ದಿನದ ಸುದ್ದಿ

ಸುದ್ದಿಮನೆಯ ಪ್ರಾಮಾಣಿಕತೆ, ಸರ್ಕಾರದ ಭ್ರಷ್ಟಾಚಾರ

Published

on

  • ನಾ ದಿವಾಕರ

ನ್ನಡದ ಸುದ್ದಿಮನೆಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರೆ ಅವುಗಳು ಬಿತ್ತರಿಸುವ ವಾಸ್ತವಗಳನ್ನೂ ಜನರು ನಂಬುವುದಿಲ್ಲ. ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಅಧಿಕಾರ ಪೀಠದ ವಂದಿಮಾಗಧರಂತೆ, ಭಟ್ಟಂಗಿಗಳಂತೆ ವರ್ತಿಸುವ ಸುದ್ದಿಮನೆಗಳಿಗೆ ಅದೇ ಅಧಿಕಾರ ಪೀಠದ ವಿರುದ್ದ ಮಾತನಾಡಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆಯೂ ಇರಬೇಕು.

ಹಾಗೆಯೇ ತಮ್ಮ ಅನುಕೂಲಕ್ಕಾಗಿ, ಲಾಭಕ್ಕಾಗಿ ಜನಸಾಮಾನ್ಯರ ನೈಜ ಕಾಳಜಿಯನ್ನೂ ಕಡೆಗಣಿಸಿ ಅಧಿಕಾರಸ್ಥರ ಪಾದಪೂಜೆ ಮಾಡುವಾಗಲೂ, ಅದೇ ಪಾದಗಳು ತಮ್ಮನ್ನು ತುಳಿಯಲೂ ಹೇಸುವುದಿಲ್ಲ ಎನ್ನುವ ಪ್ರಜ್ಞೆಯೂ ಇರಬೇಕು. ಭ್ರಷ್ಟಾಚಾರ ನಮ್ಮ ವ್ಯವಸ್ಥೆಯ ಒಂದು ಅಂಗ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆಯೇ , ಭ್ರಷ್ಟಾಂಗವೂ ನಮ್ಮನ್ನು ಆಳುತ್ತಿದೆ.

ಜಾತಿವಾದ, ಕೋಮುವಾದ, ಮತಾಂಧತೆ, ಭ್ರಷ್ಟತೆ, ಅಪಾರದರ್ಶಕ ನೀತಿಗಳು, ಜನ ವಿರೋಧಿ ಶಾಸನಗಳು, ದುಡಿವ ವರ್ಗಗಳ ಬದುಕು ಕಸಿಯುವ ಕಾಯ್ದೆಗಳು, ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳು, ಆರೋಗ್ಯ ವ್ಯವಸ್ಥೆಯಲ್ಲಿನ ಲೋಪ ದೋಷ ಅವ್ಯವಹಾರ ದುರಾಡಳಿತ ಇತ್ಯಾದಿ, ಶಿಕ್ಷಣ ಕ್ಷೇತ್ರದಲ್ಲಿನ ಲಾಭಕೋರತನ ದುರವಸ್ಥೆ ವ್ಯಾಪಾರಿ ಮನೋಭಾವ ಡೊನೇಷನ್ ದಂಧೆ, ಕೊರೋನಾ ನಿರ್ವಹಣೆಯಲ್ಲಿ ಸರ್ಕಾರದ ಬೇಜವಾಬ್ದಾರಿ ಧೋರಣೆ ಕೆಟ್ಟ ನಿರ್ವಹಣೆ ಖಾಸಗಿ ಆಸ್ಪತ್ರೆಗಳ ದಂಧೆ, ತರಗೆಲೆಗಳಂತೆ ಉದುರಿಹೋಗುತ್ತಿರುವ ಅಮಾಯಕ ಜೀವಗಳು, – ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭ್ರಷ್ಟಾಚಾರ ತೃಣ ಸಮಾನ ಎನಿಸಿ ಬಿಡುತ್ತದೆ.

ಈ ಸಮಸ್ಯೆಗಳು ಎದುರಾದಾಗಲೆಲ್ಲಾ ಆಳುವವರಿಗೆ ಬೃಹತ್ ಗಾತ್ರದ ಬಕೆಟ್ ಹಿಡಿದು ಜನಸಾಮಾನ್ಯರನ್ನು ವಂಚಿಸುವ , ಯಾವುದೋ ಸಿನಿಮಾ ನಟರ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುತ್ತಾ ಜನರ ಗಮನವನ್ನು ಬೇರೆಡೆಗೆ ಹರಿಸುವ ಸುದ್ದಿಮನೆಗಳಿಗೆ ನೈತಿಕ ಹೊಣೆಗಾರಿಕೆ ಮತ್ತು ಪ್ರಜ್ಞೆಯೂ ಇರಬೇಕಲ್ಲವೇ. ಕನ್ನಡದ ಜನತೆ ಸುದ್ದಿಮನೆ ಎಂದರೆ ಬಕೆಟ್ ಗಟ್ಟಲೆ ಉಗಿಯುವಷ್ಟು ಮಟ್ಟಿಗೆ ವಾಹಿನಿಗಳು ಕುಲಗೆಟ್ಟು ಹೋಗಿವೆ.

ಕಳೆದ ಆರು ತಿಂಗಳಲ್ಲಿ ಈ ಸುದ್ದಿಮನೆಗಳ ನಗ್ನ ನರ್ತನವನ್ನು ಕಂಡು ಬೇಸತ್ತಿರುವ ಜನರು ಪರ್ಯಾಯ ಮಾಧ್ಯಮಗಳ ಶೋಧದಲ್ಲಿರುವುದೂ ಹೌದು. ಕೊರೋನಾಗಿಂತಲೂ ವ್ಯಾಪಕವಾಗಿ ಕೋಮುದ್ವೇಷ ಹರಡುವಲ್ಲಿ ಸುದ್ದಿಮನೆಗಳು ನಿರ್ವಹಿಸಿದ ಪಾತ್ರವನ್ನು ಮರೆಯಲೂ ಆಗದು ಕ್ಷಮಿಸಲೂ ಆಗದು. ವಲಸೆ ಕಾರ್ಮಿಕರು ಬೀದಿಪಾಲಾದಾಗ ಅವರನ್ನು ಬಿಹಾರಿ ಮುಂಬಯಿ ಗುಜರಾತ್ ಚೆನ್ನೈ ಬಾಂಬುಗಳೆಂದು ಕರೆಯುವ ಮೂಲಕ ಸುದ್ದಿಮನೆಗಳು ತಮ್ಮೊಳಗಿನ ಹೇಸಿಗೆಯನ್ನು ರಾಜ್ಯದುದ್ದಕ್ಕೂ ಹರಡಿವೆ.

ಸೋಂಕಿತರಲ್ಲಿ ಮತೀಯ ಅಸ್ಮಿತೆ ಹೆಕ್ಕಿ ತೆಗೆದು ಇಡೀ ಸಮುದಾಯಗಳನ್ನು ಅವಹೇಳನ ಮಾಡುವ ಮೂಲಕ ತಮ್ಮ ಅಂತರಂಗದ ಕೊಳಕಿನ ಹೊಳೆಯನ್ನೇ ಹರಿಸಿವೆ. ಈಗ ಸಮಸ್ತ ರಾಜ್ಯದ. ರೈತ ಸಮುದಾಯ ಮತ್ತು ಹತ್ತಾರು ಸಂಘಟನೆಗಳು ಕೃಷಿ ಮಸೂದೆಯ ವಿರುದ್ಧ , ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವಾಗ ಸಿನಿಮಾ ನಟಿಯರ ಡ್ರಗ್ಸ್ ದಂಧೆಯ ಹಿಂದೆ ವಾಲಾಡುತ್ತಿವೆ.

ಇಷ್ಟೆಲ್ಲಾ ಅನೈತಿಕತೆಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಪ್ರಾಮಾಣಿಕತೆಯ ವಾರಸುದಾರರಂತೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ಜನತೆಗೆ ವಿಶ್ವಾಸ ಮೂಡುವುದಾದರೂ ಹೇಗೆ. ಅಮಾಯಕ ಪ್ರಜೆಗಳ ಮೇಲೆ , ಜನಪರ ಹೋರಾಟಗಾರರ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಾಗ, ಸರ್ಕಾರದ ದಬ್ಬಾಳಿಕೆ ಕಂಡಾಗ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ ಸಂಭ್ರಮಿಸಿದ ಸುದ್ದಿ ಮನೆಗಳು ತಮ್ಮ ವಿರುದ್ಧವೇ ಸರ್ಕಾರ ತಿರುಗಿಬಿದ್ದಾಗ ಅಬ್ಬೇಪಾರಿಗಳಂತೆ ಕಾಣುತ್ತವೆ‌.

ಪವರ್ ಟಿವಿ ಶ್ಲಾಘನೀಯ ಕೆಲಸವನ್ನೇ ಮಾಡಿದ್ದರೂ ಈ ಸ್ಥಿತಿ ತಲುಪಿದೆ. ಅಂದು ಅಮಾಯಕ ಅಸಹಾಯಕ ಪ್ರಜೆಗಳ ಪರ ದನಿ ಎತ್ತಿ , ಆಕ್ರಂದನದ ದನಿಗೆ ದನಿಗೂಡಿಸಿ ಇದೇ ಸುದ್ದಿಮನೆಗಳಿಂದ ದೇಶದ್ರೋಹಿ ಪಟ್ಟ ಪಡೆದ ಪ್ರಬುದ್ಧ ಮನಸುಗಳೇ ಇಂದು ಪೊಲೀಸ್ ಮತ್ತು ಸರ್ಕಾರದ ದೌರ್ಜನ್ಯಕ್ಕೊಳಗಾದ ಸುದ್ದಿಮನೆ, ಪವರ್ ಟಿವಿ ಪರವಾಗಿಯೂ ದನಿ ಎತ್ತುತ್ತಿವೆ. ದುರಂತ ಎಂದರೆ ಇತರ ಸುದ್ದಿಮನೆಗಳು ಇದರ ಪರಿವೆಯೇ ಇಲ್ಲವೇನೋ ಎನ್ನುವಂತೆ ನಿರಾಳವಾಗಿವೆ.

ಬಂಡವಾಳ, ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣಕ್ಕೆ ಅಧೀನರಾಗುವ ಮುನ್ನ ಸುದ್ದಿಮನೆಗಳು ಈ ಎಲ್ಲ ಅಂಶಗಳನ್ನೂ ಗಮನಿಸಬೇಕಲ್ಲವೇ ? ಹೊಳೆ ದಾಟಿಸಲು ಬಲ್ಲವನೇ ಮುಳುಗಿಸಲೂ ಬಲ್ಲ ಅಲ್ಲವೇ ? ತಾವೇ ಹೊಳೆ ದಾಟುವ ಸಾಮರ್ಥ್ಯ ಇದ್ದೂ ಇಲ್ಲದಂತೆ ಆಳುವವರ ಭಟ್ಟಂಗಿಗಳಂತೆ ವರ್ತಿಸುವುದು ಎಷ್ಟು ಸರಿ ?ಸುದ್ದಿಮನೆಗಳ ಒಡೆತನ ಯಾವುದೋ ಒಬ್ಬ ಶಾಸಕ, ಸಂಸದ ಅಥವಾ ಆಳುವವರ ಬಾಲಂಗೋಚಿಗಳಂತಿರುವ ಕಾರ್ಪೋರೇಟ್ ಉದ್ಯಮಿಯ ಕೈಯ್ಯಲ್ಲಿರುತ್ತದೆ.

ನಿರೂಪಕರು ಸೂತ್ರದ ಬೊಂಬೆಗಳಂತೆ ಆಡುತ್ತಾರೆ. ಈ ಅಂಶಗಳ ಹೊರತಾಗಿಯೂ ರಾಜ್ಯ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯ, ರೆಹಮಾನ್ ಅವರನ್ನು ಬಂಧಿಸುವಂತಹ ಹೀನ ವರ್ತನೆ ಇವೆಲ್ಲವೂ ಖಂಡನಾರ್ಹ ಎನ್ನದೆ ವಿಧಿಯಿಲ್ಲ. ಪ್ರಬುದ್ಧ ಮನಸುಗಳು ಸಾವನ್ನು ಸಂಭ್ರಮಿಸುವುದಿಲ್ಲ. ಮತ್ತೊಬ್ಬರ ನೋವನ್ನೂ ಸಂಭ್ರಮಿಸುವುದಿಲ್ಲ. ಅನ್ಯಾಯಕ್ಕೊಳಗಾದವರ, ದೌರ್ಜನ್ಯಕ್ಕೊಳಗಾದವರ ಪರ ನಿಲ್ಲುತ್ತವೆ. ಏಕೆಂದರೆ ಈ ಮನಸುಗಳಿಗೆ ದೇಶ ಎಂದರೆ ಮನುಜರು ಕೇವಲ ಮಣ್ಣಲ್ಲ.

ಕೊನೆಯದಾಗಿ ಸುದ್ದಿಮನೆಗಳಿಗೆ ಈ ಮಾತುಗಳನ್ನು ಹೇಳಲೇಬೇಕಿದೆ 

ಸುದ್ದಿಮನೆಗಳ ಸಂಪಾದಕರೇ, ನಿಮ್ಮ ಮಾಲಿಕರು ಯಾರ ಸೇವೆಯನ್ನಾದರೂ ಮಾಡಲಿ ನೀವು ಜನಸಾಮಾನ್ಯರ ಪರ ನಿಂತು ಮಾತನಾಡಿ ಏಕೆಂದರೆ ನಿಮಗೆ ವೃತ್ತಿ ಧರ್ಮ ಎನ್ನುವುದಿದೆ. ಮಾಲಿಕರಿಗೆ ವ್ಯಾಪಾರಿ ಧರ್ಮ ಮುಖ್ಯವಾಗುತ್ತದೆ ನಿಮಗಲ್ಲ. ದೋಣಿ ನಿಮ್ಮದೇ ಆದರೂ ಅಂಬಿಗ ನಿಮ್ಮವನಾಗಲಾರ ಎನ್ನುವುದನ್ನು ನೆನಪಿಡಿ. ಇಲ್ಲವಾದರೆ ಇತಿಹಾಸದ ಕಸದ ಬುಟ್ಟಿ ಸೇರಿಬಿಡುತ್ತೀರಿ. ದೇಶ ಎಂದರೆ ಮಣ್ಣಲ್ಲ ಮನುಜರು ಎನ್ನುವುದನ್ನು ನೆನಪಿಡಿ.

ಆಗ ನಿಮ್ಮ ರಂಗಿನ ಪರದೆಗಳ ಬಣ್ಣಗಳಿಗೂ ಅರ್ಥ ಬರುತ್ತದೆ. ನಿಮ್ಮ ಏರುದನಿಯೂ ಸಾರ್ಥಕವಾಗುತ್ತದೆ. ನೀವು ಪ್ರಜಾತಂತ್ರದ ಒಂದು ಅಂಗ ಎನ್ನುವುದನ್ನು ಮರೆಯದಿರಿ. ಪ್ರಜಾತಂತ್ರ ಉಳಿದರೆ ಮಾತ್ರ ನೀವೂ ಉಳಿಯತ್ತೀರಿ. ಇಲ್ಲವಾದರೆ ಅಳಿಸಿಹೋಗುತ್ತೀರಿ. ಜನರ ನಡುವೆ ನಿಲ್ಲಿ ಜನರೊಡನೆ ನಿಲ್ಲಿ ಜನರಿಗಾಗಿ ನಿಲ್ಲಿ , ಜನ ನಿಮ್ಮೊಡನಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version