಘಾತಗಳು ಕಂಡುಬರುವುದಲ್ಲದೆ ಹೃದಯಾಘಾತದ ತೊಡಕುಗಳೂ ತೀಕ್ಷ್ಣ ಮಟ್ಟದಲ್ಲಿರುವುವು. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರಲ್ಲಿ ಹೃದಯಾಘಾತದಿಂದ ಸಂಭವಿಸುವ ಮರಣಗಳ ಸಂಖ್ಯೆಯು ಆ ದೇಶದ ಮಹಿಳೆಯರಿಗಿಂತ ಶೇಕಡ 30ರಷ್ಟ ಅಧಿಕವಾಗಿರುವುದು. ಇತರೆ ರಾಷ್ಟ್ರಗಳ ಜನರಿಗಿಂತ ಭಾರತೀಯರ ದೇಹದಲ್ಲಿ ಬೊಜ್ಜು ಶೇಖರಣೆಯು ಹೆಚ್ಚಾಗಿ ಕಂಡುಬರುವುದು.

ಮುಂದುವರೆಯುತ್ತದೆ

ಸೌಮ್ಯ ಅಶೋಕ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version