ದಿನದ ಸುದ್ದಿ
ಸುದ್ದಿಮನೆಯ ಪ್ರಾಮಾಣಿಕತೆ, ಸರ್ಕಾರದ ಭ್ರಷ್ಟಾಚಾರ
- ನಾ ದಿವಾಕರ
ಕನ್ನಡದ ಸುದ್ದಿಮನೆಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರೆ ಅವುಗಳು ಬಿತ್ತರಿಸುವ ವಾಸ್ತವಗಳನ್ನೂ ಜನರು ನಂಬುವುದಿಲ್ಲ. ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಅಧಿಕಾರ ಪೀಠದ ವಂದಿಮಾಗಧರಂತೆ, ಭಟ್ಟಂಗಿಗಳಂತೆ ವರ್ತಿಸುವ ಸುದ್ದಿಮನೆಗಳಿಗೆ ಅದೇ ಅಧಿಕಾರ ಪೀಠದ ವಿರುದ್ದ ಮಾತನಾಡಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆಯೂ ಇರಬೇಕು.
ಹಾಗೆಯೇ ತಮ್ಮ ಅನುಕೂಲಕ್ಕಾಗಿ, ಲಾಭಕ್ಕಾಗಿ ಜನಸಾಮಾನ್ಯರ ನೈಜ ಕಾಳಜಿಯನ್ನೂ ಕಡೆಗಣಿಸಿ ಅಧಿಕಾರಸ್ಥರ ಪಾದಪೂಜೆ ಮಾಡುವಾಗಲೂ, ಅದೇ ಪಾದಗಳು ತಮ್ಮನ್ನು ತುಳಿಯಲೂ ಹೇಸುವುದಿಲ್ಲ ಎನ್ನುವ ಪ್ರಜ್ಞೆಯೂ ಇರಬೇಕು. ಭ್ರಷ್ಟಾಚಾರ ನಮ್ಮ ವ್ಯವಸ್ಥೆಯ ಒಂದು ಅಂಗ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆಯೇ , ಭ್ರಷ್ಟಾಂಗವೂ ನಮ್ಮನ್ನು ಆಳುತ್ತಿದೆ.
ಜಾತಿವಾದ, ಕೋಮುವಾದ, ಮತಾಂಧತೆ, ಭ್ರಷ್ಟತೆ, ಅಪಾರದರ್ಶಕ ನೀತಿಗಳು, ಜನ ವಿರೋಧಿ ಶಾಸನಗಳು, ದುಡಿವ ವರ್ಗಗಳ ಬದುಕು ಕಸಿಯುವ ಕಾಯ್ದೆಗಳು, ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳು, ಆರೋಗ್ಯ ವ್ಯವಸ್ಥೆಯಲ್ಲಿನ ಲೋಪ ದೋಷ ಅವ್ಯವಹಾರ ದುರಾಡಳಿತ ಇತ್ಯಾದಿ, ಶಿಕ್ಷಣ ಕ್ಷೇತ್ರದಲ್ಲಿನ ಲಾಭಕೋರತನ ದುರವಸ್ಥೆ ವ್ಯಾಪಾರಿ ಮನೋಭಾವ ಡೊನೇಷನ್ ದಂಧೆ, ಕೊರೋನಾ ನಿರ್ವಹಣೆಯಲ್ಲಿ ಸರ್ಕಾರದ ಬೇಜವಾಬ್ದಾರಿ ಧೋರಣೆ ಕೆಟ್ಟ ನಿರ್ವಹಣೆ ಖಾಸಗಿ ಆಸ್ಪತ್ರೆಗಳ ದಂಧೆ, ತರಗೆಲೆಗಳಂತೆ ಉದುರಿಹೋಗುತ್ತಿರುವ ಅಮಾಯಕ ಜೀವಗಳು, – ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭ್ರಷ್ಟಾಚಾರ ತೃಣ ಸಮಾನ ಎನಿಸಿ ಬಿಡುತ್ತದೆ.
ಈ ಸಮಸ್ಯೆಗಳು ಎದುರಾದಾಗಲೆಲ್ಲಾ ಆಳುವವರಿಗೆ ಬೃಹತ್ ಗಾತ್ರದ ಬಕೆಟ್ ಹಿಡಿದು ಜನಸಾಮಾನ್ಯರನ್ನು ವಂಚಿಸುವ , ಯಾವುದೋ ಸಿನಿಮಾ ನಟರ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುತ್ತಾ ಜನರ ಗಮನವನ್ನು ಬೇರೆಡೆಗೆ ಹರಿಸುವ ಸುದ್ದಿಮನೆಗಳಿಗೆ ನೈತಿಕ ಹೊಣೆಗಾರಿಕೆ ಮತ್ತು ಪ್ರಜ್ಞೆಯೂ ಇರಬೇಕಲ್ಲವೇ. ಕನ್ನಡದ ಜನತೆ ಸುದ್ದಿಮನೆ ಎಂದರೆ ಬಕೆಟ್ ಗಟ್ಟಲೆ ಉಗಿಯುವಷ್ಟು ಮಟ್ಟಿಗೆ ವಾಹಿನಿಗಳು ಕುಲಗೆಟ್ಟು ಹೋಗಿವೆ.
ಕಳೆದ ಆರು ತಿಂಗಳಲ್ಲಿ ಈ ಸುದ್ದಿಮನೆಗಳ ನಗ್ನ ನರ್ತನವನ್ನು ಕಂಡು ಬೇಸತ್ತಿರುವ ಜನರು ಪರ್ಯಾಯ ಮಾಧ್ಯಮಗಳ ಶೋಧದಲ್ಲಿರುವುದೂ ಹೌದು. ಕೊರೋನಾಗಿಂತಲೂ ವ್ಯಾಪಕವಾಗಿ ಕೋಮುದ್ವೇಷ ಹರಡುವಲ್ಲಿ ಸುದ್ದಿಮನೆಗಳು ನಿರ್ವಹಿಸಿದ ಪಾತ್ರವನ್ನು ಮರೆಯಲೂ ಆಗದು ಕ್ಷಮಿಸಲೂ ಆಗದು. ವಲಸೆ ಕಾರ್ಮಿಕರು ಬೀದಿಪಾಲಾದಾಗ ಅವರನ್ನು ಬಿಹಾರಿ ಮುಂಬಯಿ ಗುಜರಾತ್ ಚೆನ್ನೈ ಬಾಂಬುಗಳೆಂದು ಕರೆಯುವ ಮೂಲಕ ಸುದ್ದಿಮನೆಗಳು ತಮ್ಮೊಳಗಿನ ಹೇಸಿಗೆಯನ್ನು ರಾಜ್ಯದುದ್ದಕ್ಕೂ ಹರಡಿವೆ.
ಸೋಂಕಿತರಲ್ಲಿ ಮತೀಯ ಅಸ್ಮಿತೆ ಹೆಕ್ಕಿ ತೆಗೆದು ಇಡೀ ಸಮುದಾಯಗಳನ್ನು ಅವಹೇಳನ ಮಾಡುವ ಮೂಲಕ ತಮ್ಮ ಅಂತರಂಗದ ಕೊಳಕಿನ ಹೊಳೆಯನ್ನೇ ಹರಿಸಿವೆ. ಈಗ ಸಮಸ್ತ ರಾಜ್ಯದ. ರೈತ ಸಮುದಾಯ ಮತ್ತು ಹತ್ತಾರು ಸಂಘಟನೆಗಳು ಕೃಷಿ ಮಸೂದೆಯ ವಿರುದ್ಧ , ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವಾಗ ಸಿನಿಮಾ ನಟಿಯರ ಡ್ರಗ್ಸ್ ದಂಧೆಯ ಹಿಂದೆ ವಾಲಾಡುತ್ತಿವೆ.
ಇಷ್ಟೆಲ್ಲಾ ಅನೈತಿಕತೆಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಪ್ರಾಮಾಣಿಕತೆಯ ವಾರಸುದಾರರಂತೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ಜನತೆಗೆ ವಿಶ್ವಾಸ ಮೂಡುವುದಾದರೂ ಹೇಗೆ. ಅಮಾಯಕ ಪ್ರಜೆಗಳ ಮೇಲೆ , ಜನಪರ ಹೋರಾಟಗಾರರ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಾಗ, ಸರ್ಕಾರದ ದಬ್ಬಾಳಿಕೆ ಕಂಡಾಗ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ ಸಂಭ್ರಮಿಸಿದ ಸುದ್ದಿ ಮನೆಗಳು ತಮ್ಮ ವಿರುದ್ಧವೇ ಸರ್ಕಾರ ತಿರುಗಿಬಿದ್ದಾಗ ಅಬ್ಬೇಪಾರಿಗಳಂತೆ ಕಾಣುತ್ತವೆ.
ಪವರ್ ಟಿವಿ ಶ್ಲಾಘನೀಯ ಕೆಲಸವನ್ನೇ ಮಾಡಿದ್ದರೂ ಈ ಸ್ಥಿತಿ ತಲುಪಿದೆ. ಅಂದು ಅಮಾಯಕ ಅಸಹಾಯಕ ಪ್ರಜೆಗಳ ಪರ ದನಿ ಎತ್ತಿ , ಆಕ್ರಂದನದ ದನಿಗೆ ದನಿಗೂಡಿಸಿ ಇದೇ ಸುದ್ದಿಮನೆಗಳಿಂದ ದೇಶದ್ರೋಹಿ ಪಟ್ಟ ಪಡೆದ ಪ್ರಬುದ್ಧ ಮನಸುಗಳೇ ಇಂದು ಪೊಲೀಸ್ ಮತ್ತು ಸರ್ಕಾರದ ದೌರ್ಜನ್ಯಕ್ಕೊಳಗಾದ ಸುದ್ದಿಮನೆ, ಪವರ್ ಟಿವಿ ಪರವಾಗಿಯೂ ದನಿ ಎತ್ತುತ್ತಿವೆ. ದುರಂತ ಎಂದರೆ ಇತರ ಸುದ್ದಿಮನೆಗಳು ಇದರ ಪರಿವೆಯೇ ಇಲ್ಲವೇನೋ ಎನ್ನುವಂತೆ ನಿರಾಳವಾಗಿವೆ.
ಬಂಡವಾಳ, ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣಕ್ಕೆ ಅಧೀನರಾಗುವ ಮುನ್ನ ಸುದ್ದಿಮನೆಗಳು ಈ ಎಲ್ಲ ಅಂಶಗಳನ್ನೂ ಗಮನಿಸಬೇಕಲ್ಲವೇ ? ಹೊಳೆ ದಾಟಿಸಲು ಬಲ್ಲವನೇ ಮುಳುಗಿಸಲೂ ಬಲ್ಲ ಅಲ್ಲವೇ ? ತಾವೇ ಹೊಳೆ ದಾಟುವ ಸಾಮರ್ಥ್ಯ ಇದ್ದೂ ಇಲ್ಲದಂತೆ ಆಳುವವರ ಭಟ್ಟಂಗಿಗಳಂತೆ ವರ್ತಿಸುವುದು ಎಷ್ಟು ಸರಿ ?ಸುದ್ದಿಮನೆಗಳ ಒಡೆತನ ಯಾವುದೋ ಒಬ್ಬ ಶಾಸಕ, ಸಂಸದ ಅಥವಾ ಆಳುವವರ ಬಾಲಂಗೋಚಿಗಳಂತಿರುವ ಕಾರ್ಪೋರೇಟ್ ಉದ್ಯಮಿಯ ಕೈಯ್ಯಲ್ಲಿರುತ್ತದೆ.
ನಿರೂಪಕರು ಸೂತ್ರದ ಬೊಂಬೆಗಳಂತೆ ಆಡುತ್ತಾರೆ. ಈ ಅಂಶಗಳ ಹೊರತಾಗಿಯೂ ರಾಜ್ಯ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯ, ರೆಹಮಾನ್ ಅವರನ್ನು ಬಂಧಿಸುವಂತಹ ಹೀನ ವರ್ತನೆ ಇವೆಲ್ಲವೂ ಖಂಡನಾರ್ಹ ಎನ್ನದೆ ವಿಧಿಯಿಲ್ಲ. ಪ್ರಬುದ್ಧ ಮನಸುಗಳು ಸಾವನ್ನು ಸಂಭ್ರಮಿಸುವುದಿಲ್ಲ. ಮತ್ತೊಬ್ಬರ ನೋವನ್ನೂ ಸಂಭ್ರಮಿಸುವುದಿಲ್ಲ. ಅನ್ಯಾಯಕ್ಕೊಳಗಾದವರ, ದೌರ್ಜನ್ಯಕ್ಕೊಳಗಾದವರ ಪರ ನಿಲ್ಲುತ್ತವೆ. ಏಕೆಂದರೆ ಈ ಮನಸುಗಳಿಗೆ ದೇಶ ಎಂದರೆ ಮನುಜರು ಕೇವಲ ಮಣ್ಣಲ್ಲ.
ಕೊನೆಯದಾಗಿ ಸುದ್ದಿಮನೆಗಳಿಗೆ ಈ ಮಾತುಗಳನ್ನು ಹೇಳಲೇಬೇಕಿದೆ
ಸುದ್ದಿಮನೆಗಳ ಸಂಪಾದಕರೇ, ನಿಮ್ಮ ಮಾಲಿಕರು ಯಾರ ಸೇವೆಯನ್ನಾದರೂ ಮಾಡಲಿ ನೀವು ಜನಸಾಮಾನ್ಯರ ಪರ ನಿಂತು ಮಾತನಾಡಿ ಏಕೆಂದರೆ ನಿಮಗೆ ವೃತ್ತಿ ಧರ್ಮ ಎನ್ನುವುದಿದೆ. ಮಾಲಿಕರಿಗೆ ವ್ಯಾಪಾರಿ ಧರ್ಮ ಮುಖ್ಯವಾಗುತ್ತದೆ ನಿಮಗಲ್ಲ. ದೋಣಿ ನಿಮ್ಮದೇ ಆದರೂ ಅಂಬಿಗ ನಿಮ್ಮವನಾಗಲಾರ ಎನ್ನುವುದನ್ನು ನೆನಪಿಡಿ. ಇಲ್ಲವಾದರೆ ಇತಿಹಾಸದ ಕಸದ ಬುಟ್ಟಿ ಸೇರಿಬಿಡುತ್ತೀರಿ. ದೇಶ ಎಂದರೆ ಮಣ್ಣಲ್ಲ ಮನುಜರು ಎನ್ನುವುದನ್ನು ನೆನಪಿಡಿ.
ಆಗ ನಿಮ್ಮ ರಂಗಿನ ಪರದೆಗಳ ಬಣ್ಣಗಳಿಗೂ ಅರ್ಥ ಬರುತ್ತದೆ. ನಿಮ್ಮ ಏರುದನಿಯೂ ಸಾರ್ಥಕವಾಗುತ್ತದೆ. ನೀವು ಪ್ರಜಾತಂತ್ರದ ಒಂದು ಅಂಗ ಎನ್ನುವುದನ್ನು ಮರೆಯದಿರಿ. ಪ್ರಜಾತಂತ್ರ ಉಳಿದರೆ ಮಾತ್ರ ನೀವೂ ಉಳಿಯತ್ತೀರಿ. ಇಲ್ಲವಾದರೆ ಅಳಿಸಿಹೋಗುತ್ತೀರಿ. ಜನರ ನಡುವೆ ನಿಲ್ಲಿ ಜನರೊಡನೆ ನಿಲ್ಲಿ ಜನರಿಗಾಗಿ ನಿಲ್ಲಿ , ಜನ ನಿಮ್ಮೊಡನಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ5 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ9 hours agoಆಯುರ್ವೇದ ಆರೋಗ್ಯಕರ ಜೀವನ ಶೈಲಿ

