Connect with us

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending