ಬಹಿರಂಗ
ದುಸ್ತರ ಬದುಕು ದುರ್ಭರ ಹಾದಿಯಲ್ಲಿ ಹೊಸ ಸಂವತ್ಸರದ ಸಂಭ್ರಮ
ಶ್ರಮಜೀವಿಗಳ ಬದುಕನ್ನು ಕರಾಳ ಕೂಪಕ್ಕೆ ತಳ್ಳುತ್ತಿರುವ ದುಷ್ಟ ವ್ಯವಸ್ಥೆಯಲ್ಲಿ ಎಂತಹ ಸಂಭ್ರಮ ?
- ನಾ ದಿವಾಕರ
ಭಾರತದ ಪರಂಪರೆಯಲ್ಲಿ ನವ ಸಂವತ್ಸರದ ಆರಂಭವಾಗುವುದು ಯುಗಾದಿಯೊಂದಿಗೆ. ಇಂದು ದೇಶಾದ್ಯಂತ ಹಿಂದೂಗಳು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾ, ನವ ಸಂವತ್ಸರವನ್ನು ಸ್ವಾಗತಿಸುತ್ತಾರೆ. ಹಬ್ಬ ಎಂಬ ಪರಿಕಲ್ಪನೆಯೇ ಜನಸಂಸ್ಕೃತಿಯ ಒಡಲಿನಲ್ಲಿ ಮೂಡಿರುವ ಒಂದು ವಿದ್ಯಮಾನ.
ಸಾರ್ವತ್ರಿಕವಾಗಿ ಒಂದು ಜನ ಸಮುದಾಯ ತನ್ನೊಳಗಿನ ಎಲ್ಲ ವೈರುಧ್ಯಗಳನ್ನೂ ಮರೆತು, ತನ್ನ ಆಂತರ್ಯದೊಳಗೆ ಅಡಗಿರಬಹುದಾದ ಎಲ್ಲ ಕಲ್ಮಶಗಳನ್ನೂ ತೊಡೆದುಹಾಕಿ, ಸಮಸ್ತ ಮಾನವ ಕೋಟಿ ಒಂದೇ ಎಂಬ ಭಾವನಾತ್ಮಕ ಸಂದೇಶದೊಡನೆ ಸಾರ್ವಜನಿಕವಾಗಿ ಆಚರಿಸುವುದು ಯಾವುದೇ ಹಬ್ಬದ ವಿಶೇಷ. ವೈದಿಕಶಾಹಿಯ ಸ್ವಾಧೀನಕ್ಕೊಳಪಟ್ಟು ಭಾರತದ ಅನೇಕಾನೇಕ ಹಬ್ಬದ ಆಚರಣೆಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲೇ ಭಾರತ ಮತ್ತೊಂದು ಯುಗಾದಿಯನ್ನು ಆಚರಿಸುತ್ತಿದೆ.
ಹಬ್ಬದ ಪರಿಕಲ್ಪನೆಯೇ ಸಾಪೇಕ್ಷವಾದುದು. ಹಬ್ಬದ ಆಚರಣೆಯೂ ಸಹ ಸಾಮಾಜಿಕ ಶ್ರೇಣೀಕರಣಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ತನ್ನ ನಿತ್ಯ ಬದುಕಿನ ಬವಣೆಗಳನ್ನೇ ನೀಗಿಸಲು ಸಾಧ್ಯವಾಗದ ಒಂದು ದುಡಿಮೆಯ ಜೀವಕ್ಕೆ ಹಬ್ಬ ಎನ್ನುವುದು ವಿಶೇಷ ಎನಿಸುವುದಿಲ್ಲ.
ಹಸಿರು ತೋರಣ, ಸುಂದರ ರಂಗೋಲಿ, ಬಾಳೆಲೆಯ ಊಟ ಈ ಸಂಭ್ರಮಗಳು ಸಮಾಜದ ಮೇಲ್ ಸ್ತರದ ಸಮುದಾಯಗಳಿಗೆ ಲಭ್ಯವಾಗುವ ಸವಲತ್ತುಗಳಷ್ಟೇ. ಆದರೂ ಕಡುಬಡತನ ಎದುರಿಸುವ ಕುಟುಂಬಗಳೂ ಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತವೆ. ಹೊಸ ವರ್ಷವನ್ನು ಸ್ವಾಗತಿಸುವ ಯುಗಾದಿ ಈ ಬಡಜನತೆಯ ಪಾಲಿಗೆ ಹೊಸತನ್ನೇನೂ ತರುವುದಿಲ್ಲ. ಹಾಗೆಯೇ ಗತಿಸಿದ ವರುಷದ ಸಂಕಷ್ಟಗಳ ನಿವಾರಣೆಯೂ ಆಗುವುದಿಲ್ಲ.
ತಮ್ಮ ಜೀವನೋಪಾಯದ ಮಾರ್ಗಗಳು ಕಠಿಣವಾಗುತ್ತಿರುವುದನ್ನು ಮೌನಸಮ್ಮತಿಯೊಂದಿಗೆ ಎದುರಿಸುತ್ತಲೇ, ಶ್ರಮ ಶೋಷಣೆಯ ಮೂಲ, ಸ್ವರೂಪ ಮತ್ತು ಕಾರಣಗಳನ್ನು ಅರಿಯದ ಶ್ರಮಜೀವಿಗಳು ಶೊಷಕ ಸಮಾಜದ ಪರಿಚಾರಕರೊಡನೆ ಮುಖಾಮುಖಿಯಾಗುತ್ತಾ ಬದುಕು ಸವೆಸುತ್ತಾರೆ. “ ಸಮಸ್ತ ಜನಕೋಟಿಗೂ ಯುಗಾದಿಯ ಶುಭಾಶಯಗಳು ” ಎಂದು ಸಾರ್ವಜನಿಕವಾಗಿ ಕೋರುವ ಪ್ರತಿಯೊಂದು ಮನಸಿಗೂ ಹೊಳೆಯಬೇಕಾದ ಒಂದು ವಾಸ್ತವ ಎಂದರೆ, ಈ ಸಮಸ್ತ ಜನಕೋಟಿಯಲ್ಲಿ ಬಹುಪಾಲು ಜನರಿಗೆ ಬದುಕು ಹಸನಾಗಿರುವುದಿಲ್ಲ. ಅವರ ಭೂತ ಮತ್ತು ವರ್ತಮಾನದಂತೆಯೇ ಭವಿಷ್ಯವೂ ಅದೇ ಶೋಷಕ ಸಮಾಜದ ಕ್ರೂರ ವ್ಯವಸ್ಥೆಗೆ ಬಲಿಯಾಗಿ ಕರಾಳ ದಿನಗಳನ್ನು ಎದುರಿಸುತ್ತಿರುತ್ತದೆ.
ಹೊಸ ವರ್ಷದ ಆಗಮನವನ್ನು ಸ್ವಾಗತಿಸುವ ಮುನ್ನ, ನಮ್ಮ ಸುತ್ತಲಿನ ಮಾನವ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಒಮ್ಮೆ ಗಮನಿಸಿದಾಗ, ನಮಗೆ ಎಂತಹ ಹೊಸ ವರ್ಷದ ಅವಶ್ಯಕತೆ ಇದೆ ಎನ್ನುವುದೂ ಮನದಟ್ಟಾಗುತ್ತದೆ. ಜಾತಿ, ಮತ, ಧರ್ಮ,ಪಂಥ, ಲಿಂಗ ಹೀಗೆ ಅಸ್ಮಿತೆಗಳ ಚೌಕಟ್ಟುಗಳಲ್ಲಿ ಜನಸಾಮಾನ್ಯರನ್ನು ಬಂಧಿಸಿಟ್ಟು, ತನ್ನ ಬೆವರಿನ ದುಡಿಮೆಯಿಂದಲೇ ಅನ್ನ ಉಣ್ಣುವ ಶ್ರಮಜೀವಿಯ ಊಟದ ತಟ್ಟೆಯಲ್ಲೂ ತಾರತಮ್ಯದ ವಿಷಬೀಜಗಳನ್ನು ಉಣಬಡಿಸುವ ಒಂದು ವಿಕೃತ ಸಾಂಸ್ಕೃತಿಕ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಪ್ರೀತಿ, ಆದರ, ವಾತ್ಸಲ್ಯ, ಸೋದರತ್ವ ಮತ್ತು ಮಾನವ ಪ್ರೀತಿಯನ್ನು ಪೋಷಿಸಬೇಕಾದ ಸಾಂಸ್ಥಿಕ ವೇದಿಕೆಗಳು, ಜನಸಾಮಾನ್ಯರ ನಡುವೆ ದ್ವೇಷ, ಮತ್ಸರ, ಅಸೂಯೆ ಮತ್ತು ತಾರತಮ್ಯದ ವಿಷಬೀಜಗಳನ್ನು ಬಿತ್ತುತ್ತಿರುವುದನ್ನು ನೋಡುತ್ತಿದ್ದೇವೆ.
ಶ್ರಮಿಕರ ಬದುಕನ್ನು ಹೊರಗಿಟ್ಟು ಮಾನವ ಸಮಾಜ ಯಾವುದೇ ಸಂದರ್ಭವನ್ನೂ ಸಂಭ್ರಮಿಸಲಾಗುವುದಿಲ್ಲ. ಯುಗಾದಿಯ ಹೊಸವರ್ಷಾಚರಣೆಯನ್ನೂ ಸಹ. ಇಂದು ದೇಶದ ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಗ್ರಾಮಪಂಚಾಯತ್ ಸದಸ್ಯನವರೆಗೂ ಎಲ್ಲ ಹಂತದ ಜನಪ್ರತಿನಿಧಿಗಳೂ ಜನತೆಗೆ ಹೊಸ ವರ್ಷಾಚರಣೆಯ ಶುಭಾಶಯಗಳನ್ನು ಕೋರುತ್ತಾರೆ.
ಈ ಯಾಂತ್ರಿಕ ಸಂದೇಶಗಳು ಕೋಟ್ಯಂತರ ಜನರನ್ನು ತಲುಪುತ್ತವೆ. ಮನುಜ ಸಮಾಜವನ್ನು ಒಂದುಗೂಡಿಸಲು ನೆರವಾಗುವ ಈ ಸಂದೇಶಗಳು ಭಾವನಾತ್ಮಕ ದೃಷ್ಟಿಯಿಂದ ಅಪ್ಯಾಯಮಾನವೆನಿಸಿದರೂ, ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅನ್ಯ ಮತ ದ್ವೇಷದ ಆಂತರಿಕ ಬೇಗುದಿಯು ಇಡೀ ಸಮಾಜವನ್ನು ಒಳಗಿನಿಂದಲೇ ಕ್ಯಾನ್ಸರ್ ರೋಗದಂತೆ ಹರಡಿ ಶಿಥಿಲಗೊಳಿಸುತ್ತಿರುವುದನ್ನು ಗಮನಿಸಿದಾಗ, ಈ ಸಂದೇಶಗಳು ನಾಟಕೀಯ ಎನಿಸಿಬಿಡುತ್ತವೆ.
75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಪ್ರಪ್ರಥಮ ಬಾರಿಗೆ ಭಾರತದಲ್ಲಿ ಜನಸಾಮಾನ್ಯರು ನಿತ್ಯ ಸೇವಿಸುವ ಆಹಾರ ಮತ್ತು ಬಳಸುವ ವಸ್ತುಗಳು, ಸಾಂಸ್ಥಿಕವಾಗಿ ನಿರ್ದೇಶಿಸಲ್ಪಡುತ್ತಿವೆ. ಯಾರು ಏನನ್ನು ತಿನ್ನಬೇಕು, ಯಾವ ಆಹಾರವನ್ನು ತ್ಯಜಿಸಬೇಕು, ಯಾವುದನ್ನು ತಿರಸ್ಕರಿಸಬೇಕು, ಯಾರಿಂದ ಪಡೆಯಬೇಕು, ಯಾರಿಗೆ ನೀಡಬೇಕು, ತಿನ್ನುವ ಆಹಾರದಲ್ಲಿ ಏನಿರಬೇಕು-ಏನಿರಬಾರದು, ಯಾವ ಸಮಯದಲ್ಲಿ ಏನು ತಿನ್ನಬೇಕು, ಹೀಗೆ ಮನುಷ್ಯ ತನ್ನ ಸಹಜ ಬದುಕಿನಲ್ಲಿ ತನ್ನದೇ ಆದ ವ್ಯಕ್ತಿಗತ ಸ್ವಾತಂತ್ರ್ಯದೊಂದಿಗೆ ಅನುಸರಿಸಬೇಕಾದ ಆಹಾರ ಪದ್ಧತಿ ಇಂದು ನಿರ್ದೇಶಿತವಾಗುತ್ತಿದೆ.
ಧಾರ್ಮಿಕ ಗ್ರಂಥಗಳಿಂದ ನಿರ್ದೇಶಿತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಮತನಿಷ್ಠರೂ ಸಹ ಈಗ ನೂತನ ಧಾರ್ಮಿಕ ವ್ಯಾಖ್ಯಾನಕಾರರ ನಿರ್ದೇಶನಗಳಿಗೆ ಮಾನ್ಯತೆ ನೀಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಆಹಾರ ಮನುಷ್ಯನ ಸ್ವಾಭಾವಿಕ ಹಕ್ಕು. ಅದನ್ನು ಸಾಂವಿಧಾನಿಕ ಹಕ್ಕು ಎಂದು ಭಾವಿಸಬೇಕಿಲ್ಲ. ಮನುಷ್ಯ ತಾನು ಬೆಳೆದ ಪರಿಸರದಲ್ಲಿ ರೂಢಿಸಿಕೊಂಡು ಬಂದ ಆಹಾರ ಪದ್ಧತಿಯನ್ನೇ ಜೀವನದುದ್ದಕ್ಕೂ ಅನುಸರಿಸುವುದು ನೈಸರ್ಗಿಕವಾಗಿ ಸಹಜ ಪ್ರಕ್ರಿಯೆ. ಈ ಆಹಾರ ಪದ್ಧತಿಗಳು ಜಾತಿ-ಮತಗಳ ಚೌಕಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದು ಸಾಮುದಾಯಿಕ ಪ್ರಶ್ನೆಯಾಗುತ್ತದೆ.
ಒಂದು ನಿರ್ದಿಷ್ಟ ಜಾತಿ ಅಥವಾ ಮತದ ಚೌಕಟ್ಟಿನಲ್ಲೂ ಆಹಾರ ಸೇವನೆ ಎನ್ನುವುದು ವ್ಯಕ್ತಿಗತ ಆಯ್ಕೆಯಾಗಿಯೇ ಉಳಿಯುತ್ತದೆ. ಈ ನೈಸರ್ಗಿಕ ಹಕ್ಕನ್ನು ಭಾರತದ ಸಂವಿಧಾನ ಕಾಪಾಡುತ್ತದೆ. ಇಂದು ಈ ಸಾಂವಿಧಾನಿಕ ಮಾನ್ಯತೆ ಮತ್ತು ನೈಸರ್ಗಿಕ ಹಕ್ಕು ಎರಡೂ ಸಹ ಸಾಂಸ್ಕೃತಿಕ ಕಾವಲುಪಡೆಗಳಿಂದ ದಾಳಿಗೊಳಗಾಗುತ್ತಿದೆ.
ಜನಸಾಮಾನ್ಯರು ಎಂತಹ ಆಹಾರ ಸೇವಿಸಬೇಕು ಎನ್ನುವುದಕ್ಕಿಂತಲೂ ಇಂದು ಚರ್ಚೆಗೊಳಗಾಗಬೇಕಿರುವುದು, ಎಷ್ಟು ಜನರು ತಮಗೆ ಬೇಕೆನಿಸಿದ ಆಹಾರವನ್ನು ಸೇವಿಸುವ ಶಕ್ತಿ ಹೊಂದಿದ್ದಾರೆ ಎಂಬ ಪ್ರಶ್ನೆ. ಏಕೆಂದರೆ ಭಾರತದ ಅರ್ಥವ್ಯವಸ್ಥೆ ಬಡಜನತೆಯ ಪಾಲಿಗೆ, ಶ್ರಮಜೀವಿಗಳ ಪಾಲಿಗೆ ಕರಾಳ ದಿನಗಳನ್ನು ರೂಪಿಸುತ್ತಿದೆ.
ಈ ಸಂದರ್ಭದಲ್ಲಿ, ತನ್ನ ಆಹಾರಕ್ಕಾಗಿ ಮನುಷ್ಯ ಕೊಲ್ಲುವ ಪ್ರಾಣಿಯಲ್ಲಿ ರಕ್ತದಂಶ ಇರಬೇಕೋ ಬೇಡವೋ ಎಂಬ ಪ್ರಶ್ನೆಗಿಂತಲೂ ನಮ್ಮನ್ನು ಕಾಡಬೇಕಿರುವುದು ದೇಶದ ಬಹುಸಂಖ್ಯೆಯ ಜನತೆಗೆ ತಮಗೆ ಅಗತ್ಯವಿರುವಷ್ಟು ಮಾಂಸಾಹಾರವನ್ನೋ, ಸಸ್ಯಾಹಾರವನ್ನೋ ಕೊಳ್ಳುವ ಸಾಮರ್ಥ್ಯ ಉಳಿದಿದೆಯೇ ಎಂಬ ಪ್ರಶ್ನೆ.
ಯೂನಿಸೆಫ್‍ನ ಒಂದು ವರದಿಯ ಪ್ರಕಾರ ಭಾರತದಲ್ಲಿ ಕುಂಠಿತ ಬೆಳವಣಿಗೆಯ ಮಕ್ಕಳ ಸಂಖ್ಯೆ ನಾಲ್ಕು ಕೋಟಿಗೂ ಮೀರಿದೆ. ಐದು ವರ್ಷಕ್ಕೆ ಮುನ್ನವೇ ಸಾವನ್ನಪ್ಪುವ ಮಕ್ಕಳಲ್ಲಿ ಶೇ 69ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಲೇ ಸಾಯುತ್ತಿದ್ದಾರೆ. ಒಕ್ಕೂಟ ಸರ್ಕಾರದ ಅಧಿಕೃತ ಮಾಹಿತಿಯ ಅನುಸಾರವೇ ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ರಾಷ್ಟ್ರಗಳ ಪೈಕಿ 94ನೆಯ ಸ್ಥಾನದಲ್ಲಿದೆ. ಇವೆಲ್ಲವನ್ನೂ ಕಲ್ಪಿತ ಅಥವಾ ಸೃಷ್ಟಿಸಲ್ಪಟ್ಟ ಅಂಕಿಅಂಶಗಳೆಂದು ಸರ್ಕಾರಗಳು ಅಲ್ಲಗಳೆದರೂ, ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳು, ನಗರಗಳಲ್ಲಿ ಹೆಚ್ಚುತ್ತಿರುವ ಕೊಳೆಗೇರಿಗಳು, ತಮ್ಮ ನಾಳಿನ ಬದುಕಿಗಾಗಿ ಹೋರಾಡುತ್ತಿರುವ ವಲಸೆ ಕಾರ್ಮಿಕರು, ಬಡತನದ ಬರ್ಬರತೆಯನ್ನು ಢಾಳಾಗಿ ಪ್ರದರ್ಶಿಸುತ್ತವೆ.
ನಿಕೃಷ್ಟ ಜೀವನ ನಡೆಸುತ್ತಿರಬಹುದಾದ ಈ ಶ್ರಮಜೀವಿ ವರ್ಗಗಳಿಗೆ ಹಲಾಲ್ ಮತ್ತು ಜಟ್ಕಾ ವಿವಾದಗಳು ಅಪ್ರಸ್ತುತವಾಗಿಬಿಡುತ್ತವೆ. ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳಿಂದ ತತ್ತರಿಸುತ್ತಿರುವ ಶ್ರಮಜೀವಿ ವರ್ಗಗಳಿಗೆ, ಅನೌಪಚಾರಿಕ ಕ್ಷೇತ್ರದ ದಿನಗೂಲಿ ನೌಕರರಿಗೆ ತಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಎಷ್ಟಿದೆ ಎಂಬ ಚಿಂತೆ ಇರುವುದಿಲ್ಲ.
ಅಥವಾ ಅದರಲ್ಲಿ ರಕ್ತದಂಶ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆಯೂ ಇರುವುದಿಲ್ಲ. ಸಸ್ಯಾಹಾರಿಗಳಾದರೂ ತಮ್ಮ ಆಹಾರದಲ್ಲಿ ಕಬ್ಬಿಣಾಂಶ ಎಷ್ಟಿದೆ ಎಂಬ ಪರಿವೆ ಇರುವುದಿಲ್ಲ. ದೇಶದ ಸುಭದ್ರ ಬುನಾದಿಗೆ ತಮ್ಮ ಬೆವರು ಸುರಿಸಿ ದುಡಿಯುವ ಈ ಶ್ರಮಜೀವಿ ವರ್ಗಗಳು ತಮ್ಮ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಮೀರಿ ಜೀವನ ಸವೆಸುತ್ತಿರುತ್ತಾರೆ.
ಈ ವರ್ಗದ ಜನತೆಗೆ, ಆಹಾರ ವಂಚಿತರಿಗೆ, ಅವಕಾಶವಂಚಿತರಿಗೆ, ಸೌಲಭ್ಯವಂಚಿತರಿಗೆ ಮತ್ತು ಹಕ್ಕು ವಂಚಿತ ಜನಸಮುದಾಯಗಳಿಗೆ “ ಹೊಸ ವರ್ಷಾಚರಣೆ ”ಯ ಸಂದೇಶವನ್ನು ನೀಡುವ ಮುನ್ನ ಉಳ್ಳವರ ಮನಸ್ಸಿನಲ್ಲಿ ಕೊಂಚಮಟ್ಟಿಗಾದರೂ ಪಾಪಪ್ರಜ್ಞೆ ಮೂಡಬೇಕಲ್ಲವೇ ? ಶೇ 50ರಷ್ಟು ಅಪರಾಧದ ಹಿನ್ನೆಲೆಯುಳ್ಳವರನ್ನು, ಶೇ 90ರಷ್ಟು ಕೋಟ್ಯಧಿಪತಿಗಳನ್ನು ಶಾಸನಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುವ ಸಾರ್ವಭೌಮ ಜನತೆಗೆ ತಮ್ಮ ಆಹಾರ ಸ್ವಾತಂತ್ರ್ಯವನ್ನೂ ನಿರಾಕರಿಸಲಾಗುತ್ತಿರುವ ಹೊತ್ತಿನಲ್ಲಿ, ಆಳುವ ಸರ್ಕಾರಗಳು ಸೌಹಾರ್ದತೆ ಮತ್ತು ಸಾಂತ್ವನದ ಸಂದೇಶವನ್ನು ನೀಡುವುದು ಹೇಗೆ ಸಾಧ್ಯವಾದೀತು ?
ಈ ನಡುವೆಯೇ ಹಬ್ಬವನ್ನು ಜನತೆಗಿಂತಲೂ ಹೆಚ್ಚಾಗಿ ಸಂಭ್ರಮಿಸುವ ಮಾರುಕಟ್ಟೆ ತನ್ನ ಬಾಹುಗಳನ್ನು ಎಲ್ಲ ದಿಕ್ಕುಗಳಲ್ಲೂ ಚಾಚುತ್ತಾ, ಜನರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಸಂಪನ್ಮೂಲಗಳನ್ನೂ ದೋಚಲು ಯೋಚಿಸುತ್ತಿರುತ್ತದೆ. ಈ ಮಾರುಕಟ್ಟೆಯನ್ನು ಪೋಷಿಸುವ ಸಲುವಾಗಿಯೇ ಮಾಧ್ಯಮಗಳು, ಅಧಿಕಾರ ರಾಜಕಾರಣದ ಪ್ರತಿನಿಧಿಗಳು ಒಂದು ಆಕರ್ಷಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿರುತ್ತಾರೆ.
ಹಬ್ಬದ ದಿನದ ಮಾರುಕಟ್ಟೆಯ ಚಿತ್ರಣವನ್ನೇ ಜನಸಾಮಾನ್ಯರ ಬದುಕಿನ ಹಿತ ಗಳಿಗೆ ಎಂದು ಬಿಂಬಿಸುವ ಮೂಲಕ ಒಂದು ಕಲ್ಪಿತ ಸುಖಿ ಸಮಾಜವನ್ನು ನಾವು ಆನಂದಿಸುತ್ತಿದ್ದೇವೆ. ಆದರೆ ಜನದಟ್ಟಣೆಯ ಮಾರುಕಟ್ಟೆಯ ನಡುವೆಯೂ ಹಸಿದ ಹೊಟ್ಟೆಗಳು ಹೇರಳವಾಗಿರುತ್ತವೆ, ನೊಂದ ಜೀವಗಳು ಅಪಾರ ಸಂಖ್ಯೆಯಲ್ಲಿರುತ್ತವೆ, ಬೆಂದ ಉದರಗಳು ಬೇಕಾದಷ್ಟಿರುತ್ತವೆ.
ಈ ಜೀವಗಳ ಒಡಲಿಗೆ ಬೆಂಕಿ ಇಡಲೆಂದೇ ಮತಾಂಧ ಶಕ್ತಿಗಳು ವ್ಯಾಪಾರ ವಹಿವಾಟುಗಳಲ್ಲೂ ಮತೀಯ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸುವ ಮೂಲಕ, ಆಹಾರ ಪದ್ಧತಿಯ ಮೇಲೆ ದಾಳಿ ನಡೆಸುತ್ತಿವೆ. ದ್ವೇಷ, ಅಸೂಯೆ, ಮತ್ಸರ ಮತ್ತು ತಾರತಮ್ಯಗಳ ಹೊಸ ಆಯಾಮಗಳನ್ನು ಶೋಧಿಸುತ್ತಲೇ ಶ್ರಮಜೀವಿಗಳ ಜಗತ್ತನ್ನು ಅಡ್ಡಡ್ಡಲಾಗಿ ಸೀಳುವ ಅಮಾನುಷ ಪ್ರಯತ್ನಗಳ ನಡುವೆಯೇ ಭಾರತ ಮತ್ತೊಂದು ಯುಗಾದಿಯನ್ನು ಸಂಭ್ರಮಿಸುತ್ತಿದೆ.
ಈ ಸಂಭ್ರಮಾಚರಣೆ ಸಾತ್ವಿಕ ನೆಲೆಯಲ್ಲಿ ಅರ್ಥಪೂರ್ಣವಾಗಿ ಕಂಡರೂ ತಾತ್ವಿಕ ನೆಲೆಯಲ್ಲಿ ಚಿಂತನಾರ್ಹವೆನಿಸುವುದಿಲ್ಲವೇ ? ಈ ಆತ್ಮಾವಲೋಕನದೊಂದಿಗೇ ಯುಗಾದಿಯನ್ನು ಸ್ವಾಗತಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



