Connect with us

ಬಹಿರಂಗ

‘ಝೀ ವಾಹಿನಿ’ಯಲ್ಲಿ ಅಂತರ್‌ ಕಲಹ ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ..!

Published

on

ವಿದ್ಯುನ್ಮಾನ ಸುದ್ಧಿಮಾಧ್ಯಮಗಳಿಗೆ ಕಾರ್ಪೋರೇಟ್‌ ಮಾರುಕಟ್ಟೆಯೇ ಸರ್ವಸ್ವ

  • ನಾ ದಿವಾಕರ

ಕಳೆದ ಎರಡು ದಶಕಗಳಲ್ಲಿ ಕಾರ್ಪೋರೇಟ್‌ ಸ್ನೇಹಿ ಬಂಡವಾಳ ವ್ಯವಸ್ಥೆಯ ಒಂದು ಭಾಗವಾಗಿಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಭಾರತದ ಮಾಧ್ಯಮ ಜಗತ್ತಿನಲ್ಲಿ ಯಾವುದೇ ವ್ಯತ್ಯಯ ಸಂಭವಿಸಿದರೂ ಅದರ ಹಿಂದೆ ಮಾರುಕಟ್ಟೆಯ ಕಾರಣಗಳಿರುವಂತೆಯೇ ರಾಜಕೀಯ ಕಾರಣಗಳೂ ಇರುತ್ತವೆ.

ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾವಲುಕಾಯುವಂತಿರಬೇಕಾದ ಮಾಧ್ಯಮಗಳು ಆಳುವ ವರ್ಗಗಳ ವಂದಿಮಾಗಧರಾಗಿರುವುದೇ ಅಲ್ಲದೆ ವ್ಯವಸ್ಥೆಯ ಒಂದು ಭಾಗವೇ ಆಗಿಹೋಗಿರುವುದರಿಂದ, ಮಾಧ್ಯಮ ಲೋಕದಲ್ಲಿ ನಡೆಯುವ ಯಾವುದೇ ಬದಲಾವಣೆಗಳನ್ನು ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಸ್ವಾಯತ್ತತೆ, ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಸ್ವತಃ ತಾವೇ ಕಳೆದುಕೊಂಡು, ಮಾರುಕಟ್ಟೆಯ ಬಂಡವಾಳ ಮತ್ತು ಆಳುವ ವ್ಯವಸ್ಥೆಯ ಬೇಕುಬೇಡಗಳನ್ನು ಅವಲಂಬಿಸಿರುವ ಭಾರತದ ಮಾಧ್ಯಮ ಲೋಕ, ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳ ಲೋಕ ಈ ಜಟಿಲತೆಯ ನಡುವೆಯೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಿದೆ.

ಕೇವಲ ಒಂದೆರಡು ದಶಕಗಳ ಹಿಂದೆ ಸಾರ್ವಜನಿಕರ ದೃಷ್ಟಿಯಲ್ಲಿ ವ್ಯವಸ್ಥೆಯ ಓರೆಕೋರೆಗಳನ್ನು ಎತ್ತಿತೋರುವ ಮತ್ತು ನೊಂದ ಜನತೆಯನ್ನು ಕೊಂಚಮಟ್ಟಿಗಾದರೂ ಪ್ರತಿನಿಧಿಸುವ ವಾಹಿನಿಗಳಾಗಿದ್ದ ಮಾಧ್ಯಮ ಇಂದು ಬಹುತೇಕವಾಗಿ, ವ್ಯವಸ್ಥೆಯ ಸಮರ್ಥನೆಯ ವೇದಿಕೆಗಳಾಗಿ ಬದಲಾಗಿವೆ. ಮುದ್ರಣ ಮಾಧ್ಯಮಗಳು ಕಾರ್ಪೋರೇಟ್‌ ಬಂಡವಾಳ ವ್ಯವಸ್ಥೆಯ ಜಾಹೀರಾತು ಆಮಿಷಗಳಿಗೆ ಬಲಿಯಾಗಿದ್ದರೆ, ವಿದ್ಯುನ್ಮಾನ ಮಾಧ್ಯಮಗಳು ಮಾರುಕಟ್ಟೆ ಆಧಾರಿತ ಟಿಆರ್‌ಪಿ ರೇಟಿಂಗ್‌ಗಳಿಗಾಗಿ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡು ಬೆತ್ತಲಾಗುತ್ತಿವೆ.

ವಿದ್ಯುನ್ಮಾನ ಸುದ್ದಿಮನೆಗಳು ಸೃಷ್ಟಿಸಿರುವ ಕೂಗುಮಾರಿ ಸಂಸ್ಕೃತಿ ಎಲ್ಲ ಭಾಷೆಗಳಿಗೂ ವ್ಯಾಪಿಸುತ್ತಿದ್ದು, ತಮ್ಮ ಮಾರುಕಟ್ಟೆ ರೇಟಿಂಗ್‌ ಹೆಚ್ಚಿಸಿಕೊಳ್ಳುವ ಪೈಪೋಟಿಯಲ್ಲಿ ಸುಳ್ಳು ಸುದ್ದಿಗಳನ್ನು ವೈಭವೀಕರಿಸುವ ಮತ್ತು ಸತ್ಯವನ್ನು ಮರೆಮಾಚುವ ಒಂದು ವ್ಯವಸ್ಥಿತ ದಂಧೆಗೆ ಮಾಧ್ಯಮ ಲೋಕ ಅವಕಾಶಗಳನ್ನು ಕಲ್ಪಿಸಿದೆ. ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಕೇರಳದ ವಯನಾಡಿನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಝೀ ಸುದ್ದಿವಾಹಿನಿ ಕ್ಷಮೆ ಯಾಚಿಸಿರುವುದು, ಟೈಂಸ್‌ನೌ ವಾಹಿನಿಯ ನಾವಿಕಾ ಕುಮಾರ್‌ ನೂಪುರ್‌ ಶರ್ಮ ವಿವಾದದ ಕೇಂದ್ರಬಿಂದುವಾಗಿರುವುದು, ಕನ್ನಡದ ಪಬ್ಲಿಕ್‌ ಟಿವಿಯಲ್ಲಿ ಪ್ರಚೋದನಕಾರಿ ಹೇಳಿಕೆಗಳಿಗೆ ಅವಕಾಶ ಮಾಡಿಕೊಟ್ಟು ನಂತರ ಕ್ಷಮೆ ಕೋರಿರುವುದು ಇವೆಲ್ಲವೂ ಮಾಧ್ಯಮ ಲೋಕದ ಅವನತಿಯ ಸಂಕೇತಗಳೇ ಆಗಿವೆ.

ಈ ಅವನತಿಯ ಹಾದಿಯಲ್ಲೇ ದೇಶದ ಪ್ರತಿಷ್ಠಿತ ಸುದ್ದಿಮನೆಯ ನಿರೂಪಕರೊಬ್ಬರ ನಿರ್ಗಮನ ಸುದ್ದಿಯಲ್ಲಿದೆ. ಇಂದು ಯಾವುದೇ ವಿದ್ಯುನ್ಮಾನ ಸುದ್ದಿಮನೆಯನ್ನು ಗಮನಿಸಿದರೂ, ಅದು ಒಬ್ಬ ನಿರೂಪಕನ ಮೂಲಕವೇ ಗುರುತಿಸಿಕೊಂಡಿರುತ್ತದೆ. ಈ ನಿರೂಪಕರು ಬಹುಪಾಲು ಸಂದರ್ಭಗಳಲ್ಲಿ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಾಗಿಯೇ ಇರುತ್ತಾರೆ. ಒಂದೆರಡು ವಾಹಿನಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಇಂತಹ ಕೂಗುಮಾರಿ ನಿರೂಪಕರಿಂದಲೇ ತಮ್ಮ ಟಿಆರ್‌ಪಿ ರೇಟಿಂಗ್‌ ಹೆಚ್ಚಿಕೊಳ್ಳುತ್ತವೆ.

ಕನ್ನಡದ ಮಾಧ್ಯಮ ಲೋಕದಲ್ಲಿ ಎಲ್ಲವೂ ಇದೇ ಮಾದರಿಯನ್ನು ಅನುಸರಿಸುತ್ತಿವೆ. ಹಿಂದಿ ವಾಹಿನಿಗಳ ಪೈಕಿ ಕೆಲವು ಈ ಸಂಸ್ಕೃತಿಗೆ ಹೊರತಾಗಿವೆ. ಇಂತಹ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಲ್ಲೊಬ್ಬರಾದ ಸುಧೀರ್‌ ಚೌಧರಿ ಝೀ ನ್ಯೂಸ್‌ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಮಾರುಕಟ್ಟೆಯಲ್ಲೂ ಅತ್ಯಂತ ಜನಪ್ರಿಯ ನಿರೂಪಕರಲ್ಲಿ ಒಬ್ಬರಾಗಿ ಖ್ಯಾತಿ ಗಳಿಸಿರುವ ಸುಧೀರ್‌ ಚೌಧರಿಯ ನಿರ್ಗಮನಕ್ಕೆ ತಾತ್ವಿಕ ಅಥವಾ ಸೈದ್ಧಾಂತಿಕ ಕಾರಣಗಳಿಗಿಂತಲೂ ವ್ಯಕ್ತಿಗತ, ವಾಣಿಜ್ಯಾಸಕ್ತಿಗಳೇ ಪ್ರಧಾನವಾಗಿರುವುದು ಸ್ಪಷ್ಟವಾಗಿದೆ.

ಝೀ ನ್ಯೂಸ್‌ ಇಂದಿಗೂ ಭಾರತದಲ್ಲಿ ಪ್ರಥಮ ಶ್ರೇಣಿಯಲ್ಲಿರುವ ಒಂದು ಸುದ್ದಿಮನೆ. ಭಾರತವು ಮಾರುಕಟ್ಟೆ ಅರ್ಥವ್ಯವಸ್ಥೆಗೆ ತೆರೆದುಕೊಂಡು, ಮಾಧ್ಯಮ ಲೋಕವೂ ಸಹ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತನ್ನದೇ ಆದ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲಾರಂಭಿಸಿದಾಗ, 1990ರಲ್ಲೇ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟವರು ಝೀ ನ್ಯೂಸ್‌ನ ಮಾಲೀಕರಾದ ಸುಭಾಷ್‌ ಚಂದ್ರ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಸುಭಾಷ್‌ ಚಂದ್ರ ಭಾರತದ ವಿದ್ಯುನ್ಮಾನ ಮಾಧ್ಯ ಲೋಕಕ್ಕೆ ಮಾರುಕಟ್ಟೆ ಸ್ಪರ್ಶ ನೀಡಿದ್ದೇ ಅಲ್ಲದೆ, ಪಶ್ದಿಮ ರಾಷ್ಟ್ರಗಳ ಮಾಧ್ಯಮ ವಲಯಕ್ಕೆ ಸರಿಸಮಾನವಾದ ಒಂದು ಆಧುನಿಕ ಸ್ವರೂಪವನ್ನು ನೀಡುವುದರಲ್ಲೂ ಯಶಸ್ವಿಯಾಗಿದ್ದಾರೆ.

ಇಂದು ಭಾರತದಲ್ಲಿ ನೂರಾರು ಟಿವಿ ವಾಹಿನಿಗಳಿದ್ದರೂ, ಇವೆಲ್ಲದರ ಜನಕ ಎಂದರೆ ಝೀ ಟೀವಿ ವಾಹಿನಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ವಾಹಿನಿಯಿಂದಲೇ ಕವಲೊಡೆದ ಹಲವಾರು ವಾಹಿನಿಗಳು ಇಂದು ನಮ್ಮ ನಡುವೆ ಇದೆ, ಹಾಗೆಯೇ ಝೀ ವಾಹಿನಿಯಿಂದಲೇ ತಮ್ಮ ವೃತ್ತಿ ಬದುಕು ಆರಂಭಿಸಿದ ಅನೇಕ ಪತ್ರಕರ್ತರು, ನಿರೂಪಕರು ಇಂದು ವಿವಿಧ ವಾಹಿನಿಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ.

ವಿದ್ಯುನ್ಮಾನ ಮಾಧ್ಯಮದ ಪತ್ರಿಕೋದ್ಯೋಗಿಗಳ ಪೈಕಿ ಮೊದಲ ಪೀಳಿಗೆಯವರೆಂದೇ ಗುರುತಿಸಲ್ಪಟ್ಟಿರುವ ಸುಧೀರ್‌ ಚೌಧರಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದೇ ಝೀ ನ್ಯೂಸ್‌ ವಾಹಿನಿಯ ಮೂಲಕ. 24 ಗಂಟೆಗಳ ಸುದ್ದಿ ಪ್ರಸರಣ ಜನಪ್ರಿಯವಾಗುವುದರ ಹಿಂದೆ ಸುಧೀಂದ್ರ ಚೌಧರಿ ಅವರ ಕೊಡುಗೆಯೂ ಇದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. 2001ರಲ್ಲಿ ಭಾರತೀಯ ಸಂಸತ್‌ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಡುವೆ ನಡೆದ ಮಾತುಕತೆಗಳ ಸಂದರ್ಭದಲ್ಲಿ ಈ ಸಭೆಯ ಕಲಾಪಗಳನ್ನು ವರದಿಮಾಡಲು ನಿಯೋಜಿಸಲಾಗಿದ್ದ ತಂಡದಲ್ಲಿ ಸುಧೀರ್‌ ಚೌಧರಿ ಪ್ರಮುಖರಾಗಿದ್ದರು.

2003ರಲ್ಲಿ ಝೀ ನ್ಯೂಸ್‌ ವಾಹಿನಿಯನ್ನು ತೊರೆದು ಸಹಾರ ಸಮಯ್‌ ವಾಹಿನಿಯನ್ನು ಆರಂಭಿಸುವುದಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಸಹಾರ ಉದ್ಯಮ ಸಮೂಹದ ಈ ಹಿಂದಿ ವಾಹಿನಿ ಹೆಚ್ಚು ಕಾಲ ಊರ್ಜಿತವಾಗಲಿಲ್ಲ. ನಂತರ ಸುಧೀರ್‌ ಇಂಡಿಯಾ ಟಿವಿ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಪುನಃ ತಮ್ಮ ತವರಿಗೆ, ಝೀ ನ್ಯೂಸ್‌ ವಾಹಿನಿಗೆ ಬಂದು ಸೇರಿಕೊಂಡಿದ್ದು, ನಿತ್ಯ ಸುದ್ದಿ ಮತ್ತು ವಿಶ್ಲೇಷಣೆಯ ವಿಭಾಗದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ನಿರ್ಗಮಿಸಿದ್ದಾರೆ.

ನಾ ದಿವಾಕರ, ಲೇಖಕರು

ಸುಧೀರ್‌ ಚೌಧರಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳುಬೀಳುಗಳನ್ನೂ ಎದುರಿಸಿದ್ದಾರೆ. ವಾಣಿಜ್ಯೋದ್ಯಮಿ ನವೀನ್‌ ಜಿಂದಾಲ್ ಅವರಿಂದ ಹಣವಸೂಲಿ ಮಾಡುವ ಆರೋಪಕ್ಕೆ ಸಿಲುಕಿದ್ದ ಚೌಧರಿ 2012ರಲ್ಲಿ ಬಂಧನಕ್ಕೊಳಗಾಗಿದ್ದರು. ಈ ಸಂಬಂಧ ಸುದ್ದಿ ಪ್ರಸರಣ ಸಂಪಾದಕರ ಸಂಘದ ಖಜಾಂಚಿಯೂ ಆಗಿದ್ದ ಸುಧೀರ್‌ ಅವರನ್ನು ಸಂಘದಿಂದ ಉಚ್ಚಾಟಿಸಲಾಗಿತ್ತು. 2018ರಲ್ಲಿ ಪರಸ್ಪರ ರಾಜಿ ಸೂತ್ರದ ಮೂಲಕ ಈ ವಿವಾದ ಬಗೆಹರಿದಿತ್ತು.

ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೋಯಿತ್ರಾ ಅವರು ತಮ್ಮ ಭಾಷಣವೊಂದರಲ್ಲಿ ಟ್ರೂಮನ್‌ ಲಾಂಗ್‌ಮನ್‌ ಅವರಿಂದ ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪಿಸಿ ಸುಧೀರ್‌ ಚೌಧರಿ ಮೊಯಿತ್ರಾ ಅವರಿಂದ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಯಿತು. ನಂತರ ಸ್ವತಃ ಲಾಂಗ್‌ಮನ್‌ ಅವರೇ ಈ ಆರೋಪವನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಝೀ ನ್ಯೂಸ್‌ ಕ್ಷಮಾಪಣೆ ಕೇಳಬೇಕಾಯಿತು. ಕೋವಿದ್‌ 19 ಸಂದರ್ಭದಲ್ಲಿ ಕೋಮು ಪ್ರಚೋದಕ ಸುದ್ದಿಗಾಗಿಯೇ ಸುಧೀರ್‌ ಇಸ್ಲಾಂ ಭೀತಿ ಸೃಷ್ಟಿಸುವ ಆರೋಪಕ್ಕೆ ಗುರಿಯಾಗಿದ್ದರು. ಈ ಆರೋಪಗಳ ಹೊರತಾಗಿಯೂ ಸುಧೀರ್‌ ಒಬ್ಬ ನಿರೂಪಕರಾಗಿ ಝೀ ಸುದ್ದಿವಾಹಿನಿಯನ್ನು ಮಾರುಕಟ್ಟೆಯಲ್ಲಿ ಒಂದು ಪ್ರಬಲ ದನಿಯಾಗಿ ಕಾಪಾಡಿಕೊಂಡು ಬಂದಿದ್ದು ವಾಸ್ತವ.

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಬಲಪಂಥೀಯ ರಾಜಕಾರಣ ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಪರವಾಗಿಯೇ ತಮ್ಮ ಸುದ್ದಿ ನಿರೂಪಣೆಯನ್ನು ನಿರ್ವಹಿಸುವ ಮೂಲಕ ಸುಧೀರ್‌ ಚೌಧರಿ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವುದೇ ಅಲ್ಲದೆ, ತಮ್ಮ ಸುದ್ದಿ ನಿರೂಪಣೆಯ ಮೂಲಕ ಮತ್ತು ಝೀ ವಾಹಿನಿಯಲ್ಲಿ ಏರ್ಪಡಿಸುವ ಚರ್ಚೆಗಳ ಮೂಲಕ ಸರ್ಕಾರದ ನೀತಿಗಳನ್ನು ಸಾರ್ವಜನಿಕ ವಲಯದಲ್ಲಿ ಜನಪ್ರಿಯಗೊಳಿಸುವ ಮೂಲಕ ಸುಧೀರ್‌ ಚೌಧರಿ ವ್ಯವಸ್ಥೆಯ ಪರವಾದ ಒಂದು ದನಿಯಾಗಿ ಕಂಡುಬಂದಿದ್ದಾರೆ.

ಬಹುಶಃ ಈ ಹಿನ್ನೆಲೆಯಲ್ಲೇ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ಸುಧೀರ್‌ ಚೌಧರಿ ಝೀ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಆಂತರಿಕವಾಗಿ ಝೀ ಸಮೂಹದ ಮಾಲೀಕ ಸುಭಾಷ್‌ ಚಂದ್ರ ಅವರು ಇತ್ತೀಚಿನ ದಿನಗಳಲ್ಲಿ ಸುಧೀರ್‌ ಚೌಧರಿಯನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದರು ಎಂಬ ಆರೋಪವೂ ಕೇಳಿಬರುತ್ತಿದೆ. 2021ರಲ್ಲಿ ಎಬಿಪಿ ನ್ಯೂಸ್‌ ವಾಹಿನಿಯಿಂದ ಬಂದು, ಝೀ ನ್ಯೂಸ್‌ನ ಕಂಟೆಂಟ್‌ ಅಧಿಕಾರಿ ಮತ್ತು ಸಂಪಾದಕರಾಗಿ ನಿಯೋಜಿತರಾದ ರಜನೀಶ್‌ ಅಹುಜಾ ಮತ್ತು ಸುಧೀರ್‌ ಚೌಧರಿ ನಡುವೆ ಇದ್ದ ಅಧಿಕಾರ ಸಂಘರ್ಷವೂ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುಭಾಷ್‌ ಚಂದ್ರ ಸೋಲು ಅನುಭವಿಸಿದ ನಂತರ, ಝೀ ನ್ಯೂಸ್‌ ಕೆಲವು ಸಂದರ್ಭಗಳಲ್ಲಿ ತಟಸ್ಥ ನೀತಿಯನ್ನೂ ಅನುಸರಿಸಲಾರಂಭಿಸಿತ್ತು. ಅಸ್ಸಾಂ ಕುರಿತು ಪ್ರಸಾರವಾದ ಒಂದು ಷೋನಲ್ಲಿ ಇದು ಸ್ಪಷ್ಟವಾಗಿದ್ದು, ಈ ಬೆಳವಣಿಗೆಗಳಿಗೆ ಸುಧೀರ್‌ ಚೌಧರಿ ಸಮ್ಮತಿ ಇರಲಿಲ್ಲ ಎಂದೂ ಹೇಳಲಾಗುತ್ತಿದೆ. ಮಾಧ್ಯಮ ಮಾರುಕಟ್ಟೆಯಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಸುಧೀರ್‌ ಚೌಧರಿ ಝೀ ವಾಹಿನಿಯ ಇತ್ತೀಚಿನ ತಟಸ್ಥ ನೀತಿಯಿಂದ ಅಸಮಾಧಾನಗೊಂಡಿದ್ದರೆಂದೂ ಹೇಳಲಾಗುತ್ತಿದೆ.

ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿ, ಸೋಲು ಅನುಭವಿಸಿದ ನಂತರ ಝೀ ನ್ಯೂಸ್‌ ಮಾಲೀಕ ಸುಭಾಷ್‌ ಚಂದ್ರ ತಮ್ಮ ಸಂಸ್ಥೆಯ ಕೆಲವು ಸಿಬ್ಬಂದಿಯ ವಿರುದ್ಧ ಅಸಮಾಧಾನಗೊಂಡಿದ್ದು, ಇದರ ಪರಿಣಾಮವೇ ಸುಧೀರ್‌ ಚೌಧರಿ ಸಹ ನಿರ್ಗಮಿಸಿದ್ದಾರೆ ಎಂದು ನ್ಯೂಸ್‌ ಲಾಂಡ್ರಿ ಸುದ್ದಿವಾಹಿನಿ ಹೇಳಿದೆ. ಇದೇ ಸಂದರ್ಭದಲ್ಲಿ ಸುಧೀರ್‌ ಚೌಧರಿ ಬಹುಮಟ್ಟಿಗೆ ಝೀ ನ್ಯೂಸ್‌ ವಾಹಿನಿಯ ಮುಖವಾಣಿಯಂತಾಗಿದ್ದುದು ಸುಭಾಷ್‌ ಚಂದ್ರ ಅವರ ಅಸಹನೆಗೆ ಕಾರಣವಾಗಿರಬಹುದು.

ಈ ಆಂತರಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತದ ಪ್ರಸ್ತುತ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಗೆ ತನ್ನದೇ ಆದ ಮಾಧ್ಯಮ ಮುಖವಾಣಿಗಳ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರದ ಪರ ವಕಾಲತ್ತು ವಹಿಸುವ ಮತ್ತು ಸರ್ಕಾರದ ನೀತಿಗಳನ್ನು ಸಮರ್ಥಿಸುತ್ತಲೇ ಸಾರ್ವಜನಿಕರ ನಡುವೆ ಒಂದು ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದು ಗುಟ್ಟಿನ ಮಾತೇನಲ್ಲ. ಪ್ರಜಾತಂತ್ರ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿ ಸಾರ್ವಜನಿಕರ ನಡುವೆ ಸದಾ ಜಾಗೃತಾವಸ್ಥೆಯಲ್ಲಿರುವ ಒಂದು ಸಂಸ್ಥೆಯಾಗಿ ಮಾಧ್ಯಮವೂ ಮುಖ್ಯವಾಗುತ್ತದೆ.

ಆಡಳಿತಾರೂಢ ಪಕ್ಷಗಳು ಈ ಮಾಧ್ಯಮಗಳ ಮೂಲಕ, ವಾಹಿನಿಗಳ ಮೂಲಕ ತಮ್ಮದೇ ಆದ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಳ್ಳಲು ಸದಾ ಹಾತೊರೆಯುತ್ತಿರುತ್ತವೆ. ಮುದ್ರಣ ಮಾಧ್ಯಮಗಳೇ ಪ್ರಧಾನವಾಗಿದ್ದ ಸಂದರ್ಭದಲ್ಲೂ ಇದನ್ನು ಕಾಣಬಹುದಿತ್ತು. ವಿದ್ಯುನ್ಮಾನ ಮಾಧ್ಯಮಗಳು ದೇಶದ ಮೂಲೆ ಮೂಲೆಗೂ, ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪುವ ಸಾಮರ್ಥ್ಯ ಹೊಂದಿರುವುದರಿಂದ ಆಡಳಿತಾರೂಢ ಪಕ್ಷಗಳು, ಮಾಧ್ಯಮಗಳನ್ನು ತಮ್ಮ ಆಡಳಿತ ನೀತಿಗಳ ವಾಹಕಗಳಾಗಿ ಬಳಸಿಕೊಳ್ಳುತ್ತವೆ. ಹಿಂದಿನ ಕಾಂಗ್ರೆಸ್‌ ಸರ್ಕಾರಗಳೂ ಇದನ್ನು ಮಾಡುತ್ತಲೇ ಬಂದಿವೆ. ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ.

ಇದರೊಟ್ಟಿಗೇ ನವ ಉದಾರವಾದ ಮತ್ತು ಜಾಗತೀಕರಣದ ಆರ್ಥಿಕ ನೀತಿಗಳು ದೇಶದಲ್ಲಿ ಸೃಷ್ಟಿಸುತ್ತಿರುವ ಜನಾಕ್ರೋಶ ಮತ್ತು ಜನಸಾಮಾನ್ಯರ ನಡುವೆ ಸೃಷ್ಟಿಯಾಗುತ್ತಿರುವ ಹತಾಶೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಆಡಳಿತ ನೀತಿಗಳ ಪರವಾದ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸುವಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ. ಟಿವಿ ವಾಹಿನಿಗಳಲ್ಲಿ ನಡೆಯುವ ಏಕಮುಖಿ ಚರ್ಚೆಗಳು ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಂಡುಬರುತ್ತವೆ. ಹಾಗಾಗಿ ಮಾರುಕಟ್ಟೆ ವ್ಯವಸ್ಥೆ ಮತ್ತು ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳಿಗೆ ವಿದ್ಯುನ್ಮಾನ ಮಾಧ್ಯಮಗಳು ಒಂದು ಪ್ರಬಲ ವೇದಿಕೆಗಳೂ ಆಗುತ್ತವೆ. ಡಿಜಿಟಲ್‌ ಯುಗದಲ್ಲಿ ದೇಶದ ಅರ್ಥವ್ಯವಸ್ಥೆ ಹೆಚ್ಚು ಹೆಚ್ಚು ಕಾರ್ಪೋರೇಟ್‌ ಮಾರುಕಟ್ಟೆ ಕೇಂದ್ರಿತವಾಗುತ್ತಿರುವುದರಿಂದ ಆಳುವ ವರ್ಗಗಳಿಗೂ ಈ ವೇದಿಕೆಗಳು ಅಪ್ಯಾಯಮಾನವಾಗಿ ಕಾಣುತ್ತವೆ.

ಸುಧೀರ್‌ ಚೌಧರಿ ಬಹುಶಃ ಇಂತಹುದೇ ಒಂದು ಹೊಸ ವೇದಿಕೆಯನ್ನು ದೇಶದ ಜನತೆಗೆ ಸಮರ್ಪಿಸಲಿದ್ದಾರೆ. ವಸ್ತುನಿಷ್ಠ ವರದಿಗಾರಿಕೆ , ಜನಪರ ದನಿಯನ್ನು ಬಿಂಬಿಸುವ ಧೋರಣೆ ಮತ್ತು ಜನಸಮುದಾಯಗಳ ನಿತ್ಯ ಬದುಕಿನ ಬವಣೆಗಳನ್ನು ಬಿಂಬಿಸುವ ಜನೋಪಯೋಗಿ ವಿಧಾನಗಳಿಗಿಂತಲೂ ಮಿಗಿಲಾಗಿ, ಆಳುವ ವರ್ಗಗಳ ಆಡಳಿತ ನೀತಿಗಳನ್ನು ಜನರ ನಡುವೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ವಾಹಿನಿಗಳು ಕಾರ್ಯನಿರ್ವಹಿಸುತ್ತವೆ. ತಮ್ಮ ಕೂಗುಮಾರಿ ಧೋರಣೆಗೆ ಖ್ಯಾತಿ ಪಡೆದಿರುವ ಸುಧೀರ್‌ ಚೌಧರಿ ಬಹುಶಃ ತಮ್ಮ ಭವಿಷ್ಯದ ಯೋಜನೆಯಲ್ಲಿ ಯಶಸ್ಸುಗಳಿಸಲೂ ಇದೇ ಧೋರಣೆ ನೆರವಾಗುತ್ತದೆ.

ಕಾರ್ಪೋರೇಟ್‌ ಬಂಡವಾಳ ಸ್ನೇಹಿ ಸರ್ಕಾರ ಮತ್ತು ಮಾರುಕಟ್ಟೆ ಸ್ನೇಹಿ ಮಾಧ್ಯಮ ಜಂಟಿಯಾಗಿ ನವ ಉದಾರವಾದವನ್ನು ತಳಮಟ್ಟದವರೆಗೂ ಪರಿಣಾಮಕಾರಿಯಾಗಿ ವಿಸ್ತರಿಸಲು ನೆರವಾಗುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಬಹುಶಃ ಸುಧೀರ್‌ ಚೌಧರಿ ಆರಂಭಿಸಲಿರುವ ಹೊಸ ವಾಹಿನಿ ಈ ಸಾಲಿಗೆ ಸೇರ್ಪಡೆಯಾಗಲಿರುವ ಮತ್ತೊಂದು ವೇದಿಕೆಯಾಗಲಿದೆ. ಸುಧೀರ್‌ ಚೌಧರಿ ಸ್ವತಃ ಕಾರ್ಪೋರೇಟ್‌ ರೂಪದಲ್ಲಿ ಹೊರಹೊಮ್ಮಲಿದ್ದಾರೋ ಅಥವಾ ಮತ್ತೊಂದು ಉದ್ದಿಮೆಯ ಭಾಗವಾಗಿ ತಮ್ಮ ವಾಹಿನಿಯ ಸಾರಥ್ಯ ವಹಿಸುವರೋ ಕಾದುನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

Published

on

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು 

  1. ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ ಒಟ್ಟಾರೆ 6ನೇ ಹಂತದ 58 ಕ್ಷೇತ್ರಗಳಲ್ಲಿ ಶೇಕಡ 25.76ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇಕಡ 23.67, ಹರಿಯಾಣದ ಶೇಕಡ 22.09, ಜಾರ್ಖಂಡ್‌ನಲ್ಲಿ ಶೇಕಡ 27.80, ಒಡಿಶಾದ ಶೇಕಡ 21.30, ಉತ್ತರಪ್ರದೇಶದ 27.06, ಪಶ್ಚಿಮಬಂಗಾಳದಲ್ಲಿ 36.88, ದೆಹಲಿಯಲ್ಲಿ 21.69 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 23.11ರಷ್ಟು ಮತದಾನವಾಗಿದೆ.
  2. ದೆಹಲಿಯಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್, ಹರ್‌ದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಆಪ್ ನಾಯಕಿ ಅತೀಶಿ ಸಿಂಗ್ ಸೇರಿದಂತೆ ಹಲವು ಪ್ರಮುಖರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ.
  3. ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  4. ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
  5. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್‌ಐಎ ಬಂಧಿಸಿದೆ. ಹುಬ್ಬಳ್ಳಿಯ 35 ವರ್ಷದ ಶೋಯಬ್ ಅಹಮದ್ ಮಿರ್ಜಾ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯಾಗಿದ್ದು, ಲಷ್ಕರ್ ಎ ತೊಯ್ಬಾದ ಭಯೋತ್ಪಾದನಾ ಸಂಚು ಪ್ರಕರಣದಲ್ಲಿ ಮಾಜಿ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
  6. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ಸ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವದ 20ನೇ ಶ್ರೇಯಾಂಕಿತ ಥೈಲ್ಯಾಂಡ್‌ನ ಬುಸಾನನ್ ಆಂಗ್‌ಬಾಮ್‌ರುಂಗ್‌ಫಾನ್ ವಿರುದ್ಧ ಫೈನಲ್ಸ್ ಪ್ರವೇಶಿಸಲು ಸೆಣಸಲಿದ್ದಾರೆ.
  7. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 36 ರನ್‌ಗಳ ಗೆಲುವು ದಾಖಲಿಸಿದ್ದು, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending