Connect with us

ಅಂತರಂಗ

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

Published

on

  • ರುದ್ರಪ್ಪ ಹನಗವಾಡಿ 

ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ ತೋರಿಸಬೇಕೆಂದು ಯೋಚಿಸಿದ್ದೆ. ಅಪ್ಪನು ಓಡಾಡಲು ಶಕ್ತಿ ಇದ್ದ ಕಾಲದಲ್ಲಿ ಎಲೆ ವ್ಯಾಪಾರಕ್ಕಾಗಿ ಧಾರವಾಡ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಹರಿಹರ, ದಾವಣಗೆರೆ ಸಂತೆಗಳಲ್ಲಿ ಓಡಾಡುತ್ತಿದ್ದನು. ಇತ್ತೀಚೆಗೆ ಅವರಿಗೆ ಇದ್ದ ಕೆಮ್ಮು ದಮ್ಮುಗಳಿಂದ ಹೊರ ಊರುಗಳಿಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಹೆಚ್ಚಾದ ವಯಸ್ಸಿನ ಕಾರಣದಿಂದಲೇ ಹರಿಹರದಲ್ಲಿ ಹೈಸ್ಕೂಲಿಗೆ ಸೇರಿದ್ದ ಅಣ್ಣ ತಿಪ್ಪಣ್ಣನನ್ನು ಶಾಲೆ ಬಿಡಿಸಿ ತೋಟದ ಕೆಲಸಕ್ಕೆ ಹಾಕಿಕೊಂಡಿದ್ದ. ಹಾಗಾಗಿ ಈಗೆಲ್ಲ ಸಂತೆಗಳಿಗೆ ಅಣ್ಣನನ್ನೇ ಕಳಿಸುತ್ತಿದ್ದ.

ನಾನು ಮೈಸೂರಿನಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಃ ನನ್ನ ಉಪನ್ಯಾಸಕ ಹುದ್ದೆಯನ್ನು ವಿಶ್ವವಿದ್ಯಾಲಯ ಮುಂದುವರೆಸಿತು. ಈ ನಡುವೆ ಪಾಲ್ ಇ ಸೈಮನ್ಸ್ ಅವರ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಹಾಗಾಗಿ ಅವರು ವಾಪಸ್ ಅಮೇರಿಕೆಗೆ ಹೊರಟುಹೋದರು. ಹೋಗುವ ಮುನ್ನ ತಮ್ಮಲ್ಲಿದ್ದ ರ‍್ಯಾಲೀ ಬೈಸಿಕಲ್ ಮತ್ತು ಆರಾಮವಾಗಿ ಕೂರಲು ತೆಗೆದುಕೊಂಡಿದ್ದ `ಇಸೀ ಚೇರ್’ನ್ನು ನನಗೆ ಇಟ್ಟುಕೊಳ್ಳಲು ಹೇಳಿದರು. ಉಳಿದಂತೆ ತನ್ನೆಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಳ್ಳಲು ನಾನು ಸಹಕರಿಸಿದೆ.

ಈ ಸಮಯಕ್ಕಾಗಲೇ ಮಹೇಶ ರಾಜ್ಯಶಾಸ್ತçದಲ್ಲಿ ಎಂ.ಎ. ಮುಗಿಸಿದ್ದ. ಅವನು ಮುಂದೆ ಕಾನೂನು ವ್ಯಾಸಂಗ ಮಾಡಲು ಮೈಸೂರಿನಲ್ಲಿಯೇ ಇರುವ ತೀರ್ಮಾನ ಮಾಡಿದ್ದ. ಹಾಗಾಗಿ ಹಾಲಿ ಇದ್ದ ಮನೆಯನ್ನು ನಾನು ಬಿಟ್ಟು
ಕೆ.ಜಿ. ಕೊಪ್ಪಲಲ್ಲಿ ನಾನು ಅವನೂ ಸೇರಿ ಬಾಡಿಗೆ ಮನೆ ಮಾಡಿದೆವು. ನಂತರದಲ್ಲಿ ನಮ್ಮ ಊರಿನಲ್ಲಿ ಪಿಯುಸಿ ಪಾಸು ಮಾಡಿ ಊರಲ್ಲಿದ್ದ ಬಾರಿಕರ ಮಾಂತೇಶಿ, ಐನೇರ ಮುಕ್ತಾಯಕ್ಕ ಇವರುಗಳು ಕೂಡ ಮೈಸೂರಿಗೆ ಬಂದು ಓದು ಮುಂದುವರೆಸಲು ನನ್ನ ಸಹಾಯ ಕೋರಿದ್ದರು. ನಾನು ಅವರನ್ನೂ ಸಹ ನನ್ನ ಜೊತೆಗೆ ಮೈಸೂರಿಗೆ ಕರೆತಂದು, ಮುಕ್ತಾಯಕ್ಕನಿಗೆ ಸರಸ್ವತಿಪುರಂನಲ್ಲಿ ಸಣ್ಣ ಬಾಡಿಗೆ ಮನೆ ಮಾಡಿಕೊಟ್ಟು ಮಾಂತೇಶಿಗೆ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಬಿ.ಎ. ಮುಂದುವರೆಸಲು ಅವಕಾಶ ಮಾಡಿಕೊಟ್ಟೆ. ಈ ನಡುವೆ ನಾನು ಊರಿಗೆ ಹೋದಾಗ ನನ್ನ ಅವ್ವನ ತಂಗಿ ಮಗ ಸಿರಿಗೇರಿ ರಾಮಣ್ಣ ಬಿ.ಎ. ಪದವಿ ಕೋರ್ಸು ಮುಗಿಸಿ ಕೆಲವು ವಿಷಯಗಳಲ್ಲಿ ಫೇಲಾಗಿ ತನ್ನ ಊರಿನಲ್ಲಿದ್ದ. ಅವನನ್ನು ಕೂಡ ಮೈಸೂರಿಗೆ ಕರೆದುಕೊಂಡು ಬಂದು ನಾವಿದ್ದ ಮನೆಯಲ್ಲಿಟ್ಟುಕೊಂಡು, ಬಾಕಿ ಉಳಿದ ವಿಷಯಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಂತರ ಬಿ.ಎ. ಪಾಸು ಮಾಡಿಕೊಂಡು ಮುಂದೆ ಕೆ.ಇ.ಬಿ.ಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ.

ಕೆ.ಜಿ. ಕೊಪ್ಪಲ ಮನೆಯಲ್ಲಿ ನಾನು ಮಹೇಶ ಅಧಿಕೃತ ಬಾಡಿಗೆದಾರರಾದರೂ ಅನಧಿಕೃತವಾಗಿ ವಿದ್ಯಾರ್ಥಿ ಬಳಗ ಮತ್ತು ನಿರುದ್ಯೋಗಿಗಳ ಬಳಗದ ಸದಸ್ಯರು ಯಾರಾದರೊಬ್ಬರು ಇರುತ್ತಿದ್ದರು. ನಮ್ಮಿಬ್ಬರಿಗೆ ಅಡಿಗೆ ಮಾಡಿಡಲು ಒಪ್ಪಿಕೊಂಡಿದ್ದ ಶಿವಪ್ಪ ಎನ್ನುವ ಅಡಿಗೆಯವನು ನಮ್ಮಲ್ಲಿ ದಿನವೂ ಏರುಪೇರಾಗುತ್ತಿದ್ದ ಸಂಖ್ಯೆ ಮತ್ತು ಹೊಲೆ ಮಾದಿಗರೆಗೆಲ್ಲ ನಾನು ಅಡಿಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದ. ಈ ನಡುವೆ ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೆ ಮಾಂತೇಶಿ ಮತ್ತು ರಾಮಣ್ಣನೇ ತೋಚಿದಂತೆ ಅಡುಗೆ ಮಾಡುತ್ತಿದ್ದರು. ಅದನ್ನೇ ಎಲ್ಲರೂ ಹಂಚಿ ಉಣ್ಣುತ್ತಿದ್ದೆವು. ಇದನ್ನೆಲ್ಲ ನೆನಪಿಸಿಕೊಳ್ಳುವ ಸಮಯಕ್ಕೆ ರಾಮಣ್ಣ ಮತ್ತು ಮಾಂತೇಶಿ ಇಬ್ಬರೂ ತೀರಿಕೊಂಡಿದ್ದಾರೆ. ಮುಕ್ತಾಯಕ್ಕ ಹೊಳೆ ದಾಟಿದ ಮನುಷ್ಯ ಸ್ವಭಾವದಂತೆ ಗುರ್ತಿಲ್ಲದವರಂತೆ ದಾವಣಗೆರೆಯಲ್ಲಿ ಅರಾಮ ಇದ್ದಾಳೆ.

ಇದೇ ಸಮಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಬಗ್ಗೆ ಅಲಹಾಬಾದ್ ಕೈಕೋರ್ಟ್ ನೀಡಿದ ತೀರ್ಪಿನಂತೆ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದುಗೊಳಿಸಿದ ಕಾರಣ ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಿಂದಾಗಿ ಧಾರವಾಡದಲ್ಲಿದ್ದು ಪತ್ರಿಕೆ ನಡೆಸುತ್ತಿದ್ದ ರಾಜಶೇಖರ ಕೋಟಿ ಕೂಡ ಮೈಸೂರಿಗೆ ಬಂದಿದ್ದರು ಹಾಗೂ ನಮ್ಮ ಈ ಬಾಡಿಗೆ ಮನೆಯ ಗೌರವಾನ್ವಿತ ಸದಸ್ಯರಾಗಿದ್ದರು.

ನನಗೆ ಬರುತ್ತಿದ್ದ 600ರೂಗಳ ಸಂಬಳ ಮತ್ತು ಮಹೇಶನ ಊರಿನಿಂದ ಬರುತ್ತಿದ್ದ ಅಕ್ಕಿ ಮತ್ತು ಸಾಂಬಾರು ಪದಾರ್ಥಗಳು ಸೇರಿಕೊಂಡು ಎಲ್ಲರಿಗೂ ಊಟ-ತಿಂಡಿಗಳು ಸಾಧಾರಣವಾಗಿ ನಡೆಯುತ್ತಿದ್ದವು. ಬಿ.ಎ. ಮತ್ತು ಎಂ.ಎ.ಗಳಲ್ಲಿ ಹಾಸ್ಟೆಲ್‌ನಲ್ಲಿನ ಸೊಗಸಾದ ಊಟ ನಂತರ ಪಾಲ್ ಸೈಮನ್ಸ್ ಜೊತೆ ಅಡಿಗೆ ಭಟ್ಟನ ಕೈರುಚಿ ನೋಡಿದ್ದ ನನಗೆ ಇಲ್ಲಿನ ಅನಿಶ್ಚಿತವಾದ ಊಟೋಪಚಾರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೇನು? ನಮ್ಮ ಮಿತ್ರ ಬಳಗದ ಬೆಚ್ಚಗಿನ ಸೆಳೆತಗಳು ಇದನ್ನೆಲ್ಲ ಮೀರಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕಾಲ ಹಾಕುತ್ತಿದ್ದೆವು.
ದಸರಾ ರಜೆ ಬಂದು ಊರಿಗೆ ಹೋದಾಗ ಅಪ್ಪನನ್ನು ಒಮ್ಮೆ ಮೈಸೂರಿಗೆ ಕರೆತಂದು ದಸರಾ ಹಬ್ಬ ಮತ್ತು ನಮ್ಮ ಕಾಲೇಜು ತೋರಿಸಬೇಕೆಂಬ ಆಸೆಯಾಯಿತು. ಈ ಬಾರಿ ದಸರೆಯಲ್ಲಿ ಊರಿಗೆ ಹೋದಾಗ ಸೈಕಲ್ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ನಮ್ಮ ಅಜ್ಜಿ (ಅಪ್ಪನ ತಾಯಿ) ಪಕ್ಕೀರಜ್ಜಿಯ ಹೆಸರಿಗಿದ್ದ ಹಳ್ಳದಾಚೆಗಿನ ಹೊಲದಲ್ಲಿನ ಬೆಳೆ ನೋಡಲು ಹೋಗಿದ್ದೆವು. ಅಣ್ಣ ಸರಿಯಾಗಿ ಕೆಲಸ ಮಾಡದೆ ಎಲ್ಲಾ ಕಡೆ ನಿರೀಕ್ಷಿತ ಉತ್ಪಾದನೆ ಇಲ್ಲವೆಂದು ನನ್ನ ಬಳಿ ಅಪ್ಪ ಅಲವತ್ತುಕೊಂಡಿದ್ದ. ಅವನೂ ಆಗ ತಾನೆ ಓದುವುದನ್ನು ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿದ್ದರಿಂದಲೋ ಏನೋ ವ್ಯವಸಾಯದಲ್ಲಾಗಲೀ, ತೋಟ ಮಾಡುವುದರಲ್ಲಾಗಲೀ, ಅಪ್ಪನ ನಿರೀಕ್ಷಿತ ಮಟ್ಟದ ಕೆಲಸಗಾರನಾಗಿರಲಿಲ್ಲ. ಅದಕ್ಕೆ ನಮ್ಮವ್ವನ ಕಟಿಪಿಟಿಯೂ ಕಾರಣವಾಗಿತ್ತು. ನಮ್ಮ ಸೈಕಲ್ ಸವಾರಿ ಮುಗಿದು ಮನೆಗೆ ಬಂದಾಗ ಮೈಸೂರು ದಸರಾ ನೋಡಲು ಕರೆದುಕೊಂಡು ಹೋಗುವ ತೀರ್ಮಾನ ಅಪ್ಪನಿಗೆ ಹೇಳಿ ಒಪ್ಪಿಸಿದೆ. ನಂತರ ರೈಲಿನಲ್ಲಿ ಮಾರನೇ ದಿನ ಅಪ್ಪನೊಡನೆ ಮೈಸೂರಿಗೆ ಪ್ರಯಾಣ ಬೆಳೆಸಿದೆ.

ಮೈಸೂರು ನಗರ ದಸರಾ ಹಬ್ಬದ ಸಂಭ್ರಮದಲ್ಲಿ ಗಿಜುಗುಡುತ್ತಿತ್ತು. ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದರಿಂದ ಚಾಮುಂಡೇಶ್ವರಿ ಬೆಟ್ಟ, ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಮ್ಮ ಕಾಲೇಜನ್ನು ಎಲ್ಲಾ ತೋರಿಸಿದೆ. ನಾನು ಈಗ್ಗೆ 2-3 ವರ್ಷಗಳ ಹಿಂದೆ ಇಲ್ಲಿಯೇ ಓದಿ ಈಗ ಅಲ್ಲಿಯೇ ಮೇಷ್ಟರಾಗಿ ಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅಪ್ಪ ಖುಷಿಗೊಂಡಿದ್ದ. ಅರಮನೆ, ಚಾಮುಂಡಿ ಬೆಟ್ಟ, ನಮ್ಮ ಕಾಲೇಜು, ಎಲ್ಲ ನೋಡಿದ ಅಪ್ಪ `ನಾನಿನ್ನು ಸತ್ತರೂ ಚಿಂತೆಯಿಲ್ಲ, ನೀನೊಂದು ದಡ ಸೇರಿದೆ’ ಎಂದು ಹೇಳಿ ಪುಳಕಗೊಂಡಿದ್ದ. ಮಾರನೇ ದಿನ ಸಂಜೆ ಕೃಷ್ಣರಾಜ ಸಾಗರ ಅಣೆಕಟ್ಟು ವೀಕ್ಷಣೆಗೆ ಹೋಗುವ ಮಾತಾಡಿದಾಗ ಅವನು ಆಸಕ್ತಿ ತೋರಲಿಲ್ಲ. ಹಾಗಾಗಿ ಅವನನ್ನು ರಾಮನಗರದಲ್ಲಿದ್ದ ಅಕ್ಕನ ಮನೆಗೆ ಬಸ್ಸಿನಲ್ಲಿ ಹತ್ತಿಸಿ ಕಳಿಸಿದೆ.

ದೇಶಾದಾದ್ಯಂತ ತುರ್ತು ಪರಿಸ್ಥಿತಿ, ದೇವರಾಜ ಅರಸರ 20 ಅಂಶದ ಕಾರ್ಯಕ್ರಮಗಳು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜೆಪಿ ಅವರು ಸೇರಿದಂತೆ ವಿರೋಧ ಪಕ್ಷಗಳ ಧುರೀಣರನ್ನು ಬಂಧಿಸಿ ಜೈಲಿನಲ್ಲಿಡುವಂತಾದ ವಿಷಯಗಳ ಚರ್ಚೆ ನಮ್ಮ ಕೆ.ಜಿ.ಕೊಪ್ಪಲ ಮನೆಯಲ್ಲಿ ನಡೆಯುತ್ತಿತ್ತು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳಿಂದ ಆಗಾಗ ನಡೆಯುತ್ತಿದ್ದ ಮುಷ್ಕರಗಳಾಗಲಿ, ವಿದ್ಯಾರ್ಥಿ ಸಂಘದ ಚುನಾವಣೆಗಳಾಗಲೀ ನಡೆಯದೆ, ಎಲ್ಲರೂ ಬೆದರಿದಂತೆ, ಸ್ವಯಂ ನಿಯಂತ್ರಿತರಾದವರಂತೆ ಕೆಲಸ ಮಾಡುವ ವಾತಾವರಣ, ಶೈಕ್ಷಣಿಕ ಮತ್ತು ಸರ್ಕಾರಿ ಕಛೇರಿಗಳಲ್ಲಿ ಮೂಡಿದಂತೆ ತೋರುತ್ತಿತ್ತು.

ಅಪ್ಪನನ್ನು ಊರಿಗೆ ಕಳಿಸಿ, ನಂತರದ ದಿನಗಳಲ್ಲಿ ಓದು, ತರಗತಿಗಳ ಪಾಠ ಮತ್ತು ಸಮಾಜವಾದಿ ಯುವಜನ ಸಭಾ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಕಡೆ ವಾಲಿಕೊಂಡಿದ್ದೆ. ಅಪ್ಪನಿಗೆ 80-85 ವರ್ಷಗಳಾಗಿರಬಹುದು. ಆಗಿದ್ದರೂ ಎಂದೂ ಮನೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ಪರಿಪಾಟ ಅಪ್ಪನಿಗಿರಲಿಲ್ಲ. ಬೆಳಿಗ್ಗೆ ಎದ್ದು ದನಕರುಗಳ ಕೊಟ್ಟಿಗೆಯ ಕಸವನ್ನು ತಿಪ್ಪೆಗೆ ಹಾಕಿ, ಚಾ ಕುಡಿದು ತೋಟಕ್ಕೆ ಹೋದರೆ ಮತ್ತೆ ಬರುವುದು ರಾತ್ರಿಗೆ, ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿ ಊಟ ಮಾಡಿದರೆ ಅವನ ದಿನಚರಿ ಮುಗಿಯುತ್ತಿತ್ತು. ಯಾರಾದರೂ ಊರಿನಿಂದಲೋ ಇಲ್ಲ ನಮ್ಮ ಚಿಕ್ಕಪ್ಪಂದಿರಾಗಿದ್ದ ನಾಗಪ್ಪ, ಮಹಾದೇವಪ್ಪ ಮತ್ತು ಭೀಮಪ್ಪ ಇವರುಗಳು ಏನಾದರೂ ಮಾತಾಡೋ ನೆಪದಲ್ಲಿ ಸಂಜೆ ಸೇರಿಕೊಂಡರೆ ಸಾರಾಯಿ ಸಮಾರಾಧನೆ ಆಗಿ ಊಟ ಮಾಡುತ್ತಿದ್ದರು. ಇಲ್ಲ ಊರಲ್ಲಿನ ಲಿಂಗಾಯತ ಸ್ನೇಹಿತರಲ್ಲಿ ವಾರಕ್ಕೋ 15ದಿನಗಳಿಗೊಮ್ಮೆಯೋ ಗೌಪ್ಯವಾಗಿ ನಮ್ಮಲ್ಲಿನ ಕೋಣೆಯೊಂದರಲ್ಲಿ ಕೂತು ಪಾರ್ಟಿ ಮಾಡುತ್ತಿದ್ದರು. ಅವ್ವ ಲೊಟಗುಡುತ್ತಾ ಜೋಳದ ಹಪ್ಪಳವನ್ನೋ ಇಲ್ಲ ಮನೆಯಲ್ಲಿದ್ದ ಮೊಟ್ಟೆಗಳನ್ನು ಹುರಿದು ಅವರ ಪಾರ್ಟಿಗೆ ನೆಂಚಿಗೆ ಮಾಡಿ ಕೊಡುತ್ತಿದ್ದಳು.

ಅಪ್ಪನ ಅಣ್ಣ ರಂಗಪ್ಪಜ್ಜ ಇದ್ದು, ಅವನು ಮದುವೆಯಾಗಿ, ಮಕ್ಕಳು ಮನಿ ಎಂತೆಲ್ಲಾ ಆದ ಮೇಲೆ ಖಾವಿ ಧರಿಸಿ ಸಾಧುವಾಗಿದ್ದ. ಅವನು ಊರ ಹೊರಗಿನ ಗೋಮಾಳದಲ್ಲಿ ನಮ್ಮಜ್ಜಿ ಫಕ್ಕೀರಜ್ಜಿಯನ್ನು ಸಮಾಧಿ ಮಾಡಿದ್ದು. ಅಲ್ಲಿಯೇ ಒಂದು ವಿಶಾಲ ಗುಡಿಸಲು ಕಟ್ಟಿಕೊಂಡು, ದಿನವೂ ಅಜ್ಜಿಯ ಸಮಾಧಿಯನ್ನು ಪೂಜೆ ಮಾಡಿಕೊಂಡು, ನಮ್ಮ ಊರಿನ ಲಿಂಗಾಯತರ ಮನೆಯಿಂದ ಕಂತೆ ಭಿಕ್ಷೆ ಎತ್ತಿ ಅದರಲ್ಲಿಯೇ ಊಟ ಮಾಡಿಕೊಂಡಿದ್ದ. ಕ್ರಮೇಣ ಎಲ್ಲ ಜನರೂ ಸಾಧು ರಂಗಜ್ಜನ ಮಠ ಎಂದು ಗುರುತಿಸುತ್ತಿದ್ದರು. ಊರಿನ ಲಿಂಗಾಯತರು ಮತ್ತು ಇತರೆ ಜಾತಿಯ ಪ್ರಮುಖರೆಲ್ಲ ಶ್ರಾವಣಮಾಸದಲ್ಲಿ ದೇವಿಪುರಾಣವನ್ನೋ, ಭಜನೆಯನ್ನೋ ಮಾಡುತ್ತಾ ಕೊನೆಯಲ್ಲಿ ಕರಿಯ ಕೊಳವೆಯಂತಹ ವುದರಲ್ಲಿ ಸಾಂಬ್ರಾಣಿಯಂತಹದನ್ನು ನಾದಿ ಚಿಲುಮೆಯಲ್ಲಿ ತುಂಬಿ ಒಂದು ತುದಿಯಲ್ಲಿ ಬಟ್ಟೆಯನ್ನು ಸುತ್ತಿ ಎಡಗೈಯಲ್ಲಿ ಒಂದು ವಿಶೇಷ ಸ್ಟೈಲ್‌ನಲ್ಲಿ ಹಿಡಿದು ಜೋರಾಗಿ ದಮ್ಮು ಎಳೆಯುತ್ತಿದ್ದರು. ಬಲಕ್ಕೊ ಎಡಕ್ಕೊ ಕೂತವನೊಬ್ಬನು ಕಡ್ಡಿ ಗೀರಿ ಬೆಂಕಿ ಹಚ್ಚಿದರೆ ಉಸಿರು ಬಿಗಿ ಹಿಡಿದು ಎಳದಾಗ ರೈಲ್ವೆ ಉಗಿ ಬಂಡಿ ಹೊಗೆ ಉಗುಳಿದಂತೆ, ಮೂಗು ಬಾಯಿಯಿಂದ ಪುಂಖಾನುಪುಂಖವಾಗಿ ಹೊಗೆ ಹೊರಬರುತ್ತಿತ್ತು. ಹಾಗೆ ಎಳೆದವನು ಮತ್ತೊಬ್ಬನಿಗೆ ಭಯ ಮಿಶ್ರಿತ ಭಕ್ತಿಯಿಂದ ನಮಸ್ಕರಿಸಿ `ಗುರುವೇ ತಿಪ್ಪೇಶಾ’ ಎಂಬ ಉದ್ಘಾರದೊಂದಿಗೆ ಕೊಡುತ್ತಿದ್ದನು. ಆತನೂ ಸೇದಿ ಭಗವಂತನ ಕೃಪೆ, ದೇವಿಯ ಮಹಾತ್ಮೆ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದರು. ಈ ಪಾರ್ಟಿಯಲ್ಲಿ ಅಪ್ಪನೂ ಆಗಾಗ ಅಲ್ಲಿ ಸೇರಿಕೊಳ್ಳುತ್ತಿದ್ದನು. ನಾವೆಲ್ಲ ಕೆಲವು ಹುಡುಗರು ನಮ್ಮ ಕೇರಿಯಿಂದ ಪ್ರಸಾದದ ಆಸೆಗಾಗಿ ಅಲ್ಲಿಗೆ ಹೋಗುತ್ತಿದ್ದೆವು. ಏಕೆಂದರೆ ಪ್ರತಿ ಭಜನೆ ಮುಗಿದಾಕ್ಷಣ ಪೂಜೆಗಾಗಿ ಒಡೆದ ತೆಂಗಿನ ಕಾಯಿಯ ಹಸಿ ಕೊಬ್ಬರಿಯ ಚೂರುಗಳು, ಜೊತೆಗೆ ಕತ್ತರಿಸಿದ ಬಾಳೆಯ ಹಣ್ಣು ಮಂಡಕ್ಕಿ ಕಾರ ಎಲ್ಲ ಸೇರಿಸಿ ಎಲ್ಲರಿಗೂ ಹಂಚುತ್ತಿದ್ದರು.

ಮಠದ ರಂಗಪ್ಪಜ್ಜ ನಮಗೆ ಸ್ವಂತ ಅಪ್ಪನ ಅಣ್ಣ, ದೊಡ್ಡಪ್ಪನಾಗಿದ್ದವರು ಎನ್ನುವ ವಿಷಯ ನಮಗಾರಿಗೂ ನಮ್ಮ ಬಾಲ್ಯ ಕಳೆಯುವವರೆಗೂ ಗೊತ್ತೇ ಇರಲಿಲ್ಲ. ನಾನು ಮತ್ತೆ ನಮ್ಮ ಕೇರಿಯ ಕಡೆಮನೆ ತಿಪ್ಪಣ್ಣ, ಕರಿಬಸಪ್ಪ, ಕುಬೇರ ಜೋಗಪ್ಪ ತುಂಗಣ್ಣ ಸಂಜೆ 4-5 ಗಂಟೆಯ ಸಮಯಕ್ಕೆ ಮಠದ ಕಡೆಗೆ ಹೋಗಿ ಅಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ಮಠದಲ್ಲಿನ ಗಿಡಬಳ್ಳಿಗಳಿಗೆ ಹೊಯ್ಯುತ್ತಿದ್ದವು. ನೀರು ಸೇದಿ ಹಾಕಿದ ನಾಟಕ ಮುಗಿದ ಮೇಲೆ ಎಲ್ಲರಿಗೂ ಅಲ್ಲಿದ್ದ ಮಣ್ಣಿನ ಮುಚ್ಚಳಗಳಲ್ಲಿ ಊರಲ್ಲಿನ ಕಂತೆ ಭಿಕ್ಷೆಯಲ್ಲಿ ತಂದ ರೊಟ್ಟಿ ಮತ್ತು ಎಲ್ಲರ ಮನೆಯ ಸಾರನ್ನು ಒಂದೇ ಮಡಕೆಯಲ್ಲಿ ಕುದಿಸಿಟ್ಟದ್ದನ್ನು ಬಡಿಸುತ್ತಿದ್ದರು. ಅದನ್ನೆಲ್ಲ ನಾವು ತುಂಬಾ ಖುಷಿಯಿಂದ ಉಣ್ಣುತ್ತಿದ್ದೆವು. ನಂತರ ಎಲ್ಲ ಮಣ್ಣಿನ ಮುಚ್ಚಳದಂತಿದ್ದ ತಟ್ಟೆಯನ್ನು ತೊಳೆದಿಟ್ಟು ಅವರ ಕಾಲಿಗೆ ನಮಸ್ಕರಿಸಿ ಮನೆಗೆ ಹೋಗುತ್ತಿದ್ದೆವು. ನಮ್ಮಲ್ಲೆಲ್ಲ ದೊಡ್ಡವನಾಗಿದ್ದ ಕಡೆಮನೆ ತಿಪ್ಪಣ್ಣನೇ ನಮ್ಮ ಎಲ್ಲರನ್ನೂ ಕೂಡಿಸಿ ಕರೆದುಕೊಂಡು ಹೋಗುತ್ತಿದ್ದ. ಎಲ್ಲರಿಗೂ ಬೇರೆ ಬೇರೆ ನೀಡಿದ ಮೇಲೆ ಮಠದೊಳಗೆ ಅಜ್ಜ ಹೋಗುತ್ತಿದ್ದರು. ನಮಗೆ ನೀಡಿದ ರೊಟ್ಟಿಯಲ್ಲಿ ಕಡೆಮನೆ ತಿಪ್ಪಣ್ಣನಿಗೆ ಹೆಚ್ಚುವರಿಯಾಗಿ ತನಗೆ ಕೊಡುವುದರ ಬಗ್ಗೆ ಬಂದವರಿಗೆಲ್ಲ ಮೊದಲೇ ಕೊಡುವಂತೆ ತಾಕೀತು ಮಾಡಿರುತ್ತಿದ್ದ. ಕೆಲವು ಸಮಯ ತಟ್ಟೆಗಳು ಕಡಿಮೆ ಇದ್ದುದರಿಂದ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಮೂವರು ಕೂತು ಉಣ್ಣುವುದಾದರೆ, ನಮಗೆ ಸಾಕೆಂದು ಮೊದಲೇ ಎದ್ದು ಅವನಿಗೆ ಹೆಚ್ಚಿನ ರೊಟ್ಟಿ ಉಣ್ಣಲು ಅವಕಾಶ ಮಾಡಿಕೊಡಬೇಕಾಗಿತ್ತು. ಹಾಗೆ ಮಾಡದಿದ್ದರೆ ನಾಳೆ ಮತ್ತೆ ನಿಮ್ಮನ್ನು ಇಲ್ಲಿಗೆ ಕರೆತರುವುದಿಲ್ಲ ಎನ್ನೋ ಧಮಕಿ ಹಾಕುತ್ತಿದ್ದ. ಅವನು ನಮ್ಮೆಲ್ಲರಿಗಿಂತಲೂ 2-3 ವರ್ಷಕ್ಕೂ ಹಿರಿಯವನು, ನಮ್ಮ ಚಿಕ್ಕಪ್ಪ ಭೀಮಪ್ಪನ ಮಗನಾಗಿದ್ದ ಅವರಿಗೆ ಮನೆಯಲ್ಲಿ ಆರೇಳು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಾರಣ ಇವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ವಿಶೇಷವಾಗಿ ಬುಗುರಿ, ಚಿನ್ನಿ ದಾಂಡು, ಕೀಳಾಪಟ್ಟಿ ಆಟಗಳಲ್ಲಿ ನಮಗೆ ಗುರುವಾಗಿದ್ದವನು. ಆದರೆ ಊರ ಎಲ್ಲರ ದೃಷ್ಟಿಯಲ್ಲಿ ದಂಡಪಿಂಡ ಎಂಬಂತೆ ಅವನನ್ನು ಅವರ ಮನೆಯವರೂ ಸೇರಿದಂತೆ ಊರಿನಲ್ಲಿ ಜನ ಪರಿಗಣಿಸಿದ್ದರು. ಆದರೀಗ ಒಂದು ದಂಡನ್ನೇ ಕಟ್ಟುವಷ್ಟು ಮಕ್ಕಳನ್ನು, ಮೊಮ್ಮಕ್ಕಳನ್ನು ಪಡೆದು ದುಡಿಮೆ ಮಾಡಿಕೊಂಡು ಹಾಯಾಗಿದ್ದಾನೆ. ಊರಲ್ಲಿರುವಾಗಲೆಲ್ಲ ನನ್ನನ್ನು ಸೆಳೆದುಕೊಂಡಿದ್ದ ಅವನು ನಂತರದ ದಿನಗಳಲ್ಲಿ ಸಣ್ಣ ವ್ಯತ್ಯಾಸದಿಂದ ದೂರವಾಗಿದ್ದಾನೆ. ಈಗ ಮತ್ತೆ ಕರೆದು ಮಾತಾಡಿಸಬೇಕೆಂದು ನೆನಪಾದಾಗ ಅನ್ನಿಸುತ್ತಿದೆ.

ಅಜ್ಜನ ಗುಡಿಸಲು ಅರ್ಥಾತ್ ಮಠ ಸುಮಾರು ಅರ್ಧ ಎಕರೆಯಲ್ಲಿ ಸುತ್ತ ಬೇಲಿಯ ಮಧ್ಯದಲ್ಲಿನ ಅಜ್ಜಿ ಸಮಾದಿಗೆ ಮತ್ತು ಅಜ್ಜಯ್ಯ ಇರುವಿಕೆಗೆ ತೆಂಗಿನ ಗರಿ ಮತ್ತು ಭತ್ತದ ಹುಲ್ಲಿನ ಮುಚ್ಚಳಿಕೆಯಿಂದ ಗಾಳಿ ಬಿಸಿಲು ಮಳೆಗಳಿಂದ ರಕ್ಷಣೆ ಪಡೆದಿತ್ತು. ಆಗಾಗ ಅಜ್ಜಯ್ಯ ಮಠ ಕಟ್ಟುತ್ತೇನೆಂದು ಹಣ ಸಂಗ್ರಹದಲ್ಲಿ ತೊಡಗಿದ್ದರೆಂದು, ಅಪ್ಪ ಮನೆಯಲ್ಲಿ ಮಾತಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೊಡ್ಡಪ್ಪ ಮನೆಗೆ ಬಂದರೆ ಅವರಿಗೆ ವಿಶೇಷವಾಗಿ ಪಾದಪೂಜೆ ಮಾಡಿ ಆ ನೀರನ್ನೆಲ್ಲ ಮನೆಯ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸುತ್ತಿದ್ದರು. ಹಾಗೆ ನಮ್ಮಲ್ಲಿನ ಇತರೆ ನಾಲ್ಕು ಚಲವಾದಿ ಮನೆತನದವರೂ ಕರೆದು ಪಾದಪೂಜೆ ಮಾಡುತ್ತಿದ್ದರು. ನಮ್ಮೂರ ಹತ್ತಿರದ ಕಡ್ಲಬಾಳ ಊರಿನ ತೇರಿಗೆ ಮತ್ತು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಹೋಗಿ ವಾರಗಟ್ಟಲೇ ಅಲ್ಲಿದ್ದು, ಅನೇಕ ಇತರೆ ಸಾಧು ಸಂತರ ಸಂಗಡದಲ್ಲಿ ಭಜನೆ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದುದರ ಬಗ್ಗೆ ಅವರ ಜೊತೆ ಹೋಗಿ ಬಂದವರು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ಈ ರೀತಿಯಲ್ಲಿ ಇದ್ದ ದೊಡ್ಡಪ್ಪ ನಾನು ಸಾಗರದ ಹೈಸ್ಕೂಲಿನಲ್ಲಿ ಓದುವ ಸಮಯದಲ್ಲಿ ಒಂದೆರಡು ದಿನಗಳ ಅಸ್ವಸ್ಥತೆಯಿಂದ ಹರಿಹರದ ಹತ್ತಿರವಿರುವ ಗುತ್ತೂರಿನ ಗುರು ಬಸಜ್ಜನ ಮಠದಲ್ಲಿ ತೀರಿಹೋಗಿದ್ದರು. ಅಲ್ಲಿಯ ಮಠದಲ್ಲಿಯೇ ಅವರ ಸಮಾಧಿ ಮಾಡಿದ್ದಾರೆ. ಅದೇ ಮಠದಲ್ಲಿ ನನ್ನ ಗುರುಗಳಾಗಿದ್ದ
ಪ್ರೊ. ಬಿ. ಕೃಷ್ಣಪ್ಪನವರು ಮತ್ತವರ ತಂಗಿ ಹಾಲಮ್ಮ ತಮ್ಮ ಬಾಲ್ಯದ ದಿನಗಳಲ್ಲಿ ಗಿಡಗಳಿಗೆ ನೀರು ಹಾಕುವುದು, ಹೂ ಕೀಳುವ ಸೇವೆ ಮಾಡುತ್ತಿದ್ದರು ಎಂಬುದನ್ನು ಕೃಷ್ಣಪ್ಪನವರ ತಂಗಿ ಹಾಲಜ್ಜಿ ಆಗಾಗ ನಮ್ಮೂರಿಗೆ ಬಂದಾಗ ಜ್ಞಾಪಿಸಿಕೊಳ್ಳುತ್ತಿದ್ದರು. ಅಪ್ಪನ ಅಣ್ಣ ಈ ರೀತಿಯ ಜೀವನ ಸಾಗಿಸುತ್ತಾ ಕಾಲವಾದರೆ ಅಪ್ಪ ಒಂದಲ್ಲವೆಂದರೂ ಎರಡು ಮದುವೆಯಾಗಿ, ಮ್ಯಾಳ ಮಾಡುತ್ತಾ ಅವರೆಲ್ಲರಿಗೂ ನಾಯಕನಾಗಿ, ಮಾಡಿದ ಹೊಲಮನಿ ಕೆಲಸಗಳಲ್ಲಿ ಸೈ ಎನಿಸಿಕೊಂಡು, ನಾನು ಎಂ.ಎ. ಮಾಡಿ ಅಧ್ಯಾಪಕನಾಗಿರುವವರೆಗೆ ಬದುಕಿದ್ದೇ ಒಂದು ಪವಾಡ. ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಸಣ್ಣಪುಟ್ಟ ಖಾಯಿಲೆಗಳಿಗೆ ಜಗ್ಗುತ್ತಿರಲಿಲ್ಲ ಯವ್ವನದ ಕಾಲಘಟ್ಟದಲ್ಲಿ ಎಲೆ ಅಡಿಕೆ ತಂಬಾಕು ಬೀಡಿ ಸೇದುತ್ತಿದ್ದ ಅಪ್ಪ ನಂತರದ ದಿನಗಳಲ್ಲಿ ಕೆಮ್ಮು ದಮ್ಮುಗಳ ಕಾಟದಿಂದ ಅವನ್ನೆಲ್ಲ ಬಿಟ್ಟು ಬಿಟ್ಟಿದ್ದನು. ನಾನು ಕೆಲಸಕ್ಕೆ ಸೇರಿ ಊರಿಗೆ ಹೋದಾಗ ಅವ್ವನಿಗೆ, ಓಬಜ್ಜನಿಗೆ, ಅಪ್ಪನಿಗೆ ವಿಶೇಷವಾಗಿ ಸಣ್ಣ ಮೊತ್ತದ ಹಣ ಕೊಡಲು ಹೋದಾಗಲೆಲ್ಲ `ನನಗ್ಯಾಕೆ ಕೊಡುತ್ತೀ, ನಿಮ್ಮವ್ವನಿಗೇ ಕೊಡು’ ಎಂದು ಹೇಳಿ ಸುಮ್ಮನಾಗುತ್ತಿದ್ದ. ಇಂತಹ ಅಪ್ಪನನ್ನು ನಾನು ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ ಒಂದು ವರ್ಷ ತುಂಬಿದ ದಿನ (4.12.1975)ರಲ್ಲಿ ನಾನು ಎರಡನೇ ಬಿ.ಎ. ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುವಾಗ ತಂತಿ ಸಂದೇಶದಲ್ಲಿ ಅಪ್ಪ ತೀರಿದ ಸುದ್ದಿ ಹೊತ್ತು ತಂದಿತ್ತು. ಅಂದಿಗೆ ಸಂಬಳ ಬಂದು 4 ದಿನಗಳಾಗಿದ್ದರೂ ಎಲ್ಲಾ ಬಟವಾಡೆ ಮಾಡಿ ನನ್ನಲ್ಲಿ 50ರೂಗಳು ಮಾತ್ರ ಜೇಬಿನಲ್ಲಿದ್ದವು. ನೇರ ರಮಾವಿಲಾಸ್ ರಸ್ತೆಯಲ್ಲಿದ್ದ ಮಯೂರ ಪ್ರಿಂರ‍್ಸ್ನಲ್ಲಿಗೆ ಹೋಗಿ ಪಿ. ಮಲ್ಲೇಶ್ ಅವರಿಂದ 100 ರೂಗಳ ಸಾಲ ಪಡೆದು ನಾನು ಮತ್ತು ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ನಮ್ಮೂರಿನ ಹುಡುಗ ಮಾಂತೇಶಿಯನ್ನು ಕರೆದುಕೊಂಡು ರಾತ್ರಿಯ ಬಸ್ ಹತ್ತಿ ಬೆಳಗಿನ ಜಾವಕ್ಕೆ ಊರಿಗೆ ಬಂದು ಸೇರಿದೆ. ಅಪ್ಪನ ಸೋತ ಮುಖನೋಡಿ ನಾನು ತೀವ್ರ ಮೌನಕ್ಕೆ ಜಾರಿದೆ. ಎಂದೂ ಏನಲೇ ಎಂದು ಗದರಿಸದೆ ತನ್ನೆಲ್ಲ ಶಕ್ತಿ ಮೀರಿದ ದುಡಿಮೆಯಿಂದ, ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ, ಅವನ ಜೀವನದ ಹೋರಾಟಕ್ಕೆ ಅಂತ್ಯ ಹಾಡಿದ್ದ. ನಮ್ಮೆಲ್ಲರನ್ನು ತಿದ್ದಿ ಬೆಳೆಸಿ ಬದುಕಲು ನಮಗೆ ಅನುವು ಮಾಡಿ ಇಹಲೋಕದ ವ್ಯಾಪಾರ ಮುಗಿಸಿದ್ದ ಅಪ್ಪನ ನೆನಪು ನನ್ನ ಮನಸ್ಸಿನಾಳದಲ್ಲಿ ದಿನವೂ ಸ್ಫೂರ್ತಿಯಾಗಿ, ಸಾಮಾನ್ಯ ನ್ಯಾಯದ ದೊಂದಿಯಾಗಿ ಅನುರಣಿಸುತ್ತಿರುತ್ತಾನೆ.

ನಾನು ಕೆ.ಜಿ. ಕೊಪ್ಪಲಿನ ಮನೆಯಿಂದ ಮಹಾರಾಜ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬಿಡುವಿನ ವೇಳೆಯಲ್ಲಿ ನಾನು ಮಹೇಶ ಇತರೆ ಸ್ನೇಹಿತರು ಜೆಪಿ ಚಳುವಳಿ ನವನಿರ್ಮಾಣ ಕ್ರಾಂತಿ, ಜಾತಿ ವಿನಾಶ ಸಮ್ಮೇಳನ, ಬೂಸಾ ಚಳುವಳಿಗಳಲ್ಲಿ ಭಾಗವಹಿಸಿದ್ದೆವು. ಈ ಎಲ್ಲ ಸಂಘಟನೆಗಳ ಮೂಲ ಹೋರಾಟಗಾರರು ಮೈಸೂರಿನಲ್ಲಿದ್ದ ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್, ಕೆ. ರಾಮದಾಸ್, ಮಾದೇವ, ಭಕ್ತ, ರಾಜಶೇಖರ ಕೋಟಿ, ರಾಮದೇವ ರಾಕೆ, ನಂಜುಂಡೇ ಗೌಡ, ಗೋವಿಂದಯ್ಯ, ಶಂಕರಲಿಂಗಪ್ಪ, ಗೊಟ್ಟಿಗೆರೆ ಶಿವರಾಜು, ಇಂದೂಧರ ಹೊನ್ನಾಪುರ, ದೇವನೂರ ಶಿವಮಲ್ಲು, ವಿಶ್ವವಿದ್ಯಾಲಯದ ಗಂಗೋತ್ರಿಯಿಂದ ಪ್ರೊ. ರಾಮಲಿಂಗಂ, ಕೆ.ಎಂ. ಜಯರಾಮಯ್ಯ, ಹೊರೆಯಾಲ ದೊರೆಸ್ವಾಮಿ, ಚಂದ್ರಶೇಖರ ತಾಳ್ಯ, ಎಲ್ಲರೂ ಇದೇ ಪೂರ್ಣಾವಧಿ ಕೆಲಸವೆಂಬಂತೆ ತೊಡಗಿಸಿಕೊಂಡಿದ್ದರು. ಹಾಗೆಯೇ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ `ಮ್ಯಾನ್ ಕೈಂಡ್’, `ಬಂಡಾಯ’, `ಶೋಷಿತ’, `ನರ’, `ಪಂಚಮ’ ಎಂಬ ಅಕಾಲಿಕ ಪತ್ರಿಕೆಗಳನ್ನು ಅಸಾಧ್ಯ ಹಣಕಾಸಿನ ತೊಂದರೆಗಳ ನಡುವೆಯೂ ಹೊರ ತರುತ್ತಿದ್ದರು.

ಆ ದಿನಗಳಲ್ಲಿ ಇಂತಹದೇ ಪತ್ರಿಕೆಯಲ್ಲಿ ನಮ್ಮೂರಿನಲ್ಲಿ ನಡೆದ ಹಿಂದುಳಿದ ಜಾತಿಯ ಹುಡುಗಿಯೊಬ್ಬಳನ್ನು ಲಿಂಗಾಯತರ ಹುಡುಗನೊಬ್ಬ ಕೆಣಕಿದ ಬಗ್ಗೆ ನಾನು ಊರಿಗೆ ಹೋದಾಗ ತಿಳಿಯಿತು. ಈ ಕೃತ್ಯ ಎಸಗಿದವನನ್ನು ಯಾರೂ ವಿಚಾರಿಸುವಂತಿರಲಿಲ್ಲ. ಹುಡುಗಿಯ ಕಡೆಯವರು ಯಾರೂ ಅದನ್ನು ಪ್ರಶ್ನಿಸಲೂ ಇಲ್ಲ. ಇದೆಲ್ಲ ಗೊತ್ತಾದ ನಾನು ನರ ಬಂಡಾಯದ ಪತ್ರಿಕೆಗೆ ಬರೆದು ಪ್ರಕಟಿಸಿದ್ದೆ. ಆ ಪ್ರತಿಗಳನ್ನು ಮಾಂತೇಶಿ ಊರಿಗೆ ತೆಗೆದುಕೊಂಡು ಹೋಗಿ ಊರಲ್ಲೆಲ್ಲಾ ಹಂಚಿದನು. ವಿಷಯ ತಿಳಿದ ಊರಿನ ಪ್ರಮುಖರು, ಈ ರುದ್ರಪ್ಪ ಊರ ಮಾನ ಹರಾಜು ಹಾಕಿದ ಎಂದೆಲ್ಲ ಕೂಗಾಡಿದ್ದರು.

`ಅವನು ಊರಿಗೆ ಬರಲಿ ವಿಚಾರಿಸುತ್ತೇವೆ’ ಎಂದೆಲ್ಲಾ ಕೂಗಾಡಿದರು. ನಾನು ತಿಂಗಳೊಪ್ಪತ್ತಿನಲ್ಲಿ ಊರಿಗೆ ಹೋದಾಗ ಯಾರೂ ಆ ಬಗ್ಗೆ ಮಾತಾಡಲಿಲ್ಲ. ಮುಖ್ಯ ಕಾರಣ ಬರೆದುದೆಲ್ಲ ನಿಜವಾದ ಘಟನೆಯಾಗಿತ್ತು. ಮತ್ತೆ ಹೆಚ್ಚು ಕೆದಕಿದರೆ ತಮಗೆ ಇದು ಅವಮಾನದ ಘಟನೆಯ ಮರು ಪ್ರಸ್ತಾಪವಾಗಿ ವಿಪರೀತಕ್ಕೆ ಹೋಗಬಹುದೆಂದು ಸುಮ್ಮನಾಗಿದ್ದರು. ಹೀಗೆ ನಾನು ಮೈಸೂರಲ್ಲಿದ್ದಾಗ ಊರ ಘಟನೆಗಳಿಗೆ ಸ್ಪಂದಿಸುತ್ತಾ ಇರುವುದು ಮೈಸೂರಿನಲ್ಲಿದ್ದ ಪ್ರಗತಿಪರ ಸಂಘಟನೆಗಳ ಮತ್ತು ವಿಚಾರವಂತರ ಒಡನಾಟವೇ ಅದಕ್ಕೆ ಕಾರಣವಾಗಿತ್ತು ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending