ದಿನದ ಸುದ್ದಿ
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಸುದ್ದಿದಿನಡೆಸ್ಕ್:ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಹಲವರು ಸಾವಿಗೀಡಾದ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿನೀಡಿ, ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದರು.
ಮಣ್ಣಿನಡಿ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಅಪಾಯಕಾರಿ ಗುಡ್ಡವಿದೆ. ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ನಿಜಕ್ಕೂ ಶ್ಲಾಘನೀಯ ಎಂದರು.
ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಹಲವು ದಿನಗಳಿಂದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಸ್ಥಳದಲ್ಲಿ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದರು.
ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು, ಅಗತ್ಯ ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

ಸುದ್ದಿದಿನ,ದಾವಣಗೆರೆ: ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಒಳಗೊಂಡ ಮೆಗಾ ಡೈರಿ ಆರಂಭಿಸಲು ನನ್ನ ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದೇವೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಡೈರಿ ಆರಂಭಿಸಿದರೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸದನದ ಗಮನ ಸೆಳೆದರು.
ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ಕೊಡುವುದನ್ನು ಶೇ.75ರಷ್ಟು ಹೆಚ್ಚಳ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದರು.
ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಹಿಂದುಳಿದ ಜಿಲ್ಲೆ ದಾವಣಗೆರೆ. ಅದರಲ್ಲೂ ಅತೀ ಹಿಂದುಳಿದ ಮೀಸಲು ಕ್ಷೇತ್ರ ಮಾಯಕೊಂಡ. ಸಿರಿಗೆರೆ ತರಳಬಾಳು ಜಗದ್ಗುರುಗಳ ಹೋರಾಟದ ಫಲವಾಗಿ ನನ್ನ ಕ್ಷೇತ್ರದಲ್ಲಿ 22 ಕೆರೆಗಳ ಯೋಜನೆ ಜಾರಿಗೊಂಡು ಎಲ್ ಅಂಡ್ ಟಿ ಕಂಪನಿ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ 100 ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಬೇಕೆಂಬ ಉದ್ದೇಶ ಈಡೇರಿಲ್ಲ. ಪುನಃ ಹೊಸ ಪೈಪ್ಲೈನ್ ಕಾಮಗಾರಿಗೆ ಹಣ ನೀಡಿ ಕಾಮಗಾರಿ ಆರಂಭಿಸುವAತೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ನನ್ನ ಕ್ಷೇತ್ರದಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದ್ದು, ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದರೆ ಜನಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಗೆ ಅನುಕೂಲವಾಗುತ್ತದೆ. ಅಲ್ಲದೇ ಬ್ರಿಟಿಷರು ನಿರ್ಮಿಸಿದ ಕೆರೆ ಇದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಇಡೀ ಪಕ್ಷಿ ಸಂಕುಲ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದು ಸದನ ಗಮನ ಸೆಳೆದರು.
ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಗಳಿಗೆ ಅನೇಕ ಸೌಲಭ್ಯ ಒದಗಿಸಲು ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನ ನೀಡಬೇಕು. ಎಸ್ಸಿ-ಎಸ್ಟಿ ಸಮುದಾಯ ಆರ್ಥಿಕವಾಗಿ ಸಬಲರಾಗಲು ಭೂಒಡೆತನ ಯೋಜನೆ ಜಾರಿಗೊಳಿಸಿದ್ದು, ಕ್ಷೇತ್ರಕ್ಕೆ ಕೇವಲ ಒಂದೇ ಕೊಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್ನಲ್ಲಿ ಅಭ್ಯಾಸ ಮಾಡುವ ಎಸ್ಸಿ-ಎಸ್ಟಿ ಮಕ್ಕಳಿಗೆ 2013-18ರಲ್ಲಿ ಹಾಸ್ಟೆಲ್ ಸೌಲಭ್ಯ ಇತ್ತು, ಈಗ ಇಲ್ಲ. ಕೂಡಲೇ ಈ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಹಗಲು ದರೋಡೆ ಮಾಡಲಾಗುತ್ತಿದೆ. ಹೊರ ಗುತ್ತಿಗೆ ತೆಗೆದು ನೇರವಾಗಿ ನೇಮಕಾತಿ ಮಾಡಿಕೊಂಡರೆ ಅವರ ಬದುಕು ಉಜ್ವಲವಾಗುತ್ತದೆ. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ 33 ವಿಶೇಷ ಪೊಲೀಸ್ ಠಾಣೆ ತೆರೆಯಲು ಕ್ರಮ, ಅಲ್ಲದೇ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 2 ಕೋಟಿ ಮೀಸಲು, ಅದರಂತೆ ಒಬಿಸಿ, ಅಲ್ಪಸಂಖ್ಯಾತರಿಗೂ 2 ಕೋಟಿ ಮೀಸಲಿಡುವ ಮೂಲಕ ರೈತರು, ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿಪಿ-ಎಸ್ಟಿಪಿ ಯೋಜನೆಯಡಿ 48,018 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
- ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ
ಮಳೆಗಾಲದಲ್ಲಿ ತುಂಗಾ ಜಲಾಯಶದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಿ ಅಪರ್ ಭದ್ರಾ ಯೋಜನೆ ನೀರು ನೀಡುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ರಾಗಿ, ಭತ್ತ, ತೊಗರಿ ಬೆಂಬಲ ಬೆಲೆಯಡಿ ಖರೀದಿಸಿದಂತೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆರೆಬಿಳಚಿಯಲ್ಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ ,ಕ್ರಿಶ್ಚಿಯನ್, ಜೈನ್ ,ಬೌದ್ಧ ಸಿಖ್ ಪಾರ್ಸಿ ಧರ್ಮದವರಿಗೆ 75% ಸ್ಥಾನ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 25% ಸ್ಥಾನಗಳು ಮೀಸಲಾಗಿವೆ.ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sevasindhuservices.karnataka.gov.in/
ಪ್ರವೇಶ ಪಡೆಯಲು ಅರ್ಹತೆಗಳು
- 05 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಪೋಷಕರ ಆದಾಯದ ಮಿತಿ ಎಸ್.ಸಿ/ಎಸ್.ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ
- 1 ಲಕ್ಷ ರೂ.ಗಳು ಮತ್ತು ಅಲ್ಪಸಂಖ್ಯಾತರಿಗೆ 2.5ಲಕ್ಷ ರೂ.ಗಳು ಮತ್ತು ಹಿಂದುಳಿದ ವರ್ಗದವರಿಗೆ 44500/- ರೂ.ಗಳಿಗೆ ಮೀರಿರಬಾರದು.
ವಸತಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು
- ಆಯ್ಕೆಯಾದ ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದ 12 ತರಗತಿಯವರೆಗೆ ಉಚಿತ ಶಿಕ್ಷಣ.
- ಉಚಿತ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ, ಶೂ ಮತ್ತು ಸಾಕ್ಸ್, ಹಾಸಿಗೆ ಹೊದಿಕೆ ಜೊತೆಗೆ ಉತ್ತಮ ಮೂಲ ಸೌಲಭ್ಯ ಒದಗಿಸಲಾಗುವುದು.
- ಸುಸಜ್ಜಿತ ಕೊಠಡಿ ಹಾಗೂ ವಸತಿ ನಿಲಯಗಳು, ವಿದ್ಯುತ್ ವ್ಯವಸ್ಥೆ, 24×7 ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ.
- ನುರಿತ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಭೋದನೆ, ಪ್ರತಿ ವಿಷಯಕ್ಕೆ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಹಾಗೂ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಇದೆ.
- ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ ಇದೆ. ಜೊತೆಗೆ 24×7 CCTV ನಿರೀಕ್ಷಣೆಯಲ್ಲಿ ಇರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ : ಹೊಸ ಸದಸ್ಯರ ನೊಂದಣಿ, ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಸೂಚನೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ಸಹಕಾರ ಸಂಘಗಳ ನಿಯಮ 1960ರಡಿ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಎಲ್ಲಾ ವಿಧದ ಸಹಕಾರ ಸಂಘಗಳ ಸದಸ್ಯರು ಮಾರ್ಚ್ 31ರೊಳಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನು ನೊಂದಾಯಿಸುವ ಮತ್ತು ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಮತ್ತು ಯಾವುದೇ ಒಂದು ಸಹಕಾರ ಸಂಘದ ಸದಸ್ಯರಾಗಿದ್ದರೆ, ಈ ಯೋಜನೆಯ ಫಲಾನಭವಿಗಳಾಗಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ6 days ago
ದಾವಣಗೆರೆ | ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ ; ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ
-
ದಿನದ ಸುದ್ದಿ7 days ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ7 days ago
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಖಾತ್ರಿ ಯೋಜನೆಯ ಅನುಷ್ಟಾನ ಸಮಿತಿಗಳಿಂದ, ಶಾಸಕರ ಘನತೆಗೆ ಕುಂದಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ6 days ago
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
-
ದಿನದ ಸುದ್ದಿ7 days ago
ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ