Connect with us

ಅಂತರಂಗ

ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

Published

on

  • ರುದ್ರಪ್ಪ ಹನಗವಾಡಿ

ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.

ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.

ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.

ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.

ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.

ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.

ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.

ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.

ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.

ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.

ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.

ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.

ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243

ಮುಂದುವರಿಯುವುದು

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending