Connect with us

ದಿನದ ಸುದ್ದಿ

ಸುದ್ದಿಮನೆಯ ಪ್ರಾಮಾಣಿಕತೆ, ಸರ್ಕಾರದ ಭ್ರಷ್ಟಾಚಾರ

Published

on

  • ನಾ ದಿವಾಕರ

ನ್ನಡದ ಸುದ್ದಿಮನೆಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರೆ ಅವುಗಳು ಬಿತ್ತರಿಸುವ ವಾಸ್ತವಗಳನ್ನೂ ಜನರು ನಂಬುವುದಿಲ್ಲ. ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಅಧಿಕಾರ ಪೀಠದ ವಂದಿಮಾಗಧರಂತೆ, ಭಟ್ಟಂಗಿಗಳಂತೆ ವರ್ತಿಸುವ ಸುದ್ದಿಮನೆಗಳಿಗೆ ಅದೇ ಅಧಿಕಾರ ಪೀಠದ ವಿರುದ್ದ ಮಾತನಾಡಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆಯೂ ಇರಬೇಕು.

ಹಾಗೆಯೇ ತಮ್ಮ ಅನುಕೂಲಕ್ಕಾಗಿ, ಲಾಭಕ್ಕಾಗಿ ಜನಸಾಮಾನ್ಯರ ನೈಜ ಕಾಳಜಿಯನ್ನೂ ಕಡೆಗಣಿಸಿ ಅಧಿಕಾರಸ್ಥರ ಪಾದಪೂಜೆ ಮಾಡುವಾಗಲೂ, ಅದೇ ಪಾದಗಳು ತಮ್ಮನ್ನು ತುಳಿಯಲೂ ಹೇಸುವುದಿಲ್ಲ ಎನ್ನುವ ಪ್ರಜ್ಞೆಯೂ ಇರಬೇಕು. ಭ್ರಷ್ಟಾಚಾರ ನಮ್ಮ ವ್ಯವಸ್ಥೆಯ ಒಂದು ಅಂಗ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆಯೇ , ಭ್ರಷ್ಟಾಂಗವೂ ನಮ್ಮನ್ನು ಆಳುತ್ತಿದೆ.

ಜಾತಿವಾದ, ಕೋಮುವಾದ, ಮತಾಂಧತೆ, ಭ್ರಷ್ಟತೆ, ಅಪಾರದರ್ಶಕ ನೀತಿಗಳು, ಜನ ವಿರೋಧಿ ಶಾಸನಗಳು, ದುಡಿವ ವರ್ಗಗಳ ಬದುಕು ಕಸಿಯುವ ಕಾಯ್ದೆಗಳು, ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳು, ಆರೋಗ್ಯ ವ್ಯವಸ್ಥೆಯಲ್ಲಿನ ಲೋಪ ದೋಷ ಅವ್ಯವಹಾರ ದುರಾಡಳಿತ ಇತ್ಯಾದಿ, ಶಿಕ್ಷಣ ಕ್ಷೇತ್ರದಲ್ಲಿನ ಲಾಭಕೋರತನ ದುರವಸ್ಥೆ ವ್ಯಾಪಾರಿ ಮನೋಭಾವ ಡೊನೇಷನ್ ದಂಧೆ, ಕೊರೋನಾ ನಿರ್ವಹಣೆಯಲ್ಲಿ ಸರ್ಕಾರದ ಬೇಜವಾಬ್ದಾರಿ ಧೋರಣೆ ಕೆಟ್ಟ ನಿರ್ವಹಣೆ ಖಾಸಗಿ ಆಸ್ಪತ್ರೆಗಳ ದಂಧೆ, ತರಗೆಲೆಗಳಂತೆ ಉದುರಿಹೋಗುತ್ತಿರುವ ಅಮಾಯಕ ಜೀವಗಳು, – ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭ್ರಷ್ಟಾಚಾರ ತೃಣ ಸಮಾನ ಎನಿಸಿ ಬಿಡುತ್ತದೆ.

ಈ ಸಮಸ್ಯೆಗಳು ಎದುರಾದಾಗಲೆಲ್ಲಾ ಆಳುವವರಿಗೆ ಬೃಹತ್ ಗಾತ್ರದ ಬಕೆಟ್ ಹಿಡಿದು ಜನಸಾಮಾನ್ಯರನ್ನು ವಂಚಿಸುವ , ಯಾವುದೋ ಸಿನಿಮಾ ನಟರ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುತ್ತಾ ಜನರ ಗಮನವನ್ನು ಬೇರೆಡೆಗೆ ಹರಿಸುವ ಸುದ್ದಿಮನೆಗಳಿಗೆ ನೈತಿಕ ಹೊಣೆಗಾರಿಕೆ ಮತ್ತು ಪ್ರಜ್ಞೆಯೂ ಇರಬೇಕಲ್ಲವೇ. ಕನ್ನಡದ ಜನತೆ ಸುದ್ದಿಮನೆ ಎಂದರೆ ಬಕೆಟ್ ಗಟ್ಟಲೆ ಉಗಿಯುವಷ್ಟು ಮಟ್ಟಿಗೆ ವಾಹಿನಿಗಳು ಕುಲಗೆಟ್ಟು ಹೋಗಿವೆ.

ಕಳೆದ ಆರು ತಿಂಗಳಲ್ಲಿ ಈ ಸುದ್ದಿಮನೆಗಳ ನಗ್ನ ನರ್ತನವನ್ನು ಕಂಡು ಬೇಸತ್ತಿರುವ ಜನರು ಪರ್ಯಾಯ ಮಾಧ್ಯಮಗಳ ಶೋಧದಲ್ಲಿರುವುದೂ ಹೌದು. ಕೊರೋನಾಗಿಂತಲೂ ವ್ಯಾಪಕವಾಗಿ ಕೋಮುದ್ವೇಷ ಹರಡುವಲ್ಲಿ ಸುದ್ದಿಮನೆಗಳು ನಿರ್ವಹಿಸಿದ ಪಾತ್ರವನ್ನು ಮರೆಯಲೂ ಆಗದು ಕ್ಷಮಿಸಲೂ ಆಗದು. ವಲಸೆ ಕಾರ್ಮಿಕರು ಬೀದಿಪಾಲಾದಾಗ ಅವರನ್ನು ಬಿಹಾರಿ ಮುಂಬಯಿ ಗುಜರಾತ್ ಚೆನ್ನೈ ಬಾಂಬುಗಳೆಂದು ಕರೆಯುವ ಮೂಲಕ ಸುದ್ದಿಮನೆಗಳು ತಮ್ಮೊಳಗಿನ ಹೇಸಿಗೆಯನ್ನು ರಾಜ್ಯದುದ್ದಕ್ಕೂ ಹರಡಿವೆ.

ಸೋಂಕಿತರಲ್ಲಿ ಮತೀಯ ಅಸ್ಮಿತೆ ಹೆಕ್ಕಿ ತೆಗೆದು ಇಡೀ ಸಮುದಾಯಗಳನ್ನು ಅವಹೇಳನ ಮಾಡುವ ಮೂಲಕ ತಮ್ಮ ಅಂತರಂಗದ ಕೊಳಕಿನ ಹೊಳೆಯನ್ನೇ ಹರಿಸಿವೆ. ಈಗ ಸಮಸ್ತ ರಾಜ್ಯದ. ರೈತ ಸಮುದಾಯ ಮತ್ತು ಹತ್ತಾರು ಸಂಘಟನೆಗಳು ಕೃಷಿ ಮಸೂದೆಯ ವಿರುದ್ಧ , ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವಾಗ ಸಿನಿಮಾ ನಟಿಯರ ಡ್ರಗ್ಸ್ ದಂಧೆಯ ಹಿಂದೆ ವಾಲಾಡುತ್ತಿವೆ.

ಇಷ್ಟೆಲ್ಲಾ ಅನೈತಿಕತೆಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಪ್ರಾಮಾಣಿಕತೆಯ ವಾರಸುದಾರರಂತೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ಜನತೆಗೆ ವಿಶ್ವಾಸ ಮೂಡುವುದಾದರೂ ಹೇಗೆ. ಅಮಾಯಕ ಪ್ರಜೆಗಳ ಮೇಲೆ , ಜನಪರ ಹೋರಾಟಗಾರರ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಾಗ, ಸರ್ಕಾರದ ದಬ್ಬಾಳಿಕೆ ಕಂಡಾಗ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ ಸಂಭ್ರಮಿಸಿದ ಸುದ್ದಿ ಮನೆಗಳು ತಮ್ಮ ವಿರುದ್ಧವೇ ಸರ್ಕಾರ ತಿರುಗಿಬಿದ್ದಾಗ ಅಬ್ಬೇಪಾರಿಗಳಂತೆ ಕಾಣುತ್ತವೆ‌.

ಪವರ್ ಟಿವಿ ಶ್ಲಾಘನೀಯ ಕೆಲಸವನ್ನೇ ಮಾಡಿದ್ದರೂ ಈ ಸ್ಥಿತಿ ತಲುಪಿದೆ. ಅಂದು ಅಮಾಯಕ ಅಸಹಾಯಕ ಪ್ರಜೆಗಳ ಪರ ದನಿ ಎತ್ತಿ , ಆಕ್ರಂದನದ ದನಿಗೆ ದನಿಗೂಡಿಸಿ ಇದೇ ಸುದ್ದಿಮನೆಗಳಿಂದ ದೇಶದ್ರೋಹಿ ಪಟ್ಟ ಪಡೆದ ಪ್ರಬುದ್ಧ ಮನಸುಗಳೇ ಇಂದು ಪೊಲೀಸ್ ಮತ್ತು ಸರ್ಕಾರದ ದೌರ್ಜನ್ಯಕ್ಕೊಳಗಾದ ಸುದ್ದಿಮನೆ, ಪವರ್ ಟಿವಿ ಪರವಾಗಿಯೂ ದನಿ ಎತ್ತುತ್ತಿವೆ. ದುರಂತ ಎಂದರೆ ಇತರ ಸುದ್ದಿಮನೆಗಳು ಇದರ ಪರಿವೆಯೇ ಇಲ್ಲವೇನೋ ಎನ್ನುವಂತೆ ನಿರಾಳವಾಗಿವೆ.

ಬಂಡವಾಳ, ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣಕ್ಕೆ ಅಧೀನರಾಗುವ ಮುನ್ನ ಸುದ್ದಿಮನೆಗಳು ಈ ಎಲ್ಲ ಅಂಶಗಳನ್ನೂ ಗಮನಿಸಬೇಕಲ್ಲವೇ ? ಹೊಳೆ ದಾಟಿಸಲು ಬಲ್ಲವನೇ ಮುಳುಗಿಸಲೂ ಬಲ್ಲ ಅಲ್ಲವೇ ? ತಾವೇ ಹೊಳೆ ದಾಟುವ ಸಾಮರ್ಥ್ಯ ಇದ್ದೂ ಇಲ್ಲದಂತೆ ಆಳುವವರ ಭಟ್ಟಂಗಿಗಳಂತೆ ವರ್ತಿಸುವುದು ಎಷ್ಟು ಸರಿ ?ಸುದ್ದಿಮನೆಗಳ ಒಡೆತನ ಯಾವುದೋ ಒಬ್ಬ ಶಾಸಕ, ಸಂಸದ ಅಥವಾ ಆಳುವವರ ಬಾಲಂಗೋಚಿಗಳಂತಿರುವ ಕಾರ್ಪೋರೇಟ್ ಉದ್ಯಮಿಯ ಕೈಯ್ಯಲ್ಲಿರುತ್ತದೆ.

ನಿರೂಪಕರು ಸೂತ್ರದ ಬೊಂಬೆಗಳಂತೆ ಆಡುತ್ತಾರೆ. ಈ ಅಂಶಗಳ ಹೊರತಾಗಿಯೂ ರಾಜ್ಯ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯ, ರೆಹಮಾನ್ ಅವರನ್ನು ಬಂಧಿಸುವಂತಹ ಹೀನ ವರ್ತನೆ ಇವೆಲ್ಲವೂ ಖಂಡನಾರ್ಹ ಎನ್ನದೆ ವಿಧಿಯಿಲ್ಲ. ಪ್ರಬುದ್ಧ ಮನಸುಗಳು ಸಾವನ್ನು ಸಂಭ್ರಮಿಸುವುದಿಲ್ಲ. ಮತ್ತೊಬ್ಬರ ನೋವನ್ನೂ ಸಂಭ್ರಮಿಸುವುದಿಲ್ಲ. ಅನ್ಯಾಯಕ್ಕೊಳಗಾದವರ, ದೌರ್ಜನ್ಯಕ್ಕೊಳಗಾದವರ ಪರ ನಿಲ್ಲುತ್ತವೆ. ಏಕೆಂದರೆ ಈ ಮನಸುಗಳಿಗೆ ದೇಶ ಎಂದರೆ ಮನುಜರು ಕೇವಲ ಮಣ್ಣಲ್ಲ.

ಕೊನೆಯದಾಗಿ ಸುದ್ದಿಮನೆಗಳಿಗೆ ಈ ಮಾತುಗಳನ್ನು ಹೇಳಲೇಬೇಕಿದೆ 

ಸುದ್ದಿಮನೆಗಳ ಸಂಪಾದಕರೇ, ನಿಮ್ಮ ಮಾಲಿಕರು ಯಾರ ಸೇವೆಯನ್ನಾದರೂ ಮಾಡಲಿ ನೀವು ಜನಸಾಮಾನ್ಯರ ಪರ ನಿಂತು ಮಾತನಾಡಿ ಏಕೆಂದರೆ ನಿಮಗೆ ವೃತ್ತಿ ಧರ್ಮ ಎನ್ನುವುದಿದೆ. ಮಾಲಿಕರಿಗೆ ವ್ಯಾಪಾರಿ ಧರ್ಮ ಮುಖ್ಯವಾಗುತ್ತದೆ ನಿಮಗಲ್ಲ. ದೋಣಿ ನಿಮ್ಮದೇ ಆದರೂ ಅಂಬಿಗ ನಿಮ್ಮವನಾಗಲಾರ ಎನ್ನುವುದನ್ನು ನೆನಪಿಡಿ. ಇಲ್ಲವಾದರೆ ಇತಿಹಾಸದ ಕಸದ ಬುಟ್ಟಿ ಸೇರಿಬಿಡುತ್ತೀರಿ. ದೇಶ ಎಂದರೆ ಮಣ್ಣಲ್ಲ ಮನುಜರು ಎನ್ನುವುದನ್ನು ನೆನಪಿಡಿ.

ಆಗ ನಿಮ್ಮ ರಂಗಿನ ಪರದೆಗಳ ಬಣ್ಣಗಳಿಗೂ ಅರ್ಥ ಬರುತ್ತದೆ. ನಿಮ್ಮ ಏರುದನಿಯೂ ಸಾರ್ಥಕವಾಗುತ್ತದೆ. ನೀವು ಪ್ರಜಾತಂತ್ರದ ಒಂದು ಅಂಗ ಎನ್ನುವುದನ್ನು ಮರೆಯದಿರಿ. ಪ್ರಜಾತಂತ್ರ ಉಳಿದರೆ ಮಾತ್ರ ನೀವೂ ಉಳಿಯತ್ತೀರಿ. ಇಲ್ಲವಾದರೆ ಅಳಿಸಿಹೋಗುತ್ತೀರಿ. ಜನರ ನಡುವೆ ನಿಲ್ಲಿ ಜನರೊಡನೆ ನಿಲ್ಲಿ ಜನರಿಗಾಗಿ ನಿಲ್ಲಿ , ಜನ ನಿಮ್ಮೊಡನಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending