ದಿನದ ಸುದ್ದಿ
ಆತ್ಮಕತೆ | ಅನಾಗರಿಕ ಆಚರಣೆಯ ವಿರುದ್ಧ
- ರುದ್ರಪ್ಪ ಹನಗವಾಡಿ
ಸೊರಬ ತಾಲ್ಲೂಕಿನಲ್ಲಿ ಇನ್ನೊಂದು ಮುಖ್ಯ ಘಟನೆಯನ್ನು ಹೇಳಿ ಮುಂದೆ ಹೋಗುತ್ತೇನೆ. ಸೊರಬ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ರಾಮನಾಥ್ ಎಂಬ ಹಿರಿಯರಿದ್ದರು. ಅವರು ತಾಲ್ಲೂಕಿನಲ್ಲಿ ಎಲ್ಲಾ ಆಡಳಿತ ನೋಡಿಕೊಳ್ಳುತ್ತಿದ್ದರು.
ವಿಶೇಷ ತಹಸೀಲ್ದಾರರು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ನಿಯೋಜಿಸಿದ್ದರೋ ಅದನ್ನು ಬಿಟ್ಟು ಇತರೆ ಸಾಮಾನ್ಯ ವಿಷಯಗಳಲ್ಲಿ ಅವರಿಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ನಾನು ನನ್ನ ಕೆಲಸಗಳನ್ನು ಬಿಟ್ಟು ತಾಲ್ಲೂಕು ಕಛೇರಿ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವಿಶೇಷ ಸಭೆ ನಡೆಸಿ ಅಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಆಚರಣೆಯನ್ನು ತಡೆಯಲು ಸೂಚನೆ ನೀಡಿತ್ತು.
ಬೆತ್ತಲೆಸೇವೆಯ ಈ ಅನಾಗರಿಕ ಆಚರಣೆಯ ಬಗ್ಗೆ ಪ್ರೊ. ಬಿ. ಕೃಷ್ಣಪ್ಪನವರು, ನಾನು ಸೊರಬಕ್ಕೆ ಬರುವ ಒಂದು ವರ್ಷ ಮುಂಚಿನಿAದ ಬೆತ್ತಲೆ ಸೇವೆಯ ಆಚರಣೆ ಒಂದು ಅನಾಗರಿಕ ಆಚರಣೆ ಎನ್ನುವ ಬಗ್ಗೆ ಅನೇಕ ಲೇಖನಗಳನ್ನು ಬರೆದು ಇದನ್ನು ತಡೆಗಟ್ಟಬೇಕೆಂದು ಅಂದಿನ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವ ಪತ್ರ ಬರೆದು ಈ ವಿಷಯಗಳೆಲ್ಲಾ ದಿನಪತ್ರಿಕೆ ಮತ್ತು ಆಗ ಜಾಣಜಾಣೆಯರ ಪತ್ರಿಕೆ ಎಂದು ಹೇಳಿ ತರುತ್ತಿದ್ದ ಲಂಕೇಶ್ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.
1986ರ ಜಾತ್ರೆ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ತಂಗರಾಜ್ ಅವರು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆ ನಡೆಸಿ ಬೆತ್ತಲೆ ಹೋಗುವ ಜನರನ್ನು ಜಾಗೃತಗೊಳಿಸಿ ತಡೆಯಬೇಕೆಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಕೃಷ್ಣಪ್ಪನವರ ಡಿಎಸ್‌ಎಸ್ ಸಂಘಟನೆಯ ಹೋರಾಟದ ಜೊತೆಗೆ ಶಿವಮೊಗ್ಗ-ಸಾಗರ-ಸೊರಬದಲ್ಲಿನ ಎಲ್ಲ ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘ, ಪ್ರಗತಿಪರ ಮಹಿಳಾ ಲೇಖಕಿಯರ ಸಂಘಟನೆಗಳು ಕೈಜೋಡಿಸಿದ್ದವು. ಭದ್ರಾವತಿಯಿಂದ ಪ್ರೊ. ಚಂದ್ರಶೇಖರಯ್ಯ, ಡಿಎಸ್‌ಎಸ್ ಚಂದ್ರು, ತೋರಣಗಟ್ಟಿ ಚಂದ್ರಶೇಖರ್, ಬಿದರಳ್ಳಿ ನರಸಿಂಹಮೂರ್ತಿ, ಇನ್ನೂ ಅನೇಕ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.
ನಾನು ಸರ್ಕಾರದ ಭಾಗವಾಗಿ ಸಂಜೆ ಹಳ್ಳಿಗಳಿಗೆ ಕರಪತ್ರಗಳನ್ನು ಹಂಚಿ, ‘ಯಾವ ದೇವರಿಗೂ ಬೆತ್ತಲೆ ಪೂಜೆ ಸಲ್ಲಿಸುವುದು ಇಷ್ಟವಾಗದು. ಇದೆಲ್ಲ ಹಿಂದುಳಿದವರನ್ನೂ, ದಲಿತರನ್ನೂ ಶೋಷಣೆ ಮಾಡುವ ಕ್ರೂರ ಪದ್ಧತಿ, ಇವನ್ನು ನಿವಾರಣೆಮಾಡಬೇಕೆಂದು ಭಾಷಣ ಮಾಡುತ್ತಾ ತಾಲ್ಲೂಕು ಕಛೇರಿಯ ಸಿಬ್ಬಂದಿಯನ್ನು ಹಲವು ತಂಡಗಳಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಸರ್ಕಾರದ ನಿರ್ದೇಶನವಿದ್ದುದರ ಜೊತೆಗೆ ಈ ವಿಷಯಗಳು ನನಗೆ ಇಷ್ಟವಾದ ಕೆಲಸವಾಗಿದ್ದರಿಂದ ಹೆಚ್ಚಿನ ಆಸಕ್ತಿಯಿಂದ ಬೆತ್ತಲೆ ಸೇವೆ ವಿರುದ್ಧ ಪ್ರಚಾರ ಮಾಡುತ್ತಿದ್ದೆವು. ಹೀಗೆ ಎಲ್ಲಾ ಕಡೆ ಪ್ರಚಾರ ಮಾಡಿದ ಮೇಲೆ ಪ್ರೊ.ಬಿ.ಕೆ ಮತ್ತು ಶಿವಪ್ಪ ಮಾಸ್ತರು ಇನ್ನು ಕೆಲವು ಗೆಳೆಯರು ನಮ್ಮಲ್ಲಿ ಊಟ ಉಪಚಾರ ಮಾಡಿ ಹೋಗುತ್ತಿದ್ದರು. ಇದರ ಸಂಪೂರ್ಣ ಘಟನೆಯ ವಿವರವನ್ನು ಈಗಾಗಲೇ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ 2010ರಲ್ಲಿ ಪ್ರಕಟಿಸಿರುವ ‘ಬಯಲು.. ಬೆತ್ತಲೆ..ಚಂದ್ರಗುತ್ತಿ’ ಎಂಬ ಪುಸ್ತಕದಲ್ಲಿನ ಮಾಹಿತಿಯನ್ನು ಇಲ್ಲಿ ಮುಂದುವರೆಸಲಾಗಿದೆ.
ಬೆತ್ತಲೆ ಸೇವೆ ನಡೆಯುವ ಒಂದು ವಾರ ಮುಂಚಿತವಾಗಿಯೇ ಕೃಷ್ಣಪ್ಪನವರ ನೇತೃತ್ವದಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳೊಡನೆ ಸಂಜೆ ಹಳ್ಳಿಗಳಿಗೆ ಹೋಗಿ ಭಾಷಣಗಳ ಮುಖಾಂತರ ಬೆತ್ತಲೆ ಸೇವೆಯನ್ನು ವಿರೋಧಿಸುವ ಪ್ರಚಾರದಲ್ಲಿ ನಾನೂ ತೊಡಗಿಸಿಕೊಂಡಿದ್ದೆ. ಚಂದ್ರಗುತ್ತಿ ದೇವಸ್ಥಾನ ಸಮಿತಿಯ ಸಂಚಾಲಕರಾಗಿದ್ದ ಈಡೂರು ಪರಶುರಾಮಪ್ಪ ಮತ್ತು ಅವರ ಸ್ನೇಹಿತರು ವೈಯಕ್ತಿಕವಾಗಿ ಬೆತ್ತಲೆ ಸೇವೆಯನ್ನು ವಿರೋಧಿಸುವ ಹೋರಾಟಕ್ಕೆ ನಮ್ಮ ಬಳಿ ಸಮ್ಮತಿಸಿದ್ದರೂ ಇದನ್ನು ವಿರೋಧಿಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ದುಗುಡ ತುಂಬಿತ್ತು. ಆಗಿನ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಇದೊಂದು ಅತಿ ಸೂಕ್ಷ್ಮ ವಿಚಾರವೆಂದೂ- ಏನಾದರೂ ಮಾತನಾಡಿದರೆ ಜನರಿಂದ ದೂರ ಆಗುವ ಆತಂಕ ರಾಜಕಾರಣಿಗಳ ಒಳ ಇಂಗಿತವಾಗಿತ್ತು. ಚುನಾವಣಾ ರಾಜಕೀಯದ ದೃಷ್ಟಿಯಿಂದ ಅವರಿಗೆ ಇದೆಲ್ಲ ಬೇಡದ ವಿಚಾರವಾಗಿತ್ತು.
ಈ ಹಿನ್ನೆಲೆಯಲ್ಲಿ ಬೆತ್ತಲೆಸೇವೆ ನಡೆಸುವ ಮೊದಲ ದಿನ ಸರ್ಕಾರವು ಸೂಚಿಸಿದಂತೆ ಡಿ.ಎಸ್.ಎಸ್. ಮತ್ತು ಇತರೆ ಸಂಘಟನೆಯ ಕಾರ್ಯಕರ್ತರು- ಬೆತ್ತಲೆ ಹೋಗುತ್ತಿದ್ದವರನ್ನು ತಡೆದು ಅವರಿಗಾಗಿ ಹೊಸ ಬಟ್ಟೆ ತಂದಿದ್ದ ಮಹಿಳಾ ಕಾರ್ಯಕರ್ತರು ಅವರಿಗೆ ಸುತ್ತಿ- ಕಳುಹಿಸುತ್ತಿದ್ದರು. ಅವರು ಸುತ್ತಿಕೊಂಡು ಮುಂದೆ ಹೋಗುತ್ತಿದ್ದಾಗ ಮತ್ತೆ ಬಿಚ್ಚಿಕೊಂಡು ಓಡುತ್ತಿದ್ದುದು ನಡೆಯುತ್ತಲೂ ಇತ್ತು. ಮೊದಲ ದಿನದ ಈ ಕರ‍್ಯ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು. ಸರ್ಕಾರ ಮತ್ತು ಡಿಎಸ್‌ಎಸ್ ಕರ‍್ಯಕರ್ತರು ಕೂಡ ಇದು ಸಂಪೂರ್ಣ ಯಶಸ್ವಿಯಾಯಿತೆಂದೇ ಭಾವಿಸಿದೆವು.
ಆದರೆ ಎರಡನೇ ದಿನ ಅಂದರೆ, 20-3-1986ರಂದು ಬೆಳಿಗ್ಗೆಯಿಂದಲೇ ಜನಸಾಗರ ವಿವಿಧ ಕಡೆಗಳಿಂದ ಹರಿದು ಬರುತ್ತಿತ್ತು. ನಾನು ನನ್ನ ಸಿಬ್ಬಂದಿಯೊಡನೆ ಮಾಮೂಲಿನಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಬೆತ್ತಲೆ ಸೇವೆ ಮಾಡೋ ಹೆಂಗಸಿನ ಫೋಟೋ ತೆಗೆಯುತ್ತಿದ್ದ ಇನ್ನೊಬ್ಬ ಮಹಿಳಾ ಫೋಟೋಗ್ರಾಫರ್‌ನನ್ನು ನಮ್ಮ ಎದುರಿಗೆ ಅಡ್ಡಹಾಕಿ ಅವಳು ತೆಗೆದಿದ್ದ ಫೋಟೋ ರೀಲುಗಳನ್ನು ಹೊರತೆಗೆದು ಅವಳನ್ನು ನಮ್ಮ ಎದುರಿಗೆ ಥಳಿಸಲು ಮುಂದಾಗಿ, ಅವಳನ್ನು ನಗ್ನಗೊಳಿಸಿದರು. ಆಗ ಜೋಗಿತಿಯರನ್ನು ನಾನು ತಡೆಯಲು ಹೋದಾಗ ವಾಗ್ವಾದ-ತಳ್ಳಾಟ ಪ್ರಾರಂಭವಾಯಿತು.
ಸರ್ಕಾರ ಮತ್ತು ವಿವಿಧ ಸಂಘಟನೆಗಳನ್ನು ಜೋಗತಿಯರು ಎದುರು ಹಾಕಿಕೊಳ್ಳುವುದನ್ನು ಊಹಿಸದಿದ್ದ ನಮಗೆ ಇದೆಲ್ಲ ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜನರು ಅಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರನ್ನ ಹೊಡೆದರಂತೆ. ಇಲ್ಲಿ ಬಟ್ಟೆ ಬಿಚ್ಚಿದರಂತೆ, ಎಂಬ ವದಂತಿಗಳನ್ನ ಹಬ್ಬಿಸಿ ಸರ್ಕಾರದ ವ್ಯವಸ್ಥೆಯಲ್ಲಾಗಲೀ, ಡಿಎಸ್ ಎಸ್ ಮತ್ತಿತರ ಹೋರಾಟಗಾರರಾಗಲೀ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದಂತಾಗಿದ್ದರು. ನನ್ನೊಡನೆ ಇದ್ದ ಸಿಬ್ಬಂದಿ ಚದುರಿ ಹೋಗಿ ನಾನು ರಕ್ಷಣೆಗಾಗಿ ಪೋಲೀಸ್ ವ್ಯಾನಿಗೆ ಹತ್ತಿಕೊಂಡಿದ್ದೆ. ನಾವು ತಂದಿದ್ದ ಜೀಪಿಗೆ ಬೆಂಕಿ ಹಚ್ಚಿಟ್ಟು ಜೋಗತಿಯರು ಅಟ್ಟಹಾಸ ಮೆರೆದಿದ್ದರು. ನಾವು ವ್ಯಾನಿನ ಒಳಗೆ ಇದ್ದು, ಇನ್ನು ಮುಂದೆ ಏನಾಗುವುದೋ ಅನ್ನೋ ಆತಂಕದಲ್ಲಿದ್ದಾಗ ನನಗೆ ಪರಿಚಿತ ವ್ಯಕ್ತಿಯೊಬ್ಬ ಓಡಿಬಂದು ನನ್ನ ಪರಿಚಯ ಗುರುತು ಸಿಗದಂತೆ ಭಂಡಾರ ಹಾಕಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಪಂಚೆ ನೀಡಿ ಪ್ಯಾಂಟ್ ಷರಟು ತೆಗೆಸಿ ನಾನು ಯಾರೋ ಅನ್ನೋ ರೀತಿ ಮಾಡಿಕೊಂಡು ತನ್ನ ರಾಜದೂತ್ ಮೋಟಾರ್‌ಬೈಕ್‌ನಲ್ಲಿ ಸೊರಬಕ್ಕೆ ತಂದುಬಿಟ್ಟರು.
ಅಲ್ಲಿಂದ ಎಲ್ಲರಿಗೂ ಫೋನ್ ಮಾಡಿ ಆಗಿದ್ದ ಅನಾಹುತವನ್ನು ತಿಳಿಸಿದೆ. ಇದು ಸುಮಾರು ಮಧ್ಯಾಹ್ನ 3.00 ಘಂಟೆಯ ತನಕ ಜೋಗತಿಯರ ಅಟ್ಟಹಾಸಕ್ಕೆ ಗುರಿಯಾದ ಡಿ.ಎಸ್.ಎಸ್. ಮತ್ತು ಇತರೆ ಕರ‍್ಯಕರ್ತರು ತಮಗೆ ಸಿಕ್ಕ ಸಿಕ್ಕ ಕಡೆ ಚದುರಿ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಪರಾರಿಯಾದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರೇನಾದರೂ ಈ ಜೋಗತಿಯರ ಕೈಗೆ ಸಿಕ್ಕಿದ್ದರೆ ಬಹುಶಃ ಅಂದೇ ಅವರ ಕೊಲೆ ಮಾಡಲು ಹೇಸುತ್ತಿರಲಿಲ್ಲ.
ಸುಮಾರು 4.00 ಘಂಟೆಯ ಸುಮಾರಿಗೆ ಹೆಚ್ಚಿನ ಪೋಲೀಸ್ ಬಂದು ಇಡೀ ಜೋಗತಿಯರ ಸಮೂಹವನ್ನು ಬೆತ್ತಲೆಯಾಗಿಯೇ ಅರೆಸ್ಟ್ ಮಾಡಿ ಸೊರಬ ಪೋಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ಸುಮಾರು 5-6 ಘಂಟೆಯ ಸುಮಾರಿಗೆ ಪೋಲೀಸ್ ಬಂದು ಇವರಲ್ಲಿ ಯಾರು ನಿಮ್ಮ ಮೇಲೆ ಹಲ್ಲೆ ಮಾಡಿದರು ಗುರ್ತಿಸಿ ಎಂದು ಹೇಳಿದರು.
ಪೊಲೀಸರೊಡನೆ ಹೋಗಿ ನೋಡುತ್ತೇನೆ, ಅದೊಂದು ಭಯಂಕರ ದೃಶ್ಯ. ಪೀಚಲು ದೇಹಗಳ ಅನಾರೋಗ್ಯವೇ ಮೂರ್ತಿವೆತ್ತ- ಕುಡಿತದ ಅಮಲಿನಲ್ಲಿದ್ದ ಅವರಿಗೆ ತಾವೇನು ಮಾಡಿದ್ದೆವು ಅನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ಆ ರೂಮಿಗೆ ಬಂದವರನ್ನು ನೋಡುತ್ತಿದ್ದರು. ನನಗೆ `ಯಾರು ಏನು ಮಾಡಿದರು ಎನ್ನುವುದನ್ನ ಯಾರ ಮೇಲೆ ಹೇಳಲಿ’ ಎನ್ನುತ್ತಾ ಈಚೆಗೆ ಬಂದೆ. ಆದರೆ ಈ ಜೋಗತಿಯರು ಅಂತಹ ಸ್ಥಿತಿಯಲ್ಲೂ ತಮ್ಮ ಬಳಿ ಬೆಳಗಿನಿಂದ ದೋಚಿದ ಒಡವೆಗಳು ಮತ್ತು ಹಣ ಇರುವುದು ಸಣ್ಣ ಸಣ್ಣ ಚೀಲಗಳಲ್ಲಿರುವುದು ಪರಿಶೀಲಿಸಿದಾಗ ಕಂಡು ಬಂತು.
ಈ ಘಟನೆಯ ನಂತರ ಆದ ಮಾರನೇ ದಿನ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಗಳು ಪ್ರಕಟಗೊಂಡವು. ನಾನು ಆತಂಕದಿAದ ನನ್ನ ಹೆಂಡತಿಗೆ ‘I ಚಿm Sಚಿಜಿe’ ಎಂದು ತಂತಿ ನೀಡಿದಾಗ ಅವಳು ಗಲಿಬಿಲಿಗೊಂಡು ಫೋನ್ ಮಾಡಿದಳು. ಇತ್ತ ನನ್ನ ಹಳ್ಳಿ ಹನಗವಾಡಿಯಿಂದ ಬಂದಿದ್ದ ಜೋಗತಿಯರಿಂದಲೇ ರೋಚಕವಾಗಿ ತಲುಪಿದ್ದ ಸುದ್ದಿಯಿಂದ, ವರದಿಗಳನ್ನು ಕೇಳಿಕೊಂಡ ನಮ್ಮ ಊರಿನ ಜನರು ಮತ್ತು ನಮ್ಮ ಅವ್ವ, ಅಣ್ಣ-ತಮ್ಮಂದಿರು ಮತ್ತು ಮಿತ್ರರ ದಂಡು ಸೊರಬಕ್ಕೆ ನನ್ನನ್ನು ನೋಡಲು ಬಂದಿದ್ದರು. ಅವರು ನಾನು ಮಾಮೂಲಿನಂತೆ ಇದ್ದುದನ್ನು ನೋಡಿ ನೆಮ್ಮದಿಗೊಂಡರು. ನನ್ನ ತಮ್ಮನೊಬ್ಬ ನಿನ್ನನ್ನು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಸಮೇತ ನೋಡುವ ಕಲ್ಪನೆಯಲ್ಲಿಯೆ ಓಡಿ ಬಂದೆವು ಎಂದಾಗ ನಾನು ಕೂದಲೆಳೆಯಲ್ಲಿ ಸಾವು ತಪ್ಪಿದ್ದನ್ನು ವಿವರಿಸಲಿಲ್ಲ.
ನಾನು ತಹಶೀಲ್ದಾರನಾಗಿ ಹೊಸದರಲ್ಲಿ ಆಗಿದ್ದ ಈ ಘಟನೆ ಇಂದಿಗೂ ನನಗೆ ಎಚ್ಚರಿಕೆಯ ಮಾರ್ಗ ಸೂಚಿಯಾಗಿದೆ. ಒಂದು ವಿಷಾದದ ಸಂಗತಿಯೆAದರೆ ನಮ್ಮ ಪೋಲೀಸರು ಇಂದಿಗೂ ಯಥಾಸ್ಥಿತಿಯ ರಕ್ಷಕರಾಗಿಯೇ ಉಳಿದಿದ್ದಾರೆ. ಅವರನ್ನು ಬದಲಾಗುತ್ತಿರುವ ಕಾಲಮಾನದ ಜೊತೆಗೆ ಬದಲಾವಣೆಯ ರೂವಾರಿಗಳಾಗುವಂತೆ ತರಬೇತಿ ನೀಡುವಲ್ಲಿ ಸರ್ಕಾರವು ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.
ಈ ಘಟನೆಯ ನಂತರದ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮಹತ್ತರ ಬದಲಾವಣೆ ಆ ಪ್ರದೇಶದಲ್ಲಿ ಆಗಿದೆ. ಬೆತ್ತಲೆ ಸೇವೆಯನ್ನು ಸರ್ಕಾರ ನಿಷೇಧಿಸಿದೆ. ಅದರೊಟ್ಟಿಗೆ ಅನೇಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಸಾಮಾನ್ಯ ಜನರ ಮಧ್ಯದಲ್ಲಿ ಚರ್ಚೆಗಳಾಗಿವೆ. ಕೃಷ್ಣಪ್ಪನವರ ಹೋರಾಟ ಹೊಸ ದಿಕ್ಕಿನೆಡೆಗೆ ಸಮಾಜವನ್ನು ಮುಖ ಮಾಡಿಸಿದೆ. ಇದು ಅವರ ಆತ್ಮಕ್ಕೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಮನ್ವಯದಲ್ಲಿ ಅಣಕು ಅಭ್ಯಾಸವು ನಡೆಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ3 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ2 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ದಿನದ ಸುದ್ದಿ2 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ3 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ


