ದಿನದ ಸುದ್ದಿ
ಆತ್ಮಕತೆ | ಹಾಸ್ಟೆಲ್‌ನಲ್ಲಿ ಜಾತಿ ಜಗಳ

- ರುದ್ರಪ್ಪ ಹನಗವಾಡಿ
ನಾನು ಮೈಸೂರಿಗೆ ಬಂದು ಮಹಾರಾಜ ಕಾಲೇಜ್ ಹಾಸ್ಟೆಲ್ ಸೇರಿಕೊಂಡಾಗ ತಡವಾಗಿ ಸೇರಿಕೊಂಡವರಿಗೆ ಎರಡು ಮೂರು ಜನರಿರುವ ರೂಂಗಳನ್ನು ಅಲಾಟ್ ಮಾಡುತ್ತಿದ್ದರು. ನಮಗೆ ರೂಂ ನಂ. ಎ4 ಎಂಬಲ್ಲಿ ನಾಲ್ಕು ಜನರಿಗೆ ನಾನು ಮತ್ತು ಎಲ್. ರವೀಂದ್ರ, ಎರಡನೇ ಬಿ.ಎ.ಯವರಾಗಿದ್ದವರು.
ವೈ. ಮಹೇಶ ಮೊದಲ ಬಿ.ಎ. ಮತ್ತು ಪಿಯುಸಿಗೆ ಸೇರಿದ್ದ ಮುರಳೀಧರ ಇದ್ದೆವು. ರವೀಂದ್ರ ಸದಾ ಹಿಂದಿ ಹಾಡಿನ ಭಕ್ತನಾಗಿದ್ದು ರಾಜೇಶ್ ಖನ್ನಾನ ಹೇರ್ ಸ್ಟೈಲ್‌ನಲ್ಲಿ ಟಾಕುಟೀಕಾಗಿ ತರಗತಿಗೆ ಬರುತ್ತಿದ್ದ. ಮುರಳಿ ಹತ್ತಿರದ ಇಲವಾಲ ಊರಿನವನಾಗಿದ್ದರಿಂದ ದಿನವೂ ಅವರ ಊರಿನಿಂದ ಪರಿಚಯಸ್ಥರು ಬಂದು ಸಂಜೆ ವೇಳೆಯಲ್ಲಿ ಹೊರಗೆ ಹೋಗುತ್ತಿದ್ದ. ನಾನು ಮತ್ತು ಮಹೇಶ ಇಬ್ಬರೇ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆವು. ಸಭೆ ಸಮಾರಂಭಗಳಿಗೆ ಮತ್ತು ಸಮಾಜವಾದಿ ಯುವ ಜನ ಸಭಾ ಕೆಲಸಗಳಿಗೆ ಜೊತೆಯಲ್ಲಿಯೇ ಹೋಗುತ್ತಿದ್ದೆವು.
ಮಹಾರಾಜ ಕಾಲೇಜ್ ಹಾಸ್ಟೆಲ್‌ವೊಂದು ಸಾರ್ವಜನಿಕ ಹಾಸ್ಟೆಲ್ ಆಗಿದ್ದು ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶವಿತ್ತಾದರೂ, ಸ್ಥಳೀಯ ಒಕ್ಕಲಿಗ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುತ್ತಿತ್ತು. ಪರಿಶಿಷ್ಟ ಜಾತಿ / ಪಂಗಡಗಳಿಗೆ ಸಾಕಷ್ಟು ವಿದ್ಯಾರ್ಥಿಗಳಿದ್ದರೂ ಯಾರೂ ತಮ್ಮ ಜಾತಿ ಗುಂಪುಗಳಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾನು ವಿಶೇಷವಾಗಿ 300 ಕಿ.ಮೀ. ದೂರದಿಂದ ಬಂದವನಾಗಿ ನನಗೆ ಪರಿಚಿತರು, ಜಾತಿಗರು ಯಾರೂ ಗೊತ್ತಿರಲಿಲ್ಲ.
ನನ್ನ ರೂಮ್‌ಮೇಟ್‌ಗಳಲ್ಲಿ ಮಹೇಶ ಮತ್ತು ಮುರಳಿ ಒಕ್ಕಲಿಗರಾಗಿದ್ದರು. ರವೀಂದ್ರ ಕೂಡ ಪರಿಶಿಷ್ಟ ಜಾತಿಯವನಾಗಿದ್ದರೂ ಅವರ ತಂದೆ ಆಗಿನ ಕಾಲದ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ. ಆಗಿದ್ದರಿಂದ ಅವನ ಸಾಮಾಜಿಕ ಹಿನ್ನೆಲೆ ಗೊತ್ತಾಗುತ್ತಿರಲಿಲ್ಲ. ನಾನು ದಾವಣಗೆರೆ ಕಡೆಯವ ಮತ್ತು ಹೆಸರು ರುದ್ರಪ್ಪ ಎಂಬೀ ಕಾರಣದಿಂದ ಯಾರೋ ಲಿಂಗಾಯತರವನಿರಬೇಕೆಂದು ನನ್ನ ಬಗ್ಗೆ ಏನೂ ತಿಳಿಯದವರು ಭಾವಿಸಿದ್ದರು.
ಮಹಾರಾಜಾ ಕಾಲೇಜ್ ಹಾಸ್ಟೆಲ್‌ನಲ್ಲಿನ ಊಟ ಬಹಳ ಅದ್ದೂರಿಯಾಗಿಯೇ ಇರುತ್ತಿತ್ತು. ಬೆಳಿಗ್ಗೆ ಕಾಫಿ, ಟೀ ನಂತರ 9 ರಿಂದ 11 ಗಂಟೆಯವರೆಗೆ ಊಟ, ಮಧ್ಯಾಹ್ನ 1 ರಿಂದ 2ಕ್ಕೆ ತಿಂಡಿ, ರಾತ್ರಿಗೆ 8 ರಿಂದ ಊಟವಿರುತ್ತಿತ್ತು. ಮಾಂಸಹಾರಕ್ಕೆ ಪ್ರತ್ಯೇಕವಾದ ಮೆಸ್ ಇದ್ದು, ಅಲ್ಲಿ ವಾರದಲ್ಲಿ 5 ದಿನಗಳು ಮಾಂಸಾಹಾರ ಇರುತ್ತಿತ್ತು. ಸಸ್ಯಾಹಾರಿ ಮೆಸ್‌ನಲ್ಲಿ ಮಜ್ಜಿಗೆ ಹುಳಿ, ತೊವೆ, ತುಪ್ಪ, ಮೊಸರು, ಬಾಳೆಹಣ್ಣುಗಳಿರುತ್ತಿದ್ದವು. ವಾರದ ಮತ್ತು ತಿಂಗಳ ಕೊನೆಯಲ್ಲಿ ವಿಶೇಷವಾದ ಊಟಗಳು ಇರುತ್ತಿದ್ದವು. ಅದಕ್ಕಾಗಿ ಹೊರಗಿನ ಸ್ನೇಹಿತರನ್ನು ಆಹ್ವಾನಿಸಬಹುದಿತ್ತು.
ಇಂತಹ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳು ಮೈಸೂರಿನ ಅಶೋಕಪುರಂ ಗೆಳೆಯರನ್ನು ಆಹ್ವಾನಿಸಿದ್ದರು. ಒಕ್ಕಲಿಗ ವಿದ್ಯಾರ್ಥಿಗಳೂ ಕೂಡ ಕೆ.ಜಿ. ಕೊಪ್ಪಲ ವಿದ್ಯಾರ್ಥಿಸ್ನೇಹಿತರನ್ನು ಆಹ್ವಾನಿಸಿದ್ದರು. ಊಟದ ಹಾಲ್‌ನಲ್ಲಿ ಮೊದಲ ಬ್ಯಾಚ್‌ನಲ್ಲಿಯೇ ಊಟ ಮಾಡುವ ಧಾವಂತದಲ್ಲಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ವಿದ್ಯಾರ್ಥಿಗಳಲ್ಲಿ ಊಟಕ್ಕೆ ಕೂರುವ ಸೀಟಿನ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು. ಊಟದ ಸೀಟಿಗಾಗಿ ಆದ ಗಲಾಟೆ ಅಲ್ಲಿಗೆ ಮುಗಿಯದೆ ಹೊರಗಿನ ರೌಡಿಗಳನ್ನು ಕರೆತಂದು ಎಸ್.ಸಿ. ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೂ ಗುರುತಿಸುತ್ತಾ ಥಳಿಸಿದರು.
ಎಸ್.ಸಿ. ಹುಡುಗರನ್ನು ಕಂಡರೆ ಜಾತಿವಾದಿ ಕೆಲವು ಒಕ್ಕಲಿಗ ವಿದ್ಯಾರ್ಥಿಗಳು ತಾವು ಪ್ರತಿ ತಿಂಗಳೂ ಹಣ ಪಾವತಿಸುತ್ತಿದ್ದು, ಎಸ್.ಸಿ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂದ ಹಣದಲ್ಲಿ ಬಿಟ್ಟಿ ಕೂಳು ತಿಂದು ಕೊಬ್ಬಿದ್ದಾರೆ ಎನ್ನುವ ಧೋರಣೆ ಅವರಲ್ಲಿತ್ತು. ಬಳೆ ಶ್ರೀನಿವಾಸ, ನಂಜಪ್ಪ ಮತ್ತು ಗೋವಿಂದ ಎಂಬ ಮೂವರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೂ, ರೌಡಿಗಳಂತೆ ವರ್ತಿಸುತ್ತಿದ್ದರು. ಮೈಸೂರು ಜಿಲ್ಲೆಯ ಹತ್ತಿರದ ಹಳ್ಳಿಗರಾಗಿದ್ದರಿಂದ ಸದಾ ವಿದ್ಯಾರ್ಥಿಗಳಲ್ಲದವರ ಜೊತೆ ಹಾಸ್ಟೆಲ್ ಒಳಗೆ ಇದ್ದ ಸೋಮಾರಿ ಕಟ್ಟೆಯಲ್ಲಿ ಕೂತು ಹರಟುತ್ತಿದ್ದರು.
ಈ ರೀತಿ ಕರೆತಂದ ರೌಡಿಗಳಲ್ಲಿ ಒಬ್ಬ ನನ್ನನ್ನು ಹೊಡೆಯಲು ಬಂದು ಇನ್ನೇನು ಏಟು ಕೊಡುವುದರಲ್ಲಿದ್ದ. ಅಷ್ಟರಲ್ಲೇ ಅಲ್ಲಿದ್ದ ಗೋವಿಂದ `ಲೇ ಅವನು ಎಸ್.ಸಿ. ಅಲ್ಲ, ಲಿಂಗಾಯತ ಬಿಡ್ರೊ’ ಎಂದು ಕೂಗಿದ. ಹಾಗಾಗಿ ನಾನು ಏಟು ಬೀಳುವುದನ್ನು ತಪ್ಪಿಸಿಕೊಂಡು ರೂಮ್‌ಗೆ ಹೋಗಿ ಬಚಾವಾಗಿದ್ದೆ. ನಂತರದ ದಿನಗಳಲ್ಲಿ ನನ್ನ ಜಾತಿ ಅವನಿಗೆ ತಿಳಿದು ತನ್ನ ಅಂದಿನ ದಿನದ ತಪ್ಪಿನ ಅರಿವಾಗಿತ್ತು.
ಇದೆಲ್ಲ ಆಗಿ ಕೆಲವು ದಿನಗಳಲ್ಲಿ ಮಳವಳ್ಳಿ ತಾಲ್ಲೂಕಿನ ದಲಿತರಾಗಿದ್ದ ರಾಜಕಾರಣಿ ಮಾಜಿ ಮಂತ್ರಿ ಮಲ್ಲಿಕಾರ್ಜುನ ಸ್ವಾಮಿ ಆಗ ಸಿಂಡಿಕೇಟ್ ಸದಸ್ಯರಾಗಿದ್ದು, ಕಾಲೇಜ್ ಹಾಸ್ಟೆಲ್‌ನಲ್ಲಿದ್ದ ವಿಶೇಷವಾಗಿ ಏಟು ತಿಂದಿದ್ದ ಹುಡುಗರನ್ನು ನೋಡಲು ವಾರ್ಡನ್ ಶಿವಲಿಂಗಯ್ಯನವರ ಜೊತೆ ಬಂದಿದ್ದರು. ಆಗ ನನ್ನನ್ನು ಸಹ ಕರೆಸಿ ವಿಚಾರಿಸಿ ಚೆನ್ನಾಗಿ ಓದುವ ಬಗ್ಗೆ ಬುದ್ಧಿ ಮಾತು ಹೇಳಿದ್ದರು. ಆದರೆ ನಮ್ಮ ರೂಮ್‌ನಲ್ಲಿ ಮಹೇಶನಾಗಲೀ ಮುರಳಿಯಾಗಲೀ ಜಾತಿಕೂಪದ ಜಗಳಗಳಿಂದ ದೂರ ಇದ್ದರು. ಮತ್ತೆ ನಾನು ಎಂ.ಎ.ನಲ್ಲಿ ಗಂಗೋತ್ರಿಯ ಪಿ.ಜಿ. ಹಾಸ್ಟೆಲ್ ಸೇರಿದಾಗ ಅಲ್ಲಿಯೂ ಒಕ್ಕಲಿಗ ವಿದ್ಯಾರ್ಥಿಗಳಲ್ಲಿನ ಕೆಲವರು ದಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಬ್ರಾಹ್ಮಣರೆಂದು ಹಂಗಿಸುತ್ತಿದ್ದರು.
ನಾನೊಮ್ಮೆ ಬೀರು ಬಾಟಲಿಯಲ್ಲಿ ಕುಡಿಯಲು ನೀರು ತುಂಬಿಕೊಳ್ಳಲು ಹೋಗುವಾಗ `ಇವರಿಗೆ ಬಿಟ್ಟಿ ಊಟದ ಜೊತೆ ಸರ್ಕಾರ ಬೀರು ಕೂಡ ಕೊಡುತ್ತದೆ ನೋಡ್ರೋ ಎಂದು ವ್ಯಂಗ್ಯವಾಗಿ ಮಾತಾಡುತ್ತಿದ್ದನ್ನು ನಾನು ಮಹದೇವನಿಗೆ ಹೇಳಿದ್ದೆ. ಅವನು ಮುಂದೊAದು ದಿನ ಪೂರ್ಣಚಂದ್ರ ತೇಜಸ್ವಿ ಅವರಿಗೆ ತಿಳಿಸಿದ ಕಾರಣ ಅವರು ಹಾಸ್ಟೆಲ್‌ನಲ್ಲಿದ್ದ ಕೆಲವು ಒಕ್ಕಲಿಗ ಹುಡುಗರನ್ನು ಕರೆಸಿ ಚೆನ್ನಾಗಿ ಬೈದು ಕಳಿಸಿದ್ದರಂತೆ. ಆ ನಂತರದ ದಿನಗಳಲ್ಲಿ ಅವರೆಲ್ಲ ನಮ್ಮನ್ನು ಕಂಡರೆ ಕೃತಕ ಗೌರವ ತೋರುತ್ತಿದ್ದರು. ನಂತರ ಎಂ.ಎ. ಮುಗಿಯುವವರೆಗೆ ಮತ್ತಾವ ಜಾತಿ ಜಗಳದ ಸೋಂಕು ಹಾಸ್ಟೆಲ್‌ನಲ್ಲಿ ಮರುಕಳಿಸಲಿಲ್ಲ.
ಮೈಸೂರಿನಲ್ಲಿ ಓದಲು ಮಹಾರಾಜಾ ಕಾಲೇಜು ನಂತರ ಗಂಗೋತ್ರಿಯಲ್ಲಿ ಎಂ.ಎ. ಮಾಡಲು ಸಿಕ್ಕ ಅವಕಾಶದ ಜೊತೆಗೆ ಸಿಕ್ಕ ಹಾಸ್ಟೆಲ್ ಸೌಲಭ್ಯಗಳು, ಜೊತೆಗೆ ಅನೇಕ ಹಿನ್ನೆಲೆಯ ಸ್ನೇಹಿತರ ಬಳಗ ದೊರಕಲು ಅವಕಾಶವಾಯಿತು. ಶೈಕ್ಷಣಿಕ ಶಿಕ್ಷಣದ ಜೊತೆಗೆ ಹಲವು ಹಿನ್ನೆಲೆಯ ವಿದ್ಯಾರ್ಥಿಗಳ ಪರಿಚಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ಬುನಾದಿಯಾಯಿತು. ಅದಕ್ಕೆಲ್ಲ ಕಾರಣರಾದವರನ್ನು ಸದಾ ನೆನೆಯದಿರಲಾರೆ.
ಮುಂದುವರಿಯುವುದು…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪಿಂಚಣಿ ಯೋಜನೆ : ಜೀವಿತ ಪ್ರಮಾಣ ಪತ್ರ ಸಲ್ಲಿಕೆ

ಸುದ್ದಿದಿನ,ದಾವಣಗೆರೆ:ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪಿಂಚಣಿ ಯೋಜನೆಯಡಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಪಿಂಚಣಿದಾರರು ಪಿಂಚಣಿ ಪಡೆಯುತ್ತಿದ್ದು ಇದರಲ್ಲಿ 5577 ಪಿಂಚಣಿದಾರರು ಇದುವರೆಗೆ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಿಲ್ಲ. ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್‍ನಲ್ಲಿ ಸಲ್ಲಿಸಬಹುದು. ಅಥವಾ ತಮ್ಮ ಆಂಡ್ರಾಯ್ಡ್ ಮೊಬೈಲ್ ಪೋನ್ ಮೂಲಕ ಫೇಸ್ ಅಂಥೆಂಟಿಕೇಶನ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದೆಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಕೃಷಿಗೆ 7 ತಾಸು, ಗೃಹ ಮತ್ತು ಕೈಗಾರಿಕೆಗೆ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ದ, ಸೋಲಾರ ವಿದ್ಯುತ್ ಉತ್ಪಾದನೆಗೆ ಒತ್ತು; ಇಂಧನ ಸಚಿವ ಕೆ.ಜೆ.ಜಾರ್ಜ್

ಸುದ್ದಿದಿನ,ದಾವಣಗೆರೆ:ಕೃಷಿಗೆ 7 ತಾಸು ತ್ರಿಫೇಜ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ನೀತಿಯಾಗಿದ್ದು ಇದಕ್ಕೆ ಬದ್ದವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವೇ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗಾಗಿ ಕಡಿತ ಮಾಡಲಾಗುತ್ತದೆ. ಆದರೆ ಸರ್ಕಾರದ ಬದ್ದತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಆದರೆ ಲೋಡ್‍ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ 18500 ಮೆಗಾವ್ಯಾಟ್ ಬೇಡಿಕೆ ಇದ್ದು ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ 10 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು ಜೂನ್‍ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ. ಗುಣಮಟ್ಟದ ವೋಲ್ಟೇಜ್‍ಗಾಗಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
3 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ
ಕುಸುಮ್-ಸಿ ಯೋಜನೆಯ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ಸೋಲಾರ್‍ನಿಂದದದದ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈಗಾಗಲೇ ಕುಸುಮ್ ಯೋಜನೆಯಡಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದ್ದು ಬರುವ ಏಪ್ರಿಲ್‍ನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‍ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
3000 ಪವರ್ ಮ್ಯಾನ್ ನೇಮಕ
ಇಂಧನ ಇಲಾಖೆಯಿಂದ ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇನ್ನಷ್ಟು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಇಂಧನ ಇಲಾಖೆಗೆ ಅಗತ್ಯವಿರುವ 3000 ಪವರ್ ಮ್ಯಾನ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು 3 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. ಈಗಾಗಲೇ ಅರ್ಜಿಗಳ ಪರಿಶೀಲನಾ ಹಂತ ಮುಗಿದಿದ್ದು 1 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 1;5 ರನ್ವಯ ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಿ ಅಂತಿಮವಾಗಿ ಅತ್ಯಂತ ಪಾರದರ್ಶಕವಾಗಿ ಮೀಸಲಾತಿ ಹಾಗೂ ಅಂಕಗಳ ಆಧಾರದ ಮೇಲೆ ಏಪ್ರಿಲ್ ಒಳಗಾಗಿ ನೇಮಕಾತಿ ನಡೆಯಲಿದೆ. ಆದರೆ ಯಾವುದೇ ಮಧ್ಯವರ್ತಿಗಳ ಬಳಿ ಹಣಕೊಟ್ಟು ಕಳೆದುಕೊಳ್ಳಬೇಡಿ, ಯಾರಾದರೂ ಆಮಿಷವೊಡ್ಡಿದಲ್ಲಿ ಇಲಾಖೆ ಗಮನಕ್ಕೆ ತರಬೇಕೆಂದು ತಿಳಿಸಿದರು.
ಎಸ್ಕಾಂಗಳು ನಷ್ಟದಲ್ಲಿಲ್ಲ
ಇಂಧನ ಇಲಾಖೆಯಲ್ಲಿನ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ, ಆದರೆ ಸರ್ಕಾರದಿಂದ ಸಾಕಷ್ಟು ಹಣ ಬರಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ ಇದೆ. ಗ್ರಾಮ ಪಂಚಾಯಿತಿಗಳು ಸ್ವಂತವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಯೋಜನೆ ಇದ್ದು ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಉದ್ದೇಶಿಸಿ ಇದನ್ನು ಪೈಲೆಟ್ ಕಾರ್ಯಕ್ರಮವಾಗಿ ರೂಪಿಸಲಾಗುತ್ತದೆ. ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ, ಬೀದಿದೀಪಗಳಿಗೆ ಅಗತ್ಯವಿರುವ ವಿದ್ಯುತ್‍ನ್ನು ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಇದಕ್ಕಾಗಿ 400 ಎಕರೆ ಜಾಗವನ್ನು ಗುರುತಿಸಿ ಸೋಲಾರ್ ಪ್ಯಾನಲ್ ಅಳವಡಿಸಿ ಗ್ರಿಡ್‍ಗೆ ವಿದ್ಯುತ್ ನೀಡಿ ಅಷ್ಟೆ ವಿದ್ಯುತ್‍ನ್ನು ವಾಪಸ್ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.
ವಿದ್ಯುತ್ ದರ ಪರಿಷ್ಕರಣೆ ಕೆಇಆರ್‍ಸಿಗೆ
ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೆಇಆರ್‍ಸಿ ಮಾಡಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ ದರ ಏರಿಕೆ ನಿರ್ಣಯಗಳನ್ನು ಕೆಇಆರ್‍ಸಿ ನಿರ್ಧರಿಸಲಿದೆ. ಯಾರದೂ ಕೂಡ ಹಸ್ತಕ್ಷೇಪ ಇರುವುದಿಲ್ಲ, ಕಳೆದ ವರ್ಷ ಯಾವುದೇ ವಿದ್ಯುತ್ ದರ ಏರಿಕೆ ಮಾಡಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೃಹಜ್ಯೋತಿ
ಸರ್ಕಾರದ ಗ್ಯಾರಂಟಿ ಯೋಜನೆಗಳೊಂದಾದ ಗೃಹಜ್ಯೋತಿ ಯೋಜನೆ ಎಲ್ಲಾ ವರ್ಗದ ಜನರಿಗೂ ಅನ್ವಯಿಸಲಿದ್ದು 200 ಯುನಿಟ್ ವರೆಗೆ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಅವರು ವರ್ಷದಲ್ಲಿ ಉಪಯೋಗಿಸುವ ಯುನಿಟ್‍ಗಳನ್ನಾಧರಿಸಿ ಹೆಚ್ಚುವರಿಯಾಗಿ ಶೇ 10 ರಷ್ಟು ಸೇರಿಸಿ ಬಳಕೆಯ ಯುನಿಟ್ ನಿಗದಿಯಾಗುತ್ತದೆ. ಆದರೆ 200 ಯುನಿಟ್ ನಂತರ 1 ಯುನಿಟ್ ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ನೊಂದಣಿಯಾದ 433897 ಆರ್.ಆರ್.ಸಂಖ್ಯೆಗಳಿದ್ದು ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳಲ್ಲಿ ಶೇ 88.93 ರಷ್ಟು ಗೃಹಜ್ಯೋತಿಯಲ್ಲಿವೆ. ಈ ಸ್ಥಾವರಗಳಿಗೆ 2023 ರ ಆಗಸ್ಟ್ ನಿಂದ 2024 ರ ಡಿಸೆಂಬರ್ ಅಂತ್ಯದವರೆಗೆ 309 ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಸಬ್ಸಿಡಿ ನೀಡಿದ್ದು ಸರ್ಕಾರ ಇದನ್ನು ಭರಿಸಿದೆ ಎಂದರು.
ರೈತರಿಗೆ 7 ಗಂಟೆ ವಿದ್ಯುತ್
ರೈತರ ಕೃಷಿ ಪಂಪ್ ಸೆಟ್‍ಗಳಿಗೆ ದಿನದಲ್ಲಿ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ದಾವಣಗೆರೆ ಜಿಲ್ಲೆ ಆನಗೋಡು, ಮಾಯಕೊಂಡ ಭಾಗದಲ್ಲಿ 3 ಅಥವಾ 4 ಗಂಟೆಗಳ ಕಾಲ ಮಾತ್ರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲಾಗುತ್ತದೆ ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ಎಲ್ಲಾ ರೈತರಿಗೂ ದಿನದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸರ್ಕಾರದ ನೀತಿಯಾಗಿದ್ದು ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್ ಲೋಡಿಂಗ್ ಆದರೆ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ನೀಡಲೇಬೇಕೆಂದು ಸೂಚನೆ ನೀಡಿದರು.
ಪಂಪ್‍ಸೆಟ್‍ಗಳಿಗೆ ಶೀಘ್ರ ಸಂಪರ್ಕಕ್ಕೆ ಕ್ರಮ
ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 2004 ರಿಂದಲೂ ಅಕ್ರಮ-ಸಕ್ರಮ ಎಂಬ ಕಾರ್ಯಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ ಮಾಡುತ್ತಾ ಬರಲಾಗಿದೆ. ಇದರಡಿ ಮೂಲಭೂತ ಸೌಕರ್ಯದಡಿ ಮಾರ್ಗ, ಟಿಸಿ ಅಳವಡಿಕೆ ಮಾಡಲಾಗಿದೆ. ಬಾಕಿ ಇರುವ 4946 ಪಂಪ್‍ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತವಾಗಿ ಮೂಲಭೂತ ಸೌಕರ್ಯ ಮಾಡಿಕೊಂಡು ಕೃಷಿ ಪಂಪ್‍ಸೆಟ್‍ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಭೂತ ಸೌಕರ್ಯಕ್ಕಾಗಿ ಸರತಿಯಲ್ಲಿ ಕಾಯುವ ಎರಡು ಅವಕಾಶಗಳನ್ನು ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆ ಎಂಬ ಚಿಂತನೆ ಮಾಡಲಾಗಿದೆ ಎಂದರು.
ಕಸುಮ್-ಬಿ
ಕುಸುಮ್ ಬಿ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿದೆ. 7.5 ಹೆಚ್‍ಪಿ ವರೆಗೆ ಅವಕಾಶ ಇದ್ದು ರೈತರು ಶೇ 20 ರಷ್ಟು ವಂತಿಗೆಯನ್ನು ಕಟ್ಟಬೇಕು. ಕೇಂದ್ರ ಶೇ 30 ಹಾಗೂ ರಾಜ್ಯ ಶೇ 50 ರಷ್ಟು ಸಹಾಯಧನ ಘಟಕ ವೆಚ್ಚಕ್ಕೆ ನೀಡಲಿದೆ. ಮತ್ತು ಕುಸುಮ್-ಸಿ ಯೋಜನೆಯಡಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಗ್ರಿಡ್‍ಗೆ ಪೂರೈಕೆ ಮಾಡುವುದಾಗಿದೆ. ರೈತರು ಸೋಲಾರ್ ಪಂಪ್‍ಸೆಟ್ ಅಳವಡಿಕೆಗೆ ಮುಂದೆ ಬಂದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜ್‍ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಡಾ; ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಾಟೀಲ್ ಹಾಗೂ ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ನಿಗಮ ಸ್ಥಾಪನೆ ಹೊರಗುತ್ತಿಗೆ ನೌಕರರಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ


-
ದಿನದ ಸುದ್ದಿ3 days ago
ಕವಿತೆ | ನಾನೊಲಿದೆನಯ್ಯಾ
-
ದಿನದ ಸುದ್ದಿ6 days ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ4 days ago
ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ
-
ದಿನದ ಸುದ್ದಿ5 days ago
ತುಂಬಿದ ಕೊಡ ತುಳುಕಿತಲೇ ಪರಾಕ್..!
-
ದಿನದ ಸುದ್ದಿ2 days ago
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ
-
ದಿನದ ಸುದ್ದಿ2 days ago
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ
-
ದಿನದ ಸುದ್ದಿ23 hours ago
ಗ್ರಾಮೀಣ ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ8 hours ago
ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ರೂ.1.99 ಕೋಟಿ