ಅಂತರಂಗ
ಅಕ್ಷರ ಮೋಡಿಗಾರನ ಹುಟ್ಟುಹಬ್ಬದ ಸಂದರ್ಭದಲ್ಲಿ
- ವಿವೇಕಾನಂದ. ಹೆಚ್.ಕೆ
(ಸೆಪ್ಟೆಂಬರ್ 8 ರಂದು ಪೂರ್ಣ ಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬ)
ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಹಾಗೆಯೇ ನನಗೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರು ಸಹ ಅದೇರೀತಿ ಓದುಗರಲ್ಲಿ ಮೋಡಿ ಮಾಡಿದ್ದಾರೆ. ಇದು ಇಬ್ಬರ ನಡವಿನ ಹೋಲಿಕೆಯಲ್ಲ. ಇಬ್ಬರದೂ ಬೇರೆ ಬೇರೆ ಕ್ಷೇತ್ರ. ಜನಾಕರ್ಷಣೆಯ ದೃಷ್ಟಿಯಿಂದ ಮಾತ್ರ ಹೇಳಿದ್ದು.
ಕನ್ನಡ ಸಾಹಿತ್ಯದಲ್ಲಿ ಆಗಿನ ಸಂದರ್ಭದಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದ, ಸ್ವತಃ ಉತ್ತಮ ಬರಹಗಾರರಾಗಿದ್ದರೂ ಲಂಕೇಶ್ ಅವರು ತೇಜಸ್ವಿ ಬರಹಗಳ ಬಗ್ಗೆ ಬರೆಯುತ್ತಾ, ಅವರ ಬರಹದ ಬಗ್ಗೆ ನನಗೆ ಈಗಲೂ ಅಸೂಯೆ ಕಾಡುತ್ತದೆ. ಹಾಗೆ ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ ಎಂಬ ಅರ್ಥದಲ್ಲಿ ಅವರನ್ನು ಹೊಗಳುತ್ತಾರೆ. ಸಾಹಿತ್ಯದ ಸಹಜತೆ ಕಾಪಾಡುತ್ತಾ, ಬದುಕಿನ ಸ್ವಾಭಾವಿಕತೆಯನ್ನು ತನ್ನ ನಡವಳಿಕೆಯಾಗಿ ರೂಪಿಸಿಕೊಂಡು ಅದನ್ನು ಅಕ್ಷರಗಳಿಗೆ ಇಳಿಸಿ ಸಾಮಾನ್ಯ ಓದುಗರ ಮನದಲ್ಲಿ ಮನೆ ಮಾಡಿದ ಅಪರೂಪದ ಬರಹಗಾರ ತೇಜಸ್ವಿ.
ಹುಚ್ಚು ಕನಸುಗಳನ್ನು ಕಾಣುತ್ತಾ, ಹುಚ್ಚುಚ್ಚಾಗಿ ಬದುಕುತ್ತಾ, ಹುಚ್ಚು ಕುತೂಹಲವನ್ನು ಸರಿಯಾದ ಭಾಷೆಯ ಕ್ರಮದಲ್ಲಿ ಬರೆದು ಹುಚ್ಚಿನ ಅಮಲಿನಲ್ಲಿ ಬದುಕಿನ ಸವಿಯನ್ನು ಉಂಡು ಮತ್ತು ಓದುಗರಿಗೆ ಉಣಬಡಿಸಿದ ಅದ್ಬುತ ಬರಹಗಾರ. ಬೇರೆಯವರಿಗೆ ಅವರ ನಡವಳಿಕೆ ಹುಚ್ಚುತನದಂತೆ ಭಾಸವಾದರೂ ಇತರರನ್ನು ಅವರು ಹುಚ್ಚರಂತೆ ಕಂಡಿರಬೇಕು.
ಹಾಡಿನ ಮಾಂತ್ರಿಕ, ಸಂಗೀತ ಮಾಂತ್ರಿಕ,
ಮಾತಿನ ಮಾಂತ್ರಿಕ, ಕಲೆಯ ಮಾಂತ್ರಿಕ,
ಕ್ರೀಡಾ ಮಾಂತ್ರಿಕ ಎಂಬಂತೆ ಸಾಹಿತ್ಯದ ಮಾಂತ್ರಿಕ ತೇಜಸ್ವಿ.
ಜಾನ್ ಕೀಟ್ಸ್, ವರ್ಡ್ಸ್‌ವರ್ತ್ ಮುಂತಾದ ಪಾಶ್ಚಿಮಾತ್ಯ ಅದ್ಭುತ ಸಾಹಿತಿಗಳಂತೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಪ್ರೀತಿ ಸಂಘರ್ಷ ಒಡನಾಟಗಳ ಕುರಿತು, ಪ್ರಾಣಿ ಪಕ್ಷಿ ಕೀಟಗಳ ಚಲನವಲನಗಳ ಅತ್ಯಂತ ಆಸಕ್ತಿ ಮತ್ತು ಕುತೂಹಲಕಾರಿ ನಿರೂಪಣೆಯನ್ನು, ವಿದೇಶಿ ಸಾಹಿತ್ಯದ ಅತ್ಯುತ್ತಮ ಸಾಹಸ ರೋಮಾಂಚಕಾರಿ ಮಾಹಿತಿಯ ಸಾಹಿತ್ಯವನ್ನು ಕನ್ನಡದ ಸೊಗಡಿನ ಸಾಮಾನ್ಯ ಜನರಿಗೆ ಮನಮುಟ್ಟುವ ಅನುವಾದವನ್ನು, ವೈಚಾರಿಕ ಪ್ರಜ್ಞೆ, ವ್ಯವಸ್ಥೆಯ ಬಂಡಾಯ, ಸಮಾಜವಾದಿ ಚಿಂತನೆಯ ಅನೇಕ ಕಥನಗಳನ್ನು, ಕನ್ನಡದ ಉಳಿವು, ರೈತ ಶೋಷಣೆ ಮತ್ತು ಅದಕ್ಕಾಗಿ ಚಳವಳಿ ರೂಪಿಸುವ ಹೋರಾಟಗಳನ್ನು, ತತ್ವಜ್ಞಾನಿಯಂತೆ ಮನುಷ್ಯನ ಮಾನಸಿಕ ತಾಕಲಾಟಗಳು ಮತ್ತು ಸಾಮಾಜಿಕ ಜೀವನದಲ್ಲಿ ಧಾರ್ಮಿಕ ಸಂಘರ್ಷಗಳ ಬಗ್ಗೆಯೂ ಸೇರಿದಂತೆ ಎಲ್ಲವನ್ನೂ ಅಕ್ಷರ ರೂಪಕ್ಕೆ ಇಳಿಸಿ ಜನರ ಚಿಂತನೆ ಮಂಥನಗಳಿಗೆ ಕಾರಣರಾಗಿದ್ದರು.
ಹಾಗೆಂದು ಅವರ ಸಾಹಿತ್ಯ ಎಲ್ಲಕ್ಕಿಂತ ಶ್ರೇಷ್ಠ ಎಂದು ಅರ್ಥವಲ್ಲ. ಆದರೆ ಬರಹಗಾರನ ಬದುಕಿನ ಪ್ರಾಮಾಣಿಕತೆ, ಅನುಭವಗಳ ದಾಖಲಾತಿಯ ನಿಷ್ಠೆ, ಮುಖವಾಡವಿಲ್ಲದ ಸಹಜತೆಯ ಕಾರಣದಿಂದ ಅತ್ಯಂತ ಆಪ್ತವಾಗುತ್ತದೆ. ಹಾಸ್ಯ ವ್ಯಂಗ್ಯ ಲೇವಡಿಗಳು ಪ್ರತಿ ವಿಷಯದಲ್ಲು ನಗು ಉಕ್ಕಿಸಿದರು ಇದು ನಿಜ ಎಂದು ನಮ್ಮ ಮನಸ್ಸಿಗೆ ಅನಿಸುತ್ತದೆ. ಅಷ್ಟೊಂದು ಸಹಜತೆ ಅವರ ಬರಹಗಳಲ್ಲಿ ಮೂಡಿ ಬಂದಿದೆ.
ತೇಜಸ್ವಿಯವರ ಮತ್ತೊಂದು ವಿಶೇಷತೆಯೆಂದರೆ ಪಂಥಗಳ ಆಚೆ ಎಲ್ಲಾ ವರ್ಗದವರನ್ನು ತಲುಪಿದ್ದು. ಗಂಭೀರ ಸಾಹಿತ್ಯ ಹೊರತುಪಡಿಸಿ ಸಾಹಿತ್ಯಾಸಕ್ತಿಯ ಬಹುತೇಕರು ಮತ್ತು ಸಾಮಾನ್ಯ ಓದುಗರ ಆಯ್ಕೆಯಲ್ಲಿ ತೇಜಸ್ವಿಯವರ ಒಂದಾದರು ಕೃತಿ ಇದ್ದೇ ಇರುತ್ತದೆ. ಅಲ್ಲದೆ, ಅಧಿಕಾರ ದಾಹವಿಲ್ಲದ, ಆಡಂಬರ ಪ್ರದರ್ಶನವಿಲ್ಲದ, ಕೃತಕತೆಯ ವಿಡಂಬನೆ ಹಾಗು ಅವರ ಮಾತಿನ ಶೈಲಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಡು ನೆನಪಾದಾಗ ಕಾಡುವ ತೇಜಸ್ವಿ…….
ಈ ಅಕ್ಷರ ಮೋಡಿಗಾರನ ಹುಟ್ಟುಹಬ್ಬದ ಸಂದರ್ಭದಲ್ಲಿ …
ಸುದ್ದಿದಿನ.ಕಾಂ|ವಾಟ್ಸಾಪ್|9980346243