ಬಹಿರಂಗ
ಕಾಶ್ಮೀರದ ವಿಶೇಷ ಸ್ಥಾನಮಾನದ ಅಂತ್ಯವೂ, ಅಮಿತ್ ಷಾ “ಅಭಿವೃದ್ಧಿ” ಅರ್ಥಶಾಸ್ತ್ರವೂ
-ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35ಎ ವಿಧಿಗಳೇ ಆ ರಾಜ್ಯದಲ್ಲಿ ಅಭಿವೃದ್ಧಿಯಾಗದಿರಲು ಕಾರಣ ಎಂದು ಗೃಹಮಂತ್ರಿ ಅಮಿತ್ ಷಾ ಈ ವಿಧಿಗಳನ್ನು ಕೊನೆಗೊಳಿಸುವುದನ್ನು ಸಮರ್ಥಿಸಿಕೊಳ್ಳುತ್ತ ಹೇಳಿದ್ದಾರೆ. ಬಿಜೆಪಿಯ ಮುಖಂಡರುಗಳೆಲ್ಲರೂ ಈಗ ಜಪಿಸುತ್ತಿರುವ ಇದನ್ನು ದೇಶದ ಬಹಳಷ್ಟು ಮಂದಿ ನಂಬಿರುವಂತೆಯೂ ಕಾಣುತ್ತದೆ.
ಆದರೆ ಇದು ನಿಜವಲ್ಲ, ಇದು ಕಾಶ್ಮೀರಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕಡಿತಗೊಳಿಸುತ್ತದೆ. ಜತೆಗೆ, ಇದು, ದೇಶದಲ್ಲಿ ಪಾಳೇಗಾರಿ-ವಿರೋಧಿ ಭೂಸುಧಾರಣೆಗಳಿಗೆ ಮುನ್ನುಡಿ ಬರೆದ ರಾಜ್ಯಕ್ಕೆ ಒದಗಿರುವ ಈ ದುರ್ವಿಧಿಯನ್ನೇ ಅಮಿತ್ ಷಾ ಹೇಳುವ “ಅಭಿವೃದ್ಧಿ” ಎನ್ನುತ್ತಾರೆ ದೇಶದ ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್.
ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಳಿಸುವ ನಡೆಯನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ರಾಜ್ಯ ಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಷಾ ಕಾಶ್ಮೀರದ “ಅಭಿವೃದ್ಧಿ”ಯ ಪ್ರಶ್ನೆಯನ್ನು ತಮ್ಮ ಭಾಷಣದಲ್ಲಿ ತಂದರು. ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಗಾಢವಾಗಿ ಸಮಗ್ರಗೊಳಿಸುವುದರಿಂದ ಆ ಪ್ರದೇಶದಲ್ಲಿ ಹೂಡಿಕೆ ಹೆಚ್ಚುತ್ತದೆ ಎಂದು ವಾದಿಸಿದರು. ಕಾಶ್ಮೀರದ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಭರವಸೆಯ ಮೂಲಕ ತಮ್ಮ ಸರ್ಕಾರದ ಕ್ರಮವನ್ನು ಬೆಂಬಲಿಸುವಂತೆ ಅಮಿತ್ ಷಾ ವಿಶೇಷವಾಗಿ ಕಾಶ್ಮೀರದ ಯುವಕರಿಗೆ ಮನವಿ ಮಾಡಿದರು.
ಕಳೆದ 45 ವರ್ಷಗಳಲ್ಲೇ ನಿರುದ್ಯೋಗದ ಪರಿಸ್ಥಿತಿ ಅತಿ ಹೆಚ್ಚು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭಾರತದ ಉಳಿದ ಭಾಗಗಳೊಂದಿಗೆ ಕಾಶ್ಮೀರವು ಗಾಢವಾಗಿ ಬೆಸೆದುಕೊಂಡರೆ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂಬುದಾಗಿ ಹೂಡಿರುವ ದಾವೆಯು ಒಂದು ವಿಡಂಬನೆಯೇ ಸರಿ. ಆದರೂ, ಉದ್ಯೋಗಾವಕಾಶಗಳ ಬಗ್ಗೆ ಅಮಿತ್ ಷಾ ಅವರ ವಾದನ್ನು ಸೂಕ್ಷ್ಮವಾಗಿ ಪರಿಶೀಲಿಸೋಣ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದೆಯೋ ಅಥವಾ ಇಲ್ಲವೋ ಎಂಬುದು ಒತ್ತಟ್ಟಿಗಿರಲಿ, ಸ್ಥಳಿಯವಾಗಿ ದೊರೆಯುವ ಕಚ್ಚಾ ಪದಾರ್ಥಗಳ ಸಂಸ್ಕರಣೆಗೆ ಸಂಬಂಧವಿಲ್ಲದ ಬೃಹತ್ ಕೈಗಾರಿಕೆಗಳು ಕಾಶ್ಮೀರಕ್ಕೆ ಹರಿದು ಬರುತ್ತವೆ ಎನ್ನುವುದೇ ಒಂದು ಅತ್ಯಂತ ಹಾಸ್ಯಾಸ್ಪದವಾದ ಸಂಗತಿ (ಅಮಿತ್ ಷಾರವರೇನೋ ಬೃಹತ್ ಕೈಗಾರಿಕೆಗಳು ಕಾಶ್ಮೀರಕ್ಕೆ ಹರಿದು ಬರಲಿವೆ ಎಂದಿದ್ದಾರೆ). ಒಂದು ಕಾರ್ಖಾನೆಯ ಸ್ಥಾಪನೆಗೆ ಸಂಬಂಧಿತ ಸಾಗಣೆ ವೆಚ್ಚಗಳು ಕಾಶ್ಮೀರದಲ್ಲಿ ವಿಪರೀತ ದುಬಾರಿಯಾಗುತ್ತವೆ. ಮತ್ತು, ಕಾಶ್ಮೀರದಲ್ಲಿ “ಹೊರಗಿನವರು” ಭೂಮಿ ಕೊಳ್ಳುವುದನ್ನು ನಿರ್ಬಂಧಿಸುವ 35A ವಿಧಿಯನ್ನು ರದ್ದು ಮಾಡಿರುವುದರಿಂದಾಗಿ ಭೂಮಿಯ ಬೆಲೆ ಏರುತ್ತದೆ – ಭವಿಷ್ಯದಲ್ಲಿ ಇದೊಂದು “ಸಕಾರಾತ್ಮಕ” ಬೆಳವಣಿಗೆಯಾಗಲಿದೆ ಎಂಬ ಅಂಶವನ್ನು ಸ್ವತಃ ಷಾ ಹೇಳಿದರು. ಹಾಗಾಗಿ, ಯಾರಾದರೂ ಮನಬಂದಂತೆ ಬೃಹತ್-ಕೈಗಾರಿಕೆಗಳನ್ನು ಕಾಶ್ಮೀರದಲ್ಲಿ ತೆರೆಯುತ್ತಾರೆ ಎಂಬುದು ಕೇವಲ ಒಂದು ಅಸಂಬದ್ಧವೇ. ಅಷ್ಟೇ ಏಕೆ, ಅದೇ ರೀತಿಯಲ್ಲಿ, ಯಾರಾದರೂ ಅಲ್ಲಿ ಮನಬಂದಂತೆ ಸಣ್ಣ-ಕೈಗಾರಿಕೆಗಳನ್ನು ತೆರೆಯುತ್ತಾರೆ ಎಂಬುದೂ ಅಷ್ಟೇ ಅಸಂಬದ್ಧ ಮಾತು.
ಆದ್ದರಿಂದ, ಕಾಶ್ಮೀರ ಕಣಿವೆಯಲ್ಲಿ ಉತ್ಕೃಷ್ಟವಾಗಿ ಬೆಳೆಯಬಹುದಾದ ಚಟುವಟಿಕೆಗಳೆಂದರೆ, ಅಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಚಾ ಪದಾರ್ಥಗಳನ್ನೇ ಬಳಸುವ ಚಟುವಟಿಕೆಗಳು ಮಾತ್ರ – ಅದು ಉಣ್ಣೆ ಇರಬಹುದು, ಅಥವಾ ಹಣ್ಣುಗಳೇ ಇರಬಹುದು, ಅಥವಾ ಮರಮಟ್ಟುಗಳೇ ಇರಬಹುದು, ಅಥವಾ ಮಾಂಸವೇ ಇರಬಹುದು. ಅಂತಹ ಚಟುವಟಿಕೆಗಳು ಕಾಶ್ಮೀರ ಕಣಿವೆಯಲ್ಲಿ ಈಗಾಗಲೇ ಸಧೃಢವಾಗಿ ನೆಲೆಗೊಂಡಿವೆ. ಈ ಚಟುವಟಿಕೆಗಳಿಗೆ ಈಗ ಬೇಕಿರುವುದು ಒಂದು ಒಳ್ಳೆಯ ಉತ್ತೇಜನವಷ್ಟೇ. ಅಂತಹ ಉತ್ತೇಜನ ದೊರೆಯಬೇಕಾದರೆ ರಾಜ್ಯದಲ್ಲಿ ಸಹಾನುಭೂತಿಯುಳ್ಳ ಒಂದು ಸರ್ಕಾರ ಇರಬೇಕಾಗುತ್ತದೆಯೇ ಹೊರತು, ವಿಶೇಷ ಸ್ಥಾನಮಾನ ಕೊನೆಗೊಳಿಸುವುದಲ್ಲ ಅಥವಾ “ಹೊರಗಿನವರು” ಭೂಮಿ ಕೊಳ್ಳುವುದರ ಮೇಲೆ ಇರುವ ನಿರ್ಬಂಧವನ್ನು ರದ್ದು ಮಾಡುವುದೂ ಅಲ್ಲ.
ನಿಜ, ಕಾಶ್ಮೀರವು ಉಳಿದ ಭಾರತದೊಂದಿಗೆ ಹೆಚ್ಚಿನ ಮಟ್ಟದಲ್ಲಿ ಮುಕ್ತವಾಗಿ ತೆರೆದುಕೊಂಡರೆ ಬಹುರಾಷ್ಟ್ರೀಯ ಕಂಪೆನಿಗಳೊ ಅಥವಾ ಭಾರತದ ದೊಡ್ಡ ದೊಡ್ಡ ಉದ್ದಿಮೆಗಳೋ ಅಲ್ಲಿ ಸ್ಥಾಪನೆಯಾಗಿ, ಇಂತಹ ಚಟುವಟಿಕೆಗಳನ್ನೇ ಅಭಿವೃದ್ಧಿಪಡಿಸುವ ಮೂಲಕ ಕಣಿವೆಯ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ಯೋಚಿಸಬಹುದು. ಆದರೆ, ದೊಡ್ಡ ಬಂಡವಾಳವು, ಅದು ಭಾರತದ್ದೇ ಆಗಿರಲಿ ಅಥವಾ ವಿದೇಶದ್ದೇ ಆಗಿರಲಿ, ಸ್ಥಳೀಯ ಉತ್ಪಾದಕರು ತೊಡಗಿರುವ ಚಟುವಟಿಕೆಗಳಲ್ಲೇ ಕಾಲಿಟ್ಟಾಗ ಉದ್ಯೋಗಗಳು ಸ್ವಲ್ಪವೂ ಹೆಚ್ಚುವುದಿಲ್ಲ. ಬದಲಿಗೆ, ಸ್ಥಳೀಯ ಉತ್ಪಾದಕರ ಸ್ಥಾನವನ್ನು ಆಕ್ರಮಿಸುವುದರಿಂದ ಉದ್ಯೋಗಗಳು ಕುಗ್ಗುತ್ತವೆ. ಕಾಲಕ್ರಮದಲ್ಲಿ ಇಂತಹ ಚಟುವಟಿಕೆಗಳನ್ನು ವೃದ್ಧಿಸುವ ಅವಕಾಶಗಳಿದ್ದರೆ, ಅಂತಹ ಅವಕಾಶಗಳನ್ನು ಸ್ಥಳೀಯ ಉತ್ಪಾದಕರೇ ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರವು ಅವರಿಗೆ ಸಹಾಯ ಮಾಡಬಹುದು. ಇಂತಹ ಸ್ಥಳೀಯ ಉತ್ಪನ್ನಗಳಿಗೆ ದೊಡ್ಡ ಉದ್ದಿಮೆಗಳು ಬಂದರೆ ಕ್ರಮೇಣ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆಯೇ ಹೊರತು ಖಂಡಿತವಾಗಿಯೂ ಹೆಚ್ಚುವುದಿಲ್ಲ.
ಆದರೆ, ಅಮಿತ್ ಷಾ ಅವರ ಪ್ರಕಾರ ಕಾಶ್ಮೀರಿಗಳ ನಿಜವಾದ “ನಿರೀಕ್ಷೆ” ಹೊರಗಿನವರು ಭೂಮಿ ಕೊಳ್ಳಲು ಕಾಶ್ಮೀರ ಕಣಿವೆಯಲ್ಲಿ ಪ್ರವೇಶಿಸುವುದರಲ್ಲೇ ಅಡಗಿದೆ. ಹಿಮಾಚಲ ಪ್ರದೇಶ ಮತ್ತು ಇತರ ಗಡಿ ಭಾಗದ ಬೆಟ್ಟ-ಗುಡ್ಡಗಳ ರಾಜ್ಯಗಳಲ್ಲಿ ಹೊರಗಿನವರು ಭೂಮಿ ಕೊಳ್ಳುವುದರ ಮೇಲೆ ನಿರ್ಬಂಧ ಇರುವಾಗ, “ಅಭಿವೃದ್ಧಿ”ಯ ಹೆಸರಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಭೂಮಿ ಕೊಳ್ಳುವುದರ ಮೇಲೆ ಇರುವ ನಿರ್ಬಂಧವನ್ನು ತೆಗೆಯಬೇಕು ಎನ್ನುವುದು ವಿಚಿತ್ರವೇ ಸರಿ. ಕೇವಲ ಭೂಮಿ ವ್ಯವಹಾರಗಳ ಉಬ್ಬರದಿಂದ ಕಾಶ್ಮೀರ ಕಣಿವೆಯ ಅಭಿವೃದ್ಧಿಯಾಗುತ್ತದೆಯೇ?
ಒಬ್ಬ ವ್ಯಕ್ತಿಯು ಭೂಮಿ ಕೊಳ್ಳುವಾಗ, ತಾನು ಹೊಂದಿರುವ ಯಾವುದೊ ಒಂದು ಆಸ್ತಿಯನ್ನು ಇನ್ನೊಂದು ಆಸ್ತಿ (ಭೂಮಿ) ಹೊಂದುವತ್ತ ಚಲಿಸುತ್ತಾನೆ. ಭೂಮಿ ಮಾರುವವನ ಪರಿಸ್ಥಿತಿಯೂ ಅದೇ ರೀತಿಯಲ್ಲಿಯೇ ಇರುತ್ತದೆ. ಹಾಗಾದರೆ, ಆ ಯಾವುದೊ ಒಂದು ಎಂದು ಹೇಳುವ ಆಸ್ತಿ ಯಾವುದು? ಕಾಶ್ಮೀರ ಕಣಿವೆಯಲ್ಲಿ ಭೂಮಿ ಕೊಳ್ಳುವ ಹೊರಗಿನವನು ತಾನು ಹೊಂದಿರುವ ಉತ್ಪಾದಕ ಆಸ್ತಿಯಿಂದ ಭೂಮಿ ಹೊಂದುವತ್ತ ಚಲಿಸಿದರೆ, ಉಳಿದ ಭಾರತಕ್ಕೆ ಆ ವ್ಯವಹಾರವು ಒಂದು ಹಿಮ್ಮುಖ ನಡೆಯಾಗುತ್ತದೆ. ಆ ವ್ಯವಹಾರವು ಆ ರೀತಿಯದೇ ಅಲ್ಲ ಎಂದು ಭಾವಿಸಿ, ಅಮಿತ್ ಷಾ ಅವರ ಕಲ್ಪನೆಗೆ ಹೊಂದುವಂತಹ ಒಂದು ಉದಾಹರಣೆ ತೆಗೆದುಕೊಳ್ಳೋಣ: ಭೂಮಿ ಕೊಳ್ಳುವವನು ತಾನು ಹೊಂದಿರುವ ನಗದು ಹಣದಿಂದ ಭೂಮಿ-ಆಸ್ತಿಯತ್ತ ಚಲಿಸುತ್ತಾನೆ. ಇದು ಉಳಿದ ಭಾರತದಲ್ಲಿ ಆಗುವ ಹೂಡಿಕೆಯಲ್ಲಿ ಕಡಿತವಾಗುವುದಿಲ್ಲ ಎಂದು ಮೊದಲ ನೋಟದಲ್ಲಿ ತೋರುತ್ತದೆ. ಕಾಶ್ಮೀರ ಕಣಿವೆಯಲ್ಲಿ ಭೂಮಿ ಕೊಳ್ಳುವವನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆಯುತ್ತಾನೆ, ಆತನಿಗೆ ಸಾಲ ಒದಗಿಸುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆಯಿಲ್ಲ ಎಂಬ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ಈಗ ಒಂದು ಪ್ರಶ್ನೆ: ಭೂಮಿ ಮಾರಿದವರು ತಮಗೆ ಬಂದ ಹಣವನ್ನು ಏನು ಮಾಡುತ್ತಾರೆ? ಈಗ ತಾನೇ ಚರ್ಚಿಸಿರುವ ಕಾರಣಗಳಿಂದಾಗಿ, ಕಾಶ್ಮೀರ ಕಣಿವೆಯಲ್ಲಿ ಭೂಮಿ ಮಾರಿದವರು, ಕಣಿವೆಯಲ್ಲೇ ಹೂಡಿಕೆ ಮಾಡುವ ಸಂಭವ ಕಡಿಮೆಯೇ, ಬಹುಷಃ ಸ್ಥಳೀಯ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಮಾಡುವ ಹೂಡಿಕೆಯನ್ನು ಹೊರತುಪಡಿಸಿದರೆ. ಆದರೆ, ಸ್ಥಳೀಯ ಸರಕುಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶಕ್ಕಾಗಿ ಹೂಡಿಕೆ ಮಾಡಲು ಹಣಕಾಸಿನ ಕೊರತೆಯಂತಹ ಯಾವುದೇ ತೊಂದರೆಯಿತ್ತು ಎಂಬುದನ್ನು ನಂಬಲು ಕಾರಣವೇ ಇಲ್ಲ. ಸ್ಥಳೀಯ ಸರಕುಗಳ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವಂತಹ ಅವಕಾಶ ಇರಬಹುದು. ಅದಕ್ಕೆ ರಾಜ್ಯ ಸರ್ಕಾರದ ಉತ್ಸಾಹಪೂರ್ಣ ಭಾಗವಹಿಸುವಿಕೆ ಇರಬೇಕಾಗುತ್ತದೆ. ಆದ್ದರಿಂದ, ಭೂಮಿ ಮಾರಿ ಕೈಯಲ್ಲಿ ಹಣ ಇಟ್ಟುಕೊಳ್ಳುವುದೇ ಉತ್ಪಾದನೆ ಹೆಚ್ಚಿಸುವತ್ತ ಕೊಂಡೊಯ್ಯುವುದಿಲ್ಲ. ಉತ್ಪಾದನೆ ಹೆಚ್ಚಿಸುವಂತಹ ಅವಕಾಶ ಇದ್ದಿದ್ದರೆ ಭೂಮಿಯ ವ್ಯಾಪಾರ ಇಲ್ಲದಿದ್ದರೂ ಹೂಡಿಕೆಯಾಗುತ್ತಿತ್ತು. ಹಾಗಾಗಿ, ಭೂಮಿ ಮಾರಿದ ಹಣವನ್ನು, ಬಹುತೇಕವಾಗಿ, ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕಾಗುತ್ತದೆ.
ಇಂತಹ ಹಣ ಬ್ಯಾಂಕ್‌ನಲ್ಲಿ ಠೇವಣಿಯಾದಾಗ ಅದು ಸಾಮಾನ್ಯವಾಗಿ ಸ್ಥಳೀಯವಾಗಿ ಸಾಲ ಕೊಡಲು ಬಳಕೆಯಾಗುವುದಿಲ್ಲ ಎಂಬುದು ಒಂದು ದಿನ ನಿತ್ಯದ ಸತ್ಯ. ಒಂದೋ ಅದು ಕಾಶ್ಮೀರದ ಹೊರಗೆ ಸಾಲ ಕೊಡಲು ಬಳಕೆಯಾಗುತ್ತದೆ ಇಲ್ಲವೇ, ಹೆಚ್ಚೆಂದರೆ, ಸ್ಥಳಿಯ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯವಾಗಿ ಬಿದ್ದಿರುತ್ತದೆ. ಆದ್ದರಿಂದ, ಇಲ್ಲಿ ಆಗಬಹುದಾದದ್ದು ಏನೆಂದರೆ, ಪುಡಿಗಾಸಿಗಾಗಿ ಅತ್ತ ಹೊರಗಿನವರಿಗೆ ಕಣಿವೆ ಭೂಮಿ ಮಾರಿ ಇದ್ದದ್ದನ್ನು ಕಳೆದುಕೊಳ್ಳುವ ಮತ್ತು ಆ ಪುಡಿಗಾಸು ಇತ್ತ ಕಣಿವೆಯಿಂದ ಸೋರಿ ಹೋಗುವ ಒಂದೇ ಒಂದು ಬದಲಾವಣೆ. ಹಾಗಾಗಿ, ಇಂತಹ ಬದಲಾವಣೆಯಿಂದಾಗಿ ಅತ್ತ ಕಿಂಚಿತ್ “ಅಭಿವೃದ್ಧಿ”ಯೂ ಇಲ್ಲ, ಇತ್ತ ಉದ್ಯೋಗಗಳೂ ಹೆಚ್ಚುವುದಿಲ್ಲ.
ಇನ್ನೊಂದು ಕಡೆಯಲ್ಲಿ, ಎಷ್ಟು ಭೂಮಿ ಕೈ ಬದಲಾಯಿಸಿತೊ ಅದರಲ್ಲಿ, ಈ ಬದಲಾವಣೆಗೆ ಮೊದಲು ನಡೆಯುತ್ತಿದ್ದ ಅಷ್ಟೊ ಇಷ್ಟೊ ಚಟುವಟಿಕೆಗಳು ಕೈ ಬದಲಾವಣೆಯ ಕಾರಣದಿಂದಾಗಿ ನಿಂತು ಹೋಗುತ್ತವೆ. ಏಕೆಂದರೆ, ಹೊರಗಿನ ಖರೀದಿದಾರರು ಭೂಮಿಯ ಬೆಲೆ ಏರಿದಾಗ ಮಾರುವ, ಇಲ್ಲವೇ, ಕಣಿವೆಯ ಆ ಭೂಮಿಲ್ಲಿ ತಮಗೊಂದು ಬೇಸಿಗೆ ವಿಶ್ರಾಂತಿ ಧಾಮ ನಿರ್ಮಿಸಿಕೊಳ್ಳುವ ಹವಣಿಕೆಯಲ್ಲಿರುತ್ತಾರೆ.
ಹೀಗೆ ಯಾವ ರೀತಿಯಲ್ಲಿ ನೋಡಿದರೂ, ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಳಿಸುವ ಮತ್ತು ಹೊರಗಿನವರು ಭೂಮಿ ಕೊಳ್ಳುವುದರ ಮೇಲೆ ಇದ್ದ ನಿರ್ಬಂಧವನ್ನು ರದ್ದು ಮಾಡುವ ಕ್ರಮಗಳಿದಿಂದಾಗಿ ಅಲ್ಲಿ ಉದ್ಯೋಗಾವಕಾಶಗಳು ಕಿಂಚಿತ್ತೂ ಹೆಚ್ಚುವುದಿಲ್ಲ. ಬದಲಾಗಿ, ಕಣಿವೆಯ ಭೂಮಿಯು ದಿಲ್ಲಿಯ ಅಥವಾ ಮುಂಬೈನ ಶ್ರೀಮಂತರ ಕೈಗೆ ಹಸ್ತಾಂತರವಾಗುತ್ತಿದ್ದಂತೆಯೇ ಕಣಿವೆಯಲ್ಲಿ ಉದ್ಯೋಗಾವಕಾಶಗಳು ಬಹುತೇಕ ಕುಸಿಯುತ್ತವೆ.
ವಿಶೇಷ ಸ್ಥಾನಮಾನ ರದ್ದು ಮಾಡುವ ಕ್ರಮದಿಂದ ಕಾಶ್ಮೀರದ ಅಭಿವೃದ್ಧಿ ನಿಜಕ್ಕೂ ಯಶಸ್ವಿಯಾಗುವ ಸಂಭವ ಇತ್ತು ಎನ್ನುವುದಾದರೆ, ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನ ರದ್ದು ಮಾಡುವ ಮೊದಲೇ ಇಬ್ಬರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ರಾಜ್ಯದ ರಾಜಕೀಯ ನಾಯಕರನ್ನು ಬಂಧಿಸುವುದು ಅಗತ್ಯವೆಂದು ಭಾವಿಸುತ್ತಿರಲಿಲ್ಲ. ಹಾಗಾಗಿ, ವಿಶೇಷ ಸ್ಥಾನಮಾನದ ರದ್ದತಿಯನ್ನು ಅನಿವಾರ್ಯವಾಗಿ ಹಿಂಬಾಲಿಸುವ ಹಿಂಸೆಯಿಂದಾಗಿ ಅಲ್ಲಿ ಜನರಿಗೆ ಅನ್ನ ಒದಗಿಸುವ ಪ್ರಧಾನ ಚಟುವಟಿಕೆಯಾಗಿದ್ದ ಪ್ರವಾಸೋದ್ಯಮವೂ ಬಹಳ ದಿನಗಳವರೆಗೆ ಕುಂಠಿತಗೊಳ್ಳುವುದರಿಂದ ಕಾಶ್ಮೀರಿ ಯುವಕರಿಗೆ ಉದ್ಯೋಗ ಲಭಿಸುವುದು ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈಗ “ಅಭಿವೃದ್ಧಿ”ಯ ಘೋಷಣೆ ಮೊಳಗುತ್ತಿದೆ. ಹಾಗಾದರೆ, ಕೇಂದ್ರ ಸರ್ಕಾರವು ಈಗ ಏನನ್ನು ಮಾಡಿದೆಯೋ ಅದನ್ನು ಮಾಡಿರುವುದಾದರೂ ಏಕೆ? ಸಾಮಾನ್ಯವಾದ ಒಂದು ಉತ್ತರವೆಂದರೆ, ಆದು, ಹಿಂದುತ್ವವಾದಿಗಳ ಬಹಳ ವರ್ಷಗಳ ಬೇಡಿಕೆ. ಅವರ ಕಣ್ಣು ದೇಶದ ಏಕ ಮಾತ್ರ ಮುಸ್ಲಿಂ ಬಾಹುಳ್ಯದ ರಾಜ್ಯದ ಜನ ಸಂಖ್ಯೆಯ ಸಂಯೋಜನೆಯನ್ನು ಇಸ್ರೇಲ್ ಪ್ಯಾಲೆಸ್ತೀನಿಯರ ಜಮೀನು ಕಬಳಿಸುತ್ತಿರುವ ರೀತಿಯಲ್ಲಿ ಬದಲಿಸುವತ್ತ ನೆಟ್ಟಿದೆ.
ಇದು ನಿಜವಿದೆಯಾದರೂ ಸಹ, ಮತ್ತೊಂದು ಸಂಭವನೀಯ ಉದ್ದೇಶವನ್ನು ನಾವು ಕಡೆಗಣಿಸುವಂತಿಲ್ಲ. ವಾಸ್ತವವಾಗಿ, ಈ ಸರ್ಕಾರವು ಹಿಂದುತ್ವ-ಕಾರ್ಪೋರೇಟ್‌ಗಳ ಒಂದು ಮೈತ್ರಿ ಕೂಟವೇ. ಹಾಗಾಗಿ, ಅದು ಕೈಗೊಳ್ಳುವ ಎಲ್ಲ ಕಾರ್ಯಗಳೂ ಕಾರ್ಪೋರೇಟ್‌ಗಳ ಹಿತಾಸಕ್ತಿಯನ್ನು ಈಡೇರಿಸುವ ಉದ್ದೇಶದಿಂದ ಕೂಡಿವೆ. ಕಾಶ್ಮೀರ ಕಣಿವೆಯ ಬಾಗಿಲನ್ನು ಕಾರ್ಪೋರೇಟ್ ಆಶ್ರಯದಾತರಿಗೆ ತೆರೆದಿರುವುದು ಅಲ್ಲಿ ಉತ್ಪಾದನೆ ಸಂಬಂಧಿತ ಆರ್ಥಿಕ ಚಟುವಟಿಕೆ ಹೆಚ್ಚಿಸುವುದಕ್ಕಲ್ಲ, ಬದಲಿಗೆ ರಿಯಲ್ ಎಸ್ಟೇಟ್ ಬೆಳೆಸಲಿಕ್ಕೆ ಅಥವಾ ಕೇವಲ ಭೂಮಿಯ ಬೆಲೆಗಳಲ್ಲಿ ಜೂಜುಗಾರಿಕೆಯೂ ಒಂದು ಹೆಚ್ಚುವರಿ ಉತ್ತೇಜನೆಯಾಗಿದೆ. ಇಂತಹ ರಿಯಲ್ ಎಸ್ಟೇಟ್ ಚಟುವಟಿಕೆಗಳು ಉದ್ಯೋಗಾವಕಾಶಗಳ ಮಟ್ಟವನ್ನೇನೂ ಹೆಚ್ಚಿಸುವುದಿಲ್ಲ. ಮಾರುವ ಮುನ್ನ ಆ ಭೂಮಿ ಉತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದರಂತೂ ಅದು ಉದ್ಯೋಗಾವಕಾಶವನ್ನು ಕಡಿತ ಮಾಡುತ್ತದೆ.
ಈ ರೀತಿಯಾಗಿ, ಕಣಿವೆಯ ಬಾಗಿಲನ್ನು ಕೆಲವು ಜೂಜುಕೋರ ಭೂಮಿ ವ್ಯವಹಾರಿಗಳಿಗೆ ಮತ್ತು ರಿಯಲ್ ಎಸ್ಟೇಟ್ ಮಂದಿಗೆ ತೆರೆಯುವುದರಿಂದ, ಅದರಿಂದಾಗುವ ಪರಿಸರ ಮಾಲಿನ್ಯವನ್ನು ವಿವರಿಸುವ ಅಗತ್ಯವಿಲ್ಲ, ಜತೆಗೆ, ಈ ಮಂದಿ ಕಾಶ್ಮೀರದ ಮುಖವನ್ನು ಅಂದ, ಚೆಂದದಿಂದಾಗಿಯೇ ಶಾಶ್ವತವಾಗಿ ವಿರೂಪಗೊಳಿಸುತ್ತಾರೆ. ಇದರಿಂದ ಕೆಲವು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಕಾಶ್ಮೀರದ ಅರ್ಥವ್ಯವಸ್ಥೆಯು ಜೂಜುಕೋರರ ಮತ್ತು ಭೂಗಳ್ಳ ಕದೀಮರ ಬೇಟೆಯ ತಾಣವಾಗಿ ಪರಿವರ್ತನೆಗೊಂಡು, ಇಂತಹ ಧಂಧೆಗಳಿಗೆ ಅಂಟಿಕೊಂಡಿರುವ ಕೊಲೆ ಸುಲಿಗೆ ಮುಂತಾದ ಅಪರಾಧಗಳಲ್ಲಿ ತೀವ್ರ ಉಬ್ಬರವೂ ಅನಿವಾರ್ಯವಾಗಿ ಬರುತ್ತದೆ. ಈಗಾಗಲೇ ತಾಳಲಾರದ ಮಟ್ಟದಲ್ಲಿರುವ ಭಯೋತ್ಪಾದಕರ ಹಾವಳಿ ಮತ್ತಷ್ಟು ಹೆಚ್ಚುವುದರೊಂದಿಗೆ, ಅದಕ್ಕೆ ಈ ರಿಯಲ್ ಎಸ್ಟೇಟ್ ಸಂಬಂಧಿತ ಅಪರಾಧಗಳು ತುಪ್ಪ ಸುರಿಯುತ್ತವೆ. ನಿಜ ಹೇಳಬೇಕೆಂದರೆ, ಈ ಎರಡೂ ರೀತಿಯ ಹಿಂಸಾಚಾರಗಳು ಒಂದಕ್ಕೊಂದು ಪೂರಕವಾಗುತ್ತವೆ, ಬೇರೆ ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ವ್ಯವಹಾರಗಳು ಮತ್ತು ಭಯೋತ್ಪಾದನೆಗಳು ಒಂದಕ್ಕೊಂದು ಪೂರಕವಾಗಿರುವ ರೀತಿಯಲ್ಲಿ ಇದು, ದೇಶದಲ್ಲಿ ಪಾಳೇಗಾರಿ-ವಿರೋಧಿ ಭೂಸುಧಾರಣೆಗಳಿಗೆ ಮುನ್ನುಡಿ ಬರೆದ ರಾಜ್ಯಕ್ಕೆ ಒದಗಿರುವ ಒಂದು ದುರ್ವಿಧಿ. ಆದರೆ ಅಮಿತ್ ಷಾ ಖಂಡಿತವಾಗಿಯೂ ಈ ದುರ್ವಿಧಿಯನ್ನೇ “ಅಭಿವೃದ್ಧಿ” ಎನ್ನುತ್ತಾರೆ!
(ಜನಶಕ್ತಿಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಲಿರುವ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243