Connect with us

ದಿನದ ಸುದ್ದಿ

ಆತ್ಮಕತೆ | ಭದ್ರಾವತಿಯಲ್ಲಿ ಮತ್ತೆ ಪ್ರೊ.ಬಿ. ಕೃಷ್ಣಪ್ಪನವರ ಭೇಟಿ

Published

on

  • ರುದ್ರಪ್ಪ ಹನಗವಾಡಿ

1968ರಲ್ಲಿ ಕೃಷ್ಣಪ್ಪ ಅವರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ಕಂಡಿದ್ದ ನಾನು ಅವರನ್ನು ಮತ್ತೆ ಭೇಟಿಯಾಗಿದ್ದು, ನಾನು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದಾಗ ಈ ಸಮಯದಲ್ಲಿ ಸಮಾಜವಾದಿ ಯುವಜನ ಸಭಾ ಮತ್ತು ಜಾತಿ ವಿನಾಶ ಸಮ್ಮೇಳನ ಮತ್ತು ಬೂಸಾ ಗಲಾಟೆ ಸಂದರ್ಭದಲ್ಲಿ ಅವರು ಮೈಸೂರಿಗೆ ಬಂದಾಗ ಸಿಗುತ್ತಿದ್ದೆ.

ಮಾದೇವ, ರಾಜಶೇಖರ ಕೋಟಿ, ನೆಲಮನೆ ದೇವೇಗೌಡ, ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್ ಇನ್ನು ಅನೇಕರು ಸೇರಿ ಜಾತಿ ವಿನಾಶ, ಸಮಾಜವಾದ, ರೈತ ಸಂಘ ಆ ಕಾಲದಲ್ಲಿನ ಸಾರ್ವಜನಿಕ ಜೀವನದಲ್ಲಿದ್ದ ಭ್ರಷ್ಟಾಚಾರ, ವಿಶ್ವವಿದ್ಯಾಲಯದಲ್ಲಿನ ಜಾತೀಯತೆ ಎಲ್ಲವೂ ಚರ್ಚೆಗೆ ಬರುತ್ತಿದ್ದವು. ಮಹೇಶ, ನಾನು, ಭಕ್ತ, ಅರ್ಕೇಶ ಸಾಮಾನ್ಯವಾಗಿ ಕೇಳುಗರಾಗಿರುತ್ತಿದ್ದೆವು. ಮತ್ತೆ ಆ ಕ್ಷಣದಲ್ಲಿ ಆ ಸಂಘಟನೆಗಳ ಸಮಿತಿಯವರು ವಹಿಸಿದ ಕೆಲಸಗಳಿಗೆ ಸಜ್ಜಾಗಿರುತ್ತಿದ್ದೆವು.

ನಾನು ಬಿಆರ್‌ಪಿಗೆ ಬಂದಾಗ ಕೃಷ್ಣಪ್ಪನವರು ಅದಾಗಲೇ ಭದ್ರಾವತಿಯಲ್ಲಿದ್ದು, ತಮ್ಮ ಅಂತರ್‌ಜಾತಿ ಮದುವೆಯ ಕಾರಣದಿಂದಲೂ, ಸಮಾಜವಾದಿ ಹೋರಾಟಗಳಿಂದಲೂ, ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಪರಿಚಿತರಾಗಿದ್ದರು ಕೃಷ್ಣಪ್ಪ ಅವರ ಜೊತೆ, ಸಮಾಜವಾದಿಗಳಾಗಿದ್ದ ಶಿವಮೊಗ್ಗದ ಮುನೀರ್,
ನಿಸಾರ್ ಅಹಮದ್, ದಿವಾಕರ ಹೆಗ್ಗಡೆ, ರೈತ ಸಂಘದ ಎನ್.ಡಿ. ಸುಂದರೇಶ್, ಬಿ. ರಾಜಣ್ಣ, ಎಂ. ಚಂದ್ರಶೇಖರಯ್ಯ, ಎನ್. ಗಿರಿಯಪ್ಪ, ಡುಮ್ಮ ರಾಜಣ್ಣ ಎಂಬೆಲ್ಲ ಇನ್ನೂ ಅನೇಕ ಸ್ನೇಹಿತರಿದ್ದರು. ಅರ‍್ಯಾರೂ ಒಂದು ಜಾತಿಯ, ಇಲ್ಲವೇ ಒಂದು ಕಸುಬಿನವರಾಗಿರಲಿಲ್ಲ. ಕೃಷ್ಣಪ್ಪನವರ ಸಮಾಜವಾದಿ ಚಿಂತನೆಯಲ್ಲಿ ತೀವ್ರ ಆಸಕ್ತಿಯಿಂದ ಪಾಲ್ಗೊಂಡ ಎಲ್ಲ ಜಾತಿಯಿಂದ ಬಂದ ಸ್ನೇಹಿತರಾಗಿದ್ದರು. ನಾನು ಬಿಆರ್‌ಪಿಯಿಂದ ಬಿಡುವಿನ ಸಮಯದಲ್ಲಿ ಭದ್ರಾವತಿಗೆ ಕೃಷ್ಣಪ್ಪನವರನ್ನು ನೋಡಲು ಹೋಗುತ್ತಿದ್ದೆ. ಆಗ ಭದ್ರಾವತಿಯ ಸಮಾಜವಾದಿ ಗೆಳೆಯರನೇಕರು ಪರಿಚಯವಾಗಿ, ನನಗೂ ಅವರುಗಳು ಕೂಡ ಆತ್ಮೀಯ ಗೆಳೆಯರಾದರು.

ಕೃಷ್ಣಪ್ಪನವರ ಶ್ರೀಮತಿ ಇಂದಿರಾ ಅವರು ಅದಾಗಲೇ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಯಾಗಿ ತಾಲ್ಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣಪ್ಪನವರ ಮನೆಯಲ್ಲಿ ಅವರ ತಂದೆ ಬಸಜ್ಜ, ತಾಯಿ ಚೌಡಮ್ಮನವರ ಜೊತೆ ತಂಗಿ ರೇಣುಕ ಮತ್ತು ಹಿರಿಯ ತಂಗಿಯ ಮಕ್ಕಳಾದ ಮೈತ್ರೇಯಿ, ಶಿವು ಮತ್ತು ತಮ್ಮ ತಿಪ್ಪೇಶಿ ಕೂಡ ಇದ್ದು ಅವರೆಲ್ಲ ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಕೃಷ್ಣಪ್ಪ ಅವರ ಮನೆಯೊಂದು ಮಿನಿ ಹಾಸ್ಟೆಲ್ ತರ ಇತ್ತು.
ಭದ್ರಾ ಕಾಲೇಜಿನಲ್ಲಿ ಶಿಸ್ತಿನ ಅಧ್ಯಾಪಕರಾಗಿದ್ದ ಕೃಷ್ಣಪ್ಪನವರು ಬಿಡುವಿನ ಸಮಯದಲ್ಲಿ ಸಮಾಜದಲ್ಲಿನ ಅಂಧ ಶ್ರದ್ಧೆ ಮತ್ತು ಮೌಢ್ಯಗಳ ಬಗ್ಗೆ, ಸಾಮಾಜಿಕ ಅಸಮಾನತೆಗಳ ಬಗ್ಗೆ ಮಿತ್ರರೊಡನೆ ಒಡಗೂಡಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಅವರ ಹೋರಾಟಗಳನ್ನು ಕ್ರಮವಾಗಿ ಜೋಡಿಸಿದರೆ ಅದೊಂದು ಪ್ರಮುಖ ಬೃಹತ್ ಗ್ರಂಥವಾಗಿ ರೂಪುಗೊಳ್ಳುತ್ತದೆ. (ಇಂದಿರಾ ಕೃಷ್ಣಪ್ಪ ಬರೆದ ಕೃತಿ ‘ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಕೃಷ್ಣಪ್ಪ’ ಪುಸ್ತಕದಲ್ಲಿ ಸಂಕ್ಷಿಪ್ತ ಹೋರಾಟದ ವಿವರಗಳು ಇವೆ.)

ನನಗೆ ಮೈಸೂರಿನ ಹೋರಾಟದ ಗೆಳೆಯರ ಜೊತೆಗೆ ಕೃಷ್ಣಪ್ಪನವರ ಒಡನಾಟ ಮತ್ತು ಹೋರಾಟದ ಸಂಪರ್ಕ ದೊರೆತದ್ದು ಒಂದು ಸುವರ್ಣ ಅವಕಾಶವೆಂದೇ ಭಾವಿಸಿದ್ದೇನೆ. ನಮ್ಮಿಬ್ಬರ ಸಂಬಂಧ, ನನ್ನ ಮದುವೆ, ಮಕ್ಕಳು, ನಂತರ ನನ್ನೂರು ಕೇರಿಗಳಿಗೆ ವಿಸ್ತಾರಗೊಂಡು ಎರಡು ಮನೆತನಗಳ ಕಥನದಲ್ಲಿ ಒಬ್ಬರಿಗೊಬ್ಬರು ಸೇರಿ ಹೋಗಿದ್ದೇವೆ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ಅಂತರಂಗ

ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು

Published

on

ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.

ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ.‌ ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.

ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.

ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.

ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.

ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ‌ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್‌ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ

Published

on

ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ

Published

on

ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending