ದಿನದ ಸುದ್ದಿ

ದಾವಣಗೆರೆ | ‘ಜತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ರಂಗ ಬಳಗ ಮನವಿ

Published

on

ಸುದ್ದಿದಿನ, ದಾವಣಗೆರೆ: ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ‘ಜತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದವರ ಮೇಲೆ ಕಠಿಣ ಕ್ರಮ ಕೈಗೊಂಡು ರಂಗಭೂಮಿಯ ಸ್ವಾತಂತ್ರ್ಯ ಎತ್ತಿ ಹಿಡಿಯಲು ರಂಗ ಬಳಗವು ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ನಾಟಕಕ್ಕೆ ಅಡ್ಡಿಪಡಿಸಿದ ಶ್ರೀಧರ ಆಚಾರ್‌, ಮಂಜಣ್ಣ ಹಾಗೂ ಸಂಜಯ್‌ ಡೊಂಗ್ರೆ ಎಂಬವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ರಂಗಭೂಮಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಸೌಹಾರ್ದವನ್ನು ಸಾರುವ ‘ಜತೆಗಿರುವನು ಚಂದಿರ’ ಎಂಬ ನಾಟಕದ ಪ್ರದರ್ಶನವನ್ನು ಶಿವಮೊಗ್ಗದ ರಂಗ ಬೆಳಕು ತಂಡವು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜುಲೈ 3ರಂದು ಹಮ್ಮಿಕೊಂಡಿತ್ತು. ಈ ನಾಟಕವನ್ನು ಮೂವರು ಕಿಡಿಗೇಡಿಗಳು ಅರ್ಧದಲ್ಲಿಯೇ ನಿಲ್ಲಿಸುವ ಮೂಲಕ ಸೌಹಾರ್ದಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಂಗಭೂಮಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.

ನಾಟಕವನ್ನು ನೋಡದೇ, ಅದರಲ್ಲಿ ಇರುವ ವಿಚಾರ, ಸಂದೇಶಗಳನ್ನು ಅರ್ಥಮಾಡಿಕೊಳ್ಳದೇ ಪೂರ್ವಗ್ರಹ ಪೀಡಿತರಾಗಿ ಅಡ್ಡಿಪಡಿಸಿರುವುದು ರಂಗಭೂಮಿಯಲ್ಲಿ ದುಡಿಯವ ರಂಗಕರ್ಮಿಗಳಿಗಷ್ಟೇ ಅಲ್ಲದೇ ರಂಗಾಸಕ್ತರಿಗೂ, ಸೌಹಾರ್ದ ಬಯಸುವ ಎಲ್ಲರಿಗೂ ಆತಂಕವನ್ನು ಸೃಷ್ಟಿಸಿದೆ.

ಯಾವುದೇ ಕಲಾ ಪ್ರಕಾರಗಳಲ್ಲಿ ಆಕ್ಷೇಪಾರ್ಹ ವಿಚಾರಗಳಿದ್ದರೆ ಅದನ್ನು ಎತ್ತಿ ತೋರಿಸುವ, ಚರ್ಚೆ, ಸಂವಾದ ಮಾಡುವ, ಅಲ್ಲೂ ಸರಿಕಾಣದೇ ಇದ್ದರೆ ಕಾನೂನು ಹೋರಾಟ ಮಾಡುವ ಹಕ್ಕುಗಳು ಎಲ್ಲರಿಗೂ ಇವೆ. ‘ಜತೆಗಿರುವನು ಚಂದಿರ’ ನಾಟಕದಲ್ಲಿ ಆಕ್ಷೇಪಾರ್ಹ ವಿಚಾರಗಳು ಯಾವುದೂ ಇರಲಿಲ್ಲ. ಆದರೂ ಅಡ್ಡಿ ಪಡಿಸಿರುವುದು ಸಮಾಜ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎ.ಬಿ. ರಾಮಚಂದ್ರಪ್ಪ,ಬಿ.ಎನ್. ಮಲ್ಲೇಶ್,ಬಲ್ಲೂರು ರವಿಕುಮಾರ್,ಹೆಗ್ಗೆರೆ ರಂಗಪ್ಪ,,ಅನಿಸ್ ಪಾಷಾ,ಸುಧಾ ಎಚ್.ಎನ್.,ಎಸ್. ಹಾಲಪ್ಪ,,ಸಿದ್ದರಾಜು ಎಸ್.ಎಸ್, ದೇವೇಂದ್ರಪ್ಪ ಕೆ, ಅಣ್ಣಪ್ಪ,ಇಮ್ತಿಯಾಜ್ ಹುಸೇನ್,ಕೃಷ್ಣಪ್ಪ ನವಿಲೆಹಾಳ್,ಜಯಣ್ಣ ಜಾಧವ್,ಎಸ್ ಎಸ್. ಸಿದ್ದರಾಜು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version