Connect with us

ಬಹಿರಂಗ

ಕಾರ್ಪೋರೇಟ್ ಆಧಿಪತ್ಯವೂ ಮಾಧ್ಯಮವೆಂಬೋ ಉದ್ಯಮವೂ

Published

on


ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ದೃಶ್ಯ ಮಾಧ್ಯಮಗಳೂ ಸಂವಹನದ ಸರಕುಗಳು


  • ನಾ ದಿವಾಕರ

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾರ್ವಜನಿಕ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳ ಸ್ವರೂಪ ಹೇಗಿರಬೇಕು ? ಡಿಜಿಟಲೀಕರಣದತ್ತ ದಾಪುಗಾಲು ಹಾಕುತ್ತಿರುವ ಭಾರತದಲ್ಲಿ ಈ ಪ್ರಶ್ನೆ ಇನ್ನೂ ಹೆಚ್ಚು ಪ್ರಸ್ತುತ ಎನಿಸುತ್ತದೆ. ಮುದ್ರಣ ಮಾಧ್ಯಮ ಎಷ್ಟೇ ವ್ಯಾಪಕವಾದರೂ ಅದು ಅಕ್ಷರಸ್ತರನ್ನು ತಲುಪುವ ಒಂದು ಸಾಧನ. ಆದರೆ ದೃಶ್ಯ ಮಾಧ್ಯಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬಹುದಾದ ಒಂದು ಸಂವಹನ ಸಾಧನವಾಗಿದೆ. ಕಳೆದ ಎರಡು ದಶಕಗಳಲ್ಲಿ ಭಾರತದ ರಾಜಕಾರಣ, ಸಾಮಾಜಿಕ ಪಲ್ಲಟಗಳು, ಸಾಂಸ್ಕೃತಿಕ ತಲ್ಲಣಗಳು ಮತ್ತು ಸಾರ್ವಜನಿಕ ಜೀವನದ ಏಳುಬೀಳುಗಳನ್ನು ದಾಖಲಿಸುತ್ತಲೇ ಬಂದಿರುವ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳ ಸ್ವರೂಪ ಮತ್ತು ಕಾರ್ಯವೈಖರಿ ಇಂದಿನ ಸನ್ನಿವೇಶದಲ್ಲಿ ಹೆಚ್ಚು ಚರ್ಚೆಗೊಳಗಾಗಬೇಕಿದೆ.

ಇದೇ ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ, ವಿಶೇಷವಾಗಿ ಕನ್ನಡ ಸುದ್ದಿಮನೆಗಳ, ನೈತಿಕತೆ ಮತ್ತು ವೃತ್ತಿಪರತೆಯೇ ಪ್ರಶ್ನಾರ್ಹವಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಾಧೀಶರು, ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯಲು ಒತ್ತಾಯಿಸುವ ಮೂಲಕ ಅಂಬೇಡ್ಕರರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿದ್ದು ರಾಜ್ಯಾದ್ಯಂತ ಜನರ ಆಕ್ರೋಶಕ್ಕೆ ತುತ್ತಾಗಿದ್ದು ಸಹಜ. ಅಂಬೇಡ್ಕರ್ ಅವರನ್ನು ಅಪಮಾನಿಸಿದ ನ್ಯಾ ಮಲ್ಲಿಕಾರ್ಜುನ ಗೌಡ್ ಅವರನ್ನು ವಜಾ ಮಾಡಲು ಒತ್ತಾಯಿಸಿ ರಾಜ್ಯದ ಎಲ್ಲ ದಲಿತ ಸಂಘಟನೆಗಳು, ಪ್ರಗತಿಪರ ಗುಂಪುಗಳು ಮತ್ತು ವಿಚಾರವಂತರು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ.

ಬಹುಶಃ ಇತ್ತೀಚೆಗೆ ತಾನೇ ಅಂತ್ಯಗೊಂಡ ದೆಹಲಿಯ ರೈತಮುಷ್ಕರವನ್ನು ಹೊರತುಪಡಿಸಿದರೆ, ಫೆಬ್ರವರಿ 19ರ ಪ್ರತಿಭಟನಾ ಮೆರವಣಿಗೆ ಒಂದು ಚಾರಿತ್ರಿಕ ಗಳಿಗೆಯಾಗಿ ಕಾಣುತ್ತದೆ. ಸಾಗರೋಪಾದಿಯಲ್ಲಿ ನೆರೆದ ಜನರ ಆಕ್ರೋಶದ ದನಿಗಳು ಆಳುವವರನ್ನು ತಲುಪಿದ್ದರೂ, ರಸ್ತೆಗಳನ್ನು ನೀಲಿಮಯವಾಗಿಸಿದ ಈ ಜನಸ್ತೋಮ ಕನ್ನಡದ ಸುದ್ದಿಮನೆಗಳನ್ನು ತಲುಪದೆ ಹೋದದ್ದು, ಕನ್ನಡ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಕಾಣದೆ ಹೋದದ್ದು ಸಹಜವಾಗಿಯೇ ಜನಾಕ್ರೋಶಕ್ಕೆ ಗುರಿಯಾಗಿದೆ. ಕನ್ನಡದ ಸುದ್ದಿಮನೆಗಳು ಏಕೆ ಶೋಷಿತ ಜನರ ದನಿಗೆ ಕಿವುಡಾಗಿವೆ ? ಏಕೆ ಶೋಷಿತ ಆಕ್ರೋಶಕ್ಕೆ, ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಕುರುಡಾಗಿವೆ ? ಹಿಜಾಬ್ ತೊಟ್ಟ ಪುಟ್ಟ ಹುಡುಗಿಯನ್ನು ಅಟ್ಟಿಸಿಕೊಂಡು ಹೋಗುವ ಕ್ಯಾಮರಾಗಳಿಗೆ, ಬೈಟ್‍ಗಳಿಗಾಗಿ ಪೀಡಿಸುವ, ರೋಚಕ ಸುದ್ದಿಗಾಗಿ ಹಪಹಪಿಸುವ ಸುದ್ದಿಮನೆಗಳ ಕ್ಯಾಮರಾವಾಹಕರಿಗೆ ಈ ಸಾವಿರಾರು ನೀಲವಸ್ತ್ರದ ಜನರು ಏಕೆ ಗೋಚರಿಸುವುದಿಲ್ಲ. ದೇಶಾದ್ಯಂತ ಬೀದಿಗಿಳಿದು ಪ್ರತಿಭಟಿಸುತ್ತಿರುವ ಲಕ್ಷಾಂತರ ಕಾರ್ಮಿಕರು, ಶ್ರಮಜೀವಿಗಳು, ಮಹಿಳೆಯರು, ಆದಿವಾಸಿಗಳು ಏಕೆ ಕಾಣುವುದಿಲ್ಲ ?

ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಹಾಗೂ ಭಾರತೀಯ ಸಮಾಜದಲ್ಲಿ ಇಂದಿಗೂ ಬೇರೂರಿರುವ ಊಳಿಗಮಾನ್ಯ ಧೋರಣೆಯ ಮೇಲರಿಮೆ ಈ ಮೂರೂ ವಿದ್ಯಮಾನಗಳನ್ನು ಭಾರತದ ಮಾಧ್ಯಮಗಳ ಕಾರ್ಯವೈಖರಿಯಲ್ಲಿ ಗುರುತಿಸಬಹುದು. ವಿದ್ಯುನ್ಮಾನ ಮಾಧ್ಯಮಗಳ ಅಸೂಕ್ಷ್ಮತೆಗೆ ಮಾರುಕಟ್ಟೆ ಪ್ರೇರಿತ ಟಿಆರ್‍ಪಿ ಗಣನೆಯೊಂದೇ ಕಾರಣವಲ್ಲ. ಈ ಮಾಧ್ಯಮಗಳನ್ನು ನಿಯಂತ್ರಿಸುವ ಬಂಡವಳಿಗ ಸಮೂಹ, ನಿರ್ವಹಿಸುವ ಮೇಲ್ಜಾತಿಯ ಮನಸುಗಳು ಮತ್ತು ಇವೆರಡನ್ನೂ ಪ್ರಭಾವಿಸುವ ಮಾರುಕಟ್ಟೆಯ ಅನಿವಾರ್ಯತೆಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಜನಸ್ಪಂದನೆಯ ಪ್ರಮಾಣವನ್ನೂ ನಿರ್ಧರಿಸುತ್ತವೆ. ಕನ್ನಡದ ಸುದ್ದಿಮನೆಗಳು ಮತ್ತು ವಾರ್ತಾಭಾರತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಿಕೆಗಳೂ ಬೆಂಗಳೂರಿನ ಪ್ರತಿಭಟನೆಯ ಸುದ್ದಿಗೆ ಪ್ರಾಶಸ್ತ್ಯ ನೀಡದಿರುವುದನ್ನು ಈ ನೆಲೆಯಲ್ಲೇ ವ್ಯಾಖ್ಯಾನಿಸಬೇಕಿದೆ.

ಮಾಧ್ಯಮಗಳು ದಲಿತ ಸಮುದಾಯಗಳ ದನಿಗೆ ದನಿಯಾಗುತ್ತಿಲ್ಲ ಎಂಬ ಹಲುಬುವಿಕೆಯ ನಡುವೆಯೇ ಈ ಮಾಧ್ಯಮಗಳ ಮೂಲ ಸ್ವರೂಪವನ್ನೂ ಪರಾಮರ್ಶಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಸಂಸ್ಥೆಯಾಗಿ, ಸಾಮಾನ್ಯ ಪ್ರಜೆಗಳ ಸಾರ್ವಜನಿಕ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾದ ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿರುವುದಷ್ಟೇ ಅಲ್ಲದೆ, ಆಡಳಿತ ವ್ಯವಸ್ಥೆಯೊಡನೆ, ಆಡಳಿತಾರೂಢ ಅಧಿಕಾರ ಕೇಂದ್ರಗಳೊಡನೆ ಮತ್ತು ಸ್ಥಾಪಿತ ಸಾಮಾಜಿಕ ವ್ಯವಸ್ಥೆಯೊಡನೆ ಗುರುತಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದು ವರ್ಷದ ಕಾಲ ದೆಹಲಿ ಗಡಿಗಳಲ್ಲಿ ನಡೆದ ಚಾರಿತ್ರಿಕ ರೈತ ಮುಷ್ಕರದ ಸಂದರ್ಭದಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಇದೇ ನಿಷ್ಕ್ರಿಯತೆ ಮತ್ತು ಅಸೂಕ್ಷ್ಮತೆಯನ್ನು ಪ್ರದರ್ಶಿಸಿದ್ದವು. 2019-20ರಲ್ಲಿ ಸಿಎಎ-ಎನ್‍ಆರ್‍ಸಿ ವಿರುದ್ಧ ನಡೆದ ಜನಾಂದೋಲನಗಳ ಸಂದರ್ಭದಲ್ಲೂ ಬಹುಪಾಲು ಸುದ್ದಿಮನೆಗಳು ಆಡಳಿತ ವ್ಯವಸ್ಥೆಯ ವಕ್ತಾರರಂತೆ ವರ್ತಿಸಿದ್ದವು.

ಇಲ್ಲಿ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿರುವ ಔದ್ಯಮಿಕ ವಲಯದ ಹಿತಾಸಕ್ತಿಗಳು ಮುನ್ನೆಲೆಗೆ ಬರುತ್ತವೆ. ದೇಶದ ಪ್ರಜೆಗಳ ದನಿಗೆ ದನಿಯಾಗಬೇಕಾದ ಮಾಧ್ಯಮ ವಲಯ ಪ್ರಭುತ್ವದ ದನಿಗೆ ದನಿಗೂಡಿಸಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು, ವಿಶೇಷವಾಗಿ ಕನ್ನಡದ ಸುದ್ದಿಮನೆಗಳು ನಿದರ್ಶನವಾಗಿ ಕಾಣುತ್ತವೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಇಂದು ತಮ್ಮ ವೃತ್ತಿಧರ್ಮದ ಚೌಕಟ್ಟನ್ನು ದಾಟಿ, ಮಾರುಕಟ್ಟೆಯ ಒಂದು ಭಾಗವಾಗಿವೆ. ಕಾರ್ಪೋರೇಟ್ ಉದ್ಯಮಿಗಳ ಒಡೆತನದಲ್ಲೇ ಇರುವ ಬಹುಪಾಲು ಸುದ್ದಿಮನೆಗಳು ಮತ್ತು ವಾಹಿನಿಗಳು ಒಂದೆಡೆ ಮಾರುಕಟ್ಟೆ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ಮತ್ತು ಅದರ ಹಿಂದುತ್ವ ರಾಜಕಾರಣದೊಂದಿಗೆ ಗುರುತಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವವನ್ನೂ ಕಾಪಾಡಿಕೊಳ್ಳಲು ಶ್ರಮಿಸುತ್ತವೆ.

ಬಹುಪಾಲು ಮಾಧ್ಯಮ ಸಮೂಹಗಳ ಒಡೆತನವನ್ನು ಹಿಂದುತ್ವ ರಾಜಕಾರಣದ ಕಾಲಾಳು ಉದ್ಯಮಿಗಳೇ ಹೊಂದಿರುವುದರಿಂದಲೇ ಇಂದು ಕನ್ನಡದ ಮತ್ತು ಹಿಂದಿಯ ಸುದ್ದಿಮನೆಗಳು ಭಟ್ಟಂಗಿತನದ ಪರಾಕಾಷ್ಠೆ ತಲುಪಿವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಕೋವಿದ್ ಸಾಂಕ್ರಾಮಿಕದ ಸಂದರ್ಭದಲ್ಲೇ ಕನ್ನಡದ ಸುದ್ದಿಮನೆಗಳ ಭ್ರಷ್ಟಾತಿಭ್ರಷ್ಟ ಅವತಾರವನ್ನು ಕಂಡಿದ್ದಾಗಿದೆ. ಹಿಂದುತ್ವ ರಾಜಕಾರಣವನ್ನು ವಿರೋಧಿಸುವ ಅಥವಾ ಜನಪರ ಧ್ವನಿಯನ್ನು ಪ್ರತಿನಿಧಿಸುವ ಯಾವುದೇ ಒಂದು ಪ್ರತಿಭಟನೆ, ಪ್ರತಿರೋಧ, ಆಂದೋಲನ ಅಥವಾ ಮುಷ್ಕರ ಈ ವಾಹಿನಿಗಳ ಪಾಲಿಗೆ ನಗಣ್ಯ ಎನಿಸುತ್ತದೆ. ಪ್ರಸ್ತುತ ಹಿಜಾಬ್ ವಿವಾದದಲ್ಲೂ ಇದೇ ಮಾದರಿಯನ್ನು ಗಮನಿಸುತ್ತಿದ್ದೇವೆ. ತಮ್ಮ ಮಾರುಕಟ್ಟೆ ಟಿಆರ್‍ಪಿ ಹೆಚ್ಚಿಸಿಕೊಳ್ಳುವುದರೊಂದಿಗೇ, ಅತಿಯಾದ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸುವ ಮೂಲಕ ಕನ್ನಡದ ಸುದ್ದಿಮನೆಗಳು ಜನಸಮೂಹಗಳ ಸಾರ್ವತ್ರಿಕ ಸಮಸ್ಯೆಗಳಿಗೆ ವಿಮುಖವಾಗುತ್ತಿವೆ.

ಒಂದು ಔದ್ಯಮಿಕ ಸಂಸ್ಥೆಯಾಗಿ ಯಾವುದೇ ಮಾಧ್ಯಮ ಸಮೂಹ/ವಾಹಿನಿ/ಸುದ್ದಿಮನೆ ಮಾರುಕಟ್ಟೆಯ ಅನಿವಾರ್ಯತೆಗಳಿಗೆ ತಕ್ಕಂತೆ ವರ್ತಿಸುವುದು ಸಹಜವೇ ಆದರೂ, ಈ ಮಾಧ್ಯಮಗಳನ್ನು ಪ್ರತಿನಿಧಿಸುವ ಪತ್ರಿಕೋದ್ಯೋಗಿಗಳು, ಪತ್ರಕರ್ತರು, ಸುದ್ದಿ ಸಂಪಾದಕರು ಮತ್ತು ವರದಿಗಾರರು ತಮ್ಮ ವೃತ್ತಿಧರ್ಮವನ್ನು ಪಾಲಿಸಬೇಕಲ್ಲವೇ ? ಸಂಘಪರಿವಾರದ ವಕ್ತಾರರಂತೆ ಮಾತನಾಡುವ ಕನ್ನಡದ ಸುದ್ದಿಮನೆಗಳ ಸಂಪಾದಕರು, ನಿರೂಪಕರು ಮತ್ತು ವರದಿಗಾರರು ಈ ವೃತ್ತಿಧರ್ಮವನ್ನು ಮರೆತಿರುವುದರಿಂದಲೇ ಕನ್ನಡದ ಮಾಧ್ಯಮ ಲೋಕ ನೈತಿಕವಾಗಿ ಅಧೋಗತಿಗಿಳಿದಿದೆ. ಈ ಅಧಃಪತನದ ಮೂಲ ಕಾರಣ ಇರುವುದು ಮಾಧ್ಯಮಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ಜಾತಿ ಶ್ರೇಷ್ಠತೆಯ ಮೇಲರಿಮೆ ಮತ್ತು ಅಹಮಿಕೆಯಲ್ಲಿ. ತಳಸಮುದಾಯಗಳೊಡನೆ, ಶೋಷಿತ, ತುಳಿತಕ್ಕೊಳಗಾದ, ದಮನಿತ ಜನತೆಯೊಡನೆ ಗುರುತಿಸಿಕೊಳ್ಳಲಾಗದಂತಹ ಒಂದು ತಾತ್ವಿಕ ನೆಲೆಗಳಲ್ಲಿ ಈ ಸಂಪಾದಕರ ವರ್ಗ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಂಡಿರುತ್ತದೆ.

ಪತ್ರಿಕಾವಲಯದಲ್ಲಿ ಅಥವಾ ವಿದ್ಯುನ್ಮಾನ ಮಾಧ್ಯಮ ವಲಯದಲ್ಲಿರುವ ಪತ್ರಿಕೋದ್ಯೋಗಿಗಳಿಗೆ ಸಮಷ್ಟಿ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಬೇಕಾದ್ದು ಅತ್ಯವಶ್ಯ. ತಾವು ಪ್ರತಿನಿಧಿಸುವ ಮಾಧ್ಯಮ ಸಮೂಹದ ಒಡೆತನಕ್ಕೂ ತಾವು ನಿರ್ವಹಿಸುವ ಸಮಾಜಮುಖಿ ಚಟುವಟಿಕೆಗೂ ನಡುವೆ ಒಂದು ಗೋಡೆ ಅತ್ಯವಶ್ಯವಾಗಿ ಇರಬೇಕು. ಸುದ್ದಿ ವಾಹಕರಾಗಿ, ಸುದ್ದಿ ಸಂಪಾದಕರಾಗಿ ಮತ್ತು ಟಿವಿ ವಾಹಿನಿಯ ನಿರೂಪಕರಾಗಿ ಲಕ್ಷಾಂತರ ಜನರನ್ನು ಕ್ಷಣಮಾತ್ರದಲ್ಲಿ ತಲುಪುವ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗಳಲ್ಲಿ ಸಮಷ್ಟಿ ಪ್ರಜ್ಞೆಯೊಡನೆ ಸಮಾಜದ ಆಂತರಿಕ ತುಮುಲಗಳನ್ನು ಗ್ರಹಿಸುವ ತೀಕ್ಷ್ಣತೆಯೂ ಇರಬೇಕಾಗುತ್ತದೆ. ಒಬ್ಬ ಜನಪ್ರತಿನಿಧಿಯಲ್ಲಿ ಇರಬೇಕಾದ ಸೂಕ್ಷ್ಮ ಸಂವೇದನೆಯೇ ಸುದ್ದಿವಾಹಕರಲ್ಲೂ ಇರಬೇಕಾಗುತ್ತದೆ.(ಇಲ್ಲ ಎನ್ನುವುದು ವಾಸ್ತವ.)ಏಕೆಂದರೆ ತಮ್ಮ ಜೀವನೋಪಾಯಕ್ಕಾಗಿ ಮಾಧ್ಯಮದ ಒಡೆಯನನ್ನು ಆಶ್ರಯಿಸಬೇಕಾದರೂ, ಈ ಸುದ್ದಿವಾಹಕರು ಬೌದ್ಧಿಕವಾಗಿ ಜನಸಾಮಾನ್ಯರನ್ನೇ ಪ್ರತಿನಿಧಿಸುತ್ತಾರೆ. ಜನಸಮೂಹಗಳನ್ನು ಕಾಡುವ ಜ್ವಲಂತ ಸಮಸ್ಯೆಗಳು, ಸಂದಿಗ್ಧತೆಗಳು ಮತ್ತು ಜಟಿಲ ಬಿಕ್ಕಟ್ಟುಗಳು ಪ್ರತಿಯೊಬ್ಬ ಸುದ್ದಿವಾಹಕರಲ್ಲೂ ಪ್ರಕ್ಷುಬ್ಧತೆಯನ್ನು ಸೃಷ್ಟಿಸದೆ ಹೋದರೆ, ಅಂಥವರನ್ನು ಸ್ಥಾಪಿತ ವ್ಯವಸ್ಥೆಯ ಏಜೆಂಟರೆಂದಷ್ಟೇ ಪರಿಗಣಿಸಲು ಸಾಧ್ಯ.

ಇಂದು ಕನ್ನಡದ ಸುದ್ದಿಮನೆಗಳಲ್ಲಿ ಇಂತಹ ಏಜೆಂಟರೇ ಪ್ರಧಾನವಾಗಿ ಕಂಡುಬರುತ್ತಿದ್ದಾರೆ. ನೋಟು ಅಮಾನ್ಯೀಕರಣದಿಂದ ಸಿಎಎ-ಎನ್‍ಆರ್‍ಸಿವರೆಗೆ, ಜೆಎನ್‍ಯು ವಿವಾದದಿಂದ ಮೈಸೂರಿನ ರಂಗಾಯಣದವರೆಗೆ, ಕೋವಿದ್ ಸಾಂಕ್ರಾಮಿಕದಿಂದ ಹಿಜಾಬ್ ವಿವಾದದವರೆಗೆ, ಕನ್ನಡದ ಸುದ್ದಿಮನೆಗಳ ಸುದ್ದಿವಾಹಕರು ತಮ್ಮ ವೃತ್ತಿಧರ್ಮಕ್ಕಿಂತಲೂ ಸ್ವಾಮಿನಿಷ್ಠೆಗೇ ಹೆಚ್ಚು ಪ್ರಾಮುಖ್ಯತೆ ನೀಡಿರುವುದನ್ನು ಗಮನಿಸಬೇಕು. ಇದಕ್ಕೆ ಕಾರಣ ಈ ಸುದ್ದಿವಾಹಕರು ತಮ್ಮ ಜಾತಿ ಅಸ್ಮಿತೆಯ ಚೌಕಟ್ಟಿನಿಂದ ಹೊರಬರುವ ಪ್ರಯತ್ನವನ್ನೇ ಮಾಡದಿರುವುದು. ಒಂದೆಡೆ ಧನದಾಹಿ ಬಂಡವಾಳ ವ್ಯವಸ್ಥೆಯ ಆರಾಧಕರಾಗಿ ತಮ್ಮ ಜೀವನೋಪಾಯ ಕಂಡುಕೊಳ್ಳುತ್ತಲೇ ಮತ್ತೊಂದೆಡೆ ತಮ್ಮ ವ್ಯಕ್ತಿಗತ ಜಾತಿ ಅಸ್ಮಿತೆಯ ಚೌಕಟ್ಟಿನಿಂದ ಹೊರಬರಲಾರದೆ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನೂ ಕಳೆದುಕೊಂಡು, ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ನೆಲೆಗಳಿಗೆ ಮೇವುಣಿಸುತ್ತಿರುವುದು ಕನ್ನಡ ಸುದ್ದಿಮನೆಗಳ ಸುದ್ದಿವಾಹಕರ ಲಕ್ಷಣ.

ಹಾಗಾಗಿಯೇ ಕನ್ನಡದ ಸುದ್ದಿಮನೆಗಳಿಗೆ ಕೊಪ್ಪಳದ ದೇವಸ್ಥಾನದ ಘಟನೆಯಂತಹ ಅಸ್ಪೃಶ್ಯತೆಯ ದೌರ್ಜನ್ಯಗಳು, ಹಾಥ್ರಸ್‍ನಂತಹ ಶೋಷಿತ ಮಹಿಳೆಯರ ಮೇಲಿನ ಅತ್ಯಾಚಾರಗಳು, ಹಿಜಾಬ್ ವಿವಾದದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕುಚ್ಯುತಿ, ದಿನನಿತ್ಯ ನಡೆಯುತ್ತಿರುವ ಜಾತಿ ದೌರ್ಜನ್ಯದ ಪ್ರಕರಣಗಳು ಪ್ರಮುಖ ಸುದ್ದಿಯಾಗಿ ಕಾಣುವುದಿಲ್ಲ. ಈ ಸುದ್ದಿಮನೆಗಳ ಕ್ಯಾಮರಾ ಕಣ್ಣುಗಳಿಗೆ ಶೋಷಣೆಯ ನೆಲೆಗಳು ಗೋಚರಿಸುವುದಿಲ್ಲ ಹಾಗೆಯೇ ಶೋಷಣೆಯ ವಿರುದ್ಧ ಸಮಾಜದಲ್ಲಿ ಗಟ್ಟಿಯಾಗಿಯೇ ಕೇಳಿಬರುವ ಪ್ರತಿರೋಧದ ಧ್ವನಿಗಳೂ ಕೇಳಿಸುವುದಿಲ್ಲ. ಹಾಗಾಗಿಯೇ ದೆಹಲಿಯ ರೈತಮುಷ್ಕರದಲ್ಲಿ ಆಳುವ ವರ್ಗಗಳಿಗೆ ಕಂಡ ಕಲ್ಪಿತ ಭಯೋತ್ಪಾದಕರು, ಖಲಿಸ್ತಾನಿಗಳು, ಉಗ್ರಗಾಮಿಗಳೇ ಈ ಸುದ್ದಿಮನೆಯ ಸಂಪಾದಕರಿಗೂ ಹಾಗೆಯೇ ಕಾಣುತ್ತಾರೆ. ಸುದ್ದಿಮನೆಗಳ ಸಂಪಾದಕರಿಗೆ ತಮ್ಮದೇ ಆದ ಕಣ್ಣೋಟ/ಮುನ್ನೋಟ ಇದ್ದಿದ್ದರೆ ದೆಹಲಿಯ ಗಡಿಗಳಲ್ಲಿ ರೈತರೇ ಕಾಣುತ್ತಿದ್ದರು. ಆದರೆ ಈ ಮಾಧ್ಯಮ ವಕ್ತಾರರರ ದೃಷ್ಟಿಗೆ ಮಾರುಕಟ್ಟೆಯ ಪರದೆ, ಜಾತಿ ಶ್ರೇಷ್ಠತೆಯ ಮಸುಕು ಕವಿದಿರುತ್ತದೆ.

ಬಂಡವಾಳಶಾಹಿ ಅರ್ಥವ್ಯವಸ್ಥೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಸ್ಥಾಪಿತ ವ್ಯವಸ್ಥೆಯೊಳಗಿನ ಇಂತಹ ಒಳಬಿರುಕುಗಳನ್ನೇ ಹೆಚ್ಚಾಗಿ ಆಶ್ರಯಿಸುತ್ತದೆ. ಭಾರತದ ಸಂದರ್ಭದಲ್ಲಿ ಇಲ್ಲಿನ ಜಾತಿ ವ್ಯವಸ್ಥೆ, ಅದರೊಳಗಿನ ಶ್ರೇಷ್ಠತೆಯ ವ್ಯಸನ ಮತ್ತು ಅದು ಉಂಟುಮಾಡುವ ಬಿರುಕುಗಳು, ಈ ಜಾತಿ ವ್ಯವಸ್ಥೆಯನ್ನು ಪೋಷಿಸುವ ವೈದಿಕಶಾಹಿ ಸಾಂಸ್ಕೃತಿಕ ರಾಜಕಾರಣ ಇವೆಲ್ಲವೂ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸುವ ಸಾಧನಗಳಾಗಿ ಬಳಕೆಯಾಗುತ್ತವೆ. ಹಾಗಾಗಿಯೇ ಪ್ರಜಾವಾಣಿಯಂತಹ ಪತ್ರಿಕೆಯೂ ಸಹ ತನ್ನ ಅಸೂಕ್ಷ್ಮತೆಯನ್ನು ಆಗಿಂದಾಗ್ಗೆ ಪ್ರದರ್ಶಿಸುತ್ತಲೇ ಇರುತ್ತದೆ. ಬಂಡವಾಳಶಾಹಿಯು ತನ್ನ ಉಳಿವಿಗಾಗಿ ಅವಲಂಬಿಸುವ ಪ್ರತಿಯೊಂದು ಸಾಮಾಜಿಕ ನೆಲೆಗಳನ್ನೂ ತನ್ನ ಬಂಡವಾಳದ ಮೂಲಕವೇ ಬಲಪಡಿಸುತ್ತಿರುತ್ತದೆ. ಇದರಲ್ಲಿ ಜಾತಿ ವ್ಯವಸ್ಥೆ ಮತ್ತು ಅದು ಪ್ರತಿನಿಧಿಸುವ ವೈದಿಕಶಾಹಿಯ ಶೋಷಕ ವ್ಯವಸ್ಥೆಯೂ ಒಂದು.

ತನಗೆ ಅತ್ಯವಶ್ಯವಾದ ಸಂವಹನ ಮಾಧ್ಯಮಗಳನ್ನು ಸಂರಕ್ಷಿಸಲು ಬಂಡವಾಳಶಾಹಿ ಮಾರುಕಟ್ಟೆ ಸಮಾಜದ ಬೌದ್ಧಿಕ ನೆಲೆಗಳನ್ನೂ ತನ್ನ ಬಾಹುಗಳಲ್ಲಿ ಬಂಧಿಸಲಾರಂಭಿಸುತ್ತದೆ. ಸಾಮಾನ್ಯ ಅಧ್ಯಯನ, ಸಂಶೋಧನೆ ಮತ್ತು ಪರಿಶೋಧನೆಯ ನೆಲೆಗಳನ್ನೂ ಸಹ ವಾಣಿಜ್ಯೀಕರಣಗೊಳಿಸುವ ಮೂಲಕ, ಸಂವಹನದ ಸೇತುವೆಗಳಲ್ಲಿ ತನ್ನದೇ ಆದ ನಿಯಂತ್ರಕ ಶಕ್ತಿಗಳನ್ನು ರೂಪಿಸುತ್ತಾ ಹೋಗುತ್ತದೆ. ಮಾಧ್ಯಮಗಳು ಏಕೆ ಹೀಗಾಗಿವೆ ? ಶೈಕ್ಷಣಿಕ ವಲಯ, ಬೌದ್ಧಿಕ ವಲಯ, ಅಕಾಡೆಮಿಕ್ ವಲಯ ಏಕೆ ನಿಷ್ಕ್ರಿಯವಾಗಿವೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಕಂಡುಕೊಳ್ಳಬೇಕಿದೆ. ಸಂಸ್ಕೃತಿ, ಕಲೆ, ಜ್ಞಾನ ಮತ್ತು ಬೌದ್ಧಿಕ ಸಂಪತ್ತನ್ನು ಮಾರುಕಟ್ಟೆಯ ಸರಕುಗಳಂತೆಯೇ ಪರಿಗಣಿಸುವ ಮಾರುಕಟ್ಟೆ ವ್ಯವಸ್ಥೆ ಈ ವಲಯಗಳ ಸಂವಹನ ಸೇತುವೆಗಳನ್ನೂ ಹರಾಜು ಮಾರುಕಟ್ಟೆಯ ಜಗುಲಿಯಂತೆಯೇ ಪರಿವರ್ತಿಸಿಬಿಡುತ್ತದೆ. ಹಾಗಾಗಿಯೇ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಳು ಬಿಕರಿಯಾಗುವಂತೆಯೇ ಸಂವಹನ ವಾಹಿನಿಗಳ ಸಂಪಾದಕ, ನಿರೂಪಕ, ಸುದ್ದಿವಾಹಕ ಹುದ್ದೆಗಳೂ ಬಿಕರಿಯಾಗತೊಡಗುತ್ತವೆ.

ಭಾರತದ ಸಂದರ್ಭದಲ್ಲಿ ಇಲ್ಲಿನ ಜಾತಿ ಶ್ರೇಷ್ಠತೆಯ ನೆಲೆಗಳು ಮಾರುಕಟ್ಟೆ ಬಂಡವಾಳದೊಡನೆ ಸುಲಭವಾಗಿ ರಾಜಿಯಾಗುವುದರಿಂದಲೇ ಬಹುತೇಕ ಸಂವಹನದ ನೆಲೆಗಳು ತಮ್ಮ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಬೆತ್ತಲಾಗುತ್ತಿವೆ. ಆಳುವ ವರ್ಗಗಳ ಸುಳ್ಳುಗಳನ್ನು ವೈಭವೀಕರಿಸುವಷ್ಟೇ ರೋಚಕವಾಗಿ, ವಿನಾಶಕಾರಿ ಯುದ್ಧವನ್ನೂ ವೈಭವೀಕರಿಸುವ, ಕ್ರೂರ ಅತ್ಯಾಚಾರವನ್ನೂ ರಂಜನೀಯವಾಗಿಸುವ ಒಂದು ವಿಕೃತ ಧೋರಣೆಯನ್ನು ಭಾರತದ ಸುದ್ದಿವಾಹಿನಿಗಳಲ್ಲಿ ಕಾಣಬಹುದಾದರೆ ಅದಕ್ಕೆ ಕಾರಣ ಈ ರಾಜೀ ಸೂತ್ರವೇ ಆಗಿರುತ್ತದೆ. ಹಾಗಾಗಿಯೇ ಆಳುವ ವರ್ಗಗಳ, ಪ್ರಭುತ್ವದ ಮತ್ತು ಸ್ಥಾಪಿತ ಹಿತಾಸಕ್ತಿಗಳ ಪರಿಭಾಷೆಯೇ ಮಾಧ್ಯಮದ ಪರಿಭಾಷೆಯೂ ಆಗುತ್ತದೆ. ಜೆಎನ್‍ಯು ಸಂಘರ್ಷದಲ್ಲಿ, ಹಾಥ್ರಸ್ ಅತ್ಯಾಚಾರ ಪ್ರಕರಣದಲ್ಲಿ, ಕೋವಿದ್ ನಿರ್ವಹಣೆಯಲ್ಲಿ ಇದನ್ನು ನೇರವಾಗಿಯೇ ಕಂಡಿದ್ದೇವೆ. ಹಿಜಾಬ್ ವಿವಾದದಲ್ಲೂ ಕಾಣುತ್ತಿದ್ದೇವೆ.

ಇಲ್ಲಿ ಆಧುನಿಕ ವಿದ್ಯುನ್ಮಾನ ಲೋಕದ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬಂಡವಾಳಶಾಹಿ ಮಾರುಕಟ್ಟೆಯ ಹಂಗಿಲ್ಲದೆ ಸಮಾಜಮುಖಿಯಾಗಿ, ಜನಸ್ಪಂದನೆಯೊಂದಿಗೆ, ಜನಸಮೂಹಗಳಿಗೆ ದನಿಗೆ ದನಿಯಾಗುವ ನೂತನ ಸಂವಹನ ಸೇತುವೆಗಳನ್ನು ನಾವಿಂದು ನಿರ್ಮಿಸಬೇಕಿದೆ. ಇಲ್ಲಿಯೂ ಸಹ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಾಮಾಜಿಕ ಮಾಧ್ಯಮಗಳು ಮತ್ತಷ್ಟು ಒಳಬಿರುಕುಗಳನ್ನು ಸೃಷ್ಟಿಸುತ್ತಲೇ ಹೋಗುವ ಸಾಧ್ಯತೆಗಳಿರುತ್ತವೆ. ಇವೆಲ್ಲವನ್ನೂ ಮೀರಿ ಜನಪರ ವಾಹಿನಿಗಳು ವೈಚಾರಿಕತೆಯ ನೆಲೆಯಲ್ಲಿ, ವೈಜ್ಞಾನಿಕ ಮನೋಭಾವದೊಂದಿಗೆ, ಸಾಂವಿಧಾನಿಕ ಬದ್ಧತೆಯೊಂದಿಗೆ, ಪ್ರಜಾಸತ್ತಾತ್ಮಕ ಪ್ರಜ್ಞಾವಂತಿಕೆಯೊಂದಿಗೆ, ಜನಸಮುದಾಯಗಳ ನೋವಿನ ದನಿಗೆ ದನಿಯಾಗಿ ರೂಪುಗೊಳ್ಳಬೇಕಿದೆ. ಭಾರತದ ಸಂವಿಧಾನದ ಆಶಯದಂತೆ ದೇಶವನ್ನು ಒಂದು ಸರ್ವಜನಾಂಗದ ಶಾಂತಿಯ ತೋಟದಂತೆ ರೂಪಿಸಬೇಕಾದರೆ, ಈ ಸಂವಹನ ಸೇತುವೆಗಳು ಬಲಿಷ್ಠವಾಗುವುದು ಅತ್ಯವಶ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading

Trending