Connect with us

ಅಂಕಣ

ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)

Published

on

~ ರುದ್ರಪ್ಪ ಹನಗವಾಡಿ

ಭದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್‌ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ ಹೋರಾಟಗಾರರಾಗಿದ್ದ ಅನೇಕರು ಮಾತಿಲ್ಲದೆ ಅವರವರೇ ಕೊರಗುತ್ತಿದ್ದರು.

ಶಿವಮೊಗ್ಗ ಭದ್ರಾವತಿಯಲ್ಲಿ ಕೃಷ್ಣಪ್ಪನವರಿಗೆ ಎಲ್ಲಾ ಜಾತಿಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಾಯಕರ ಬೆಂಬಲ, ಡಿಎಸ್‌ಎಸ್ ನ ಎಲ್ಲ ಹೋರಾಟಗಾರರಿಗೂ ಸಿಗುತ್ತಿತ್ತು. ಬೆಂಗಳೂರಿಗೆ ಬಂದ ನಂತರ ಆದ ಬೆಳವಣಿಗೆಗಳ ಬಗ್ಗೆ ಒಂದು ರೀತಿಯ ವಿಷಾದ ತುಂಬಿದ ಭಾವ ಕೃಷ್ಣಪ್ಪನವರಲ್ಲಿ ತುಂಬಿತ್ತು. ಆದರೂ ಅವರು ಮತ್ತೆ ಇದನ್ನು ಪುನಶ್ಚೇತನಗೊಳಿಸುವ ಕರ‍್ಯದಲ್ಲಿ ಹಗಲು ರಾತ್ರಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡುತ್ತ ವಿವಿಧ ಜಿಲ್ಲೆಗಳಿಗೆ ಹೋಗಿ ಡಿಎಸ್ ಎಸ್ ಸಂಘಟನೆಯ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಡಿಎಸ್‌ಎಸ್ ಸಂಘಟನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಡಿದ ನಿರಾಶಾ ಕಾಲದಲ್ಲಿಯೇ ಛಲಬಿಡದ ವಿಕ್ರಮನಂತೆ ದಲಿತರನ್ನೆಲ್ಲ ಪುನಃ ಸಂಘಟಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಅವರ ಸಹಪಾಠಿ ಆರ್. ನಾಗರಾಜ್, ಅರ್ಕೇಶ್ ಮತ್ತು ನಾನು ಅವರ ಮನೆಯಲ್ಲಿ ಸೇರಿದಾಗ ಚರ್ಚಿಸುತ್ತಿದ್ದರು. ಮೈಸೂರಿನ ಮಹಾದೇವ ಬೆಂಗಳೂರಿನ ಸಿದ್ಧಲಿಂಗಯ್ಯ ಇವರುಗಳ ಸಂಬಂಧ ಬಹಳ ದೂರ ಸರಿದಿತ್ತು. ಅದನ್ನು ಪುನಃ ಪುನಶ್ಚೇತನಗೊಳಿಸುವುದಕ್ಕೆ ಬೇಕಾದ ಶ್ರಮ ಹಾಕಲು ಮಹಾದೇವನಿಗಾಗಲೀ, ಸಿದ್ಧಲಿಂಗಯ್ಯನಿಗಾಗಲೀ ಇರಲಿಲ್ಲ. ಹಾಗಾಗಿ ಮತ್ತೆ ಏಕಾಂಗಿಯಾಗಿಯೇ ಎಲ್ಲಾಕಡೆ ಇವರೊಬ್ಬರೇ ತಿರುಗಾಡಿ ಸಂಘಟಿಸಲು ಶ್ರಮಿಸುತ್ತಿದ್ದರು.

ಈ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ರ‍್ಯಾಲಿಯಲ್ಲಿ ಭಾಗವಹಿಸಲು, ಗದಗ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ ಸಭೆಗೆ ಹೋಗಿದ್ದರು. ನಾನು ಯಲಹಂಕ ಆಫೀಸಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಹೋದಾಗ ಮೇಷ್ಟರು ಗದಗ್‌ಗೆ ಹೋದ ಸುದ್ದಿ ತಿಳಿದಿತ್ತು. ಗದಗ್‌ನಲ್ಲಿ ಕೃಷ್ಣಪ್ಪನವರ ತಂಗಿಯ ಮಗಳು ಮೈತ್ರ‍್ರಾ ಕೂಡಾ ಇದ್ದುದು, ಮೈತ್ರಾಳ ಗಂಡ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದು, ಸಂಘಟನೆಯ ಜೊತೆ ಅವರನ್ನೆಲ್ಲಾ ನೋಡಿಕೊಂಡು ಬರುವರೆಂದು ಮಾತಾಡಿಕೊಂಡು ನಾನು ಮಧ್ಯಾಹ್ನ ಊಟ ಮುಗಿಸಿಕೊಂಡು ಮತ್ತೆ ಆಫೀಸಿಗೆ ಹೋಗಿದ್ದೆ. ಆದರೆ ಸಂಜೆ 5ರ ವೇಳೆಗೆ ಕೃಷ್ಣಪ್ಪನವರು ಗದಗ್‌ನಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿಯೂ ಗದಗ್‌ನಿಂದ ಫೋನ್ ಬಂದಿರುವುದಾಗಿಯೂ ನನ್ನ ಆಫೀಸಿಗೆ ಮಗಳು ಶಾಲಿನಿ ಫೋನ್ ಮಾಡಿದ್ದಳು. ಇಂದಿರಾ ಆಫೀಸ್ ಮುಗಿಸಿ ಮನೆಗೆ ಬರುವ ವೇಳೆಗೆ ನನ್ನ ಹೆಂಡತಿ ಗಾಯತ್ರಿಗೂ ಫೋನ್ ಮಾಡಿ ತಿಳಿಸಿದೆ. ಅರ್ಜೆಂಟಾಗಿ ನಾವು ಎಲ್ಲರೂ ಗದಗ್‌ಗೆ ಹೋಗಿ ಮೇಷ್ಟçರನ್ನ ಕರೆದುಕೊಂಡು ಬಂದು ಇಲ್ಲಿಯೇ ಶುಶ್ರೂಷೆ ಕೊಡಿಸುವ ಎಂದು ಮಾತಾಡಿಕೊಂಡು ರಾತ್ರಿಯೇ ಬೆಂಗಳೂರಿನಿಂದ ಹೊರಟು ಮಧ್ಯೆ ರಾತ್ರಿ ನಮ್ಮೂರ ಬಳಿ ನಿಂತು ನಮ್ಮ ಊರಿನವರಿಗೂ ವಿಷಯ ತಿಳಿಸಿ ಬೆಳಿಗ್ಗೆ 7 ಘಂಟೆಗೆ ಗದಗ ತಲುಪಿದೆವು.

ಬೆಂಗಳೂರು ಬಿಟ್ಟು ಹೊರಟಾಗ ಅವರ ಆರೋಗ್ಯದಲ್ಲಿನ ಸಮಸ್ಯೆ ಸ್ಪಷ್ಟವಾಗಿ ಏನೆಂದು ತಿಳಿಯದಿದ್ದರೂ-ಅವರ ಬಿಡುವಿಲ್ಲದ ತಿರುಗಾಟಕ್ಕೆ ತಡೆಹಾಕಿ ಆರೋಗ್ಯದ ಕಡೆ ಗಮನ ನೀಡಲು ಏನೆಲ್ಲ ಕ್ರಮ ಜರುಗಿಸಬೇಕೆಂದು ನನ್ನ ಹೆಂಡತಿ ಗಾಯತ್ರಿ ಇಂದಿರಾಗೆ ಸಲಹೆ ನೀಡುತ್ತಿದ್ದಳು. ಕೃಷ್ಣಪ್ಪನವರ ಆರೋಗ್ಯ ಕೆಡಿಸುವಂತಹ ಅಭ್ಯಾಸಗಳು ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಡಿಎಸ್‌ಎಸ್‌ನ ಸಮಾವೇಶಗಳಲ್ಲೂ ಕೂಡ ಎಲ್ಲರಿಗೂ ಸ್ವಚ್ಛತೆ, ವ್ಯಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಭಾವಿಸುತ್ತಿದ್ದರು. ಕೊಳಕುತನ, ಸೋಮಾರಿತನ ಬಾಲ್ಯದಿಂದಲೂ ಕೃಷ್ಣಪ್ಪನವರ ಬಳಿ ಸುಳಿದಿರಲಿಲ್ಲ. ಊಟ ಉಪಚಾರಗಳಲ್ಲೂ ಶಿಸ್ತುಬದ್ದರಾಗಿದ್ದು ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿರಲಿಲ್ಲ. ಈ ಕಾರಣದಿಂದ ಏನಾದರೂ ಆಗಿರಲಿ ಬಂದ ನಂತರ ಅವರನ್ನು ಹೆಚ್ಚು ತಿರುಗಾಡಲು ಬಿಡಬಾರದೆಂಬ ತೀರ್ಮಾನ ಮಾಡಿಕೊಂಡು ನಾವೆಲ್ಲ ಗದಗ್ ಕಡೆ ಹೊರಟಿದ್ದೆವು.

ಹೋದಾಕ್ಷಣ ಅವರನ್ನು ಐಸಿಯುನಲ್ಲಿ ನಾವು ಮೂವರೂ ಹೋಗಿ ನೋಡಿದೆವು. ಕಣ್ಣು ಬಿಟ್ಟು ನೋಡಿದ್ದನ್ನು ಬಿಟ್ಟರೆ ಬೇರೇನೂ ಮಾತಾಡಲಿಲ್ಲ. ಇಂತಹ ಪರಿಸ್ಥಿತಿಯನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ದಾರಿಯುದ್ದಕ್ಕೂ ಯೋಚಿಸಿಕೊಂಡು ಬಂದದ್ದಕ್ಕೂ ಇಲ್ಲಿನ ಪರಿಸ್ಥಿತಿ ನೋಡಿ ನಾವೆಲ್ಲಾ ಗರಬಡಿದಂತಾಗಿ ಕೂತಿದ್ದೆವು. ಗಾಯತ್ರಿ, ಇಂದಿರಾ ಮಾತಾಡದೆ ಉಸಿರಾಡುತ್ತಿದ್ದರು. ಮತ್ತೆ 10-15 ನಿಮಿಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಾರ್ಡ್ ಬಾಯ್ ಹೇಳಿದಾಗ ನಾವೆಲ್ಲ ಒಳಗೆ ಹೋದೆವು. ಬಂದ ಡಾಕ್ಟರ್ ನಮ್ಮನ್ನೆಲ್ಲ ಮತ್ತೆ ಹೊರಹೋಗಲು ಹೇಳಿ ಶುಶ್ರೂಷೆ ಮಾಡುತ್ತಿದ್ದರು. ಏನಾಯಿತು, ಹೇಗಾಯಿತು ಎಂದು ನಾವುಗಳೆಲ್ಲ ಸಾವರಿಸಿಕೊಳ್ಳುತ್ತಿರುವಾಗಲೇ ಮೇಷ್ಟರು ಕೊನೆಯುಸಿರೆಳೆದಿದ್ದರು. ಅಂದು ದಿನಾಂಕ 30-4-1997 ಬೆಳಗಿನ 8.30 ಇರಬಹುದು. ನಾವು ಬಂದು ನೋಡಿ ನಂತರ ಫ್ರೆಶ್ ಆಗಿ ನಂತರ ಏನು ಮಾಡುವುದು ಎಂದು ಯೋಚಿಸುವ ಮುನ್ನ ಇದೆಲ್ಲ ಆಗಿ ಹೋಗಿತ್ತು.

ಈಚೆ ಬಂದ ನನಗೆ ಸಾವನ್ನ ಹೀಗೆ ನೇರವಾಗಿ ಎದುರಿಸಿದ ಸಂದರ್ಭಗಳು ಇರಲಿಲ್ಲ. ಮುಂದಿನ ವಿಚಾರವನ್ನು ಯೋಚನೆ ಮಾಡುತ್ತಲೇ ಹತ್ತಿರದಲ್ಲಿದ್ದ ಟೆಲಿಫೋನ್ ಬೂತ್‌ನಿಂದ ಮೈಸೂರಿನಲ್ಲಿದ್ದ ಮಗಳು ಸೀಮಾ ಮತ್ತು ಬೆಂಗಳೂರಿನಲ್ಲಿದ್ದ ಶಾಲುಗೆ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ಪಿಎಸ್ ಆಗಿದ್ದ ಬಸವಣ್ಯಪ್ಪನಿಗೆ ತಿಳಿಸಿ ಎಲ್ಲಾ ಡಿಎಸ್‌ಎಸ್ ಸ್ನೇಹಿತರಿಗೆ ತಿಳಿಸಲು ಹೇಳಿದೆ. ಹರಿಹರದಲ್ಲಿನ ಮೇಷ್ಟರ ತಮ್ಮಂದಿರಿಗೆ ಸುದ್ದಿ ತಿಳಿಸಿ ಬಂದೆ. ಸಿರಸಿಯಲ್ಲಿದ್ದ ಮೇಷ್ಟರ ಇನ್ನೊಬ್ಬ ತಮ್ಮ ಮಾರುತಿಗೆ ತಿಳಿಸಿ ಮೇಷ್ಟರ ಪಾರ್ಥಿವ ಶರೀರವನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ರೀತಿನೀತಿಗಳನ್ನು ಮುಗಿಸಿ-ಸಮಾಧಿಯಾಗುವುದು ಇನ್ನೂ ಒಂದು ದಿನ ತಡವಾಗುವುದರಿಂದ ದೇಹಕ್ಕೆ ಬೇಕಾದ ರೀತಿಯಲ್ಲಿ ಇಂಜೆಕ್ಷನ್ ಕೊಡಿಸಿ ಸುಮಾರು 3-4 ಗಂಟೆಗೆ ಗದಗ ಬಿಟ್ಟು ಹರಿಹರ ಟೌನ್‌ನಲ್ಲಿದ್ದ ಮೇಷ್ಟರ ಮನೆಗೆ ಸಂಜೆ 7 ಗಂಟೆಯ ಸಮಯಕ್ಕೆ ತಲುಪಿದ್ದೆವು.

ರಾತ್ರಿ ಭಜನೆ ಮಾಡಲು ವ್ಯವಸ್ಥೆ ಮಾಡಿ ನಂತರ ಮೇಷ್ಟರ ಸಂಸ್ಕಾರ ಎಲ್ಲಿ ಏನು ಎಂದು ಅವರ ತಮ್ಮಂದಿರು ತಂಗಿಯರ ಜೊತೆ ಮಾತಾಡಿದಾಗ ಅದೆಲ್ಲ ತುಂಗಭದ್ರಾ ನದಿಯ ದಡದಲ್ಲಿ ಮಾಡುವುದು ಎಂದು ತಿಳಿಸಿದರು. ಈ ಬಗ್ಗೆ ದುಃಖದಲ್ಲಿ ಮುಳುಗಿದ್ದ ಇಂದಿರಾ ಜೊತೆ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ಚಿಂತೆಯಲ್ಲಿ ನಾನು ಮೂರು ಕಿ.ಮೀ. ದೂರದ ನಮ್ಮ ಊರಿಗೆ ಬಂದಿಳಿದೆ. ರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಹರಿಹರ ತುಂಗಾ ನದಿ ದಡದಲ್ಲಿ ಸಂಸ್ಕಾರ ಮಾಡುವ ಅವರ ನಿರ್ಧಾರವನ್ನು ತಿಳಿದು ಮನಸ್ಸಿಗೆ ಒಂದು ಚಿಂತೆಯಾಯಿತು. ಇಷ್ಟೊಂದು ಹೋರಾಟದ ಜೀವನ ನಡೆಸಿದ ಮನುಷ್ಯನ ನೆನಪು ನಾಳೆಗೆ ಭೌತಿಕವಾಗಿ ಕೊನೆಯಾಗುವ ಬಗ್ಗೆ ಚಿಂತೆಯಾಯಿತು. ನಾನು ನಮ್ಮ ಅಣ್ಣ ಅವ್ವ ಇವರ ಜೊತೆ ಚರ್ಚಿಸಿ-ನಮ್ಮ ತೋಟದ ಜಮೀನಿನಲ್ಲಿ ಸಮಾಧಿ ಮಾಡಿದರೆ ಹೇಗೆ ಎಂದು ಯೋಚಿಸಿ, ಬೆಳಿಗ್ಗೆ ಈ ನನ್ನ ಯೋಚನೆಯನ್ನು ಮೇಷ್ಟರ ತಮ್ಮ ಮಾರುತಿ ಬಳಿ ಚರ್ಚಿಸಿ ನಂತರ ಎಲ್ಲ ಅವರ ಸಂಬಂಧಿಗಳಿಗೂ ವಿಚಾರಿಸಿದೆ. ಅವರೆಲ್ಲರೂ ನನ್ನ ಸಲಹೆಗೆ ಒಪ್ಪಿದರು. ಅದರಂತೆ ಎಲ್ಲಾ ಡಿಎಸ್‌ಎಸ್‌ನ ಕರ‍್ಯಕರ್ತರಿಗೆ, ಅಧ್ಯಾಪಕರಿಗೆ, ರಾಜಕಾರಣಿಗಳಿಗೆ ತಿಳಿಸಿದೆವು. ಹರಿಹರದಿಂದ ನಮ್ಮೂರಿನಿಂದಲೇ ತರಿಸಿದ್ದ ಟ್ರಾಕ್ಟರ್‌ನಲ್ಲಿ ನಮ್ಮ ತೋಟದಲ್ಲಿ ಸುಮಾರು 4 ಗಂಟೆಯ ಸಮಯಕ್ಕೆ 1-5-1997ರಂದು ಕೃಷ್ಣಪ್ಪನವರ ಅಂತಿಮ ಕಾರ್ಯವನ್ನು ಮಾಡಿದೆವು. ಅಂತಿಮ ದರ್ಶನ ಪಡೆಯಲು ರಾಜ್ಯದಾದ್ಯಂತ ಪ್ರಗತಿಪರರು, ಡಿಎಸ್‌ಎಸ್ ಕರ‍್ಯಕರ್ತರು, ರಾಜಕಾರಣಿಗಳ ದಂಡೇ ಆಗಮಿಸಿತ್ತು. ಸಮಾಧಿಯಾದ ನಂತರ ಡಿಎಸ್‌ಎಸ್‌ನ ಎಲ್ಲಾ ಬಣಗಳ ಕರ‍್ಯಕರ್ತರೂ ಕೃಷ್ಣಪ್ಪನವರ ಹೋರಾಟದ ಆಶಯಗಳನ್ನು ಈಡೇರಿಸಲು ಅಂದು ಪ್ರಮಾಣ ಮಾಡುವ ಪ್ರತಿಜ್ಞೆ ಮಾಡಿ ನಿರ್ಗಮಿಸಿದ್ದರು.

1997ರಲ್ಲಿ ಕೃಷ್ಣಪ್ಪನವರ ನಿರ್ಗಮನದ ನಂತರ ಕರ್ನಾಟಕದ ದಲಿತ ಹೋರಾಟದ ಸಮಗ್ರ ಚಿತ್ರಣ ಹಲವು ಟಿಸಿಲುಗಳಾಗಿ ಹೊರಹೊಮ್ಮಿದ್ದವು. ನನ್ನ ಸರ್ಕಾರಿ ನೌಕರಿಯ ಜೊತೆ ಎಲ್ಲ ಬಣಗಳಲ್ಲಿ ನನಗೆ ಬಲ್ಲವರಿದ್ದರೂ ಯಾರೊಡನೆ ಒಡನಾಡುವುದು ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೂ ಯಾರು ಏನೇ ಕರ‍್ಯಕ್ರಮ ಮಾಡುವಾಗ ಸಹಕಾರ ನೀಡಲು ಕೋರಿದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದೆ.

ಕೃಷ್ಣಪ್ಪನವರ ನಿಧನಾನಂತರ ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾನ್ಷಿರಾಮ್ ಅವರು ಯಲಹಂಕದಲ್ಲಿದ್ದ ಕೃಷ್ಣಪ್ಪನವರ ಮನಗೆ ಬಂದು ಇಂದಿರಾ ಮತ್ತು ಅವರ ಇಬ್ಬರು ಮಕ್ಕಳು ಶಾಲಿನಿ, ಸೀಮಾ ಅವರಿಗೆ ಸಾಂತ್ವನ ಹೇಳಿದರು. ತಕ್ಷಣದ ಅಗತ್ಯಗಳಿಗೆ ಎಂಬ ಕಾರಣದಿಂದಲೋ ಏನೋ ಎರಡು ಲಕ್ಷ ರೂಪಾಯಿಗಳನ್ನು ಇಂದಿರಾ ಅವರ ಕುಟುಂಬಕ್ಕೆ ನೀಡಿದ್ದರು. ಆದರೆ ಇಂದಿರಾ ಅವರು ನನಗೀಗ ಸರ್ಕಾರಿ ನೌಕರಿ ಇರುವ ಕಾರಣ ನೀಡಿ, ಅದನ್ನು ಕೃಷ್ಣಪ್ಪನವರ ಹೆಸರಿನಲ್ಲಿ ಮುಂದೆ ಸ್ಥಾಪಿಸಿದ ಟ್ರಸ್ಟ್ನ ಹೆಸರಿನಲ್ಲಿ ನಡೆಸುವ ಕರ‍್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿ ಆ ಹಣವನ್ನು ಒಪ್ಪಿಕೊಂಡಿದ್ದರು. ಅದರಂತೆ ಕಾನ್ಷಿರಾಮ್ ಅವರು ನೀಡಿದ ಹಣ, 1997ರಲ್ಲಿ ಸ್ಥಾಪಿಸಿದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ನಲ್ಲಿ ಮೂಲಧನವಾಗಿ ಉಳಿದಿದೆ. ಕೃಷ್ಣಪ್ಪನವರ ಆಶಯದಂತೆ ಕರ‍್ಯಕ್ರಮಗಳನ್ನು ನಿರ್ವಹಿಸಿಕೊಂಡು ಕಳೆದ 24 ವರ್ಷಗಳಿಂದ ಬರುತ್ತಿದ್ದೇವೆ.

ಕೃಷ್ಣಪ್ಪನವರು ಕಾಲವಾದ ಎರಡು ತಿಂಗಳಲ್ಲಿ ಡಿಎಸ್‌ಎಸ್‌ನ ಅವರ ಅನುಯಾಯಿಗಳಲ್ಲಿ ನಾನು ಮತ್ತು ಇಂದಿರಾ ಮನವಿ ಮಾಡಿ ಕೃಷ್ಣಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಅರ್ಕೇಶ್ ಇದ್ದ ಸಿಆರ್‌ಪಿಎಫ್‌ನಲ್ಲಿನ ಒಂದು ಸಭಾಂಗಣದಲ್ಲಿ ಕರೆದಿದ್ದೆವು. ಆ ಸಭೆಗೆ ಸಾಕಷ್ಟು ಜನ ಬಾರದಿದ್ದರಿಂದ ಮತ್ತೊಂದು ಬಾರಿ ಎಲ್ಲರಿಗೂ ತಿಳಿಹೇಳಿ 9 ಅಥವಾ 11 ಜನರಿರುವ ಒಂದು ಟ್ರಸ್ಟ್ ಸ್ಥಾಪಿಸುವ ಬಗ್ಗೆ ಮತ್ತೆ ಸಭೆ ಕರೆದೆವು. ಎರಡನೇ ಸಭೆಯಲ್ಲಿ ಬಂದವರ ಅಭಿಪ್ರಾಯ ಪಡೆದು 11 ಜನರಲ್ಲಿ ದಲಿತ ಹೋರಾಟಗಾರರು, ಕೃಷ್ಣಪ್ಪನವರ ಕುಟುಂಬ ಮತ್ತು ಅವರ ಸಹಪಾಠಿಗಳನ್ನು ಸೇರಿದಂತೆ ಟ್ರಸ್ಟ್ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದೆವು.

ನಾನು ಮತ್ತು ಇಂದಿರಾ ಮ್ಯಾನೇಜಿಂಗ್ ಟ್ರಸ್ಟಿಗಳು. ಕೃಷ್ಣಪ್ಪನವರ ಸಹಪಾಠಿಗಳಾಗಿದ್ದ ಆರ್. ನಾಗರಾಜ್ ಮತ್ತು ಕೃಷ್ಣಪ್ಪನವರ ಕಿರಿಯ ಸಹೋದರ ಬಿ. ಮಾರುತಿ, ನಮ್ಮ ಸಹೋದರ ಸಿ. ತಿಪ್ಪಣ್ಣ ಮತ್ತು ಉಳಿದಂತೆ ಡಿಎಸ್‌ಎಸ್‌ನಲ್ಲ್ಲಿದ್ದ ಕೃಷ್ಣಪ್ಪನವರ ಅನುಯಾಯಿಗಳಾದ ಚಿತ್ರದುರ್ಗದ ಜಯಣ್ಣ, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಬಿಎಸ್‌ಪಿಯಲ್ಲಿದ್ದ ಮಾರಸಂದ್ರದ ಮುನಿಯಪ್ಪನವರ ಹೆಸರುಗಳನ್ನು ಅಂತಿಮಗೊಳಿಸಿದ್ದೆವು. ಎರಡು ಬಾರಿ ಎಲ್ಲರೂ ಸೇರಿ ನೋಂದಾಯಿಸಲು ಸಬ್ ರಿಜಿಸ್ಟಾçರ್ ಆಫೀಸಿಗೆ ಬರುವಂತೆ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಕೊನೆಯವರೆಗೂ ಬಾರದ ಕಾರಣ ಬಂದವರಲ್ಲಿ ಏಳು ಜನರಿರುವ ಟ್ರಸ್ಟ್ವೊಂದನ್ನು ದಿನಾಂಕ 28-11-97ರಲ್ಲಿ ಸ್ಥಾಪಿಸಿದೆವು. ಕೃಷ್ಣಪ್ಪನವರ ಆಶಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಲ್ಲಿ ಉಲ್ಲೇಖಿಸಿ ನೊಂದಾಯಿಸಿದೆವು. ಅಂದಿನಿಂದ ಇಂದಿನವರೆಗೆ ಸುಮಾರು 24 ವರ್ಷಗಳಲ್ಲಿ ರಾಜ್ಯದಾದ್ಯಂತ ದಲಿತ ಹೋರಾಟಗಳಿಗೆ ಒತ್ತಾಸೆಯಾಗಿ, ಸಮಾನತೆ ಸಹೋದರತೆ ಸಾರುವ ಮಾನವೀಯ ಹೋರಾಟಗಳಲ್ಲಿ ಭಾಗವಹಿಸುತ್ತಾ, ಅಂತರ್ಜಾತಿ-ಅಂತರ್‌ಮತೀಯ ಮತ್ತು ಸರಳ ಮದುವೆಗಳನ್ನು ಮಾಡುತ್ತಾ ಜೊತೆಗೆ, ಕೃಷ್ಣಪ್ಪನವರು ಬರೆದಿದ್ದ ಹೋರಾಟದ ಕವನ ಮತ್ತು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುತ್ತಾ ಇಂದಿಗೂ ಜನಪರ ಚಳುವಳಿಗಳಲ್ಲಿ ಕೃಷ್ಣಪ್ಪ ಟ್ರಸ್ಟ್ ಸಕ್ರಿಯವಾಗಿದೆ. ಟ್ರಸ್ಟ್ನ ಕರ‍್ಯಕ್ರಮಗಳ ಭಾಗವಾದ ಕೃಷ್ಣಪ್ಪ ಸಮಾಧಿ ಸ್ಥಳ ಉದ್ಘಾಟನೆಗೆ ಬಿಎಸ್‌ಪಿಯ ಕಾನ್ಷಿರಾಮ್ ಅವರು ಹಿರಿಯ ನ್ಯಾಯವಾದಿ ಮತ್ತು ಮಾಜಿಮಂತ್ರಿಗಳಾಗಿದ್ದ ಎಲ್.ಜಿ. ಹಾವನೂರ ಅವರು, ಮಾಜಿಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಅವರು 1997ರಲ್ಲಿ ಬಂದು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಸಾಹಿತ್ಯ, ಸಂಸ್ಕೃತಿ, ನಾಟಕ, ಹೋರಾಟಗಳ ಸಭೆ ಸಮಾರಂಭಗಳನ್ನು ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಸಂಘಟಿಸುತ್ತಾ ಬಂದಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರಾದಿಯಾಗಿ ಜೊತೆಗೆ ನೂರಾರು ದಲಿತ ಹೋರಾಟಗಾರರು, ರಾಜಕಾರಣಿಗಳು ಅನೇಕ ಪ್ರಗತಿಪರರು, ರೈತ ಹೋರಾಟಗಾರರು ಗ್ರಾಮೀಣ ಜನರು ಸಮಾಧಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.

2017ರಲ್ಲಿ ಸಮಾಧಿ ಸ್ಥಳದಲ್ಲಿ ಸರ್ಕಾರದ ಸಹಾಯದಿಂದ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿ ಲೈಬ್ರರಿ ಮತ್ತು ಸ್ಮರಣಲೋಕವನ್ನು ಕೃಷ್ಣಪ್ಪನವರ ಹೋರಾಟದ ವಿವರಗಳನ್ನು ಒಳಗೊಂಡಂತೆ ಕಲೆ ಹಾಕಿದೆ. ಅನೇಕ ಪ್ರಗತಿಪರ ಕರ‍್ಯಕ್ರಮಗಳು ಜನಪರ ಗ್ರಾಮೀಣ ಜನರು ಅದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಕೃಷ್ಣಪ್ಪನವರು ತೀರಿದ ಎರಡು ತಿಂಗಳಲ್ಲಿ ಯಲಹಂಕದಲ್ಲಿನ ಪ್ರಗತಿಪರರೊಡನೆ ಜೊತೆಗೂಡಿ ಕೃಷ್ಣಪ್ಪನವರ ಸ್ಮರಣ ಕರ‍್ಯಕ್ರಮ ಆಯೋಜಿಸಿದ್ದೆವು. ಆ ಸಭೆಗೆ ನಮ್ಮ ನಗರಸಭೆಯ ಸದಸ್ಯರು ಮತ್ತು ಅನೇಕ ಪ್ರಗತಿಪರರು ಕೈಜೋಡಿಸಿದ್ದರು. ಸಭೆಗೆ ಡಿಎಸ್‌ಎಸ್ ನಾಯಕರು ಮತ್ತು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷ್ಣಪ್ಪನವರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ನುಡಿನಮನ ಸಲ್ಲಿಸಿದ್ದರು.

ನಮ್ಮ ಊರಿನಿಂದ ಒಂದು ದೊಡ್ಡ ದಂಡೇ ಬ್ಯಾಂಡ್‌ಸೆಟ್ ಜೊತೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಮಾಧಿ ಸ್ಥಳದಿಂದ ಯಲಹಂಕದಲ್ಲಿ ನಡೆಸುತ್ತಿದ್ದ ಕೃಷ್ಣಪ್ಪನವರ ಸ್ಮರಣ ಸಮಾರಂಭದವರೆಗೆ ಮೆರವಣಿಗೆ ಮಾಡಿಕೊಂಡು ಬಂದು ಕೃಷ್ಣಪ್ಪನವರ ಬದುಕು, ಹೋರಾಟ, ಡಿಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡಿದ ವಿವಿಧ ವಿಷಯಗಳ ಬಗ್ಗೆ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಿ ಕೃಷ್ಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending