Connect with us

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending