Connect with us

ದಿನದ ಸುದ್ದಿ

ಕವಿ ಆನಂದ ಲಕ್ಕೂರು ನಿಧನ ; ಉದಯ ಇಟಗಿ ನುಡಿನಮನ

Published

on

ಕವಿ ಆನಂದ ಲಕ್ಕೂರು
  • ಉದಯ ಇಟಗಿ, ಪ್ರಾಂಶಯಪಾಲರು, ಡಿವಿಎಸ್ ಪದವಿ ಪೂರ್ವ ಕಾಲೇಜು, ಭರಮಸಾಗರ, ಚಿತ್ರದುರ್ಗ

ಆನಂದ ಲಕ್ಕೂರು ಇನ್ನಿಲ್ಲವೆಂಬ ಸುದ್ದಿ ಬಂದಿದೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಲೇ ನಾನಿದನ್ನು ಬೇರೆಯವರ ಹತ್ತಿರ ಇದು ನಿಜವೇ ಎಂದು ಖಾತ್ರಿಪಡಿಸಿಕೊಂಡ ಮೇಲೆ ಇದನ್ನು ವಿಷಾದದಿಂದ ಬರೆಯುತ್ತಿದ್ದೇನೆ.

ನಿಜ ಹೇಳಬೇಕೆಂದರೆ ನನಗೆ ಆನಂದ ಯಾರೂ ಎಂದು ಸರಿಯಾಗಿ ಗೊತ್ತಿರಲಿಲ್ಲ. ಒಂದು ಸಾರಿ ಅವರ “ಒಂದು ಕಪ್ ಕಾಫಿ” ಕವನವನ್ನು ಯಾರೋ ಫೇಸ್ಬ್ಕುಕ್‍ನಲ್ಲಿ ಹಾಕಿದ್ದರು. ನಾನಾಗ ಲಿಬಿಯಾದಲ್ಲಿದ್ದೆ. ನನಗೆ ಆ ಕವನವನ್ನು ಓದಿದ ತಕ್ಷಣ ತುಂಬಾ ಇಷ್ಟವಾಗಿ ಇಂಗ್ಲೀಷಿಗೆ ಅನುವಾದಿಸಿದ್ದೆ. ಆಮೇಲೆ ನಾನದನ್ನು ಮರೆತೂಬಿಟ್ಟಿದ್ದೆ. ಇಬ್ಬರು ಪ್ರೇಮಿಗಳು ಇಷ್ಟು ಚನ್ನಾಗಿ ವಿದಾಯ ಹೇಳಬಹುದೆ? ಎಂದು ಬೆರಗು ಮೂಡಿಸಿದ ಕವನವದು. ಹಾಗಾಗಿ ನಾನದನ್ನು ಇಂಗ್ಲಿಶಷಿಗೆ ತಕ್ಷಣ ಅನುವಾದಿಸಿದ್ದೆ.

ನಾನು ಮರಳಿ ಇಂಡಿಯಾಗೆ ಬಂದ ಮೇಲೆ ಗೊರವರ ಅವರ ಸಂಗಾತದ ಒಂದು ಸಂಚಿಕೆಗೆ ನಾನು ಒಂದಿಷ್ಟು ಅಸ್ಸಾಮಿ ಕವನಗಳನ್ನುಅನುವಾದಿಸಿಕೊಟ್ಟಿದ್ದೆ. ಅದು ಪ್ರಿಂಟಾಗಿ ಹೆಚ್ಚುಕಮ್ಮಿ ಎಂಟು ತಿಂಗಳ ನಂತರ ಅಲ್ಲಿ ನನ್ನ ಫೋನ್ ನಂಬರ್ ತೆಗೆದುಕೊಂಡು ತಮ್ಮ ಪರಿಚಯ ಮಾಡಿಕೊಂಡು ದಿನವೂ ಮಾತನಾಡಲು ಶುರುಮಾಡಿದರು. ನನಗೆ ಬರುಬರುತ್ತಾ ದಿನವೂ ಮಾತನಾಡುವಂಥದ್ದು ಏನಿದೆ ಎಂದು ರೇಜಿಗೆ ಎನಿಸಿದರೂ ಅವಾಯ್ಡ್ ಮಾಡಲಿಲ್ಲ.

ಅವರು ನನ್ನೊಂದಿಗೆ ಮಾತ್ರವಲ್ಲ ಅನೇಕ ಬರಹಗಾರರ ಜೊತೆ ಹೀಗೆ ಮಾತನಾಡುತ್ತಿದ್ದರು ಎಂದು ಆಮೇಲೆ ಗೊತ್ತಾಯಿತು. ಮುಂದೆ ಅವರು ಕುವೆಂಪು ಭಾಷಾ ಭಾರತಿಯಿಂದ ನನ್ನ ಅಸ್ಸಾಮಿ ಅನುವಾದಿತ ಕವನಗಳು ಹೊರಬರಲು ಪರೋಕ್ಷವಾಗಿ ಕಾರಣರಾದರು. ಮುಂದೆ ಅವರು ಒಂದು ಇಂಗ್ಲೀಷ್ ಕಾದಂಬರಿಯನ್ನು ಅನುವಾದಿಸಿದಾಗ ಅವರ ಕೋರಿಕೆಯ ಮೇರೆಗೆ ಮುನ್ನುಡಿ ಬರೆದುಕೊಟ್ಟಿದ್ದೆ.

ಆನಂದ ಬಗ್ಗೆ ಸಾಹಿತ್ಯ ವಲಯದಲ್ಲಿ ಗುಸುಗುಸು ಸುದ್ದಿಗಳು ಹರಿದಾಡುತ್ತಲೇ ಇದ್ದರೂ ಸಾಕ್ಷಿ ಸಮೇತ ಅವರು ನನ್ನ ಕೈಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸಾಹಿತ್ಯ ವಲಯದಲ್ಲಿ ಆನಂದ ಲಕ್ಕೂರು ಅವರ ಒಡನಾಟದಲ್ಲಿದ್ದವರೆಲ್ಲಾ ಕೃತಿಚೌರ್ಯ ಮಾಡುವವರು ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿದ್ದಿದುರಿಂದ ಬಹಳಷ್ಟು ಜನ ಅವರ ಒಡನಾಟವನ್ನು ಇಷ್ಟಪಡುತ್ತಿರಲಿಲ್ಲ. ಆನಂದ ಒಬ್ಬ ಭಾವನಾ ಜೀವಿ. ಆದರೆ ಅಶಿಸ್ತಿನ ಮನುಷ್ಯ. ಬಹಳಷ್ಟು ಜನ ಹುಶಾರಾಗಿರಿ. ಅವರು ಯಾವಾಗ ಬೇಕಾದರೂ ದುಡ್ದು ಕೇಳಬಹುದು ಎಂದಿದ್ದರು. ಆದರೆ ಆನಂದ ಯಾವತ್ತೂ ನನ್ನನ್ನು ಒಂದು ಪೈಸೆಯೂ ಕೇಳದೆ ಪ್ರಾಮಾಣಿಕತೆಯನ್ನು ಮೆರೆದ ಮನುಷ್ಯ.

ಆದರೆ ತೀರಾ ಇತ್ತೀಚಿಗೆ ಅವರು ಒಂದು ಸ್ಥಿರವಾದ ಉದ್ಯೋಗವನ್ನು ಹೊಂದಿಲ್ಲದ ಮನುಷ್ಯ ಎನ್ನುವದು ಗೊತ್ತಾಯ್ತು. ಕುಡಿತದಿಂದ ಅವರ ಆರೋಗ್ಯ ಹದೆಗೆಟ್ಟಿದೆ ಎನ್ನುವದು ಕೂಡಾ ಗೊತ್ತಾಯಿತು. ಈಗ್ಗೆ ಒಂದು ತಿಂಗಳ ಹಿಂದೆ ನನಗೆ ಫೋನ್ ಮಾಡಿ ನಾನೀಗ ಗುಲ್ಬರ್ಗಾದಲ್ಲಿ ಪಿ.ಎಚ್ಡಿ. ಮಾಡುತ್ತಿರುವೆ ನನಗೆ ಸ್ಟೈಫಂಡ್ ಬರುತ್ತಿದೆ ಖುಷಿಯಾಗಿದ್ದೇನೆ ಎಂದು ಹೇಳಿದರು. ನಾನು ಹಾಗೆ ಖುಷಿಯಾಗಿ ಇರಿ ಎಂದು ಹರಿಸಿದ್ದೆ. ಈಗ ನೋಡಿದರೆ ಅವರು ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಹೋಗಿ ಬಾ ಗೆಳೆಯ. ನಿನ್ನ ಕವನಗಳು ನಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ.

ನಾನು ಹಿಂದೆ ಇಂಗ್ಲೀಷಿಗೆ ಅನುವಾದಿಸಿದ ಅವರ ಒಂದು ಕವನವನ್ನು ಇಲ್ಲಿ ಹಾಕುವದರ ಮೂಲಕ ಅವರಿಗೆ ನುಡಿನಮನವನ್ನು ಸಲ್ಲಿಸುತ್ತಿದ್ದೇನೆ. ನಾನು ದೆಹಲಿಯಿಂದ ವಾಪಾಸಾಗುತ್ತಿರುವದರಿಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎನ್ನುವ ದುಃಖವಿದೆ.

ಒಂದು ಕಪ್ ಕಾಫಿ

ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:

ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ

ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…

ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!

ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?

ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ

~ಲಕ್ಕೂರು ಆನಂದ್

A Cup of Coffee

For the last time
Would you drink a cup of coffee with me?
No matter
Whether I erred
Or you erred,
Let’s forget it:

For the last time
Would you drink only one cup of coffee with me?
I will make this moment memorable
Who knows
It can take turn here itself!
Or we can split up!
Who could guess that?
I say something
And you something else
The speech rams are fighting with each other
The grief is frozen
On all the speech ways down to us

Who knows
We may have vast forests in front of us,
The grapes,
Being unable to bear the weight
May turn into clouds
By hanging down to the ground
Even the rare rivers can orbit around us,
But what is the benefit?
We both are not feeling thirsty ….
In the corner of our heart
There lies a breaking sound of a small branch
And also the falling sound of heartbreak tears
Each one’s grief
Is becoming
Unbearable burden for each other
There is no hatred
No jealousy and no anger at all
It’s just love
Will really kindness be this much cruel?

Even now
A layer of kindness is seen
In your eyes
But unfortunately
It doesn’t mean to both of us
We both have to wait
Until the sheath of despair dissipates
You are not be seen to my eyes
And I am not to be seen to your eyes
The dreams of past
Have dissolved in both of us
The two birds
With their wings broken
Have sat on each other’s heads.
Probably, this may be our last meeting!
Why should we drink coffee by sitting so closely?
All yesterdays are turning out to be as the long sighs of today
An oscillating confusion within you
Is softly touching me

Why should we drink coffee so quietly?
Even the funeral ceremony also
Won’t be this much silent!
This is our last visit
Come on, let’s have a cup of coffee at least
For the memory of our last visit
Earlier, these were just one by two cups
And now are two anonymous coffee cups
If you peep inside this coffee cup
You will find the pieces of yesterday
And also the introductions of ours
That are fighting like two very different dolls

From Kannada: Anand Lakkuru
To English: Uday Itagi

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Published

on

ಸುದ್ದಿದಿನ,ದಾವಣಗೆರೆ: ಅಪರೂಪದ ಲಿವರ್ (ಯಕೃತ್ತಿನ) ಟ್ಯೂಮರ್ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ಇಲ್ಲಿನ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ಟ್ಯೂಮರ್ (ಗಡ್ಡೆ) ಯನ್ನುಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಲಿವರ್ನ ಆರೋಗ್ಯಕರ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಮೂಲದ ಈ ಮಹಿಳೆ, ಬೊಜ್ಜಿನ ಸಮಸ್ಯೆಯ ಜೊತೆಗೆ ಟೈಪ್-2 ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್ (ಥೈರಾಯ್ಡ್ ಸಮಸ್ಯೆ) ದಂತಹ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ನಿರಂತರ ಹೊಟ್ಟೆನೋವು ಹಾಗೂ ಹಸಿವಾಗದಿರುವ ಸಮಸ್ಯೆಯಿಂದ ಅವರು ಒದ್ದಾಡುತ್ತಿದ್ದರು. ಇದಕ್ಕಾಗಿ ಸ್ಥಳೀಯ ಕ್ಲಿನಿಕ್ಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ತಪಾಸಣೆಯಲ್ಲಿ ಅವರಿಗೆ ಲಿವರ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು.

ಸರಿಯಾದ ಚಿಕಿತ್ಸೆ ಸಿಗದೆ ಕಾಯಿಲೆ ಉಲ್ಬಣಗೊಂಡಿದ್ದಾಗ, ಅವರ ಪರಿಚಿತರೊಬ್ಬರು ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ಗೆ ಭೇಟಿ ನೀಡಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ಅವರನ್ನು ಸಂಪರ್ಕಿಸಲು ಸಲಹೆ ನೀಡಿದರು. ಮೊದಲ ತಪಾಸಣೆಯ ನಂತರ, ಮಹಿಳೆಯನ್ನು ಸ್ಕ್ಯಾನಿಂಗ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಈ ವೇಳೆ ಅವರ ಲಿವರ್ನ ಎಡಭಾಗದ (ಲೆಫ್ಟ್ ಲೋಬ್) ಆಳದಲ್ಲಿ ಗಡ್ಡೆಯೊಂದು ಬೆಳೆದಿರುವುದು ಕಂಡುಬಂತು. ಹೆಚ್ಚಿನ ಪರೀಕ್ಷೆಗಳ ನಂತರ ಇದು ‘ಇಂಟ್ರಾಹೆಪಾಟಿಕ್ ಚೋಲಾಂಜಿಯೋಕಾರ್ಸಿನೋಮ’ (intrahepatic cholangiocarcinoma) ಎಂಬ ಕಾಯಿಲೆ ಎಂದು ದೃಢಪಟ್ಟಿತು. ಈ ಹಿಂದೆಯೇ ಅವರಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದ್ದರೂ, ಶಸ್ತ್ರಚಿಕಿತ್ಸೆಯಲ್ಲಿನ ಸಂಕೀರ್ಣತೆಯ ಕಾರಣದಿಂದಾಗಿ ಹಿಂದಿನ ವೈದ್ಯರು ಅದನ್ನು ತೆಗೆದುಹಾಕಲು ಹಿಂದೇಟು ಹಾಕಿದ್ದರು.

ಸುಮಾರು 95 ಕೆ.ಜಿ ತೂಕವಿದ್ದ ಆ ಮಹಿಳೆ ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರಿಂದ, ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಈ ರೋಗಿಯು ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಹೃದಯ ಮತ್ತು ಶ್ವಾಸಕೋಶದ ವಿವರವಾದ ಪರೀಕ್ಷೆಗಳನ್ನು ನಡೆಸಿದರು.

ಈ ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡ ಡಾ. ಹನುಮಂತ ನಾಯ್ಕ್ ಮತ್ತು ಅವರ ತಂಡ, ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿತು. ಇದರ ಜೊತೆಗೆ ಸಾಕಷ್ಟು ಆರೋಗ್ಯಕರ ಲಿವರ್ ಸರಿಯಾಗಿ ಕಾರ್ಯನಿರ್ವಹಿಸುವಂತೆಯೂ ನೋಡಿಕೊಂಡಿತು. ಈ ಶಸ್ತ್ರಚಿಕಿತ್ಸೆಯು ಪಿತ್ತಕೋಶದ (ಗಾಲ್ ಬ್ಲಾಡರ್) ಜೊತೆಗೆ ಲಿವರ್ನ II, III, IVa ಮತ್ತು IVb ಭಾಗಗಳನ್ನು ತೆಗೆದುಹಾಕುವ ದೊಡ್ಡ ಶಸ್ತ್ರಚಿಕಿತ್ಸೆಯನ್ನು (ಮೇಜರ್ ಲೆಫ್ಟ್ ಹೆಪಟೆಕ್ಟಮಿ) ಒಳಗೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಿಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಅತ್ಯಂತ ತ್ವರಿತವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆ ಮುಗಿದ ಆರು ಗಂಟೆಗಳಲ್ಲೇ ದ್ರವಾಹಾರ ಸೇವಿಸಲು ಆರಂಭಿಸಿದ ಅವರು, ಕ್ರಮೇಣ ಮೃದುವಾದ ಆಹಾರವನ್ನು ಸೇವಿಸುವ ಹಂತಕ್ಕೆ ತಲುಪಿದರು. ಅವರ ಆರೋಗ್ಯ ಸ್ಥಿರವಾಗಿದ್ದರಿಂದ ಕೇವಲ ಐದು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಆರ್. ಕೆ. ಹನುಮಂತ ನಾಯ್ಕ್, “ಟ್ಯೂಮರ್ನ ಗಾತ್ರ ಮತ್ತು ಅದು ಇದ್ದ ಜಾಗ, ಅದರ ಜೊತೆಗೆ ರೋಗಿಯ ಬೊಜ್ಜು ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆರೋಗ್ಯಕರ ಲಿವರ್ ಅನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಎಚ್ಚರಿಕೆಯ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ನಿಖರವಾದ ಯೋಜನೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ವ್ಯವಸ್ಥಿತ ಆರೈಕೆಯು ಈ ಯಶಸ್ಸಿಗೆ ಕಾರಣವಾಯಿತು” ಎಂದು ತಿಳಿಸಿದರು.

ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರದ ಫೆಸಿಲಿಟಿ ಡೈರೆಕ್ಟರ್ ಶ್ರೀ ಸುನಿಲ್ ಭಂಡಾರಿಗಲ್ ಮಾತನಾಡಿ, “ಹೆಚ್ಚಿನ ಅಪಾಯದಲ್ಲಿದ್ದ ರೋಗಿಗೆ ಇಂತಹ ಸಂಕೀರ್ಣವಾದ ಲಿವರ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದು ನಮ್ಮ ಶಸ್ತ್ರಚಿಕಿತ್ಸಾ ತಂಡದ ಪರಿಣತಿ ಮತ್ತು ವಿವಿಧ ವಿಭಾಗಗಳ ವೈದ್ಯರ ಸಂಯೊಜನೆ ಆರೈಕೆಯ (multidisciplinary care) ಮಹತ್ವವನ್ನು ತೋರಿಸುತ್ತದೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಸುಧಾರಿತ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ ; ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಾಗಲಿ

Published

on

ಸುದ್ದಿದಿನ,ಚನ್ನಗಿರಿ: ಪಟ್ಟಣದ ಬಸವ ಚೇತನ ಎಜುಕೇರ್ ಪ್ರಿ – ಪ್ರೈಮರಿ ಸ್ಕೂಲ್ ನಲ್ಲಿ “ಬಂಧುತ್ವ ಫೌಂಡೇಶನ್ ‘ ವತಿಯಿಂದ ಇಂದು ಶ್ರಾವಣಮಾಸದ ನಾಗರ ಪಂಚಮಿ ಪ್ರಯುಕ್ತ ” ಮಿಲ್ಕ್ ಫೆಸ್ಟ್”( ಹಾಲು ಹಬ್ಬ ) ಎಂಬ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ವಿನೂತನವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ರಾಘು ದೊಡ್ಡಮನಿಯವರು ನಾಗರ ಪಂಚಮಿ ಹಬ್ಬದಂದು ನಮ್ಮ ಜನರು ಕಲ್ಲುನಾಗರಕ್ಕೆ ಮತ್ತು ಹುತ್ತಗಳಿಗೆ ಹಾಲು ಎರೆಯುವ ಸಂಪ್ರದಾಯವಿದೆ ಆದರೆ ಹಾವುಗಳು ಎಂದಿಗೂ ಹಾಲು ಕುಡಿಯುವುದಿಲ್ಲ, ಹಾಲು ಅದರ ಆಹಾರವಲ್ಲ ಹೀಗಿರುವಾಗ ಹಾಲನ್ನು ಈ ರೀತಿಯಲ್ಲಿ ಪೋಲು ಮಾಡುವ ಬದಲಾಗಿ ಅದೇ ಹಾಲನ್ನು ಮಕ್ಕಳಿಗೆ, ಬಡವರಿಗೆ, ರೋಗಿಗಳಿಗೆ ನೀಡಬೇಕು.

ಹಾಲು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ಕರ್ನಾಟಕವೊಂದರಲ್ಲಿ ಪ್ರತಿವರ್ಷ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆ ಆದ್ದರಿಂದ ನಮ್ಮ ಜನರು ಈ ವಿಷಯವಾಗಿ ಜಾಗೃತರಾಗಬೇಕಿದೆ ಮತ್ತು ಸಮಾಜದಲ್ಲಿ ಹೆಚ್ಚು ಬದಲಾವಣೆ ತರಬಹುದಾದ ಬಹುದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಮಕ್ಕಳ ಮೂಲಕ ಜನ ಸಮುದಾಯಕ್ಕೆ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಂತೆ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸಹನಾ, ಸಿಂಧೂ, ಬಿಂದು, ಮುಕ್ತ, ಶ್ವೇತ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending